Sunday, October 6, 2024

ಯಥೋ ಧರ್ಮಃ ತಥೋ ಜಯಃ...

 "ಯಥೋ ಧರ್ಮಃ ತಥೋ ಜಯಃ....ಯಥೋ ಧರ್ಮಃ ತಥೋ ಕೃಷ್ಣಃ ಯಥೋ ಕೃಷ್ಣಃ ತಥೋ ಜಯಃ"

        ಭಗವಂತ ಹೇಳುವ ಈ ಮಾತು ಬಹಳ ಸುಂದರವಾಗಿದೆ. ಎಲ್ಲಿ ಪಾಂಡವರಿದ್ದಾರೋ ಅಲ್ಲಿ ಧರ್ಮವಿದೆ, ಎಲ್ಲಿ ಧರ್ಮವಿದೆಯೋ ಅಲ್ಲಿ ಶ್ರೀಕೃಷ್ಣನಿದ್ದಾನೆ, ಎಲ್ಲಿ ಶ್ರೀಕೃಷ್ಣನಿದ್ದಾನೋ ಅಲ್ಲಿ ಜಯವಿದೆ.  ಜಯ ಎಂದರೆ ಕೇವಲ ಯುದ್ದದ ಜಯವಲ್ಲ. ಬದುಕಿನ ಜಯ. ಅದೇ ರೀತಿ ಧರ್ಮ ಎಂದರೆ ಅದು ಯಾವುದೇ ಜಾತಿ ಸೂಚಕವಲ್ಲ. 

        ನಮ್ಮಲ್ಲಿ ಇಂತಹ ತಾತ್ವಿಕ ವಾಕ್ಯಗಳು ಸಾಕಷ್ಟು ಸಿಗುತ್ತವೆ. ಇದನ್ನು ಕೇಳುವಾಗ ಮನಸ್ಸು ಶಾಂತವಾಗುತ್ತದೆ, ಭಾವುಕರಾಗುತ್ತೇವೆ. ಇಲ್ಲಿ ಉನ್ನತ ತತ್ವಗಳಿಗೆ ಕೊರತೆ ಇಲ್ಲ. ಕೊರತೆ ಇರುವುದು ಅನುಸರಣೆಯಲ್ಲಿ. ಸುಪ್ರಭಾತ ಶ್ಲೋಕ ಕೇಳಿ ಆನಂದ ಪಡುತ್ತೇವೆ. ಈ ಆನಂದ ಅನುಸರಣೆಯಲ್ಲಿ ಇಲ್ಲ ಎಂಬುದು ಅಷ್ಟೇ ಸತ್ಯ. ಬೆಳಗ್ಗೆ ಎಂಟು ಘಂಟೆಗೆ ಸೂರ್ಯ ಪ್ರಖರವಾಗುವಾಗ ಉತ್ತಿಷ್ಠೋ ಗೋವಿಂದ ಅಂತ ಅರ್ಥ ಹೇಳುವುದರಲ್ಲಿ ಏನು ತತ್ವವಿದೆ ? ಜಗತ್ತಿನಲ್ಲಿ ನಮ್ಮ ಭೂಮಿಯೇ ಶ್ರೇಷ್ಠ, ನಮ್ಮ ತತ್ವಗಳೇ ಶ್ರೇಷ್ಠ.  ತತ್ವ ಭರಿತ ವಾಕ್ಯಗಳನ್ನು ಕೇಳುವಾಗ ಎದೆಯುಬ್ಬಿಸಿ ಹೇಳುತ್ತೇವೆ. ಆದರೆ ಇವುಗಳೆಲ್ಲ ಹೇಳುವುದಕ್ಕೆ ಕೇಳುವುದಕ್ಕ್ಷಷ್ಟೇ ಇದು ಸೀಮಿತ ಎಂಬುದು ಅಷ್ಟೇ ಸತ್ಯ. 

ಯಾವುದೋ ಗಲ್ಲಿಯಲ್ಲಿ ಮೊನ್ನೆ ಮೊನ್ನೆ ಅದ್ಧೂರಿಯ ಗಣೇಶೋತ್ಸವ ನಡೆಯಿತು. ರಸ್ತೆಯುದ್ದಕ್ಕೂ ಭರ್ಜರಿ ದೀಪಾಲಂಕಾರ, ಚಪ್ಪರದ ತುಂಬ ಪ್ರಖರವಾದ ಬೆಳಕು, ಹಗಲನ್ನು ನಾಚಿಸುವಂತೆ ಬೆಳಕು. ಎಲ್ಲವನ್ನೂ ಒಪ್ಪಿಕೊಳ್ಳಬಹುದೇನೋ, ಆದರೆ ಒಬ್ಬ ಬೀದಿಯ ವಿದ್ಯುತ್ ಕಂಬ ಹತ್ತಿ ಈ ದೀಪಗಳೀಗೆ ವಿದ್ಯುತ್ ಸಂಪರ್ಕ ಎಳೆಯುತ್ತಿದ್ದುದನ್ನು ನೋಡಿದಾಗ ಖೇದವೆನಿಸಿತು.  ಒಂದು ಪವಿತ್ರವಾದ ಕಾರ್ಯದಲ್ಲೂ ಕೃತ್ರಿಮ ವರ್ತನೆ. ವಿದ್ಯುತ್ ಚೌರ್ಯ. ನಿಜಕ್ಕಾದರೆ ಇಂತಹದನ್ನು ಕಾಣುವಾಗ ಸಾರ್ವಜಿನಿಕ ಪ್ರಜ್ಞೆಯಿಂದ ಸಂಬಂಧಿಸಿದವರಿಗೆ ತಿಳಿಸಬೇಕು. ಅದು ಕರ್ತವ್ಯ. ಆದರೆ ಇಲ್ಲದಿದ್ದನ್ನು ಮೈಮೇಲೆ ಎಳೆದುಕೊಂಡಂತೆ. ದೂರು ಕೊಡುವವರೇ ಇಲ್ಲಿ ಗುರಿಯಾಗುವುದು ಸಾಮಾನ್ಯ. ಇದು ಇಲ್ಲಿಗೆ ಮಾತ್ರ ಸೀಮಿತವಲ್ಲ. ಸಾರ್ವಜನಿಕ ಕಾರ್ಯಕ್ರಮ ಉತ್ಸವಾದಿಗಳು ಆಗುವಲ್ಲಿ ನೋಡಿದರೆ ಇದು ಸಾಮಾನ್ಯ ಎಂಬಂತೆ ಕಣ್ಣಿಗೆ ಕಾಣುತ್ತದೆ. ಆದರೆ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತದೆ. ವಿದ್ಯುತ್ ಇಲಾಖೆಗೆ ಇದನ್ನು ನೋಡುವುದಕ್ಕೇ ವಿದ್ಯುತ್ ಇಲ್ಲ. ಕಂಡೂ ಕತ್ತಲೆಯಲ್ಲಿ ಕುಳಿತುಕೊಳ್ಳುತ್ತದೆ.  ಅಕ್ಷರಶಃ ಕತ್ತಲೆಯಲ್ಲಿ ಕುಳಿತು ಬಿಡುತ್ತದೆ. ಇನ್ನು ಅವರಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದರೆ " ಸಾರ್ ಅದೆಲ್ಲ ಕಾಮನ್ ಸಾರ್" ಅಂತ ನನ್ನನ್ನೇ ವಿಚಿತ್ರವಾಗಿ ನೋಡಿಬಿಡುತ್ತಾರೆ. 

ಸತ್ಯ ಪ್ರಾಮಾಣಿಕತೆ ನಿರ್ವಂಚನೆ ಸದ್ಬಾವನೆ ಎಲ್ಲಿ ಇರುತ್ತದೆಯೋ ಅಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಆದರೆ ದೇವರ ಕೆಲಸದಲ್ಲೇ ವಂಚನೆ. ಸರಕಾರದ ಕೆಲಸ ದೇವರ ಕೆಲಸ ಅಂತ ದೊಡ್ಡದಾಗಿ ಬರೆಯಲ್ಪಡುತ್ತದೆ. ಆದಕಾರಣ ದೇವರ ಕೆಲಸಕ್ಕೆ ಸರಕಾರದ ವಿದ್ಯುತ್ ಉಚಿತವಾಗಿ ತೆಗೆದುಕೊಳ್ಳಬಹುದು ಎಂಬ ನಿಯಮ ಇದ್ದಂತೆ ತಿಳಿಯಬೇಕು. ಇನ್ನು ಇದರ ಬಗ್ಗೆ ವ್ಯತಿರಿಕ್ತವಾಗಿ ಮಾತನಾಡಿದರೆ, ಇವರ ಲೆಕ್ಕದಲ್ಲಿ  ಅದು ದೈವ ಕೋಪಕ್ಕೆ ಕಾರಣವಾಗಬಹುದು. ಹಾಗಾದರೆ ಸತ್ಯ ಪ್ರಾಮಾಣಿಕತೆ ಇದ್ದಲ್ಲಿ ದೇವರಿದ್ದಾನೆ ಅಂತ ಉತ್ಕೃಷ್ಟ ತತ್ವೋಪದೇಶ ಮಾಡುವುದಕ್ಕೆ ನಮಗೆ ಯಾವ ಆರ್ಹತೆ ಇರುತ್ತದೆ.? ಅದೇ ತತ್ವ ಆದರ್ಶಗಳು ಕೇಳುವುದಕ್ಕೆ ಓದುವುದಕ್ಕೆ ಬಹಳ ಸುಂದರವಾಗಿರುತ್ತದೆ. ಪರರ ಎದುರಲ್ಲಿ ಅಭಿಮಾನದಿಂದ ಎದೆಯುಬ್ಬಿಸಿ ಹೇಳುವುದಕ್ಕೆ ಮಾತ್ರ ಯೋಗ್ಯವಾಗಿರುತ್ತದೆ. ಆಚರಣೆಗೆ  ಅದು ಸಾಧ್ಯವಾಗುವುದಿಲ್ಲ. 

ಅದ್ಧೂರಿ ಗಣೇಶೋತ್ಸವ ಅಂತ ಹೇಳಿ ಸಾವಿರಾರು ರೂಪಾಯಿಯನ್ನು ವೆಚ್ಚ ಮಾಡುತ್ತಾರೆ, ಭಕ್ತಿಯ ಹೆಸರಲ್ಲಿ ಭಕ್ತಿಯೇ ಇಲ್ಲದ ಸಂಗೀತ ಆರ್ಕೆಸ್ಟ್ರಾ ಮಾಡುವುದಕ್ಕೆ ಬೇಕಾದಷ್ಟು ದುಡ್ಡು ಇರುತ್ತದೆ. ಪ್ರಸಾದ ತಿಂಡಿ ತೀರ್ಥ ಅಂತ ದೊಡ್ಡ ಮೊತ್ತ ಖರ್ಚು ಮಾಡುತ್ತಾರೆ. ಹೆಚ್ಚೇಕೆ  ನಶೆ ಏರಿಸಿಸಿ ವಿಕೃತವಗಿ ಕುಣಿಯುವುದಕ್ಕೂ ದುಡ್ದು ಇದೆ.  ಆದರೆ ಚೈತನ್ಯ ಸ್ವರೂಪವಾದ ವಿದ್ಯುತ್ ಗೆ ಕೊಡುವುದಕ್ಕೆ ದುಡ್ಡು ಇರುವುದಿಲ್ಲ. ದೇವರ ಎದುರೇ ನಾವು ಆತ್ಮ ವಂಚನೆಯಿಂದ ಅನ್ಯಾಯವನ್ನು ಇದೇ ನ್ಯಾಯ ಎಂಬಂತೆ ಅನುಸರಿಸುತ್ತೇವೆ.  ಸತ್ಯ ಪ್ರಾಮಾಣಿಕತೆಯನ್ನೇ ದೇವರು ಎಂದು ಕಾಣುವ ನಮ್ಮ ಉದಾತ್ತ ತತ್ವಗಳು ಜಗತ್ತನ್ನೇ ಬೆರಗುಗೊಳಿಸುವುದಕ್ಕೆ ಮಾತ್ರ ಉಪಯೋಗವಾಗುತ್ತವೆ.  ಇದು ಕೇವಲ ಬೀದಿಯ ಈ ಉತ್ಸವಕ್ಕೆ ಸೀಮಿತವಲ್ಲ. ಇಂದು ಹಲವು ದೇವಲಾಯಗಳಲ್ಲೂ ಇದಕ್ಕೆ ಬೆಲೆ ಇಲ್ಲ. ದೇವರ ಎದುರೇ ಸತ್ಯ ಪ್ರಾಮಾಣಿಕತೆ ಮೂಲೆಗುಂಪಾಗುತ್ತದೆ.   ದುರ್ವರ್ತನೆ ದೌರ್ಜನ್ಯ ದೇವರ ಎದುರೇ  ಮೆರೆಯುತ್ತದೆ. ದೇವರ ದರ್ಶನಕ್ಕೆ ಸರದಿ ನಿಂತರೆ...ಅಲ್ಲಿ ನೂಕುವುದು ತಳ್ಳುವುದು ಅಸಹನೆ ತೋರಿಸುವುದು ಇದೆಲ್ಲ ಭಗವಂತನ ಸಾನ್ನಿಧ್ಯಕ್ಕೆ ಒಪ್ಪುವಂತಹುದಲ್ಲ.   ವೈಕುಂಠದಲ್ಲಿ ದ್ವಾರ ಪಾಲಕರಾದ ಜಯ ವಿಜಯರು ಮದೋನ್ಮತ್ತರಾಗಿ ಸಹನೆ ಕಳೆದುಕೊಂಡು ತಾಮಸೀ ಸ್ವಭಾವ ತೋರಿಸಿದಾಗ ಅವರು ಸ್ವಭಾವತಃ ರಾಕ್ಷಸರಾಗಿ ಹುಟ್ಟಿ ಬರಬೇಕಾಗುತ್ತದೆ. ಯಾಕೆಂದರೆ ಭಗವಂತನ ಸಾನ್ನಿಧ್ಯ ಎಂದಿಗೂ ಪವಿತ್ರ. ಅಲ್ಲಿ ಸುಳ್ಳು ವಂಚನೆ ಮೋಸ ಕಪಟ ಇವುಗಳಿಗೆ ಸ್ಥಾನವಿರುವುದಿಲ್ಲ. ಇವುಗಳು ಇದ್ದಲ್ಲಿ ಭಗವಂತನೂ ಇರುವುದಿಲ್ಲ.  ಆದರೆ ಇಂತಹ ಸೂಕ್ಷ್ಮ ವಿಷಯಗಳು ಪರಮ ಭಕ್ತಿ (!) ಯಿಂದ ಮಾಡುವ ಗಣೇಶೋತ್ಸವವನ್ನು ಆಚರಿಸುವಾಗ ಗಮನಾರ್ಹ ಎನಿಸುವುದಿಲ್ಲ. ಹಾಗಾದರೆ ಈ ಗಣೇಶೋತ್ಸವದ ತತ್ವವಾದರೂ ಏನು ಎಂದು ಆಶ್ಚರ್ಯವಾಗುತ್ತದೆ. ಇದನ್ನು ಆಚರಿಸುವ ಉದ್ದೇಶವಾದರೂ ಎನು? ಭಗವಂತನ ಅನುಗ್ರಹವೇ? ನಮ್ಮಲ್ಲೇನು ಇದೆಯೋ ಭಗವಂತ ಅದನ್ನೇ ಮತ್ತೆ ಜೋಡಿಸುತ್ತಾನೆ. ನಮ್ಮಲ್ಲಿರುವುದು ಸುಳ್ಳು ಮೋಸ ವಂಚನೆ ಈ ತಾಮಸಿ ಸ್ವಭಾವ. ಅದನ್ನೇ ಅನುಗ್ರಹಿಸಿದರೆ ನಾವು ತಾಮಸಿಗಳಾಗಿ ರಕ್ಕಸರಾಗಿಬಿಡುತ್ತೇವೆ.  

        ದೇವರ ಪೂಜೆಯ ಮೇಲೆ ಇರುವ ಶ್ರಧ್ಧಾ ಬಕ್ತಿ ..ಸತ್ಯ ಪ್ರಾಮಾಣಿಕತೆ  ಈ ವಿಷಯಗಳಲ್ಲೂ  ಇರಬೇಕಾಗಿರುವುದು ಭಗವಂತನ ಅನುಗ್ರಹಕ್ಕೆ ಅತ್ಯವಶ್ಯ. ನಮ್ಮ ಶ್ರಧ್ದಾ ಭಕ್ತಿಯೇ ಕಪಟವಾಗಿ ಅಲ್ಲಿ ಸುಳ್ಳು ಮೋಸ ವಂಚನೆ ಕಳ್ಳತನ ತುಂಬಿದ್ದರೆ ಅದು ದೇವರನ್ನು ಲೇವಡಿ ಮಾಡಿದಂತೆ, ಪರೋಕ್ಷವಾಗಿ ನಮ್ಮ ಧರ್ಮವನ್ನು ಸಂಸ್ಕೃತಿಯನ್ನು ನಾವೇ ಲೇವಡಿ ಮಾಡಿದಂತಾಗುತ್ತದೆ. ಮಾತೆತ್ತಿದ್ದರೆ ಧರ್ಮಕ್ಕೆ ಅವಮಾನ ಜಾತಿಗೆ ಅವಮಾನ ನಿಂದನೆ ಅಂತ ಹೋರಾಡುವ ನಾವು ಮತ್ತೊಂದು ಧರ್ಮವನ್ನು ತೆಗಳುತ್ತೇವೆ. ಆದರೆ ನಮ್ಮ ಧರ್ಮವನ್ನು ನಾಶ ಮಾಡುವುದಕ್ಕೆ ಪರಧರ್ಮ ಕಾರಣವಾಗುತ್ತದೋ ಇಲ್ಲವೋ ನಾವಂತೂ ನಮ್ಮ ಧರ್ಮವನ್ನು ಧರ್ಮದ ಆದರ್ಶವನ್ನೂ ನಾಶಮಾಡುತ್ತೇವೆ. ನಮ್ಮ ಧರ್ಮ ನಾಶವಾಗುವುದಕ್ಕೆ ಮತ್ತೊಂದು ಧರ್ಮ ಬೇಕಿಲ್ಲ. ನಮ್ಮ ಧರ್ಮದ ತತ್ವಗಳ ಬಗ್ಗೆ ಆದರ್ಶಗಳ ಬಗ್ಗೆ ನಮಗೇ ಶ್ರದ್ಧಾ ಭಕ್ತಿ ಗೌರವಗಳು ಇಲ್ಲದೇ ಇದ್ದರೆ ಮತ್ತೊಂದು ಧರ್ಮವನ್ನು ಆರೋಪಿಸುವ ನೈತಿಕತೆ ಇರುವುದಿಲ್ಲ. ಮತಾಂತರವೋ ಮತ್ತೋಂದೋ ಅದಕ್ಕೆ ಪರಧರ್ಮ ಕಾರಣವಾಗುವುದಿಲ್ಲ. ನಾವೇ ಕಾರಣರಾಗಿಬಿಡುತ್ತೇವೆ. 

ಮೊನ್ನೆ ಒಬ್ಬರ ಮನೆಗೆ ಹೋಗಿದ್ದೆ. ಯಾರೋ ಅಲ್ಲಿ ಯಜ್ಞೋಪವೀತ ಗೋಡೆಯ ಮೊಳೆಗೆ ನೇತು ಹಾಕಿದ್ದರು.  ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಖರ್ಚು ಮಾಡಿ ಉಪಾಕರ್ಮ ಮಾಡಿ ಹಾಕುವ ಯಜ್ಞೋಪವಿತ, ಹೆತ್ತ ತಂದೆಯಿಂದ ಬ್ರಹ್ಮ ತತ್ವ ದ ಉಪದೇಶವಾಗಿ ಧರಿಸಿದ ಜನಿವಾರದ ವಸ್ತು ಸ್ಥಿತಿ ಹೀಗಿರುತ್ತದೆ. ಇದನ್ನು ಯಾವ ಧರ್ಮದವರು ಮನೆಗೆ ಬಂದು ಉಪದೇಶ ಮಾಡುವುದಿಲ್ಲ.   ಬ್ರಹ್ಮೋಪದೇಶದ ಅರ್ಥ, ಅದರ ಉದ್ದೇಶ ಅದರ ಪಾವಿತ್ರ್ಯತೆಯ ಬಗ್ಗೆ ನಿರ್ಲಕ್ಷ್ಯ. ಅಂತರಂಗದಲ್ಲಿನ ಬ್ರಹ್ಮನನ್ನು ಅರಿಯುವುದೇ ಬದುಕಿನ ಪರಮೋಚ್ಚ ಸಾಧನೆ. ಆದರೆ ವಾಸ್ತವ ಹಾಗಿಲ್ಲ.  ನಮ್ಮ ಜನನ ಬದುಕು ಇದರ ಪರಮಾರ್ಥದ ಅರಿವಿದ್ದರೆ ಹೀಗೆ ಮಾಡುವುದಿಲ್ಲ.  ಬ್ರಹ್ಮ ಪದ ಇವುಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ. ಅದರ ಬಗ್ಗೆ ಗೌರವ ಇಲ್ಲ. ಇದಕ್ಕೆ ಕಾರಣ ಯಾವುದೋ ಧರ್ಮ ವಲ್ಲ. ಅದಕ್ಕೆ ನಾವೇ ಕಾರಣರು.  ಧರ್ಮ ಎಂದರೆ ಹುಟ್ಟಿನಿಂದ ಒದಗಿ ಬರುತ್ತದೆ. ಅದು ಯಾವ ಧರ್ಮವಾದರೂ ಅದು ಹೆತ್ತ ತಂದೆ ತಾಯಿ ಇದ್ದಂತೆ. ನಮ್ಮ ಹೆತ್ತವರನ್ನು ಮೊದಲು ನಾವೇ ಗೌರವಿಸಬೇಕು. ಹಾಗಿದ್ದರೆ ಊರಿನ ಗೌರವದ ಬಗ್ಗೆ ಹೇಳಬಹುದು. ನಾವೇ ಕಡೆಗಣಿಸಿದರೆ ಊರವರಿಗೆ ಹೇಳುವ ಯಾವ ಹಕ್ಕೂ ಇರುವುದಿಲ್ಲ. ನಮ್ಮ ಮನೆಯ ಬಾಗಿಲಿನ ಚಿಲಕ ಸರಿ ಇಲ್ಲದಿರುವುದಕ್ಕೆ ನಾವು ಮತ್ತೊಬ್ಬರನ್ನು ಕಳ್ಳನಾಗಿ ಚಿತ್ರಿಸುತ್ತೇವೆ. 

ಧರ್ಮಾಚರಣೆ ಆದರ್ಶಮಯವಾಗಿರಬೇಕು. ಅದರ ಅನುಸರಣೆಯಿಂದ ಗೌರವ ತರಿಸಬೇಕು. ಗಣೇಶೋತ್ಸವ ಅನುಕರಣೀಯವಾಗಿ ಗೌರವ ಯುತವಾಗಿ ನಡೆಸುವ ಹಾಗಿದ್ದರೆ ಪ್ರತಿಯೊಬ್ಬರಿಗೂ ಅದರ ಮೇಲೆ ಗೌರವ ಮೂಡುತ್ತದೆ. ಆದರೆ ಹಾಗಿಲ್ಲ ಎಂದು ನೋಡುವಾಗ ಅರ್ಥವಾಗುತ್ತದೆ. ದೇವರ ಹೆಸರಲ್ಲಿ ಸ್ವಾರ್ಥ ಸಾಧನೆ. ದೇವರ ಹೆಸರಲ್ಲಿ ವ್ಯಾಪಾರ. ದೇವರನ್ನೇ ಮಾರಾಟಕ್ಕೆ ಇಟ್ಟಹಾಗೆ ದೇವತಾರಾಧನೆ. ಯಾರ ತೃಪ್ತಿಗಾಗಿ ಅಂತ ಯೋಚಿಸಬೇಕಾಗುತ್ತದೆ. ಹೆಚ್ಚಿನ ಕಾರ್ಯಕ್ರಮಗಳು ತೊಂದರೆ ಕೊಟ್ಟು ಅದನ್ನು ಅನುಭವಿಸುವುದೇ ದೈವ ಕೃಪೆ ಎಂದುಕೊಂಡಂತೆ ಇದೆ. ಸರ್ವೇ ಜನಾ ಸುಖಿನೋಭವಂತು  ಅಂತ ಹೇಳುವ ನಾವು ಯಾರ ಸುಖವನ್ನು ಬಯಸುತ್ತೇವೆ ಎಂಬುದು ಆಶ್ಚರ್ಯವಾಗುತ್ತದೆ. ವಸ್ತುವಿನ ಮೌಲ್ಯ ನಿರ್ಧಾರವಾಗುವುದು ಅದಕ್ಕೆ ಗ್ರಾಹಕರು ಒದಗಿ ಬರುವಾಗ. ಹಾಗೇ ತತ್ವಗಳು ಗೌರವಿಸಲ್ಪಡುವುದು ಅವುಗಳನ್ನು ಅನುಸರಿಸಿದಾಗ.  ಅನುಸರಿಸುವುದನ್ನು ಬಿಟ್ಟು ತತ್ವ ಉಪದೇಶಕ್ಕೆ ಮಾತ್ರ ಸೀಮಿತವಾಗಿದೆ. 


Wednesday, October 2, 2024

ಒಂದು ದೆವ್ವದ ಕಥೆ

             ರಾಮಣ್ಣ ಆಚೆಕೆರೆಯಿಂದ ರಾತ್ರಿ ಹೊರಡುವ ಕೊನೆಯ ಬಸ್ಸಿನಲ್ಲಿ ಬಂದು ಸಂಜೆ ಕಟ್ಟೆ ಬಸ್ ಸ್ಟಾಪ್ ನಲ್ಲಿ ಇಳಿಯುವಾಗ ಅಬ್ಬಾಸ್ ಬ್ಯಾರಿಯ ಅಂಗಡಿಯಲ್ಲಿ ಇನ್ನೂ ಪೆಟ್ರೋ ಮ್ಯಾಕ್ಸ್ ಉರಿಯುತ್ತಾ ಇತ್ತು. ಗಾಳಿ ಕಡಿಮೆಯಾಗಿ ಅದರಲ್ಲಿ ಪುಕು ಪುಕು ಜ್ವಾಲೆ ಹೊರಗೆ ಬರುತ್ತಿತ್ತು.  ಅಲ್ಲೇ ಜಗಲಿಯಲ್ಲಿದ್ದ ಬೆಂಚ್ ನಲ್ಲಿ ಕುಳಿತು ಗೋಳಿಯಡ್ಕದ ಸೋಮಣ್ಣ,  ಪಕ್ಕದ ಶಾಲೆಯ ಪಿಯೋನ್ ಮೋನಪ್ಪ, ಕಂಟ್ರಾಕ್ಟರ್ ಮೂಸೆ ಕೂಲಿ ಕೆಲಸಕ್ಕೆ ಹೋಗುವ ಗುರುವ ಹೀಗೆ ನಾಲ್ಕೈದು  ಮಂದಿ ಎಂದಿನಂತೆ ಲೊಟ್ಟೆ ಹೊಡೆಯುತ್ತಿದ್ದದ್ದು ಕಂಡಿತು. ಪಕ್ಕದ ಸೋಜರ ಗೂಡಂಗಡಿ ಇನ್ನೇನು ಬಾಗಿಲು ಹಾಕಿ ದನ ಒಳಬಾರದಂತೆ ಕಟ್ಟಿದ ಹಗ್ಗದ ಬೇಲಿಯನ್ನು ಇಳಿಬಿಟ್ಟು ಹೊರಡುವವನಿದ್ದ. ರಾಮಣ್ಣನಿಗೆ ಹೊಗೆಸೊಪ್ಪು ನೆನಪಾಗಿ ಸೋಜರೆ ಅಂತ ಕೂಗಿ ಕರೆದು ಹೋಗಿ ಹೊಗೆಸೊಪ್ಪು ಕೇಳಿದ. ಸೋಜರು ಪುನಃ ಬಾಗಿಲು ತೆಗೆದು ಟಾರ್ಚ್ ಲೈಟಿನ ಬೆಳಕಿನಲ್ಲಿ ಹಾಳೆಯಲ್ಲಿ ಕಟ್ಟಿದ ಕುಣಿಯ ಹೊಗೆಸೊಪ್ಪು ತೆಗೆದು ಕಟ್ಟಿ ಕೊಟ್ಟರು. ಅಲ್ಲೇ ಆತನಲ್ಲಿ ಬೀಡದ ತಟ್ಟೆಯನ್ನು ಪಡೆದು ಎಲೆ ತಾಂಬೂಲ ಹಾಕಿ ಕುಣಿಯ ಹೊಗೆಸೊಪ್ಪನ್ನು ಬೆರಳಿನ ತುದಿಯಲ್ಲಿ ಹರಿದು ಬಾಯಲಿಟ್ಟು ರಸ ಹಿಂಡಿದಾಗ ಅದುವರೆಗೆ ಜಡ ಹಿಡಿದ ಮನಸ್ಸು ಚುರುಕಾಯಿತು.  ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಾಗ ಹೆಂಡತಿ ಹೆಸರು ಕಾಳು ಬೆಲ್ಲ ಸಕ್ಕರೆ ಹೀಗೆ ಕೆಲವು ಸಾಮಾನು ಹೇಳಿದ್ದು ನೆನಪಾಯಿತು. ಹಾಗೇ ಅಬ್ಬಾಸ್ ಬ್ಯಾರಿಯ ಅಂಗಡಿಗೆ ಬಂದು ನಿಂತ. 

ಅಬ್ಬಾಸ್ ಬ್ಯಾರಿ ಅಲ್ಲಿದ್ದವರೊಂದಿಗೆ ಪಟ್ಟಾಂಗ ಹೊಡೆಯುತ್ತಾ ಕೆಲವರ ಸಾಲದ ಲೆಕ್ಕ ಬರೆಯುತ್ತ ಕುಳಿತಿದ್ದ. ಅಲ್ಲಿ ಸ್ವಾರಸ್ಯಕರ ಮಾತುಕತೆ ಕಿವಿಗೆ ಬಿತ್ತು. ಕಳೆದ ವಾರ ರಾತ್ರಿ ಕಂಟ್ರಾಕ್ಟರ ಜತೆಗೆ ಕೆಲಸಕ್ಕೆ ಹೋಗುತ್ತಿದ್ದ ರಹೀಂ ದೆವ್ವ ಕಂಡ ಕಥೆ ಮಾತುಕತೆಯಾಗುತ್ತಿತ್ತು. ರಾಮಣ್ಣನ ಕಿವಿ ಚುರುಕಾಯಿತು. ಕಥೆ ಬಹಳ ಸ್ವಾರಸ್ಯವಾಗಿತ್ತು.  ದೆವ್ವ ಅದೂ ಈ ಕಾಲದಲ್ಲಿ. ಅಂತ ಅನುಮಾನ ಬಂದು ಹುಬ್ಬೇರಿಸಿದರೆ, ಬರೆಯುವ ಪುಸ್ತಕದಿಂದ ತಲೆ ಎತ್ತಿ ಅಬ್ಬಾಸ್ ಬ್ಯಾರಿಯೂ ದ್ವನಿ ಸೇರಿಸಿದರು. ಅದಕ್ಕೆ ಸಾಕ್ಷಿಯಾಗಿರುವ ಏಕೈಕ ವ್ಯಕ್ತಿ ಎಂದರೆ ಅದು ಅಬ್ಬಾಸ್ ಬ್ಯಾರಿ.

ಅಂದು ಮಂಗಳವಾರ ಯಾವುದೋ ಕೆಲಸಕ್ಕೆ ಹೋಗಿದ್ದ ರಹೀಂ ಅಂದು ರಾತ್ರಿ ಯಾವುದೋ ಕೆಲಸ ಮುಗಿಸಿ ಬರುವಾಗ ನಡು ರಾತ್ರಿ ಕಳೆದಿತ್ತು. ಹಾಗೇ ನಡೆದು ಕೊಂಡು ಬಂದಿದ್ದ.  ಸಂಜೆ ಕಟ್ಟೆಯ ಬಸ್ ಸ್ಟಾಪ್ ಗಿಂತ ಮೊದಲು ರಸ್ತೆಗೆ  ಒಂದು  ದೊಡ್ಡ ತಿರುವು ಇದೆ. ಆ ತಿರುವಿಗಿಂತ ಮೊದಲು ಜತೆಯಲ್ಲೇ ಬಂದ ಈಶ್ವರ ಈತನ ಜತೆ ಬಿಟ್ಟು ತನ್ನ ಮನೆಯ ದಾರಿಗೆ ತಿರುಗಿದ್ದ. ಆನಂತರ ಈತ ಒಬ್ಬನೇ ಆಗಿ ರಸ್ತೆಯ ತಿರುವಿನ ಮತ್ತೊಂದು ತುದಿಗೆ ಬಂದಿದ್ದ. ತಿರುವಿನಲ್ಲಿ ಸಾಕಷ್ಟು ಮರಗಳು ಇದ್ದ ಕಾರಣ ಆಕಡೆ ಹುಣ್ಣಿಮೆಯ  ಚಂದಿರನ ಬೆಳಕಿದ್ದರೂ ಅಲ್ಲಿ ಕತ್ತಲೆ ಇತ್ತು.  ತಿರುವಿನ ಬಲಭಾಗದಲ್ಲಿ ಎತ್ತರದ ಗುಡ್ಡ ಇದ್ದರೆ ಎಡ ಭಾಗದಲ್ಲಿ ದೊಡ್ಡ ಕಂದಕವಿತ್ತು. ಇನ್ನೇನು ತಿರುವು ಮುಗಿಯಬೇಕು ಎನ್ನುವಾಗ ಗುಡ್ಡದ ತುದಿಯಿಂದ ಕಂದಕದ ಕಡೆಗೆ ಯಾರೋ ಸರಿಯುವಂತೆ ಕಂಡಿತು. ಯಾರದು ಈ ಹೊತ್ತಿನಲ್ಲಿ? ಅದೂ ನಿರ್ಜನ ಪ್ರದೇಶದಲ್ಲಿ. ಮತ್ತೂ ಆಕಡೆ ನೋಡಿದರೆ ಕೇವಲ ನೆರಳು ಮಾತ್ರ ಅತ್ತಿಂದ ಇತ್ತ ಇತ್ತಿಂದ ಅತ್ತ ಚಲಿಸಿದಂತೆ ಭಾಸವಾಯಿತು. ನೀರವ ಮೌನದಲ್ಲಿ ಗಾಳಿಯ ಸದ್ದು ಬಿಟ್ಟರೆ ಬೇರೇನೂ ಇರಲಿಲ್ಲ. ಮತ್ತೂ ಗಮನಿಸಿ ನೋಡಿದರೆ ನೆರಳು ದೂರ ಸರಿದಂತೆ ಭಾಸವಾಯಿತು. ಅಷ್ಟೇ ರಹೀಂ ಯಾ ಅಲ್ಲಾ ಅಂತ ಒಂದೇ ಅರ್ತನಾದದಲ್ಲಿ ಬೊಬ್ಬೆ ಹೊಡೆಯುತ್ತ ಓಡಿದ.  ದೊಡ್ಡ ತಿರುವು ಕಳೆದರೆ  ಅಬ್ಬಾಸ್ ಬ್ಯಾರಿಯ  ಮನೆ.  ಆ ಮನೆಯ ಕಂಪೌಂಡ್ ಹಾರಿ ಮನೆಯ ಬಾಗಿಲನ್ನು ದಬ ದಬ ಬಡಿದ. ಅಬ್ಬಾಸ್ ಬ್ಯಾರಿ ಗಾಬರಿ  ಯಿಂದ ಎದ್ದು ನೋಡಿದರೆ ರಹೀಂ ಗಡ ಗಡ ನಡುಗುತ್ತ ದೊಡ್ಡ ಕಣ್ಣು ಬಿಡುತ್ತ ನಿಂತಿದ್ದ. ಮೈಯೆಲ್ಲ ಬೆವತಿತ್ತು. ಒಂದು ಬಾರಿ ಅಬ್ಬಾಸ್ ಬ್ಯಾರಿಗೂ ಭಯವಾಯಿತು. ನಂತರ ಸಾವರಿಸಿ ಆತನನ್ನು ಒಳಗೆ ಕರೆದು ನೀರುಕೊಟ್ಟು...ಕೂರಿಸಿ ಅಲ್ಲಾ ನನ್ನು ಪ್ರಾರ್ಥಿಸಿದ. ನೀರು ಕುಡಿದವನೇ ಮೊಯಿದು ಕುಸಿದು ಕುಳಿತು ನಂತರ ಅಲ್ಲಿಗೇ ನಿದ್ರೆಗೆ ಜಾರಿದ. ಮರುದಿನ ಮುಂಜಾನೆ ನೋಡಿದರೆ ರಹೀಂಗೆ ಜೋರು ಜ್ವರ. ಆತನ ಮನೆಗೆ ಜನ ಕಳುಹಿಸಿ ಆತನ ಹೆಂಡತಿಯನ್ನು ಕರೆಸಿದ್ದ. ಆನಂತರ ರಹೀಂನನ್ನು ವೈದ್ಯರಲ್ಲಿಗೆ ಕರೆದೊಯ್ದು ಮನೆಯವರೆಗೆ ಜೀಪು ಮಾಡಿ ಕಳುಹಿಸಿದ್ದ.  ಹಾಗೆ ಹೋದ ರಹೀಂನ  ಜ್ವರ ಇನ್ನೂ ಬಿಟ್ಟಿಲ್ಲ.  

ರಾಮಣ್ಣನಿಗೆ ಒಂದು ಸಲ ಗಾಬರಿಯಾಯಿತು. ನಂತರ...ಸಮಾಧಾನ ಮಾಡಿಕೊಂಡ ಏನು ಕಂಡು ಹೆದರಿದನೋ ದೇವರೇ ಬಲ್ಲ. ಆ ತಿರುವಿನಲ್ಲಿ ಹಿಂದೆ ಯಾರೋ ಮರಕ್ಕೆ ನೇತಾಡಿ ಆತ್ಮ ಹತ್ಯೆ ಮಾಡಿಕೊಂಡ ಕಥೆ ಇತ್ತು. ಈಗ ಇದು ವರ್ಣ ರಂಜಿತವಾಗಿ ಆ ಕಥೆಯ ಜತೆಗೆ ಈ ಕಥೆಯೂ ಸೆರಿಕೊಂಡಿತು. ರಾಮಣ್ಣ ಹೇಳಿದ ನಿಮಗೆಲ್ಲ ಮರ್ಲ್...ಇದನ್ನೆಲ್ಲ ನಂಬುವುದಾ? 

ಆಗ ಪೀಯೋನ್ ಮೋನಪ್ಪ ಆತನ ಊರಿನಲ್ಲಿ ನಡೆದ ಇನ್ನೊಂದು ಕಥೆ ಹೇಳಿದ. ಆತ ಕೆಲಸಕ್ಕೆ ಇದ್ದ  ಶಾಲೆಯಲ್ಲಿ ಯಾರೋ ರಾತ್ರಿ ಪಡ್ಡೆ ಹುಡುಗರು ಸೇರಿಕೊಂಡು ದೆವ್ವ ಕಂಡು ಹೆದರಿದ್ದರು. ಇದು ಸುದ್ದಿಯಾಗುತ್ತಿದ್ದಂತೆ ಊರವರು ಎರಡು ದಿನ ಶಾಲೆಗೆ ಮಕ್ಕಳನ್ನು ಕ್ಕಳುಹಿಸಿರಲಿಲ್ಲ. ನಂತರ ಊರ ಭೂತಕ್ಕೆ ಹರಕೆ ಹಾಕಿ ಪ್ರಾರ್ಥನೆ ಮಾಡಿದ ನಂತರ ಮಕ್ಕಳು ಶಾಲೆಗೆ ಬರುವುದಕ್ಕೆ ಆರಂಭಿಸಿದ್ದರು.

. ಅಬ್ಬಾಸ್ ಬ್ಯಾರಿಯಲ್ಲಿ ಬೇಕಾದ ಸಾಮಾನಿನ ಪಟ್ಟಿ ಒಪ್ಪಿಸಿದ. ಅಕ್ಕಿ ಬೆಲ್ಲ ಹೆಸರು ಕಾಳು ಸಕ್ಕರೆ ಚಹಪುಡಿ, ಹೆಂಡತಿ ಹೇಳಿದ್ದರಲ್ಲಿ ನೆನಪಾದವುಗಳನ್ನು ಕಟ್ಟಿಸಿದ. ಆದರೆ ಎಲ್ಲವನ್ನು ಒಯ್ಯುವುದಕ್ಕೆ ಚೀಲ ತಂದಿರಲಿಲ್ಲ. ಅಬ್ಬಾಸ್ ಬ್ಯಾರಿಯಲ್ಲಿ ಚೀಲ ಕೇಳಿದರೆ ಬ್ಯಾರಿ ಇಲ್ಲ ಅಂತ ತಲೆ ಆಡಿಸಿದ. ಕೊನೆಗೆ ಹೆಗಲಲ್ಲಿದ್ದ ಬೈರಾಸು ಹಾಸಿ ಎಲ್ಲ ಸಾಮಾನು ಅದರಲ್ಲಿ ಇಟ್ಟು ಬಿಗಿಯಾಗಿ ಒಂದು ಗಂಟು ಮೂಟೆ ಕಟ್ಟಿ ತಲೆಯಲ್ಲಿಟ್ಟುಕೊಂಡ.  ಹಾಗೆ ತಾಂಬೂಲ ಜಗಿದುಕೊಂಡು ರಸ್ತೆಗೆ ಇಳಿದ. 

ಬಸ್ ಸ್ಟಾಪ್ ನ ಮತ್ತೊಂದು ದಿಕ್ಕಿಗೆ ಒಂದು ರಸ್ತೆ ಕೆಳಗಿನ ಬಯಲಿಗೆ ಕವಲು ಹೊಡೆಯುತ್ತದೆ. ದೂರದ ಊರಿಗೆ ಹೋಗುವ ರಸ್ತೆಯದು. ಆ ರಸ್ತೆಯಲ್ಲಿ ಒಂದು  ಬಸ್ಸು ಸಂಚರಿಸುತ್ತದೆ. ಇಂದು ಅದೇ ಬಸ್ಸು ತಪ್ಪಿ ಹೋಗಿದ್ದರಿಂದ ಮನೆಗೆ ನಡೆದೇ ಹೋಗುವ ಅನಿವಾರ್ಯತೆ ಒದಗಿಬಂದಿತು.  ಹಾಗಾಗಿ ಅದೆ ರಸ್ತೆಯಲ್ಲಿ ಒಂದು ಮೈಲಿ ನಡೆದರೆ  ಎರಡು ತಿರುವು ದಾಟಿದಾಗ ರಾಮಣ್ಣನ ಮನೆಗೆ ಇಳಿಯುವ ಗುಡ್ಡದ ದಾರಿ ಸಿಗುತ್ತದೆ. ಇದು ಹತ್ತಿರದ  ಅಡ್ಡದಾರಿ.   ಎರಡು ಗುಡ್ಡದ ನಡುವಿನ ಕಾಲು ಹಾದಿ. ಸುತ್ತಲೂ ಗಿಡ ಮರಗಳ ಕಾಡು ಹಾದಿಯದು. ಬಸ್ಸು ತಪ್ಪಿತಲ್ಲಾ ಎಂಬ ಆತಂಕದಲ್ಲೇ ಹೆಜ್ಜೆ ಹಾಕುತ್ತ ಒಬ್ಬನೇ ನಡೆದ. ಕೈಯಲ್ಲಿದ್ದ ಟಾರ್ಚ್ ಲೈಟ್ ನಲ್ಲಿ ಮಂದವಾದ ಬೆಳಕು ಬೀಳುತ್ತಿತ್ತು.  ಎರಡು ತಿರುವು ದಾಟಿ ರಸ್ತೆ ಬಿಟ್ಟು ಕಾಲು ಹಾದಿಗೆ ಇಳಿದರೆ ಅಲ್ಲೊಂದು ತೋಡು ಸಿಗುತ್ತದೆ. ಅದರ ಚಿಕ್ಕ ಸಂಕವನ್ನು ದಾಟಿ ಮತ್ತೂ ಮುಂದಕ್ಕೆ ಬಂದ ರಾಮಣ್ಣ. ಹೊರಗೆ ಕಪ್ಪು ಕತ್ತಲೆ ಚೀರುಂಡೆ ಕೀಟಗಳ ಸದ್ದು ಬಿಟ್ಟರೆ ಬೇರೆ ಎಲ್ಲ ನೀರವ ಮೌನ.

ಬೇಗ ಬೇಗ ಹೆಜ್ಜೆ ಎತ್ತಿ ಇಡುತ್ತಾ ಮುಂದೆ ಬರುತ್ತಿದ್ದ ರಾಮಣ್ಣ ದಾರಿಯಲ್ಲೆ ಇದ್ದ ದೊಡ್ಡ ಹುಳಿಯ ಮರದ ಬುಡದ ಬಳಿಗೆ ಬರುವಾಗ ಮರದ ಬೇರು ತಾಗಿ ಎಡವಿ ಬೀಳುವಂತಾಗಿ ಸಾವರಿಸಿಕೊಂಡ. ಮತ್ತೂ ಎರಡು ಮುಂದೆ ಬಂದಾಗ ಹಿಂದೆ ಏನೋ  ಚರಪರ ಸದ್ದಾಯಿತು. ಹಿಂತಿರುಗಿ ಲೈಟ್ ಬೆಳಕನ್ನು ಹಾಯಿಸಿದ. ಏನೂ ಕಾಣಿಸಲಿಲ್ಲ. ಎನಿಲ್ಲ ಎಂದು ಕೊಂಡು ಮತ್ತೂ ಒಂದೆರಡು ಹೆಜ್ಜೆ ಮುಂದೆ ಇಟ್ಟ. ಈಗ ಚರಪರ ತರಗೆಲೆ ಸದ್ದು ಸ್ವಲ್ಪ ಜೋರಾಗಿ ಕೇಳಿಸಿತು. ಯಾರೋ ಹಿಂಬಾಲಿಸಿದಂತೆ ಅನಿಸಿ ಮತ್ತೆ ತಿರುಗಿ ನೋಡಿ "ಏರ್....?" (ಯಾರು ಅಂತ ಆತಂಕದಿಂದಲೇ ಕೇಳಿದ.   ಇಲ್ಲ ಯಾವ ಪ್ರತಿಕ್ರಿಯೆಯೂ ಇಲ್ಲ. ಆದರೆ ಆತನಿಗೆ ಗೊತ್ತಿತ್ತು. ಶಬ್ದ ಮಾತ್ರ ಜೋರಾಗಿ ಕೇಳಿಸಿತ್ತು. ಮತ್ತೂ ಭ್ರಮೆ ಏನೋ ಅಂದುಕೊಂಡು ಮತ್ತೂ ಒಂದೆರಡು ಹೆಜ್ಜೆ ಮುಂದಿರಿಸಿದ. ಆಗಲೂ ತರೆಗೆಲೆ ಸದ್ದು ಮಾಡಿತು. ಈ ಬಾರಿ ಮಾತ್ರ ರಾಮಣ್ಣ ಗಾಬರಿಗೊಂಡ. ಕೈಕಾಲಿನಲ್ಲಿ ಅರಿವಿಲ್ಲದೇ ನಡುಕ ಬಂತು. ಆದರೂ ಧೈರ್ಯ ತಂದುಕೊಂಡು ತಿರುಗಿ ಲೈಟ್ ಹಾಯಿಸಿದರೆ...ಇಲ್ಲ.  ಯಾರೂ ಇಲ್ಲ.  ಈಗ ತುಸು ಭಯ ಆವರಿಸಿತು. ಬೇಗ ಹೋಗಿ ಬಿಡುವ ಅಂತ ವೇಗವಾಗಿ ದಾಪುಗಾಲು ಇಟ್ಟು ಓಡುವುದಕ್ಕೆ ತೊಡಗಿದ. ಸಂಶಯವಿಲ್ಲ. ಈಗ ಮತ್ತೂ  ಶಬ್ದ ಜೋರಾಯಿತು.  ಜೋರಾದಂತೆ ಆತಂಕ ಹೆಚ್ಚಾಯಿತು. ಈತ ವೇಗವಾಗಿ ಓಡುವುದಕ್ಕೆ ತೊಡಗಿದ. ಯಾರು ಯಾರು ಅಂತ ಕೇಳಿದ. ಕೇಳಿದ್ದಲ್ಲ ಅಕ್ಷರಶಃ ಕಿರುಚಿ ಓಡುವುದಕ್ಕಾರಂಭಿಸಿದ. ಮನೆಗೆ ಇನ್ನೂ ಅರ್ಧ ಘಂಟೆ ನಡೆಯಬೇಕಿತ್ತು. ಎದ್ದೆನೋ ಬಿದ್ದೇನೋ ಅಂತ ಓಡುವುದಕ್ಕೆ ತೊಡಗಿದ. ಈತ ಹೆಜ್ಜೆ ಎತ್ತಿಡುತ್ತಾ ಓಡುತ್ತಿದ್ದಂತೆ ಹಿಂದೆ ಯಾರೋ ಹಿಂಬಾಲಿಸಿದಂತಾಗಿ ಮತ್ತೂ ಓಡುತ್ತ ಓಡುತ್ತ ಮುಂದೆ ಬಂದ. ಇನ್ನುಅ ಒಂದು ಗುಡ್ಡ ದಾಟಿ ಕೆಳಗಿಳಿದರೆ ಮತ್ತೆ ಬಯಲು ಅಡಕೆ ತೋಟ ಸಿಗುತ್ತದೆ. ಹಾಗೆ ತೋಟದ ಹತ್ತಿರ ಬರಬೇಕು. ಇನ್ನೇನು ತುಸುದೂರ ಮನೆಗೆ ತಿರುಗಿ ನೋಡುವುದಕ್ಕೆ ಭಯ. ಆದ್ರೆ ಕಾಲಿನಲ್ಲಿ ಶಕ್ತಿಯೇ ಇಲ್ಲ. ಮೈಯೆಲ್ಲ ಬೆವರಿನಿಂದ ಒದ್ದೆಯಾಗಿತ್ತು.

ಓಡುತ್ತ ಓಡುತ್ತ ಮನೆಯ ಅಂಗಳಕ್ಕೆ ಬಂದವನೆ ಜಗಲಿಗೆ ಹಾರಿ ಏದುಸಿರು ಬಿಡುತ್ತಾ ಬಾಗಿಲನ್ನು ದಬ ದಬ ಬಡಿದ. ಹೆಂಡತಿ ಬಂದು ಬಾಗಿಲು ತೆರೆದರೆ ರಾಮಣ್ಣ ಗಡ ಗಡ ನಡುಗುತ್ತ ನಿಂತಿದ್ದಾನೆ. ತೆಲೆಯಲ್ಲಿದ್ದ ಗಂಟು ಅಲ್ಲೇ ಕೆಳಗೆ ಕುಕ್ಕಿ ಮನೆಯ ಒಳಗೆ ಬಂದು ಕುಸಿದು ಕುಳಿತ.  ಹೆಂಡತಿ ನೀರು ಕುಡಿಯಲು ಕೊಟ್ಟು ಉಪಚರಿಸಿದಳು. ಯಾಕೆ ಏನಾಯಿತು ಎಂದು ಕೇಳಿದರೆ ಉತ್ತರಿಸುವ ಸ್ಥಿತಿಯಲ್ಲಿ ರಾಮಣ್ಣನಿಲ್ಲ. ಹಾಗೇ ಎದ್ದು ಹೋಗಿ ಮಂಚದ ಮೇಲೆ ಮಲಗಿಬಿಟ್ಟ.  ಹೆಂಡತಿಗೆ ಗಾಬರಿ. ಆ ರಾತ್ರಿ ಹೊತ್ತಿನಲ್ಲಿ ಏನು ಮಾಡುವುದು ಎಂದು ತೋಚದೆ ದೇವರ ಮುಂದೆ ಕೈ ಮುಗಿದು ಪ್ರಾರ್ಥಿಸಿದಳು. ಗಂಡನನ್ನು ಊಟ ಮಾಡುವಂತೆ ಕೇಳೋಣ ಎಂದರೆ ಆತ ಮಲಗಿದವನು ಏಳಲಿಲ್ಲ. ಕೊನೆಗೆ ತಾನೂ ಪಕ್ಕದಲ್ಲೇ ಮಲಗಿದಳು. 

ಮರುದಿನ ಬೆಳಗ್ಗೆ ರಾಮಣ್ಣನಿಗೆ ಎಚ್ಚರವಾದಾಗ ಬಹಳಷ್ಟು ಹೊತ್ತು ಸರಿದಿತ್ತು. ಹೆಂಡತಿ ಯಾವುದೋ ಕೆಲಸದಲ್ಲಿದ್ದಳು. ರಾಮಣ್ಣ ಮಲಗಿದಲ್ಲಿಂದಲೇ ಹೆಂಡತಿಯನ್ನು ಕರೆದ. ಆಕೆ ಬಂದು ಗಂಡನ ತಲೆ ಮುಟ್ಟಿ ನೋಡಿದಳು ಜ್ವರದ ಬಿಸಿ ಏರಿತ್ತು. ಆಕೆ ಆತಂಕದಿಂದಲೇ ಆಸ್ಪತ್ರೆಗೆ ಹೋಗೋಣ ಅಂತ ಗೋಗರೆದಳು. ಆದರೆ ಆತನಿಗೆ ಏಳುವ ಮನಸ್ಸೇ ಇಲ್ಲ. ಶರೀರವಿಡೀ ಕಂಪಿಸುತ್ತದೆ. ಹಾಗೇ ಮಲಗಿಕೊಂಡೇ ಇದ್ದ. ಹಾಗೇ ಆಯಾಸವಾದಂತಾಗಿ ನಿದ್ದೆಯ ಮತ್ತು ಇನ್ನೂ ಬಿಡಲಿಲ್ಲ. ಹೆಂಡತಿ ಬಟ್ಟೆಯ ಗಂಟನ್ನು ಹತ್ತಿರ ತಂದು ಗಂಡನಲ್ಲಿ ಕೇಳಿದಳು...."ನಿನ್ನೆ ಏನಾಯಿತು?  ಎಲ್ಲಾದರೂ ಬಿದ್ದು ಬಂದಿರಾ? ತಂದ ಸಾಮಾನಿನಲ್ಲಿ ಹೆಸರು ಕಾಳು ಕಟ್ಟಿದ ತೊಟ್ಟೆ ಒಡೆದು ಕಾಳು ಎಲ್ಲ ಚೆಲ್ಲಿ ಹೋಗಿದೆ. ಏನಾಯಿತು?"

ಅಷ್ಟು ಕೇಳಿದ್ದೇ ತಡ ರಾಮಣ್ಣ ತಟ್ಟನೇ ಎದ್ದು ಕುಳಿತ. ಭಯದಿಂದ ಕಂಪಿಸುವವನು ಎದ್ದು ಬಂದು ತಂದ ಸಾಮಾನಿನ ಕಟ್ಟುಗಳನ್ನೆಲ್ಲ ನೋಡಿದ. ಹೌದು ಹೆಸರು ಕಾಳಿನ ಕಟ್ಟು ದೊಡ್ಡ ತೂತಾಗಿತ್ತು. ಅಷ್ಟೇ ರಾಮಣ್ಣನಿಗೆ ಹಿಂದಿನ ರಾತ್ರಿಯ ಘಟನೆ ಜ್ಞಾಪಕಕ್ಕೆ ಬಂತು. ನಡೆದ ಘಟನೆಯನ್ನು ಒಂದೊಂದಾಗಿ ನೆನಪಿಗೆ ಬರುತ್ತಿದ್ದಂತೆ  ಎರಿದ ಜ್ವರ ಜರ್ರನೆ ಇಳಿದು ಬಿಟ್ಟಿತು.. ತಲೆಯಲ್ಲಿ ಹೊತ್ತುಕೊಂಡಿದ್ದ ಸಾಮಾನುಗಳ ಕಟ್ಟಿನಲ್ಲಿ ಹೆಸರಿನ ಕಾಳಿನ ಕಟ್ಟು ಒಡೆದು ತೂತಾಗಿ ಆ ತೂತಿನಿಂದ ಕಾಳುಗಳು ಚೆಲ್ಲಿ ಸೋರಿ ಹೋಗಿತ್ತು. ಕಾಳು ತರಗೆಲೆಯಲ್ಲಿ  ಬಿದ್ದ ಸದ್ದಿಗೆ ತರಗೆಲೆ ಸದ್ದು ಮಾಡಿತ್ತು. ಅದು ಯಾರೋ ಹಿಂಬಾಲಿಸುವ ಭ್ರಮೆಯನ್ನು ಹುಟ್ಟಿಸಿತ್ತು. ರಾಮಣ್ಣನಿಗೆ ನಡೆದ ಘಟನೆ ಏನೆಂದು ಈಗ ಅರಿವಿಗೆ ಬಂತು. ಹಿಂದಿನ ರಾತ್ರಿಯ ಭಯ ನೆನೆದು ಜೋರಾಗಿ ನಗು ಬಂತು.ಹೆಸರು ಕಾಳು ತರಗೆಲೆಯಲ್ಲಿ ಬಿದ್ದ ಸದ್ದು ದೆವ್ವದ ಹೆಜ್ಜೆಯಾಗಿ  ಅದೇ  ಭ್ರಮೆ ಆವರಿಸಿತ್ತು. ದೆವ್ವವೇ ಹಿಂಬಾಲಿಸಿದಂತೆ ರಾಮಣ್ಣ ಭಯಗೊಂಡಿದ್ದ. ಹೆಸರು ಕಾಳಿನ ಭೂತ ಹೊಸ ಕಥೆಯನ್ನು ಸೃಷ್ಟಿ ಮಾಡಿತ್ತು.