ಸಾಂತಾಣಿ ಎಷ್ಟು ಜನರಿಗೆ ತಿಳಿದಿದೆ?
ಇದು ಏನು? ನೋಡಿದರೆ ಹಲಸಿನ ಬೀಜ. ಅಷ್ಟೇ ಅಲ್ಲ. ಇದಕ್ಕೆ ಸಾಂತಾಣಿ ಎಂದು ಹೇಳುತ್ತಾರೆ. ಸಾಂತಾಣಿ.......ಇದು ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ನಮ್ಮೂರಿನ ಹಲವು ಮನೆಗಳಲ್ಲಿ ಮೊದಲು ಮಾಡಿ ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಹಲಸಿನ ಸೊಳೆ ಉಪ್ಪಿನಲ್ಲಿ ಹಾಕಿ ಮಂಡೆಗಳಲ್ಲಿ ಮಳೆಗಾಲದ ಉಪಯೋಗಕ್ಕೆ ಸಂಗ್ರಹಿಸಿಡುತ್ತಿದ್ದರು. ಅದರ ಜತೆಯಲ್ಲಿ ಈ ಹಲಸಿನ ಬೀಜವನ್ನು ಬಿಸಾಡದೆ ಅದನ್ನು ಉಪ್ಪಿನೊಂದಿಗೆ ಬೇಯಿಸಿ ಬಿಸಿಲಲ್ಲಿ ಒಣಗಿಸಿ ಸಂಗ್ರಹಿಸಿಡುತ್ತಿದ್ದರು. ಒಣಗಿದ ಸಾಂತಾಣಿ ತಿಂದೇ ಹಸಿವನ್ನು ನೀಗಿಸಿಕೊಳ್ಳುವ ಕಾಲವಿತ್ತು. ಈಗ ಜಂಕ್ ಪುಡ್ ಯುಗದಲ್ಲಿ ಇದು ಬಹುತೇಕ ಮೂಲೆಗೆ ಸೇರಿ ಹೋಗಿದೆ. ಏನೂ ಖರ್ಚಿಲ್ಲದೆ ಎಸೆಯುವ ವಸ್ತುವಿನಿಂದ ಮಾಡುತ್ತಿದ್ದ ಸಾಂತಾಣಿ ನಿಜಕ್ಕೂ ಬಡವನ ಆಹಾರ.
ಮೊದಲೆಲ್ಲ ತೋಟದ ಮನೆಯಿಂದ ದೂರದ ಅಂಗಡಿಗೆ ಹೋಗಿ ಮಿಕ್ಚರ್ ಚಿಪ್ಸ್ ಬಿಸ್ಕತ್ತು ತರುವ ಹಾಗಿಲ್ಲ. ಆಗೆಲ್ಲ ಮನೆಯಲ್ಲಿ ತಿನ್ನುತ್ತಿದ್ದ ಈ ಸಾಂತಾಣಿ, ಹುಣೆಸೆ ಬೀಜದ ಪುಳಿಂಕೊಟೆ ಇದೇ ಜಗಿದು ತಿನ್ನುವ ಜಂಕ್ ಫುಡ್. ಎಣ್ಣೆಯ ಅಗತ್ಯವಿಲ್ಲ. ಯಾವಾಗ ಬೇಕೋ ಆವಾಗ ಡಬ್ಬಕ್ಕೆ ಕೈ ಹಾಕಿ ಬೊಗಸೆ ತುಂಬ ಬಾಚಿಕೊಂಡು ಮನೆಯ ಜಗಲಿಯಲ್ಲಿ ಕುಳಿತು ಸುರಿಯುವ ಮಳೆಗೆ ಜಗಿದಷ್ಟು ಮುಗಿಯದ ಸಾಂತಾಣಿ ಪುಳಿಂಕೊಟೆಗಳನ್ನು ತಿನ್ನುವುದೇ ಮಜ. ಮೊದಲೆಲ್ಲ ಮಳೆಗಾಲ ಎಂದರೆ ಹೀಗೆ ಹಲಸಿನ ಹಪ್ಪಳ ಬಾಳೆಕಾಯಿ ಹಪ್ಪಳ ಹೀಗೆ ಹಲವು ತಿಂಡಿಗಳಿದ್ದರೆ ಅದಕ್ಕೆ ಸಮಾನಾಗಿ ಹಲಸಿನ ರುಚಿಯೋಂದಿಗೆ ಉಪ್ಪಿನ ಸ್ವಾದ ಬೆರಸಿ ಕೊಡುವ ಈ ಸಾಂತಾಣಿ ಮರೆಯುವುದಕ್ಕಿಲ್ಲ.
ಶಾಲೆಗೆ ಹೋಗುವಾಗ ಪುಸ್ತಕದ ಚೀಲದಲ್ಲಿ ಅಥವಾ ಬುತ್ತಿಯ ಪಾತ್ರೆಯಲ್ಲಿ ಒಂದಿಷ್ಟು ಸಾಂತಾಣಿ ಪುಳಿಂಕೊಟೆ ಇದ್ದೇ ಇರುತ್ತಿತ್ತು. ಅದರಲ್ಲು ಯಾವುದೇ ಮಕ್ಕಳ ಕೈಯಲ್ಲಿ ಈ ಸಾಂತಾಣಿ ಕಂಡರೆ ಆತನ ಹತ್ತಿರ ಹೋಗಬೇಡ ಮಾರಾಯ, ಘರ್ನಾಲು ಹೊಟ್ಟಿಸುತ್ತಾನೆ ಅಂತ ತಮಾಷೆ ಮಾಡುವುದಿತ್ತು. ಹಲಸಿನ ಬೀಜದ ಸಾಂತಾಣಿ ತಿಂದು ಯಾರಾದರೂ ಪ್ರಾಣಾಯಾಮ ಮಾಡಿದರೆ ಅಲ್ಲಿ ನಡೆಯಬಾರದ್ದು ನಡೆದಿದೆ ಎಂದು ತಿಳಿದುಕೊಳ್ಳಬೇಕು. ಇದನ್ನು ತಿಂದು ಮೂಗಿನಜತೆ ಇನ್ನೇಲ್ಲೋ ಉಸಿರಾಡಿ ಪ್ರಾಣಾಯಾಮ ಮಾಡಿದರೆ.................. ಈಗ ನೆನಸಿಕೊಂಡರೆ ಕಿರುನಗುವೊಂದು ಹಲವರಿಗೆ ಬರಬಹುದು. ಆ ಬಾಲ್ಯವೇ ಸುಂದರ. ಹೇಳಿ ಎಷ್ಟು ಜನರಿಗೆ ಈ ಸಾಂತಾಣಿ ನೆನಪಿದೆ.
No comments:
Post a Comment