Saturday, February 24, 2024

ಚಾಂದ್ರಾಯಣ

     ಮೂವತ್ತು ದಿವಸಗಳ ಚಾಂದ್ರಾಯಣ ವೃತ ಯಶಸ್ವಿಯಾಗಿ ಆಚರಿಸಿ ಇಂದಿಗೆ ಅಂದರೆ ಶನಿವಾರದ ಪೌರ್ಣಮಿಯ ದಿನ ಸಮಾಪ್ತಿಗೊಳಿಸಿದೆ. ಇದು ಕೇವಲ ವೃತವಲ್ಲ, ಬದುಕಿನ ಮಹತ್ವದ ಪಾಠವಾಗಿ ಪರಿಣಮಿಸಿದ್ದು ಒಂದು ರೋಚಕ ಅನುಭವ. ನಾನು ಮತ್ತು ಜತೆಗೆ ಮಗಳು ಮಹಿಮನು ಭಾಗಿಯಾಗಿ ವೃತಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದು ಒಂದು ವೈಶಿಷ್ಟ್ಯ. 

ತಮ್ಮ ಹಿರಿಮೆ ಗರಿಮೆ ಗೌರವದ ತೂಕ ಹೆಚ್ಚಬಹುದು, ಅದಕ್ಕಾಗಿ ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಆದರೆ ಅದರಂತೆ ಬೆಳೆಯುವ ದೇಹದ ತೂಕದ ಬಗ್ಗೆ ಗಮನ ಕೊಡುವವರು ಕೆಲವರು ಮಾತ್ರ. ಹೀಗೆ ಸುಮ್ಮನೆ ರಸ್ತೆಯಲ್ಲಿ ಓಡಾಡುವಾಗ ಎಲ್ಲೆಂದರೆಲ್ಲಿ ಕೆಲವರು ತಂದು ಕರಪತ್ರ ಇಲ್ಲ ತಮ್ಮ ಗುರುತಿನ ಚೀಟಿ ತೋರಿಸಿ ತೂಕ ಕಡಿಮೆ ಮಾಡುವ ಬಗ್ಗೆ ಸಲಹೆ ಕೊಟ್ಟು ತೂಕ ಕಡಿಮೆ ಅಗುವುದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ.  ಸ್ಥೂಲ ಕಾಯದವರು ಇವರಿಗೆ ಗಿರಾಕಿಗಳು. ಒಂದು ಕಾಲದಲ್ಲಿ ನಾನೂ ಇವರ ದೃಷ್ಟಿ ಆಹಾರವಾಗಿದ್ದು ನೆನಪಿದೆ.  ಕ್ರಮೇಣ ಯೋಗಾಭ್ಯಾಸದಲ್ಲಿ ತೊಡಗಿದಾಗ ಇಂತಹ ವ್ಯಕ್ತಿಗಳು ನನ್ನನ್ನು ಗಮನಿಸುವುದು ಬಹುತೇಕ ಕಡಿಮೆಯಾಯಿತು. ದೇಹದ ತೂಕ ಸಾಕಷ್ಟು ಕಡಿಮೆಯಾಗಿದ್ದರೂ  ಸಹ ಚಾಂದ್ರಾಯಣ ವೃತ ಮಾಡಬೇಕೆಂದು ನಿಶ್ಚಯಿಸಿದೆ. 

ಹಸಿವು ಒಂದು ಜೀವಿಯ ಆರೊಗ್ಯದ ಲಕ್ಷಣ. ನಮ್ಮ ಪ್ರತಿಯೊಂದು ಕ್ರಿಯೆಗಳಿಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಸಿವೇ ಕಾರಣವಾಗಿರುತ್ತದೆ. ಈ ಹಸಿವಿನ ಮಹತ್ವದ ಪೂರ್ಣ ಅರಿವು ಈ ಚಂದ್ರಾಯಣದ ಅವಧಿಯಲ್ಲಾಯಿತು.  ಬಾಲ್ಯದಲ್ಲಿ ಕಳೆಯುತ್ತಿದ್ದಹ ಹಸಿವಿನ  ದಿನಗಳು ಸಹ ಸ್ಮರಣೆಗೆ ಬಂತು. ಓಂದೊಂದು ತುತ್ತೂ ಮಹತ್ವವಾಯಿತು. ಒಂದು ಮುಷ್ಠಿ ಅನ್ನ ತಟ್ಟೆಯಲ್ಲಿ ಹಾಕಿ ಅಷ್ಟನ್ನೇ ಉಂಡು ಹಸಿವು ನೀಗಿಸಬೇಕು ಎನ್ನುವಾಗ ತಟ್ಟೆಯಲ್ಲಿದ್ದ ಒಂದು ಅಗುಳು ಅನ್ನವೂ ಬಹಳ ಮಹತ್ವ  ಎನಿಸಿತು. ಸಮಾರಂಭದಲ್ಲಿ ತಿನ್ನದೇ ಉಳಿದು ಎಸೆಯುವ ಆಹಾರ ನೆನಪಾಗುತ್ತಿತ್ತು. ಇದುವರೆಗೆ ಹೊಟ್ಟೆ ತುಂಬಿದರೂ ಮತ್ತೂ ತಿನ್ನುತ್ತಿದ್ದ ಅನ್ನಾಹಾರ ಇನ್ನಾರದೋ ಹೊಟ್ಟೆ ಸೇರಬೇಕಾದ ಆಹಾರವನ್ನು ಕಿತ್ತು ತಿಂದಂತೆ ಭಾಸವಾಯಿತು. ಚಾಂದ್ರಾಯಣ ಕೇವಲ ದೇಹ ಭಾರವನ್ನು ತಗ್ಗಿಸಿ ಆರೋಗ್ಯವನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗದೇ ಬದುಕಿನ ಮಹತ್ವದ ಪಾಠಗಳನ್ನು ಹೇಳಿಕೊಟ್ಟಿತು. ನಿಜಕ್ಕೂ ಹಸಿವು ಎಂದರೆ ಅದೆಷ್ಟು ಕಠಿಣ. ದಿನದ ಮೂರು ಹೊತ್ತು ಆಹಾರ ಏನೂ ಇಲ್ಲದೇ ಹಸಿವನ್ನೇ ಆಹಾರವಾಗಿಸಿಕೊಂಡವರೆಷ್ಟೋ? ಅದೇ ಹಸಿವನ್ನು ರೂಢಿ ಮಾಡಿಕೊಂಡವರೆಷ್ಟೋ , ಚಾಂದ್ರಾಯಣದಲ್ಲಿ ಹಸಿವೂ ಒಂದು ರೂಢಿಯಾಗಿ ಹೋದದ್ದು ಸತ್ಯ. ಈ ವೃತದ ಅವಧಿ ಕಳೆದ ಮೇಲೆ ನಾನು ಉಂಡು ತೇಗಬಲ್ಲೇನೆ ಎಂದು ಹಲವು ಸಲ ಅನುಮಾನವಾದದ್ದು ಸಹಜ. ಅದೆಂತಹ ಹಸಿವಿನ ಅನುಭವ. ಶೌಚಕ್ಕೆ  ಹೋದರೆ ವಿಸರ್ಜಿಸುವುದಕ್ಕೆ ಹೊಟ್ಟೆಯಲ್ಲೇನೂ ಇರಲಿಲ್ಲ. ಆದರೂ  ಅದೇನೋ ಸಂತೃಪ್ತಿ ಈ ಚಾಂದ್ರಾಯಣ ಕಲ್ಪಿಸಿದ್ದು ಸುಳ್ಳಲ್ಲ. 

ಚಾಂದ್ರಾಯಣ ಅದು ಕೇವಲ ವೃತವಲ್ಲ. ಬದುಕಿನಲ್ಲಿ ಕಲಿಯಬೇಕಾದ ಪಾಠ ಇದರಲ್ಲಿ ಹಲವಿದೆ.  ಹಾಗಾಗಿಯೆ ಪ್ರತಿಯೊಂದು  

ಚಾಂದ್ರಾಯಣ  ಎಂದರೆ ಚಂದ್ರನ ಕ್ಷಯ ಮತ್ತು ವೃದ್ಧಿಗೆ ನಮ್ಮ ದೇಹವನ್ನು ಸ್ಪಂದಿಸುವಂತೆ ನಮ್ಮ ದಿನಚರಿಯನ್ನು ಅದಕ್ಕೆ ಹೊಂದಿಸಿಕೊಳ್ಳುವ ವೃತವಾಗಿದೆ. ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯ ಹದಿನೈದು ದಿವಸ ಚಂದ್ರನ ಗಾತ್ರ ಕಡಿಮೆಯಾದಂತೆ ನಾವು ತಿನ್ನುವ ಆಹಾರದಲ್ಲಿ ಕಡಿಮೆ ಮಾಡುತ್ತಾ ಕೊನೆಗೆ ಅಮಾಸ್ಯೆಯಂದು ಪೂರ್ಣ ಉಪವಾಸ ಮಾಡಿ ಆನಂತರದ ಶುಕ್ಲ ಪಕ್ಷದ ಚಂದ್ರ ವೃದ್ಧಿಯಾದಂತೆ ಆಹಾರವನ್ನು ಹೆಚ್ಚಿಸುತ್ತಾ ಬಂದು ಪೌರ್ಣಮಿಯ ವರೆಗಿನ ಹದಿನೈದು ದಿವಸ ಮುಗಿದಾಗ ಚಾಂದ್ರಾಯಣ ವೃತವೂ ಸಂಪನ್ನವಾಗುತ್ತದೆ. ನೋಡುವುದಕ್ಕೆ  ಏನೋ ಬಹಳ ಸರಳವಾಗಿದೆ, ಆದರೆ ಮನಸ್ಸಿನ ನಿಯಂತ್ರಣ ಕಠಿಣವಾಗಿರಬೇಕು. ಒಂದಿಷ್ಟು ವಿಚಲಿತರಾದರೂ ವೃತ ಭಂಗವಾಗಿ ಫಲಶ್ರುತಿಯ ಮೇಲೆ ಪರಿಣಾಮ ಬೀರುತ್ತದೆ. ಉಪವಾಸ ಎಂಬುದು ಒಂದು ಆರೋಗ್ಯ  ವಿಧಾನವೂ ಹೌದು. ತಿಂಗಳಲ್ಲಿ ಒಂದು ದಿನ ಸಂಪೂರ್ಣ ಉಪವಾಸ ಆಚರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ಇದರಲ್ಲಿ ಉಪವಾಸ ಸಂಪೂರ್ಣ ಆಚರಿಸಿದರೂ ಮೂವತ್ತು ದಿವಸದ ನಿಯಮಿತ ಆಹಾರ ಸೇವನೆ ಮತ್ತು ಹೊಂದಿಕೊಂಡು ಯೋಗಾಭ್ಯಾಸ ದೇಹದ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಮತ್ತು ದೇಹದ ತೂಕ ಬಹಳಷ್ಟು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ದೇಹದ ತೂಕ ಮಾತ್ರವಲ್ಲ ಚಾಂದ್ರಾಯಣ ಉಪಯೋಗ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಬಹಳಷ್ಟು ಸತ್ಪರಿಣಾಮವನ್ನು ಉಂಟುಮಾಡಿ ಮನುಷ್ಯ ಜೀವನದ ಮಹತ್ವದ ಅರಿವಾಗುತ್ತದೆ. 

ಹಲವು ಧರ್ಮಗಳಲ್ಲಿ ಹಲವು ವಿಧದ ಉಪವಾಸದ ಆಚರಣೆ ಪವಿತ್ರವಾಗಿ ಆಚರಿಸಲ್ಪಡುತ್ತದೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಆಚರಿಸುವ ಉಪವಾಸ ಒಂದು ವಿಧವಾದರೆ, ಚಾಂದ್ರಾಯಣವೂ ಒಂದು ತಿಂಗಳ ಒಂದು ಉಪವಾಸದ ವೃತ. ರಂಜಾನ್ ದಿನಗಳಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಖಂಡ ಸಂಪೂರ್ಣ ಉಪವಾಸ ಒಂದು ತೊಟ್ಟು ನೀರನ್ನೂ ಕುಡಿಯದೆ ಕಠಿಣ ಉಪವಾಸ ಮಾಡಿ ರಾತ್ರಿ ಆಹಾರ ಸೇವಿಸುತ್ತಾರೆ. ಆದರೆ ಇದರಲ್ಲಿ ಚಂದ್ರನಿಗೆ ಹೊಂದಿಕೊಂಡು ನಮ್ಮ ಆಹಾರ ಪದ್ಧತಿ ಇರುತ್ತದೆ. ನನ್ನಿಂದ ಈ ವೃತ ಆಚರಿಸಬಹುದೇ ಎಂಬ ಆತಂಕ ಇತ್ತು. ಆದರೆ ವೃತದ ಮಾರ್ಗ ದರ್ಶಕರಾಗಿ ಯೋಗ ಚಿಕಿತ್ಸಾ ಪರಿಣತ, ಡಾ.. ಹೃಷಿಕೇಷ್ ಪೆರ್ನಡ್ಕ ಧೈರ್ಯ ತುಂಬಿ ವೃತ ಆಚರಿಸುವಂತೆ ಪ್ರಚೋದಿಸಿದರು. ಅವರ ನಿರ್ದೇಶನದಂತೆ ಪುಷ್ಯ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ನನ್ನ ಉಪವಾಸ ಕ್ರಮ ಆರಂಭಿಸಿದೆ. ದಿನ ನಿತ್ಯದಂತೆ ನಾವೆಷ್ಟು ಯಾವ ಬಗೆಯ ಆಹಾರ ಸೇವಿಸುತ್ತೇವೆ ಎಂಬುದನ್ನು ಹೊಂದಿಕೊಂಡು ಇಲ್ಲಿ ಆಹಾರದ ಕ್ರಮ ನಿರ್ಣಯಿಸಲ್ಪಡುತ್ತದೆ. ನಾವು ಎರಡು ಪ್ಲೇಟ್ ಅನ್ನ ಸಾಂಬಾರ್, ಪಲ್ಯ ಇತ್ಯಾದಿ ಸೇವಿಸುತ್ತಿದ್ದರೆ ಅದರಲ್ಲಿ ಇರುವ ಕ್ಯಾಲೊರಿ ಲೆಕ್ಕ ಹಾಕಿ ದಿನ ಅದನ್ನು ಕಡಿಮೆ ಮಾಡುತ್ತಾ ಸಾಗುವುದೇ ಚಾಂದ್ರಾಯಣ. ಮೊದಲ ದಿನ ಎರಡು ಪ್ಲೇಟ್ ಅನ್ನ ಇದ್ದದ್ದು ಮರುದಿನ ಕಾಲು ಪ್ಲೇಟ್ ಕಡಿಮೆ ಮಾಡಿ ನಂತರದ ದಿನಗಳಲ್ಲಿ ಕಡಿಮೆ ಮಾಡುತ್ತಾ ಸಾಗುವಾಗ  ಆರಂಭದಲ್ಲಿ ನಿರ್ಧಾರ ಅಲುಗಾಡ ತೊಡಗುತ್ತದೆ. ಐದಾರು ದಿನ ಕಳೆಯ ಬೇಕಿದ್ದರೆ ಹಸಿವು ತಡೆದುಕೊಳ್ಳುವುದು ಅಭ್ಯಾಸವಾದರೂ., ಇಲ್ಲಿ ವಿಲಾಸೀ ಆಹಾರಗಳು, ಹೆಚ್ಚು ಖಾರ ಸಿಹಿ ಮತ್ತು ಎಣ್ಣೆಯ ತಿಂಡಿಗಳನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ. ಕಾಫಿ ಚಹ ಸೇವನೆಯನ್ನೂ ಕಡಿಮೆ ಮಾಡಲಾಗುತ್ತದೆ. ಎಣ್ಣೆ ತಿಂಡಿ ಹೊರಗಿನ ಸಿದ್ಧ ಪಡಿಸಿದ ಆಹಾರಗಳು, ಬಿಸ್ಕಿಟ್ ಬ್ರೆಡ್ ಎಣ್ಣೆ ತಿಂಡಿ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಕೇವಲ ಸಾತ್ವಿಕ ಆಹಾರ ಅದೂ ಅತ್ಯಂತ ಮಿತಿಯಲ್ಲಿರುತ್ತದೆ. ಬಿಡು ಹೊತ್ತಲ್ಲಿ ಒಂದಷ್ಟು ಹಸಿ ತರಕಾರಿ ಒಂದಷ್ಟು ಹಸಿವನ್ನು ತಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ನಮಗರಿವಿಲ್ಲದೇ ನಮ್ಮ ಮನಸ್ಸು ನಮ್ಮ ನಿಯಂತ್ರಣಕ್ಕೆ ಒಳಗಾಗುತ್ತದೆ. ಚಾಂದ್ರಾಯಣದ ಅವಧಿಯಲ್ಲಿ ಎಣ್ಣೆ ತಿಂಡಿ ತಿನ್ನುವ ಹಾಗಿಲ್ಲ. ಸಿಹಿ ತಿನಿಸು ಕೂಡ ನಿಷಿದ್ಧ. ಹಾಗಾಗಿ ಮಗಳಿಗೆ ಇದ್ದ ಜಂಕ್ ಪುಡ್ ಸೇವನೆಯ ದುರಭ್ಯಾಸ ಬಹಳಷ್ಟು ದೂರವಾಯಿತು. ಈ ಒಂದು ತಿಂಗಳಲ್ಲಿ ಅದರಿಂದ ದೂರವೇ ಉಳಿದದ್ದು ಒಂದು ಮಹತ್ವದ ಸಾಧನೆ ಎನ್ನಬೇಕು. 


ಡಾ’ ಹೃಷಿಕೇಷ್  ಮೊದಲೇ ನಿಯಗಳ ಬಗ್ಗೆ ಹೇಳಿದ್ದರು. ಮಿತ ಆಹಾರ, ಬೆಳಗ್ಗೆ ಒಂದಷ್ಟು ನೀರು ಸೇವನೆ, ಸ್ನಾನ  ನಂತರ ಯೋಗಭ್ಯಾಸ ಇದು ಖಡ್ಡಾಯ. ರಾತ್ರಿ ಬೇಗ ಆಹಾರ ಸೇವಿಸಿ ಬೇಗನೇ ನಿದ್ರಿಸಬೇಕು. ಹೊರಗಿನ ಆಹಾರವನ್ನು ಸಂಪೂರ್ಣ ದೂರ ಮಾಡಬೇಕು. ಕಾಫಿ ಚಹ ಹಾಲು  ಸೇವನೆ  ನಿಲ್ಲಿಸುವಂತೆ ಹೇಳುತ್ತಾರೆ. ಆದರೂ ಆಭ್ಯಾಸ ಇದ್ದವರಿಗೆ ಅದನ್ನು ಸೂಕ್ಷ್ಮವಾಗಿ ಕಡಿಮೆ ಮಾಡಲಾಗುತ್ತದೆ. ಪಥ್ಯ ಎಂದರೆ ದೇಹಕ್ಕೆ ಹೊಂದಿಕೊಳ್ಳುವ ಆಹಾರ ಕ್ರಮ. ದೇಹಕ್ಕೆ ಬೇಡದೇ ಇದ್ದದ್ದು, ಮನಸ್ಸಿಗೆ ಬೇಕು ಎಂದು ಕಂಡರೂ ಸೇವಿಸುವ ಹಾಗಿಲ್ಲ. ಮರುದಿನ ಊಟ ಉಪಹಾರದ ವಿವರಗಳನ್ನು ಮೊದಲ ದಿನವೇ ಕೊಡಬೇಕು. ಮರುದಿನ ಅವರು ತೆಗೆದುಕೊಳ್ಳಬೇಕಾದ ಆಹಾರವನ್ನು ಅದರ ಪರಿಮಾಣವನ್ನು ತಿಳಿಸುತ್ತಾರೆ. ಅದರ ಪ್ರಕಾರ ಸೇವಿಸಿದರೆ ಮುಗಿಯಿತು. ಆದರೆ ಹಸಿವು ಚಪಲಗಳನ್ನು ನಿಯಂತ್ರಿಸುವುದು ತುಂಬ ಕಷ್ಟವಾದರೂ ಮನಸ್ಸು ಅದಕ್ಕೆ ಹೊಂದಿಕೊಳ್ಳಲಾರಂಭಿಸುತ್ತದೆ. ಮೊದಲ ಒಂದೆರಡು ದಿನ ನನಗೆ ಹೆಚ್ಚು ವೆತ್ಯಾಸ ತಿಳಿಯದೇ ಇದ್ದರೂ ಐದಾರು ದಿನ ಕಳೆದಾಗ ಬಹಳ ಕಷ್ಟವಾದದ್ದು ಸತ್ಯ. ಮೊದಲೇ ಯೋಗ ಕ್ರಮದಲ್ಲಿ ಅದೇ ನಿಯಮದಲ್ಲಿ ನನ್ನ ಆಹಾರದ ಕ್ರಮ ಇದ್ದರೂ ಸಹ ನನಗೆ ಒಂದಷ್ಟು ಕಷ್ಟವಾಯಿತು. ಆದರೆ ಕ್ರಮೇಣ ಮನಸ್ಸು ಅದ್ಭುತವಾಗಿ ಹೊಂದಿಕೊಂಡು ಬಿಟ್ಟಿತು. 

ಭಾರವಾದ ದೇಹ ಗಣನೀಯವಾಗಿ ಹಗುರವಾಗುತ್ತದೆ. ಜತೆಗೆ ಆರೋಗ್ಯವೂ ಹದಗೆಡುವುದಿಲ್ಲ. ಮುಖದ

ಚಾಂದ್ರಾಯಣದ ಮೊದಲ ದಿನ
ಚಾಂದ್ರಾಯಣದ ಕೊನೆಯ ದಿನ



ಲ್ಲಿ ಪ್ರಸನ್ನತೆ  ಸದಾ ಇರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಲ್ಲಿರುವ ದುಶ್ಚಟಗಳು ದೂರವಾಗುತ್ತದೆ. ಕಾಫಿ ಚಹದಂತಹ ವಿಲಾಸೀ ಆಹಾರ ಸೇವನೆ ದೂರವಾಗುತ್ತದೆ. ಮುಂಜಾನೆ ಏಳುವುದು, ಸ್ನಾನ ಮಾಡಿ ಯೋಗಾಭ್ಯಾಸ ಮಾಡುವುದು, ಮಿತವಾದ ಆಹಾರ ಸೇವನೆ, ಒಟ್ಟಿನಲ್ಲಿ  ಉತ್ತಮ ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಚಾಂದ್ರಾಯಣ ಒಂದು ಅದ್ಭುತ ವೃತ. 

ಚಾಂದ್ರಾಯಣ ಬಹಳ ಕಠಿಣ ಎಂಬ ಕಲ್ಪನೆ ಇತ್ತು. ಆದರೆ ಅದನ್ನು ಸರಳವಾಗಿ ಆಚರಿಸುವಂತೆ ಉತ್ತಮ ಮಾರ್ಗ ದರ್ಶನ ನೀಡಿದವರು ಡಾ. ಹೃಷಿಕೇಶರು ಒಂದು ಉತ್ತಮ ಜೀವನ ದರ್ಶನಕ್ಕೆ ಕಾರಣರಾದರು. ದಿನವೂ ಒಂದು ಹೊಸ ಅನುಭವದಿಂದ ಚಾಂದ್ರಾಯಣವನ್ನು ಮುಗಿಸಿದ ತೃಪ್ತಿ ಇದೆ. ಕೇವಲ ಒಂದು ತಿಂಗಳಲ್ಲಿ ಏಳು ಕೆಜಿಗಿಂತಲೂ ಅಧಿಕ ದೇಹದ ತೂಕ ಇಳಿಸಿಕೊಂಡಿದ್ದೇನೆ.  ಇದನ್ನು ಯಾರೂ ಆಚರಿಸಬಹುದು. ಸರಳವಾದ ಮಾರ್ಗದರ್ಶನದಿಂದ ಸುಲಭವಾಗಿ ಇದನ್ನು ಆಚರಿಸಬಹುದು. ಚಾಂದ್ರಾಯಣ ಆಚರಿಸಬೇಕಿದ್ದರೆ ಉತ್ತಮ ಸಲಹೆಗಾಗಿ ಡಾಕ್ಟರ್ ಹೃಷಿಕೇಶ್ ಅವರ ಸಂಪರ್ಕ ವಿವರಗಳನ್ನು ಕೊಟ್ಟಿರುತ್ತೇನೆ. ಕಠಿಣವೆನಿಸಿದ ಚಾಂದ್ರಾಯಣವನ್ನು ಸುಲಭ ಸಾಧ್ಯವಾಗಿ ಮಾಡಿದ್ದ ಹೃಷಿಕೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ಡಾಕ್ಟರ್ ಹೃಷಿಕೇಶ ಅವರ Mobile  : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 



Sunday, February 4, 2024

ಬ್ರಂಹಾಂಡ ಹಸಿವು

         ಅಂದು ನನ್ನ ಉಪಯನಯನ.  ಶೈಶವ ಅವಸ್ಥೆಯಿಂದ  ಬಾಲ್ಯಾವಸ್ಥೆಗೆ ಬರುವಾಗ ಇನ್ನೇನು ಪ್ರೌಢನಾಗುವ ಮೊದಲು ನನ್ನ ಮಾವ ಅಮ್ಮ ಸೇರಿ ನನಗೆ ಬ್ರಹ್ಮೋಪದೇಶ ಮಾಡುವುದಕ್ಕೆ ಸಂಕಲ್ಪ ಮಾಡಿದರು.  ಅದು ವರೆಗೆ ಚಂಚಲವಾಗಿದ್ದ ಬದುಕು, ನಿದ್ದೆಗೂ ಆಹಾರ ಆಟ ಪಾಠಗಳಿಗೆ ನಿಯಮವಿಲ್ಲದ ಒಂದು ಅವಸ್ಥೆ. ಆದರೂ ಬ್ರಹ್ಮೋಪದೇಶ ಎನ್ನುವಾಗ ಒಂದು ರೋಮಾಂಚನ. ಮನೆಯಲ್ಲಿ ನಮ್ಮಜ್ಜ  ಕಲಿಸಿ ಹೇಳುತ್ತಿದ್ದ ವೇದ ಮಂತ್ರಗಳನ್ನು ಉಪಯನಯನವಾಗದೆ ಹೇಳುವ ಅವಕಾಶವಿಲ್ಲ. ಉಳಿದವರು ಮಂತ್ರ ಹೇಳುತ್ತಿದ್ದರೆ ಅದನ್ನು ಕಿವಿಯಾರೆ ಕೇಳಿ ಬಹಳಷ್ಟು ಬಾಯಿಗೆ ಬಂದರೂ ಸಹ ಅದನ್ನು ಉಚ್ಚರಿಸುವುದಕ್ಕೆ ಉಪದೇಶ ಅಗತ್ಯ ಎಂದು ಹೇಳುತ್ತಿದ್ದರು. ಮಂತ್ರೋಚ್ಚಾರಕ್ಕೆ ಬ್ರಹ್ಮೊಪದೇಶವಾಗಿರಬೇಕು.  ಯಾಕೆಂದರೆ ಬಾಲ್ಯದಲ್ಲಿ ನಾಲಿಗೆ ಉಚ್ಚಾರ ಸಮರ್ಪಕವಾಗಿರುವುದಿಲ್ಲ. ಮಗು ಬೆಳೆದು ಪ್ರೌಢಾವಸ್ಥೆಗೆ ಬರಬೇಕು. ಇಂದ್ರಿಯ ಜ್ಞಾನದ ಬಗ್ಗೆ ಅರಿವಾಗಬೇಕು. ಮಂತ್ರೋಚ್ಚಾರದ ಸ್ವರಭಾರದಲ್ಲಿ, ಅಕ್ಷರಗಲ ಉಚ್ಚಾರದಲ್ಲಿ ಸ್ಪಷ್ಟತೆ ಇರಬೇಕು. ತಪ್ಪು ತಪ್ಪು ಉಚ್ಚಾರಗಳು ಪ್ರಮಾದವನ್ನು ಉಂಟು ಮಾಡುತ್ತದೆ. ಮಂತ್ರಗಳು ಬಹಳ ಸೂಕ್ಷ್ಮವಾದ ಉಚ್ಚಾರದಿಂದ ಕೂಡಿರುತ್ತದೆ.  ಬಾಲ್ಯದಲ್ಲಿ  ಉಪದೇಶ ಎಂದರೆ ಏನು ಎಂದು  ಬಾಲ್ಯಾವಸ್ಥೆಯಲ್ಲಿ ಅರಿವಾಗಲಿಲ್ಲ. ಆದರೆ ಉಪನಯನ ಎಂದರೆ ಮತ್ತೆ ಮಂತ್ರವೂ ಉಳಿದವರಂತೆ ಹೇಳಬಹುದು. ಸ್ನಾನ ಮಾಡಿ ಆಕಾಶ ನೋಡಿ ಜಪಕ್ಕೆ ಕುಳಿತುಕೊಳ್ಳಬಹುದು ಹೀಗೆ, ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅದೊಂದು ರೀತಿಯಲ್ಲಿ ದೊಡ್ಡವನಾಗುವ ಚಪಲ. ಮತ್ತು ದೊಡ್ಡವನಾದೆ ಎಂದು ತೋರಿಸಿಕೊಡುವ ತವಕ. 

ತಂದೆ ಇಲ್ಲದೇ ಇದ್ದುದರಿಂದ ಹಿರಿಯ ಸೋದರ ಮಾವನೇ ಆ ಸ್ಥಾನವನ್ನು ಅಂಗೀಕರಿಸಿದರು. ಮೊದಲಿಗೆ ಪವಿತ್ರವನ್ನು ತೊಡಿಸಿ ಕೈಗೆ ದಂಡವನ್ನು ಸೊಂಟಕ್ಕೆ ಮುಂಜಿಯನ್ನು ಬಂಧಿಸಿ ಬಾಲ್ಯದಿಂದ ಪ್ರೌಢಾವಸ್ಥೆಯ ಬಾಗಿಲನ್ನು ತೆರೆದು ತೋರಿಸಿದರು. ಅಮ್ಮನ ಕೈತುತ್ತು ಮಾವನ ಮಡಿಲಲ್ಲಿ ಕುಳಿತು ಅದುವರೆಗೆ ಕೇಳಿರದ ಗಾಯತ್ರಿ ಮಂತ್ರದ ಉಪದೇಶ ಪಡೆದಾಗ ಎಳೆಯ ಮನಸ್ಸಿಗೆ ಅದರ ಗಂಭೀರತೆ ಅರಿವಾಗುವುದಿಲ್ಲ.  ಬ್ರಹ್ಮ ಎಂದರೆ ಅದು ಎಂದು ತೋರಿಸಿಕೊಡುವಾಗ,  ಬ್ರಹ್ಮ ಎಂದರೆ ಬದುಕಿನ  ಅದು ಗುರಿ ಎಂದು ಭೋಧಿಸುವ ಜ್ಞಾನದ ಅರಿವೂ ಆಗುವುದಿಲ್ಲ. . ಆದರೆ ಬದುಕಿನ ದಾರಿಯನ್ನು ಕ್ರಮಿಸಿದಂತೆ ನಾವು ನಮಗರಿವಿಲ್ಲದೇ ಅದೇ ಗುರಿಯತ್ತ ಸಾಗುತ್ತಿದ್ದೇವೆ ಎಂಬ ಜ್ಞಾನೋದಯವಾಗುತ್ತದೆ. ಈ ಬ್ರಹ್ಮ ಜ್ಞಾನ ಎಂಬುದು ಬದುಕಿನ ಪರಮಾರ್ಥ....ಅದರ ಸೂಕ್ಷ್ಮ ಮೆಟ್ಟಲೇ ಈ ಬ್ರಹ್ಮೋಪದೇಶ. ಉಪನಯನದ ಬಾಲ್ಯ ಜೀವನದಲ್ಲಿ ಈ ಜ್ಞಾನದ ಗಂಭೀರತೆ ಅರಿವಾಗುವುದಿಲ್ಲ.  ಕ್ರಮೇಣ ಲೌಕಿಕ ಜೀವನಾನುಭವದಲ್ಲಿ ಇದು ಅನುಭವಕ್ಕೆ ಬರುತ್ತದೆ. ಗಿಡದಲ್ಲಿ ಹುಟ್ಟುವ ಹಣ್ನಿನೊಳಗಿರುವ ಬೀಜ ಹಣ್ಣಿನ ತೇವದಲ್ಲಿದ್ದರೂ ಮೊಳಕೆ ಬರುವುದಿಲ್ಲ. ಅದು ಸುರ್ಯನ ಶಾಖದಲ್ಲಿ ಬೆಂದು ಶುಷ್ಕವಾಗಿ ಆನಂತರ ನೀರಿನ  ಸಂಪರ್ಕದಲ್ಲಿ ಅದು ಮೊಳಕೆಯೊಡೆಯುತ್ತದೆ. ಬೀಜ ಶುಷ್ಕವಾದಂತೆ ನಮ್ಮ ಬಾಲ್ಯ. ಜಾನದ ಮೊಳಕೆಯೊಡೆಯಬೇಕಾದರೆ ಗುರುವಿನಿಂದ ಅಮೃತಧಾರೆಯಾಗಬೇಕು. ಬಾಲ್ಯ ಎಂದರೆ ಒಣಗಿದ ಬೀಜದಂತೆ. ಆಂತರ್ಯದಲ್ಲಿ ಸತ್ವವಿರುತ್ತದೆ. ಅದು ಹೊರಬರಲು ಅವಕಾಶ ಮತ್ತು ಬಾಹ್ಯ ಪ್ರಯತ್ನ ಇರಬೇಕಾಗುತ್ತದೆ. ಗುರುವಾದವನು ಇದನ್ನು ಒದಗಿಸುತ್ತಾನೆ. 

ಹಸಿವು ಜೀವಭಾವದ ಅಸ್ತಿತ್ವದ ಸಂಕೇತ. ಹಸಿವು ಇಲ್ಲದೇ ಇದ್ದರೆ ಆ ಜೀವಕ್ಕೆ ಅರ್ಥವೂ ಇರುವುದಿಲ್ಲ. ಹಸಿವನ್ನು ನೀಗದ ಧರ್ಮ ಧರ್ಮವೇ ಅಲ್ಲ ಅಂತ ಯಾರೋ ಹೇಳಿದ್ದರು. ಹಸಿವನ್ನು ನೀಗುವುದು ಬದುಕಿನ ಪರಮಾರ್ಥ.  ಹಾಗಂತ ಅವರು ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಹೇಳಿದ್ದರು.ಲೌಕಿಕ ಜೀವನದ ಹಸಿವನ್ನು ಪರಿಹರಿಸುವುದರಲ್ಲೆ ಲೋಕ ಧರ್ಮವಿದೆ.  ಆದರೆ ಭಾರತೀಯ ಸಂಸ್ಕೃತಿ ಕೇವಲ ಹೊಟ್ಟೆಯ ಹಸಿವಿಗೆ ಸೀಮಿತವಾಗಿರುವುದಿಲ್ಲ.  ಹಸಿವು ಬಗೆ ಬಗೆಯ ರೂಪದಲ್ಲಿರಬಹುದು. ಮನಸ್ಸಿನ ಹುಟ್ಟುವ ವಿಕಾರಗಳಿಗೆ ಅನುಸರಿಸಿ ಅದು ವಿವಿಧ ರೂಪಗಳನ್ನು ತಾಳುತ್ತದೆ. ಕಾಮನೆಗಳ ಹಸಿವು, ಧೈಹಿಕ ಮಾನಸಿಕ ಹಸಿವು....ಮನುಷ್ಯ ಆಯಾಯ ಸಂದರ್ಭಗಳಲ್ಲಿ ಅದುವೇ ಪರ್ಮಾರ್ಥ ಎಂದು ತಿಳಿದುಕೊಳ್ಳುತ್ತಾನೆ. ಆದರೆ ಜ್ಞಾನದ ಆಶಯವಿದ್ದಾಗ ಅಲ್ಲಿ ಹಸಿವು ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ. ಈ ಹಸಿವೇ ಒಂದು ಜ್ಞಾನ. ಈ ಜ್ಞಾನ ಎಂದರೆ ಯಾವುದು? ನಡು ರಾತ್ರಿಯಲ್ಲಿ ಸಿಧ್ಧಾರ್ಥನಿಗೆ ಉಂಟಾದ ಹಸಿವದು ಬುದ್ಧನಾಗುವ ತನಕ ಸೆಳೆದೊಯ್ಯಿತು. ಕೊನೆಗೆ ಜ್ಞಾನೋದಯವಾಗಿ ಹಸಿವು ದೂರವಾದಾಗ ಆತ ಗೌತಮ ಬುದ್ಧನಾದ. ಜ್ಞಾನದ ಹಸಿವು ಪ್ರಚೋದನೆಗೊಂಡಾಗ ಅಲ್ಲಿ ಬೇರೆ ಯಾವ ಹಸಿವಿಗೂ ಸ್ಥಾನವಿರುವುದಿಲ್ಲ. ನಮ್ಮ ಹಿಂದೂ ಸನಾತನ ಧರ್ಮದ ಮೂಲವೇ ಈ ಜ್ಞಾನದ ಹಸಿವು. 

ಹುಟ್ಟುವುದು ಯಾಕೆ? ನಂತರ ಜೀವನ ಬಾಲ್ಯ ಯೌವನ ವೃದ್ಧಾಪ್ಯವನ್ನು ಅನುಭವಿಸುವುದೇಕೆ? ಅದರನಡುವೆ ಬಾಲ್ಯ ಗೃಹಸ್ಥ ಹೀಗೆ ಹಲವು ಸ್ತರಗಳು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಹಿಂದಿನಿಂದಲೂ ಅನ್ವೇಷಣೆಗೆ ತೊಡಗಿದಾಗ ಇದು ಜ್ಞಾನದ ಹಸಿವಿನ ಲಕ್ಷಣ.  ಆಧ್ಯಾತ್ಮಿಕವಾದ ಚಿಂತನೆಯಲ್ಲಿರುವ ಹಸಿವು ಉಳಿದ ಎಲ್ಲಾ ಹಸಿವನ್ನೂ ಮರೆಸಿಬಿಡುತ್ತದೆ. ನಮ್ಮ ತಂದೆಯ ತನಕ ಬಂದಿರುವ ಒಂದು ಸಂಸ್ಕಾರ ನಮ್ಮಿಂದ ಮತ್ತೆ ಮುಂದುವರೆಯಬೇಕು. ತಂದೆಯಾದವನು ಅದನ್ನು ಮಗನಿಗೆ ಉಪದೇಶಿಸುತ್ತಾನೆ. ಮಗ ಅದನ್ನು ಶಿರಸಾವಹಿಸಿ ಮತ್ತೆ ಮುಂದುವರೆಸುತ್ತಾನೆ. ಸಹಸ್ರಾರು ವರ್ಷಗಳಿಂದ ಈ ನಂಬಿಕೆಯ ತಳಹದಿಯಲ್ಲಿ ಈ ಸಂಸ್ಕಾರ ಬೆಳೆದು ಬಂದಿದೆ. 

ಭೂಮಿಯ ಪ್ರತೀ ಚರಾಚರ ವಸ್ತುಗಳೂ ನಮ್ಮ ಮನಸ್ಸಿನಲ್ಲಿ ದೈವತ್ವವನ್ನು ಪ್ರತಿನಿಧಿಸುತ್ತವೆ. ಸಸ್ಯ ಪ್ರಾಣಿ ನೀರು ಕಾಡು  ಬಂಡೆ ಪರ್ವತ  ಹೀಗೆ ಪ್ರತಿಯೊಂದರಲ್ಲೂ ನಾವು ಕಾಣುವ ದೈವತ್ವ ದೇವರ ವ್ಯಾಪಕತೆಯನ್ನು ತೋರಿಸುತ್ತದೆ. ಇದರ ಮೂಲವೇ ಜ್ಞಾನ. ನಮ್ಮ ಸಂಸ್ಕಾರಗಳು ಪ್ರಕೃತಿಯ ಭಾವನೆಯೊಂದಿಗೆ ಬೆರೆತಿರುತ್ತದೆ. ಸೂರ್ಯನನ್ನು ಪ್ರತಿನಿಧಿಯಾಗಿಸಿ ಪ್ರಕೃತಿಯನ್ನು ಕಾಣುವ ಈ ಸಂಸ್ಕೃತಿ ಪ್ರಕೃತಿಧರ್ಮವನ್ನು ಅಂಗೀಕರಿಸಿ ಅದರೊಂದಿಗೇ ಬೆಳೆಯುತ್ತದೆ. ನಮಗೆ ಯಾವುದೂ ಮುಖ್ಯವಲ್ಲ. ಎಲ್ಲವನ್ನು ಸಾಂಕೇತಿಕವಾಗಿ ಬಳಸುವ ಸಂಸ್ಕೃತಿ. ಒಂದು ತೆಂಗಿನ ಕಾಯಿಯಲ್ಲಿ ದೇವರನ್ನು ಆವಾಹಿಸಿ ಜಗತ್ ವ್ಯಾಪಕನಾದ ಭಗವಂತನನ್ನು ಕಾಣುತ್ತೇವೆ. ರೂಪವಿಲ್ಲದ ಭಾವವಿಲ್ಲದ ನಿರ್ಗುಣ ನಿರಾಮಯನಾದ ಭಗವಂತನಿಗೆ ನಮ್ಮ ಚಿಂತನೆಗೆ ಸೀಮಿತವಾಗಿಸಿ ನಾವು ಭಗವಂತನ್ನು ಕಾಣುವಾಗ ಅಲ್ಲೊಂದು ಪ್ರಕೃತಿ ಧರ್ಮವಿರುತ್ತದೆ. ಬ್ರಹ್ಮೋಪದೇಶ ಈ ಎಲ್ಲದರ ಮೊದಲ ಮೆಟ್ಟಿಲಾಗಿರುತ್ತದೆ. ಬ್ರಹ್ಮ ಎಂದರೆ ಏನು ಎಂಬ ಅನ್ವೇಷಣೆ ಇಲ್ಲಿಂದ ಆರಂಭವಾಗುತ್ತದೆ. ಜ್ಞಾನದ ಹಸಿವಿಗೆ ಉತ್ತೇಜಕವಾದ ಈ ಬ್ರಹ್ಮೋಪದೇಶ ಬ್ರಹ್ಮಾಂಡದ ಹಸಿವನ್ನು ಪ್ರಚೋದಿಸುತ್ತದೆ.