Thursday, April 13, 2023

ಬಾಸೆ ಇಜ್ಜಾ ಮಾರಾಯ

 "ನಿಕ್ಕ್ ಒಂಚೂರಾಂಡಲಾ ಬಾಸೆ ಇಜ್ಜಾ ಮಾರಾಯ......?"   ಇದು ತುಳುವಿನಲ್ಲಿ, "ಎಂತ ಮಾರಾಯ ನಿಂಗೆ ಭಾಷೆ ಇಲ್ಲವಾ?"    "ಅವನಿಗೆ ಭಾಷೆ ಇಲ್ಲ...."   

        ಕರಾವಳಿ ಭಾಗದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಸರ್ವೇ ಸಾಮಾನ್ಯವಾದ ಬೈಗುಳ. ಇದನ್ನು ಬೈಗುಳ ಎನ್ನುವುದಕ್ಕಿಂತ ಅಸಮಾಧಾನದ ಪ್ರಕಟಣೆ ಎನ್ನಬಹುದು. ತಮ್ಮಲ್ಲಿರುವ ಅಸಮಾಧಾನವನ್ನು ವ್ಯಕ್ತ ಪಡಿಸುವ ರೀತಿ ಇದು. ಇಲ್ಲಿ ಹೇಳುವ ಭಾಷೆ ಎಂತಹುದು? ಹೊರಗಿನಿಂದ ಬಂದವರಿಗೆ ಇದು ಬಹಳ ವಿಚಿತ್ರ ಎನಿಸಬಹುದು. ಅದರಲ್ಲೂ ತುಳುವಿನಲ್ಲಿ ಭಾಸ್ಸೆ...ಅಂತ ಹೇಳುವಾಗ ಆ ಬೈಗುಳದ ಅರ್ಥ ಏನು ಎಂದು ಹಲವರಿಗೆ ತಲೆಕೆರೆದುಕೊಳ್ಳುವ ಹಾಗಾಗುತ್ತದೆ. ನಾಯಿ ಮೃಗ ಜಾನುವಾರುಗಳೂ ಅಸಹಜವಾಗಿ ನಡೆದು ಕೊಂಡರೆ ಇದು ಸಾಮಾನ್ಯವೆಂಬಂತೆ ಬಳಕೆಯಾಗುತ್ತದೆ. ಅದಕ್ಕೆ ಹೇಳಿದ್ರೆ ಭಾಷೆ ಇಲ್ಲ.  ಹೇಳಿದ್ರೆ ಭಾಷೆ....ಎಂಬುದು ಯಾವ ಅರ್ಥದಲ್ಲಿ ಎಂದು ತಿಳಿದರೆ ಅದರೆ ಶುದ್ದ ಸಂಸ್ಕಾರ ಅರಿವಿಗೆ ಬರುತ್ತದೆ. ಹಾಗೆ ನೋಡಿದರೆ ತೀರ ಕೆಳಮಟ್ಟದ ಬೈಗುಳಕ್ಕಿಂತ ಇದು ತುಸು ಸಂಸ್ಕಾರಯುತ ಬೈಗುಳ ಎನ್ನಬಹುದು.  ಬೈಗುಳ ಎಂದರೆ....ನಾವು ಯಾರನ್ನು ಬೈಯುತ್ತೇವೆಯೋ ಅವನು ಕೆಟ್ಟವನಾಗಿ ಆ ಬೈಗುಳಕ್ಕೆ ಅರ್ಹನೇ ಆಗಿರಬಹುದು. ಆದರೆ ಬೈಯುವ ಬೈಗುಳ ನಮ್ಮ ಸಂಸ್ಕಾರವನ್ನೂ ತೋರಿಸುತ್ತದೆ ಎಂಬುದು ಗಮನಾರ್ಹ. ಹಾಗಾಗಿ ಶಬ್ದ ಉಚ್ಚರಿಸುವುದು ಸುಲಭ. ಆದರೆ ತಂದು ಕೊಡುವ ಪರಿಣಾಮ ಕೇವಲ ಬೈಗುಳ ತಿನ್ನುವವನಿಗೆ ಮಾತ್ರ ಸೀಮಿತವಲ್ಲ. ಹಾಗಾಗಿ ಭಾಷೆ ಇಲ್ಲ ಎಂದು ಬೈಯುವುದು ಒಂದಷ್ಟು ಸಂಸ್ಕಾರಯುತ ಎನ್ನಬಹುದು. 

        ಭಾಷೆ.....ಅದು ನಮ್ಮೊಳಗಿನ ಸಂವಹನದ ಮಾಧ್ಯಮ. ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದು ಮಾಧ್ಯಮ, ಭಾಷೆ ಎಂದರೆ ಅದು ಬಾಯ್ದೆರೆಯಾಗಿ ಮಾತ್ರ ಇರುವುದಿಲ್ಲ. ಕೈ ಭಾಷೆ, ಆಂಗಿಕ ಭಾಷೆ ಹೀಗೆ ಭಾಷಾ ವೈವಿಧ್ಯ ಉಪಯೋಗವಾಗುವುದು ಅದನ್ನು ಅರ್ಥೈಸಿಕೊಳ್ಳುವುದರಲ್ಲಿ. ಇದು ಎಲ್ಲ ಸಂವಹನವಾದರೆ, ಮೇಲೆ ಹೇಳುವ ಭಾಷೆ ಎಂಬುದು ಅತ್ಯಂತ ವೈಶಿಷ್ಟ್ಯ.  ಅದರಲ್ಲೂ ಒಂದು ಮನುಷ್ಯ ಜೀವನದ ಪ್ರತಿಬಿಂಬ ಇದೆ.  ಭಾಷೆ....ಹುಟ್ಟುವಾಗಲೇ ಮನುಷ್ಯ ಕಲಿಯುತ್ತಾನೆ. ನವಜಾತ ಶಿಷುವಿಗೂ ಒಂದು ಭಾಷಾ ಮಾಧ್ಯಮವಿದೆ. ಅದರ ಭಾವನೆಗಳನ್ನು ಅದರ ಅನುಭವಗಳನ್ನು ಹೇಳುವ ಮಾಧ್ಯಮವಿದೆ. ಬಾಷೆ ಎಂದಾಗ ನಾವು ಬಾಯ್ದೆರೆಯಾಗಿ ಹೇಳುವುದು ಬರಿಯುವುದು ಮಾತ್ರವೇ ನಮಗೆ ಗಮನಕ್ಕೆ ಬರುತ್ತದೆ. ಆದರೆ ಭಾಷೆ ಇದೆಲ್ಲವನ್ನು ಮೀರಿ ಮನುಷ್ಯ ಪ್ರಾಣಿಗಳ ನಡುವೆ ಸಂವಹನದ ವಸ್ತುವಾಗಿದೆ. ಮನುಷ್ಯ ಅಥವಾ ಪ್ರಾಣಿ ಪಕ್ಷಿಗಳು ಮೊದಲು ಕಲಿಯುವುದು ಮಾತೃ ಭಾಷೆ. ಭಾಷೆಯ ಮೊದಲ ಗುರು ತಾಯಿ. ವಿಪರ್ಯಾಸ ಎಂದರೆ ತಂದೆಗೆ ಈ ಸ್ಥಾನ ಇರುವುದಿಲ್ಲ. ಪಿತೃ ಭಾಷೆ ಎಂದು ಯಾವುದೂ ಬಳಕೆಯಲ್ಲಿ ಇಲ್ಲ. ತಾಯಿ ಹುಟ್ಟಿದೊಡನೆ  ಮಗುವಿನೊಂದಿಗೆ ಜತೆಯಾಗುವ ಭಾಷೆ ಅದು ಮಾತೃಭಾಷೆ. ಅದು ಮಮತೆಯ ಕಣ್ಣೋಟ ಇರಬಹುದು. ಆರೈಕೆ ಇರಬಹುದು. ನಿದ್ದೆ ಬಂದಾಗ ತಟ್ಟುವುದರಲ್ಲಿ ಇರಬಹುದು. ಬಾಚಿ ತಬ್ಬಿಕೊಳ್ಳುವುದರಲ್ಲಿರಬಹುದು. ತಾಯಿಯ ತೊಳ ತೆಕ್ಕೆಯ ಭಾಷೆ ತಾಯಿ ಮಗುವಿನ ಅನೂಹ್ಯ ಸಂಭಂಧ. ತನ್ನ ಬೆರಳ ತುದಿಯಲ್ಲೂ ತಾಯಿ ಮಗುವಿಗೆ ಭಾಷೆಯನ್ನು ಕಲಿಸಬಲ್ಲಳು. ಅದು ಆದ್ಯ ಭಾಷೆಯಾಗಿರುತ್ತದೆ.ತಾಯಿ ಈ ಭಾಷೆಯ ಮೂಲಕ ಮಗುವಿಗೆ ಜಗತ್ತಿನ ಪರಿಚಯ ಮಾಡಿಕೊಡುತ್ತಾಳೆ. ಮಗುವಿಗೆ ಅರ್ಥವಾಗಲಿ ಅರ್ಥವಾಗದಿರಲಿ. ಜೋಗುಳ ಹಾಡುತ್ತಾಳೆ. ಲಲ್ಲೆ ಗರೆಯುತ್ತಾಳೆ. ಮಗು ಅದನ್ನೆ ಕೇಳಿ ಕೇಳಿ ನಂತರ ಅರ್ಥವಿಸಿಕೊಳ್ಳುತ್ತದೆ. ಒಂದು ಹೂಂಕಾರದಲ್ಲೂ ತಾಯಿ ಮಗುವಿನ ಹೃದಯಗಳು     ಮಾತುಗಳನ್ನಾಡುತ್ತದೆ. ಹಾಗಾಗಿ ಮಾತೃ ಭಾಷೆ ಎಂಬುದು ಮಗುವಿಗೆ ಹುಟ್ಟಿನಿಂದ ಒದಗಿ ಬರುವ ಒಂದು ಸಂಸ್ಕಾರ. ಹಸಿವಾಗುವಾಗ ಮಗುವಿಗೆ ಎದೆ ಹಾಲು ಎಲ್ಲಿದೆ ಎಂದು ಪರಿಚಯ ಮಾಡುತ್ತದೆ. ಕೈ ತಟ್ಟುವಾಗ ನಿದ್ದೆ ಮಾಡಬೇಕು ಎಂಬುದನ್ನೂ ಹೇಳಿಕೊಡುತ್ತದೆ.  ಹಾಗಾಗಿ ತಾಯಿಯಿಂದ ಮಗುವಿಗೆ ಹುಟ್ಟಿನಿಂದ ಸಿಗುವ ಸಂಸ್ಕಾರವೇ ಈ ಭಾಷೆ. ಒಂದರ್ಥತಲ್ಲಿ ಭಾಷೆ ಎಂಬುದು ಸಂಸ್ಕಾರ. 

        ಭಾಷೆ ಎಂಬುದು ಒಂದು ಸಂಸ್ಕಾರ ಎಂದಾಗುವಾಗ ಮೇಲೆ ಹೇಳಿದ ಭಾಷೆ ಇಲ್ಲವಾ ಎನ್ನುವುದು ಆ ಮನುಷ್ಯನಿಗೆ ತಾಯಿಯಿಂದ ಸಿಕ್ಕಿದ ಸಂಸ್ಕಾರವನ್ನೇ ಪ್ರತಿಬಿಂಬಿಸುತ್ತದೆ.  ತಾಯಿಯಿಂದ ಸಿಗುವ ಸಿಗುವ ಶುದ್ದ ಸಂಸ್ಕಾರವೇ ಮಾತೃಭಾಷೆ.  ಹಾಗಾಗಿ ಆ ಭಾಷೆಯ ಅರ್ಥ ವ್ಯಾಪಕತೆ ಕೇವಲ ಒಂದು ಸಂವಹನವಲ್ಲ ಅದು ಜೀವನದ ಪಾಠದ ಜತೆಗೆ ಒಂದು ಶುದ್ದ ಸಂಸ್ಕಾರವನ್ನೂ ತೋರಿಸುತ್ತದೆ. ಈಗ ನೋಡಿ ಭಾಷೆ  ಇಲ್ಲವಾ ಎನ್ನುವುದರಲ್ಲಿನ ಒಂದು ಸಂಸ್ಕಾರ ಅರ್ಥವಾಗುವುದಿಲ್ಲವಾ? ಓದುಗರಿಗೆ ಭಾಷೆ ಇದೆ ಎಂಬ ವಿಶ್ವಾಸ ಇರುವುದರಿಂದಲೇ ಲೇಖಕನಿಗೆ ಪ್ರಚೋದನೆ ಹುಟ್ಟಿಕೊಳ್ಳುತ್ತದೆ.  

No comments:

Post a Comment