ಸಿನಿಮಾ ಮಂದಿರದಲ್ಲಿ ಪ್ರದರ್ಶನ ಆರಂಭವಾಗುವ ಮೊದಲು "ಧೂಮ ಪಾನ ಆರೋಗ್ಯಕ್ಕೆ ಹಾನಿಕರ....ಹೃದಯ ಸ್ಪಾಂಜ್ ನಂತೆ ...." ಹೀಗೆ ಶ್ವಾಸ ಕೋಶ ಹಿಂಡಿ ಹಿಪ್ಪೆ ಮಾಡಿದಾಗ ಕಪ್ಪು ಕರಕಲಾದ ನೀರನ್ನು ನೋಡಿರಬಹುದು. ಬಹುಶಃ ಬೇಡದೇ ಇದ್ದರೂ ಪದೇ ಪದೇ ನೋಡುವ ಅನಿವಾರ್ಯತೆಯಾದಾಗ ಕಣ್ಣು ಮುಚ್ಚಿಯೋ ಮುಖ ಬೇರೆ ಕಡೆಗೆ ತಿರುಗಿಸಿಯೋ ಆ ಭೀಭತ್ಸ ದೃಶ್ಯವನ್ನು ಅರಗಿಸಿಕೊಳ್ಳುವುದಕ್ಕೆ ಶ್ರಮ ಪಟ್ಟಿರಬಹುದು. ಈ ದೃಶ್ಯ ನೋಡಿ ಯಾರಾದರೂ ಸಿಗರೇಟ್ ಸೇದುವುದನ್ನು ಬಿಟ್ಟಿರಬಹುದೇ? ಪ್ರಶ್ನೆಯನ್ನು ಕೇಳಿ ನೋಡಿ...ಉತ್ತರ ತೀರಾ ನಿರಾಶಾದಾಯಕವಾಗಿರುತ್ತದೆ. ಮನುಷ್ಯನ ಮನಸ್ಸು ಹಾತೆಯಂತೆ ಅಥವಾ ಪತಂಗದಂತೆ ಬೆಂಕಿ ಸುಂದರ ಅಂತ ಕಂಡು ಅದರತ್ತ ಹಾರಿ ತನ್ನ ರೆಕ್ಕೆ ಕಳೆದುಕೊಳ್ಳುತ್ತದೆ ಇಲ್ಲಾ ಪ್ರಾಣ ಕಳೆದುಕೊಳ್ಳುತ್ತದೆ.
ಧೂಮ ಪಾನದ ಆ ಜಾಹಿರಾತು ಎಚ್ಚರಿಕೆಯ ಸಂದೇಶ ಅದೆಷ್ಟು ಮಾರ್ಮಿಕವಾಗಿದ್ದರೂ ಅದನ್ನು ನೋಡುವುದಿಲ್ಲ. ಮನಸ್ಸು ಪ್ರಚೋದಿಸಲ್ಪಡುವುದಿಲ್ಲ. ಅದರ ಬದಲಿಗೆ ಯಾವುದಾದರೊಂದು ಜಾತಿಯ ಬಗ್ಗೆ ಅತೀ ಕೆಟ್ಟದಾಗಿ ಹೇಳುವ ದೃಶ್ಯವಾಗಲಿ ಅಥವಾ ತಮ್ಮ ಮೆಚ್ಚಿನ ನಾಯಕ ವಿಮರ್ಷಿಸುವ ದೃಶ್ಯವಾದರೆ ಅದನ್ನು ಪೂರ್ಣವಾಗಿ ನೋಡುವ ಮೊದಲೆ ಅಂತ್ಯವನ್ನು ಊಹಿಸಿ ರಸ್ತೆಗೆ ಇಳಿದು ಕಲ್ಲು ಕೈಗೆ ತೆಗೆದುಕೊಳ್ಳುತ್ತಾನೆ. ದೇಶ ವಿದೇಶದ ಸುದ್ದಿಯನ್ನು ನೋಡುವ ವಿಮರ್ಶಿಸುವ ಈತನಿಗೆ ರಾಜಕೀಯ ನಾಯಕರು ಇಡುವ ಹೆಸರೇ ಅಮಾಯಕ..... ಪ್ರಸ್ತುತ ತಮ್ಮ ಸ್ವಾರ್ಥಕ್ಕೆ ದುರ್ಬಳಕೆಯಾಗುವ ಶಬ್ದವೊಂದು ಇದ್ದರೆ ಅದು ’ಅಮಾಯಕ’. ಏನೂ ತಿಳಿಯದೇ ಇರುವನಿಗೆ ತಿಳಿದಿಲ್ಲ ಏನು ಎಂಬುದೇ ಅಚ್ಚರಿಯ ವಿಷಯವಾಗುತ್ತದೆ. ಇಂದಿನ ದೇಶದ ಆಗುಹೋಗುಗಳಲ್ಲಿ ಈ ಅಮಾಯಕರ ಪಾತ್ರ ಅತ್ಯಂತ ದಾರುಣವಾಗಿರುತ್ತದೆ. ಎಲ್ಲ ತಿಳಿದರೂ ತಾವು ಅಮಾಯಕರು ಎಂಬ ಪದವಿ ಸ್ಥಿರವಾಗಿರುವಂತೆ ವೇಶ ಕಟ್ಟುವುದರಲ್ಲಿ ಯಾವ ಅಮಾಯಕತನವೂ ಅಡ್ಡಬರುವುದಿಲ್ಲ. ಅಷ್ಷೊಂದು ............ವ್ಯವಹಾರ ಯಾವುದೋ ಇಂಗ್ಲೀಷ್ ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಪ್ರಚೋದನೆಗೊಳ್ಳುತ್ತಾನೆ. ಅಷ್ಟಾಗಿ ಆತ ಅವಿದ್ಯಾವಂತ, ಅಮಾಯಕ. ಪ್ರಚೋದನೆಗೊಳ್ಳಬೇಕಾದ ವಿಷಯ ಎಷ್ಟೇ ಗಂಭೀರವಾಗಿರಲಿ, ಜೀವನಾವಶ್ಯಕವಾಗಿರಲಿ ಪ್ರಚೋದನೆ ಇಲ್ಲ. ತನಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂಬಂತೆ ತಣ್ಣಗೇ ಇದ್ದು ಬಿಡುತ್ತಾನೆ.
ದೇಶಕ್ಕೆ ವಿಪತ್ತು ಬಂದೊದಗಿದೆ. ದೇಶದ ಅರ್ಥವ್ಯವಸ್ಥೆ ಕುಸಿದು ಹೋಗುವ ಸನ್ನಿವೇಶ. ಜನ ಜೀವನ ಅಸ್ತವ್ಯಸ್ತ ಮಾತ್ರವಲ್ಲ ಪ್ರಾಣವೇ ಉಳಿಸಿಕೊಳ್ಳಲಾಗದ ಸ್ಥಿತಿ. ಮಾಧ್ಯಮಗಳಲ್ಲಿ ಅಪಾಯದ ಸುದ್ದಿ ಮೇಲಿಂದ ಮೇಲೆ ಬರುತ್ತದೆ. ಆ ಮಾಧ್ಯಮದ ಸುದ್ದಿ ತಮಗೆ ಸಂಬಂಧಿಸಿದ್ದು ಅಲ್ಲವೆಂಬಂತೆ, ಈ ದೇಶದ ಜನಗಳಲ್ಲಿ ತಾನೂ ಒಬ್ಬ ಎನ್ನುವ ಯೋಚನೆಯೂ ಬಾರದ ನಿರ್ಲಿಪ್ತ ಮನುಷ್ಯನಾಗಿಬಿಡುತ್ತಾನೆ. ಅದೇ ಮಾಧ್ಯಮದಲ್ಲಿ ಸರಕಾರದ ಅನುದಾನವೋ ಉಚಿತ ಕೊಡುಗೆಯ ಬಗ್ಗೆ ಇರಲಿ ಕಿವಿ ನೆಟ್ಟಗಾಗುತ್ತದೆ.
ಅಗತ್ಯವಿದ್ದಲ್ಲಿ ಕಿವುಡರಂತೆ ಅನಗತ್ಯವಿದ್ದಲ್ಲಿ ಕುಶಾಗ್ರಮತಿಗಳಂತೆ ವರ್ತಿಸುವುದೇ ಅಮಾಯಕತ್ವದ ಲಕ್ಷಣ. ಹಲವು ಸಲ ಅನ್ನಿಸುತ್ತದೆ, ಈ ಶಬ್ದ ಕೋಶದ ನಿಘಂಟುವಿನಲ್ಲೇ ಈ ಪದದ ಅರ್ಥವನ್ನು ಬದಲಿಸಬೇಕು. ಸುಂದರ ಶಬ್ದವನ್ನು ಅಪಭ್ರಂಶಗೊಳಿಸುವ ವರ್ತನೆ ತೋರಿಸುವಾಗ ಯಾವ ಅಮಾಯಕತೆಯೂ ಅಡ್ಡಬರುವುದಿಲ್ಲ. ತಮಗೆ ಬದುಕುಕೊಟ್ಟ ದೇಶ, ಅನ್ನ ದುಡಿಮೆ ಕೊಟ್ಟ ಈ ಭೂಮಿ ಹರಿದಾಡುವ ನೀರು ಎಲ್ಲವನ್ನು ಹರಿದು ಮುಕ್ಕುವಾಗ ಯಾವ ಅಮಾಯಕತ್ವವೂ ಅಡ್ಡ ಬರುವುದಿಲ್ಲ.
ಸಿಡಿಮದ್ದು ಪಟಾಕಿಗಳನ್ನು ಸಿಡಿಸುವಾಗ ಯಾವುದೋ ಒಂದು ಪಟಾಕಿ ಕೈಯಲ್ಲೇ ಉರಿದು ಕೈ ಸುಡುತ್ತದೆ. ಕಣ್ಣೇ ಕುರುಡಾಗುತ್ತದೆ. (ಆದರೂ ಬುದ್ದಿ ಬರುವುದಿಲ್ಲ) ಆಗ ಇಡೀ ಪಟಾಕಿಯ ಬಗ್ಗೆ ಭಯ ಆವರಿಸುತ್ತದೆ. ಪಾಪ ಯಾವುದೋ ಒಂದು ಪಟಾಕಿ ಕೈಯನ್ನು ಸುಟ್ಟದ್ದಕ್ಕೆ ಇಡೀ ಪಟಾಕಿಯನ್ನು ದೂಷಿಸುವುದಕ್ಕೆ ಸಾಧ್ಯವೇ? ಹೀಗೆ ಪ್ರಶ್ನೆ ಬಂದರೆ ಉತ್ತರ ಏನೆಂದು ಕೊಡಬಹುದು? ಪಟಾಕಿ ಪಟಾಕಿಯೇ..... ಅದಕ್ಕೆ ಬೆಂಕಿಯೇ ಬೇಕಾಗುವುದು ಹೊರತು ನೀರಲ್ಲ. ಕೈಯಲ್ಲಿ ಸಿಡಿದ ಆ ಒಂದು ಪಟಾಕಿ ಬಿಟ್ಟು ಉಳಿದ ಪಟಾಕಿಯೂ ಎಲ್ಲೆಂದರಲ್ಲಿ ಸಿಡಿಯಬಹುದು ಎಂಬ ಎಚ್ಚರಿಕೆ ಇರಬೇಕು. ಆ ಭಯ ಇರಬೇಕು. ಯಾರೊ ಒಬ್ಬ ಮಾಡಿದ ಅಪರಾಧಕ್ಕೆ ಇಡೀ ಸಮುದಾಯವನ್ನು ಹೇಳುವುದು ಸರಿಯಲ್ಲ. ನಿಜವಾಗಿಯೂ ಹೌದು. ಯಾರೊ ಒಬ್ಬ ಹಾಗೆ ಆಗಿ ಹೋದದ್ದಕ್ಕೆ ಅವನನ್ನೇ ದೂಷಿಸಬೇಕು ಸರಿ. ಪುಣ್ಯಾತ್ಮರೊಬ್ಬರು, ಯಾವುದೋ ಒಂದು ಮಾಧ್ಯಮದಲ್ಲಿ ಯಾವುದೋ ಒಂದು ಸುದ್ದಿ ತಿರುಚಿ ಬಂದರೆ, ಇಡೀ ಮಾಧ್ಯಮ ವನ್ನೇ ದೂಷಿಸುತ್ತಾರೆ. ಒಬ್ಬನ ತಪ್ಪಿಗೆ ಸಮುದಾಯವನ್ನು ದೂಷಿಸುವುದು ಎಷ್ಟು ತಪ್ಪೋ ಅದೇ ರೀತಿ ಯಾವುದೋ ಮಾಧ್ಯಮ ಮಾಡಿದ್ದಕ್ಕೆ ಇಡೀ ಮಾಧ್ಯಮಗಳನ್ನೇ ನಿಂದಿಸಿ ಗುರಿಯಾಗಿಸುವುದು ಸರಿಯೇ? ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವ ಭರದಲ್ಲಿ ಕೈ ಇನ್ನೊಬ್ಬನಿಗೆ ತಾಗಿದ್ದು ಗಮನಕ್ಕೆ ಬರುವುದೇ ಇಲ್ಲ. ಈ ಸಾಮಾಜಿಕ ನ್ಯಾಯ ತೀರ್ಮಾನಗಳ ರೀತಿ ಇದು. ನ್ಯಾಯವನ್ನು ತೂಗಿ ನೋಡುವ ತಕ್ಕಡಿ ಆಕಡೇ ಈಕಡೆ ವಾಲಾಡುತ್ತದೆ. ಅದರ ದಂಡಿಗೆ ಸ್ಥಿರವಾಗಿ ನಿಲ್ಲುವಷ್ಟು ತಾಳ್ಮೆ ನಮಗಿಲ್ಲ. ಅದಕ್ಕಿಂತ ಮೊದಲು ತಟ್ಟೆಯಲ್ಲಿದ್ದ ನ್ಯಾಯವನ್ನು ಕಬಳಿಸುತ್ತೇವೆ. ನ್ಯಾಯದ ಮುಖಗಳು ದಶಾವತಾರಿಯಂತೆ ...
ಕಳ್ಳತನ ಮಾಡುವವನು ಸಿಕ್ಕಿ ಬೀಳುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾನೆ. ಅದರೂ ಕದಿಯುವಾಗ ಸಿಕ್ಕಿ ಬಿದ್ದು ಸೆರಮನೆ ಶಿಕ್ಷೆ ಅನುಭವಿಸುತ್ತಾನೆ. ಆಗಲೂ ಆತ ಯೋಚಿಸುವುದು ಯಾವ ತಪ್ಪಿನಿಂದ ತಾನು ಸಿಕ್ಕಿಬಿದ್ದೇ ಎಂದು. ಶಿಕ್ಷೆ ಅಪರಾಧ ಪುನಃ ಮಾಡದಂತೆ ಪ್ರಚೋದನೆ ನೀಡಬೇಕು. ಆದರೆ ಶಿಕ್ಷೆ ಅನುಭವಿಸಿ ಹೊರಬಂದ ಮೇಲೆ ಪುನಃ ಕದಿಯುತ್ತಾನೆ. ಆದರೆ ಮೊದಲು ಮಾಡಿದ ತಪ್ಪನ್ನು ತಿದ್ದಿಕೊಂಡು ಇನ್ನಷ್ಟು ಜಾಣತನದಿಂದ ಕದಿಯುತ್ತಾನೆ. ಎಂದಿಗೂ ತಾನು ಮಾಡುವ ಕಳ್ಳತನ ತಪ್ಪು ಅಂತ ಭಾವಿಸುವುದಿಲ್ಲ. ಇದು ಇಂದಿನ ಸಾಮಾಜಿಕ ನ್ಯಾಯ. ಸಿಕ್ಕಿ ಬಿದ್ದರಷ್ಟೇ ಕಳ್ಳ. ಸಿಕ್ಕಿಬೀಳದಂತೆ ನೋಡಿಕೊಂಡರೆ ಅಷ್ಟೇ ಸಾಕು. ಈ ಜಾಣ ತನ ತೋರಿಸುವುದೇ ಅಮಾಯಕತನ ಅಂತ ಅನ್ನಿಸಿಬಿಡುತ್ತದೆ. ಈ ಅಮಾಯಕತನವೇ ಭಾರತದ ದೊಡ್ಡ ದುರಂತ ಎಂದರೆ ಅಚ್ಚರಿ ಪಡಬೇಕಿಲ್ಲ.
No comments:
Post a Comment