Sunday, April 12, 2020

ಅಮಾಯಕರು ಯಾರು?

                ಸಿನಿಮಾ ಮಂದಿರದಲ್ಲಿ ಪ್ರದರ್ಶನ ಆರಂಭವಾಗುವ ಮೊದಲು "ಧೂಮ ಪಾನ ಆರೋಗ್ಯಕ್ಕೆ ಹಾನಿಕರ....ಹೃದಯ ಸ್ಪಾಂಜ್ ನಂತೆ ...." ಹೀಗೆ ಶ್ವಾಸ ಕೋಶ ಹಿಂಡಿ ಹಿಪ್ಪೆ ಮಾಡಿದಾಗ ಕಪ್ಪು ಕರಕಲಾದ ನೀರನ್ನು ನೋಡಿರಬಹುದು. ಬಹುಶಃ ಬೇಡದೇ ಇದ್ದರೂ ಪದೇ ಪದೇ ನೋಡುವ ಅನಿವಾರ್ಯತೆಯಾದಾಗ ಕಣ್ಣು ಮುಚ್ಚಿಯೋ ಮುಖ ಬೇರೆ ಕಡೆಗೆ ತಿರುಗಿಸಿಯೋ ಆ ಭೀಭತ್ಸ ದೃಶ್ಯವನ್ನು ಅರಗಿಸಿಕೊಳ್ಳುವುದಕ್ಕೆ ಶ್ರಮ ಪಟ್ಟಿರಬಹುದು. ಈ ದೃಶ್ಯ ನೋಡಿ ಯಾರಾದರೂ ಸಿಗರೇಟ್ ಸೇದುವುದನ್ನು ಬಿಟ್ಟಿರಬಹುದೇ? ಪ್ರಶ್ನೆಯನ್ನು ಕೇಳಿ ನೋಡಿ...ಉತ್ತರ ತೀರಾ ನಿರಾಶಾದಾಯಕವಾಗಿರುತ್ತದೆ. ಮನುಷ್ಯನ ಮನಸ್ಸು ಹಾತೆಯಂತೆ ಅಥವಾ ಪತಂಗದಂತೆ ಬೆಂಕಿ ಸುಂದರ ಅಂತ ಕಂಡು ಅದರತ್ತ ಹಾರಿ ತನ್ನ ರೆಕ್ಕೆ ಕಳೆದುಕೊಳ್ಳುತ್ತದೆ ಇಲ್ಲಾ ಪ್ರಾಣ ಕಳೆದುಕೊಳ್ಳುತ್ತದೆ. 

ಧೂಮ ಪಾನದ ಆ ಜಾಹಿರಾತು ಎಚ್ಚರಿಕೆಯ ಸಂದೇಶ ಅದೆಷ್ಟು ಮಾರ್ಮಿಕವಾಗಿದ್ದರೂ ಅದನ್ನು ನೋಡುವುದಿಲ್ಲ. ಮನಸ್ಸು ಪ್ರಚೋದಿಸಲ್ಪಡುವುದಿಲ್ಲ. ಅದರ ಬದಲಿಗೆ ಯಾವುದಾದರೊಂದು ಜಾತಿಯ ಬಗ್ಗೆ ಅತೀ ಕೆಟ್ಟದಾಗಿ ಹೇಳುವ ದೃಶ್ಯವಾಗಲಿ ಅಥವಾ ತಮ್ಮ ಮೆಚ್ಚಿನ ನಾಯಕ ವಿಮರ್ಷಿಸುವ ದೃಶ್ಯವಾದರೆ ಅದನ್ನು ಪೂರ್ಣವಾಗಿ ನೋಡುವ ಮೊದಲೆ ಅಂತ್ಯವನ್ನು ಊಹಿಸಿ ರಸ್ತೆಗೆ ಇಳಿದು ಕಲ್ಲು ಕೈಗೆ ತೆಗೆದುಕೊಳ್ಳುತ್ತಾನೆ.  ದೇಶ ವಿದೇಶದ ಸುದ್ದಿಯನ್ನು ನೋಡುವ ವಿಮರ್ಶಿಸುವ ಈತನಿಗೆ ರಾಜಕೀಯ ನಾಯಕರು ಇಡುವ ಹೆಸರೇ ಅಮಾಯಕ..... ಪ್ರಸ್ತುತ ತಮ್ಮ ಸ್ವಾರ್ಥಕ್ಕೆ  ದುರ್ಬಳಕೆಯಾಗುವ ಶಬ್ದವೊಂದು ಇದ್ದರೆ ಅದು ’ಅಮಾಯಕ’.  ಏನೂ ತಿಳಿಯದೇ ಇರುವನಿಗೆ ತಿಳಿದಿಲ್ಲ ಏನು ಎಂಬುದೇ ಅಚ್ಚರಿಯ ವಿಷಯವಾಗುತ್ತದೆ. ಇಂದಿನ ದೇಶದ ಆಗುಹೋಗುಗಳಲ್ಲಿ ಈ ಅಮಾಯಕರ ಪಾತ್ರ ಅತ್ಯಂತ ದಾರುಣವಾಗಿರುತ್ತದೆ.  ಎಲ್ಲ ತಿಳಿದರೂ ತಾವು ಅಮಾಯಕರು ಎಂಬ ಪದವಿ ಸ್ಥಿರವಾಗಿರುವಂತೆ ವೇಶ ಕಟ್ಟುವುದರಲ್ಲಿ ಯಾವ ಅಮಾಯಕತನವೂ ಅಡ್ಡಬರುವುದಿಲ್ಲ.  ಅಷ್ಷೊಂದು ............ವ್ಯವಹಾರ  ಯಾವುದೋ ಇಂಗ್ಲೀಷ್ ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಪ್ರಚೋದನೆಗೊಳ್ಳುತ್ತಾನೆ. ಅಷ್ಟಾಗಿ ಆತ ಅವಿದ್ಯಾವಂತ, ಅಮಾಯಕ. ಪ್ರಚೋದನೆಗೊಳ್ಳಬೇಕಾದ ವಿಷಯ ಎಷ್ಟೇ ಗಂಭೀರವಾಗಿರಲಿ, ಜೀವನಾವಶ್ಯಕವಾಗಿರಲಿ ಪ್ರಚೋದನೆ ಇಲ್ಲ. ತನಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂಬಂತೆ ತಣ್ಣಗೇ ಇದ್ದು ಬಿಡುತ್ತಾನೆ. 

ದೇಶಕ್ಕೆ ವಿಪತ್ತು ಬಂದೊದಗಿದೆ. ದೇಶದ ಅರ್ಥವ್ಯವಸ್ಥೆ ಕುಸಿದು ಹೋಗುವ ಸನ್ನಿವೇಶ. ಜನ ಜೀವನ ಅಸ್ತವ್ಯಸ್ತ ಮಾತ್ರವಲ್ಲ ಪ್ರಾಣವೇ ಉಳಿಸಿಕೊಳ್ಳಲಾಗದ ಸ್ಥಿತಿ. ಮಾಧ್ಯಮಗಳಲ್ಲಿ ಅಪಾಯದ ಸುದ್ದಿ ಮೇಲಿಂದ ಮೇಲೆ ಬರುತ್ತದೆ. ಆ ಮಾಧ್ಯಮದ ಸುದ್ದಿ ತಮಗೆ ಸಂಬಂಧಿಸಿದ್ದು ಅಲ್ಲವೆಂಬಂತೆ, ಈ ದೇಶದ ಜನಗಳಲ್ಲಿ ತಾನೂ ಒಬ್ಬ ಎನ್ನುವ ಯೋಚನೆಯೂ ಬಾರದ ನಿರ್ಲಿಪ್ತ ಮನುಷ್ಯನಾಗಿಬಿಡುತ್ತಾನೆ. ಅದೇ ಮಾಧ್ಯಮದಲ್ಲಿ ಸರಕಾರದ ಅನುದಾನವೋ ಉಚಿತ ಕೊಡುಗೆಯ ಬಗ್ಗೆ ಇರಲಿ ಕಿವಿ ನೆಟ್ಟಗಾಗುತ್ತದೆ. 

ಅಗತ್ಯವಿದ್ದಲ್ಲಿ ಕಿವುಡರಂತೆ ಅನಗತ್ಯವಿದ್ದಲ್ಲಿ ಕುಶಾಗ್ರಮತಿಗಳಂತೆ ವರ್ತಿಸುವುದೇ ಅಮಾಯಕತ್ವದ ಲಕ್ಷಣ. ಹಲವು ಸಲ ಅನ್ನಿಸುತ್ತದೆ, ಈ ಶಬ್ದ ಕೋಶದ ನಿಘಂಟುವಿನಲ್ಲೇ ಈ ಪದದ ಅರ್ಥವನ್ನು ಬದಲಿಸಬೇಕು. ಸುಂದರ ಶಬ್ದವನ್ನು ಅಪಭ್ರಂಶಗೊಳಿಸುವ ವರ್ತನೆ ತೋರಿಸುವಾಗ ಯಾವ ಅಮಾಯಕತೆಯೂ ಅಡ್ಡಬರುವುದಿಲ್ಲ. ತಮಗೆ ಬದುಕುಕೊಟ್ಟ ದೇಶ, ಅನ್ನ ದುಡಿಮೆ ಕೊಟ್ಟ ಈ ಭೂಮಿ ಹರಿದಾಡುವ ನೀರು ಎಲ್ಲವನ್ನು ಹರಿದು ಮುಕ್ಕುವಾಗ ಯಾವ ಅಮಾಯಕತ್ವವೂ ಅಡ್ಡ ಬರುವುದಿಲ್ಲ. 

  ಸಿಡಿಮದ್ದು ಪಟಾಕಿಗಳನ್ನು ಸಿಡಿಸುವಾಗ ಯಾವುದೋ ಒಂದು ಪಟಾಕಿ ಕೈಯಲ್ಲೇ ಉರಿದು ಕೈ ಸುಡುತ್ತದೆ. ಕಣ್ಣೇ ಕುರುಡಾಗುತ್ತದೆ. (ಆದರೂ ಬುದ್ದಿ ಬರುವುದಿಲ್ಲ) ಆಗ ಇಡೀ ಪಟಾಕಿಯ ಬಗ್ಗೆ ಭಯ ಆವರಿಸುತ್ತದೆ. ಪಾಪ ಯಾವುದೋ ಒಂದು ಪಟಾಕಿ ಕೈಯನ್ನು ಸುಟ್ಟದ್ದಕ್ಕೆ ಇಡೀ ಪಟಾಕಿಯನ್ನು ದೂಷಿಸುವುದಕ್ಕೆ ಸಾಧ್ಯವೇ? ಹೀಗೆ ಪ್ರಶ್ನೆ ಬಂದರೆ ಉತ್ತರ ಏನೆಂದು ಕೊಡಬಹುದು? ಪಟಾಕಿ ಪಟಾಕಿಯೇ..... ಅದಕ್ಕೆ ಬೆಂಕಿಯೇ ಬೇಕಾಗುವುದು ಹೊರತು ನೀರಲ್ಲ.  ಕೈಯಲ್ಲಿ ಸಿಡಿದ ಆ ಒಂದು ಪಟಾಕಿ ಬಿಟ್ಟು ಉಳಿದ ಪಟಾಕಿಯೂ ಎಲ್ಲೆಂದರಲ್ಲಿ ಸಿಡಿಯಬಹುದು ಎಂಬ ಎಚ್ಚರಿಕೆ ಇರಬೇಕು. ಆ ಭಯ ಇರಬೇಕು.  ಯಾರೊ ಒಬ್ಬ ಮಾಡಿದ ಅಪರಾಧಕ್ಕೆ ಇಡೀ ಸಮುದಾಯವನ್ನು ಹೇಳುವುದು ಸರಿಯಲ್ಲ. ನಿಜವಾಗಿಯೂ ಹೌದು.  ಯಾರೊ ಒಬ್ಬ ಹಾಗೆ ಆಗಿ ಹೋದದ್ದಕ್ಕೆ ಅವನನ್ನೇ ದೂಷಿಸಬೇಕು ಸರಿ. ಪುಣ್ಯಾತ್ಮರೊಬ್ಬರು, ಯಾವುದೋ ಒಂದು ಮಾಧ್ಯಮದಲ್ಲಿ ಯಾವುದೋ ಒಂದು ಸುದ್ದಿ ತಿರುಚಿ ಬಂದರೆ, ಇಡೀ ಮಾಧ್ಯಮ ವನ್ನೇ ದೂಷಿಸುತ್ತಾರೆ. ಒಬ್ಬನ ತಪ್ಪಿಗೆ ಸಮುದಾಯವನ್ನು ದೂಷಿಸುವುದು ಎಷ್ಟು ತಪ್ಪೋ ಅದೇ ರೀತಿ ಯಾವುದೋ ಮಾಧ್ಯಮ ಮಾಡಿದ್ದಕ್ಕೆ ಇಡೀ ಮಾಧ್ಯಮಗಳನ್ನೇ ನಿಂದಿಸಿ ಗುರಿಯಾಗಿಸುವುದು ಸರಿಯೇ? ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವ ಭರದಲ್ಲಿ ಕೈ ಇನ್ನೊಬ್ಬನಿಗೆ ತಾಗಿದ್ದು ಗಮನಕ್ಕೆ ಬರುವುದೇ ಇಲ್ಲ. ಈ ಸಾಮಾಜಿಕ ನ್ಯಾಯ ತೀರ್ಮಾನಗಳ ರೀತಿ ಇದು. ನ್ಯಾಯವನ್ನು ತೂಗಿ ನೋಡುವ ತಕ್ಕಡಿ ಆಕಡೇ ಈಕಡೆ ವಾಲಾಡುತ್ತದೆ. ಅದರ ದಂಡಿಗೆ ಸ್ಥಿರವಾಗಿ ನಿಲ್ಲುವಷ್ಟು ತಾಳ್ಮೆ ನಮಗಿಲ್ಲ. ಅದಕ್ಕಿಂತ ಮೊದಲು ತಟ್ಟೆಯಲ್ಲಿದ್ದ ನ್ಯಾಯವನ್ನು ಕಬಳಿಸುತ್ತೇವೆ. ನ್ಯಾಯದ ಮುಖಗಳು ದಶಾವತಾರಿಯಂತೆ ...

ಕಳ್ಳತನ ಮಾಡುವವನು ಸಿಕ್ಕಿ ಬೀಳುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾನೆ. ಅದರೂ ಕದಿಯುವಾಗ ಸಿಕ್ಕಿ ಬಿದ್ದು ಸೆರಮನೆ ಶಿಕ್ಷೆ ಅನುಭವಿಸುತ್ತಾನೆ. ಆಗಲೂ ಆತ ಯೋಚಿಸುವುದು ಯಾವ ತಪ್ಪಿನಿಂದ ತಾನು ಸಿಕ್ಕಿಬಿದ್ದೇ ಎಂದು.  ಶಿಕ್ಷೆ ಅಪರಾಧ ಪುನಃ ಮಾಡದಂತೆ ಪ್ರಚೋದನೆ ನೀಡಬೇಕು. ಆದರೆ ಶಿಕ್ಷೆ ಅನುಭವಿಸಿ ಹೊರಬಂದ ಮೇಲೆ ಪುನಃ ಕದಿಯುತ್ತಾನೆ. ಆದರೆ ಮೊದಲು ಮಾಡಿದ ತಪ್ಪನ್ನು ತಿದ್ದಿಕೊಂಡು ಇನ್ನಷ್ಟು ಜಾಣತನದಿಂದ ಕದಿಯುತ್ತಾನೆ. ಎಂದಿಗೂ ತಾನು ಮಾಡುವ ಕಳ್ಳತನ ತಪ್ಪು ಅಂತ ಭಾವಿಸುವುದಿಲ್ಲ. ಇದು ಇಂದಿನ ಸಾಮಾಜಿಕ ನ್ಯಾಯ. ಸಿಕ್ಕಿ ಬಿದ್ದರಷ್ಟೇ ಕಳ್ಳ. ಸಿಕ್ಕಿಬೀಳದಂತೆ ನೋಡಿಕೊಂಡರೆ   ಅಷ್ಟೇ ಸಾಕು.   ಈ ಜಾಣ ತನ ತೋರಿಸುವುದೇ ಅಮಾಯಕತನ ಅಂತ ಅನ್ನಿಸಿಬಿಡುತ್ತದೆ. ಈ ಅಮಾಯಕತನವೇ ಭಾರತದ ದೊಡ್ಡ ದುರಂತ ಎಂದರೆ ಅಚ್ಚರಿ ಪಡಬೇಕಿಲ್ಲ. 

Saturday, April 4, 2020

ಮನೆಯೇ ದೇವಾಲಯ ಮನವೇ ಪರಮಾತ್ಮ



ಅದಾಗಲೇ ಪ್ರಸವಿಸಿದ ನವಜಾತ ಶಿಶುವನ್ನು ಜನ್ಮದಾತರ ಕೈಗೆ ದಾದಿಯು ತಂದಿರಿಸುವಾಗ ಆ ಮಹಿಳೆ ದೇವ ದೂತಳಂತೆ ಕಾಣಿಸುತ್ತಾಳೆ. ಒಂದೇ ಸಮಯದಲ್ಲಿ ಹಲವು ಮಹಿಳೆಯರು ಹೆತ್ತು,  ಎರಡು ಮೂರು ಶಿಶುಗಳು ಒಂದೇ ಸಮಯದಲ್ಲಿ ಜನ್ಮ ತಾಳುವಾಗ ಯಾವ ಮಗುವನ್ನು ತಂದಿತ್ತರೂ ಆ ದಾದಿಯ ಮೇಲಿನ ವಿಶ್ವಾಸವಿದ್ದಲ್ಲಿ ಕೈಯಲ್ಲಿದ್ದ ಶಿಶುವನ್ನು ತಮ್ಮದೇ ಮಗುವೆಂದು ಮುದ್ದಿಸುತ್ತಾರೆ.  ಹಲವು ಸಲ ಯಾರದೋ ಮಗುವನ್ನು ತಮ್ಮ ಮಗುವೆಂದು ಮುದ್ದಿಸುವ ಸಂಭವ ನಡೆಯದೆ ಇರುವುದಿಲ್ಲ. ಈ ಪ್ರಮಾದ ನಡುವೆ ಯಾರದೋ ಮಗು ನಮ್ಮ ತೋಳಲ್ಲಿದ್ದರೂ ಅದನ್ನು ನಮ್ಮದೇ ಮಗುವೆಂದು ಮುದ್ದಿಸುವಾಗ ಅಲ್ಲಿರುವ ನಮ್ಮದೇ ಮಗುವೆಂಬ ಭಾವ ಅದು ವಿಶ್ವಾಸದ ತಳಹದಿಯಲ್ಲಿ ನಿಂತಿರುತ್ತದೆ. ಮನುಷ್ಯ ತನ್ನ ಭಾವನೆಯನ್ನು ಗೌರವಿಸುವ ಬಗೆ ಇದು. ಮನುಷ್ಯ ತನ್ನ ಭಾವನೆಯೊಂದಿಗೆ ಬದುಕುತ್ತಾನೆ. ವಾಸ್ತವದ ಸತ್ಯ ಏನೇ ಆಗಲಿ ವಿಶ್ವಾಸದಿಂದ ತಮ್ಮ ಭಾವನೆಯ ಜತೆಯಲ್ಲಿ ಸಾಗುವುದು ಮನುಷ್ಯನ  ಜೀವ ಭಾವ ಎನ್ನಬೇಕು.

            ಸ್ವಪ್ನದಲ್ಲಿ ಕಾಣುವ ಯಾವುದೋ ಒಂದು ಘಟನೆಯಲ್ಲಿ ನಮ್ಮ ಮನಸ್ಸು ಭಾಗಿಯಾಗುತ್ತದೆ. ಅಲ್ಲಿರುವ ಸುಖ ದುಃಖ ತನ್ನದೇ ಎಂಬಂತೆ ಅನುಭವಿಸುತ್ತೇವೆ. ಆ ಸುಷುಪ್ತಿಯಲ್ಲಿ ನಮ್ಮ ಮನಸ್ಸು ಆವರಿಸುವ ಭಾವನೆಯಲ್ಲಿ ವಿಶ್ವಾಸ ಇಟ್ಟುಕೊಂಡು ವಾಸ್ತವದ ಸತ್ಯದಿಂದ ಬಹು ದೂರ ಸಾಗುತ್ತದೆ. ಕೊನೆಯಲ್ಲೊಮ್ಮೆ ಎಚ್ಚರವಾದಾಗ ಮನಸ್ಸು ಸತ್ಯವನ್ನು ಒಪ್ಪಿಕೊಂಡುಬಿಡುತ್ತದೆ.          

            ಮನುಷ್ಯ ತನ್ನ ಭಾವನೆಯನ್ನು ಅನುಸರಿಸುತ್ತಾನೆ. ನಾವು ಯಾವುದೋ ಅಪರಿಚಿತ ಊರಿಗೆ ಹೋಗುತ್ತೇವೆ. ರಸ್ತೆಯ ಬದಿಯಲ್ಲಿ ಯಾವುದೋ ಕಲ್ಲಿಗೆ ಹೂ ಹಾಕಿ ಪೂಜಿಸುವುದು ಕಾಣುತ್ತದೆ. ಆಯಾಚಿತವಾಗಿ ನಮಸ್ಕಾರ ಮಾಡುತ್ತೇವೆ. ಅಲ್ಲಿ ಆ ಕಲ್ಲಿನ ದೇವರು ಯಾರು ಎಂಬದನ್ನು ಯೋಚಿಸುವುದಿಲ್ಲ. ಅಲ್ಲಿ ಆ ಕಲ್ಲಿಗೂ ಅಲ್ಲ, ಕಲ್ಲಿನಲ್ಲಿರುವ ದೇವರಿಗೂ ಅಲ್ಲ, ನಾವು ನಮಸ್ಕರಿಸುವುದು ನಮ್ಮ ಭಾವನೆಯನ್ನು. ಆ ಭಾವನೆಯೇ ದೇವರು. ನಮಗೆ ಬಂದ ಭಾವನೆ ಇನ್ನೊಬ್ಬರಿಗೆ ಬರಬೇಕೆಂದೇನೂ ಇಲ್ಲ. ಅಥವಾ ನಾವು ಭಯ ಭಕ್ತಿಯಿಂದ ದೈವ ವಿಶ್ವಾಸವನ್ನು ಹೊಂದಿದಷ್ಟು ಇನ್ನೊಬ್ಬರು ಹೊಂದಿರುತ್ತಾರೆ ಎಂಬ ಭರವಸೆ ಇಲ್ಲ. ಒಂದರ್ಥದಲ್ಲಿ ಮನಸ್ಸಿನ ಭಾವನೆಯೇ ದೇವರು. ಆ ಭಾವನೆಯೇ ದೇವರಿಗೆ ರೂಪವನ್ನು ಕೊಟ್ಟಿತು. ಆ ಭಾವನೆಯೇ ಭಯ ಭಕ್ತಿಯನ್ನು ಹುಟ್ಟಿಸಿತು. ಈ ಭಾವನೆಯೇ  ದೇಹದೊಳಗಿನ ಪರಮಾತ್ಮ ಅಲ್ಲವೆ? ಹಲವು ಸಲ ಯೋಚಿಸುವಾಗ ಅನ್ನಿಸುತ್ತದೆ. ದೇವರು ಮನುಷ್ಯನನ್ನು ಲೋಕವನ್ನು ಸೃಷ್ಟಿಸಿದ. ಆದರೆ ಮನುಷ್ಯ ದೇವರನ್ನು ಸೃಷ್ಟಿಸಿದ್ದಾನೆ ಎಂಬುದು ಮನುಷ್ಯನ ಜೀವನ ಕ್ರಮವನ್ನು ನೋಡುವಾಗ ಅನ್ನಿಸುತ್ತದೆ. ಈ ಭಾವನೆ ಹಲವು ಅಹಮಿಕೆಯೆನ್ನು ಉಂಟು ಮಾಡುತ್ತದೆ. ವಾಸ್ತವದಲ್ಲಿ ನಮ್ಮ ನಿಯಂತ್ರಣಕ್ಕೆ ಯಾವುದು ಸಿಗುವುದಿಲ್ಲವೋ ಅದು ದೇವರು ಅಂತ ನಾವು ಭಾವಿಸುತ್ತೇವೆ. ಅದಕ್ಕೆ ರೂಪವಿಲ್ಲ. ಆಕಾರವಿಲ್ಲ. ಲಿಂಗಭೇದವಿಲ್ಲ. ಎಲ್ಲವೂ ನಮ್ಮ ಭಾವನೆಯ ರೂಪ.

            ಎರಡು ದಿನದಿಂದ ಆಹಾರ ಸಿಗದೆ ಊಟ ಮಾಡದ ಭಿಕ್ಷುಕನೊಬ್ಬ ಯಾರೋ ಒಬ್ಬ ನೀಡಿದ ಅನ್ನದ ತಟ್ಟೆ ನೋಡುತ್ತಿದ್ದಂತೆ ಕಣ್ಣರಳಿಸುತ್ತಾನೆ. ಮನಸ್ಸಿನಲ್ಲಿದ್ದ ದೇವರಿಗೆ ವಂದಿಸುತ್ತಾನೆ. ಊಟ ನೀಡಿದವನು ಹಿಂದುವೋ ಮುಸ್ಲಿಂ ನೋ ಯಾರೂ ಆಗಿರಬಹುದು. ಆದರೆ ಆತ ದೇವರನ್ನು ಕಾಣುವಾಗ  ಆತನ ಮನದ ಭಾವನೆಯಷ್ಟೇ ದೇವರ ರೂಪವನ್ನು ಕಾಣುತ್ತದೆ. ಹಾಗಾಗಿಯೇ ದೇವರು ಒಬ್ಬನೇ, ಮನುಷ್ಯ ತನ್ನ ಸೌಕರ್ಯಕ್ಕೆ ಭಾವನೆಗೆ  ಹೊಂದಿಕೊಂಡು ಅದಕ್ಕೆ ಹಲವು ಮುಖಗಳನ್ನು ಸೃಷ್ಟಿಸಿದ. ಒಂದರ್ಥದಲ್ಲಿ ದೇವರಿಗೂ ಬ್ರಹ್ಮನಾಗುವುದು ಮನುಷ್ಯನೇ!

            ನಮ್ಮ ನೆರೆಮನೆಯವರೂ ಸಂಬಂಧಿಗಳೋ ಯಾರೋ ಮನೆಯಲ್ಲಿ ಯಾವುದೋ ಪೂಜೆ ಹವನವನ್ನು ಏರ್ಪಡಿಸುತ್ತಾರೆ. ತಮ್ಮ ಯಾವುದೋ ದೋಷ ಪರಿಹಾರಕ್ಕೊ ಅಥವ ಇತರ ಫಲಾಪೇಕ್ಷೆಯಿಂದಲೋ ಈ ಧಾರ್ಮಿಕ ಆಚರಣೆ ನಡೆಸುತ್ತಾರೆ. ಹಲವು ಸಲ  ಅಲ್ಲಿ ದೇವರಿಗೆ ನಮಸ್ಕಾರ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿ ಹೊಟ್ಟೆ ತುಂಬ ಊಟ ಮಾಡಿ ಬಂದರೂ, ಅಲ್ಲಿ ಸತ್ಯನಾರಾಯಣ ಪೂಜೆಯೋ, ಶಿವ ಪೂಜೆಯೋ ಗಣಹೋಮವೋ ಯಾವುದು ಅಂತ ತಿಳಿದಿರುವುದಿಲ್ಲ. ಹೂವಿನ ಅಲಂಕಾರ ಕಂಡಿರುತ್ತದೆ. ಕುಂಡದಲ್ಲಿ ಪ್ರಜ್ವಲಿಸುವ ಅಗ್ನಿ ಏಳುವ ಹೊಗೆ ಕಾಣಿಸುತ್ತದೆ ನಮಸ್ಕಾರ ಮಾಡುತ್ತೇವೆ.  ಹಾಗಾದರೆ ಈ ನಮಸ್ಕಾರದ ಹಿಂದಿರುವ ಭಾವನೆ ಯಾವುದು? ದೇವರ ಯಾವ ರೂಪವನ್ನು ಅದು ಗುರುತಿಸಿರುತ್ತದೆ. ಹಲವುಸಲ ಇವಿಷ್ಟು ಕ್ರಿಯೆಗಳು ಯಾಂತ್ರಿಕವಾಗಿ ಕಾಟಾಚಾರಕ್ಕೆ ಮಾಡುವುದನ್ನೂ ಕಂಡಿದ್ದೇನೆ.

 ಹೀಗೆ ಒಂದು ಕಡೆ ಪೂಜೆಗೆಂದು ಹೋಗಿದ್ದೆ. ಪೂಜೆ ಮುಗಿದು ಮಹಾ ಮಂಗಳಾರತಿಯಾಗಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬ್ರಹ್ಮಾರ್ಪಣ ಬಿಟ್ಟು ದೇವರಿಗೆ ಶಯನ ಸೇವೆಯನ್ನೂ ಮಾಡಿ ಆಗಿರುತ್ತದೆ. ಎಲ್ಲವನ್ನು ಮಾಡಿದ ಮೇಲೂ ಸಹ ಅರ್ಚಕರು ನಂತರ ಬಂದ ಭಕ್ತರಿಗಾಗಿ ಪುನಃ ನೈವೆದ್ಯ ಇಟ್ಟು ಆರತಿಯನ್ನೆತ್ತಿ ಪೂಜೆ ಮಾಡುವುದನ್ನು ನೋಡಿದ್ದೇನೆ. ಬಂದವರು ತಮಗಾಗಿ ಮಾಡಿದ ಪೂಜೆಯಿಂದ ಸುಪ್ರೀತ ಗೊಂಡು ಒಂದಿಷ್ಟು ಕಾಣಿಕೆ ತಟ್ಟೆಗೆ ಹಾಕಿ ಪ್ರಸಾದ ಪಡೆಯುತ್ತಾರೆ. ನಿಜವಾಗಿಯೂ ಸುಪ್ರೀತಗೊಳ್ಳಬೇಕಾದದ್ದು ಭಗವಂತ. ಮನೆಯ ಯಜಮಾನ, ಕ್ರಿಯಾಭಾಗದ ಕರ್ತ್ರು ತನ್ನ ಸಂಕಲ್ಪದಂತೆ, ಅದು ದೋಷ ಪರಿಹಾರವೋ ಮತ್ತೊಂದು ಏನೇ ಆಗಿದ್ದರೂ ಅದಕ್ಕಾಗಿ ಆ ಸೇವೆ ಮಾಡಿರುತ್ತಾನೆ.  ಬಂದ ಅತಿಥಿಗಳು ತಮ್ಮ ದೋಷವೂ ಅದೇ ಲೆಕ್ಕದಲ್ಲಿ ಕರಗಿ ಹೋಗಲಿ ಅಂತ ಕಾಣಿಕೆ ಹಾಕುವುದು ಯಜಮಾನನ ಕಾರ್ಯದಲ್ಲಿ ಪಾಲುದಾರಿಕೆಯನ್ನು ಬಯಸುವುದು ವಿಚಿತ್ರವಾಗಿ ಕಾಣುತ್ತದೆ.  ಹಾಗಾಗಿ ದೇವಸ್ಥಾನ ಅಲ್ಲದೆಡೆ ನಾವು ಪೂಜೆಗೆ ಕಾಣಿಕೆ ಹಾಕುವ ಭಾವನೆಯಾದರೂ ಏನು?

ಹಲವು ಸಲ ನಾವು ತಿಳಿದೋ ತಿಳಿಯದೆಯೋ ಯಾವುದೋ ಮಹಾಪರಾಧವನ್ನು ಮಾಡಿರುತ್ತೇವೆ. ಕೊನೆಯಲ್ಲಿ ನಾವು ಅಪರಾಧಿಗಳಾಗಿ ಸಿಕ್ಕಿ ಬೀಳುತ್ತೇವೆ ಎಂದಾಕ್ಷಣ ಭಯದಿಂದ ದೇವರಲ್ಲಿ ಮೊರೆ ಇಡುತ್ತೇವೆ ದೇವರೆ ಕಾಪಾಡು. ನಮ್ಮ ಮನಸ್ಸು ಏನನ್ನು ಬಯಸುತ್ತದೆ. ಮಾಡಿದ ಅಪರಾಧ ಮುಚ್ಚಿ ಹೋಗಿ ನಾವು ನಿರಪರಾಧಿಗಳಾಗಲಿ ಎಂದೇ? ಅಥವಾ ಅಪರಾಧಕ್ಕೆ ಶಿಕ್ಷೆಯಾಗದಿರಲಿ ಎಂದೇ? ಭಾವನೆಯ ಉದ್ದೇಶ ಮತ್ತು ಪರಿಣಾಮ ಹಾಸ್ಯಾಸ್ಪದವೆನಿಸುತ್ತದೆ.  ಕಳ್ಳನೋ ಕೊಲೆಗಾರನೋ ರಾತ್ರಿ ಕದಿಯುವುದಕ್ಕೆ ಹೊರಟಾಗ ಊರ ದೇವತೆಯ ಗುಡಿಗೆ ಅಡ್ಡಬಿದ್ದು ಬೇಡಿಕೊಳ್ಳುತ್ತಾನೆ. ತನ್ನ ಕೆಲಸ ಫಲಕಾರಿಯಾಗಲಿ …!!! ಯಾವ ಕೆಲಸಕ್ಕೆ ದೇವರು ಹರಸಬೇಕು? ಇಲ್ಲಿ ತನ್ನ ಮನಸ್ಸಿನ ವಿಕೃತ ಭಾವನೆಯೇ ದೈವ ರೂಪವನ್ನು ಪಡೆಯುತ್ತದೆ.

ಆಚಾರ್ಯ ರಜನೀಶರ ಪುಸ್ತಕದಲ್ಲಿನ ಒಂದು ಘಟನೆ ನೆನಪಾಗುತ್ತದೆ. ದೂರದಿಂದ  ಸನ್ಯಾಸಿಯೊಬ್ಬ ನಿತ್ಯ  ಸಾಯಿಬಾಬರ ದರ್ಶನಕ್ಕೆ ಕಷ್ಟದಿಂದ ಬರುತ್ತಿದ್ದ. ದರ್ಶನವಾಗದೇ ಊಟಮಾಡುತ್ತಿರಲಿಲ್ಲ. ಇಲ್ಲಿ ಬಂದ ನಂತರವೂ ಜನಸಂದಣಿಯಿಂದ ಆತನಿಗೆ ದರ್ಶನ ಸಾಧ್ಯವಾಗುತ್ತಿರಲಿಲ್ಲ. ಇದನ್ನು ನೋಡಿದ ಸಾಯಿಬಾಬ, ನಾಳೆ ನಾನು ನಿನ್ನಲ್ಲಿಗೇ ಬರುತ್ತೇನೆ. ನೀನು ಗುರುತು ಹಿಡಿಯಬೇಕು. ಸರಿ ಮರುದಿನ ಸನ್ಯಾಸಿ ಊಟ ಎಲ್ಲ ಸಿದ್ದಪಡಿಸಿ ಬಾಬ ದರ್ಶನಕ್ಕೆ ಕಾದುಕುಳಿತ. ನಾಯಿಯೊಂದು ಬಂತು. ಬಹುಶಃ ಊಟದ ವಾಸನೆ ಕೇಳಿ ಬಂದಿರಬೇಕು ಎಂದು ಸನ್ಯಾಸಿ ಕೋಲು ತೆಗೆದು ಎರಡೇಟು ಕೊಟ್ಟು ನಾಯಿಯನ್ನು ಓಡಿಸಿದ. ನಂತರ ಬಹಳ ಹೊತ್ತು ಕಾದರೂ ಬಾಬ ಬರಲೇ ಇಲ್ಲ. ಮರುದಿನ ಬಾಬರಲ್ಲಿ ಹೋಗಿ ತಾನು ಕಾದುಕುಳಿತು ಬಾಬ ಬರದಿರುವ ಬಗ್ಗೆ ಹೇಳಿದ. ಬಾಬಾ ಹೇಳಿದರು ಬಂದಿದ್ದೆ. ನಿನ್ನಿಂದ ಕೋಲಿನ ಎರಡೇಟು ತಿಂದು ಸಹ ಬಂದೆ. ಸನ್ಯಾಸಿ ಪುನಃ ಬೇಡಿಕೊಂಡಾಗ  ಮರುದಿನವೂ ಇದೇ ತರಹ ಬರುವುದಾಗಿ ಬಾಬ ಹೇಳುತ್ತಾರೆ. ಮರುದಿನ ಊಟ ಸಿದ್ಧ ಮಾಡಿ ಬಾಬ ಆಗಮನಕ್ಕೆ  ಸನ್ಯಾಸಿ ಕಾದು ಕುಳಿತುಕೊಳ್ಳುತ್ತಾನೆ.  ಒಬ್ಬ ಭಿಕ್ಷುಕ ಬರುತ್ತಾನೆ. ಸನ್ಯಾಸಿ ಆತನನ್ನು ಬೈದು ಕಳುಹಿಸುತ್ತಾನೆ. ಯಥಾಪ್ರಕಾರ  ಮತ್ತೆ ಮೋಸ ಹೋಗುತ್ತಾನೆ.  ಸಾಯಂಕಾಲ ಬಾಬ ಬಳಿಗೆ ಹೋಗಿ ಯಥಾ ಪ್ರಕಾರ ಹೇಳುತ್ತಾನೆ. ತಾನು ಭಿಕ್ಷುಕನಾಗಿ ಬಂದುದನ್ನು ಬಾಬ ಹೇಳುತ್ತಾರೆ. ಸನ್ಯಾಸಿ ಮರುದಿನ ಪುನಃ ಬರುವಂತೆ ಹೇಳಿದಾಗ ಬಾಬ ಹೇಳುತ್ತಾರೆ, ಸಾವಿರ ಸಾರಿ ಬಂದರೂ ಅಷ್ಟೇ ನೀನು ಗುರುತಿಸಲಾರೆ.  ನೀನು ಜಾಗೃತನಾಗಿದ್ದಲ್ಲಿ ಮಾತ್ರವೇ ಗುರುತು ಹಿಡಿಯಬಲ್ಲೆ. ನೀನು ಸದಾ ಎಚ್ಚರವಿರಬೇಕು.  ಅದನ್ನೇ ಶಂಕರಾಚಾರ್ಯರು ಭಜಗೋವಿಂದಂ ಅಂತ ಹೇಳಿರುವುದು. ಪರಮಾತ್ಮ ನಾಮಸ್ಮರಣೆಯ ಮಹತ್ವವದು. ಪರಮಾತ್ಮನನ್ನು ಕಾಣುವ ರೀತಿ ಈ ಕಥೆಯಲ್ಲಿ ವ್ಯಕ್ತವಾಗುತ್ತದೆ.  ನಮ್ಮೊಳಗಿನ ಪರಮಾತ್ಮ ಎಂಬ ಭಾವನೆ ನಿತ್ಯ ಜಾಗೃತ ಸ್ಥಿತಿಯಲ್ಲಿರಬೇಕು.

ನಮ್ಮ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಮಾತ್ರವಲ್ಲ ಅವುಗಳು ನಮ್ಮಿಂದ ಗೌರವಿಸಲ್ಪಡಬೇಕು. ಅದೇ ಪರಮಾತ್ಮ ಸಾನ್ನಿಧ್ಯ. ಈಗಂತೂ ಅದಕ್ಕೆ ಅವಶ್ಯವಿರುವ ಏಕಾಂಗಿತನ ಎಂಬ ಅವಕಾಶ ಒದಗಿ ಬಂದಿದೆ. ಮನೆಯೇ ದೇವಾಲಯವಾಗಿ ಬದಲಾಗಿದೆ. ಮನುಷ್ಯ ಮನೆ ದೇವರ ಮುಂದೇ ನಿಂತು ದೂರದ ಕಾಶಿಗೋ ಧರ್ಮಸ್ಥಳಕ್ಕೋ ನಿಂತಲ್ಲೇ ನಮಸ್ಕರಿಸುತ್ತಾನೆ.  ಇಲ್ಲಿಯೂ ನಮ್ಮ ಮನಸ್ಸಿನ ಭಾವನೆಯೇ ಗೌರವಿಸಲ್ಪಡುತ್ತದೆ. ಆ ಭಾವನೆ ಭಗಂತನ ರೂಪವಾಗಿ ಬದಲಾಗುತ್ತದೆ.  ನಿತ್ಯ ಕರ್ಮಗಳು ಅದು ಸಂಧ್ಯಾವಂದನೆಯೇ ಆಗಬೇಕೆಂದಿಲ್ಲ. ಸಂಧ್ಯಾವಂದನೆ ಸಂಧಿಕಾಲದಲ್ಲಿ ಮಾಡುವ ಪ್ರಾರ್ಥನೆ.  ತಮ್ಮ ಸಂಸ್ಕಾರಕ್ಕೆ ಹೊಂದಿಕೊಂಡು ತೀರ ಖಾಸಗಿಯಾಗಿ ಏಕಾಂತದಲ್ಲಿ ಮಾಡುವ ಆರಾಧನೆಯೆ ನಿತ್ಯ ಕರ್ಮ. ಇಲ್ಲಿ ಸಂಕಲ್ಪಗಳಿಲ್ಲ. ಹರಕೆ ಸಲ್ಲಿಸುವಿಕೆ ಇಲ್ಲ. ಅದು ಮಾಡಲೇ ಬೇಕಾದ ಅನಿವಾರ್ಯ ಕಾರ್ಯ. ಅದಕ್ಕೆ ಅದನ್ನು ಕರ್ಮ ಅಂತ ಹೇಳುವುದು. ಮಾಡುವ ಕರ್ಮದಲ್ಲಿ ಈಡೆರ ಬೇಕಾದ ಬೇಡಿಕೆಯ ಪ್ರಾರ್ಥನೆ ಇರುವುದಿಲ್ಲ. ನನ್ನ ಈ ಬಯಕೆ ಈಡೇರಿದರೆ ಇದನ್ನು ಮಾಡುತ್ತೇನೆ ಎಂಬ ಹರಕೆ ಸಲ್ಲಿಕೆ ಇಲ್ಲ. ಹುಟ್ಟಿದ್ದಕ್ಕೆ ಆಚರಿಸಲೇ ಬೇಕಾದ ಅನಿವಾರ್ಯತೆ ಮಾತ್ರ ಇದೆ. ದೇವಾಲಯದ ದರ್ಶನವೋ ಹೋಮ ಹವನ ವೃತಾದಿಗಳಲ್ಲಿ ಯಾವುದಾದರೊಂದು ಫಲಾಪೇಕ್ಷೆ ಇರುತ್ತದೆ.  ಫಲಾಪೇಕ್ಷೆಯಿಂದ ಮಾಡುವ ಕ್ರಿಯೆಗಳು ಅನಿವಾರ್ಯವಲ್ಲ.  ಹಾಗಾಗಿಯೇ ಫಲಾಪೇಕ್ಷೆ ಇಲ್ಲದೇ ಮಾಡುವ ಕಾರ್ಯಗಳು ಅತ್ಯುತ್ತಮ ಎನಿಸಲ್ಪಡುತ್ತವೆ.  ಕಲಿಯುಗದಲ್ಲಿ ಯಾವ ದೇವಾಲಯ ದರ್ಶನವೂ ಬೇಡ. ಕೇವಲ ಭಗವಂತನ ನಾಮಸ್ಮರಣೆ ಇದ್ದರೆ ಸಾಕು ಅಂತ ವೇದಾಂತಿಗಳು ಜ್ಞಾನಿಗಳು ಹೇಳುತ್ತಾರೆ. ಒಂದು ವೇಳೆ ದೇವಾಲಯಗಳಿಗೆ ತೀರ್ಥಯಾತ್ರೆ ಕೈಗೊಂಡರೂ ನಾವು ಮನೆಯಲ್ಲಿ ಅಥವಾ ಏಕಾಂತದಲ್ಲಿ ಮಾಡುವ ಈ ಆರಾಧನೆಯೇ ಅತಿ ಮುಖ್ಯ. ಇದನ್ನು ಮಾಡದವನಿಗೆ ಯಾವ ದೇವಾಲಯ ದರ್ಶನದ ಅಥವಾ ಯಾಗ ಹೋಮ ಹವನಾದಿಗಳ ಫಲ ಸಿದ್ಧಿಯಾಗುವುದಿಲ್ಲ.  ದೇವಾಲಯ ಪ್ರಥಮ ಆದ್ಯತೆಯಾಗದೆ, ನಮ್ಮ ಏಕಾಂತ ಪ್ರಾರ್ಥನೆಯೇ ಆದ್ಯತೆಯಾಗಬೇಕು.
THANKS TO GOOGLE PAGES

ಏಕಾಂತ ಧ್ಯಾನ ಮತ್ತು ಖಾಸಗೀ ತನದ ಪ್ರಾರ್ಥನೆಗೆ ಸ್ವಯಂ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇರಬೇಕು. ಅದನ್ನು ಆಚರಿಸುವುದಕ್ಕೆ ಸರಳವಾಗಿ ಯಾವುದೇ ಆಡಂಬರ ವಿಲ್ಲ. ಧನ ಸಂಪತ್ತು ವಿನಿಯೋಗವಿಲ್ಲ. ಹೃದಯದ ನೇರಕ್ಕೆ ಕೈ ಮುಗಿದು ಪರಮಾತ್ಮನ ನಾಮ ಸ್ಮರಣೇ ಇಷ್ಟೇ ಸಾಕಾಗುತ್ತದೆ. ಕೆಲವರಿಗೆ ಇದು ಕಷ್ಟವಾಗುತ್ತದೆ. ಹಲವು ಸಲ ಏಕಾಂಗಿಯಾಗಿ ಹೋಗುವುದಕ್ಕೆ ದಾರಿ ತಿಳಿಯದಿರುವಾಗ ಇನ್ನೊಬ್ಬರ ಸಹಾಯ ಯಾಚಿಸುತ್ತೇವೆ. ಇಲ್ಲ ಜತೆಯಲ್ಲಿ ಹೋಗುವ ಸಹ ಯಾತ್ರಿಗಳನ್ನು ಹುಡುಕುತ್ತೇವೆ. ಏಕಾಂಗಿಯಾಗಿ ತಿಳಿಯದಿರುವಾಗ ಸುಲಭವಾಗಿ ಸಹಯಾತ್ರಿಯಂತೆ ಸಮೂಹ ಆರಾಧನೆಗಾಗಿ ದೇವಾಲಯವನ್ನು ಮನುಷ್ಯ ಅವಲಂಬಿಸುತ್ತಾನೆ. ಇದೊಂದು ಧಾರ್ಮಿಕ  ಭಾವನೆ. ಸಮೂಹ ಪ್ರಾರ್ಥನೆ ಹುಟ್ಟಿಕೊಂಡದ್ದೇ ಹೀಗೆ. ಏಕಾಂಗಿಯಾಗಿ ಮಾಡುವುದಕ್ಕೆ ಕಠಿಣ ತಿಳಿಯದು ಎನ್ನುವಾಗ ಸಮೂಹ ಆರಾಧನೆ ಹುಟ್ಟಿಕೊಂಡಿತು. ಸಮೂಹ ಆರಾಧನೆಯಿಂದ ದೇವಾಲಯದ ಅನಿವಾರ್ಯತೆ ಒದಗಿಬಂತು.  

ನಾವು ಹೊಸದಾಗಿ ಬಾಡಿಗೆ ಮನೆ ಅಥವಾ ತೋಟ ಜಮೀನು ಕೊಳ್ಳುವುದಕ್ಕೆ ಯೋಚಿಸುತ್ತೇವೆ. ಆಗ ಸಾಧ್ಯವಾದಷ್ಟು ಮಧ್ಯವರ್ತಿಗಳಿಲ್ಲದವುಗಳಿಗೆ ಆದ್ಯತೆಯನ್ನು ಕೊಡುತ್ತೇವೆ. ಯಾವುದೇ ವಸ್ತುಗಳನ್ನು ಕೊಳ್ಳುವಾಗಲೂ ಮಧ್ಯವರ್ತಿಗಳಿದ್ದರೆ ಅದೊಂದು ಮಾನಸಿಕ ಅಸೌಕರ್ಯದಂತೆ ಭಾಸವಾಗುತ್ತದೆ. ಲಾಭಾಂಶ ಹಂಚಿ ಹೋಗುವ ಆತಂಕವಿರುತ್ತದೆ. ಹಲವು ಸಲ ಕೊಡುವನು ಯಾರೋ ಕೊಳ್ಳುವವನು ಯರೋ ಇಬ್ಬರಿಗೂ ತಿಳಿದಿರುವುದಿಲ್ಲ.  ನೇರಾನೇರ ವ್ಯವಹಾರ ಎರಡು ಕಡೆಗೂ ಲಾಭದಾಯಕವಾಗಿದೆ.  ಅದರಂತೆ, ಏಕಾಂತ ಧ್ಯಾನದಲ್ಲಿ ಅಥವಾ  ಮನೆಯಲ್ಲಿ ಆಚರಿಸುವ ಮಾಡುವ ನಿತ್ಯಕರ್ಮಗಳಲ್ಲಿ ದೇವಾಲಯ ಪ್ರಾರ್ಥಾನಾ ಮಂದಿರವೆಂಬ ಮಧ್ಯವರ್ತಿಗಳಿಲ್ಲ. ಧಾರ್ಮಿಕ ಆಚರಣೆಗಳು ದೇವಾಲಯಗಳು ಶಿಸ್ತುಬದ್ಧ ಸಮಾಜಕ್ಕೆ ಅನಿವಾರ್ಯವಾಗಬಹುದು. ಆದರೆ ಖಾಸಗೀ ಬದುಕಿಗೆ ಅನಿವಾರ್ಯವಲ್ಲ. ಇದಕ್ಕೆ ಮೇಲು ನೋಟಕ್ಕೆ ಆಕ್ಷೇಪಗಳು ಕಂಡರೂ ಸತ್ಯವಾಗಲೀ ಸುಳ್ಳಾಗಲೀ ಅದರ ಆಳ ವಿಸ್ತಾರ ಅರಿವಾಗುವುದು ಅದರ ಅನುಭವದಿಂದ.  ನಮ್ಮಿಂದ ಯಾರಾದರೂ ಬದಲಾವಣೇ ಆಗಬೇಕು ಎಂಬ ಭಾವನೆ ಇದ್ದಲ್ಲಿ ಸಂಘರ್ಷ ಆರಂಭವಾಗುತ್ತದೆ. ಅಲ್ಲಿ ಕೇವಲ ನನ್ನ ಭಾವನೆ ನನಗಾಗಿ ಅಂತ ಇದ್ದರೆ ಯಾವ ತರ್ಕಕ್ಕು ಅವಕಾಶವಿರುವುದಿಲ್ಲ.

ಈಗ ಪ್ರಕೃತಿಯೇ ಮುನಿದುಕೊಂಡು ಅನಿವಾರ್ಯ ಏಕಾಂಗಿತನವನ್ನು ಮನುಷ್ಯನಿಗೆ ದಯಪಾಲಿಸಿದೆ. ದೇವಾಲಯಕ್ಕೆ ಹೋಗಬೇಕೆಂದರೂ ಸಾಧ್ಯವಿಲ್ಲ. ಮಾತ್ರವಲ್ಲ ದೇವಾಲಯಗಳ ಪ್ರಾರ್ಥನಾ ಮಂದಿರಗಳ ಬಾಗಿಲುಗಳು ಮುಚ್ಚಿವೆ. ಹಾಗಾಗಿ ಭಗವಂತ ಆಚರಿಸಬೇಕಾದ ಅನಿವಾರ್ಯ ಕರ್ಮಗಳನ್ನು ನೆನಪಿಸುತ್ತಿದ್ದಾನೆ, ಎಚ್ಚರಿಸುತ್ತಿದ್ದಾನೆ.  ಈಗಲೂ ಎಚ್ಚರವಾಗದೇ ಇದ್ದರೆ ಮತ್ತೆ ಹೇಳಬೇಕಿಲ್ಲ. ಅವಕಾಶವಂಚಿತರಾಗುತ್ತೇವೆ. ಹಾಗಾಗಿ ಸರಳವಾಗಿ ಮನೆಯಲ್ಲೇ ಆರಾಧಿಸೋಣ.   ಹಿಂದೂ ಸಂಸ್ಕಾರದಲ್ಲಿ ದೇವಾಲಯ ದರ್ಶನ ಅನಿವಾರ್ಯವಲ್ಲ. ಕರ್ಮಾನುಷ್ಠಾನಗಳು ಅನಿವಾರ್ಯ. ಮನೆಯಲ್ಲಿ ಅಥವಾ ಇದ್ದಲ್ಲೇ ಏಕಾಂಗಿಯಾಗಿ ಅಚರಿಸುವ ಆರಾಧನೆಯೇ ಶ್ರೇಷ್ಠ. ಆಡಂಬರದ ಪೂಜೆಯಾಗಲಿ, ಉತ್ಸವ ಜಾತ್ರೆಗಳಾಗಲಿ ವೈಭವದ ರಥೋತ್ಸವದಲ್ಲಿ ದೇವರು ಪ್ರತ್ಯಕ್ಷವಾದ ಉದಾಹರಣೆ ಇಲ್ಲ. ಅದಕ್ಕಾಗಿಯೇ ಋಷಿ ಮುನಿಗಳು ಏಕಾಂತ ತಪಸ್ಸಿಗೆ ವನಾಂತರಕ್ಕೆ ತೆರಳುತ್ತಾರೆ. ಬುದ್ದ ಮಹಾವೀರ  ರಾಮ ಕೃಷ್ಣ ಪರಮ ಹಂಸ ವಿವೇಕಾನಂದ ಮುಂತಾದ ಪರಮ ಶ್ರೇಷ್ಠರೂ ಇದನ್ನೇ ಅನುಸರಿಸುತ್ತಾರೆ. ಆದುದರಿಂದ ಇವತ್ತು ಅವರ ಹಾದಿಯನ್ನು ಅನುಸರಿಸುವುದಕ್ಕೆ ಕಾಲ ಅನುಕೂಲವಾಗಿದೆ. ಯಾವ ಖರ್ಚೂ ಇಲ್ಲದೇ ಸರಳವಾಗಿ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.

ಮರಣ ಶಯ್ಯೆಯಲ್ಲಿ ಮಲಗಿದ ವಯೋವೃದ್ದ. ತನ್ನದೆಲ್ಲವನ್ನು ವಯೋ ಸಹಜ ಮರೆತಿರುತ್ತಾನೆ. ಅದುವರೆಗೆ ತನ್ನ ಬಂಧು ಬಳಗ ಅಂತ ಹಪಹಪಿಸುತ್ತಿದ್ದವನು ಈಗ ಯಾರನ್ನೂ ಗುರುತಿಸಲಾರ. ಹಾಗಿದ್ದರೂ ಸಹ  ಮಲಗಿದಲ್ಲೇ ತನ್ನಷ್ಟಕ್ಕೇ ತಾನೇ ನಗುತ್ತಿರುತ್ತಾನೆ ಯಾಕೆ? ಭವದ ಸಂಬಂಧಗಳು ಕ್ಷೀಣಗೊಂಡು ಇಲ್ಲವಾದಾಗ ಪರಮಾತ್ಮ ಸಂಬಂಧ ಗಟ್ಟಿಯಾಗುತ್ತದೆ. ಪರಮಾತ್ಮ ದರ್ಶನ ಕಂಡುಬರುತ್ತದೆ.  ಆಗತಾನೆ ಹುಟ್ಟಿದ ಮಗುವಿಗೆ ಸ್ವತಃ ಹೆತ್ತ ತಾಯಿಯ ಪರಿಚಯ ಇಲ್ಲದೇ ಇದ್ದರೂ ಅದೂ ನಗುತ್ತಿರುತ್ತದೆ. ಯಾರನ್ನು ನೋಡಿ ಅದು ನಗುತ್ತದೆ? ಅದೇ ಪರಮಾತ್ಮ ದರ್ಶನ. ನಂತರ ಸಂಭಂಧಗಳು ಪರಿಚಯಗಳು ಗಟ್ಟಿಯಾಗುತ್ತಲೇ ಅದು ಪರಮಾತ್ಮ ದರ್ಶನದಿಂದ ದೂರವಾಗುತ್ತದೆ. ಮನುಷ್ಯ ಜೀವನ ಇದು. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ತಾನು ತನ್ನವರು ಎಂಬ ಮೋಹ ನಷ್ಟವಾಗಿ ಆ ಸಂಬಂಧದಿಂದ ಕಳಚುವಲ್ಲಿ ವಿಶ್ವರೂಪ ಹೇಗೆ ಸಹಕಾರಿಯಾಗುತ್ತದೋ ಆ ಅವಕಾಶ ಒದಗಿಬರುವುದು ಈ ಏಕಾಂತದ ಆರಾಧನೆಯಲ್ಲಿ. ಇಲ್ಲಿ ಮಧ್ಯವರ್ತಿಗಳಿಲ್ಲ. ಹೊರ ಜಗತ್ತಿನ ಅನಿವಾರ್ಯತೆಯಿಲ್ಲ. ನಾವು ಮತ್ತೆ ನಮ್ಮ ಪರಮಾತ್ಮನು ಅಷ್ಟೇ.