Saturday, March 22, 2025

ಪಾಜಕ ಬ್ರಹ್ಮ

                 ನಳ ದಮಯಂತಿಯ ಕಥೆ ಕೇಳಿರಬಹುದು. ಯಕ್ಷಗಾನ ನೋಡುವ  ಕರಾವಳಿಯವರಲ್ಲಿ ಕೇಳಿದರೆ ನಳ ದಮಯಂತಿಯ ಕಥೆಯನ್ನು ಸ್ವಾರಸ್ಯವಾಗಿ ಹೇಳಬಲ್ಲರು. ಮೊನ್ನೆ ಮನೆಯಲ್ಲಿ ತಮ್ಮನ ಮಗಳಿಗೆ ಈ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದೆ. ನಳ ಮಹಾರಾಜ ಎಲ್ಲವನ್ನು ಕಳೆದುಕೊಂಡು ಕಾಡಿಗೆ ಸೇರಿದ್ದು. ಕೊನೆಯಲ್ಲಿ ಉಟ್ಟ ಬಟ್ಟೆಯನ್ನು ಕಳೆದು ಹೆಂಡತಿಯ ಸೀರೆ ಸೆರಗಿನ ತುಂಡನ್ನು ಹರಿದು ಉಟ್ಟುಕೊಂಡು ಆಕೆಯನ್ನು ಬಿಟ್ಟು ಹೋದದ್ದು. ಕಾರ್ಕೋಟಕ ಸರ್ಪದಿಂದ ತನ್ನ ಸುಂದರ ರೂಪ ಕಳೆದುಕೊಂಡು ವಿರೂಪನಾಗಿ ಬದಲಾದ ಕಥೆ ಹೇಳುತ್ತಾ ನಳ ಮಹಾರಾಜನ ವಿಶೇಷತೆಯನ್ನು ಹೇಳಿದೆ. ಆತ ಒಬ್ಬ ಅದ್ಭುತ ಪಾಕ ಪ್ರವೀಣ. ಅದಕ್ಕೆ ಉದಾಹರಣೆಯಾಗಿ ಅರಸ ಋತುಪರ್ಣನ ಒಡನಾಟದ ಕಥೆಯನ್ನು ಹೇಳಿದೆ . ಈ ಕಥೆಯನ್ನು ಹೇಳುವುದಕ್ಕೆ ಉದ್ದೇಶ ಒಂದೇ ಪಾಜಕ ಕಲೆಯ ಮಹತ್ವದ ಬಗ್ಗೆ ತಿಳಿಸಿ ಹೇಳುವುದು. 

ನಳ ಮಹಾರಾಜ ಸುಂದರ ರೂಪವನ್ನು ಕಳೆದುಕೊಂಡು ಭಿಕಾರಿಯಂತೆ ಋತು ಪರ್ಣ ಮಹಾರಾಜನ ಸಭೆಯನ್ನು ಪ್ರವೇಶ ಮಾಡುತ್ತಾನೆ. ನಳ ಚಕ್ರವರ್ತಿಯ ಸಾಮಂತ ದೊರೆ ಮಾತ್ರವಲ್ಲ ಸ್ನೇಹಿತ ಋತುಪರ್ಣ. ನಳಮಹಾರಜ ಚಕ್ರವರ್ತಿಯ ವರ್ಚಸ್ಸು ಹೇಗಿತ್ತೆಂದರೆ,  ನಳ ಚಕ್ರವರ್ತಿ  ಋತು ಪರ್ಣನ ಸಭಾ ಪ್ರೇಶ ಮಾಡುವಾಗ ಅಚಾನಕ್ಕಾಗಿ ಯಾವುದೋ ಪ್ರೇರಣೆಯಂತೆ ಕುಳಿತ ಸಿಂಹಾಸನದಿಂದ ಎದ್ದು ಬಿಡುತ್ತಾನೆ. ನಳ ಚಕ್ರವರ್ತಿಯ ವರ್ಚಸ್ಸು ಆತನನ್ನು ಎಬ್ಬಿಸಿಬಿಡುತ್ತದೆ. ತಾನು ಯಾಕೆ ಎದ್ದು ಬಿಟ್ಟೆ ಎಂದು ಆತನಿಗೇ ಆಸ್ಚರ್ಯವಾದರೂ ಅದರ ಕಾರಣ ಆತನಿಗೆ ಆಗ ಅರಿವಿಗೆ ಬರುವುದಿಲ್ಲ. ಬಂದ ನಳಮಹಾರಾಜ ಬಾಹುಕನಾಗಿ ಪರಿಚಯಿಸಿ ಆತ ನಳ ಮಹಾರಾಜನಲ್ಲಿ ಕೆಲಸಕ್ಕಿದ್ದವನು, ನಳ ರಾಜ ಭ್ರಷ್ಟನಾದ ನಂತರ ಅಲ್ಲಿ ಆಶ್ರಯವಿಲ್ಲದೆ ಇಲ್ಲಿ ಆಶ್ರಯವನ್ನು ಯಾಚಿಸಿ ಬರುತ್ತಾನೆ. ನಳ ಮಹಾರಾಜನ ಜತೆಗಿನ ಸ್ನೇಹದ ಕಾರಣಕ್ಕೆ ಬಾಹುಕನನ್ನು ಆತ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ದಿನಗಳು ಕಳೆದ ಮೇಲೆ ಒಂದು ದಿನ ಋತು ಪರ್ಣ ಕಾಡಿಗೆ ಬೇಟೆಗೆ ಹೋದಾಗ ರಾಜ ಪರಿವಾರದಿಂದ ದೂರಾಗಿ ಕಾಡಿನಲ್ಲಿ ಏಕಾಂಗಿಯಾದರೂ ಬಾಹುಕ ಆತನ ಜತೆಗಿರುತ್ತಾನೆ. ಕಾಡಿನಲ್ಲಿ ರಾಜನಿಗೆ ವಿಪರೀತ ಹಸಿವಾಗುತ್ತದೆ. ಅಂತಹ ಜಾಗದಲ್ಲಿ ನೀರು ಬೆಂಕಿ ಇಲ್ಲದೆ ಬಾಹುಕ ಆತನಿಗೆ ಉಪಚಾರ ಮಾಡಿ ರುಚಿಯಾದ ಭೋಜನವನ್ನು ಮಾಡಿ ಆತನಿಗೆ ಉಣ ಬಡಿಸುತ್ತಾನೆ. ಅದುವರೆಗೆ ಅರಮನೆಯ ಊಟ ಮಾಡಿದವನಿಗೆ ಈ ಬಾಹುಕನ ಕೈಯ ಅಡುಗೆಯ ಅದ್ಭುತ ರುಚಿ ಆಶ್ಚರ್ಯವನ್ನು ತರುತ್ತದೆ. ಆನಂತರ ಆತನ ಮುಖ್ಯ ಆಡುಗೆಯವನಾಗಿ ಬಾಹುಕನನ್ನು ನೇಮಿಸಿ ಬಿಡುತ್ತಾನೆ. 

ನಳ ಮಹಾರಾಜ ಚಕ್ರವರ್ತಿಯಾದರೂ ಅತ ಒಬ್ಬ ಅದ್ಭುತ ಪಾಕ ತಜ್ಞನಾಗಿರುತ್ತಾನೆ. ಅತನಿಗಿದ್ದ ಹಲವು ವಿಶಿಷ್ಟಗುಳಲ್ಲಿ ಈ ಪಾಜಕ ವಿದ್ಯೆಯೂ ಒಂದು. ಚಕ್ರವರ್ತಿಯಾದರೂ ಅಡುಗೆಯ ಮಹತ್ವ ಆತನಿಗೆ ಅರಿವಿದೆ. ಅದರಂತೆ ಋತುಪರ್ಣ ಮಹಾರಾಜನಲ್ಲಿ ಬಂದನಂತರವೂ ಅದೇ ಗುಣಗಳಿಂದ ಆತ ಋತು ಪರ್ಣನ ಆದರವನ್ನು ಗಳಿಸುತ್ತಾನೆ. ಋತು ಪರ್ಣ ವ್ಯಕ್ತಿಗಿಂತಲೂ ಆತನ ವಿಶಿಷ್ಟಗುಣಗಳಿಗೆ ಮಾರು ಹೋಗುತ್ತಾನೆ. ವಿಕಟ ಕುರೂಪಿಯಾದ ಬಾಹುಕ ಕೇವಲ ತನ್ನ ಅಡುಗೆಯ ಕಲೆಯಿಂದ ಮಹಾರಾಜನ ಒಲವು ಗಳಿಸುವುದೆಂದರೆ ಪಾಜಕ ಕಲೆಯ ಮಹತ್ವ ಅರಿವಾಗುತ್ತದೆ. ಮುಂದುವರೆಸಿ ಹೇಳಿದೆ ಪಾಜಕ ಅಥವಾ ಅಡುಗೆ ಮಾಡುವುದು ಸಾಮಾನ್ಯವಾಗಿ ಕೀಳರಿಮೆಯ ಭಾವ ಬರುತ್ತದೆ. ಗಂಡಸು ಅಡುಗೆ ಮನೆ ಪ್ರವೇಶಿಸುವುದನ್ನೇ ಕೆಲವರು ನಿಷೇಧಿಸುತ್ತಾರೆ. ಮನೆಯಲ್ಲಿ ಹೆಂಗಸು ಅಡುಗೆ ಮಾಡಬೇಕು ಎಂಬ ಅಲಿಖಿತ ನಿಯಮ ಸಾರ್ವತ್ರಿಕವಾಗಿದೆ. ಯಾರೋ ಒಬ್ಬ ಗಂಡಸು ಅಡುಗೆ ಮಾಡುತ್ತಾನೆ ಎಂದರೆ ಏನೋ ಒಂದು ವಿಚಿತ್ರವನ್ನು ಕಂಡಂತೆ ಮಾಡುವುದನ್ನು ನೋಡುತ್ತೇವೆ. ಯಾಕೆ ಇವರಿಗೆ ನಳ ಮಹಾರಾಜನ ವೈಯಕ್ತಿಕ ಯೋಗ್ಯತೆಯ ಅರಿವಾಗುವುದಿಲ್ಲ ಎಂದು ಅಚ್ಚರಿಯಾಗುತ್ತದೆ. ಅಡುಗೆ ಅಥವಾ ಪಾಜಕ ಕಾರ್ಯ ಎಂಬುದು ಒಂದು ಅದ್ಭುತ ಕಲೆಯಾಗುವುದಕ್ಕೆ ಅದರಲ್ಲಿ ಹಲವು ಗುಣಗಳಿವೆ. ಬ್ರಹ್ಮ ಹೇಗೆ ಜೀವಿಗಳನ್ನು ಸೃಷ್ಟಿ ಮಾಡುತ್ತಾನೋ ಹಾಗೇ ಅಡುಗೆಯಲ್ಲಿ ಹಲವು ವಿಭವಗಳನ್ನು ಪದಾರ್ಥಗಳನ್ನು ಸೃಷ್ಟಿಮಾಡುವ ಅಡುಗೆಯವನು ಒಬ್ಬ ಪಾಜಕ ಬ್ರಹ್ಮನಾಗುತ್ತಾನೆ. 

ಬದುಕಿನಲ್ಲಿ ಬಡತನ ಕೊಡುವ ಶಿಕ್ಷಣ ಮತ್ತು ಅನುಭವ ಅತ್ಯಂತ ದೊಡ್ಡದು. ಬದುಕಿನಲ್ಲಿ ಬಡತನ ಹಲವು ಶಿಕ್ಷಣವನ್ನು ಕಲಿಸಿಕೊಡುತ್ತದೆ. ಕೆಲವರಿಗೆ ಒಳ್ಳೆಯ ವಿದ್ಯೆಯನ್ನು ಕಲಿಸಿದರೆ, ಇನ್ನು ಕೆಲವರಿಗೆ ಅದು ಕಳ್ಳತನ ದರೋಡೆ ವಂಚನೆಯಂತಹ ವಿದ್ಯೆಯನ್ನು ಕಲಿಸಿಕೊಡುತ್ತದೆ.  ಕಾರಣ ಬಡತನ ಮೊದಲ ಲಕ್ಷಣ ಹಸಿವು.  ಎಲ್ಲಾ ಅನುಭವದ ಮೂಲ ಈ ಹಸಿವು. ಅಲ್ಲಿಂದ ತೊಡಗುವ ಬವಣೆಯ ಅನುಭವ ಪಾಠವನ್ನು ಕಲಿಸುತ್ತಾ ಹೋಗುತ್ತದೆ. ಯಾವ ವಿಶ್ವವಿದ್ಯಾಲಯದಲ್ಲೂ ಸಿಗದ ಅನುಭವ ಅದೊಂದು ಬದುಕಿನ ಶಿಕ್ಷಣವಾಗುತ್ತದೆ. ಹುಟ್ಟುವ ಮಗುವಿಗೆ ಯಾವುದೇ ಪ್ರಾಣಿ ಪಕ್ಷಿಗಳ ಮರಿಗಳಿಗೆ ಹಸಿವಿನ ಅನುಭವ ಇಲ್ಲದೇ ಇದ್ದರೆ ಬಾಯಿಗೆ ಕೈ ಎಲ್ಲಿದೆ ಎಂಬ ಅರಿವೇ ಇರುತ್ತಿರಲಿಲ್ಲ. 

ಇದೇ ಹಸಿವು ನನಗೆ  ಬಾಲ್ಯದಲ್ಲಿ  ಕಲಿಸಿದ ಪಾಠವೆಂದರೆ ಪಾಜಕ...ಅಂದರೆ ಅಡುಗೆ. ಇದೊಂದು ಮಾನ್ಯತೆ ಇಲ್ಲದ ಅದ್ಭುತ ಕಲೆ. ಆದರೆ ನಾನು ಮಾತ್ರ ಇದನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಯಾಕೆಂದರೆ ಅದು ಕೊಡುವ ತೃಪ್ತಿ ಬೇರೆ ಯಾವುದೂ ಒದಗಿಸುವುದಿಲ್ಲ. ಬ್ರಹ್ಮನ ಕೈಯಲ್ಲಿ ಜೀವರಾಶಿಗಳು ಸೃಷ್ಟಿಯಾದಂತೆ ಇಲ್ಲಿ ಹಸಿವು ನೀಗುವ ಆಹಾರ ಸೃಷ್ಟಿಯಾಗುತ್ತದೆ. ಒಂದು ಮುಷ್ಟಿಯೊಳಗಿನ ವಸ್ತು ತಿನ್ನುವ ಯೋಗ್ಯತೆಯನ್ನು ಗಳಿಸಿಕೊಂಡರೆ ಅದು ಹಸಿವನ್ನು ನೀಗಿಸುವುದು ಮಾತ್ರವಲ್ಲ ಮನಸ್ಸನ್ನು ತೃಪ್ತಿಪಡಿಸುತ್ತದೆ. 

ಬಾಲ್ಯದಲ್ಲಿ ಸಾಯಂಕಾಲ ಶಾಲೆಗೆ ಹೋಗಿ ಬರುವಾಗ ಅಥವಾ ಅಂಗಡಿ ಸಂತೆಗೆ ಹೋಗಿ ಬರುವಾಗ ವಿಪರೀತ ಹಸಿವಾಗಿರುತ್ತದೆ. ಅದು ಮಳೆಗಾಲದಲ್ಲಾದರೆ ಕೇಳುವುದು ಬೇಡ. ಅದರಲ್ಲೂ ನಮ್ಮೂರಿನ ಅಂದರೆ ಕರಾವಳಿ ಪ್ರದೇಶದ ಹಸಿವು ಅದು ಅನಿಭವಿಸಿಯೇ ತಿಳಿಯಬೇಕು. ಮಲೆನಾಡು ಬಯಲು ಸೀಮೆ ಅದರಲ್ಲು ಬೆಂಗಳೂರಿನವರಿಗೆ ಈ ಅನುಭವ ಸಿಗುವುದಕ್ಕೆ ಸಾಧ್ಯವಿಲ್ಲ. ತೋಟ ಗುಡ್ಡೆಯಲ್ಲಿ ಕೆಲಸ ಮಾಡುವ ಶ್ರಮಜೀವಿಗಳಿಗಂತೂ ಉಪ್ಪಿಟ್ಟಿನಂತಹ ತಿಂಡಿಗಳು ಹೊಟ್ಟೆ ತುಂಬಿಸುವುದಿಲ್ಲ. ಹೊಟ್ಟೆ ಗಟ್ತಿಯಾಗಬೇಕಾದರೆ..ಅವರಿಗೆ ಕುಚ್ಚಿಲಕ್ಕಿ ಗಂಜಿಯೇ ಆಗಬೇಕು. ಇದನ್ನು ಮೂರು ಹೊತ್ತು ಉಂಡು ಹೊಟ್ಟೆ ತಂಪಾಗಿಸುವವರಿದ್ದಾರೆ. ಅದು ಕರಾವಳಿ ಹಸಿವಿನ ಪ್ರಭಾವ. ಬೆಳಗ್ಗೆ ಎಷ್ಟು ತಿಂದರೂ ಮಧ್ಯಾಹ್ನ ಸೂರ್ಯ ನಡು ನೆತ್ತಿಗೆ ಬಂದ ಅನುಭವಾಗುವುದು ಹೊಟ್ಟೆಯ ಹಸಿವಿನಿಂದ. ಹೊಟ್ಟೆ ಹಸಿವಾದಾಗ ಮೇಲೆ ನೋಡುತ್ತಾನೆ. ಮಧ್ಯಾಹ್ನ ಹೊಟ್ಟೆತುಂಬ ಉಂಡರೂ ಸಾಯಂಕಾಲ ಆಗಬೇಕಾದರೆ ಪುನಃ ಹಸಿವು...ಬೇರೆ ಎಲ್ಲೂ ಆನುಭವಕ್ಕೆ ಬಾರದ ಹಸಿವು ನಮ್ಮ ಕರಾವಳಿಯಲ್ಲಿ ಆಗಿಬಿಡುತ್ತದೆ. ಹಾಗೇ ಸಾಯಂಕಾಲ ಮನೆಗೆ ಬರಬೇಕಾದರೆ ವಿಪರೀತ ಹಸಿವು. ತಿನ್ನುವುದಾದರೂ ಏನನ್ನು? ಮನೆಯಲ್ಲಿ ಅಮ್ಮನೇ ದುಡಿಯುವುದರಿಂದ ಅಮ್ಮನಿಗೆ  ಏನಾದರೂ ಮಾಡಿ ಹಾಕಲು ಸಮಯವಿರುವುದಿಲ್ಲ. ಆದರೆ ನಮ್ಮ ಹಸಿವು ಸುಮ್ಮನಿರಬೇಕಲ್ಲ. ಆಗ ನಾನೇ ಆಡುಗೆ ಕೋಣೆಗೆ ಹೋಗಿ ನನಗೆ ಬೇಕಾದ ತಿಂಡಿ ಮಾಡುವ ಸಾಹಸಕ್ಕೆ ಬಾಲ್ಯದಲ್ಲಿ ಅಂದರೆ ಕೇವಲ ಹತ್ತು ಹನ್ನೆರಡರ ಹರಯದಲ್ಲಿ ಕೈ ಹಾಕುತ್ತಿದ್ದೆ. ಮನೆಯಲ್ಲಿ ಮಾಡುವುದಕ್ಕಾದರೂ ಎನಾದರೂ ಇರಬೇಕಲ್ಲ.ಮೆಣಸು ಇದ್ದರೆ ಸಾಸಿವೆ ಇಲ್ಲ. ಎಲ್ಲ ಇದ್ದರೆ ತೆಂಗಿನ ಕಾಯಿ ಇಲ್ಲ. ತರಕಾರಿಯಂತೂ ದುಡ್ದು ಕೊಟ್ಟು ತರುವುದೇ  ಇಲ್ಲ. ಮನೆಯಲ್ಲಿನ ಉಪ್ಪು ಮೆಣಸಿನಲ್ಲೇ ಊಟ. ಹಾಗಿರುವಾಗ ಮಕ್ಕಳು ನಾವು ಮಾಡುವುದಾದರೂ ಏನು?

ಸಾಯಂಕಾಲ ಹೊರಗೆ ಜೋರು ಮಳೆ...ಹೊರಗೆ ಕಾಲಿಡುವಂತೆ ಇಲ್ಲ. ಮನೆಯೊಳಗೆ ಬೆಚ್ಚಗೆ ಏನಾದರೂ ತಿನ್ನಬೇಕು. ಅಕ್ಕಿ ಮೆಣಸು ಬಿಟ್ಟರೆ ಏನೂ ಇರುವುದಿಲ್ಲ. ಆಗ ಅಕ್ಕಿ ಉಪ್ಪಿಟ್ಟು ಮಾಡುತ್ತಿದ್ದೆ.ನಮ್ಮ ಪಾಲಿಗೆ ಅದೊಂದು ಅದ್ಭುತ ತಿಂಡಿ.   ಅನ್ನ ಮಾಡಿದರೆ ಅದಕ್ಕೆ ಜತೆಯಲ್ಲಿ ಏನಾದರೂ ಬೇಕಲ್ಲ. ಅದಕ್ಕೆ ಅಕ್ಕಿ ಉಪ್ಪಿಟ್ಟು. ಪಾತ್ರೆಗೆ ಒಗ್ಗರಣೆ ಹಾಕಿ ಅದಕ್ಕೆ ನೀರು ಹಾಕಿ ಅಕ್ಕಿ ತೊಳೆದು ಹಾಕಿ ಹುಳಿ ಬೆಲ್ಲ ಚೆನ್ನಾಗಿ ಹಾಕಿ ಬಿಟ್ಟರೆ ಕೆಲವು ಹೊತ್ತಿನಲ್ಲೇ ಅಕ್ಕಿ ಉಪ್ಪಿಟ್ಟು ಸಿದ್ಧವಾಗುತ್ತದೆ. ಸಾಂಬಾರು ಬೇಡ ಪಲ್ಯ ಬೇಡ ...ಬಿಸಿ ಬಿಸಿ ಉಪ್ಪಿಟ್ಟು ಆ ಮಳೆಗೆ ತಿನ್ನುವುದೆಂದರೆ ಅದೊಂದು ಬಗೆಯ ಬ್ರಹ್ಮಾನಂದ. ಹೀಗೆ ಹಸಿವು ಎಂಬುದು ಮೊದಲ ಪಾಠವನ್ನು ಕಲಿಸಿಕೊಡುತ್ತದೆ. ಬಾಲ್ಯದ ನೆನಪಿಗೆ ಈಗಲೂ ಇದನ್ನು ಮಾಡಿ ತಿನ್ನುವುದುಂಟು. ಖಾರ ಹುಳಿ ಬೆಲ್ಲ ಸಮವಾಗಿ ಹಾಕಿ ಮಾಡಿದರೆ...ಇದೊಂದು ಅದ್ಭುತ ಬಗೆಯ ಹಸಿವನ್ನು ಸಂಹರಿಸುವ ತಿಂಡಿ. ತರಕಾರಿ ತೆಂಗಿನಕಾಯಿ ಬೇಳೆ ಯಾವುದರ ಅವಶ್ಯಕತೆಯೂ ಇಲ್ಲ. 

ಬಾಲ್ಯದಲ್ಲಿ ಹೀಗೆ ಹಲವು ಬಗೆಯ ತಿಂಡಿಗಳನ್ನು ಮಿತ ಸೌಕರ್ಯದಲ್ಲೇ ಮಾಡಿ ಅಭ್ಯಾಸವಾಗಿ ಹೋಗಿದೆ. ಮನೆಯಲ್ಲಿ ಯಾರು ಇರಲಿ ಇಲ್ಲದಿರಲಿ ನಮ್ಮ ಹೊಟ್ಟೆಯ ಜವಾಬ್ದಾರಿ ಇನ್ನೊಬ್ಬರಿಗೆ ವಹಿಸುವ ಅವಶ್ಯಕತೆಯೇ ಒದಗಿ ಬರುವುದಿಲ್ಲ. ಯಾರಿಗೋ ಮಾಡಿ ಬಡಿಸುವುದಕ್ಕಿಂತ ಮೊದಲಿಗೆ ನಮ್ಮ ಹೊಟ್ಟೆಗೆ ಬೇಕಾದ್ದನ್ನಾದರೂ ಮಾಡಿ ತಿನ್ನುವ ಯೋಗ್ಯತೆಯನ್ನು ಗಳಿಸಬೇಕು. ಅದಕ್ಕೆ ಇನ್ನೊಬ್ಬರನ್ನುಆಶ್ರಯಿಸುವ ಅನಿವಾರ್ಯತೆ ಒದಗಿ ಬರಬಾರದು. ಬಾಲ್ಯದಲಿ ರೂಢಿಸಿಕೊಂಡ ಈ ಸ್ವಾವಲಂಬೀ ಗುಣ ಸ್ವಾಭಿಮಾನವನ್ನು ಹುಟ್ಟಿಸಿದೆ. ಈಗಲೂ ಹಾಗೆ ಯಾರೋ ಮಾಡಿ ಹಾಕುತ್ತಾರೆ ಎಂದು ಅಡುಗೆ ಮನೆ ಬಾಗಿಲು ನೋಡುವ ಸಂದರ್ಭ ಬರುವುದಿಲ್ಲ. 

ಅಡುಗೆ ಎಂಬುದು ಅಂತಹ ಕಲಿಯಲಾಗದ ಬ್ರಹ್ಮ ವಿದ್ಯೆ ಏನೂ ಅಲ್ಲ. ಇಲ್ಲಿ ಬೇಕಾಗಿರುವುದು ಶ್ರದ್ದೆ ಮತ್ತು ಆಸಕ್ತಿ.  ಜೀವನದಲ್ಲಿ ನಾಲ್ಕು ಅಂಶಗಳನ್ನು ಶ್ರದ್ದೆ ಆಸಕ್ತಿ ಗೌರವದಿಂದ ಮಾಡಬೇಕು. ಒಂದು ಸಂಧ್ಯಾವಂದನೆ ಅಥವ ದೈವ ಪ್ರಾರ್ಥನೆ, ಇನ್ನೊಂದು ಪಿತೃಗಳ ಅಪರ ಕ್ರಿಯೆ, ಮತ್ತೊಂದು ಹೆತ್ತ ಅಪ್ಪ ಅಮ್ಮ ಆರೈಕೆ...ಕೊನೆಯಲ್ಲಿ ಅಡುಗೆ ಕೆಲಸ. ಇವುಗಳನ್ನು ಕಾಟಾಚಾರಕ್ಕೆ ಮಾಡಿದರೆ ನಾವು ಬದುಕುವ ಬದುಕಿಗೆ ಗೌರವ ಇರುವುದಿಲ್ಲ. ಅಡುಗೆಯನ್ನು ನಾನು ಎಂದಿಗೂ ಕಾಟಾಚಾರಕ್ಕೆ ಮಾಡಿದ್ದೇ ಇಲ್ಲ ಎನ್ನಬೇಕು. ಒಂದು ಉಪ್ಪಿಟ್ಟು ಮಾಡುವುದಿದ್ದರೂ ಅದಕ್ಕೆ ಹಾಕಬೇಕಾದ ಒಂದು ಬೇಳೆಯೋ ಕರಿಬೇವೋ ಇಲ್ಲ ಎಂದಾದರೆ ಅದನ್ನು ಹೋಗಿ ತಂದು ಮಾಡುತ್ತೇನೆ. ಅದು ನಾನು ಆ ಕೆಲಸಕ್ಕೆ ಕೊಡುವ ಗೌರವ. ಅದಿಲ್ಲ ಹೇಗೋ ಸುಧಾರಿಸಿಬಿಡೋಣ ಅಂತ ಮಾಡುವ ಸಂಭವ ತುಂಬಾ ಕಡಿಮೆ. ಅಚ್ಚುಕಟ್ಟಾಗಿ ರುಚಿಯಾಗಿ ಮಾಡಬೇಕು. ತಿನ್ನುವುದು ಸ್ವಲ್ಪವೇ ಆಗಲಿ ಅದನ್ನುಶುಚಿಯಾಗಿ ರುಚಿಯಾಗಿ ತಿನ್ನಬೇಕು ಎನ್ನುವ ತತ್ವ ನನ್ನದು. ಉದರಾಗ್ನಿಯನ್ನು ತೃಪ್ತಿಪಡಿಸದವನಿಗೆ ಬದುಕು ಹಕ್ಕೇ ಇರುವುದಿಲ್ಲ. 

ಕೇವಲ ರುಚಿಯಾಗಿ ಮಾಡಿ ತಿನ್ನುವುದಕ್ಕೆ ಅಡುಗೆ ಕೆಲಸ ಸೀಮಿತವಲ್ಲ. ಅಡುಗೆ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಂಡು ವೇಗವಾಗಿ ಒತ್ತಡ ರಹಿತವಾಗಿ ಮಾಡುವ ಕೌಶಲ ಇದ್ದರೆ ಮಾತ್ರ ಅದು ನಿಜವಾದ ಪಾಜಕ ಕಲೆಯಾಗುತ್ತದೆ.ಹಲವು ಮನೆಗಳಲ್ಲಿ ನೋಡಿದ್ದೇನೆ ...ಅಡುಗೆ ಮನೆ ಎಂದರೆ ಬೇಕಾ ಬಿಟ್ಟಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಬೆಲ್ಲದ ಅಕ್ಕಿಯ ಡಬ್ಬದ ಮುಚ್ಚಳ ಒಂದೆಡೆ ಇದ್ದರೆ ಡಬ್ಬ ಇನ್ನೊಂದು ಕಡೆ ಇರುತ್ತದೆ. ಇನ್ನು ತರಕಾರಿ ತ್ಯಾಜ್ಯ ಈರುಳ್ಳಿ ಸಿಪ್ಪೆ ಎಲ್ಲೆಂದರಲ್ಲಿ ಬಿದ್ದು ರಾಶಿಯಾಗಿರುತ್ತದೆ. ನಾನು ಮಾಡುವುದಿದ್ದರೆ...ಇವುಗಳನ್ನೆಲ್ಲ ಅಡುಗೆ  ಮಾಡುತ್ತಿದ್ದಂತೆ ಎಸೆದು ಸ್ವಚ್ಚ ವಾಗಿರಿಸುತ್ತೇನೆ. ಒಲ್ಲೆಯಲ್ಲಿಟ್ಟ ಉಪ್ಪಿಟ್ಟು ಅಥವಾ ಎನಾದರೂ ಆಹಾರ ಸಿದ್ದವಾಗುವಾಗ ಅಡುಗೇ ಕೊಣೆಯು ಒಪ್ಪ ಓರಣವಾಗಿರಬೇಕು. ತೆಗೆದ ವಸ್ತುಗಳು ಪಾತ್ರೆಗಳು ಯಥಾ ಸ್ಥಾನದಲ್ಲಿರಬೇಕು. ಅಡುಗೆ ಮನೆಯಲ್ಲಿ ಅದುವರೆಗೆ ಕೆಲಸ ಮಾಡಿದ ಕುರುಹು ಉಳಿಯಬಾರದು...ಏನು ತಿಂಡಿ ಮಾಡಿದ್ದೇನೆ ಅಂತ ಒಲೆಯ ಪಾತ್ರೆಯ ಮುಚ್ಚಳ ತೆರೆದು ನೋಡಿದರೆ ಮಾತ್ರ ಅರಿವಿಗೆ ಬರುವಂತೆ ಇರಬೇಕು. ಇದು ಉತ್ತಮ ಅಡುಗೆಯವನ ಲಕ್ಷಣ. ಇಷ್ಟೆಲ್ಲಾ ಸಾಧ್ಯವಾಗದಿದ್ದರೆ, ಅದರ ಬಗ್ಗೆ ಒಂದಷ್ಟು ಕಾಳಾಜಿಯಂತೂ ಇರಲೇಬೇಕು. ಅದು ಆ ಕೆಲಸಕ್ಕೆ ಕೊಡುವ ವೃತ್ತಿ ಗೌರವ. 

ಹಲವು ಮನೆಗಳಲ್ಲಿ ನೋಡಿದ್ದೇನೆ, ಅಮ್ಮ ನೋ ಹೆಂಡತಿಯೋ ಏನೋ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಅದರ ಬಗ್ಗೆ ಗೌರವ ಇರುವುದಿಲ್ಲ. ಒಂದು ಹತ್ತು ನಿಮಿಷ ಕಾಯುವ ತಾಳ್ಮೆಯೇ ಇರುವುದಿಲ್ಲ. ಬಂದ ಕೂಡಲೇ ಅವಸರ ಮಾಡಿಬಿಡುತ್ತಾರೆ. ಆದುಗೆ ಆಯ್ತಾ ಏನು ಅಡುಗೆ ಅಂತ ಕೇಳುವ ವ್ಯವಧಾನವೂ ಇರುವುದಿಲ್ಲ. ನನಗೆ ಬಡಿಸು ಅಂತ  ಹೇಳುವಾಗ ಒಂದು ಉತ್ತಮ ಕೆಲಸಕ್ಕೆ ಇವರು ಅಗೌರವವನ್ನು ತೋರಿಸುತ್ತಾರೆ.  ಒಂದು ವೇಳೆ ಆಗಿಲ್ಲ ಎಂದಿದ್ದರೆ  ಕಾಯುವುದಕ್ಕಿಂತ  ಅಲ್ಲಿದ್ದದ್ದನ್ನು ತಿಂದು ಹೋಗಿ ಬಿಡುತ್ತಾರೆ. ಪಾಪ ಅಡುಗೆ ಮನೆಯನ್ನೇ ಪ್ರಪಂಚವಾಗಿಸಿ ತನ್ನ ಹಸಿವನ್ನು ಮರೆತು ಆಹಾರವನ್ನು ತಯಾರಿಸುವವರ ಕೆಲಸಕ್ಕೆ ಒಂದಿಷ್ಟೂ ಗೌರವ ಇಲ್ಲದ ವರ್ತನೆ ಅದು. ತಾನು ತಿನ್ನುವುದಕ್ಕಿಂತಲೂ ಎಲ್ಲರೂ ತಿನ್ನುವುದರಲ್ಲಿ ಸಿಗುವ ತೃಪ್ತಿ ಬಹಳ ದೊಡ್ಡದು. ಮನೆಯ ಒಬ್ಬನೇ ಒಬ್ಬ ತಿನ್ನದೇ ಹೋದರೂ ಮಾಡುವವನಿಗೆ ತಳಮಳವಾಗುತ್ತದೆ. ಇದು ಅರಿವಾಗಬೇಕಾದರೆ ಅಡುಗೆ ಮನೆಯಲ್ಲಿ ಜವಾಬ್ದಾರಿ ತೆಗೆದುಕೊಂಡು ಮಾಡುವ ಶ್ರಮವನ್ನು ತೆಗೆದುಕೊಳ್ಳಬೇಕು. ನಮಗೆ ಎಷ್ಟು ಒತ್ತಡವಿದ್ದರೂ ಅವರ ಮೇಲೆ ಹೇರದೆ ಸಹಕರಿಸಬೇಕು. ಸಾಧ್ಯವಾದರೆ ಒಂದಷ್ಟು ಕೈ ಸಹಾಯಕ್ಕೆ ನೆರವಾಗಬೇಕು. ಸುಮ್ಮನೇ ಅವರ ಜತೆ ಕುಳಿತರೂ ಸಾಕು ಅವರಿಗೆ ಮಾಡುವ ಕೆಲಸದಲ್ಲಿ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಯಾರೋ ಒಬ್ಬಳು.. ಅಡುಗೆ ಮನೆಯಲ್ಲಿ ತನ್ನ ಪಾಡಿಗೆ ತಾನು ಮಾಡುತ್ತಾಳೆ ಹೊತ್ತಾಗುವಾಗ ಹೋಗಿ ಆಯ್ತಾ ಅಂತ ಕೇಳಿದರೆ ಸಾಕು ಎಂಬಂತಿರಬಾರದು. ಇದು ಅಡುಗೆ ಕೆಲಸಕ್ಕೆ ಅಡುಗೆ ಮಾಡುವವರಿಗೆ ಕೊಡುವ ಗೌರವ. ಯಾಕೆಂದರೆ ಒಂದು ಮುಷ್ಟಿ ಅನ್ನವಾದರೂ ಅದು ದೇಹಕ್ಕೆ ಕೊಡುವ ಚೈತನ್ಯಕ್ಕೆ ಮೌಲ್ಯ ಕಟ್ಟುವುದಕ್ಕೆ ಸಾಧ್ಯವಿಲ್ಲ. ಉದರಾಗ್ನಿಯನ್ನು ಯಾರಾದರೂ ತಣಿಸುತ್ತಾನೆ ಎಂದಿದ್ದರೆ ಅದಕ್ಕಿಂತ ಪೂಜ್ಯವಾದ ಪವಿತ್ರವಾದ ಕೆಲಸ ಬೇರೆ ಯಾವುದಿದೆ?

ಸಾಮಾನ್ಯವಾಗಿ ಅಡುಗೆ ಕೆಲಸವನ್ನು ಕಡೆ ಗಣಿಸುವುದು ಹೆಚ್ಚು.  ಎಲ್ಲೂ ಸಲ್ಲದವನು ಅಡುಗೆ ಕೆಲಸಕ್ಕೆ ಸೀಮಿತ ಕೆಲವೊಂದು ಕಡೆ ಇದಕ್ಕೆ ಗೌರವ ಕೊಟ್ಟರೂ ಹಲವು ಕಡೆ ಅಡುಗೆಯವರನ್ನು ತಾತ್ಸಾರದಿಂದ ಕಾಣುವುದೇ ಹೆಚ್ಚು. ಬ್ರಾಹ್ಮಣರಲ್ಲಿ ಅಡುಗೆಯವನು ಎಂದಾಕ್ಷಣ  ಸಂಧ್ಯಾವಂದನೆ ಜಪಾನುಷ್ಠಾನ ಇಲ್ಲದವನು. ವೇದ ಮಂತ್ರ ವಿದ್ಯೆ ಕಲಿಯದವನು ಅಡುಗೆ ಕೆಲಸಕ್ಕೆ ಲಾಯಕ್ ಎನ್ನುವ ಪ್ರತೀತಿ ಇದೆ. ಅದೂ ಕೆಲವು ಪುರೋಹಿತರಂತೂ ಇವರನ್ನು ತಾತ್ಸಾರದಲ್ಲಿಯೇ  ಕಾಣುತ್ತಾರೆ. ಇನ್ನು ನಿವೃತ್ತಿ ಹೊಂದಿದ  ಕೈಲಾಗದ ಅಡುಗೆಯವರು ಶ್ರಾಧ್ದದ ಬ್ರಾಹ್ಮಣರಾಗುವುದಕ್ಕೆ ಅರ್ಹರಾಗಿಬಿಡುತ್ತಾರೆ. ನಿಜವಾಗಿ ಅರ್ಚಕ ವೃತ್ತಿಯಷ್ಟೇ ಗೌರವ ಪಾಜಕ ವೃತ್ತಿಗೂ ಇದೆ. .   ಅಡುಗೆ ಕೆಲಸಕ್ಕೆ ಇರುವ ಮಹತ್ವ ಗೌರವ ಹಲವರಿಗೆ ತಿಳಿದಿದ್ದರೂ ಅದನ್ನು ಅಸಡ್ಡೆಯಿಂದ ಕಾಣುತ್ತಾರೆ. ಸಮಾರಂಭದಲ್ಲಿ ಮಧ್ಯಾಹ್ನದ ವರೆಗೆ ಅದರ ಕಡೆಗೆ ಗಮನ ಹೋಗುವುದಿಲ್ಲ. ಅಡುಗೆ ಮನೆಗೆ ಹೋಗುವವರಂತೂ ಇರುವ್ದೇ ಇಲ್ಲ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಹಸಿವಾಗುವಾಗ ಅಡುಗೆಯ ಮನೆ ಕಡೆ ಗಮನ ಹೋಗುತ್ತದೆ. ಅದುವರೆಗೆ ಅಲ್ಲಿಗೆ ಸುಳಿಯದವರು, ಅಡುಗೆ ಆಯ್ತಾ ಅಂತ ಅಲ್ಲಿಗೆ ಗಮನ ಹರಿಸುವಾಗ ಅಡುಗೆಯ ಮಹತ್ವ ಅರಿವಾಗಬೇಕು. ತಿನ್ನುವಂತೆ ಆಹಾರ ತಯಾರಿಸಿ ಅದರಲ್ಲಿ ಎಲ್ಲರ ಮೆಚ್ಚುಗೆ ಗಳಿಸುವುದೆಂದರೆ ಅದು ಸುಲಭದ ಕೆಲಸವಲ್ಲ.  ಉತ್ತಮ ಅಚ್ಚುಕಟ್ಟಾದ ಅಡುಗೆ ಮಾಡುವುದೆಂದರೆ ಅದೊಂದು ದೈವದತ್ತ ಪ್ರತಿಭೆ. 

ನಮ್ಮಜ್ಜ ಪುರೋಹಿತರಾದರೂ ಉತ್ತಮ ಅಡುಗೆಯವರಾಗಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಅಡುಗೆ ಕೆಲಸ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟದ್ದನ್ನು ನಾನು ನೋಡಿದ್ದೇನೆ. ನನ್ನ ಸೋದರ ಮಾವಂದಿರು ಉತ್ತಮ ಅಡುಗೆಯವರಾಗಿದ್ದರು. ಹೀಗಾಗಿ ಬಾಲ್ಯದಲ್ಲಿ ಅಡುಗೆ ಕೆಲಸದಲ್ಲಿ ನಮಗೂ ಸಾಕಷ್ಟು ಆಸಕ್ತಿ ಬೆಳೆಯುವುದಕ್ಕೆ ಇದೇ ಕಾರಣವಾಗಿತ್ತು. ನಮ್ಮಲ್ಲಿ ಹಲವು ಪುರೋಹಿತರು ಉತ್ತಮ ಅಡುಗೆ ಕೆಲಸವನ್ನು ಮಾಡಬಲ್ಲ ಪ್ರತಿಭಾವಂತರು. 

ಭಾರತೀಯ ಪರಂಪರೆಯಲ್ಲಿ ಅದು ಯಾವ ಧರ್ಮವಾದರೂ ಆಹಾರದ ಉಪಚಾರ ಅತ್ಯಂತ ಮಹತ್ವವನ್ನು ಪಡೆದಿದೆ. ಮಾತಿಗೆ ಬ್ರಾಹ್ಮಣೋ ಭೋಜನ ಪ್ರಿಯ ಅಂತ ಗೇಲಿ ಮಾಡಿದರೂ ಉಳಿದ ಜಾತಿಗಳಲ್ಲಿಯೂ ಊಟ ಉಪಚಾರ ಏನು ಸರಳವಾಗಿ ಏನು ಇರುವುದಿಲ್ಲ. ಅದಕ್ಕಾಗಿಯೆ ಹೆಚ್ಚಿನ ವ್ಯಯ ಮಾಡುತ್ತಾರೆ.  ಅಡುಗೆ ಕೆಲಸದಲ್ಲಿ ಅಡುಗೆ ವ್ಯವಸ್ಥೆಗಳಲ್ಲಿ ಸಾಕಷ್ಟು ಅವಿಷ್ಕಾರವಾಗಿದೆ. ಅದೊಂದು ಲಾಭಕರ ಉದ್ದಿಮೆಯಾಗಿ ಬೆಳೆದಿದೆ. ಇದು ಸಾರ್ವಜನಿಕವಾಗಿಯಾದರೆ, ಮನೆಯಲ್ಲಿ ಆಡುಗೆ ಕೆಲಸಕ್ಕೆ ಒಳ್ಳೆಯ ಗೌರವವನ್ನು ಕೊಡಬೇಕು. ಯಾರಾದರು ಅಡುಗೆ ಮಾಡಿ ನಿಮ್ಮ ಹೊಟ್ಟೆ ತುಂಬಿಸುವುದಿದ್ದರೆ ಅವರನ್ನು ದೇವರಂತೆ ಕಾಣಬೇಕು. ನಿಮಗಾಗಿ ಅವರು ಬೇಯಿಸಿ ಬಿಸಿ ಕೊಡುತ್ತಾರೆ ಎಂದರೆ ಅವರಿಗಾಗಿ ಬೇರೆ ಏನು ಕೊಡುವುದು ಬೇಡ. ಒಂದಷ್ಟು ಗೌರವ ಪ್ರೀತಿಯನ್ನು ಕೊಡಿ. ಅವರ ನಿಸ್ವಾರ್ಥ ಕಾರ್ಯಕ್ಕೆ ಒಂದಷ್ಟು ಮೌಲ್ಯವನ್ನು ಕೊಟ್ಟು ನೋಡಿ. ಅದು ನಂತರದ ಹೊತ್ತಿಗೆ ಆಹಾರ ಮಾಡುವಾಗ ಒಳ್ಳೆಯ ಉತ್ತೇಜನವನ್ನು ಒದಗಿಸುತ್ತದೆ. ಮುಂದೆಯೂ ನಿಮ್ಮ ಹೊಟ್ಟೆ ತಂಪಾಗುತ್ತದೆ. 

ಭೋಜನ ಎಂದರೆ ಯಜ್ಞದಂತೆ. ಉದರಾಗ್ನಿಗೆ ಹವಿಸ್ಸನ್ನು ಸಲ್ಲಿಸುವುದೆಂದರೆ ಅದು ಪೂಜನೀಯ ಕಾರ್ಯ. ಅದನ್ನು ನಿರ್ಲಕ್ಷಿಸುವುದೆಂದರೆ ಯಜ್ಞನಾರಾಯಣನಿಗೆ ಅಪಚಾರ ಮಾಡಿದಂತೆ. ಯಾರನ್ನಾದರೂ ಧನ ಕನಕಗಳನ್ನು ಕೊಟ್ಟು ತೃಪ್ತಿ ಪಡಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಹೊಟ್ಟೆ ತುಂಬ ಆಹಾರ ಕೊಟ್ಟರೆ ಹೊಟ್ಟೆ ತುಂಬುವಾಗ ಆತ ಸಾಕು ಸಾಕು ಎಂದು ಹೇಳುತ್ತಾನೆ. ಬೇರೆ ಏನನ್ನು ಕೊಡುವಾಗಲೂ ಸಾಕು ಸಾಕು ಎನ್ನದವನ್ನು ಊಟಕ್ಕೆ ಕುಳಿತರೆ ಸಾಕು ಸಾಕು ಎಂದು ಹೇಳಲೇ ಬೇಕು. ಹಾಗಾಗಿ ಊಟದಲ್ಲಿ ಸುಲಭದಲ್ಲಿ ಕೊಡುವ ತೃಪ್ತಿ ಅದು ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಯಾವುದೇ ಅಹಾರ ಮಾಡಿ ಕೊಟ್ಟಾಗ ಮಾಡಿದವರಿಗೆ ಮನಸಾರೆ ಅಭಿನಂದಿಸಿ...ಅದು ಭಗವಂತನಿಗೆ ಸಲ್ಲಿಸುವ ಗೌರವವಾಗುತ್ತದೆ. 

Saturday, March 15, 2025

ಪರಮ ಗುರು

ನನ್ನಜ್ಜನ ಬಗ್ಗೆ ಹಿಂದೆ ಒಂದು ಪುಟ್ಟ ಲೇಖನ ಬರೆದಿದ್ದೆ. ಅದರ ಮುಂದಿನ ಭಾಗವಿದು. ನನ್ನಜ್ಜ ಯಾವುದೇ ಆದರ್ಶದ ತತ್ವಗಳನ್ನು ಹಿಂಬಾಲಿಸುತ್ತಿರಲಿಲ್ಲ. ಅವರ ಕಾಲದಲ್ಲಿ ಅದೊಂದು ಅನುಸರಿಸುವ ಪದ್ಧತಿಯೂ  ಇರಲಿಲ್ಲ. ಇದ್ದರೂ ಅದರ ಬಗ್ಗೆ ಅಜ್ಜ ಗಂಭೀರವಾಗಿ ಚಿಂತಿಸಲೂ ಇಲ್ಲ. ಆದರ್ಶವೆಂಬುದು ಪ್ರದರ್ಶಿಸುವುದಕ್ಕಿರುವುದಲ್ಲ. ತಮಗೆ ಅರಿವಿಲ್ಲದೇ ಇದ್ದರು ಕೆಲವೊಂದು ಆದರ್ಶಗಳು ತನ್ನಿಂತಾನೆ ಬದುಕಲ್ಲಿದ್ದುಬಿಡುತ್ತವೆ.  ಕೋಗಿಲೆಗೆ ತನ್ನ ಧ್ವನಿ ಇಂಪಾಗಿದೆ ಎಂಬ ಅರಿವಿದೆಯೋ ಇಲ್ಲವೋ ...ಆದರೆ ಅದು ಹಾಡುತ್ತದೆ. ಯಾರಾದರೂ ಕೇಳುತ್ತಾರೆ ಎಂದು ಅದು ಹಾಡುವುದಿಲ್ಲ. ಹಾಡುವುದು ಅದರ ಸಹಜ ಗುಣ.  ಆದರೆ ನಾವದನ್ನು ಆಸ್ವಾದಿಸಿ ಆನಂದಸುತ್ತೇವೆ. ಕೋಗಿಲೆಗೆ ಅದರ ಧ್ವನಿಯ ಬಗ್ಗೆ ಅರಿವಿಲ್ಲದಂತೆ ಅಜ್ಜನ ಆದರ್ಶಗಳು ಅವರಿಗೆ ಅರಿವಿರಲಿಲ್ಲ. ಆಗ ಅದರ ವೈಶಿಷ್ಟ್ಯದ ಬಗ್ಗೆ ನಮಗೂ ಅರಿವಿರಲಿಲ್ಲ. 

ಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು   ಭಜನೆಗಳನ್ನು  ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರುಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು   ಭಜನೆಗಳನ್ನು  ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರು. 


ಹಲವು ವರ್ಷಗಳ ಹಿಂದೆ  ನಮ್ಮ ಮಾವನ ಮನೆ ಮಂಗಳೂರಿನಲ್ಲಿದ್ದ ಸಮಯ.    ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಟಿಕಾನದಿಂದ ಕೂಳೂರು ಕಡೆಗೆ ಹೋಗುವಾಗ  ಡಿ ಮಾರ್ಟ್ ಕಳೆದ ಕೂಡಲೇ ಒಂದು ಕಿರಿದಾದ ರಸ್ತೆ ಬಲಭಾಗದಲ್ಲಿ  ಕೆಳಗಿಳಿಯುತ್ತದೆ. ಅಲ್ಲಿಂದ ಒಂದಷ್ಟು  ಮುಂದೆ ಹೋಗಿ ಗುಡ್ಡ ಹತ್ತಿದರೆ ಅಲ್ಲಿ ಮಾವನ ಮನೆ ಇತ್ತು.   .  ಸಾಮನ್ಯಕ್ಕೆ ಈಗ  ಡಿ ಮಾರ್ಟ್ ಇರುವ ಜಾಗದಲ್ಲೇ,  ಆಗ ಒಂದು ಐದಾರು ಮನೆಗಳು ಇದ್ದ ಹರಿಜನರ ಕೇರಿ ಇತ್ತು.  ಡೋಲು ವಾದ್ಯ ನುಡಿಸುವುದು, ಮನೆಯಲ್ಲೇ ಸುಣ್ಣದ ಕುಲುಮೆ ಹೀಗೆ ಅವರ ಜೀವನ ಸಾಗುತ್ತಿತ್ತು.  ಚಿಪ್ಪು ಸುಣ್ಣ ಸುಡುವ ವಾಸನೆ ಸುತ್ತ ಮುತ್ತಲೆಲ್ಲ ಇರುತ್ತಿತ್ತು. ಸುಣ್ಣದ ಕುಲುಮೆಗೆ ಇದ್ದಿಲ  ಮಸಿ (ಕೆಂಡ) ಅಗತ್ಯವಿರುತ್ತಿತ್ತು. ಅದಕ್ಕಾಗಿ ಅವರು ನಮ್ಮಲ್ಲಿಗೆ ಬರುತ್ತಿದ್ದರು. ನಮ್ಮಲ್ಲಿ ಚಕ್ಕುಲಿವ್ಯಾಪಾರ ಇದ್ದುದರಿಂದ ಕಟ್ಟಿಗೆ ಉರಿಸಿದ ಇದ್ದಿಲು ಸಾಕಷ್ಟು ಸಂಗ್ರಹವಾಗುತ್ತಿತ್ತು. ಈ ಹರಿಜನರ ಕೇರಿಯಲ್ಲಿ  ಅವರೊಂದು ಪುಟ್ಟ ಭಜನಾ ಮಂದಿರ ಕಟ್ಟಿದ್ದರು. ಅಗಾಗ ಅಲ್ಲಿ ಅವರೆಲ್ಲ ಸೇರಿ ಅಗಾಗ ಭಜನಾ ಕಾರ್ಯಕ್ರಮ ನಡೆಸುತ್ತಿದ್ದರು. ಇದ್ದಿಲು ಕೊಂಡೊಯ್ಯಲು ನಮ್ಮಲ್ಲಿಗೆ ಬರುತ್ತಿದ್ದವರಲ್ಲಿ ಅಜ್ಜ ಅವರ ಮಕ್ಕಳನ್ನು ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದರು.  ಅಜ್ಜ ಆ ಕೇರಿಯ ಮಕ್ಕಳಿಗೆ ಕೆಲವು ದಿನ ಭಜನೆ ಹೇಳಿಕೊಡುತ್ತಿದ್ದರು. ಆಗ ಅದೊಂದು ಗಂಭೀರವಾಗಿ ಕಾಣಲಿಲ್ಲ. ಆದರೆ ಈಗ ಬ್ರಾಹ್ಮಣ. ಅಸ್ಪೃಶ್ಯತೆ ಅಂತ ವಿವಾದಗಳ ನಡುವೆ ನಿಂತು ಯೋಚಿಸುವಾಗ ಆಶ್ಚರ್ಯ ಎನಿಸುತ್ತದೆ. ಅಜ್ಜನ ಚಿಂತನೆಗಳಿಗೆ ಇದು ಒಂದು ಉದಾಹರಣೆಯಾಗಬಹುದು. 

ಅಜ್ಜ ವೇದಮೂರ್ತಿಗಳು. ಅವರು ಸ್ಪುಟವಾಗಿ ಮಂತ್ರಹೇಳುವಾಗ ಅದು ಸರಸ್ವತಿ ಬ್ರಹ್ಮ ಸ್ವರೂಪ ಸಾಕ್ಷಾತ್ಕಾರ ಎನಿಸುತ್ತಿತ್ತು. ಮಂತ್ರ ಉಚ್ಚಾರ ಬಹಳ ಶ್ರಮದಾಯಕ ಅಂತ ಅವರು ಹೇಳುತ್ತಿದ್ದರು. ಅದನ್ನು ನಾಭೀ ಸ್ವರದಲ್ಲೇ ಉಚ್ಚರಿಸಬೇಕು. ಅದರ ಸ್ವರಭಾರ ಏರಿಳಿತ ತಪ್ಪು ಉಚ್ಚರಿಸಿದರೆ ಅಜ್ಜ ಎಲ್ಲಿದ್ದರೂ ಗದರುತ್ತಿದ್ದರು.‌ಅಲ್ಪ ಪ್ರಾಣ ಮಹಾ ಪ್ರಾಣಗಳು ಸ್ಫುಟವಾಗಿ ಉಚ್ಚರಿಸಬೇಕು.  ವೇದ ಮಂತ್ರೋಚ್ಚಾರ ಸ್ಪಷ್ಟವಾಗಿರಬೇಕು. ಸ್ವರ ಭಾರದಲ್ಲಿ, ಉಚ್ಚಾರದಲ್ಲಿ ನಿಖರತೆ ಸ್ಪಷ್ಟತೆ ಇರಬೇಕು. ಉಚ್ಚಾರದಲ್ಲಿ ಒಂದಕ್ಷರ ತಪ್ಪಾದರೆ ಅದು ಅಪಭ್ರಂಶವಾಗಿಬಿಡುತ್ತದೆ. ಹಾಗಾಗಿ ವೇದ ಮಂತ್ರ ಉಚ್ಚರಿಸುವಾಗ ಎಚ್ಚರಿಕೆ ಮಾತ್ರ ಸಾಲದು, ಅದಕ್ಕೆ ಗುರುವಿನ ಉಪದೇಶ ಅತೀ ಮುಖ್ಯವಾಗುತ್ತದೆ. ಸೂಕ್ಷ್ಮವಾದ ತಪ್ಪಾದರೂ ಅದು ದೊಡ್ಡ ಪ್ರಮಾದವಾಗಿಬಿಡುತ್ತದೆ. ಹೀಗೆ ಸುಮ್ಮನೇ ಆಡುವ ಮಾತಿನಲ್ಲೂ ಅಕ್ಷರ ಉಚ್ಚಾರ ತಪ್ಪಾದರೆ ಅಜ್ಜ ಎಚ್ಚರಿಸುತ್ತಿದ್ದರು. ಅಜ್ಜನಲ್ಲಿ ಮಂತ್ರ ಅಭ್ಯಾಸ ಮಾಡುವಾಗ ಒಂದು ಯಾವುದೋ ಒಂದು ಮಂತ್ರದ  ಒಂದಕ್ಷರ ತಪ್ಪು ತಪ್ಪಾಗಿ ಉಚ್ಚರಿಸಿದರೆ ಅದನ್ನು ಸರಿ ಪಡಿಸದೆ ಮುಂದಿನ ಅಕ್ಷರ ಕಲಿಸುತ್ತಿರಲಿಲ್ಲ. ಒಂದಕ್ಷರ ಸರಿಯಾಗಿ ಉಚ್ಚರಿಸುವ ತನಕ ಬಿಡುತ್ತಿರಲಿಲ್ಲ. ಹೀಗೆ ಒಂದಕ್ಷರ ಸರಿಯಾಗಿ ಉಚ್ಚರಿಸಲು ಸಾಧ್ಯವಾಗದೇ ಇದ್ದಾಗ ಇಡೀ ದಿನ ಅದೇ ಪಾಠ ಉಚ್ಚರಿಸಿದ ನೆನಪು ಈಗಲು ಇದೆ. ಹೀಗೆ ಅಜ್ಜನಿ ಉಚ್ಚಾರ ಶುದ್ಧಿಯಲ್ಲಿ ಹೆಚ್ಚು ಆಗ್ರಹ ನಿಷ್ಠೆ ಇರುತ್ತಿತ್ತು. ಹಾಗಾಗಿಯೇ ಇಂದಿಗೂ ನನಗೆ ಉಚ್ಚಾರ ಶುದ್ದಿಯಲ್ಲಿ ಹೆಚ್ಚು ಗಮನ. ಒಂದಕ್ಷರವೂ ತಪ್ಪಾಗದೇ ಉಚ್ಚರಿಸುವುದಕ್ಕೆ ಸಾಧ್ಯವಾದರೆ ಅದು ನನ್ನಜ್ಜನ ಆಶೀರ್ವಾದ.  ಒಂದಕ್ಷರದ ಪಾಠಕ್ಕೆ ಇಡೀ ದಿನ ತೆಗೆದು ಕೊಂಡಾಗ ಅವರು ಶ್ರೀ ಶಂಕರಾಚಾರ್ಯ ಗುರುಗಳ ಭಜಗೋವಿಂದಂ ಕಥೆಯನ್ನು ಹೇಳುತ್ತಿದ್ದರು. ನಹಿ ನಹಿ ರಕ್ಷತಿ ಡುಕೃಞ್ ಕರಣೆಯ ಉದಾಹರಣೆ ಕೊಟ್ಟು ಉಚ್ಚರಿಸುವುದು ಸಾಧ್ಯವಾಗದೇ ಇದ್ದರೆ ಅದನ್ನು ಬಿಟ್ಟು ಬಿಡಬೇಕು. ಹೊರತು ತಪ್ಪು ಉಚ್ಚಾರ ಖಂಡಿತಾ ಸಲ್ಲದು. ಅದು ಆ ವಿದ್ಯೆಗೆ ಮಾಡುವ ಅವಮಾನ. ನಮ್ಮ ನಾಲಿಗೆಯ ಮೇಲಿನ ಸರಸ್ವತಿಗೆ ಮಾಡುವ ಅವಮಾನವಾಗುತ್ತದೆ.   ಶ್ಲೋಕ ಮಂತ್ರಗಳನ್ನು ಯಾರೂ ಹೇಳಬಹುದು...ಅದರೆ ಅದು ಗುರು ಉಪದೇಶ ಇಲ್ಲದೇ ಪಠಿಸಿದರೆ ಅದು ಅಪೂರ್ಣವಾಗುತ್ತದೆ ಮಾತ್ರವಲ್ಲ ದೊಡ್ಡ ಪ್ರಮಾದವಾಗಿಬಿಡುತ್ತದೆ. ಸಿಗಬೇಕಾದ ಫಲ ಸಿಗುವುದಿಲ್ಲ. ಅಜ್ಜ ಯಾವ ಮಂತ್ರ ಹೇಳಿಕೊಡುತ್ತಿದ್ದರು ಮೊದಲು ಅಕ್ಷರಾಭ್ಯಾಸದಿಂದಲೇ ತೊಡಗಿಸುತ್ತಿದ್ದರು. 

ಅಜ್ಜನಿಗೆ  ಅಕ್ಷರ ಉಚ್ಚಾರ ಶುದ್ದಿಯಲ್ಲಿ  ಇರುವ ಬದ್ದತೆಯಿಂದಲೋ ಏನೋ ಆ ಕೇರಿಯ ಭಜನಾ ಮಂದಿರದ ಹತ್ತಿರ ಹೋಗುವಾಗ, ಅಲ್ಲಿಯ ಭಜನೆಯಲ್ಲಿ   ಅಕ್ಷರ ತಪ್ಪಾದ ಉಚ್ಚಾರ  ಕೇಳುತ್ತಿದ್ದುದರಿಂದಲೋ  ಏನೋ..ಅಲ್ಲಿನ ಒಂದೆರಡು ಹುಡುಗರನ್ನು ಕರೆಸಿ ಅವರಿಗೆ ಭಜನೆ ಹೇಳಿಕೊಡುತ್ತಿದ್ದರು.  ಅದನ್ನು ಆ ಹುಡುಗರು ಎಷ್ಟು ಉಳಿಸಿದರೋ ಗೊತ್ತಿಲ್ಲ, ಆದರೆ ಅಜ್ಜನಲ್ಲಿದ್ದ ನಿಷ್ಠೆ ಅದು  ಸರಸ್ವತೀ ದತ್ತ ಎನಬೇಕು. ಆಗ ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ನಂತರ ಯಾರಿಂದಲೋ ಕಲಿಯುವ ಎಂದುಕೊಂಡರು ಅಜ್ಜನ ಉಚ್ಚಾರ ಸ್ಪಷ್ಟತೆ ಮತ್ತೆ ಸಿಗುವ ಭರವಸೆ ಇರಲಿಲ್ಲ. ನನ್ನಜ್ಜನಲ್ಲೂ ಹಲವು ದೌರ್ಬಲ್ಯಗಳು ಇದ್ದವು. ಹಾಗಾಗಿ ಅಜ್ಜನಲ್ಲಿ ಪರಿಪೂರ್ಣವಾದ ಮಂತ್ರ ಪಾಠವನ್ನು ಮಾಡಲಾಗದ ಖೇದ ನನಗೆ ಈಗಲೂ ಇದೆ.  ಶಿಷ್ಯನಾದವನು ಗುರುವಿನ ದೌರ್ಬಲ್ಯವನ್ನು ಕಾಣಬಾರದು. ಗುರುವಿನ ಯಾವ ಕೊರತೆ ಇದ್ದರೂ ಅದನ್ನು ಶಿರಸಾವಹಿಸಿ ತನ್ಮಯತೆಯಿಂದ ಸ್ವೀಕರಿಸುವವನೇ ನಿಜವಾದ ಶಿಷ್ಯ. ಹಾಗಿದ್ದಲ್ಲಿ ಮಾತ್ರವೇ ಗುರುವಿನ ಸಂಪೂರ್ಣ ಆಶೀರ್ವಾದ ಶಿಷ್ಯನಾದವನಿಗೆ ಲಭ್ಯವಾಗಬಹುದು.  ಎಲ್ಲಿ ದೌರ್ಬಲ್ಯಗಳು ಒಪ್ಪಿ ಅಂಗೀಕರಿಸಲ್ಪಡುವುದೋ ಅಲ್ಲಿ ಗೌರವ ಪ್ರೀತಿ ಇದೆ ಎಂದರ್ಥ. 

ಗುರು ದ್ರೋಣರಿಗೆ ಅರ್ಜುನ ಪಟ್ಟ ಶಿಷ್ಯನಾಗಿದ್ದ. ದ್ರೋಣರು  ಕೇವಲ ಧನುರ್ವಿದ್ಯೆಯನ್ನು ಭೋಧಿಸಿದ್ದಲ್ಲ...ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ಕೂಡ ಕಲಿಸಿದ್ದರು. ಅಥವಾ ಅರ್ಜುನನಿಗೆ ಆ ನಿಷ್ಠೆ ಗುರುವಿನಲ್ಲೂ ಇತ್ತು. ಹಾಗಿರುವ ಕಾರಣ ಪಾರ್ಥ ಏವ ಧನುರ್ಧರನಾದ ಮಾತ್ರವಲ್ಲ, ಶಿವನಿಂದ ಪಾಶು ಪತವನ್ನು ಪಡೆಯುವ ಯೋಗ್ಯತೆಯನ್ನು ಗಳಿಸಿಕೊಂಡ. ಈ ಎಲ್ಲ ಕಾರಣದಿಂದ ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ತಿಳಿದುಕೊಂಡು ಪರಮ ಶಿಷ್ಯನಾಗಿದ್ದುದರಿಂದ, ಶ್ರೀಕೃಷ್ಣನಿಂದ ಗೀತೋಪದೇಶವನ್ನು ಗಳಿಸುವ ಅವಕಾಶವನ್ನು ಅರ್ಹತೆಯನ್ನು ಗಳಿಸಿದ. ಅರ್ಜುನನಲ್ಲಿನ ಪರಮ ಶಿಷ್ಯತ್ವ ಶ್ರೀಕೃಷ್ಣ ಗುರುತಿಸಿಯೇ ಆತನಿಗೆ ಯಾರಿಗೂ ಸಿಗದ ಗೀತೆಯ ಸಾರವನ್ನು ಬೋಧಿಸಿದ. 

ಇಂದಿಗೂ ನನಗೆ ಪರಮ ಗುರು ಎಂದಾಗ...ಮೊದಲು ನೆನಪಿಗೆ ಬರುವುದು ಅಜ್ಜನ ಸ್ವರೂಪ. ಈ ಕಾರಣದಿಂದ...ಸಂಧ್ಯಾವಂದನೆಯ ಗುರು ಅಭಿವಾದನವನ್ನು ಮಾಡುವಾಗ ಅಜ್ಜನ ಅಶೀರ್ವಾದ ಸ್ಮರಣೆಗ ಬರುತ್ತದೆ. ಆ ಗುರು ಸ್ಥಾನ ಬದುಕಿನ  ದಿಕ್ಸೂಚಿಯಾಗಿ ಸದಾ ಪ್ರೇರಕ ಶಕ್ತಿಯಾಗಿ ಪ್ರಚೋದಿಸುತ್ತದೆ.