ತಮ್ಮ ವಯಸ್ಸಿಗಿಂತಲೂ ಕೆಳಗಿನವರು ಅಥವಾ ನಮ್ಮ ಸಮವಯಸ್ಕರು ಇನ್ನಿಲ್ಲ ಎನ್ನುವಾಗ ನಾವೂ ಅಧೀರರಾಗಿಬಿಡುತ್ತೇವೆ. ಯಾಕೆ ಹೀಗೆ ಅಂತ ಕಾರಣ ಹುಡುಕುತ್ತೇವೆ. ಹಲವು ಸಲ ಇದು ಸ್ವಯಂಕೃತ ಅಪರಾಧ ಎನ್ನುವಾಗ ಪರಿತಪಿಸುತ್ತೇವೆ. ಈಗತ್ತಿನಲ್ಲಿ ಗಳಿಸುವುದಕ್ಕೆ ಏನು ಇರುವುದಿಲ್ಲ. ಎಲ್ಲವನ್ನು ಕಳೆದುಕೊಳ್ಳುವುದೇ ಜಗತ್ತಿನ ನಿಯಮ. ಆದರೂ ಅವಾಸ್ತವಿಕವಾಗಿ ಕಳೆದುಕೊಳ್ಳುವಾಗ ನಮ್ಮಲ್ಲಿ ಅಪರಾಧಿ ಭಾವ ಮೂಡುವುದು ಸಹಜ. ನಾವು ಆತನನ್ನು ಕಳೆದುಕೊಂಡೆವು ಅಂತ ಸಹೋದರ ಹೇಳುವಾಗ ಆತನ ನಷ್ಟಕ್ಕೆ ಕೇವಲ ಜಗತ್ತಿನ ನಿಯಮ ಕಾರಣವಾಗುವುದಿಲ್ಲ. ಕಾರಣ ಇಷ್ಟೆ, ಮೃತ ವ್ಯಕ್ತಿ ನಾಲ್ಕು ದಶಕದ ಬದುಕನ್ನೂ ಕಳೆಯುವ ಮೊದಲೆ ಬದುಕನ್ನು ಕಳೆಯುವುದಕ್ಕೆ ಆತನ ಮದ್ಯವ್ಯಸನವೇ ಕಾರಣ. ಕರೆ ಮಾಡಿದಾಗ ನಿನ್ನೆ ಅತನನ್ನ ಕಳೆದುಕೊಂಡೆವು ಅಂತ ದುಃಖದಲ್ಲಿ ಹೇಳುವಾಗ ನಾನು ಹೇಳಿದೆ ಸತ್ಯ ಅದಲ್ಲ.. ಆತನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಾಗಿದೆ. ಈಗ ಅದು ಕೇವಲ ವಾಸ್ತವಿಕ ಸತ್ಯವಾಗಿದೆ. ಯಾಕೆಂದರೆ ಮದ್ಯ ಸೇವನೆ ಅತನನ್ನು ಎಂದೋ ಮಾನಸಿಕವಾಗಿ ನಮ್ಮಿಂದ ದೂರ ಮಾಡಿತ್ತು.
ಒಂದು ಕುಟುಂಬದಲ್ಲಿ ಒಬ್ಬ ಮದ್ಯ ವ್ಯಸನಿ ಇದ್ದರೆ ಆತ ಇದ್ದರೂ ಇಲ್ಲದಂತೆ. ಹಿಂದೆ ಒಂದು ಸಲ ಮದುವೆ ಕಾರ್ಯಕ್ರಮಕ್ಕೆ ಗೋವಕ್ಕೆ ಹೋಗಿದ್ದೆ. ಆ ಮದುವೆಯ ಮದುಮಗಳು ನಮ್ಮೂರಿನವಳು. ಸಹಜವಾಗಿ ಆಕೆಯ ಕೆಲವು ಸಂಭಂಧಿಗಳು ಜತೆಗೆ ವಾಹನದಲ್ಲಿ ಬಂದಿದ್ದರು. ವಿಚಿತ್ರವೆಂದರೆ ಮದುವೆ ಎಂಬುದು ಅವರಿಗೆ ಗೋವಕ್ಕೆ ಹೋಗುವುದಕ್ಕೆ ಒಂದು ಕಾರಣವಾಗಿತ್ತು. ಏನನ್ನು ಕಾಣಬೇಕಿತ್ತೋ ಅದನ್ನು ಕಾಣದೇ ಇನ್ನೆನೋ ಒಂದರ ಭ್ರಮೆಯಲ್ಲಿ ಮುಳುಗಿಬಿಡುವುದು ಗೋವದ ಆಕರ್ಷಣೆ ಇರಬೇಕೇನೋ. ಗೋವದ ಸೀಮೆ ಪ್ರವೇಶಿಸಿದ ನಂತರ ಅವರಲ್ಲಿ ಹಲವರು ಗೋವೆಯ ಪ್ರವೇಶದ ಉದ್ದೇಶವನ್ನು ಬಿಚ್ಚಿಟ್ಟರು. ಹೋದದ್ದು ವಿವಾಹ ಕಾರ್ಯಕ್ರಮಕ್ಕೆ, ಆದರೆ ಗೋವಾದ ಮದ್ಯದ ಪ್ರಭಾವದಿಂದ ವಿವಾಹ ಕಾರ್ಯಕ್ರಮದ ಒಂದು ಘಳಿಗೆಯಲ್ಲೂ ಅವರ ಅಸ್ತಿತ್ವ ಇರಲಿಲ್ಲ. ಹಗಲು ರಾತ್ರಿ ನಿಶೆ ಏರಿಸಿ ಮುಖ ತೋರಿಸುವ ಯೋಗ್ಯತೆಯಿಂದ ವಂಚಿಸಲ್ಪಟ್ಟು ಕಾರ್ಯಕ್ರಮದಿಂದ ಸೇರಿದ ಬಂಧು ಬಳಗದಿಂದ ಅವರು ದೂರವೇ ಉಳಿದರು. ಮದ್ಯ ಎಂಬುದು ಹತ್ತಿರವಾದಾಗ ಲೋಕ ಅವರಿಂದ ದೂರವಾಗಿಬಿಟ್ಟಿತು. ಮದ್ಯ ವ್ಯಸನ ಎಲ್ಲವನ್ನೂ ದುಃಖವನ್ನು ಮರೆಸುವುದಕ್ಕೆ, ಸುಖದ ಉತ್ತುಂಗದ ಶಿಖರಕ್ಕೆ ಒಯ್ಯುವುದಕ್ಕೆ ಕಾರಣವಾಗುತ್ತದೆ. ಆದರೆ ನಶೆ ಮಾನಸಿಕವಾಗಿ ಇಹವನ್ನು ಮರೆಸಿ ದೂರ ಮಾಡುವಾಗ ನಮ್ಮವರಿಂದ ದೂರಾಗುತ್ತೇವೆ ಎಂಬುದನ್ನೂ ಮರೆಸಿಬಿಡುತ್ತದೆ.
ಒಂದು ಮನೆಯಲ್ಲಿ ಒಬ್ಬ ಮದ್ಯವ್ಯಸನಿ ಇದ್ದರೆ, ಆತ ಯಾವ ಸುಖವನ್ನು ಅನುಭವಿಸುತ್ತಾನೋ ತಿಳಿಯದು, ಆದರೆ ಆತನ ಸಂಸಾರ ಮಾತ್ರ ಹಲವು ಸುಖಗಳಿಂದ ದೂರಾಗುತ್ತದೆ. ಎಂದೂ ಕೌಟುಂಬಿಕವಾಗಿ ದೂರಾಗಿ ಪ್ರತ್ಯೇಕವಾಗುವಾಗ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬಿಡುತ್ತದೆ. ಸಂಸಾರದಲ್ಲಿ ಎಲ್ಲರೂ ಹತ್ತಿರವಾದರೂ ಈತ ಮಾತ್ರ ಎಲ್ಲರಿಂದಲೂ ದೂರಾಗಿ ಉಳಿದುಬಿಡುತ್ತಾನೆ. ಎಂದಿಗೂ ಸಂಸಾರದ ಅಂಗವಾಗಿ ಆತ ಉಳಿದುಬಿಡುವುದಿಲ್ಲ. ಎಲ್ಲ ಇದ್ದಂತೆ ಇದ್ದರೂ ಎಲ್ಲದರಿಂದಲೂ ಕಳೆದು ಬಿಡುವ ಈ ಮದ್ಯ ಎಲ್ಲವನ್ನು ಕಸಿದುಕೊಳ್ಳುತ್ತದೆ. ವಿವಾಹ ಇತ್ಯಾದಿ ಸುಖ ಸಂಭ್ರಮದಲ್ಲಿ ಕುಟುಂಬ ಇದ್ದರೆ ಮದ್ಯ ವ್ಯಸನ ಎಲ್ಲರಿಂದಲೂ ಆತನನ್ನು ಪ್ರತ್ಯೇಕಿಸುತ್ತದೆ. ಇದ್ದರೂ ಇರದಂತೆ ಮದ್ಯ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ.
ಇದೀಗ ಹೊಸ ವರ್ಷದ ಸಂಭ್ರಮ. ಎಲ್ಲಾ ದಿನಗಳಂತೆ ಇದೂ ಒಂದು ಕತ್ತಲು ಬೆಳಕಿನ ದಿನ. ಹಳೆಯದಿನಗಳ ಜತೆ ಮತ್ತೊಂದನ್ನು ಸೇರಿಸಿ ಕಳೆವಾಗ ಎಲ್ಲವನ್ನೂ ಕಳೆದು ಬಿಡುವ ಸಂಭ್ರಮದಲ್ಲಿ ಜಗತ್ತನ್ನೂ ಕಳೆದುಕೊಳ್ಳುವ ಆತುರ. ಎಲ್ಲವನ್ನು ಕಳೆದುಕೊಳ್ಳುವುದೇ ಬದುಕು ಎನ್ನುವಾಗ ಎಲ್ಲವನ್ನು ಕಳೆದುಕೊಳ್ಳುವ ನಡುವೆ ಯಾವುದನ್ನೋ ಗಳಿಸುವ ಉನ್ಮಾದ ಸ್ಥಿತಿಯಲ್ಲಿ ಈ ವರ್ಷಾಂತ್ಯದ ಇರುಳು ಕಳೆದು ಬಿಡುತ್ತದೆ. ನಮ್ಮನ್ನು ಆಳುವ ಸರಕಾರಕ್ಕೂ ಇದೊಂದು ಆತುರ. ಹನಿ ಹನಿ ಮದ್ಯದಲ್ಲೂ ಸರಕಾರ ಜೀವ ಹನಿಯನ್ನು ಹುಡುಕುತ್ತದೆ. ಉನ್ಮಾದ ಅವಸ್ಥೆಯಲ್ಲಿ ಎಲ್ಲವನ್ನು ಕಳೆದುಬಿಡಲಿ ಎಂದು ಬಯಸುತ್ತದೆ. ಎಷ್ಟು ವಿಚಿತ್ರ. ಕೈ ಹಿಡಿವ ಕೈಗಳೇ ಮದ್ಯದ ಪ್ರವಾಹದಲ್ಲಿ ಕೈಬಿಟ್ಟು ಕೇಕೆ ಹಾಕಿದಂತೆ. ಮದ್ಯ ಎಲ್ಲವನ್ನು ಎಲ್ಲವನ್ನು ಕಳೆದುಬಿಡುತ್ತದೆ.
ಹೊಸ ವರುಷ ಕಳೆದುದನ್ನು ಮತ್ತೆ ಕೊಡಲಿ ಎಂಬ ಆಶಯ. ಇದಕ್ಕೆ ಮದ್ಯ ಎರವಾಗದಿರಲಿ.

No comments:
Post a Comment