ಒಂದೆರಡು ವರ್ಷಗಳ ಈಚೆಗೆ ಒಂದು ಸಾಯಂಕಾಲ ನನ್ನ ಅಮ್ಮನಿಗೆ ರಕ್ತದೊತ್ತಡ ಕಡಿಮೆಯಾಗಿ ತೀವ್ರವಾಗಿ ಅಸ್ವಸ್ಥರಾದರು. ರಾತ್ರಿ ಅವರನ್ನು ಮನೆಯ ಹತ್ತಿರವೇ ಇದ್ದ ಒಂದು ಡೈಯಾಗ್ನಾಸ್ಟಿಕ್ ಕೇಂದ್ರಕ್ಕೆ ಕರೆದು ಕೊಂಡು ಹೋದೆ. ಅಲ್ಲಿ ಹೃದ್ರೋಗ ತಜ್ಞ ವೈದ್ಯರು ಬಂದು ಪರೀಕ್ಷಿಸಿ ಸಲಹೆ ಕೊಡುತ್ತಿದ್ದರು. ಸಾಮಾನ್ಯವಾಗಿ ಮನೆಯ ಹತ್ತಿರವೇ ಇರುವುದರಿಂದ ಎಲ್ಲ ಸಂದರ್ಭದಲ್ಲೂ ಅಮ್ಮನನ್ನು ಅಲ್ಲಿಗೆ ಕರೆದೊಯ್ಯುವುದು. ಆ ವೈದ್ಯರು ಸ್ವಲ್ಪ ಗಣ್ಯ ವೈದ್ಯರು. ಆಗಾಗ ಹಲವಾರು ಟಿ ವಿ ಚಾನಲ್ ಗಳ ಚರ್ಚೆಯಲ್ಲಿ ಮುಖತೋರಿಸುತ್ತಾರೆ. ಅವರ ಹೆಸರಾಗಲೀ ಡೈಯಾಗ್ನಿಸ್ಟಿಕ್ ಹೆಸರಾಗಲೀ ಹಾಕುವ ಉದ್ದೇಶ ನನಗಿಲ್ಲ. ಸರಿ ವೈದ್ಯರು ಅಮ್ಮನನ್ನು ಪ್ರಾಥಮಿಕ ಪರೀಕ್ಷೆ ಮಾಡಿದರು. ಇ ಸಿ ಜಿ ಪರೀಕ್ಷೆ ಮಾಡಿ ಆದಷ್ಟು ಬೇಗ ತುಸು ದೂರದ ದೊಡ್ಡ ಆಸ್ಪತ್ರೆಗೆ ಸೇರಿಸುವುದಕ್ಕೆ ಹೇಳಿದರು. ತಾನು ಬರೆದುಕೊಡುತ್ತೇನೆ. ಅಲ್ಲಿ ಬೇಗನೆ ಆಡ್ಮಿಟ್ ಮಾಡಿ ಒಳ್ಳೆ ಟ್ರೀಟ್ ಮೆಂಟ್ ಕೊಡುತ್ತಾರೆ. ತಾನೂ ಬರುತ್ತೇನೆ. ಹತ್ತು ಹದಿನೈದು ಸಾವಿರ ಬೇಕಾದೀತು. (ಆಸ್ಪತ್ರೆಯ ಹೆಸರೂ ಸಹ ಅಗತ್ಯವಿಲ್ಲ ) ಸ್ಥಿತಿ ಅಷ್ಟೊಂದು ಗಂಭೀರವೇ? ನನಗೂ ಗಾಬರಿಯಾಯಿತು. ಇಂತಹ ಸಂದರ್ಭದಲ್ಲಿ ನಾನು ಅಕ್ಕನಿಗೆ ಕರೆ ಮಾಡುವುದು ಸ್ವಾಭಾವಿಕ. ಆಕೆ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸೂಪರ್ ವೈಸರ್. ಆಕೆ ಕೂಡಲೇ ಅಲ್ಲಿಗೆ ಕರೆತರುವಂತೆ ಹೇಳಿದಳು. ಆಗಲೇ ಕತ್ತಲೆಯಾಗಿತ್ತು. ಇತ್ತ ಈ ವೈದ್ಯರು ಅವಸರ ಪಡಿಸುತ್ತಿದ್ದರು.
ನಾನು ಮತ್ತೆ ಯೋಚಿಸಲಿಲ್ಲ. ಅಮ್ಮನನ್ನು ಕರೆದುಕೊಂಡು ಕೊಲಂಬಿಯಾ ಆಸ್ಪತ್ರೆಗೆ ಹೋದೆ. ಅಲ್ಲಿ ನಾನೂರು ರೂಪಾಯಿ ಚೀಟಿ ಮಾಡಿಸಿ ಅಕ್ಕ ಮತ್ತು ಅವಳ ಸಹವರ್ತಿಗಳು ಕೂಡಲೇ ತುರ್ತು ಚಿಕಿತ್ಸೆಯ ಹಾಸಿಗೆಯಲ್ಲಿ ಅಮ್ಮನಿಗೆ ಡ್ರಿಪ್ಸ್ ಕೊಟ್ಟರು. ಅಲ್ಲಿಯ ಡ್ಯೂಟಿ ಡಾಕ್ಟರ್ ಪರೀಕ್ಷಿಸಿದರು. ಒಂದೆರಡು ತಾಸು. ಅಷ್ಟೇ ಆನಂತರ ಕೆಲವು ಮಾತ್ರೆ ಬರೆದುಕೊಟ್ಟು ಅಮ್ಮನನ್ನು ಕಳುಹಿಸಿ ಕೊಟ್ಟರು. ಅಕ್ಕ ಮತ್ತು ಸಹೋದ್ಯೋಗಿಗಳಿಗೆ ಮನಸಾರೆ ಧನ್ಯವಾದ ಹೇಳಿದೆ. ಆಗ ಅಲ್ಲಿನ ವೈದ್ಯರು ಹೇಳಿದರು, ಬೀಪಿ ಕಡಿಮೆಯಾಗಿತ್ತು. ಆತಂಕವೇನೂ ಇಲ್ಲ. ಅಮ್ಮನ ಆರೋಗ್ಯ ಸ್ಥಿರವಾಗಿದೆ. ಸ್ವಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಕೊಟ್ಟರು.
ಆನಂತರ ಮೊದಲ ವೈದ್ಯರು ಎಷ್ಟು ಖ್ಯಾತರಾಗಿದ್ದರೂ, ಅವರ ಹೆಸರಿನೊಂದಿಗೆ ಹಲವಾರು ಡಿಗ್ರಿಯ ಅಕ್ಷರಗಳು ಸೇರಿಕೊಂಡಿದ್ದರೂ ನಾನು ಅವರಲ್ಲಿಗೆ ಹೋಗಲಿಲ್ಲ. ವೈದ್ಯೋ ನಾರಾಯಣೋ ಹರಿ ಅಂತ ಅವರೇ ಟಿ ವಿ ಯ ಚರ್ಚೆಯಲ್ಲಿ ಗೊಳ ಗೊಳಿಸಿದ್ದನ್ನು ಕೇಳಿದ್ದೇನೆ. ಯಾವ ನಾರಾಯಣನೋ ಅಂತ ಅನುಮಾನ. ಹಾಗಾದರೆ ಆ ವೈದ್ಯರು ಹಾಗೇಕೆ ಮಾಡಿದರು? ವಿಷಯ ಸ್ಪಷ್ಟ. ಅಸ್ಪೆತ್ರೆಯ ಬಿಲ್ಲಿನ ಮೊತ್ತದಲ್ಲಿ ಕನಿಷ್ಠವೆಂದರೂ ಮೂರುನಾಲ್ಕು ಸಾವಿರ ಇವರ ಜೇಬಿಗೆ ಸಂದಾಯವಾಗುತ್ತದೆ. ಏನೋ ದೊಡ್ಡ ಉಪಕಾರ ಮಾಡಿದ ಆಪತ್ಭಾಂಧವರಂತೆ ತೋರಿಸಿಕೊಟ್ಟರು. ವಾಸ್ತವದಲ್ಲಿ ಇದೆಲ್ಲ ಈಗ ಸರ್ವೇ ಸಾಮಾನ್ಯ. ಒಬ್ಬ ಎಂ ಬಿ ಬಿ ಎಸ್ ಮಾಡಿ ಸಣ್ಣ ಕ್ಲೀನಿಕ್ ತೆರೆದರೆ ಸಾಕು. ಹಲವಾರು ಆಸ್ಪತ್ರೆಗಳ ಲಿಂಕ್ ಇರುತ್ತದೆ. ಯಾರು ಬಂದರೂ ಪ್ರಾಥಿಮಿಕ ಪರೀಕ್ಷೆ ಮುಗಿಸಿ ಅಲ್ಲಿಗೆ ರವಾನಿಸಿ ಬಿಡುತ್ತಾರೆ. ಅಲ್ಲಿಂದಲೂ ಒಂದಷ್ಟು ಕಮೀಷನ್ ನಂತರ ಕನ್ಸಲ್ಟೇಶನ್ ಅವರಿಗೆ ಸಲ್ಲುವ ದುಡ್ಡು ಆಸ್ಪತ್ರೆ ಬಿಲ್ ನಲ್ಲಿ ಸೇರಿರುತ್ತದೆ. ನಿತ್ಯ ಬರುವವರೂ ಬಂಧುಗಳು ಯಾರೇ ಇದ್ದರು ಇವರಿಗೆ ಸಲ್ಲಬೇಕಾದ ಹರಕೆ ಸಂದಾಯವಾಗಲೇ ಬೇಕು. ಇನ್ನು ಪರಿಚಯ ಸ್ನೇಹ ಹಣದ ಮುಂದೆ ಯಾವುದೂ ಅಲ್ಲ. ಚಿನ್ನದ ಕೆಲಸದವರಿಗೆ ಅಡ್ಡ ಹೇಳುವುದುಂಟು ಯಾರ ಚಿನ್ನವನ್ನೂ ಬಿಡುವುದಿಲ್ಲ ಎಂದು. ನಿಜಕ್ಕಾದರೆ ಅಲ್ಲಿಯಾದರೂ ಒಂದಿಷ್ಟು ಪ್ರಾಮಾಣಿಕತೆ ಇರಬಹುದು, ಆದರೆ ನಮ್ಮ ಜೀವಕ್ಕೆ ಸಂಬಂಧಿಸಿದಂತ ವೈದ್ಯಕೀಯ ಕ್ಷೇತ್ರದಲ್ಲಿ ಇವನ್ನೆಲ್ಲ ನಿರೀಕ್ಷೆ ಮಾಡುವುದು ಹಾಸ್ಯಾಸ್ಪದ.
ಬಹುಶಃ ಉಕ್ರೈನ್ ರಷ್ಯಾ ಯುದ್ಧ ಸಂಭವಿಸದೇ ಇರುತ್ತಿದ್ದರೆ ಹತ್ತರೊಟ್ಟಿಗೆ ಹನ್ನೊಂದು ಎಂಬಂತಿದ್ದ ಈ ಘಟನೆ ಮರೆತು ಹೋಗುತ್ತಿತ್ತು. ಆದರೆ ಉಕ್ರೈನ್ ನಿಂದ ವಾಪಾಸಾಗುವ ಬಹುತೇಕ ಮಂದಿಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ಈ ಘಟನೆ ನೆನಪಾಯಿತು. ಇಲ್ಲಿ ಭಾರತದ ಶಿಕ್ಷಣ ಬಿಟ್ಟು ಅದೂ ವಿಶ್ವಗುರು ಎಂದು ಬೆನ್ನು ತಟ್ಟಿಕೊಳ್ಳುವ ಭಾರತವನ್ನು ಬಿಟ್ಟು ಇವರೆಲ್ಲ ನಮಗೆ ಹೆಸರೂ ಪರಿಚಿತವಲ್ಲದ ಉಕ್ರೈನ್ ಗೆ ಯಾಕೆ ಹೋಗುತ್ತಾರೆ ಎಂಬುದು ಪ್ರಶ್ನಾರ್ಥಕ ವಿಷಯ. ನನ್ನ ವೈದ್ಯ ಮಿತ್ರರೊಬ್ಬರಲ್ಲಿ ಕೇಳಿದೆ. ಅವರು ಹೇಳಿದರು ಇಲ್ಲಿ ಒಂದು ಸಾಮಾನ್ಯ ವೈದ್ಯ ಪದವಿ ಮುಗಿಸಬೇಕೆಂದಿದ್ದರೆ ಕಡಿಮೆ ಎಂದರೂ ಮೂವತ್ತು ಲಕ್ಷ ಬೇಕು. ಅಲ್ಲಿ ಐದಾರು ಲಕ್ಷದಲ್ಲಿ ಸಾಧ್ಯವಾಗುತ್ತದೆ. ಹಾಗಾಗಿ ಹೆತ್ತವರನ್ನು ಮನೆಯನ್ನು ಬಿಟ್ಟು ಭೂಮಿಯ ಯಾವುದೋ ಒಂದು ಭಾಗಕ್ಕೆ ಅಧ್ಯಯನಕ್ಕೆ ಹೋಗುತ್ತಾರೆ. ಅವರ ಬಗ್ಗೆ ನಿಜಕ್ಕೂ ಸಹಾನುಭೂತಿ ಇದೆ. ವಿದ್ಯೆ ಜ್ಞಾನ ಎಂಬುದು ತಪಸ್ಸು ಎಂಬುದು ಸತ್ಯ. ಆದರೆ ಅದು ಈ ರೂಪದಲ್ಲಿ ಪರೀಕ್ಷೆಗೆ ಒಳಗಾಗುವುದು ವಿಪರ್ಯಾಸ.
ಒಂದು ಡಾಕ್ಟರ್ ಆಗುವುದಕ್ಕೆ ಅಷ್ಟು ಸಾವಿರ ಖರ್ಚು ಮಾಡಿದ ಮೇಲೆ, ಲೋಕೋದ್ಧಾರದ ಮಾತು ಅರ್ಥ ಹೀನ ಬೊಗಳೆಯಾಗುತ್ತದೆ. ಮೊದಲು ಪಟ್ಟ ಪರಿಶ್ರಮಕ್ಕೆ ಫಲ ಸಿಗಬೇಕು. ಕೇವಲ ಡಾಕ್ಟರ್ ಎನಿಸಿಕೊಳ್ಳೂವುದಕ್ಕೆ ಮೂವತ್ತು ಸಾವಿರ ಖರ್ಚು ಮಾಡಿದಮೇಲೆ ಇನ್ನು ದೊಡ್ಡ ಸರ್ಜನ್ ಆಗುವುದಕ್ಕೆ ಎಷ್ಟು ಖರ್ಚಾಗಬೇಡ. ಈಗ ಈ ವೈದ್ಯರು ನಿಗದಿತ ಆಸ್ಪತ್ರೆಗೆ ಸೇರಿಸುವುದಕ್ಕೆ , ಇಂತಹುದೇ ಮಾತ್ರೆ ಔಷಧಿ ತೆಗೆದುಕೊಳ್ಳ ಬೇಕು ಎನ್ನುವುದರ ಸತ್ಯ ತಿಳಿಯಬಹುದು. ಒಂದೊಂದು ಮಾತ್ರೆ ನುಂಗುವಾಗಲೂ ವೈದ್ಯರಿಗೆ ಸಲ್ಲಬೇಕಾದದ್ದು ಸದ್ದಿಲ್ಲದೆ ಸಂದು ಹೋಗುತ್ತದೆ. ವ್ಯವಸ್ಥೆಯೇ ಹೀಗೆ.
ಶಿಕ್ಷಣ ಮಾನವ ಮೂಲ ಭೂತ ಹಕ್ಕುಗಳಲ್ಲಿ ಒಂದು. ಯಾವುದೇ ಸರಕಾರವಾದರೂ ಪ್ರಭುಗಳಾದರೂ ಅದಕ್ಕೆ ಮುಕ್ತ ಅವಕಾಶವನ್ನು ಒದಗಿಸಿಕೊಡಬೇಕು. ಇನ್ನು ವಿಶ್ವಗುರು ಎಂಬಲ್ಲಿಗೆ ಲಗ್ಗೆ ಇಡುವುದಕ್ಕೆ ಹಾತೊರೆಯುವ ನಮ್ಮ ಸ್ಥತಿ ಹೇಗಿರಬೇಕು ಯೋಚಿಸಿ. ವಿಶ್ವಗುರು ಎಂಬುದು ಪದವಿ ಮಾತ್ರ. ಶಿಕ್ಷಣ ಮಾತ್ರ ವಿದೇಶದಲ್ಲಿ. ಕೋವಿಡ್ ಬಂದನಂತರ ತೀವ್ರವಾಗಿ ಘಾಸಿಗೆ ಒಳಗಾದದ್ದು ನಮ್ಮ ಶಿಕ್ಷಣ ಕ್ಷೇತ್ರ. ಮನೆಯ ಯಾವುದೋ ಮೂಲೆಯಲ್ಲಿ ಮೊಬೈಲ್ ಲಾಪ್ ಟಾಪ್ ಹಿಡಿದು ಒದ್ದಾಡುವ ನಮ್ಮ ಮಕ್ಕಳನ್ನು ನೋಡುವಾಗ ಮರುಕ ಹುಟ್ಟುತ್ತದೆ. ಯಾವ ಮೊಬೈಲ್ ನಲ್ಲಿ ಇಂಟರ್ನೆಟ್ ಉಳಿದಿದೆ ಎಂದು ಲೆಕ್ಕಾಚಾರದಲ್ಲೇ ಓದಬೇಕು. ಒಂದು ಸಲ ಅಮ್ಮನ ಮೊಬೈಲ್, ಇನ್ನೊಂದು ಸಲ ಅಣ್ಣನ ಮೊಬೈಲ್ ಹೀಗೆ ಬದಲಾಗುತ್ತದೆ ಇಂದಿನ ಶಿಕ್ಷಣ. ಆದರೂ ಅದು ಹೇಗೊ ಶಾಲೆ ಆರಂಭವಾಯಿತು ಎನ್ನುವಾಗ ದೆವ್ವ ಮತ್ತೊಂದು ಭಾಗದಲ್ಲಿ ವಕ್ಕರಿಸಿತು. ಕೇಸರಿ ಹಿಜಾಬ್ ಗಲಾಟೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಒಂದು ಗ್ರಹಚಾರ ಬಡಿದಿದೆ. ಇಷ್ಟೆಲ್ಲಾ ಪರಿಶ್ರಮ ಪಟ್ಟು ಪದವಿ ಪಡೆದ ಮೇಲೆ ಏನು? ವ್ಯಾಪಾರ ಕ್ಕೆ ಇಳಿಯಲೇ ಬೇಕು. ಇಲ್ಲವಾದರೆ ಅಪ್ಪ ಮಾಡಿಟ್ಟ ಸಾಲ ಮುಗಿಯುವುದಿಲ್ಲ.
ದೊಡ್ಡ ದೊಡ್ಡ ಸಂಸ್ಥೆಗಳು ದೊಡ್ಡ ವಿದ್ಯಾದಾನ ಲೋಕ ಸೇವೆ ಎಂದು ಕೊಂಡು ಶಾಲಾ ಕಾಲೇಜು ವೈದ್ಯಕೀಯ ಕಾಲೇಜ್ ಹೀಗೆ ತೆರೆದಿಡುತ್ತವೆ. ಹೇಳುವುದಕ್ಕೆ ಸೇವೆ. ಆದರೆ ಇವೆಲ್ಲ ಹಗಲು ದರೋಡೆಗಳು. ಬೀದಿ ಬದಿಯ ವ್ಯಾಪಾರಕ್ಕೂ ಇದಕ್ಕೂ ಏನೂ ವೆತ್ಯಾಸವಿಲ್ಲ. ಹಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಮ್ಮ ಮಂತ್ರಿಗಳು ಮಾಜಿ ಮಂತ್ರಿಗಳು ಶಾಸಕರು ಹೀಗೆ ಜನ ಸೇವೆ ಲೇಬಲ್ ಅಂಟಿಸಿಕೊಂಡವರೇ ಆಗಿರುತ್ತಾರೆ. ವಿಶ್ವ ಗುರು ಎಂಬ ಭಾರತದ ಶಿಕ್ಷಣದ ಅವಸ್ಥೆ ಇದು. ಹಾಗಾಗಿ ಎಲ್ಲರೂ ವಿದೇಶಕ್ಕೆ ಹಾರುತ್ತಾರೆ. ಮೊದಲು ವಿದೇಶದಲ್ಲಿ ಶಿಕ್ಷಣ ಎಂದರೆ ದೊಡ್ಡ ಶ್ರೀಮಂತಿಕೆಯ ಹೆಗ್ಗಳಿಕೆಯ ಲಕ್ಷಣವಾಗಿತ್ತು. ಈಗ ಅಲ್ಲಿ ಓದುವವರು ಏನೂ ದುಡ್ಡಿಲ್ಲದವರು ಬಡವರು ಎಂಬಂತಾಗಿರುವುದು, ವಿಶ್ವಗುರುವಿನ ಕಪಾಳಕ್ಕೆ ಬಾರಿಸಿದಂತೆ ಅನಿಸುತ್ತದೆ. ಯೋಚಿಸಿ ಮುಂದೊಂದು ದಿನ ಬಾಲವಾಡಿ ಎಲ್ ಕೆ ಜಿ, ಯುಕೆಜಿ ಗೂ ವಿದೇಶಕ್ಕೆ ಕಳುಹಿಸುವ ದಿನ ಬರಬಹುದು.
ಮಾತು ಮಾತಿಗೆ ಶಿಕ್ಷಣ ಕ್ರಮವನ್ನು ಬದಲಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ ವಿಶ್ವ ಗುರು ಎನ್ನಿಸುವಂತಹ ನಮ್ಮಲ್ಲಿ ಶಿಕ್ಷಣ ಸುಲಭದಲ್ಲಿ ಸಿಗುವ ಹಾಗೆ ವಾತಾವರಣ ಸೃಷ್ಟಿಯಾಗಬೇಕು. ಮದುವೆಯಾಗಿ ಮಗುವಾದಾಗ ಈಗ ಸಂಭ್ರಮಿಸುವ ದಿನಗಳು ಕಳೆದು ಹೋಗಿದೆ. ಈ ಮಗುವಿಗೆ ಎಲ್ಲಿ ಶಿಕ್ಷಣ ಕೊಡುವುದು ಎಂದು ಯೋಚಿಸಬೇಕಿದೆ.
ಪಾಠ ಶಿಕ್ಷಣ ಬದಲಿಸುವುದಕ್ಕಿಂತಲೂ ಈ ಕಲುಷಿತ ವಾತಾವರಣದಿಂದ ಶಿಕ್ಷಣದ ರಕ್ಷಣೆಯಾಗಬೇಕು. ಉತ್ತಮ ಶಿಕ್ಷಣ ಉತ್ತಮ ರೀತಿಯಲ್ಲಿ ದೊರೆಯುವಂತಾಗಬೇಕು. ಕೊನೆ ಪಕ್ಷ ವಿಶ್ವಗುರು ಎನ್ನಿಸಿಕೊಳ್ಳುವುದಕ್ಕೆ ಇಷ್ಟು ಬೇಕು ಎಂಬ ಅರಿವಾದರೂ ಮೂಡಿದರೆ ಅದೇ ದೊಡ್ಡದು. ಜ್ಞಾನವೇ ದೇವರು ಎಂದು ದೇವರಿಗೆ ಹೋಲಿಸುತ್ತೇವೆ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಗಾದೆಯಂತೆ ಶಿಕ್ಷಣ ಸುಲಭದಲ್ಲಿ ಸಿಕ್ಕರೂ ಈ ವ್ಯವಸ್ಥೆ ಅದಕ್ಕೆ ಆಸ್ಪದಕೊಡುವುದಿಲ್ಲ. ಇನ್ನು ಜ್ಞಾನವೇ ದೇವರು ಎಂದು ಕಾಣದ ದೇವರನ್ನು ಸೇರಿಸಿ ನಾವು ಪಾವನ ಪವಿತ್ರರಾಗಿಬಿಡಬೇಕು. ಇದೀಗ ಹಲವು ವಿದ್ಯಾರ್ಥಿಗಳು ಬಂದಿದ್ದಾರೆ. ಇನ್ನು ಅವರ ಮುಂದಿನ ಶಿಕ್ಷಣ ಹೇಗೋ ದೇವರೇ ಬಲ್ಲ. ಈ ಜಗದ್ಗುರು ಸ್ಥಾನದಲ್ಲಿ ಅದು ಪರಿಪೂರ್ಣವಾಗಬಹುದೇ ಕಾಲವೇ ಹೇಳಬೇಕು.