ಬೆಳಗ್ಗೆ ಬೆಳಗ್ಗೆ ರಸ್ತೆಯಲ್ಲಿ ಅದೇನೋ ಗಲಾಟೆ. ಬೀದಿಯ ಮನೆಯವರು
ಹೊರಬಂದು ನೋಡಿದರು. ನೋಡಲಾಗದವರು ಮನೆಯೊಳಗೇ ಕುಳಿತು ಕಿವಿಯನ್ನು ಹೊರಗೆ ತೆರೆದಿರಿಸಿದರು, ಅಥವಾ
ಹೊರಗಿದ್ದವರಲ್ಲಿ ಕುತೂಹಲವನ್ನು ತಣಿಸುವ ಹವಣಿಕೆಯನ್ನು ತೋರಿತ್ತಿದ್ದರು. ಹಾಗೋ ಹೀಗೋ ಹೊರಗಿನ
ವಿಚಾರ ತಿಳಿಯುವ ಒಂದು ಕೆಟ್ಟ ಕುತೂಹಲ. ಮನೆಯ ಒಳಗೆ ದೇವರ ಎದುರು ಪೂಜೆ ಜಪಗಳಲ್ಲಿ
ನಿರತವಾಗಿದ್ದರೂ ಮನಸ್ಸು ಮಾತ್ರ ಹೊರಗೆ ಓಡಿಬಿಡುತ್ತದೆ. ಸಹಜವಾದ ಗುಣವಿದು. ನಾವು ಅನ್ಯರ ವಿಚಾರ
ತಿಳಿದುಕೊಳ್ಳುವಲ್ಲಿ ಅತೀವ ಆಸಕ್ತಿವಹಿಸುತ್ತೇವೆ. ಅದು ಯಾವುದೇ ವಿಚಾರವಿರಲಿ, ಅವಶ್ಯಕ
ಆನಾವಶ್ಯಕ ಎಂಬ ಭೇದವಿಲ್ಲ. ಅಲ್ಲೇನಾಯಿತೋ? ಇಲ್ಲೇನಾಯಿತೋ? ಅವರಿಗೇನಾಯಿತೋ ಹೀಗೆ ಪರರ ಚಿಂತೆಯಲ್ಲಿ ಮನಸ್ಸು
ತವಕಿಸುತ್ತದೆ. ಕೆಲವೊಮ್ಮೆ ಮರುಗಲೂ ಬಹುದು, ಕೊರಗಲೂ ಬಹುದು. ಪರರ ಬಗ್ಗೆ ತಿಳಿಯುವುದಕ್ಕೆ ದಿನದ
ಬಹುಪಾಲು ಸಮಯವನ್ನೂ ಮೀಸಲಿಡುತ್ತೇವೆ. ದೂರವಾಣಿ ಕರೆಮಾಡಿಯೋ. ಅಥವಾ ಅವರಿದ್ದಲ್ಲಿಗೆ ಹೋಗಿ ಕೇಳಿ
ತಿಳಿದುಕೊಳ್ಳುತ್ತೇವೆ. ಪ್ರೇಮಿಗಳು ಗುಟ್ಟಾಗಿ ವ್ಯವಹರಿಸಿದರೆ ಅದನ್ನು ತಿಳಿದು
ಅದೇ ರೀತಿ ಅದನ್ನು ಹಂಚಿಕೊಳ್ಳುವ ತವಕ. ಯಾರದೋ ಯಾವುದೋ ವ್ಯವಹಾರಗಳನ್ನು ಸಂಬಂಧಗಳನ್ನು
ತಿಳಿಯುವುದಕ್ಕಾಗಿ ಇನ್ನಿಲ್ಲದ ಯತ್ನ ನಡೆಸುತ್ತೇವೆ.
ವಿಚಿತ್ರವೆಂದರೆ ಪರರ ಸಂಗತಿಗಳನ್ನು ತಿಳಿಯುವುದಕ್ಕೆ ಗಂಟೆಗಳನ್ನು
ಮೀಸಲಾಗಿಡುವ ನಾವು ನಮ್ಮ ಮನಸ್ಸನ್ನು ಅಥವಾ ಸ್ವತಃ ನಮ್ಮನ್ನು ತಿಳಿದುಕೊಳ್ಳಲು ದಿನದ ಹತ್ತು ನಿಮಿಷವನ್ನು ಮೀಸಲಿಡುವುದಿಲ್ಲ. ಪರರ
ವಿಚಾರ ತಿಳಿಯುವ ಕಾತರದ ಮನುಷ್ಯ ಈ ಒಂದು
ವಿಚಾರದಲ್ಲಿ ನಿಜಕ್ಕೂ ನಿಸ್ವಾರ್ಥಿ! ತನ್ನನ್ನು ತಾನು ಅರಿಯುವುದು ಬೇಕಿಲ್ಲ. ತನ್ನ ಬಗ್ಗೆ
ತನಗೇ ಇರುವ ಔದಾಸಿನ್ಯವೇ? ಖಂಡಿತಾ ಅಲ್ಲ. ಪರರನ್ನು ತಿಳಿಯುವುದು ಸುಲಭ. ತನ್ನನ್ನು ತಾನು
ತಿಳಿಯುವುದು ಮಹಾ ಕಠಿಣ. ಮತೊಬ್ಬರನ್ನು ತಿಳಿಯುವ ಆಸಕ್ತಿಯಲ್ಲಿ ತಮ್ಮನ್ನು ತಾವೇ ಮರೆತು
ಬಿಡುವಷ್ಟು ಮಗ್ನರಾಗಿಬಿಡುತ್ತೇವೆ. ವಾಡಿಕೆಯಲ್ಲಿ ಹೇಳುವುದುಂಟು ಈ ಹೆಣ್ಣು ಮನಸ್ಸನ್ನು ಅರ್ಥಮಾಡುವುದು ಕಷ್ಟ
ಮಾರಾಯ್ರೆ. ಹಾಗೇ ಗಂಡು ಮನಸ್ಸಿನ ಬಗ್ಗೆಯೂ ಹೇಳುವುದುಂಟು. ಆದರೆ ಅದಾವುದೂ ಕಷ್ಟವಲ್ಲ ತನ್ನನ್ನು
ತಾನು ತಿಳಿಯುವ ಹಾದಿ ಕಷ್ಟ. ಹಾಗಾಗಿ ಆ ಹಾದಿಯತ್ತ ಗಮನವೇ ಇರುವುದಿಲ್ಲ.
“ಮನಸ್ಸಿನ ಎಲ್ಲಾ ದ್ವಾರಗಳನ್ನು ಮುಚ್ಚಿದಾಗ ಅಂತರಂಗದ ಬಾಗಿಲು
ತೆರೆಯಲ್ಪಡುತ್ತದೆ. ಅಂತರಂಗದ ಬಾಗಿಲಲ್ಲಿ ಭಗವಂತನ ದರ್ಶನ ಸಾಧ್ಯವಾಗುತ್ತದೆ.” ಇದು ಆಧ್ಯಾತ್ಮಿಕ ಚಿಂತನೆ. ’ದ್ವಾರ’ ಎಂದರೆ ಎರಡೂ
ಕಡೆಗೂ ತೆರೆದಿರುವ, ಒಳಗೂ ಹೊರಗೂ
ಸಂಚರಿಸುವುದಕ್ಕಿರುವ ಮಾಧ್ಯಮ. ಆಗತಾನೆ ಹುಟ್ಟುತ್ತಿರುವ ಮಗುವಿನಲ್ಲಿ ಯಾವ ದ್ವಾರವೂ
ಇರುವುದಿಲ್ಲ. ಆನಂತರ ಪ್ರಕೃತಿ ಮನಸ್ಸಿನಲ್ಲಿ ಬಾಗಿಲುಗಳನ್ನು ತೆರೆಯುತ್ತಾ ಹೋಗುತ್ತದೆ. ಹಾಗೇ ಮನುಷ್ಯ
ವ್ಯಾವಹಾರಿಕ ಪ್ರಪಂಚದ ಒಂದೊಂದೇ ಬಾಗಿಲನ್ನು ಬಡಿಯುತ್ತಾ ಮುಂದುವರೆದು ಭಗವಂತನಿಂದ ದೂರ
ಸಾಗುತ್ತಾನೆ. ಕೆಲವೊಮ್ಮೆ ಭಗವಂತನ ನೆನಪನ್ನೇ ಕಳೆದುಕೊಳ್ಳುತ್ತಾನೆ. ಆನಂತರ ಅಲ್ಲಿ ಇಲ್ಲಿ
ಭಗವಂತನಿಗೆ ಹುಡುಕಾಟ. ಆದಾಗಿರಬಹುದೇ ಇದಾಗಿರಬಹುದೇ ಎಂಬ ಜಿಜ್ಞಾಸೆಯಲ್ಲಿ ಜೀವನ ಪರ್ಯಂತ ಯಾವ
ಬಾಗಿಲು ಮುಚ್ಚಬೇಕು ಯಾವ ಬಾಗಿಲಲ್ಲಿ ಇಣುಕಬೇಕು ಅರಿಯದೇ ಬದುಕಿನ ಕೊನೆಯ ಬಾಗಿಲಲ್ಲಿ ಬಂದು
ನಿಂತುಬಿಡುತ್ತಾನೆ. ಹೀಗೆ ವೇದಾಂತದ ಸಾರ ಸರಳ ಮಾತುಗಳಲ್ಲೇ ಅಡಕವಾಗಿರುತ್ತದೆ.
ಮನಸ್ಸಿನ ಅಷ್ಟು ಬಾಗಿಲಲ್ಲಿ ಒಂದು ಬಾಗಿಲನ್ನಾದರೂ ಮುಚ್ಚಿದರೆ ಅದೇ
ಸಾಧನೆಯಾದದ್ತೀತು. ಆ ಯತ್ನದಲ್ಲೇ ಮುಂಜಾನೆ ನಾಲ್ಕಕ್ಕೆ ಎಚ್ಚರವಾಗುತ್ತದೆ. ಸ್ನಾನಾದಿ ಶೌಚಗಳನ್ನು
ಮುಗಿಸಿದಾಗ ದೇಹ ಮನಸ್ಸು ಶುಭ್ರವಾದ ಅನುಭವ. ಸ್ನಾನ ಅದೂ ಮುಂಜಾನೆಯ ತಣ್ಣೀರ ಸ್ನಾನ ದೈವಿಕ
ಭಾವವನ್ನು ದೇಹಾದ್ಯಂತ ಚಿಗುರಿಸುತ್ತದೆ. ತಣ್ಣೀರ ಸ್ನಾನ ಉಲ್ಲಾಸವನ್ನು ತಂದಿತ್ತರೆ ಬಿಸಿನೀರ
ಸ್ನಾನ ದೇಹವನ್ನು ಮತ್ತಷ್ಟೂ ಜಡತ್ವದತ್ತ ಸೆಳೆಯುತ್ತದೆ. ನವಿರಾದ ಮನಸ್ಸಿನೊಂದಿಗೆ ಜಪಾನುಷ್ಠಾನಕ್ಕೆ ತೊಡಗುವಾಗ
ಸುತ್ತಲೂ ನೀರವ ಮೌನ. ಮನೆಯೊಳಗೆ ನಾನೊಬ್ಬನೇ ಮನದೊಳಗೇ ನಾನೊಬ್ಬನೇ ಎಂಬ ಅನುಭವ. ಯಾರೂ ಇಲ್ಲದಾಗ
ಭಗವಂತನಿದ್ದಾನೆ ಎಂಬ ಮಾತು ಸತ್ಯವಾಗುತ್ತದೆ. ಏಕಾಂಗಿತನ ಎಂಬುದು ತನ್ನನ್ನು ತಾನು ಅರಿಯುವಲ್ಲಿ
ಆಹ್ಲಾದತೆಯನ್ನು ಒದಗಿಸುತ್ತದೆ. ಸಂಧ್ಯಾವಂದನೆಯ
ಮೊದಲು ಯಾವ ಮಾತನ್ನೂ ಆಡುವುದಿಲ್ಲ ಇದೊಂದು ನಿಷ್ಠೆ. ಹಾಗಾಗಿ ಸಂಧ್ಯೆಗೆ ಕುಳಿತಾಗ ಓಂ ಕಾರ ಒಂದೇ
ಅದಿನದ ಆದ್ಯಾಕ್ಷರವಾಗುತ್ತದೆ.
ಪದ್ಮಾಸನದಲ್ಲಿ
ಆಸೀನನಾಗಿ ಕಣ್ಣು ಮುಚ್ಚಿ ಮನಸ್ಸಿನ ಹಲವು ಬಾಗಿಲನ್ನು ಮುಚ್ಚುವ ಯತ್ನದಲ್ಲಿರುತ್ತೇನೆ.ಬಾಗಿಲು
ಮುಚ್ಚಿತೋ? ಇಲ್ಲ, ಅರಿವಿಗೆ ಬರುವುದಿಲ್ಲ. ಮನಸ್ಸಿಗೆಷ್ಟು ದ್ವಾರವಿದೇ
ಎಂಬುದನ್ನೇ ತಿಳಿಯದಿರುವಾಗ ಎಲ್ಲಾ ದ್ವಾರಗಳು ಮುಚ್ಚಿವೆ ಎಂಬ ಅರಿವಾದರೂ ಉಂಟಾಗುವುದು ಸಾಧ್ಯವೇ?
ಮೊದಲು ಮನಸ್ಸು ಎಲ್ಲೆಲ್ಲಿ ಚಂಚಲವಾಗುತ್ತದೆ ಎಂಬುದನ್ನು ತಿಳಿಯಬೇಕು. ಎಲ್ಲವನ್ನು ಮುಚ್ಚಿದ್ದೇನೆ ಎಂಬ ವಿಶ್ವಾಸದಲ್ಲಿರುವಾಗ
ಮನಸ್ಸಿನ ಯಾವುದೋ ಮೂಲೆಯ ದ್ವಾರವೊಂದು ತೆರೆದುಕೊಂಡಂತಾಗುತ್ತದೆ. ಹಾಗಾದರೆ ಎಲ್ಲಾ ದ್ವಾರವೂ
ಮುಚ್ಚಿದೆ ಎಂಬ ಅರಿವಾಗ ಬೇಕಾದರೆ ಅಲ್ಲಿ ಪರಮಾತ್ಮನ ರೂಪ ಸಿದ್ದಿಯಾಗಬೇಕು. ಅಂತರಂಗದಲ್ಲಿ
ಪರಮಾತ್ಮನನ್ನು ಗ್ರಹಿಸಿದಾಗ ದ್ವಾರವೆಲ್ಲವೂ
ಮುಚ್ಚಲ್ಪಟ್ಟಿವೆ ಎಂದು ತಿಳಿಯಬೇಕು. ರೂಪವಿಲ್ಲದ
ಭಗವಂತನಿಗೆ ಮನಸ್ಸು ರೂಪವನ್ನು ಕಲ್ಪಿಸಿ ಅದನ್ನು ಕಾಣಬೇಕು. ಅಲ್ಲಿಗೆ ಏಕಾಗ್ರತೆ
ಸಿದ್ಧಿಯಾಗುತ್ತದೆ. ಪರಿಶುದ್ದತೆ ಇದ್ದಲ್ಲಿ ಭಗವಂತ್ ಸಾನ್ನಿಧ್ಯವಿರುತ್ತದೆ. ಹಾಗಾಗಿ ಇವೆಲ್ಲವೂ
ಒದಗಿ ಬರಬೇಕಾದರೆ ಮನಸ್ಸು ಶುದ್ದಿಯಾಗಿರಬೇಕು. ಇದು ಅತ್ಯವಶ್ಯ.

No comments:
Post a Comment