ಕಛೇರಿಗೆ ಹೋಗಿ ಕೆಲಸದಲ್ಲಿ
ನಿರತನಾದರೂ ಅತ್ತಿಗೆಯ ಕರೆಯ ಬಗ್ಗೆ ಮನಸ್ಸು ಯೋಚಿಸುತ್ತಿತ್ತು. ಕಛೇರಿಯ ಕೆಲಸದ ಒತ್ತಡದ ನಡುವೆ
ಒಂದು ಸಲ ಅಲ್ಲಿಗೆ ಹೋಗೋಣವೆಂದರೂ ಸಾಧ್ಯವಾಗದು. ದಿವಾಕರ ಆತಿಗೆಯ ಬಗ್ಗೆ ಯೋಚಿಸಿದ. ಆತ ಇಂದು ಈ
ನೆಲೆಗೆ ಬರಬೇಕಾದರೆ ಮೊದಲ ಮೆಟ್ಟಿಲಿಗೆ ಆಧಾರವಾದದ್ದು ಅತ್ತಿಗೆಯ ಹೆಗಲು. ದಿವಾಕರನ ಅಪ್ಪ ಅಮ್ಮನಿಗೆ ಎರಡು ಮಕ್ಕಳು. ದಿವಾಕರನ
ಅಣ್ಣ ಶಂಕರ ವಿದ್ಯಾಭ್ಯಾಸ ಮುಗಿಸಿ ಬ್ಯಾಂಕ್
ನಲ್ಲಿ ಕೆಲಸಗಳಿಸಿಕೊಂಡ. ಕೆಲಸದಲ್ಲಿ
ಬೆಂಗಳೂರಿಗೆ ಸೇರಿದನಂತರ ಆತನಿಗೆ ಮದುವೆಯಾಯಿತು.
ಮದುವೆಯಾಗಿ ಬೆಂಗಳೂರಿಗೆ ಸೇರಿಕೊಂಡನಂತರ ಶಂಕರ, ದಿವಾಕರನನ್ನು
ಬೆಂಗಳೂರಿಗೆ ಕರೆಸಿದ. ಕಾಲೇಜು ವಿದ್ಯಾಭ್ಯಾಸದಿಂದ ತೊಡಗಿ ಎಲ್ಲವನ್ನೂ ಅಣ್ಣ ನಿಭಾಯಿಸಿದ್ದು
ಅತ್ತಿಗೆಯ ಸಂಪೂರ್ಣ ಸಹಕಾರದಿಂದ. ಹಾಗಾಗಿ ಅತ್ತಿಗೆ ಎಂದರೆ ಮಾತೃಸಮಾನವಾಗಿ ಆಕೆ ಏನು ಹೇಳಿದರೂ
ಶಿರಸಾವಹಿಸುವ ದಿವಾಕರನಿಗೆ ಅತ್ತಿಗೆಯ ಕರೆ ನಿಜಕ್ಕೂ ಗಾಬರಿಯನ್ನು ತಂದಿತ್ತು. ಸದ್ಭಾವನೆ
ಸಚ್ಚಿಂತನೆ ಸನ್ಮನಸ್ಸು ಇವುಗಳಿಗೆ ಮನುಷ್ಯ ರೂಪದಲ್ಲಿ ದೇವರು ಅನುಗ್ರಹಿಸುತ್ತಾನೆ
ಎನ್ನುವುದಕ್ಕೆ ಅತ್ತಿಗೆ ಪ್ರತಿರೂಪವಾಗಿ ಎದುರು ನಿಂತುಬಿಡುತ್ತಾಳೆ. ಆಕೆ ನಮ್ಮ ಮನೆಗೆ ಆಗಮಿಸುವ
ಮೊದಲು ನಿರೀಕ್ಷೆಗಿಂತಲೂ ಆತಂಕ ಹೆಚ್ಚಾಗಿತ್ತು. ಮದುವೆ ಮಕ್ಕಳು ಸಂಸಾರ ಪ್ರಸ್ತುತ ಸಮಯದಲ್ಲಿ
ಸಮಸ್ಯೆಗಳನ್ನು ತಂದರೂ ಮನುಷ್ಯ ಅದರಿಂದ ವಿಮುಖನಾಗಲಾರ. ಇವುಗಳು ಬದುಕಿನ ಅನಿವಾರ್ಯ ಘಟಕ. ಅಲ್ಲಿ
ಯಶಸ್ಸು ಕಾಣುವಲ್ಲಿ ನಿಜಕ್ಕೂ ಭಗವಂತನಿಗೆ ಶರಣಾಗುತ್ತಾನೆ. ಬದುಕಿನಲ್ಲಿ ಬೆಳೆ ಬೆಳೆಯುತ್ತದೋ
ಗೊತ್ತಿಲ್ಲ ಆದರೆ ಕಳೆ ಹುಟ್ಟದೇ ಇರಲಿ ಎಂಬುದು ಹಾರೈಕೆ. ಅತ್ತಿಗೆಯ ಪ್ರವೇಶ, ಆನಂತರ ಬೆಂಗಳೂರಲ್ಲಿ ಸಿಕ್ಕಿದ ಆಶ್ರಯ ದಿವಾಕರನಿಗಿಂತ ಹೆಚ್ಚು
ನಿರಾಳವಾದದ್ದು ಅಮ್ಮ. ಹಾಗಾಗಿಯೇ ಇಂದಿಗೂ ಅಮ್ಮ
ಊರಿನ ಮನೆಯನ್ನು ಬಿಟ್ಟು ಅತ್ತಿಗೆಯ ಜತೆಯಲ್ಲೇ ಇರುವುದಕ್ಕೆ ಬಯಸುತ್ತಾರೆ. ಪ್ರಸ್ತುತ ಇದು
ಅಚ್ಚರಿಯೆನಿಸಬಹುದು. ಆದರೆ ಇದು ವಾಸ್ತವದ ಅನುಭವ ದಿವಾಕರನಿಗೆ.
ವ್ಯಾಸಂಗ ಉದ್ಯೋಗದ ನಡುವಿನ ಪಯಣ
ಅತ್ಯಂತ ಕಠಿಣ. ಪ್ರವಾಹ ಸೆಳೆಯುವ ಭರದಲ್ಲಿ
ಗುರಿಯ ಅರಿವೇ ಇರುವುದಿಲ್ಲ.ಆಣ್ಣ ಅತ್ತಿಗೆಯ ಆಸರೆ ಗುರಿಯನ್ನು ಕಾಣುವ ವಿಶ್ವಾಸ ತರಬೇಕಿದ್ದರೆ
ಅತ್ತಿಗೆಯ ಸನ್ಮನಸ್ಸು ಹಿರಿದಾಗಿತ್ತು. ಶಿಕ್ಷಣದ ನಂತರ ಖಾಸಗೀ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದಾಗ
ಬದುಕಿನಲ್ಲಿ ಇದು ಧಾರಾಳವೆನಿಸಿ ದಿವಾಕರ ಬೇರೆ ಮನೆ ಮಾಡಿದ. ಬೆಂಗಳೂರಿನ ಜೀವನವೇ ಹಾಗೆ ಅಕ್ಕ ಪಕ್ಕದಲ್ಲಿದ್ದರೂ
ಅಪರಿಚಿತರಾಗುತ್ತೇವೆ. ಇಲ್ಲ ಅಪರೂಪದ ಅತಿಥಿಗಳಾಗಿಬಿಡುತ್ತೇವೆ.
ಎರಡು ದಿನ ಬಿಡುವು ಸಿಗದೆ
ಇದ್ದರೂ ಇಂದು ತುಸು ಬೇಗನೆ ಬ್ಯಾಂಕ್ ಸಮಯವಾದ ಕೂಡಲೇ ಮನೆಗೆ ಹೋಗದೇ ಬನಶಂಕರಿಯಿಂದ ಮದಾವಾರಕ್ಕೆ
ಹೋಗುವ ಮೆಟ್ರೋ ಹತ್ತಿದ. ಮೆಟ್ರೋದಲ್ಲಿ ಸೀಟು
ಸಿಗದೆ ನಿಂತುಕೊಂಡು ಆಕಡೆ ಈಕಡೆ ನೋಡಿದ. ಪ್ರಯಾಣಿಸುವ ನೂರರಲ್ಲಿ ತೊಂಭತ್ತೈದು ಮಂದಿಯೂ ಮೊಬೈಲ್
ನೋಡುವುದರಲ್ಲೇ ಮಗ್ನವಾಗಿದ್ದರು. ಮನುಷ್ಯನಿಗೆ ಬದುಕುವುದಕ್ಕೆ ಸಮಯದ ಕೊರತೆ ಇದೆ. ಇನ್ನೂ
ಹೆಚ್ಚು ವರ್ಷ ಬದುಕಬೇಕೆಂಬ ಹಂಬಲದಲ್ಲಿ ಇದ್ದ ಸಮಯವೇ ಸಾಲದು ಎಂಬ ಬಯಕೆ ಇರುತ್ತದೆ. ಆದರೆ ಅದೇ
ಬದುಕಿನಲ್ಲಿ ಇರುವ ಸಮಯದ ಬೆಲೆ ತಿಳಿದಿರುವುದಿಲ್ಲ. ಸಮಯ ಕಳೆಯುವುದು ಹೇಗೆ ಟೈಂ ಪಾಸ್
ಆಗುವುದಿಲ್ಲ ಎಂಬ ತುಡಿತದಲ್ಲೇ ಪ್ರತೀ
ಕ್ಷಣವನ್ನು ಕಳೆದು ಬಿಡುತ್ತಾನೆ. ಅದಕ್ಕೆ ಹೊಸ ಅವಕಾಶ ಎಂದರೆ ಈ ಮೊಬೈಲ್. ಹಾಗಾಗಿ ಮೆಟ್ರೋದಲ್ಲಿ
ಬಹುತೇಕ ಮಂದಿ ಈ ಟೈಂ ಪಾಸ್ ಗೆ ಮೊಬೈಲ್ ತಿಕ್ಕಿ ತಿಕ್ಕಿ ನೋಡುವುದಕ್ಕೆ ತೊಡಗಿಬಿಡುತ್ತಾರೆ.
ಹತ್ತಿರ ಕುಳಿತವರು ನಿಂತವರ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಅಶಕ್ತರಿಗೆ ಅಂತ ಆಸನ ಮೀಸಲು
ಇರುತ್ತದೆ. ಆದರೆ ಅಶಕ್ತರು ವಯಸ್ಕರು ಹತ್ತಿರ
ಹೋಗಿ ತಡವಿ ಗೋಗರೆ ಎಚ್ಚರಿಸುವ ವರೆಗೆ ಇಹಲೋಕದ ಪರಿವೆಯೇ ಇರುವುದಿಲ್ಲ. ಕೃಷ್ಣ ರಾಜೇಂದ್ರ ಮಾರುಕಟ್ಟೆಗೆ ತಲುಪಿದಾಗ ಒಂದು ಕಡೆ
ಕುಳಿತುಕೊಳ್ಳುವುದಕ್ಕೆ ಅವಕಾಶ ಸಿಕ್ಕಿತು. ಕುಳಿತು ತುಸು ಹೊತ್ತಿನಲ್ಲೇ ತೂಕಡಿಕೆ ಆರಂಭವಾಯಿತು.
ಮೆಟ್ರೋ ರಾಜಾಜೀನಗರ ತಲುಪಿದ್ದೇ
ತಿಳಿಯಲಿಲ್ಲ. ಗಡಬಡಿಸಿ ಎದ್ದವನಿಗೆ ರಾಜಾಜಿನಗರ ದಾಟಿ ರೈಲು ಮುಂದಕ್ಕೆ ಬಂದು ಇಸ್ಕಾನ್
ದೊಡ್ಡದಾಗಿ ಕಂಡಿತು. ಛೇ ಅಂತ ಅನಿಸಿತು. ಇನ್ನೇನು ಮೈಸೂರ್ ಸ್ಯಾಂಡಲ್ ನಿಲ್ದಾಣದಲ್ಲಿ ಇಳಿದು
ಪಕ್ಕದ ಪ್ಲ್ಯಾಟ್ ಫಾರಂ ಗೆ ಬಂದು ಹಿಂತಿರುಗಿ ಹೋಗುವ ರೈಲಿಗೆ ಕಾದು ಕುಳಿತ. ಛೇ ಎಚ್ಚರವಿದ್ದರೆ
ಇಷ್ಟೊತ್ತಿಗೆ ಅಣ್ಣನ ಮನೆಯಲ್ಲಿರುತ್ತಿದ್ದೆ. ಅದೇ ಅತ್ತಿಗೆಯ ಸ್ಪೆಷಲ್ ಕಾಫಿ ಕುಡಿಯುತ್ತಾ ಹರಟೆ
ಶುರುವಾಗುತ್ತಿತ್ತು. ನಿದ್ದೆಯನ್ನು ಶಪಿಸಿಕೊಂಡು ಯಾವುದೋ ಲೋಕದಲ್ಲಿ ಇದ್ದವನಿಗೆ ಬೆನ್ನಿಗೆ
ಒಂದು ಬಲವಾದ ಗುದ್ದು ಬಿದ್ದಾಗ ಗಾಬರಿಯಲ್ಲಿ ಹಿಂದೆ ತಿರುಗಿ ನೋಡಿದ.
ನೋಡಿದರೆ ಹಾಯ್ ಚಿಕ್ಕಪ್ಪ ಎಂದು
ಲಾವಣ್ಯ ಸಲುಗೆಯಿಂದ ನಗುತ್ತಾ ನಿಂತಿದ್ದಳು. ಜತೆಗೆ ಇನ್ನೊಬ್ಬಾಕೆ ಹುಡುಗಿ ಇದ್ದಳು. ಲಾವಣ್ಯ
ಅಣ್ಣನ ಮಗಳು. ಬ್ಯಾಲ್ಯದಿಂದಲೇ ದಿವಾಕರನ ಹೆಗಲು ಹತ್ತಿ ಬೆಳೆದವಳು. ಅದೊಂದು ಸಮಯ ಆತನ ಬದುಕಿನ
ಸುವರ್ಣ ಯುಗದಂತೆ. ಲಾವಣ್ಯ ಪುಟ್ಟ ಮಗುವಾದಂದಿನಿಂದ ದಿವಾಕರ ದಿನದ ಬಹಳಷ್ಟು ಸಮಯವನ್ನು ಆಕೆಯೊಂದಿಗೆ ಕಳೆದಿದ್ದ.
ಪುಟ್ಟ ಮಗುವನ್ನು ತಾನೇ ಸ್ವತಃ ಸ್ನಾನ ಮಾಡಿಸಿ ಊಟಮಾಡಿಸಿ ಆಕೆಯ ಉಡುಪು ಶೃಂಗಾರ ಎಲ್ಲವನ್ನು
ಮಾಡಿಸುತ್ತಿದ್ದ ದಿನಗಳು. ಆಕೆಯೂ ಹಾಗೆ ಚಿಕ್ಕಪ್ಪ ಎನ್ನುವ ಪ್ರೀತಿ ಸಲುಗೆ ಈಗಲೂ ಇತ್ತು. ಹಲವು
ಸಲ ಈಕೆಯನ್ನು ಅಗಲಿರಲಾಗದೇ ಆಗಾಗ ಬರುತ್ತಿದ್ದ.
ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಕಾಲೇಜು ಮೆಟ್ಟಲು ಹತ್ತಿದ್ದಾಳೆ. ಆದರೆ ದಿವಾಕರನಿಗೆ
ಆಕೆ ಇನ್ನೂ ಚಿಕ್ಕ ಮಗಳಂತೆ ಭಾಸವಾಗುತ್ತದೆ. ಮಕ್ಕಳು ಬೆಳೆದು ದೊಡ್ಡ ಆದಂತೆ ಅಂತರ ಹೆಚ್ಚುತ್ತಾ
ಹೋಗುತ್ತದೆ. ಮಕ್ಕಳ ಪ್ರಪಂಚ ಮನೆಯಿಂದ ವಿಸ್ತಾರವಾಗಿ ಬೆಳೆದಂತೆ ನಮ್ಮ ಅಸ್ತಿತ್ವ ಸಣ್ಣದಾಗುತ್ತಾ
ಹೋಗುವುದು ಸಹಜ. ಈಗ ತನ್ನ ಮಗುವಿಗೆ ಕೊಡದ
ಪ್ರೀತಿಯನ್ನು ಆಗ ಆಕೆಗೆ ಕೊಟ್ಟಿದ್ದ. ಆತನ ಸಂಸಾರದಲ್ಲಿ ಬಹಳ ದಿನದಿಂದ ನಂತರ ಮೊದಲಿಗೆ ಬಂದ
ಪುಟ್ಟ ಅತಿಥಿ ಆಕೆ. ಹಾಗಾಗಿ ಆ ಅಕ್ಕರೆ ಪ್ರೀತಿ ಸಲುಗೆ ಬದುಕಿನ ವಿಶಿಷ್ಟ ಅನುಭವಾಗಿತ್ತು
ಲಾವಣ್ಯ, ಮುದ್ದಿನ ಹುಡುಗಿ. ಚಿಕ್ಕಪ್ಪ ಎಂದರೆ ಸಲುಗೆ ಮಾತ್ರವಲ್ಲ ಅದಕ್ಕಿಂತ
ಹೆಚ್ಚು ಗೌರವ. ತುಲನೆಗೆ ಸಿಗದ ಪ್ರೀತಿ, ಏನಿದ್ದರೂ ಚಿಕ್ಕಪ್ಪನೊಂದಿಗೆ ಹಂಚಿಕೊಳ್ಳುವ ನಿರ್ಭೆಡೆಯ
ಆತ್ಮೀಯತೆ. ಲಾವಣ್ಯ ಮನೆಯಲ್ಲಿ ಎಲ್ಲರ ಜತೆಯೂ
ಪ್ರೀತಿ ಸಲುಗೆಯಿಂದ ಬೆರೆಯುವವಳು. ನೇರ ನಡೆ. ದಿಟ್ಟತನ ಇದಕ್ಕಿಂತ ಹೆಚ್ಚಾಗಿ ಮನೆಯವರೊಂದಿಗೆ
ಬೆರೆಯುವ ಆತ್ಮೀಯತೆ ಆಕೆಯನ್ನು ಪ್ರತೀ ಕ್ಷಣ ಸ್ಮರಿಸುವಂತೆ ಮಾಡುತ್ತದೆ. ಸದಾ ನಗುತ್ತಾ
ಗೆಲುವಾಗಿ ಇರುವುದು ಮಾತ್ರವಲ್ಲ ಮನೆಯ ಪ್ರತಿಯೊಬ್ಬರಿಂದಲೂ ಅದನ್ನು ನಿರೀಕ್ಷೆ
ಮಾಡಿಬಿಡುತ್ತಾಳೆ. ಜಗಳದಲ್ಲೂ ಆತ್ಮೀಯತೆ ಅಳುವಿನಲ್ಲೂ ಆತ್ಮೀಯತೆ. ಪ್ರೀತಿಸುವ ಪರಿ ಉಳಿದವರಿಗೆ
ಪಾಠವಾಗಿ ಬಿಡುತ್ತದೆ. ಹಿರಿಯರಲ್ಲಿ ಹಲವು ಭಿನ್ನಾಭಿಪ್ರಾಯ ಕಲಹ ಇದ್ದರೂ ಈಕೆಯ ಅಸ್ತಿತ್ವ
ಎಲ್ಲರನ್ನೂ ಒಂದು ಗೂಡಿಸುತ್ತದೆ. ಮಕ್ಕಳು
ಸಂಸಾರದ ಸಮೃದ್ಧಿಯ ಸಂಕೇತ. ಸಂಸಾರದಲ್ಲಿ ಆತ್ಮಿಯತೆ ಪ್ರೀತಿ ಐಕ್ಯತೆ ಇವುಗಳೆಲ್ಲ ಒದಗಿ
ಬರಬೇಕಾದರೆ ಅಲ್ಲಿ ಉತ್ತಮ ಮಕ್ಕಳು ಅನಿವಾರ್ಯ. ಹಲವು ಸಲ ಅವರನ್ನು ನೋಡಿ ಕಲಿಯುವ ಅವರಿಗಾಗಿ
ಎಲ್ಲವನ್ನು ಮರೆಯುವ ಅನಿವಾರ್ಯತೆ ಸಂಸಾರ ಬಂಧನವನ್ನು ಬಿಗಿಯಾಗಿಸುತ್ತದೆ. ಲಾವಣ್ಯ ಇರುವಲ್ಲಿ
ಇದೆಲ್ಲವೂ ಸಹಜ ಎಂಬಂತೆ ಭಾಸವಾಗುತ್ತದೆ.
ಲಾವಣ್ಯನನ್ನು ಕಂಡ ಕೂಡಲೇ
ದೀವಾಕರ ನಗುತ್ತಾ ಒಂದು ಕೈಯನ್ನು ಭುಜದ ಮೇಲೆ ಹಾಕಿ ಆಕೆಯನ್ನು ಬರಸೆಳೆದು ಎದೆಗೆ
ಒತ್ತಿಕೊಂಡ. ಒಂದು ತೊಟ್ಟು ಕಂಬನಿ ಆಕೆಯ ಅರಳಿದ
ಕೇಶಾರಾಶಿಯ ಮೇಲೆ ಬಿದ್ದು ಮುತ್ತಿನಂತೆ ಪ್ರತಿಫಲಿಸಿತು.
ಎನು ಲವ್ವಿ? ಲವ್ವಿ...! ಒಂದು
ಕರೆಸಾಕು ಆಕೆ ಮುದುಡಿ ಮೊಗ್ಗಾಗಿ ತೋಳಿನಾಳಕ್ಕೆ ಸೇರಿ ಬಿಡುತ್ತಾಳೆ. ಚಿಕ್ಕಪ್ಪ ಎಂದರೆ ಆಕೆಗೆ
ಎಲ್ಲಿಲ್ಲದ ಸಲುಗೆ. ಯಾವ ಸಮಯದಲ್ಲೂ ತನ್ನ ಪರವಾಗಿ ಒದಗಿ ಬರುವ ವ್ಯಕ್ತಿ ಅಂತ ಇದ್ದರೆ ಅದು
ಚಿಕ್ಕಪ್ಪ ಎಂಬ ಅಭಿಮಾನ. ಮೊದಲು ಮನೆಯಲ್ಲಿ ಎಲ್ಲರೂ ಆಕೆಯನ್ನು ಬೈಯುವುದೊ ಅಥವಾ ನೋಯಿಸುವುದೋ
ಮಾಡಿದರೆ ಚಿಕ್ಕಪ್ಪನ ಬಳಿಯಲ್ಲಿ ಎಲ್ಲದಕ್ಕೂ ಸಾಂತ್ವನ ಸಿಕ್ಕಿಬಿಡುತ್ತದೆ. ದಿವಾಕರನೂ ಅಷ್ಟೇ,
ಆಕೆ ಎಂದರೆ ಭಾವನೆಗಳಿಗೆ ಶರಣಾಗುತ್ತಾನೆ. ಪ್ರತಿ ಸಲ
ತಬ್ಬಿ ಹಿಡಿಯುವಾಗ ತೊಟ್ಟು ಕಂಬನಿ ಒಸರದೇ ಇದ್ದರೆ ಅದು ಅಪ್ಪುಗೆಯೇ ಆಗುವುದಿಲ್ಲ. ಅಲ್ಲಿ ಕಂಬನಿ ಎಂಬುದು ತೃಪ್ತಿಯ ಸಂಕೇತ. ಆಕೆಯ ಎಲ್ಲ ದೌರ್ಬಲ್ಯಗಳನ್ನು ದಿವಾಕರ ಒಪ್ಪಿಕೊಳ್ಳುವುದು
ಆಕೆಯ ಮೇಲಿನ ಪ್ರೀತಿಗಾಗಿ. ದೌರ್ಬಲ್ಯಗಳನ್ನು
ಒಪ್ಪಿಕೊಂಡು ಜತೆಗಿದ್ದರೆ ಅಲ್ಲಿ ಪ್ರೀತಿ ಇದೆ ಎಂದು ಅರ್ಥ. ಯಾವ ಸಮಸ್ಯೆಯಾದರೂ ಕ್ಷಣ ಮಾತ್ರದ ಪರಿಹಾರ ದಿವಾಕರನ
ಬಳಿ ಇರುತ್ತದೆ. ಎಷ್ಟೇ ಕೆಲಸದ ಒತ್ತಡವಿದ್ದರೂ, ಯಾವುದೇ ದುಗುಡ
ದುಮ್ಮಾನದಲ್ಲಿದ್ದರೂ ಆಕೆ ಬಂದು ಚಿಕ್ಕಪ್ಪಾ ಇಂಥದ್ದು ಬೇಕು ಎಂದರೆ ಇಲ್ಲ ಎನ್ನದೇ ಮಾಡುವ
ವ್ಯಕ್ತಿ ಎಂದರೆ ಅದು ದಿವಾಕರ. ಹಲವು ಸಲ ಆಕೆ ಹೇಳುತ್ತಿರುತ್ತಾಳೆ-
ಎಲ್ಲರ ಜತೆಯಲ್ಲೂ ಒಂದಲ್ಲ
ಒಂದು ಸಮಸ್ಯೆ ಅಥವಾ ಹಿಂಸೆಯನ್ನು
ಸೂಕ್ಷ್ಮವಾಗಿಯಾದರೂ ಅನುಭವಿಸಿದ್ದೇನೆ. ಆದರೆ ಚಿಕ್ಕಪ್ಪನ ಜತೆಯಲ್ಲಿ ಇಂತಹ ಯಾವುದೇ ಅನುಭವ
ಆಗುವುದಿಲ್ಲ. ಎಲ್ಲಾ ಮುಕ್ತವಾಗಿರುತ್ತದೆ. ಯಾಕೆಂದರೆ ಚಿಕ್ಕಪ್ಪ ಬೈದದ್ದೇ ಇಲ್ಲ. ಎಂದೂ ಸಿಟ್ಟು
ತೋರಿಸದ ಚಿಕ್ಕಪ್ಪನಲ್ಲಿ ಸಲುಗೆ ಸಹಜವಾಗಿ ಬೆಸೆದಿರುತ್ತದೆ.
ಅದೇಕೋ ದಿವಾಕರನಿಗೆ ಎಂದಿಗೂ ಆಕೆಯನ್ನು ಬೈಯಬೇಕು
ಎಂದನಿಸುವುದಿಲ್ಲ. ಅಕೆಯ ಮೇಲೆ ಸಿಟ್ಟಾಗುವುದಿಲ್ಲ. ಎಲ್ಲವನ್ನು ಮಗಳು ಎಂದುಕೊಂಡು
ನಿರ್ವಿಕಾರವಾಗಿ ಸ್ವೀಕರಿಸಿ ಬಿಡುತ್ತಾನೆ.
ಹಾಗಾಗಿಯೇ ಚಿಕ್ಕಪ್ಪನ ಮಾತು ಆಕೆಗೆ ವೇದವಾಕ್ಯವಾಗುತ್ತದೆ. ಎನಿದ್ದರೂ ಆಕೆಗೆ ಎನಾದರೂ
ಹೇಳಬೇಕಿದ್ದರೆ...ಆಗ ಎಲ್ಲರ ದೃಷ್ಟಿ ದಿವಾಕರನ
ಚಿಕ್ಕಪ್ಪ ಸ್ಥಾನದತ್ತ ಬರುತ್ತದೆ.
ಎಲ್ಲಾ ಕಡೆ ಸಂಗ್ರಹವಾಗುವ ಆಕೆಯ ನೋವುಗಳು ಚಿಕ್ಕಪ್ಪನ ಬಳಿಯಲ್ಲಿ ಕರಗಿಬಿಡುತ್ತವೆ.
ಹೀಗೆ ಹೊರಗೆ ಸಿಕ್ಕಿದರೆ
ಚಿಕ್ಕಪ್ಪನಲ್ಲಿ ಏನಾದರೂ ಒಂದಕ್ಕೆ ದುಂಬಾಲು ಬೀಳುತ್ತಾಳೆ. ಅದು ಐಸ್ಕ್ರೀಂ ಪಿಜಾ ಅಥವಾ
ಕೊನೆಯಲ್ಲಿ ಒಂದು ತುಂಡು ಕ್ಯಾಡ್ ಬರಿಯಾದರೂ ಪ್ರಸಾದವಾಗದಿದ್ದರೆ ಚಿಕ್ಕಪ್ಪನ ಸಮಾಗಮ
ಅಪೂರ್ಣವಾಗುತ್ತದೆ. ಇಂದೂ ಹಾಗೇ ಇರಬಹುದೋ ಎನೋ ಅಂದುಕೊಂಡು ಕೈ ಬ್ಯಾಗ್ ನಲ್ಲಿ ಮೊದಲೇ
ತೆಗೆದಿರಿಸಿದ್ದ ಕ್ಯಾಡ್ ಬರಿಯನ್ನು ಕೈಯಲ್ಲಿರಿಸುತ್ತಾನೆ. ಮುಖವರಳಿಸಿ ಥ್ಯಾಂಕ್ಸ್ ಎನ್ನುತ್ತಾ
ಚಿಕ್ಕಪ್ಪನನ್ನು ತಬ್ಬಿ ಹಿಡಿವಾಗ ದಿವಾಕರ ಪರಿಸರವನ್ನು ಮರೆತು ಬಿಡುತ್ತಾನೆ.
ಈಕೆ ಲಲ್ಲೆ ಹೊಡೆಯುತ್ತಿದ್ದರೆ
ಜತೆಗಿದ್ದ ಗೆಳತಿ ಕಂಬ ನುಂಗಿದಂತೆ ಸುಮ್ಮನೇ ನಿಂತುಬಿಡುತ್ತಾಳೆ. ದಿವಾಕರ ಆಕೆಯನ್ನು ನೋಡುವಾಗ .
ಈಕೆ ಭವಂತಿ ನನ್ನ ಗೆಳತಿ ಅಂತ ಪರಿಚಯಿಸುತ್ತಾಳೆ. ದಿವಾಕರನಿಗೆ ಎಲ್ಲೋ ನೋಡಿದ ನೆನಪು. ಮತ್ತೆ
ಮೊದಲು ನಮ್ಮ ಬೀದಿಯಲ್ಲೇ ಇದ್ದ ಹುಡುಗಿ ಅವಳು. ಲಾವಣ್ಯನೊಂದಿಗೆ ಕಾನ್ವೆಂಟ್ ನಿಂದ ಹೈಸ್ಕೂಲ್
ವರೆಗೂ ಸಹಪಾಠಿಯಾಗಿದ್ದವಳು. ಆಕೆಯನ್ನು ನೋಡದೆ ಬಹಳ ಸಮಯವಾಗಿತ್ತು. ದೀರ್ಘ ಕಾಲದ ಸ್ನೇಹವನ್ನು
ಕಣ್ಣಾರೆ ಕಾಣುತ್ತಾನೆ.
" ಎಲ್ಲಿಗೆ ಹೊಗಿದ್ದು ಅಂತ ಕೇಳುತ್ತಾನೆ."
" ಚಿಕ್ಕಪ್ಪ ಅವಳಿಗೆ
ಬೋರ್ ಆಯ್ತು ಅಂತ ಮಾಲ್ ಗೆ ಒಂದು ಸುತ್ತು ಹೋಗೋಣ ಅಂತ ಬಂದೆವು. ಈಗ ವಾಪಾಸ್ ಹೋಗುತ್ತಿದ್ದೇವೆ.
ಇವಳನ್ನು ಬಿಟ್ಟು ಮನೆಗೆ ಹೋಗುವ ಅಂತ ಇದ್ದೆ. ಅಷ್ಟ್ರಲ್ಲಿ ನಿಮ್ಮನ್ನು ನೋಡಿದೆ."
ಹಾಗೆ ದೊಡ್ಡದಾಗಿ ಮಾತನಾಡುತ್ತಾ
ಮೇಟ್ರೋ ಹತ್ತಿ ರಾಜಾಜಿನಗರದಲ್ಲಿ ಇಳಿದು ಬಿಡುತ್ತಾರೆ. ಅಲ್ಲಿ ಗೆಳತಿಗೆ ವಿದಾಯ ಹೇಳಿ ಮನೆಯ
ಕಡೆಗೆ ಇಬ್ಬರೂ ಹೆಜ್ಜೆ ಹಾಕುತ್ತಾರೆ. ಆಗಲೇ ಸಾಯಂಕಾಲ ಕಳೆದು ಕತ್ತಲಾವರಿಸುತ್ತದೆ. ದಾರಿಯುದ್ದಕ್ಕೂ
ಗೆಳತಿ ಭವಂತಿಯ ಕಥೆ ವಟ ವಟ ಅಂತ
ಹೇಳುತ್ತಾಳೆ. ಭವಂತಿ ಮೊದಲು ನಮ್ಮ ಮನೆಯ ರಸ್ತೆಯಲ್ಲೇ
ಮನೆ. ತಾಯಿ ಇಲ್ಲದೇ ತಂದೆಯ ಆರೈಕೆಯಲ್ಲಿ
ಬೆಳೆದ ಹೆಣ್ಣು ಮಗಳು. ಹರಯಕ್ಕೆ ಬರುತ್ತಾ ತಾಯಿಯನ್ನು ಕಳೆದುಕೊಂಡ ಭವಂತಿಗೆ ಸರಿಯಾದ ಸಮಯದಲ್ಲೇ
ತಾಯಿಯ ಅವಶ್ಯಕತೆ ಇರುವ ಸಮಯದಲ್ಲೇ ತಾಯಿಯ ಅಗಲಿಕೆ ಅನುಭವಿಸುವಂತಾಗುತ್ತದೆ. ಬುದ್ಧಿ ಹೇಳುವುದಕ್ಕೆ ನಿಯಂತ್ರಿಸುವುದಕ್ಕೆ ತಾಯಿಯ
ಸ್ಥಾನ ಅತ್ಯಂತ ಅನಿವಾರ್ಯ ಎಂಬಂತಹ ಸಮಯ ಹದಿ ಹರಯ.
ಹೆಚ್ಚು ಕಮ್ಮಿ ಮನೆಯಲ್ಲಿ ಆಕೆ ಓರ್ವಳೇ ಇರುತ್ತಾಳೆ. ದುಡಿಯುವುದಕ್ಕೆ ಮನೆಯಿಂದ ಹೊರ
ಹೋಗುವ ಅಪ್ಪ ಮನೆಗೆ ಬರುವಾಗ ತಡವಾಗಿರುತ್ತದೆ. ಇರುವ ಅಲ್ಪ ಸ್ವಲ್ಪ ಸಮಯದಲ್ಲಿ ತಂದೆ
ಯಾವುದನ್ನೆಲ್ಲ ಗಮನಿಸಬಹುದು? ಅಪ್ಪ ಅಮ್ಮನ ನಿಯಂತ್ರಣ ಇಲ್ಲದೇ ಇದ್ದರೂ ಭವಂತಿ ಬಹಳ ಬುದ್ದಿವಂತೆ.
ವಯಸ್ಸಿನಲ್ಲಿ ಇರುವ ಚಂಚಲತೆ ಇವುಗಳಿಂದ ದೂರವಾಗಿದ್ದಳು. ಆದರೂ ಹೊರಜಗತ್ತು ಆಕೆಗೆ
ಪರೀಕ್ಷೆಯನ್ನು ಒಡ್ಡುತ್ತಿತ್ತು.
ಭವಂತಿಯ ಕಥೆಯನ್ನು
ಕೇಳುತ್ತಿದ್ದಂತೆ ಮನೆ ಸಮೀಪಿಸುತ್ತದೆ. ಮನೆಯ ಒಳಗೆ ಬರುತ್ತಿದ್ದಂತೆ ಟೀವಿ ಸದ್ದು ಜೋರಾಗಿ
ಕೇಳುತ್ತಿರುತ್ತದೆ. ಅಮ್ಮ ಧಾರವಾಹಿ ನೋಡುತ್ತಿದ್ದರು.
ಸಾಯಂಕಾಲ ಒಂದಷ್ಟು ದ್ವೇಷ ಕಲಹವನ್ನು ನೋಡದೆ ಇದ್ದರೆ ಅಮ್ಮನಿಗೆ ಏನೋ ಕಳೆದು ಹೋದ
ಅನುಭವ. ಅಮ್ಮನ ಬಳಿ ಕುಳಿತು ಎಂದಿನಂತೆ ಅದೂ ಇದೂ ಮಾತನಾಡಿದ. ಆದರೆ ಅಂತಹ ಆತಂಕದ ವಿಚಾರ
ಯಾವುದನ್ನೂ ಅಮ್ಮ ಹೇಳದಿರುವಾಗ ಅತ್ತಿಗೆ ಕರೆದ ಉದ್ದೇಶವಾದರೂ ಏನು ಎಂದು ಅಚ್ಚರಿಯಾಗಿತ್ತು .
ಅತ್ತಿಗೆ ಯಾವುದೋ ಕೆಲಸದಲ್ಲಿ ಮಗ್ನವಾಗಿದ್ದರು. ಬಟ್ಟ ಬದಲಿಸಿ ಬಂದ ಲಾವಣ್ಯ ಚಿಕ್ಕಪ್ಪನೊಂದಿಗೆ
ಮತ್ತೆ ಹರಟೆಗೆ ತೊಡಗಿದಳು.
ಅತ್ತಿಗೆಯಲ್ಲೇ
ಕೇಳೋಣವೆಂದುಕೊಂಡು ಅಡುಗೆ ಮನೆಯತ್ತ ಹೋದ. ಜತೆಯಲ್ಲೇ ಲಾವಣ್ಯ ಕೂಡ ಹೆಗಲಿಗೆ ಜೋತುಬಿದ್ದುಕೊಂಡು
ಬಂದಳು. ಚಿಕ್ಕಪ್ಪನಿಗೆ ಇಷ್ಟವಾದ ಆಡುಗೆಯನ್ನು ಮಾಡುವಂತೆ ಅಮ್ಮನಿಗೆ ದುಂಬಾಲು ಬಿದ್ದಳು.
ಚಿಕ್ಕಪ್ಪನೊಂದಿಗೆ ಊಟ ಮಾಡದೇ ಬಹಳ ದಿನವಾಗಿತ್ತು. ಹಾಗೆ ಹರಟುತ್ತಿರ ಬೇಕಾದರೆ ಊಟದ ಸಮಯವಾಗಿ
ಬಿಟ್ಟಿತು. ಅಣ್ಣನೂ ಕೆಲಸ ಮುಗಿಸಿ ಬಂದು ಬಿಟ್ಟರೆ ಎಲ್ಲರೂ ಕುಳಿತು ಊಟ ಮಾಡಿದರು. ಮರುದಿನ
ಕಛೇರಿಯಲ್ಲಿ ಕೆಲಸವಿದ್ದುದರಿಂದ ದಿವಾಕರನಿಗೆ ಹೊರಡಲೇ ಬೇಕಿತ್ತು. ಹಾಗೆ ಹೊರಡುವಾಗ ಅತ್ತಿಗೆ
ಬಳಿಗೆ ಬಮ್ದು ಕೇಳಿದ ಏನು ಸಂಗತಿ?
ಅತ್ತಿಗೆ ಪಿಸುಗುಡುತ್ತಾ
ಹೇಳಿದಳು, " ಹಾಗೆಲ್ಲ
ಹೇಳುವಂಥದ್ದು ಅಲ್ಲ ಮಾರಾಯ. ಹೀಗೆ ಗಡಿಬಿಡಿಯಲ್ಲಿ ಬಂದರೆ ಹೇಗೆ? "
ದಿವಾಕರನಿಗೆ ಮತ್ತೂ ಆತಂಕ
ಹೆಚ್ಚಿತು. ಇಂದು ಹೋಗಲೇ ಬೇಕಿತ್ತು, ಹೊರಡುವಾಗ ಹೇಳಿದ " ನಾಡಿದ್ದು ಬೆಳಗ್ಗೆ ಬರುತ್ತೇನೆ. ಆದರೂ
ವಿಷಯ ಎಂತದ್ದು ಅತ್ತಿಗೆ?"
ಅತ್ತಿಗೆ ಆಗಲೂ ಹೇಳಲಿಲ್ಲ. " ನಾಡಿದ್ದು ಬಾ ಕುಳಿತುಕೊಂಡು ಮಾತನಾಡೋಣ" ಅಂತ ಸಾಗ ಹಾಕಿದರು
ದಿವಾಕರನಿಗೆ ಆತಂಕ ಹಾಗೇ ಉಳಿದು
ಬಿಟ್ಟಿತು. ಆದರೂ ಹೊರಡುವಾಗ ಅಮ್ಮನಲ್ಲಿ ಮೆತ್ತಗೆ ಕೇಳಿದ. ಅಮ್ಮ ಯಾರಿಗೂ ಕೇಳದಂತೆ ಹೇಳಿದರು
" ಅದೆಂತದೋ ಲವ್ ಲೆಟರ್ ."
ದಿವಾಕರ ನಿಜಕ್ಕೂ ಯೋಚನೆಯಲ್ಲಿ
ಬಿದ್ದ. ಮನಸ್ಸು ತಳಮಳಿಸಿತು. ಛೆ ಕೆಲಸದ ಒತ್ತಡ ಇಲ್ಲದೇ ಇರುತ್ತಿದ್ದರೆ ಇಂದು ಉಳಿದು
ಬಿಡುತ್ತಿದ್ದ. ಒಂದಷ್ಟು ಗಂಭೀರದ ವಿಷಯವಾಗಿದ್ದುದರಿಂದಲೇ ಅತ್ತಿಗೆ ಮಾತನಾಡಲಿಲ್ಲ. ಕೊನೆಯಲ್ಲಿ
ಹೊರಡಬೇಕಿದ್ದರೆ ಮನೆಗೆ ಕೊಡುವುದಕ್ಕೆ ತಿಂಡಿಯನ್ನು ಕೊಟ್ಟು ಅದರ ಜತೆಗೆ ಒಂದು ಹಳದಿ ಬಣ್ಣದ ಕಾಗದವನ್ನು
ಯಾರಿಗೂ ತಿಳಿಯದಂತೆ ಇಟ್ಟುಬಿಟ್ಟರು.
ದಿವಾಕರನ ಅರ್ಧ ಕುತೂಹಲ ಇಳಿದರೂ
ಆತಂಕ ಮಾತ್ರ ಮತ್ತೂ ಹೆಚ್ಚಿತು. ಬೀಳ್ಕೊಟ್ಟು ರಾಜಾಜಿನಗರ ಮೆಟ್ರೋ ಬಳಿಗೆ ವೇಗವಾಗಿ ನಡೆಯುತ್ತಾ
ಬಂದ ದಿವಾಕರ. ಜೇಪಲ್ಲಿದ್ದ ಹಳದಿ ಬಣ್ಣ ಕಂಪನವನ್ನು ಸೃಷ್ಟಿ ಮಾಡುತ್ತ ಹೋಯಿತು. ಮೆಟ್ರೋ
ಸ್ಟೇಶನ್ ಪ್ಲಾಟ್ ಫಾರಂ ನ ಕಟ್ಟೆಯ ಮೇಲೆ ಕುಳಿತುಕೊಂಡವನೇ ಮೊಬೈಲ್ ಸದ್ದು ಮಾಡಿತು. ಮನೆಯಾಕೆಯ
ಕರೆ. ಆಕೆಗೆ ಬರುತ್ತಾ ಇದ್ದೇನೆ ಎಂದು ತಿಳಿಸಿ ಜೇಬಲ್ಲಿಡಬೇಕಾದರೆ ವಾಟ್ಸಾಪ್ ಹೊಸ ಸಂದೇಶವನ್ನು
ಸ್ವೀಕರಿಸಿದ ಸದ್ದು ಮಾಡಿತು. ಅತ್ತಿಗೆಯ ಸಂದೇಶವಿತ್ತು.
ಆ ಪತ್ರ ಲಾವಣ್ಯನ ಪುಸ್ತಕದ ನಡುವಿನಿಂದ ಸಿಕ್ಕಿದ್ದನ್ನು ಹೇಳಿದ್ದರು.
ಸಿಕ್ಕಿ ಅದಾಗಲೇ ಎರಡು ದಿನ ಕಳೆದಿತ್ತು. ಇನ್ನು ಆ ಪತ್ರ ಬರೆದು ಎಷ್ಟು ದಿನವಾಗಿತ್ತೋ
ತಿಳಿಯದು. ಆಕೆಯ ಕೋಣೆ ಸ್ವಚ್ಚಗೊಳಿಸಬೇಕಾದರೆ
ಆಕೆಯ ಪುಸ್ತಕದ ನಡುವಿನಿಂದ ಜಾರಿದ ಪತ್ರ ಅತ್ತಿಗೆಯ ಗಮನ ಸೆಳೆದು ಇನ್ನಿಲ್ಲದ ತಳಮಳವನ್ನು
ಸೃಷ್ಟಿ ಮಾಡಿತ್ತು. ಪತ್ರ ಓದಿದ ನಂತರ ದಿವಾಕರನ ಅಣ್ಣನಿಗೂ ತಾಯಿಗೂ ವಿಷಯ ತಿಳಿಸಿದರೂ ಯಾರಿಗೂ
ಆಕೆಯಲ್ಲಿ ವಿಚಾರಿಸುವುದಕ್ಕೆ ಧೈರ್ಯ ಸಾಲದಾಯಿತು. ಹೇಗೆ ಕೇಳುವುದು? ಇನ್ನು ಕೇಳಿದ ಪ್ರಶ್ನೆಗೆ ಅವಳ ಉತ್ತರ ಹೇಗಿರಬಹುದು? ಯಾವ ಉತ್ತರ ಆಕೆ ನೀಡಬಹುದು? ಇನ್ನು ಆ ಉತ್ತರಕ್ಕೆ ಅಪ್ಪ
ಹೇಗೆ ಪ್ರತಿಕ್ರಿಯೆ ಕೊಡಬಹುದು?
ಸ್ವಭಾವತಃ ದಿವಾಕರನ ಅಣ್ಣ ಒಂದಿಷ್ಟು ಉದ್ರಿಕ್ತ ಸ್ವಭಾವದವನು. ಮಗಳು
ಲಾವಣ್ಯ ಒಳ್ಳೆಯ ವಿದ್ಯಾವಂತೆಯಾಗಬೇಕೆಂದು ಎಲ್ಲ ಅಪ್ಪಂದಿರಂತೆ ಬಯಸಿದವನು. ಹಲವಾರು ನಿರೀಕ್ಷೆ
ಇಟ್ಟುಕೊಂಡವನು. ಇನ್ನೂ ಕಾಲೇಜಿನ ಪ್ರಥಮ ವರ್ಷದಲ್ಲಿರುವ ಎಳೆಪ್ರಾಯದ ಹುಡುಗಿ ಹೀಗೆ ಪ್ರೇಮದ
ಸೆಳೆತಕ್ಕೆ ಸಿಲುಕುತ್ತಾಳೆ ಎಂದು ನಿರೀಕ್ಷೆ ಇರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಲಾವಣ್ಯ
ಹಾಗೆ ಮಾಡಲಾರಳು ಎಂಬು ಅತಿಯಾದ ವಿಶ್ವಾಸ ಇತ್ತು. ಯಾಕೆಂದರೆ ಲಾವಣ್ಯ ಮನೆಯವರೊಂದಿಗೆ ಅಪ್ಪ ಅಮ್ಮ
ಅಜ್ಜಿ ಹೀಗೆ ಎಲ್ಲರೊಂದಿಗೂ ಯಾವುದೇ ಮುಚ್ಚು ಮರೆ ಇಲ್ಲದೆ ವ್ಯವಹರಿಸುತ್ತಿದ್ದಳು ಇದನ್ನು
ಬಚ್ಚಿಡುತ್ತಾಳೆ ಎಂದರೆ ನಮ್ಮ ಮಕ್ಕಳು ನಮಗರಿವೆ ಇಲ್ಲದೆ
ನಮ್ಮ ವೃತ್ತದ ಪರಿಧಿಯಿಂದ ಹೊರಗೆ ಜಿಗಿದು ಬಿಟ್ಟಳೇ ಎಂಬ ಆತಂಕ. ಆಕೆಯ ಉತ್ತರ ಯಾವುದಾದರೂ
ಅದನ್ನು ಅರಗಿಸಿಕೊಳ್ಳದ ಪರಿಸ್ಥಿತಿ. ಯಾರು ಹೇಗೆ ಆಕೆಯನ್ನು ವಿಚಾರಿಸಬಹುದು. ಈ ಆತಂಕದಿಂದಲೇ
ಆಕೆಯಲ್ಲಿ ಇದನ್ನು ವಿಚಾರಿಸದೇ ಎಂದಿನಂತೆ ವ್ಯವಹರಿಸಿದ್ದರು. ಆದರೆ ಎರಡು ಮೂರು ದಿನ...ಅತ್ತಿಗೆ
ನಿದ್ದೆಯಿಲ್ಲದೆ ತಳಮಳಿಸಿದ್ದು ಆ ಒಂದು ಸಂದೇಶದಿಂದ ಸ್ಪಷ್ಟವಾಯಿತು.
ಮೆಟ್ರೋದಲ್ಲಿ
ಹತ್ತಿಕುಳಿತವನಿಗೆ ಹೆಚ್ಚು ಜನ ಇಲ್ಲದೇ ಇದ್ದುದರಿಂದ ಕುಳಿತುಕೊಳ್ಳುವುದಕ್ಕೆ ಜಾಗ ಸಿಕ್ಕಿತು.
ಹಾಗಾಗಿ ಮೆಲ್ಲಗೆ ಹಳದಿ ಕಾಗದ ಕೈಗೆತ್ತಿಕೊಂಡು ನೋಡಿದ. ಆ ಹಳದಿ ಕಾಗದ....ಗೊತ್ತಿದೆ
ಮನೆಯಲ್ಲಿದ್ದ ಪ್ಯಾಡ್ ನಿಂದ ಕಿತ್ತು ತೆಗೆಯಲಾಗಿತ್ತು.
ಸಾಮಾನ್ಯವಾಗಿ ಮನೆಯಲ್ಲಿ ಅದು ಇದೂ ಅಂತ ಗೀಚುವುದಕ್ಕೆ ಒಂದು ಪ್ಯಾಡ್ ಇಟ್ಟಿದ್ದರು.
ಅದರಿಂದಲೇ ಹರಿದು ಕಾಗದವನ್ನು ಬರೆದಿದ್ದಳು. ನಿಧಾನವಾಗಿ ತೆಗೆದು ನೋಡಿದ.
ಅವಸರವಸರದಲ್ಲಿ ಬರೆದಂತೆ ಕೈ
ಬರಹವಿತ್ತು. ಸೊಟ್ಟಗೆ ವಕ್ರವಾಗಿ ಎಲ್ಲೇಲ್ಲಿಯೋ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಂತೆ
ಕಂಡಿತು. ಮುಖ್ಯವಾಗಿ ಇಂದಿನ ಮಕ್ಕಳಂತೆ ಕನ್ನಡ ಬರಹದಲ್ಲಿ ಲಾವಣ್ಯ ಸ್ವಲ್ಪ ಹಿಂದೆ. ಆಕೆಗೆ
ಆಂಗ್ಲದಷ್ಟು ಸಲೀಸಾಗಿ ಕನ್ನಡ ಬರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅಕ್ಷರ ಮಾತ್ರವಲ್ಲ
ಬೆರೆದ ಒಕ್ಕಣೆಯೂ ವ್ಯಾಕರಣ ಬದ್ದವಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ಪತ್ರಗಳು ಮುದ್ದಾಗಿ
ಸುಂದರವಾಗಿ ಇರುತ್ತವೆ. ಸುಂದರ ಅಕ್ಷರಗಳು ಆಸಕ್ತಿಯಿಂದ ಬರೆಯುತ್ತಾರೆ. ಆದರೆ ಇದು ತೀರಾ
ಆನಾಸಕ್ತಿಯಿಂದ ಗೀಚಿದಂತೆ ಇತ್ತು. ಬರೆಯುವಾಗ ಇದ್ದ ಭಯ ಆತಂಕ ಅಲ್ಲಿನ ಒಕ್ಕಣಿಗೆಯಲ್ಲೂ ಬರೆದ
ಶೈಲಿಯಲ್ಲೂ ವ್ಯಕ್ತವಾಗುತ್ತಿತ್ತು.
ಪತ್ರದಲ್ಲಿ ಹೇಳಿದ್ದನ್ನೇ ಪದೇ
ಪದೇ ಬರೆಯಲಾಗಿತ್ತು. ಒಂದೇ , ಯಾರೋ ಹುಡಗನಿಗೆ ಬರೆದ ಪತ್ರವದು ಎಂದು ಮೇಲ್ನೋಟಕ್ಕೆ ತಿಳಿದು
ಬಿಡುತ್ತಿತ್ತು. ಎಲ್ಲೂ ಹೆಸರು ಹಾಕಿರಲಿಲ್ಲ. ಎಲ್ಲೂ ಹೆಸರನ್ನಾಗಲೀ ವ್ಯಕ್ತಿಯನ್ನಾಗಲಿ
ಉಲ್ಲೇಖಿಸಲಿಲ್ಲ.ನೇರ ವಿಷಯವನ್ನು ಬರೆದಿದ್ದಳು. ...ನನಗೆ ಈಗ ಯೋಚಿಸುವುದಕ್ಕೆ ಆಗುತ್ತಿಲ್ಲ.
ಮನೆಯಲ್ಲಿ ತಿಳಿದರೆ ಗಲಾಟೆಯೆ ಆಗಿಬಿಡುತ್ತದೆ. ನೀನು ತುಂಬ ಇಷ್ಟ ಆದರೆ...ಅದನ್ನು ಹೇಳುವುದಕ್ಕೆ
ಆಕೆಯಲ್ಲಿ ಒಂದು ಭಯವಿದ್ದಂತೆ ಭಾಸವಾಗಿತ್ತು. ಹೀಗೆ ಹೇಳಿದ್ದನ್ನೇ ಪದೇ ಪದೇ ಹೇಳಿದ್ದನ್ನು
ನೋಡಿದರೆ ಲಾವಣ್ಯ....ತನ್ನ ಲವ್ವಿ...ನಿಜಕ್ಕೂ ಲವ್ ನಲ್ಲಿ ಸಿಕ್ಕಿಕೊಂಡಳೇ ಎಂದು ದಿವಾಕರನಿಗೆ
ಅಚ್ಚರಿಯಾಗಿಬಿಟ್ಟಿತು. ಆದರೂ ಇಂದು ಅಷ್ಟು ಮಾತನಾಡಿದ ಲಾವಣ್ಯ ಇದರ ಒಂದು ವಿಷಯವನ್ನೂ ಯಾಕೆ ಹೇಳಿಲ್ಲ? ತನ್ನಲ್ಲಿ ಎಲ್ಲವನ್ನು ಹೇಳುತ್ತಿದ್ದ ಲವ್ವಿ ಈಗ ಮುಚ್ಚಿಡುವ
ಹಂತವನ್ನು ದಾಟಿಬಿಟ್ಟಳೇ? ಯಾಕೋ ಮನಸ್ಸು ಹಿಂಡಿದಂತಾಯಿತು. ಇನ್ನೂ ಆಕೆ ಪುಟ್ಟ ಬಾಲೆ ಅಂತ
ತಿಳಿದಿದ್ದ ಅದೇ ಭಾವನೆಯಲ್ಲಿದ್ದ ದಿವಾಕರನಿಗೆ ಆಕೆ ದೂರವಾದಂತೆ ಭಾಸವಾಗಿ ಅದನ್ನು
ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಈಗ
ಆತನಿಗಿದ್ದ ಆತಂಕ ಒಂದೇ ....ತಾನೀಗ ಏನು ಮಾಡಬಹುದು? ಇಷ್ಟಾದರೂ...ಅತ್ತಿಗೆ ಈ ಪತ್ರ
ಎತ್ತಿ ಮೂರುದಿನವಾದರೂ ಲಾವಣ್ಯನಿಗೆ ಪತ್ರ ಕಳೆದು ಹೋದ ಬಗ್ಗೆ ಯಾಕೆ ಆತಂಕವಿಲ್ಲ? ಆಕೆ ಅದನ್ನು ಹುಡುಕುವ ಪ್ರಯತ್ನ ಮಾಡಲಿಲ್ಲವೇಕೆ? ಅಮ್ಮನಲ್ಲಿ ಕೇಳಬೇಕಿತ್ತಲ್ಲ?
ಮನೆಗೆ ಬಂದು ಇನ್ನೇನು ಮಲಗುವ
ಸನ್ನಾಹ ಆಗಬೇಕಾದರೆ ಮೊಬೈಲ್ ಸದ್ದು ಮಾಡಿತು. ನೋಡಿದರೆ ಅತ್ತಿಗೆಯ ಕರೆ. ಕರೆ ಎತ್ತಿಕೊಂಡಾಗ
ಅತ್ತಿಗೆಯದು ಮತ್ತದೇ ಆತಂಕದ ಧ್ವನಿ. ಏನಾದರೂ ಮಾಡೋಣ ಅಂತ ಸಾಂತ್ವನ ಮಾಡಿ ಆರಾಮದಲ್ಲಿ ನಿದ್ದೆ
ಮಾಡಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ. ಮಲಗಿದರೂ ಮತ್ತದೇ ಯೋಚನೆ. ಅತ್ತಿಗೆ ಒತ್ತಿ ಒತ್ತಿ
ಹೇಳಿದ ಮಾತು. ದಿವಾಕರನಲ್ಲದೇ ಬೇರೆ ಯಾರೂ ಅವಳಲ್ಲಿ ಮುಕ್ತವಾಗಿ ಕೇಳುವ ಹಾಗಿಲ್ಲ. ಸಮಾಧಾನದಲ್ಲಿ
ಮಾತನಾಡುವುದಿದ್ದರೆ ಅದು ದಿವಾಕರ ಮಾತ್ರ. ಹಾಗಾಗಿ ಕೊನೆಯ ಅವಕಾಶ ಎಂದರೆ ಅದು ದಿವಾಕರ ಮಾತ್ರ. ಈ
ಮಾತು ಅಕ್ಷರಶಃ ಸತ್ಯ. ಆತನಿಗೆ ಲಾವಣ್ಯನ ಮೇಲೆ ಅಪರಿಮಿತ ವಿಶ್ವಾಸ. ಏನಿದ್ದರೂ ಆಕೆ
ಇವುಗಳನ್ನೆಲ್ಲ ಮುಚ್ಚಿಡುವ ಸ್ವಭಾವದವಳಲ್ಲ. ಅಥವಾ ಆಕೆಯಲ್ಲಿ ಮುಕ್ತವಾಗಿ ಕೇಳುವುದಕ್ಕೆ
ದಿವಾಕರನಲ್ಲೂ ಅಂಜಿಕೆ ಇರಲಿಲ್ಲ. ಏನು ಎಂದು ಕೇಳಿಬಿಡಬಹುದು. ಅದರೂ ಕೊನೆಯಲ್ಲಿ ಎಷ್ಟೇ
ವಿಶ್ವಾಸವಿದ್ದರೂ...ಒಂದು ಸಣ್ಣ ಆತಂಕವಿಲ್ಲದೇ ಇರಲಿಲ್ಲ.
ಈಗ ಕೇಳಬೇಕು. ಆದರೆ ಅದಕ್ಕೆ ಒಂದು ಸಂದರ್ಭ ಒದಗಿಬರಬೇಕು. ಅದು ಆದಷ್ಟು ಬೇಗ
ಒದಗಿಬರಬೇಕು. ಯಾಕೆಂದರೆ ಇಂತಹ ವಿಚಾರಗಳು ಸಮಯ ಕಳೆದಂತೆ ಹಲವು ಆಯಾಮಗಳನ್ನು ಪಡೆಯುತ್ತವೆ.
ವಾರಾಂತ್ಯ ಶನಿವಾರ
ರಾತ್ರಿಯನ್ನು ಇದಕ್ಕೆ ಮೀಸಲಾಗಿರಿಸಿ ದಿವಾಕರ ಏನೋ ಒಂದು ನಿರ್ಧಾರ ಮಾಡಿ ಹೊರಟ. ಎಂದಿನಂತೆ
ರಾಜಾಜಿನಗರ ಮೆಟ್ರೋದಲ್ಲಿ ಇಳಿದು ಮನೆಗೆ ಬಂದರೆ ಆತ್ತಿಗೆ ಮತ್ತು ಅಮ್ಮ ಮಾತ್ರ ಇದ್ದರು.
ಅತ್ತಿಗೆಯದ್ದು ಮತ್ತದೇ ಆತಂಕದ ಮಾತುಗಳು. ಅಮ್ಮನದ್ದು ಅದೇ ಹಳೆಯ ವರಸೆ. ಮಕ್ಕಳಿಗೆ ಸದರ ಸಲುಗೆ
ಹೆಚ್ಚಾಯಿತು. ಹಾಗಾಗಿ ಇಂತಹವುಗಳೆಲ್ಲಾ ಸಹಜ ಎನ್ನುವಂತೆ ನಡೆಯುತ್ತದೆ. ಕೇವಲ ಒಂದೆರಡು ಗೆರೆ ಬರೆದ ಒಂದು ಕಾಗದದ ತುಂಡು
ಇಷ್ಟೆಲ್ಲಾ ಕೋಲಾಹಲಕ್ಕೆ ಕಾರಣವಾಗುತ್ತದಲ್ಲಾ ಎಂದು ದಿವಾಕರನಿಗೆ ಆಶ್ಚರ್ಯ. ಕೊನೆಗೆ
ಅತ್ತಿಗೆಯಲ್ಲಿ ಅಮ್ಮನಲ್ಲಿ ಹೇಳಿದ,
. " ಲಾವಣ್ಯ ನಮ್ಮ ಮಗಳು. ಆಕೆಯಲ್ಲಿ ಮೊದಲು ನಾವು ವಿಶ್ವಾಸ ಇಡಬೇಕು. ಹೀಗೆ
ವಿಶ್ವಾಸವೇ ಇಲ್ಲದಂತೆ ವ್ಯವಹರಿಸಿದರೆ ಅವರ ಮನಸ್ಸಿಗೂ ಒಂದು ಆತಂಕ ಇದ್ದೇ ಇರುತ್ತದಲ್ವಾ? ನಾವು ಬೆಳೆಸಿದ ಮಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದೇ? ಆಕೆಗೂ ಇದೆಲ್ಲ ಅರಿವಿದೆ? ನಮ್ಮ ಬಗ್ಗೆ ಯೋಚನೆ ಮಾಡದೆ
ಇರಲಾರಳು. ಅಂತಹ ಸ್ವಭಾವ ಆಕೆಯದಲ್ಲ. ಏನಿದ್ದರೂ ಅದನ್ನು ಸರಿಪಡಿಸುವ ತಾಳ್ಮೆಯನ್ನು ನಾವು
ಮೈಗೂಡಿಸಿಕೊಳ್ಳಬೇಕು. ಲಾವಣ್ಯನ ಬಗ್ಗೆ ನನಗೆ ವಿಶ್ವಾಸವಿದೆ. ನೋಡೋಣ"
ರಾತ್ರಿ ಟ್ಯೂಷನ್ ಮುಗಿಸಿ
ಲಾವಣ್ಯ ಬಂದಳು. ಮೊನ್ನೆ ತಾನೆ ಬಂದು ಹೋದ ಚಿಕ್ಕಪ್ಪ ಪುನಃ ಯಾಕೆ ಬಂದುಬಿಟ್ಟರು ಎಂದು ಆಕೆಗೆ
ಅಚ್ಚರಿ. ಅದೂ ಮನೆಯಲ್ಲಿನುಳಿದುಕೊಳ್ಳುವ ಸನ್ನಾಹ ನೋಡಿ ತುಂಬ ಸಂಭ್ರಮಿಸಿದಳು. ಮರುದಿನ ಹೇಗೂ
ರಜಾದಿನ.
ರಾತ್ರಿಯ ಊಟವಾದನಂತರ ದಿವಾಕರ ಲಾವಣ್ಯನನ್ನು ಕರೆದುಕೊಂಡು ಮನೆಯ ಮೇಲಿನ ಟೇರೆಸ್ ಗೆ ಹೋದ. ಮೊದಲೆಲ್ಲ...ರಾತ್ರಿಯ
ಹೊತ್ತು ಅಕೆಯೊಂದಿಗೆ ಅಲ್ಲಿ ಕಳೆಯುತ್ತಿದ್ದ. ಅದು ಇದೂ ಹರಟೆ ಹೊಡೆದುಕೊಂಡು ಇರುತ್ತಿದ್ದರು.
ಇಂದೂ ಹಾಗೆ. ಮೇಲೆ ಹೋಗಿ ಕೊನೆಯಲ್ಲಿ ಕೇಳಿದ..." ಲವ್ವಿ ಒಂದು ಮಾತು ಕೇಳಲಾ? ಇದು ಎಂತದು...?" ಎಂದು..ಹಳದಿ
ಕಾಗದ ತೆರೆದು ತೋರಿಸಿದ.
" ಆಕೆ ..ಓ ಇದು
ನಿಮಗೆಲ್ಲಿ ಸಿಕ್ಕಿತು ಚಿಕ್ಕಪ್ಪಾ?" ಏನೂ ಆಗಿಲ್ಲ ಎಂಬಂತೆ ಇತ್ತು
ಆಕೆಯ ಧ್ವನಿ. ಏನಾದರೂ ಒಂದು ಆತಂಕವನ್ನು ನಿರೀಕ್ಷೆಮಾಡಿದ ದಿವಾಕರನಿಗೆ ದೊಡ್ಡ ಅಚ್ಚರಿ .
"ನಿನ್ನ ಅಮ್ಮನೇ ಕೊಟ್ಟರು
ಮಾರಾಯ್ತಿ. ಎಂತ ಸಂಗತಿ ಇದು ಹೇಳು. ನೀನು ಹಾಗೆಲ್ಲ ಮುಚ್ಚಿಡುವ ಜನ ಅಲ್ಲ. ನನ್ನಲ್ಲಿ ಹೇಳು. ಯಾವ ಆತಂಕವೂ ಬೇಡ"
" ಏ ಚಿಕ್ಕಪ್ಪ ಎಂತ
ನೀವು. ನಿಮಗೆ ಗೊತ್ತಿಲ್ಲವ. ನನ್ನನ್ನು. "
ಎಂದು ತಿವಿದು ಕೇಳಿದಾಗ ಒಂದು ಆತ್ಮಿಯತೆ ಮತ್ತೊಂದು ನಿರಾತಂಕದ ಸ್ಪರ್ಶ ಸುಖ.
" ನನಗೆ ಗೊತ್ತುಂಟು
ಲವ್ವಿ. ಆದರೂ ನಾನು ಕೇಳಬೇಕಲ್ಲ?
ಇದು ಏನು ಹೇಳು?"
"ನೀವೆಂತ ಚಿಕ್ಕಪ್ಪ..
ತಲೆ ಬಿಸಿ ಆಯ್ತ? ಇದು ನನ್ನದು ಅಂತ ಅನ್ನಿಸ್ತದ? ನನ್ನ ಕೈ ಬರಹ
ಹಾಗೆ ಉಂಟಾ? ಅದು ನಾನು ಬರೆದದ್ದಲ್ಲ. ಅಮ್ಮನಿಗೆ ಅದು ಎಲ್ಲಿ ಸಿಕ್ಕಿತು? " ದಿವಾಕರ
ಅಮ್ಮನಿಗೆ ಸಿಕ್ಕಿದ ಬಗೆಯನ್ನು. ಹೇಳಿದ. ವಾಸ್ತವದಲ್ಲಿ ಆಕೆಗೆ ಅದರ ಬಗ್ಗೆ ಎಂದೋ ಮರೆತು
ಹೋಗಿತ್ತು. ನಂತರ ಆಕೆ ಅದರ ಕಥೆಯನ್ನು ಹೇಳತೊಡಗಿದಳು.
ಅದು ಆಕೆಯ ಗೆಳತಿ ಭವಂತಿ ಬರೆದ
ಕಾಗದ. ಕಳೆದ ವಾರ ಆಕೆ ಓದುವುದಕ್ಕಾಗಿ ಇಲ್ಲಿ ಮನೆಗೆ ಬಂದಿದ್ದಳು. ಇವರಿಬ್ಬರೇ ಕೋಣೆಯಲ್ಲಿರುವಾಗ
ಈ ಕಾಗದ ಬರೆದಿದ್ದಳು. ಭವಂತಿಗೆ ಒಬ್ಬ ಹುಡುಗನ ಸ್ನೇಹವಿತ್ತು. ಸ್ನೇಹವೆಂದರೆ ಈಕೆಯ ಲೆಕ್ಕದಲ್ಲಿ
ಅದು ಕೇವಲ ಸ್ನೇಹವಾದರೂ ಹುಡುಗ ಮಾತ್ರ ವಿಪರೀತವಾಗಿ ಪ್ರೇಮಿಸುತ್ತಿದ್ದ. ಪ್ರತಿ ಬಾರಿಯೂ
ಭವಂತಿಗೆ ಪ್ರೇಮಿಸುವಂತೆ ಒತ್ತಾಯ ಮಾಡುತ್ತಿದ್ದ. ಆತನ ಒತ್ತಾಯ ಪ್ರೀತಿ ನೋಡಿ ಆಕೆಯೂ ಅದೇ
ವಯಸ್ಸಿನವಳಲ್ವ...ಒಂದಿಷ್ಟು ಮೆತ್ತಗಾಗಿ ಆತನ ಬಗ್ಗೆ ಕ್ರಶ್ ಆದರೂ ಆಕೆಗೆ ಇನ್ನೂ ಓದಬೇಕು, ಇಂತಹುದರಲ್ಲಿ ಸಿಲುಕಬಾರದೆಂಬ ಭಯ ಆತಂಕವಿತ್ತು. ಎಲ್ಲಕ್ಕಿಂತ ಮೇಲಾಗಿ
ಅಪ್ಪ...ಅಪ್ಪನಿಗೆ ನೋವು ಕೊಡುವುದಕ್ಕೆ ಆಕೆಗೆ ಇಷ್ಟವಿರಲಿಲ್ಲ. ಅಮ್ಮನ ಅಗಲಿಕೆಯ ನಂತರ ಅಪ್ಪ
ಬಹಳಷ್ಟು ನೋವು ಅನುಭವಿಸಿ ನಿಜ ಬದುಕಿಗೆ ಮರಳಿದ್ದಾರೆ. ಇನ್ನೂ ಅಪ್ಪ ಆ ನೋವಿನಿಂದ
ಚೇತರಿಸಿಕೊಂಡಿಲ್ಲ. ತಾನು ಬಿಟ್ಟರೆ ಅಪ್ಪ ಮತ್ತೆ ಏಕಾಂಗಿ. ಅಂತಹ ಅಪ್ಪನಿಗೆ , ಆ ಅಪ್ಪನ ಪ್ರೀತಿಗೆ ದ್ರೋಹ ಮಾಡುವುದು ಆಕೆಗೆ ಇಷ್ಟವಿಲ್ಲ. ಆದರೂ..
ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂದಿಷ್ಟು ಪ್ರೇಮವಿತ್ತು. ಏನು ಮಾಡುವುದು ಎಂದು ಅದರ ಬಗ್ಗೆಯೇ
ಯೋಚಿಸುತ್ತಿದ್ದಳು. ಅದನ್ನೆ ಲಾವಣ್ಯನಲ್ಲಿ ಹೇಳಿಕೊಂಡಿದ್ದಳು. ಹಾಗಾಗಿ ಆ ಕಾಗದವನ್ನು ಅವಳು
ಹೇಳಿದಂತೆ ಬರೆದಿದ್ದಳು.
ದಿವಾಕರನಿಗೆ ದೊಡ್ಡ ಹೊರೆ
ಕೆಳಗಿಳಿಸಿದ ಅನುಭವವಾದರೆ, ಲಾವಣ್ಯನ ಮೇಲಿಟ್ಟ ವಿಶ್ವಾಸ ಹುಸಿಯಾಗಲಿಲ್ಲವಲ್ಲ ಎಂಬ ಸಂತೋಷ
ಮತ್ತೊಂದೆಡೆ. ಇಷ್ಟು ಸಣ್ಣ ವಿಷಯವನ್ನು ಅತ್ತಿಗೆ ಕೇಳಬಹುದಿತ್ತು. ಆದರೆ ...ಅತ್ತಿಗೆಗೆ ತನ್ನ
ಮೇಲೆ ವಿಶ್ವಾಸ. ತಾನಲ್ಲದೇ ಇದನ್ನು ಪ್ರಸ್ತಾಪ ಮಾಡುವ ವ್ಯಕ್ತಿ ಬೇರೆ ಇಲ್ಲ ಎಂದೇ ದಿವಾಕರನಲ್ಲಿ ಹೇಳಿದ್ದರು.
ದಿವಾಕರ ನಿಟ್ಟುಸಿರು ಬಿಟ್ಟು
ಹೇಳಿದ " ನಿನಗೆ ಗೊತ್ತಾ ಲವ್ವಿ...ನಿನ್ನಮ್ಮ ಮೂರು ದಿನ ಆಯ್ತು ನಿದ್ದೆ ಮಾಡದೆ?"
ಆಕೆ ಉದಾಸೀನತೆಯಿಂದ ಹೇಳಿದಳು
" ಬಿಟ್ಟುಬಿಡಿ ಚಿಕ್ಕಪ್ಪ...ಅಮ್ಮ ಅಲ್ವ...ಇರಲಿ. ಈಗ ಭವಂತಿಯ ಕಥೆಗೆ ಏನು ಮಾಡುವ ಹೇಳಿ? ಆಕೆಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ಅದೇ ಯೋಚನೆಯಲ್ಲಿದ್ದಾಳೆ.
ಮನೆಯಲ್ಲಿದ್ದರೆ ಅವನು ಪದೇ ಪದೇ ಕಾಲ್ ಮಾಡ್ತಾನೆ. ಅಪ್ಪ ಇಲ್ಲದಾಗ ಬರಬೇಕಾ ಅಂತ
ಕೇಳುತ್ತಿದ್ದಾನೆ."
ಇಂತಹ ಕಥೆಗಳೆಲ್ಲ ಇದೆ ತರಹ
ಸಂಭವಿಸುತ್ತದೆ. " ನೋಡು ಲವ್ವಿ...ಮೊದಲು ನೀನು ಇಂತಹ ವಿಚಾರಗಳಿಗೆ ತಲೆ ಹಾಕಬೇಡ. ನೀನು
ಇದ್ದಿ ಎಂದು ತಿಳಿದರೆ, ಅವನು ನಿನ್ನ
ಹಿಂದೆ ಬಿದ್ದಾನು. ಅಲ್ಲಿಗೆ ಬಿಟ್ಟು ಬಿಡು. ಅವಳಿಗೆ ಮೊದಲು ಓದುವುದಕ್ಕೆ ಕಾನ್ಸಂಟ್ರೇಟ್
ಮಾಡುವುದಕ್ಕೆ ಹೇಳು."
"ಚಿಕ್ಕಪ್ಪ...ಅದೆಲ್ಲ
ನಾನು ಹಲವು ಸಲ ಹೇಳಿ ಆಯ್ತು. ಆದರೆ ಅದ್ಯಾಕೋ ಆಕೆ ಆಚೆಗೆ ಹೆಚ್ಚು ವಾಲುತ್ತಾ ಇದ್ದಾಳೆ. ಲವ್
ಮಾಡುವುದು ತಪ್ಪು ಹೇಗಾಗುತ್ತದೆ ಚಿಕ್ಕಪ್ಪ. ಅಷ್ಟಕ್ಕೂ ಅದನ್ನು ಕೇವಲ ಪ್ರೆಂಡ್ ಶಿಪ್ ಅಂತ
ಮಾಡಿದರೆ ತಪ್ಪುಂಟಾ. ಯಾರನ್ನು ಯಾರೂ ಪ್ರೆಂಡ್ ಶಿಪ್ ಮಾಡಿಕೊಳ್ಲಬಹುದು. ಅದರಲ್ಲಿ ತಪ್ಪಿಲ್ಲ. ಇದು
ಪರಿಶುದ್ದ ಪ್ರೇಮ ಅಂತ ತಿಳಿಯಬೇಕು. "
"ಅದೆಲ್ಲ ವಿಚಾರ
ಅಲ್ಲಮ್ಮ. ಈಗ ಈ ಪ್ರಂಡ್ ಶಿಪ್ ಎಂಬುದೇ ತಪ್ಪು. ಅದು ಆರಂಭವಾಗುವುದು ಹೀಗೆ. ನಂತರ ಅದು ಕವಲು
ಬದಲಾಗಿಬಿಡುತ್ತದೆ. ಪ್ರೆಂಡ್ ಶಿಪ್ ನಲ್ಲಿ ಕಾಮ ಇಲ್ಲ. ಆದರೆ..ಯೋಚಿಸು, ಪರಿಶುದ್ದ ಪ್ರೇಮದಲ್ಲು ಕಾಮ ಇಲ್ಲ. ಆದರೆ ಇದರಲ್ಲಿ ಕಾಮ ಇಲ್ಲ ಅಂತ
ಹೇಗೆ ಹೇಳುತ್ತಿಯ.? ಮೊದಲಿಗೆ ಇದು ಪರಿಶುದ್ದ ಪ್ರೇಮದ ಲೇಬಲ್ ಅಂಟಿಸಿಕೊಂಡೇ ಇರುತ್ತದೆ. ಆ
ಲೇಬಲ್ ಎಷ್ಟು ದಿನ ಇರುತ್ತದೆ ಹೇಳು? ಒಂದು ದಿನ ಅದೂ ಕಿತ್ತುಕೊಂಡು
ಬರುತ್ತದೆ. "
" ಇದು ಹಾಗಲ್ಲ ಚಿಕ್ಕಪ್ಪ. ಆ ಹುಡುಗ ನನಗೂ ಗೊತ್ತು ಒಳ್ಳೆಯ ಹುಡುಗ. "
" ಅದು ಹೇಗೆ ಹೇಳ್ತಿಯಾ ಲವ್ವಿ? ಎಂತಹ ಪರಿಶುದ್ದ ಪ್ರೇಮವಾದರೂ
ಅಲ್ಲಿ ಕಾಮ ಇದ್ದೇ ಇರುತ್ತದೆ. ಅರೋಗ್ಯ ಪೂರ್ಣ ಹಾರ್ಲಿಕ್ಸ್, ಬೋರ್ನ್ ವಿಟಾ
ಇದ್ದ ಹಾಗೆ ಅದರಲ್ಲೂ ಸಕ್ಕರೆ ಇರಲ್ವ..ಅದು
ಆರೋಗ್ಯಕ್ಕೆ ಹಾನಿಕಾರಕ. ಹಾಗೇ ಈ ಪ್ರೇಮ. ಅದರಲ್ಲಿ ಒಂದಿಷ್ಟಾದರೂ ಕಾಮ ಇದ್ದೇ ಇರಬೇಕು. ಕಾಮ
ಎಂದು ಇಲ್ಲದೇ ಇದ್ದರೆ ಪ್ರೇಮ ಹುಟ್ಟಿಕೊಳ್ಳುವುದಿಲ್ಲ. ಪ್ರೇಮಕ್ಕೆ ಮೂಲಭೂತವಾದ ಯಾವ ಗುಣಗಳೂ
ಇರುವುದಿಲ್ಲ. ಆಕೆಗೆ ಬರೀ ಪ್ರೇಮ ಎಂದಾದರೆ...ಯಾವುದೋ ಹುಡುಗಿಯ ಮೇಲೆ ಹುಟ್ಟಬಹುದಿತ್ತು. ಆ
ಹುಡುಗನಿಗೂ ಹಾಗೆ ಪ್ರೇಮ ಎಂದರೆ ಯಾವುದೋ ಹುಡುಗನ ಮೇಲೂ ಆ ಭಾವನೆ ಬರಬಹುದಿತ್ತು. ಅಲ್ಲಿ
ಒಂದಿಷ್ಟಾದರೂ ಕಾಮ ಅದು ವಯೋಸಹಜವಾದರೂ ಇರಲೇ ಬೇಕು. ಕಾಮ ಎಂಬುದು ಇಂದ್ರಿಯ ಸಂವೇದನೆ. ಅದು
ಹೃದಯದ ಸಂವೇದನೆಯಲ್ಲ. ಇಂದ್ರಿಯವನ್ನು ಮೀರಿ ನಿಲ್ಲುವುದೇ ಜೀವನ. ಹಾಗಾಗಿ ಭವಂತಿಗೆ ಹೇಳು...ಆ
ಭಾವನೆ ಏನಿದ್ದರೂ ಅದು ತಪ್ಪಲ್ಲ. ಆದರೆ ಅದು ಅಕಾಲಿಕವಾದರೆ ತಪ್ಪು. ಮಳೆ ಬರಬೇಕು. ಆದರೆ ಅದು
ಯಾವಾಗಲೋ ಬಂದರೆ ಅನಾಹುತಕ್ಕೆ ಕಾರಣವಾಗುತ್ತದೆ. "
ಲಾವಣ್ಯನಿಗೆ ಒಂದಿಷ್ಟು
ಸಮಾಧಾನವಾದ ಹಾಗೆ ಇತ್ತು. ನಿಜವಾಗಿಯು ಅಲ್ಲಿ ನಿರಾಳವಾದದ್ದು ದಿವಾಕರ. ಒಂದು ಹಳದಿ ಕಾಗದ ಏನೆಲ್ಲ ಆತಂಕವನ್ನು ಸೃಷ್ಟಿ
ಮಾಡಿತ್ತು. ಒಂದು ವೇಳೆ ಲಾವಣ್ಯನಿಗೆ ಆರೀತಿಯ ಒಂದು ಭಾವನೆ ಇರುತ್ತಿದ್ದರೆ....ಆದರೆ
ಲಾವಣ್ಯನನ್ನು ಸಂಪೂರ್ಣ ತಿಳಿದಿದ್ದಲ್ಲಿ ಆ ಆತಂಕಕ್ಕೆ ಅವಕಾಶವಿರುತ್ತಿರಲಿಲ್ಲ. ಆಕೆಯ ಅಪ್ಪ
ಅಮ್ಮನಲ್ಲಿ ಸೂಕ್ಷ್ಮವಾಗಿ ಇದ್ದ ಅವಿಶ್ವಾಸವೇ ಈ ಎಲ್ಲ ಆತಂಕಗಳಿಗೂ ಮೂಲ ಕಾರಣ. ಮೊದಲಿಗೆ ನಾವು
ನಮ್ಮ ಮಕ್ಕಳಲ್ಲಿ ವಿಶ್ವಾಸ ಇರಿಸಬೇಕು. ನಮ್ಮಲ್ಲಿ ಆ ವಿಶ್ವಾಸ ಅವರೂ ಇಡುವಂತೆ ನಾವು
ವ್ಯವಹರಿಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ಈ ಅವಿಶ್ವಾಸವೇ ಎಲ್ಲ ಗೊಂದಲಗಳಿಗೂ
ಕಾರಣವಾಗಿಬಿಡುತ್ತವೆ. ಲಾವಣ್ಯನ ಮೇಲೆ ವಿಶ್ವಾಸ ಇದ್ದುದರಿಂದ...ದಿವಾಕರ ಮುಕ್ತವಾಗಿ ಅವಳಲ್ಲಿ ಕೇಳುವಂತಾಯಿತು.
ನಿರಾತಂಕವಿಲ್ಲದೆ ಆಕೆಯಲ್ಲಿ ಕೇಳಿದ. ಒಂದು ವೇಳೆ
ಅಂತಹ ಭಾವನೆ ಇರುತ್ತಿದ್ದರೆ....ಎಂಬ ಪ್ರಶ್ನೆ ಬರಬಹುದು. ಆದರೆ ದಿವಾಕರನಿಗೆ ಅಲ್ಲಿಯೂ ಅದಕ್ಕೆ
ವಿಪುಲವಾದ ಅವಕಾಶಗಳನ್ನು ಆ ಮನೋಭಾವವೇ ಸೃಷ್ಟಿ
ಮಾಡಿಕೊಡುತ್ತಿತ್ತು.
ಕೊನೆಯಲ್ಲಿ ಲಾವಣ್ಯ ಹೇಳಿದಳು, " ಚಿಕ್ಕಪ್ಪ ನನಗೂ ಇದೇ ಬಗೆಯ ಸಂದೇಹಗಳು ಇತ್ತು.
ಪ್ರೇಮದಲ್ಲಿ ಸಕ್ಕರೆಯಂತೆ ಒಂದಿಷ್ಟಾದರೂ ಕಾಮ ಇದ್ದೇ ಇರುತ್ತದೆ. ಯಾವಾಗಲೂ ಚಿಕ್ಕಪ್ಪ ಈ
ಸಂದೇಹ ಒಳ್ಳೆಯ ಉತ್ತರ ಹೇಳಿದ್ದೀರಿ. ಅದನ್ನೇ ಭವಂತಿಗೆ ಹೇಳುತ್ತೇನೆ. ಮೊದಲು ಆಕೆ ವಿದ್ಯಾಭ್ಯಾಸ
ಪೂರ್ಣ ಗೊಳಿಸಬೇಕು. ಈಗ ಅವಕಾಶ ಎಂಬುದು ಇದ್ದರೆ ಅದು ವಿದ್ಯಾಭ್ಯಾಸಕ್ಕೆ. ಅದನ್ನು ಅವಳು
ಉಪಯೋಗಿಸಬೇಕು. ನಂತರ ಪ್ರೇಮವೋ ಕಾಮವೋ...ಆಯ್ಕೆಗೆ ಸಂದರ್ಭಗಳೂ ಇವೆ. ಸಮಯವೂ ಇದೆ. ಅದೇ ಅಲ್ವಾ
ಸರಿ ಚಿಕ್ಕಪ್ಪಾ?"
"ಹೌದು ಲವ್ವಿ....ನಿನಗೆ ಇದೆಲ್ಲ ಸರಿಯಾಗಿ ಅರ್ಥವಾಗುತ್ತದೆ. ಹಾಗಾಗಿಯೇ ನಿನ್ನ ಮೇಲೆ
ನನಗೆ ವಿಶ್ವಾಸ. ಮುಂದೆಯೂ ಹಾಗೆ. ಈ ವಿಶ್ವಾಸವೇ ನೀನು ನನಗೆ ಲವ್ವಿ....ಯಾಗುವುದಕ್ಕೆ
ಕಾರಣ."
"ಥ್ಯಾಂಕ್ಸ್ ಚಿಕ್ಕಪ್ಪಾ" ಅಂತ ಎಂದಿನಂತೆ ಲಾವಣ್ಯ ನಗುತ್ತಾ ಹೇಳಿದಾಗ....ಈಕೆ
ನನ್ನ ಲವ್ವಿ ಎಂದುಕೊಂಡು ದಿವಾಕರ ಎದೆಯ ಮೇಲೆ ಕೈ
ಇಟ್ಟು ದೀರ್ಘ ಉಸಿರನ್ನು ಎಳೆದ.