ನನ್ನಜ್ಜನ ಬಗ್ಗೆ ಹಿಂದೆ ಒಂದು ಪುಟ್ಟ ಲೇಖನ ಬರೆದಿದ್ದೆ. ಅದರ ಮುಂದಿನ ಭಾಗವಿದು. ನನ್ನಜ್ಜ ಯಾವುದೇ ಆದರ್ಶದ ತತ್ವಗಳನ್ನು ಹಿಂಬಾಲಿಸುತ್ತಿರಲಿಲ್ಲ. ಅವರ ಕಾಲದಲ್ಲಿ ಅದೊಂದು ಅನುಸರಿಸುವ ಪದ್ಧತಿಯೂ ಇರಲಿಲ್ಲ. ಇದ್ದರೂ ಅದರ ಬಗ್ಗೆ ಅಜ್ಜ ಗಂಭೀರವಾಗಿ ಚಿಂತಿಸಲೂ ಇಲ್ಲ. ಆದರ್ಶವೆಂಬುದು ಪ್ರದರ್ಶಿಸುವುದಕ್ಕಿರುವುದಲ್ಲ. ತಮಗೆ ಅರಿವಿಲ್ಲದೇ ಇದ್ದರು ಕೆಲವೊಂದು ಆದರ್ಶಗಳು ತನ್ನಿಂತಾನೆ ಬದುಕಲ್ಲಿದ್ದುಬಿಡುತ್ತವೆ. ಕೋಗಿಲೆಗೆ ತನ್ನ ಧ್ವನಿ ಇಂಪಾಗಿದೆ ಎಂಬ ಅರಿವಿದೆಯೋ ಇಲ್ಲವೋ ...ಆದರೆ ಅದು ಹಾಡುತ್ತದೆ. ಯಾರಾದರೂ ಕೇಳುತ್ತಾರೆ ಎಂದು ಅದು ಹಾಡುವುದಿಲ್ಲ. ಹಾಡುವುದು ಅದರ ಸಹಜ ಗುಣ. ಆದರೆ ನಾವದನ್ನು ಆಸ್ವಾದಿಸಿ ಆನಂದಸುತ್ತೇವೆ. ಕೋಗಿಲೆಗೆ ಅದರ ಧ್ವನಿಯ ಬಗ್ಗೆ ಅರಿವಿಲ್ಲದಂತೆ ಅಜ್ಜನ ಆದರ್ಶಗಳು ಅವರಿಗೆ ಅರಿವಿರಲಿಲ್ಲ. ಆಗ ಅದರ ವೈಶಿಷ್ಟ್ಯದ ಬಗ್ಗೆ ನಮಗೂ ಅರಿವಿರಲಿಲ್ಲ.
ಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು ಭಜನೆಗಳನ್ನು ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರುಭಜನೆ ಎಂದರೆ ಅಜ್ಜನಿಗೆ ಇಷ್ಟವಾದ ಒಂದು ಹವ್ಯಾಸ. ಹಲವಾರು ಭಜನೆಗಳನ್ನು ಹೇಳುವುದು, ಕಲಿಸಿ ಕೊಡುವುದನ್ನು ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಭಜನೆಗಳು ಬಹಳ ಸುಂದರವಾಗಿ ಅಜ್ಜ ಹೇಳಿಕೊಡುತ್ತಿದ್ದರು.
ಹಲವು ವರ್ಷಗಳ ಹಿಂದೆ ನಮ್ಮ ಮಾವನ ಮನೆ ಮಂಗಳೂರಿನಲ್ಲಿದ್ದ ಸಮಯ. ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಟಿಕಾನದಿಂದ ಕೂಳೂರು ಕಡೆಗೆ ಹೋಗುವಾಗ ಡಿ ಮಾರ್ಟ್ ಕಳೆದ ಕೂಡಲೇ ಒಂದು ಕಿರಿದಾದ ರಸ್ತೆ ಬಲಭಾಗದಲ್ಲಿ ಕೆಳಗಿಳಿಯುತ್ತದೆ. ಅಲ್ಲಿಂದ ಒಂದಷ್ಟು ಮುಂದೆ ಹೋಗಿ ಗುಡ್ಡ ಹತ್ತಿದರೆ ಅಲ್ಲಿ ಮಾವನ ಮನೆ ಇತ್ತು. . ಸಾಮನ್ಯಕ್ಕೆ ಈಗ ಡಿ ಮಾರ್ಟ್ ಇರುವ ಜಾಗದಲ್ಲೇ, ಆಗ ಒಂದು ಐದಾರು ಮನೆಗಳು ಇದ್ದ ಹರಿಜನರ ಕೇರಿ ಇತ್ತು. ಡೋಲು ವಾದ್ಯ ನುಡಿಸುವುದು, ಮನೆಯಲ್ಲೇ ಸುಣ್ಣದ ಕುಲುಮೆ ಹೀಗೆ ಅವರ ಜೀವನ ಸಾಗುತ್ತಿತ್ತು. ಚಿಪ್ಪು ಸುಣ್ಣ ಸುಡುವ ವಾಸನೆ ಸುತ್ತ ಮುತ್ತಲೆಲ್ಲ ಇರುತ್ತಿತ್ತು. ಸುಣ್ಣದ ಕುಲುಮೆಗೆ ಇದ್ದಿಲ ಮಸಿ (ಕೆಂಡ) ಅಗತ್ಯವಿರುತ್ತಿತ್ತು. ಅದಕ್ಕಾಗಿ ಅವರು ನಮ್ಮಲ್ಲಿಗೆ ಬರುತ್ತಿದ್ದರು. ನಮ್ಮಲ್ಲಿ ಚಕ್ಕುಲಿವ್ಯಾಪಾರ ಇದ್ದುದರಿಂದ ಕಟ್ಟಿಗೆ ಉರಿಸಿದ ಇದ್ದಿಲು ಸಾಕಷ್ಟು ಸಂಗ್ರಹವಾಗುತ್ತಿತ್ತು. ಈ ಹರಿಜನರ ಕೇರಿಯಲ್ಲಿ ಅವರೊಂದು ಪುಟ್ಟ ಭಜನಾ ಮಂದಿರ ಕಟ್ಟಿದ್ದರು. ಅಗಾಗ ಅಲ್ಲಿ ಅವರೆಲ್ಲ ಸೇರಿ ಅಗಾಗ ಭಜನಾ ಕಾರ್ಯಕ್ರಮ ನಡೆಸುತ್ತಿದ್ದರು. ಇದ್ದಿಲು ಕೊಂಡೊಯ್ಯಲು ನಮ್ಮಲ್ಲಿಗೆ ಬರುತ್ತಿದ್ದವರಲ್ಲಿ ಅಜ್ಜ ಅವರ ಮಕ್ಕಳನ್ನು ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದರು. ಅಜ್ಜ ಆ ಕೇರಿಯ ಮಕ್ಕಳಿಗೆ ಕೆಲವು ದಿನ ಭಜನೆ ಹೇಳಿಕೊಡುತ್ತಿದ್ದರು. ಆಗ ಅದೊಂದು ಗಂಭೀರವಾಗಿ ಕಾಣಲಿಲ್ಲ. ಆದರೆ ಈಗ ಬ್ರಾಹ್ಮಣ. ಅಸ್ಪೃಶ್ಯತೆ ಅಂತ ವಿವಾದಗಳ ನಡುವೆ ನಿಂತು ಯೋಚಿಸುವಾಗ ಆಶ್ಚರ್ಯ ಎನಿಸುತ್ತದೆ. ಅಜ್ಜನ ಚಿಂತನೆಗಳಿಗೆ ಇದು ಒಂದು ಉದಾಹರಣೆಯಾಗಬಹುದು.
ಅಜ್ಜ ವೇದಮೂರ್ತಿಗಳು. ಅವರು ಸ್ಪುಟವಾಗಿ ಮಂತ್ರಹೇಳುವಾಗ ಅದು ಸರಸ್ವತಿ ಬ್ರಹ್ಮ ಸ್ವರೂಪ ಸಾಕ್ಷಾತ್ಕಾರ ಎನಿಸುತ್ತಿತ್ತು. ಮಂತ್ರ ಉಚ್ಚಾರ ಬಹಳ ಶ್ರಮದಾಯಕ ಅಂತ ಅವರು ಹೇಳುತ್ತಿದ್ದರು. ಅದನ್ನು ನಾಭೀ ಸ್ವರದಲ್ಲೇ ಉಚ್ಚರಿಸಬೇಕು. ಅದರ ಸ್ವರಭಾರ ಏರಿಳಿತ ತಪ್ಪು ಉಚ್ಚರಿಸಿದರೆ ಅಜ್ಜ ಎಲ್ಲಿದ್ದರೂ ಗದರುತ್ತಿದ್ದರು.ಅಲ್ಪ ಪ್ರಾಣ ಮಹಾ ಪ್ರಾಣಗಳು ಸ್ಫುಟವಾಗಿ ಉಚ್ಚರಿಸಬೇಕು. ವೇದ ಮಂತ್ರೋಚ್ಚಾರ ಸ್ಪಷ್ಟವಾಗಿರಬೇಕು. ಸ್ವರ ಭಾರದಲ್ಲಿ, ಉಚ್ಚಾರದಲ್ಲಿ ನಿಖರತೆ ಸ್ಪಷ್ಟತೆ ಇರಬೇಕು. ಉಚ್ಚಾರದಲ್ಲಿ ಒಂದಕ್ಷರ ತಪ್ಪಾದರೆ ಅದು ಅಪಭ್ರಂಶವಾಗಿಬಿಡುತ್ತದೆ. ಹಾಗಾಗಿ ವೇದ ಮಂತ್ರ ಉಚ್ಚರಿಸುವಾಗ ಎಚ್ಚರಿಕೆ ಮಾತ್ರ ಸಾಲದು, ಅದಕ್ಕೆ ಗುರುವಿನ ಉಪದೇಶ ಅತೀ ಮುಖ್ಯವಾಗುತ್ತದೆ. ಸೂಕ್ಷ್ಮವಾದ ತಪ್ಪಾದರೂ ಅದು ದೊಡ್ಡ ಪ್ರಮಾದವಾಗಿಬಿಡುತ್ತದೆ. ಹೀಗೆ ಸುಮ್ಮನೇ ಆಡುವ ಮಾತಿನಲ್ಲೂ ಅಕ್ಷರ ಉಚ್ಚಾರ ತಪ್ಪಾದರೆ ಅಜ್ಜ ಎಚ್ಚರಿಸುತ್ತಿದ್ದರು. ಅಜ್ಜನಲ್ಲಿ ಮಂತ್ರ ಅಭ್ಯಾಸ ಮಾಡುವಾಗ ಒಂದು ಯಾವುದೋ ಒಂದು ಮಂತ್ರದ ಒಂದಕ್ಷರ ತಪ್ಪು ತಪ್ಪಾಗಿ ಉಚ್ಚರಿಸಿದರೆ ಅದನ್ನು ಸರಿ ಪಡಿಸದೆ ಮುಂದಿನ ಅಕ್ಷರ ಕಲಿಸುತ್ತಿರಲಿಲ್ಲ. ಒಂದಕ್ಷರ ಸರಿಯಾಗಿ ಉಚ್ಚರಿಸುವ ತನಕ ಬಿಡುತ್ತಿರಲಿಲ್ಲ. ಹೀಗೆ ಒಂದಕ್ಷರ ಸರಿಯಾಗಿ ಉಚ್ಚರಿಸಲು ಸಾಧ್ಯವಾಗದೇ ಇದ್ದಾಗ ಇಡೀ ದಿನ ಅದೇ ಪಾಠ ಉಚ್ಚರಿಸಿದ ನೆನಪು ಈಗಲು ಇದೆ. ಹೀಗೆ ಅಜ್ಜನಿ ಉಚ್ಚಾರ ಶುದ್ಧಿಯಲ್ಲಿ ಹೆಚ್ಚು ಆಗ್ರಹ ನಿಷ್ಠೆ ಇರುತ್ತಿತ್ತು. ಹಾಗಾಗಿಯೇ ಇಂದಿಗೂ ನನಗೆ ಉಚ್ಚಾರ ಶುದ್ದಿಯಲ್ಲಿ ಹೆಚ್ಚು ಗಮನ. ಒಂದಕ್ಷರವೂ ತಪ್ಪಾಗದೇ ಉಚ್ಚರಿಸುವುದಕ್ಕೆ ಸಾಧ್ಯವಾದರೆ ಅದು ನನ್ನಜ್ಜನ ಆಶೀರ್ವಾದ. ಒಂದಕ್ಷರದ ಪಾಠಕ್ಕೆ ಇಡೀ ದಿನ ತೆಗೆದು ಕೊಂಡಾಗ ಅವರು ಶ್ರೀ ಶಂಕರಾಚಾರ್ಯ ಗುರುಗಳ ಭಜಗೋವಿಂದಂ ಕಥೆಯನ್ನು ಹೇಳುತ್ತಿದ್ದರು. ನಹಿ ನಹಿ ರಕ್ಷತಿ ಡುಕೃಞ್ ಕರಣೆಯ ಉದಾಹರಣೆ ಕೊಟ್ಟು ಉಚ್ಚರಿಸುವುದು ಸಾಧ್ಯವಾಗದೇ ಇದ್ದರೆ ಅದನ್ನು ಬಿಟ್ಟು ಬಿಡಬೇಕು. ಹೊರತು ತಪ್ಪು ಉಚ್ಚಾರ ಖಂಡಿತಾ ಸಲ್ಲದು. ಅದು ಆ ವಿದ್ಯೆಗೆ ಮಾಡುವ ಅವಮಾನ. ನಮ್ಮ ನಾಲಿಗೆಯ ಮೇಲಿನ ಸರಸ್ವತಿಗೆ ಮಾಡುವ ಅವಮಾನವಾಗುತ್ತದೆ. ಶ್ಲೋಕ ಮಂತ್ರಗಳನ್ನು ಯಾರೂ ಹೇಳಬಹುದು...ಅದರೆ ಅದು ಗುರು ಉಪದೇಶ ಇಲ್ಲದೇ ಪಠಿಸಿದರೆ ಅದು ಅಪೂರ್ಣವಾಗುತ್ತದೆ ಮಾತ್ರವಲ್ಲ ದೊಡ್ಡ ಪ್ರಮಾದವಾಗಿಬಿಡುತ್ತದೆ. ಸಿಗಬೇಕಾದ ಫಲ ಸಿಗುವುದಿಲ್ಲ. ಅಜ್ಜ ಯಾವ ಮಂತ್ರ ಹೇಳಿಕೊಡುತ್ತಿದ್ದರು ಮೊದಲು ಅಕ್ಷರಾಭ್ಯಾಸದಿಂದಲೇ ತೊಡಗಿಸುತ್ತಿದ್ದರು.
ಅಜ್ಜನಿಗೆ ಅಕ್ಷರ ಉಚ್ಚಾರ ಶುದ್ದಿಯಲ್ಲಿ ಇರುವ ಬದ್ದತೆಯಿಂದಲೋ ಏನೋ ಆ ಕೇರಿಯ ಭಜನಾ ಮಂದಿರದ ಹತ್ತಿರ ಹೋಗುವಾಗ, ಅಲ್ಲಿಯ ಭಜನೆಯಲ್ಲಿ ಅಕ್ಷರ ತಪ್ಪಾದ ಉಚ್ಚಾರ ಕೇಳುತ್ತಿದ್ದುದರಿಂದಲೋ ಏನೋ..ಅಲ್ಲಿನ ಒಂದೆರಡು ಹುಡುಗರನ್ನು ಕರೆಸಿ ಅವರಿಗೆ ಭಜನೆ ಹೇಳಿಕೊಡುತ್ತಿದ್ದರು. ಅದನ್ನು ಆ ಹುಡುಗರು ಎಷ್ಟು ಉಳಿಸಿದರೋ ಗೊತ್ತಿಲ್ಲ, ಆದರೆ ಅಜ್ಜನಲ್ಲಿದ್ದ ನಿಷ್ಠೆ ಅದು ಸರಸ್ವತೀ ದತ್ತ ಎನಬೇಕು. ಆಗ ಹಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ನಂತರ ಯಾರಿಂದಲೋ ಕಲಿಯುವ ಎಂದುಕೊಂಡರು ಅಜ್ಜನ ಉಚ್ಚಾರ ಸ್ಪಷ್ಟತೆ ಮತ್ತೆ ಸಿಗುವ ಭರವಸೆ ಇರಲಿಲ್ಲ. ನನ್ನಜ್ಜನಲ್ಲೂ ಹಲವು ದೌರ್ಬಲ್ಯಗಳು ಇದ್ದವು. ಹಾಗಾಗಿ ಅಜ್ಜನಲ್ಲಿ ಪರಿಪೂರ್ಣವಾದ ಮಂತ್ರ ಪಾಠವನ್ನು ಮಾಡಲಾಗದ ಖೇದ ನನಗೆ ಈಗಲೂ ಇದೆ. ಶಿಷ್ಯನಾದವನು ಗುರುವಿನ ದೌರ್ಬಲ್ಯವನ್ನು ಕಾಣಬಾರದು. ಗುರುವಿನ ಯಾವ ಕೊರತೆ ಇದ್ದರೂ ಅದನ್ನು ಶಿರಸಾವಹಿಸಿ ತನ್ಮಯತೆಯಿಂದ ಸ್ವೀಕರಿಸುವವನೇ ನಿಜವಾದ ಶಿಷ್ಯ. ಹಾಗಿದ್ದಲ್ಲಿ ಮಾತ್ರವೇ ಗುರುವಿನ ಸಂಪೂರ್ಣ ಆಶೀರ್ವಾದ ಶಿಷ್ಯನಾದವನಿಗೆ ಲಭ್ಯವಾಗಬಹುದು. ಎಲ್ಲಿ ದೌರ್ಬಲ್ಯಗಳು ಒಪ್ಪಿ ಅಂಗೀಕರಿಸಲ್ಪಡುವುದೋ ಅಲ್ಲಿ ಗೌರವ ಪ್ರೀತಿ ಇದೆ ಎಂದರ್ಥ.
ಗುರು ದ್ರೋಣರಿಗೆ ಅರ್ಜುನ ಪಟ್ಟ ಶಿಷ್ಯನಾಗಿದ್ದ. ದ್ರೋಣರು ಕೇವಲ ಧನುರ್ವಿದ್ಯೆಯನ್ನು ಭೋಧಿಸಿದ್ದಲ್ಲ...ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ಕೂಡ ಕಲಿಸಿದ್ದರು. ಅಥವಾ ಅರ್ಜುನನಿಗೆ ಆ ನಿಷ್ಠೆ ಗುರುವಿನಲ್ಲೂ ಇತ್ತು. ಹಾಗಿರುವ ಕಾರಣ ಪಾರ್ಥ ಏವ ಧನುರ್ಧರನಾದ ಮಾತ್ರವಲ್ಲ, ಶಿವನಿಂದ ಪಾಶು ಪತವನ್ನು ಪಡೆಯುವ ಯೋಗ್ಯತೆಯನ್ನು ಗಳಿಸಿಕೊಂಡ. ಈ ಎಲ್ಲ ಕಾರಣದಿಂದ ಒಬ್ಬ ಶಿಷ್ಯನಾದವನು ಹೇಗಿರಬೇಕು ಎಂದು ತಿಳಿದುಕೊಂಡು ಪರಮ ಶಿಷ್ಯನಾಗಿದ್ದುದರಿಂದ, ಶ್ರೀಕೃಷ್ಣನಿಂದ ಗೀತೋಪದೇಶವನ್ನು ಗಳಿಸುವ ಅವಕಾಶವನ್ನು ಅರ್ಹತೆಯನ್ನು ಗಳಿಸಿದ. ಅರ್ಜುನನಲ್ಲಿನ ಪರಮ ಶಿಷ್ಯತ್ವ ಶ್ರೀಕೃಷ್ಣ ಗುರುತಿಸಿಯೇ ಆತನಿಗೆ ಯಾರಿಗೂ ಸಿಗದ ಗೀತೆಯ ಸಾರವನ್ನು ಬೋಧಿಸಿದ.
ಇಂದಿಗೂ ನನಗೆ ಪರಮ ಗುರು ಎಂದಾಗ...ಮೊದಲು ನೆನಪಿಗೆ ಬರುವುದು ಅಜ್ಜನ ಸ್ವರೂಪ. ಈ ಕಾರಣದಿಂದ...ಸಂಧ್ಯಾವಂದನೆಯ ಗುರು ಅಭಿವಾದನವನ್ನು ಮಾಡುವಾಗ ಅಜ್ಜನ ಅಶೀರ್ವಾದ ಸ್ಮರಣೆಗ ಬರುತ್ತದೆ. ಆ ಗುರು ಸ್ಥಾನ ಬದುಕಿನ ದಿಕ್ಸೂಚಿಯಾಗಿ ಸದಾ ಪ್ರೇರಕ ಶಕ್ತಿಯಾಗಿ ಪ್ರಚೋದಿಸುತ್ತದೆ.
No comments:
Post a Comment