ಬಹಳ ಹಿಂದೆ ನಾವು ಊರಲ್ಲಿದ್ದಾಗ, ನಾವಿನ್ನೂ ಚಿಕ್ಕವರು ನಮ್ಮ ಮನೆಗೆ ಒಂದು ಹಸುವನ್ನು ತಂದೆವು. ಆ ಹಸುವನ್ನು ತಂದವನು ಒಬ್ಬ ಮಧ್ಯವರ್ತಿ , ಆತ ಹಿಂದುವಲ್ಲ. ಅದೇ ವ್ಯಾಪಾರ ಮಾಡಿಕೊಂಡವನು. ಆ ಹಸು ಮಾರಾಟಮಾಡಿದವನೂ ಹಿಂದುವಲ್ಲ. ನಮ್ಮ ಮನೆಗೆ ಬಂದ ಹಸು ನಮ್ಮದೇ ಬಂಧುವಾಗಿ ಮನೆಯ ಅಂಗವೆಂಬಂತೆ ಬೆಳೆಯಿತು. ಹಸು ವಾಗಿದ್ದ ಕಾರಣ ಅದು ಸಸ್ಯಹಾರಿಯೇ ಆಗಿತ್ತು. ಅನುಮಾನವಿಲ್ಲ. ಮೊದಲಿನ ಮನೆಯಲ್ಲೂ ಇದು ಹುಲ್ಲು ಹಿಂಡಿ ತಿಂದು ಕಲಗಚ್ಚು ಕುಡಿದು ಹಾಲು ಕೊಡುತ್ತಿತ್ತು. ನಮ್ಮಲ್ಲೂ ನಾವು ಅದೇ ರೀತಿ ಹಾಲು ಕರೆದು ಕುಡಿದೆವು. ಈಗ ಈ ಸಂಭವವನ್ನು ನೆನಪಿಸಿದಾಗ ಒಂದು ಧರ್ಮ ಸೂಕ್ಷ್ಮದ ಅರಿವಾಗುತ್ತದೆ. ಧರ್ಮ ಎಂದರೆ ಅದು ಹಸುವಿನ ಹಾಲಿನಂತೆ. ಅದಕ್ಕೆ ಮತೀಯ ಭಾವವೇ ಇಲ್ಲ. ನಿಜಕ್ಕೂ ಹಾಲಿನ ಧರ್ಮ ಏನು? ಧರ್ಮ ಎಂದರೆ ಮತ್ತೊಮ್ಮೆ ಹೇಳಬೇಕಿಲ್ಲ. ಅದು ಸ್ವಭಾವ. ನಾವು ಜಾತಿಯ ಲೇಪ ಕೊಟ್ಟು ಅದನ್ನು ವಿರೂಪ ಗೊಳಿಸಿದ್ದೇವೆ.
ನನ್ನ ಬಾಲ್ಯದಲ್ಲಿ ಉಪನಯನವಾದಕೂಡಲೇ ಶಾಲೆಗೆ ಹೋಗುವುದಕ್ಕೆ ನಮ್ಮಜ್ಜ ಒಪ್ಪಿರಲಿಲ್ಲ. ಶಾಲೆಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಬದಲಾಗಿ ವೇದ ಪಾಠ ಹೇಳಿಸಿಕೊಳ್ಳಬೇಕು. ಚಡ್ಡಿ ಅಂಗಿ ಹಾಕಿ ಶಾಲೆಗೆ ಹೋಗುವುದು ಎಂದರೆ ಬ್ರಾಹ್ಮಣರಿಗೆ ಹೇಳಿಸಿದ್ದಲ್ಲ. ಸದಾ ಪಂಚೆ ಶಲ್ಯದಲ್ಲಿರಬೇಕು. ಅದೆಷ್ಟು ವಾಸ್ತವಕ್ಕೆ ಹತ್ತಿರವೋ ಅದು ಯೋಚಿಸುವ ವಿಷಯವಾದರೂ ನಂತರ ನಾವು ಶಾಲೆಗೆ ಹೋಗಬೇಕಾದರೆ ಅಂಗಿ ಚಡ್ಡಿ ಹಾಕಿ ಹೋಗಲೇಬೇಕಿತ್ತು. ಶಾಲಾ ವಿದ್ಯಾಭ್ಯಾಸ ಬೇಕಿದ್ದರೆ ನಾವು ಅದೇ ರೀತಿ ಅನುಸರಿಸುವುದು ಸಾಮಾಜಿಕ ನಿಯಮ. ಇನ್ನು ಶಾಲೆಗೆ ಹೋದಾಗ, ಅಲ್ಲಿ ಮಧ್ಯಾಹ್ನ ಉಪ್ಪಿಟ್ಟು ಸಜ್ಜಿಗೆ ಇರುತ್ತಿತ್ತು. ಹಿರಿಯ ಮಕ್ಕಳೇ ತಯಾರಿಸುತ್ತಿದ್ದರು. . ಅದು ಇಂಥವರೇ ಆಗಬೇಕೆಂದೇನೂ ಇಲ್ಲ. ಅದನ್ನು ತಿನ್ನದಂತೆ ಮನೆಯಲ್ಲಿ ಗದರಿಸಿ ಹೇಳುತ್ತಿದ್ದರು. ಮನೆಯಲ್ಲಿ ಅರೆಹೊಟ್ಟೆ ಇರುತ್ತಿದ್ದ ನಮಗೆ ಹಲವು ಸಲ ಬುತ್ತಿ ಕಟ್ಟಿಕೊಂಡು ಬರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆಗ ಶಾಲೆಯ ಉಪ್ಪಿಟ್ಟು ತಿನ್ನದೇ ಇರುವುದಕ್ಕೆ ಮನಸ್ಸು ಕೇಳುತ್ತಿರಲಿಲ್ಲ. ಕದ್ದು ಮುಚ್ಚಿ ನಾವು ತಿನ್ನುತ್ತಿದ್ದೆವು. ಜಾತಿ ಸಂಪ್ರದಾಯ ಎಲ್ಲವನ್ನೂ ಬದಿಗಿಟ್ಟು ಎಲ್ಲ ಮಕ್ಕಳ ಜತೆ ಸೇರಿ ಯಾರೋ ಮಾಡಿ ಬಳಸಿದ್ದನ್ನು ತಿನ್ನಬೇಕಿತ್ತು. ವಿದ್ಯೆ ಆಹಾರ ಬೇಕಿದ್ದರೆ ನಾವೂ ಕೆಲವನ್ನು ಕಳೆದು ಕೂಡಿಸಿಕೊಳ್ಳಬೇಕು.
ಇನ್ನು ನಮ್ಮ ಮನೆಯ ಬಳಿಯಲ್ಲೇ ಮೈದಾನದಲ್ಲಿ ಊರ ಹಲವು ಮಕ್ಕಳು ಸಾಯಂಕಾಲ ಬಂದು ಆಟವಾಡುತ್ತಿದ್ದರು. ಊರ ಮಕ್ಕಳು ಎಂದರೆ ಎಲ್ಲ ವರ್ಗದವರೂ ಇದ್ದರು. ಹಾಗಾಗಿ ಮನೆಯ ಹಿರಿಯರು ಸಂಪ್ರಾದಾಯದಂತೆ ಆ ಮಕ್ಕಳೊಂದಿಗೆ ಆಡುವುದಕ್ಕೆ ಬಿಡುತ್ತಿರಲಿಲ್ಲ. ಆಟವಲ್ಲವೇ? ನಾವು ಕದ್ದು ಮುಚ್ಚಿ ಹೋಗುತ್ತಿದ್ದೆವು. ಆಟ ಬೇಕಾದರೆ ನಾವು ಕದ್ದು ಮುಚ್ಚಿ ಹೋಗುವುದು ಅನಿವಾರ್ಯ. ಆಟ ಬೇಕಾದರೆ ನಮ್ಮ ಕೆಲವೊಂದು ಖಾಸಗೀತನವನ್ನು ಮನೆಯಲ್ಲೇ ಬಿಟ್ಟು ಹೋಗಬೇಕು. ಅಲ್ಲಿ ಎಲ್ಲರೂ ಒಂದೇ. ಸೋಲು ಗೆಲುವು ನಗು ಜಗಳ ಎಲ್ಲದಕ್ಕೂ ಸಮಾನ ಸ್ಥಾನ. ಈಗ ಯೋಚಿಸುವಾಗ ಇದೂ ಒಂದು ಧರ್ಮ ಸೂಕ್ಷ್ಮದಂತೆ ಭಾಸವಾಗುತ್ತದೆ. ಕೆಲವನ್ನು ಕೈವಶ ಮಾಡಲು ಕೆಲವು ಬೆರಳ ಸಂದಿಯಿಂದ ಕಳಚಿ ಕೆಳಗೆ ಬೀಳುತ್ತದೆ.
ಹೈಸ್ಕೂಲು ವಿದ್ಯಾಭ್ಯಾಸ ಮಾಡುವಾಗ ಹೊಸದಾಗಿ ಸಮವಸ್ತ್ರ ನಿಯಮ ಜಾರಿಗೆ ಬಂತು. ಅದುವರೆಗೆ ಎಲ್ಲಾದಿನ ಯಾವುದೇ ಉಡುಗೆಯಲ್ಲಿ ಬರುವುದಕ್ಕೆ ಅವಕಾಶ ಇರುತ್ತಿತ್ತು. ಆನಂತರ ವಾರದಲ್ಲಿ ಎರಡು ದಿನ ಶಾಲಾ ಸಮ ವಸ್ತ್ರ ಖಡ್ಡಾಯವಾಗಿ ಧರಿಸುವ ನಿಯಮ ಪಾಲಿಸಲೇ ಬೇಕಿತ್ತು. ನಾವು ದೊಡ್ಡವರಾಗಿದ್ಧುದರಿಂದ ಚಡ್ಡಿ ಹಾಕುವುದು ಸಹ್ಯವೆನಿಸದೇ ಹೆಚ್ಚಾಗಿ ಪಂಚೆ ಉಟ್ಟುಕೊಂಡೇ ಶಾಲೆಗೆ ಬರುತ್ತಿದ್ದೆವು. ನನ್ನಂತೆ ಹಲವು ಹುಡುಗರೂ ಪಂಚೆಯಲ್ಲಿ ಬರುತ್ತಿದ್ದರು. ನನಗೊ ಪಂಚೆಯಾದರೆ , ಟೈಲರ್ ಗೆ ಕೊಡುವ ದುಡ್ಡೂ ಉಳಿಕೆಯಾಗುತ್ತಿತ್ತು, ಮಾತ್ರವಲ್ಲ ಸಾಯಂಕಾಲ ಶಾಲೆ ಮುಗಿಸಿ ಪಂಚೆ ತೊಳೆದು ಹಾಕಿದರೆ ಮರುದಿನ ಪುನಃ ಶಾಲೆಗೆ ಹೋಗುವಾಗ ಒಣಗಿ ಉಡುವುದಕ್ಕೆ ಸಾಧ್ಯವಾಗುತ್ತಿತ್ತು. ಹೊಸದಾಗಿ ಸಮವಸ್ತ್ರದ ನಿಯಮ ಬಂದ ಮೇಲೆ, ಪ್ಯಾಂಟ್ ಹೊಲಿಸುವುದು ಅನಿವಾರ್ಯವಾಗಿಬಿಟ್ಟಿತು. ಹಾಗೆ ಜೀವನದಲ್ಲಿ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ. ವಿದ್ಯೆ ಬೇಕು ಎಂದಾದರೆ ನಿಯಮ ಪಾಲಿಸುವುದು ಅನಿವಾರ್ಯ. ನಾನು ಸಂಪ್ರದಾಯ ಹಾಗೇ ಹೀಗೆ ಹಲುಬಿದರೆ ಶಾಲೆಗೆ ಹೋಗುವ ಅವಕಾಶವೇ ಇರುತ್ತಿರಲಿಲ್ಲ. ಈಗಲೂ ಕೇರಳದಲ್ಲಿ ಶಿಕ್ಷಣದ ಇಂತಹ ನಿಯಮಗಳು ಕಡ್ಡಾಯವಾಗಿರುವುದು ನಿಜಕ್ಕೂ ವಿಶಿಷ್ಟವಾಗಿದೆ. ಸಮ ಶಿಕ್ಷಣ ಸಮ ಬಾಳ್ವೆ. ಉಳಿದ ಸಾಮಾಜಿಕ ಜೀವನ ಹೇಗೆ ಇರಲಿ ಸರಕಾರಿ ಶಾಲೆ ಎಂದಾಗುವಾಗ ಧಾರ್ಮಿಕ ನಿಯಮಗಳು ಮನೆಯಲ್ಲೇ ಬಿಟ್ಟು ಬರಬೇಕು. ಹೀಗಿದ್ದರೂ ಉಳಿದಂತೆ ನಿಯಮಗಳು ಎಷ್ಟು ಬಳಕೆಯಾಗುತ್ತವೆ ಎಂಬುದು ಬೇರೆ ವಿಚಾರ. ವಾರದಲ್ಲಿ ಎಲ್ಲಾ ದಿನ ಹತ್ತು ಘಂಟೆ ಶಾಲೆ ಆರಂಭವಾಗಿ ಮಧ್ಯಾಹ್ನ ಒಂದು ಘಂಟೆ ಯಿಂದ ಎರಡು ಘಂಟೆವರೆಗೆ ಭೋಜನ ವಿರಾಮ ನಂತರ ಶಾಲೆ ನಾಲ್ಕು ಗಂಟೆಗೆ ಬಿಟ್ಟರೆ ಶುಕ್ರವಾರ ಒಂಭತ್ತುವರೆಗೆ ಆರಂಭವಾಗಿ ಮಧ್ಯಾಹ್ನ ಹನ್ನೆರಡು ವರೆಯಿಂದ ಎರಡುವರೆ ತನಕವೂ ದೀರ್ಘವಾದ ವಿರಾಮ ಇರುತ್ತಿತ್ತು. ಸಾಯಂಕಲ ಮತ್ತೆ ಅರ್ಧ ಘಂಟೆ ತಡವಾಗಿ ಶಾಲೆ ಬಿಡುತ್ತಿತ್ತು. ಒಂದು ಧಾರ್ಮಿಕ ಆಚರಣೆಗೆ ಅವಕಾಶ ಕೊಡುವಂತೆ ಈ ನಿಯಮವೂ ಇರುತ್ತಿದ್ದದ್ದು ವಿಪರ್ಯಾಸ.
ವೃತ್ತಿ ಮತ್ತು ಶಿಕ್ಷಣ ನಮ್ಮ ಜೀವನದ ಅನಿವಾರ್ಯ ಅಂಗಗಳು. ಉತ್ತಮವಾದ ಜೀವನದ ಆಧಾರ ಸ್ತಂಭಗಳು. ಇವುಗಳು ಸಿಗಬೇಕಾದರೆ ಕೆಲವೊಂದನ್ನು ಕೂಡಿಸಿ ಕೆಲವೊಂದನ್ನು ಕಳೆದುಕೊಂಡು ಪಡೆಯಬೇಕು. ಅದುವೇ ಜೀವನ. ಇಂದು ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೋ ಅದನ್ನು ಬಿಟ್ಟು ಇನ್ನಾವುದರ ಹಿಂದೆ ಹೋಗಿ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೇವೆ. ಇಂದು ಕಳೆದ ದಿನ ಮುಂದೆ ಮತ್ತೆಂದೂ ಸಿಗಲಾರದು. ಸರಿಪಡಿಸಲಾಗದ ತಪ್ಪನ್ನು ಮಾಡುತ್ತಾ ಮುಂದೆ ಸಾಗುವುದು ಜೀವನದಲ್ಲಿ ತುಂಬದ ನಷ್ಟಕ್ಕೆ ಕಾರಣವಾಗುತ್ತದೆ.
ಈಗ ಹುಟ್ಟಿಕೊಂಡ ವಿವಾದ ಅದು ನಮ್ಮನ್ನು ಎಲ್ಲಿ ತಂದು ನಿಲ್ಲಿಸುತ್ತದೋ ಕಲ್ಪಿಸುವುದೂ ಕಷ್ಟ. ಕೇವಲ ಧಾರ್ಮಿಕ ವಿಚಾರಕ್ಕೆ ಹತಾಶರಾಗಿ ಸಾಮಾಜಿಕ ಜೀವನದ ಸೌಂದರ್ಯವನ್ನೇ ನಾಶ ಮಾಡುತ್ತಿದ್ದೇವೆ. ಇನ್ನು ತತ್ವ ಸಿದ್ದಾಂತಗಳು ಎಲ್ಲವೂ ಬೋಗಸ್. ತಮ್ಮ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಲ್ಪಡುವ ವಸ್ತುಗಳು. ಧಾರ್ಮಿಕ ಆಚರಣೆ ಬೇಕೋ ಬೇಡವೊ ಅದೆಷ್ಟು ಅನಿವಾರ್ಯವೋ ಚಿಂತಿಸಬೇಕಾದವಿಚಾರ. ಮನೆಯ ಅಂಗಳದೊಳಗೆ ಇರಬೇಕಾಗಿರುವುದನ್ನು ಬೀದಿಗೆ ತಂದು ಕೈ ಕೈ ಮಿಲಾಯಿಸುವುದು ಯಾವ ತತ್ವ ಸಿಧ್ಧಾಂತಕ್ಕೂ ಯೋಜ್ಯವಲ್ಲ. ಬುರ್ಖವೋ ಹಿಜಾಬ್ ಯಾವುದೇ ಇರಲಿ, ಇಂದು ಅದು ಹಿಂದು ಧರ್ಮಾಚರಣೆಯಲ್ಲಿರುತ್ತಿದ್ದರೆ, ಯೋಚಿಸಿ, ಸ್ತ್ರೀ ಸಮಾನತೆಗೆ ಹೋರಾಡುವವರು, ಮಾನವ ಹಕ್ಕಿಗಾಗಿ ಕ್ಯಾಂಡಲ್ ಉರಿಸುವವರು ಬೀದಿಗೆ ಬರುತ್ತಿದ್ದರು. ಸ್ತ್ರಿ ಶೋಷಣೆ ಎಂದು ಪ್ರತಿಭಟಿಸುತ್ತಿದ್ದರು. ಈಗ ಅವರೆಲ್ಲ ಒಂದೋ ಮೌನವಾಗಿದ್ದಾರೆ, ಮೌನ ಮುರಿದರೆ ಏನು ಹೇಳುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ತತ್ವ ಸಿದ್ಧಾಂತಗಳು ತಮಗೆ ಬೇಕಾದಂತೆ ಆಚರಿಸುವ ವಿಷಯಗಳಾಗಿ ಬದಲಾಗಿದೆ. ವಸ್ತು ನಿಷ್ಠ ಸತ್ಯ ಪ್ರಾಮಾಣಿಕತೆ ಎಲ್ಲವನ್ನೂ ನಮ್ಮ ಸ್ವಾರ್ಥ ಆಹುತಿತೆಗೆದುಕೊಂಡಿದೆ. ಸಾರ್ವಜನಿಕವಾಗಿ ವ್ಯಕ್ತವಾಗುವ ತತ್ವ ಸಿದ್ಧಾಂತಗಳು ಟೀಕೆ ಟಿಪ್ಪಣಿಗಳು ಅದು ಕಾಲಕ್ಕೆ ತಕ್ಕಂತೆ ಸ್ವಾರ್ಥಮಯವಾಗಿರುತ್ತದೆ. ತಮಗೆ ಬೇಕಾದಂತೆ ಅದು ವ್ಯಕ್ತವಾಗುತ್ತದೆ. ಆದರೆ ವಾಸ್ತವ ಎಂಬುದೇ ಗಹನವಾದ ಸತ್ಯವಾಗಿರುತ್ತದೆ.
ಮೊನ್ನೆ ಒಂದು ಸಿನಿಮಾ ನೋಡಿದೆ. ಅದರಲ್ಲಿ ಒಬ್ಬ ಹೇಳುತ್ತಾನೆ ವಸ್ತ್ರ ಎಂಬುದು ನಾವು ಹುಟ್ಟು ಹಾಕಿದ್ದು. ಅದರಲ್ಲಿ ನಮ್ಮನ್ನು ಅಳೆಯಬಹುದು ದೇವರನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ. ವಸ್ತ್ರದಿಂದ ದೇವರನ್ನು ಕಲ್ಪಿಸುವುದು ಸಾಧ್ಯವಿಲ್ಲ. ವಸ್ತ್ರವಾದರೂ ಇನ್ನೊಂದಾದರೂ ಅದು ನಾವು ಹುಟ್ಟುವಾಗ ತಂದಿರುವುದೂ ಇಲ್ಲ. ಹೋಗುವಾಗ ಕೊಂಡೊಯ್ಯುವುದೂ ಇಲ್ಲ. ವಸ್ತ್ರ ಇಲ್ಲದಿದ್ದರೆ ಎಲ್ಲವೂ ಒಂದೇ.
ಸರಕಾರಿ ವ್ಯವಸ್ಥೆಗಳು ಧಾರ್ಮಿಕ ಆಚರಣೆಯಿಂದ ದೂರವಿರಬೇಕು. ಹಾಗಿದ್ದಲ್ಲಿ ಮಾತ್ರವೇ ಜಾತ್ಯಾತೀತ ತತ್ವ ಪ್ರಾಮಾಣಿಕವಾಗಿರುತ್ತದೆ. ಬೆಂಗಳೂರಲ್ಲಿ ಎಲ್ಲಾ ಸರಕಾರಿ ಕಛೇರಿಯಲ್ಲೂ ಶುಕ್ರವಾರ ಪೂಜೆ ಇರುತ್ತದೆ. ಇದು ಯಾವ ಸಂವಿಧಾನದಲ್ಲಿ ಉಲ್ಲೇಖವಾಗಿದೆ? ನವರಾತ್ರಿ ಬಂದಾಗ ಹಲವು ಸರಕಾರೀ ಕಛೇರಿಗಳಲ್ಲಿ ದಸರಾ ಆಯುಧ ಪೂಜೆ ಆಚರಣೆ ಇರುತ್ತದೆ. ಮಳೆಬಂದು ನದಿ ಉಕ್ಕಿ ಹರಿದು ಅಣೆಕಟ್ಟು ತುಂಬಿದಾಗ ಬಾಗೀನ ಬಿಡುತ್ತೇವೆ. ಇವುಗಳೆಲ್ಲ ಸೀಮಿತ ಧರ್ಮಾಚರಣೆಯಲ್ಲವೇ? ಕೇರಳದ ಯಾವುದೇ ಸರ್ಕಾರಿ ಕಛೇರಿಯಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ಈ ಬಗೆ ಯ ಆಚರಣೆಗಳು ಕಾಣುವುದಕ್ಕಿಲ್ಲ. ಸರಕಾರಿ ಬಸ್ಸಿನಲ್ಲಿ ಯಾವುದೇ ದೇವರ ಧರ್ಮದ ಫೋಟೊಗಳಿರುವುದಿಲ್ಲ. ಮೊದಲು ಸರಕಾರೀ ವ್ಯವಸ್ಥೆ ಎಲ್ಲ ಧಾರ್ಮಿಕ ಆಚರಣೆಯಿಂದ ದೂರವಿರಬೇಕು. ಅದು ಧರ್ಮಾತೀತವಾಗಿರಬೇಕು. ಇದನ್ನೆಲ್ಲ ವ್ಯಕ್ತ ಪಡಿಸುವಾಗ ಧರ್ಮ ವಿರೋಧ ಎಂದನಿಸಬಹುದು. ಆದರೆ ಧರ್ಮದ ಸೂಕ್ಷ್ಮ ಅರಿತಾಗ ಹಾಗನಿಸುವುದಿಲ್ಲ. ಯಾಕೆಂದರೆ ಧರ್ಮ ಆಚರಣೆ ಮತ್ತೊಬ್ಬರ ನಿಟ್ಟುಸಿರ ನೆರಳಲ್ಲಿ ಇರಬಾರದು. ಹಾಗಿದ್ದರೆ ಭಗವಂತ ಅದನ್ನು ಸ್ವೀಕರಿಸುವುದೂ ಇಲ್ಲ. ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಪೂರಕವಾಗಿದ್ದಾಗ ಎಷ್ಟು ಸುಂದರವಾಗಿರುತ್ತದೆ, ಮುಳ್ಳಿನ ಗಿಡದಲ್ಲಿಅರಳಿದ ಗುಲಾಬಿಯಂತೆ.
ಯಾವುದೇ ಧರ್ಮವನ್ನು ದೇವರು ನಿರ್ಮಿಸಲಿಲ್ಲ. ಮನುಷ್ಯನೇ ತನ್ನ ಸೌಕರ್ಯಕ್ಕೆ ನಿರ್ಮಿಸಿದ. ಇದನ್ನು ದೇವರ ಮೇಲೆ ಆರೋಪಿಸಿ ನಾವು ದೇವರನ್ನೂ ಪ್ರತ್ಯೇಕಿಸುತ್ತೇವೆ. ನಿಜಕ್ಕೂ ದೇವರು ತನ್ನನ್ನು ತಾನು ದೇವರು ಎಂದು ಕರೆದುಕೊಂಡಿಲ್ಲ. ನಾವೇ ಅಂತರಂಗದ ಶಕ್ತಿಯಿಂದ ಅದನ್ನು ಗುರುತಿಸಿದಾಗ ಈ ವೆತ್ಯಾಸ ಕಾಣುತ್ತೇವೆ. ನಾವು ದೇವರು ಎಂದು ನಮಸ್ಕರಿಸಿದರೆ ಇನ್ನಾರೋ ಬೇರೇನೋ ಹೇಳಿ ನಮಸ್ಕರಿಸುತ್ತಾನೆ. ದೇವರು ಎಂಬುದು ಕೆಲವು ಅಕ್ಷರ ಸೇರಿದ ಒಂದು ಶಬ್ದವಷ್ಟೇ.
ದೇವರು ಕನ್ನಡಿಯಂತೆ. ಕನ್ನಡಿ ಮುಂದೆ ನಿಂತು ನಾವು ಯಾವ ಭಾವದಲ್ಲಿ ನಿಲ್ಲುತ್ತೇವೋ ಅದೇ ಭಾವವನ್ನು ಕಾಣುತ್ತೇವೆ. ನಗು ಅಳು ಸಿಟ್ಟು ಎಲ್ಲವೂ ನಮ್ಮದೇ ನೆರಳುಗಳು. ಪರಮಾತ್ಮನಲ್ಲೂ ಇದೇ ವ್ಯಕ್ತವಾಗುತ್ತದೆ. ನಮ್ಮ ಮನಸ್ಸಿನ ವಿಕೃತಿಗಳು ನಮ್ಮ ಮುಖಕ್ಕೇ ರಾಚುತ್ತವೆ. ಪರಮಾತ್ಮನಿಗೆ ರೂಪವಿಲ್ಲ ಭಾವವಿಲ್ಲ.
ಮನೆಗೆ ತಂದ ಹಸುವನ್ನು ನೋಡಿದಾಗ ನನಗೆ ನಮ್ಮ ಸನಾತನ ಧರ್ಮಗಳು ನೆನಪಾಗುತ್ತವೆ. ಅದರ ಹಾಲನ್ನು ಹಿಂಡಿ ಕರೆವಾಗ ಒಬ್ಬರಿಗೆ ಕೊಟ್ಟಷ್ಟು ಮತ್ತೊಬ್ಬರಿಗೆ ಕೊಡುವುದಿಲ್ಲ. ಪ್ರತೀ ಹಸುವಿಗೂ ಈ ಒಂದು ಭಾವನಾತ್ಮಕ ಸಂಬಂಧವಿರುತ್ತದೆ. ಒಬ್ಬರಿಗೆ ತಂಬಿಗೆ ತುಂಬ ಹಾಲು ಕೊಟ್ಟರೆ ಮತ್ತೊಬ್ಬರು ಕೈ ಹಾಕುವಾಗ ತುಳಿಯಬಹುದು, ಹಾಯಬಹುದು. ಧರ್ಮವೂ ಇದೇ ರೀತಿಯಲ್ಲಿ, ಅದಕ್ಕೆ ಹೊಂದಿಕೊಂಡಾಗಲಷ್ಟೇ ಅದು ಸುಖವನ್ನು ತರಬಲ್ಲುದು. ಆ ಸುಖ ನಮ್ಮ ನಮ್ಮ ದೃಷ್ಟಿಕೋನದಲ್ಲಿರುತ್ತದೆ.
ಧರ್ಮ ಎಂದರೆ ಅದು ಹರಿತವಾದ ಖಡ್ಗದಂತೆ. ಜ್ಞಾನಿಗಳು ಹೇಳುವ ಮಾತು ಇದು. ಅದನ್ನು ಉಪಯೋಗಿಸುವುದಕ್ಕೆ ತಿಳಿಯದೇ ಇದ್ದರೆ ಅದು ನಮ್ಮ ಕತ್ತನ್ನೂ ತರಿಯಬಲ್ಲುದು.
No comments:
Post a Comment