ನಟನೆ, ಜಗತ್ತಿನ ಅತ್ಯಂತ ದೊಡ್ಡ ಕಲೆ ಯಾವುದು ಅಂತ ಕೇಳಿದರೆ
ಇದನ್ನೇ ಹೇಳಬಹುದೇನೋ. ಕಲೆ ಹಲವಿರಬಹುದು. ಅದರಲ್ಲಿ ಇದು ಮಿಳಿತವಾಗಿರುವುದೇ ಹೆಚ್ಚು.ಕೆಲವು ಕಲೆಯಲ್ಲಿ
ಪ್ರಧಾನ ಅಂಗವೇ ಇದು. ನವರಸಗಳೇ ಈ ನಟನೆಯ ಪ್ರಧಾನ ಅಸ್ತ್ರಗಳು. ಯಾವ ನಟ ಈ ರಸದ
ಅನುಭವವನ್ನು ಪಡೆಯುತ್ತಾನೋ ಆತ ಶ್ರೇಷ್ಠ ನಟನಾಗುತ್ತಾನೆ.
“ಉದಯನಾಣು ತಾರಂ” ಒಂದು
ಜನಪ್ರಿಯ ಮಲಯಾಳಂ ಸಿನಿಮಾ. ಮೋಹನ್ ಲಾಲ್ ಪ್ರಧಾನ ನಟನಾಗಿರುವ ಈ ಸಿನಿಮಾದಲ್ಲಿ ಒಂದು ಸನ್ನಿವೇಶ
ಇರುತ್ತದೆ. ಇಲ್ಲಿ ನಟನೆ ಎಂದರೇನೆಂದು ತಿಳಿಯದ ಮೂರ್ಖನಿಗೆ ನಟನೆ ಕಲಿಸುವುದಕ್ಕಾಗಿ ಒಬ್ಬ
ಬರುತ್ತಾನೆ. ಆತ ಕ್ಷಣ ಮಾತ್ರದಲ್ಲಿ ನವರಸಗಳನ್ನು ಮುಖದಲ್ಲಿ ತೋರಿಸುವ ಸನ್ನಿವೇಶವಿದೆ. ಕೇವಲ
ಕೆಲವೇ ಕ್ಷಣದಲ್ಲಿ ಅ ನವರಸಗಳನ್ನು ಒಂದಾದ ಮೇಲೊಂದರಂತೆ ತೋರಿಸುವ ಸನ್ನಿವೇಶವದು. ವಾಸ್ತವದಲ್ಲಿ
ಹಾಸ್ಯ ಬಿಂಬಿಸುವ ಸನ್ನಿವೇಶವಾದರೂ ಆ ಹಾಸ್ಯಕಲಾವಿದನ ನವರಸ ಪ್ರಕಟನೆ ಮಾತ್ರ
ಅಧ್ಬುತವಾಗಿರುತ್ತದೆ. ಸಾಲದೆಂಬಂತೆ ನವರಸಗಳು ಮುಗಿಸಿ ಹತ್ತನೆಯದ್ದು ನನ್ನದು ಅಂತ ವಿಭಿನ್ನ ಮುಖ
ಭಾವವನ್ನು ತೋರಿದಾಗ ನಗದೇ ಇರುವ ಪ್ರೇಕ್ಷಕ ಇರುವುದಕ್ಕೆ ಸಾಧ್ಯವಿಲ್ಲ. ಹಲವು ಸಲ ನೋಡಿದರೂ ಒಂದು
ಕಿರುನಗುವನ್ನಾದರೂ ತರಿಸುವ ಈ ಹಾಸ್ಯ ಮಯ ಸನ್ನಿವೇಶ ಆ ಸಿನಿಮಾದ ವಿಶೇಷಗಳಲ್ಲಿ ಒಂದು. ಆ
ನವರಸವನ್ನು ತೋರಿಸಿದ ಮಹಾನ್ ನಟನೆಂದರೆ ಅದು ಸಿನಿಮಾ ಲೋಕ ಕಂಡ ಅದ್ಭುತ ಹಾಸ್ಯ ನಟ ಜಗತೀ ಶ್ರೀ
ಕುಮಾರ್.
ಜಗತೀ ಶ್ರಿಕುಮಾರ್ ಮಲಯಾಳಂ ಸಿನಿಮ ಕಂಡವರು ಈ ಹೆಸರನ್ನು
ಮರೆಯುವುದಕ್ಕೆ ಸಾಧ್ಯವಿಲ್ಲ. ಜಗತಿ ಎಂಬುದು ತಿರುವನಂತ ಪುರಂ ಸಮೀಪದ ಊರ ಹೆಸರು. ಆ ಊರಿಗೆ
ಸಿನಿಮಾರಂಗದಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟ ನಟ.
ನಾವು ನಮ್ಮ ಮನೆಯೊಳಗೆ ಸುತ್ತಾಡುವುದು ಸುಲಭ. ಅದರ ಸಂದುಗೊಂದುಗಳು ನಮಗೆ ಬೇಡವೆಂದರೂ ಚಿರಿಪರಿಚಿತ, ಆದರೂ ನಾವು ನಮ್ಮದೇ ಮನೆಯ ನೋಡದೇ ಇರುವ ಭಾಗ ಹಲವಿರಬಹುದು. ಅದನ್ನು ನೋಡುವ ತುಡಿತ ಒತ್ತಟ್ಟಿಗೆ ಇಟ್ಟು ಮತ್ತೊಬ್ಬರ ಮನೆಗೆ ಹೋಗುತ್ತೇವೆ. ಅಲ್ಲೆಲ್ಲ ಸುತ್ತಾಡುತ್ತೇವೆ. ಅಪರಿಚಿತ ಎನ್ನಿಸುವವುಗಳನ್ನು ಅರಿಯುವುದಕ್ಕೆ ಯತ್ನಿಸುತ್ತೇವೆ. ಇದು ಸಹಜ. ಹಾಗೆ ಮಲಯಾಳಂ ಚಿತ್ರಗಳು ನನಗೆ ಕೌತುಕವನ್ನು ಸೃಷ್ಟಿಸುತ್ತಾ ಹೋದವುಗಳು. ಆ ಕೌತುಕಗಳಲ್ಲಿ ಮಹಾ ಕೌತುಕವೆಂದರೆ ಈ ಜಗತೀ ಶ್ರೀ ಕುಮಾರ್ ನಟನ ಪಾತ್ರಗಳು.
ಚಾರ್ಲೀ ಚಾಪ್ಲಿನ್ ,
ಜಗತ್ತಿನ ಅತ್ಯಂತ ಶ್ರೇಷ್ಠ ನಟ. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ನಟ ಯಾರೂಂತ ಕೇಳಿದರೆ ಹಲವು ಮಹನೀಯರು
ಇದನ್ನೇ ಹೇಳುತ್ತಾರೆ. ಸಹಜ ಅಭಿನಯದ ಪರಾಕಾಷ್ಠೆಯದು. ಇಂದಿನ ಬಣ್ಣದ ಯುಗದಲ್ಲೂ ಆ ಕಪ್ಪು ಬಿಳುಪು
ಕಾಲದ ನಟನನ್ನು ಹಿಂದಿಕ್ಕುವ ನಟ ಹುಟ್ಟಲಿಲ್ಲ ಎಂದರೆ ನಟನೆ ಎಂಬುದು ಇರುವುದು ಭಾಷೆಯಿಂದಲ್ಲ,
ಆಡಂಬರದಲ್ಲಿ ಅಲ್ಲ. ಅದರ ಸಹಜತೆಯಲ್ಲಿ. ನೈಜ ನಟನೆ ಅಂತ ನಟನೆಯನ್ನು ಹೇಳುವುದಕ್ಕಿಲ್ಲ.
ಯಾಕೆಂದರೆ ನಟನೆ ಎಂಬುದೇ ಕಪಟ. ಅಲ್ಲಿ ನೈಜತೆಯ ಸೃಷ್ಟಿಯಾಗಬೇಕಾದರೆ ಈ ಕಪಟತ್ವವನ್ನು ಅರಿಯಬೇಕು.
ಚಾಪ್ಲೀನ್ ಪಾತ್ರಗಳು ಈ ಭ್ರಮೆಯನ್ನು ಸೃಷ್ಟಿಸುತ್ತವೆ. ಚಾಪ್ಲಿನ್ ಕಾಲ ಸಂದು ಹೋಯಿತು.
ನನ್ನಲ್ಲಿ ಯಾರಾದರೂ ಶ್ರೇಷ್ಠ ನಟ ಯಾರೂ ಎಂದು ಕೇಳಿದರೆ ನಾನು ಹೇಳುವುದು ಜಗತಿ ಶ್ರೀಕುಮಾರ್. ಆ
ಭ್ರಮೆಯನ್ನು ನನ್ನಲ್ಲಿ ಸೃಷ್ಟಿಸಿದ ಮಹಾನ್ ನಟ.
ಜಗತಿ ಅಭಿನಯಿಸದ
ಪಾತ್ರಗಳಿರುವುದಕ್ಕೆ ಸಾಧ್ಯವೇ ಇಲ್ಲ. ಸುಮಾರು ಸಾವಿರಕ್ಕೂ ಮಿಕ್ಕಿ ಸಿನಿಮಾದಲ್ಲಿ ನಟಿಸಿದ ನಟ.
ಅದರಲ್ಲು ಜಾಗತಿಕ ದಾಖಲೆಯನ್ನು ಬರೆದ ನಟ. ಇದು ಸಾರ್ವಕಾಲಿಕ ದಾಖಲೆ. ಹಾಸ್ಯ ಒಂದು ರಸವಾದರೂ ಆ ಹಾಸ್ಯದಲ್ಲೇ ಎಲ್ಲವನ್ನು
ತೋರಿಸುವ ನಟನಾ ಸಾಮಾರ್ಥ್ಯ ಈತನ ನಟನೆಯಲ್ಲಿದೆ. ಇಂತಹ ಪಾತ್ರ ಎಂದು ಈ ನಟನನ್ನು
ವರ್ಗಿಕರಿಸುವುದಕ್ಕೆ ಸಾಧ್ಯವಿಲ್ಲದದಷ್ಟು ನಟನೆ ಬೆಳೆದು ಬಿಟ್ಟಿದೆ. ಪಾತ್ರ ಯಾವುದೇ ಇರಲಿ ಜಗತಿ
ಶ್ರೀಕುಮಾರ್ ಅಭಿನಯ ಪ್ರತಿ ಪಾತ್ರವನ್ನು ಸೃಷ್ಟಿಮಾಡುತ್ತವೆ.
ನಟನೆ ಎಂದಾಗ ಹಲವು
ವ್ಯಾಖ್ಯಾನಗಳನ್ನು ಕೇಳಬಹುದು. ಒಬ್ಬ ನಟ ಒಳ್ಳೆಯ ಕಣ್ಣೀರು ಸುರಿಸಿ ಅಭಿನಯಿಸುತ್ತಿದ್ದರೆ
ಅದನ್ನು ಶ್ರೇಷ್ಠ ಅಭಿನಯ ಎಂದು
ತಿಳಿಯುವವರಿದ್ದಾರೆ. ಆದರೆ ನಟನೆ ಎಂಬುದು ಕೇವಲ ಒಂದು ಭಾವಕ್ಕೆ ಸೀಮಿತವಾಗಿರುವುದಿಲ್ಲ ಎಂದು
ಅರಿವಾಗಬೇಕಾಗದರೆ ಜಗತೀ ಪಾತ್ರಗಳನ್ನು ನೋಡಬೇಕು. ಆತನ ನಟನೆ ಎಂದರೆ ಏನು ಎಂಬುದರ ಪಾಠ ಇವುಗಳಲ್ಲಿ
ಕಾಣಬಹುದು. ಹೀಗಾಗಿಯೆ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಹೇಳುವಂತೆ ಜಗತೀ ಕ್ಯಾಮೆರಾದ ಎದುರು
ನಟಿಸುತ್ತಿದ್ದರೆ ನಾವು ನಮ್ಮ ನಿರ್ದೇಶನವನ್ನು ಕ್ಯಾಮೆರಾವನ್ನು ಮರೆತುಬಿಡುತ್ತೇವೆ. ಒಬ್ಬ ಸಮರ್ಥ
ನಿರ್ದೇಶಕ ನಟನ ಸಂಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದಕ್ಕೆ ಯತ್ನಿಸುತ್ತಾನೆ. ಆದರೆ ಜಗತಿಯ
ಪೂರ್ಣ ಪ್ರತಿಭೆಯನ್ನು ಉಪಯೋಗಿಸುವುದು ಯಾರಿಂದಲೂ ಸಾಧ್ಯವಿಲ್ಲ.
ಸಾಮಾನ್ಯವಾಗಿ ಒಬ್ಬ
ಸಿನಿಮಾ ನಟನ ಪಾತ್ರಗಳನ್ನು ನೋಡುವಾಗ ಕೆಲವೇ ಕೆಲವು ಮಾತ್ರ ಇಷ್ಟ ಅಂತ ಹೆಸರಿಸುವುದಕ್ಕೆ
ಸಾಧ್ಯವಾಗುತ್ತದೆ. ಆದರೆ ಜಗತಿಯ ಯಾವ ಪಾತ್ರವನ್ನೂ ಹೀಗೆ ವರ್ಗೀಕರಿಸುವುದು ಕಷ್ಟವಾಗುತ್ತದೆ.
ಪ್ರತಿಯೊಂದರಲ್ಲೂ ಜಗತಿಯ ನೈಜತೆಯ ಭ್ರಮೆ ನಮ್ಮನ್ನು ಬಿಡುವುದೇ ಇಲ್ಲ. ಆದರೂ ಆತನ ಪಾತ್ರಗಳಲ್ಲಿ
ನಮ್ಮ ಅಭಿರುಚಿಗೆ ತಕ್ಕಂತೆ ವರ್ಗೀಕರಿಸಿದರೂ ಅದು ಪರಿಪೂರ್ಣವಲ್ಲ, ಆದರೂ ಆತನ ಕೆಲವು
ಪಾತ್ರಗಳನ್ನು ಉಲ್ಲೇಖಿಸಬಹುದು. ವಿಕೀ ಪೀಡಿಯಾ
ಕೂಡ ಆತನ ಸಂಪೂರ್ಣ ಪಾತ್ರಗಳನ್ನು ಹೇಳುವುದಕ್ಕೆ ಅಸಮರ್ಥವಾಗಿದೆ. ಅಷ್ಟೊಂದು ಸಿನಿಮಾಗಳು. ಮಲಯಾಳ
ಚಿತ್ರರಂಗವನ್ನು ಈ ಬಗೆಯಲ್ಲಿ ವ್ಯಾಪಿಸಿದ ನಟ ಇನ್ನೊಬ್ಬ ಇರಲಾರ. ಬಹುಶಃ ಭಾರತೀಯ
ಚಿತ್ರರಂಗದಲ್ಲೇ ಇರುವುದಕ್ಕೆ ಸಾಧ್ಯವಿಲ್ಲ.
ಕಿಲುಕ್ಕಂ ಚಿತ್ರದ
ಫೋಟೋಗ್ರಾಫರ್ ಗೈಡ್ ನಿಶ್ಚಲ್, ಹಾಗೆ ಅವಿಟ್ಟಂ ತಿರುನಾಳ್ ಆರೋಗ್ಯ ಶ್ರೀಮಾನ್ ಸಿನಿಮಾದ
ವಯೋವೃದ್ಧ ಅಚ್ಚುತ ಕುರುಪ್,ಕಾಬೂಲಿವಾಲದ ಕಡಲಾಸು, ಮಿಂಡಾ ಪೂಚಕ್ಕು ಕಲ್ಯಾಣಂ ನ , ಹೆಂಡತಿ ಗುಲಾಮ ಇವುಗಳೆಲ್ಲ ಮತ್ತೊಬ್ಬ ನಟ ಹೀಗೆ
ಅಭಿನಯಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಇಮೇಜ್ ಇಲ್ಲದ ಪಾತ್ರಗಳನ್ನು ಅಭಿನಯಿಸಿ ಸ್ವತಃ ಇಮೇಜ್
ಗಳಿಗೆ ಸವಾಲಾಗಿ ನಿಂತ ನಟ. ಒಬ್ಬ ನಟನಿಗೆ ಸಂಬಂಧಿಸಿದಂತೆ ಶರೀರ ಭಾಷೆ ಅತ್ಯಂತ
ಪ್ರಧಾನವಾಗಿರುತ್ತದೆ. ಜಗತಿಯ ಪಾತ್ರಗಳು ಈ ಶರೀರ
ಭಾಷೆಯ ಆದ್ಯಾಕ್ಷರದಿಂದ ವ್ಯಾಕರಣದವರೆರೂ ಪಾಠವನ್ನು ಕಲಿಸುತ್ತವೆ.
ನಾವು ಸಿನಿಮಾವನ್ನು ಕಾಣುವಾಗ ಪಾತ್ರದ ಮುಖೇನ ಕಾಣಬೇಕು.
ವ್ಯಕ್ತಿ ನಿಷ್ಠವಾಗಿ ಕಾಣಬಾರದು. ವ್ಯಕ್ತಿಯನ್ನು ಅಥವಾ ನಟನನ್ನು ಹೊಂದಿಕೊಂಡು ಪಾತ್ರ ಬೆಳೆಯಬಾರದು.
ಪಾತ್ರವನ್ನು ಹೊಂದಿಕೊಂಡು ನಟ ಬೆಳೆಯಬೇಕು. ಪಾತ್ರ
ಪಾತ್ರದೊಳಗೆ ಆ ವ್ಯಕ್ತಿ ಗೋಚರವಾಗುತ್ತಾನೆ ಎಂದಾದರೆ ಅಲ್ಲಿ ನಟನೆ ಸೋಲುತ್ತದೆ ಎಂಬುದೇ ಅರ್ಥ. ಈ
ವೆತ್ಯಾಸಗಳನ್ನು ಅರಿಯಬೇಕಾದರೆ ಜಗತಿಯ ಪಾತ್ರಗಳನ್ನು ನೋಡಬೇಕು. ಅಲ್ಲಿ ನಟನೆ ಇದೆ ಎಂದೇ
ಅನಿಸುವುದಿಲ್ಲ. ಎಲ್ಲವು ಪರಕಾಯ ಪ್ರವೇಶದ ಸೀಮಾರೇಖೆಯನ್ನು ದಾಟುವ ಯತ್ನ ಮಾಡುತ್ತವೆ. ಒಬ್ಬ
ನಟನಾದವನಿಗೆ ನವರಸಗಳೂ ಕೂಡ ಸವಾಲಾಗುತ್ತವೆ. ಯಾವುದೇ ಪಾತ್ರವನ್ನು ಪರಿಪೂರ್ಣವಾಗಿ ಅಭಿನಯಿಸುವ,
ಅದು ಸಜ್ಜನ ನಾಯಕನಾಗಲೀ ಕಳ್ಳನಾಗಲೀ ಕುಡುಕನಾಗಲಿ ಸಮಾಜದ ಯಾವುದೇ ವ್ಯಕ್ತಿಯಾಗಲೀ ಎಲ್ಲ ಇಮೇಜ್
ಗಳನ್ನು ಮೀರಿ ಅಭಿನಯಿಸುವುದಕ್ಕೆ ಸಮರ್ಥನಾದರೆ ಮಾತ್ರ ಆತ ಪರಿಪೂರ್ಣನಾಗುತ್ತಾನೆ. ಹಾಗಾಗಿ
ಜಗದೀಶ್ರೀಕುಮಾರನಂತೆ ಪರಿಪೂರ್ಣ ನಟ ಇನ್ನೊಬ್ಬ ಇರುವುದಕ್ಕೆ ಸಾಧ್ಯವಿಲ್ಲ ಎಂದನಿಸುತ್ತದೆ. ಈತನ
ಪ್ರೈತಿಯೊಂದು ಪಾತ್ರಗಳು ಇದನ್ನು ಸಾರಿ ಹೇಳುತ್ತವೆ.
ಮಲಯಾಳಿಗರ ಪ್ರೀತಿಯ
ಅಂಭಿಳಿ ಚೇಟ್ಟನ್ ಎಂದು ಕರೆಯಲ್ಪಡುವ ಜಗತೀ ಶ್ರೀಕುಮಾರ್ ಇತ್ತೀಚೆಗೆ ಕೆಲವು ವರ್ಷದಿಂದ ಸಿನಿಮಾದಲ್ಲಿ
ನಟಿಸುತ್ತಿಲ್ಲ. ಒಂದು ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ
ನಡೆಸುತ್ತಿದ್ದಾರೆ. ಇದೀಗ ಈ ದುರಂತದಿಂದ ಗುಣ ಮುಖರಾಗಿ ಜಗತೀ ಪುನರಾಗಮನವಾಗುತ್ತಿದೆ ಎಂಬ
ಸುದ್ದಿ ಕೇಳಿ ಬರುತ್ತಿದೆ. ಸಿನಿಮಾರಂಗ ಈ ಅದ್ಭುತನ ನಟನಿಗಾಗಿ ಕಾದು ಕುಳಿತಿದೆ ಎಂದರೂ
ತಪ್ಪಾಗಲಾರದು.
ಭಾರತೀಯ ಚಿತ್ರರಂಗದ
ಅತಿ ವಿಶಿಷ್ಟ ನಟ ಜಗತೀ ಮತ್ತೊಮ್ಮೆ ಬರಲಿ ಎಂಬ ಹಾರೈಕೆ.