ಅಂದು ನನ್ನ ಉಪಯನಯನ. ಶೈಶವ ಅವಸ್ಥೆಯಿಂದ ಬಾಲ್ಯಾವಸ್ಥೆಗೆ ಬರುವಾಗ ಇನ್ನೇನು ಪ್ರೌಢನಾಗುವ ಮೊದಲು ನನ್ನ ಮಾವ ಅಮ್ಮ ಸೇರಿ ನನಗೆ ಬ್ರಹ್ಮೋಪದೇಶ ಮಾಡುವುದಕ್ಕೆ ಸಂಕಲ್ಪ ಮಾಡಿದರು. ಅದು ವರೆಗೆ ಚಂಚಲವಾಗಿದ್ದ ಬದುಕು, ನಿದ್ದೆಗೂ ಆಹಾರ ಆಟ ಪಾಠಗಳಿಗೆ ನಿಯಮವಿಲ್ಲದ ಒಂದು ಅವಸ್ಥೆ. ಆದರೂ ಬ್ರಹ್ಮೋಪದೇಶ ಎನ್ನುವಾಗ ಒಂದು ರೋಮಾಂಚನ. ಮನೆಯಲ್ಲಿ ನಮ್ಮಜ್ಜ ಕಲಿಸಿ ಹೇಳುತ್ತಿದ್ದ ವೇದ ಮಂತ್ರಗಳನ್ನು ಉಪಯನಯನವಾಗದೆ ಹೇಳುವ ಅವಕಾಶವಿಲ್ಲ. ಉಳಿದವರು ಮಂತ್ರ ಹೇಳುತ್ತಿದ್ದರೆ ಅದನ್ನು ಕಿವಿಯಾರೆ ಕೇಳಿ ಬಹಳಷ್ಟು ಬಾಯಿಗೆ ಬಂದರೂ ಸಹ ಅದನ್ನು ಉಚ್ಚರಿಸುವುದಕ್ಕೆ ಉಪದೇಶ ಅಗತ್ಯ ಎಂದು ಹೇಳುತ್ತಿದ್ದರು. ಮಂತ್ರೋಚ್ಚಾರಕ್ಕೆ ಬ್ರಹ್ಮೊಪದೇಶವಾಗಿರಬೇಕು. ಯಾಕೆಂದರೆ ಬಾಲ್ಯದಲ್ಲಿ ನಾಲಿಗೆ ಉಚ್ಚಾರ ಸಮರ್ಪಕವಾಗಿರುವುದಿಲ್ಲ. ಮಗು ಬೆಳೆದು ಪ್ರೌಢಾವಸ್ಥೆಗೆ ಬರಬೇಕು. ಇಂದ್ರಿಯ ಜ್ಞಾನದ ಬಗ್ಗೆ ಅರಿವಾಗಬೇಕು. ಮಂತ್ರೋಚ್ಚಾರದ ಸ್ವರಭಾರದಲ್ಲಿ, ಅಕ್ಷರಗಲ ಉಚ್ಚಾರದಲ್ಲಿ ಸ್ಪಷ್ಟತೆ ಇರಬೇಕು. ತಪ್ಪು ತಪ್ಪು ಉಚ್ಚಾರಗಳು ಪ್ರಮಾದವನ್ನು ಉಂಟು ಮಾಡುತ್ತದೆ. ಮಂತ್ರಗಳು ಬಹಳ ಸೂಕ್ಷ್ಮವಾದ ಉಚ್ಚಾರದಿಂದ ಕೂಡಿರುತ್ತದೆ. ಬಾಲ್ಯದಲ್ಲಿ ಉಪದೇಶ ಎಂದರೆ ಏನು ಎಂದು ಬಾಲ್ಯಾವಸ್ಥೆಯಲ್ಲಿ ಅರಿವಾಗಲಿಲ್ಲ. ಆದರೆ ಉಪನಯನ ಎಂದರೆ ಮತ್ತೆ ಮಂತ್ರವೂ ಉಳಿದವರಂತೆ ಹೇಳಬಹುದು. ಸ್ನಾನ ಮಾಡಿ ಆಕಾಶ ನೋಡಿ ಜಪಕ್ಕೆ ಕುಳಿತುಕೊಳ್ಳಬಹುದು ಹೀಗೆ, ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಅದೊಂದು ರೀತಿಯಲ್ಲಿ ದೊಡ್ಡವನಾಗುವ ಚಪಲ. ಮತ್ತು ದೊಡ್ಡವನಾದೆ ಎಂದು ತೋರಿಸಿಕೊಡುವ ತವಕ.
ತಂದೆ ಇಲ್ಲದೇ ಇದ್ದುದರಿಂದ ಹಿರಿಯ ಸೋದರ ಮಾವನೇ ಆ ಸ್ಥಾನವನ್ನು ಅಂಗೀಕರಿಸಿದರು. ಮೊದಲಿಗೆ ಪವಿತ್ರವನ್ನು ತೊಡಿಸಿ ಕೈಗೆ ದಂಡವನ್ನು ಸೊಂಟಕ್ಕೆ ಮುಂಜಿಯನ್ನು ಬಂಧಿಸಿ ಬಾಲ್ಯದಿಂದ ಪ್ರೌಢಾವಸ್ಥೆಯ ಬಾಗಿಲನ್ನು ತೆರೆದು ತೋರಿಸಿದರು. ಅಮ್ಮನ ಕೈತುತ್ತು ಮಾವನ ಮಡಿಲಲ್ಲಿ ಕುಳಿತು ಅದುವರೆಗೆ ಕೇಳಿರದ ಗಾಯತ್ರಿ ಮಂತ್ರದ ಉಪದೇಶ ಪಡೆದಾಗ ಎಳೆಯ ಮನಸ್ಸಿಗೆ ಅದರ ಗಂಭೀರತೆ ಅರಿವಾಗುವುದಿಲ್ಲ. ಬ್ರಹ್ಮ ಎಂದರೆ ಅದು ಎಂದು ತೋರಿಸಿಕೊಡುವಾಗ, ಬ್ರಹ್ಮ ಎಂದರೆ ಬದುಕಿನ ಅದು ಗುರಿ ಎಂದು ಭೋಧಿಸುವ ಜ್ಞಾನದ ಅರಿವೂ ಆಗುವುದಿಲ್ಲ. . ಆದರೆ ಬದುಕಿನ ದಾರಿಯನ್ನು ಕ್ರಮಿಸಿದಂತೆ ನಾವು ನಮಗರಿವಿಲ್ಲದೇ ಅದೇ ಗುರಿಯತ್ತ ಸಾಗುತ್ತಿದ್ದೇವೆ ಎಂಬ ಜ್ಞಾನೋದಯವಾಗುತ್ತದೆ. ಈ ಬ್ರಹ್ಮ ಜ್ಞಾನ ಎಂಬುದು ಬದುಕಿನ ಪರಮಾರ್ಥ....ಅದರ ಸೂಕ್ಷ್ಮ ಮೆಟ್ಟಲೇ ಈ ಬ್ರಹ್ಮೋಪದೇಶ. ಉಪನಯನದ ಬಾಲ್ಯ ಜೀವನದಲ್ಲಿ ಈ ಜ್ಞಾನದ ಗಂಭೀರತೆ ಅರಿವಾಗುವುದಿಲ್ಲ. ಕ್ರಮೇಣ ಲೌಕಿಕ ಜೀವನಾನುಭವದಲ್ಲಿ ಇದು ಅನುಭವಕ್ಕೆ ಬರುತ್ತದೆ. ಗಿಡದಲ್ಲಿ ಹುಟ್ಟುವ ಹಣ್ನಿನೊಳಗಿರುವ ಬೀಜ ಹಣ್ಣಿನ ತೇವದಲ್ಲಿದ್ದರೂ ಮೊಳಕೆ ಬರುವುದಿಲ್ಲ. ಅದು ಸುರ್ಯನ ಶಾಖದಲ್ಲಿ ಬೆಂದು ಶುಷ್ಕವಾಗಿ ಆನಂತರ ನೀರಿನ ಸಂಪರ್ಕದಲ್ಲಿ ಅದು ಮೊಳಕೆಯೊಡೆಯುತ್ತದೆ. ಬೀಜ ಶುಷ್ಕವಾದಂತೆ ನಮ್ಮ ಬಾಲ್ಯ. ಜಾನದ ಮೊಳಕೆಯೊಡೆಯಬೇಕಾದರೆ ಗುರುವಿನಿಂದ ಅಮೃತಧಾರೆಯಾಗಬೇಕು. ಬಾಲ್ಯ ಎಂದರೆ ಒಣಗಿದ ಬೀಜದಂತೆ. ಆಂತರ್ಯದಲ್ಲಿ ಸತ್ವವಿರುತ್ತದೆ. ಅದು ಹೊರಬರಲು ಅವಕಾಶ ಮತ್ತು ಬಾಹ್ಯ ಪ್ರಯತ್ನ ಇರಬೇಕಾಗುತ್ತದೆ. ಗುರುವಾದವನು ಇದನ್ನು ಒದಗಿಸುತ್ತಾನೆ.
ಹಸಿವು ಜೀವಭಾವದ ಅಸ್ತಿತ್ವದ ಸಂಕೇತ. ಹಸಿವು ಇಲ್ಲದೇ ಇದ್ದರೆ ಆ ಜೀವಕ್ಕೆ ಅರ್ಥವೂ ಇರುವುದಿಲ್ಲ. ಹಸಿವನ್ನು ನೀಗದ ಧರ್ಮ ಧರ್ಮವೇ ಅಲ್ಲ ಅಂತ ಯಾರೋ ಹೇಳಿದ್ದರು. ಹಸಿವನ್ನು ನೀಗುವುದು ಬದುಕಿನ ಪರಮಾರ್ಥ. ಹಾಗಂತ ಅವರು ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಹೇಳಿದ್ದರು.ಲೌಕಿಕ ಜೀವನದ ಹಸಿವನ್ನು ಪರಿಹರಿಸುವುದರಲ್ಲೆ ಲೋಕ ಧರ್ಮವಿದೆ. ಆದರೆ ಭಾರತೀಯ ಸಂಸ್ಕೃತಿ ಕೇವಲ ಹೊಟ್ಟೆಯ ಹಸಿವಿಗೆ ಸೀಮಿತವಾಗಿರುವುದಿಲ್ಲ. ಹಸಿವು ಬಗೆ ಬಗೆಯ ರೂಪದಲ್ಲಿರಬಹುದು. ಮನಸ್ಸಿನ ಹುಟ್ಟುವ ವಿಕಾರಗಳಿಗೆ ಅನುಸರಿಸಿ ಅದು ವಿವಿಧ ರೂಪಗಳನ್ನು ತಾಳುತ್ತದೆ. ಕಾಮನೆಗಳ ಹಸಿವು, ಧೈಹಿಕ ಮಾನಸಿಕ ಹಸಿವು....ಮನುಷ್ಯ ಆಯಾಯ ಸಂದರ್ಭಗಳಲ್ಲಿ ಅದುವೇ ಪರ್ಮಾರ್ಥ ಎಂದು ತಿಳಿದುಕೊಳ್ಳುತ್ತಾನೆ. ಆದರೆ ಜ್ಞಾನದ ಆಶಯವಿದ್ದಾಗ ಅಲ್ಲಿ ಹಸಿವು ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತದೆ. ಈ ಹಸಿವೇ ಒಂದು ಜ್ಞಾನ. ಈ ಜ್ಞಾನ ಎಂದರೆ ಯಾವುದು? ನಡು ರಾತ್ರಿಯಲ್ಲಿ ಸಿಧ್ಧಾರ್ಥನಿಗೆ ಉಂಟಾದ ಹಸಿವದು ಬುದ್ಧನಾಗುವ ತನಕ ಸೆಳೆದೊಯ್ಯಿತು. ಕೊನೆಗೆ ಜ್ಞಾನೋದಯವಾಗಿ ಹಸಿವು ದೂರವಾದಾಗ ಆತ ಗೌತಮ ಬುದ್ಧನಾದ. ಜ್ಞಾನದ ಹಸಿವು ಪ್ರಚೋದನೆಗೊಂಡಾಗ ಅಲ್ಲಿ ಬೇರೆ ಯಾವ ಹಸಿವಿಗೂ ಸ್ಥಾನವಿರುವುದಿಲ್ಲ. ನಮ್ಮ ಹಿಂದೂ ಸನಾತನ ಧರ್ಮದ ಮೂಲವೇ ಈ ಜ್ಞಾನದ ಹಸಿವು.
ಹುಟ್ಟುವುದು ಯಾಕೆ? ನಂತರ ಜೀವನ ಬಾಲ್ಯ ಯೌವನ ವೃದ್ಧಾಪ್ಯವನ್ನು ಅನುಭವಿಸುವುದೇಕೆ? ಅದರನಡುವೆ ಬಾಲ್ಯ ಗೃಹಸ್ಥ ಹೀಗೆ ಹಲವು ಸ್ತರಗಳು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಹಿಂದಿನಿಂದಲೂ ಅನ್ವೇಷಣೆಗೆ ತೊಡಗಿದಾಗ ಇದು ಜ್ಞಾನದ ಹಸಿವಿನ ಲಕ್ಷಣ. ಆಧ್ಯಾತ್ಮಿಕವಾದ ಚಿಂತನೆಯಲ್ಲಿರುವ ಹಸಿವು ಉಳಿದ ಎಲ್ಲಾ ಹಸಿವನ್ನೂ ಮರೆಸಿಬಿಡುತ್ತದೆ. ನಮ್ಮ ತಂದೆಯ ತನಕ ಬಂದಿರುವ ಒಂದು ಸಂಸ್ಕಾರ ನಮ್ಮಿಂದ ಮತ್ತೆ ಮುಂದುವರೆಯಬೇಕು. ತಂದೆಯಾದವನು ಅದನ್ನು ಮಗನಿಗೆ ಉಪದೇಶಿಸುತ್ತಾನೆ. ಮಗ ಅದನ್ನು ಶಿರಸಾವಹಿಸಿ ಮತ್ತೆ ಮುಂದುವರೆಸುತ್ತಾನೆ. ಸಹಸ್ರಾರು ವರ್ಷಗಳಿಂದ ಈ ನಂಬಿಕೆಯ ತಳಹದಿಯಲ್ಲಿ ಈ ಸಂಸ್ಕಾರ ಬೆಳೆದು ಬಂದಿದೆ.
ಭೂಮಿಯ ಪ್ರತೀ ಚರಾಚರ ವಸ್ತುಗಳೂ ನಮ್ಮ ಮನಸ್ಸಿನಲ್ಲಿ ದೈವತ್ವವನ್ನು ಪ್ರತಿನಿಧಿಸುತ್ತವೆ. ಸಸ್ಯ ಪ್ರಾಣಿ ನೀರು ಕಾಡು ಬಂಡೆ ಪರ್ವತ ಹೀಗೆ ಪ್ರತಿಯೊಂದರಲ್ಲೂ ನಾವು ಕಾಣುವ ದೈವತ್ವ ದೇವರ ವ್ಯಾಪಕತೆಯನ್ನು ತೋರಿಸುತ್ತದೆ. ಇದರ ಮೂಲವೇ ಜ್ಞಾನ. ನಮ್ಮ ಸಂಸ್ಕಾರಗಳು ಪ್ರಕೃತಿಯ ಭಾವನೆಯೊಂದಿಗೆ ಬೆರೆತಿರುತ್ತದೆ. ಸೂರ್ಯನನ್ನು ಪ್ರತಿನಿಧಿಯಾಗಿಸಿ ಪ್ರಕೃತಿಯನ್ನು ಕಾಣುವ ಈ ಸಂಸ್ಕೃತಿ ಪ್ರಕೃತಿಧರ್ಮವನ್ನು ಅಂಗೀಕರಿಸಿ ಅದರೊಂದಿಗೇ ಬೆಳೆಯುತ್ತದೆ. ನಮಗೆ ಯಾವುದೂ ಮುಖ್ಯವಲ್ಲ. ಎಲ್ಲವನ್ನು ಸಾಂಕೇತಿಕವಾಗಿ ಬಳಸುವ ಸಂಸ್ಕೃತಿ. ಒಂದು ತೆಂಗಿನ ಕಾಯಿಯಲ್ಲಿ ದೇವರನ್ನು ಆವಾಹಿಸಿ ಜಗತ್ ವ್ಯಾಪಕನಾದ ಭಗವಂತನನ್ನು ಕಾಣುತ್ತೇವೆ. ರೂಪವಿಲ್ಲದ ಭಾವವಿಲ್ಲದ ನಿರ್ಗುಣ ನಿರಾಮಯನಾದ ಭಗವಂತನಿಗೆ ನಮ್ಮ ಚಿಂತನೆಗೆ ಸೀಮಿತವಾಗಿಸಿ ನಾವು ಭಗವಂತನ್ನು ಕಾಣುವಾಗ ಅಲ್ಲೊಂದು ಪ್ರಕೃತಿ ಧರ್ಮವಿರುತ್ತದೆ. ಬ್ರಹ್ಮೋಪದೇಶ ಈ ಎಲ್ಲದರ ಮೊದಲ ಮೆಟ್ಟಿಲಾಗಿರುತ್ತದೆ. ಬ್ರಹ್ಮ ಎಂದರೆ ಏನು ಎಂಬ ಅನ್ವೇಷಣೆ ಇಲ್ಲಿಂದ ಆರಂಭವಾಗುತ್ತದೆ. ಜ್ಞಾನದ ಹಸಿವಿಗೆ ಉತ್ತೇಜಕವಾದ ಈ ಬ್ರಹ್ಮೋಪದೇಶ ಬ್ರಹ್ಮಾಂಡದ ಹಸಿವನ್ನು ಪ್ರಚೋದಿಸುತ್ತದೆ.
No comments:
Post a Comment