ನಮ್ಮ ಪೈವಳಿಕೆಯಿಂದ ನಮ್ಮ ಪಂಚಾಯತ್ ಒಳಗಿನ ಇನ್ನೊಂದು ಕುಗ್ರಾಮವಾಗಿದ್ದ ಚೇವಾರಿಗೆ ಹೋಗಬೇಕಿದ್ದರೆ ಮೊದಲು ಉಪ್ಪಳ ಸುತ್ತಿ ಬಂದ್ಯೋಟು ಕಯ್ಯಾರು ಕೊಂಕಣ ಸುತ್ತಿ ಮೈಲಾರ ಅಂತ ಹೇಳಿದ ಹಾಗೆ ಹೋಗಬೇಕಿತ್ತು. ಮೊದಲು ಮಣ್ಣಿನ ಕಚ್ಚಾ ರಸ್ತೆ ಇತ್ತು. ರಸ್ತೆ ಹೆಸರಿಗೆ ಮಾತ್ರ . ಎಲ್ಲೋ ಒಂದೆರಡು ಮರ ತುಂಬಿದ ಟಿಂಬರ್ ಅಥವಾ ಕಲ್ಲು ತುಂಬಿದ ಲಾರಿ ಕಷ್ಟದಲ್ಲಿ ಹೋಗುವುದು ಬಿಟ್ಟರೆ ಒಂದು ವಾಹನವೂ ಹೋಗುತ್ತಿರಲಿಲ್ಲ. ರಸ್ತೆಗೂ ಅಕ್ಕ ಪಕ್ಕ ಇದ್ದ ಗುಡ್ಡಕ್ಕೂ ವೆತ್ಯಾಸವಿಲ್ಲದ ರಸ್ತೆ. ಹೊಂಡಗುಂಡಿಯಿಂದ ನಡೇದಾಡುವುದಕ್ಕೂ ಕಷ್ಟವಿತ್ತು. ಮಳೆಗಾಲದಲ್ಲಿ ಕಟ್ಟದ ಮನೆ ಎಂಬಲ್ಲಿದ್ದ ಹೊಳೆ ತುಂಬಿ ಹರಿದರೆ ಅಲ್ಲಿನ ತೋಟದವರು ಹಾಕಿದ ಅಡಕೆ ಮರದ ಸೇತುವೆ ನೀರಿಗೆ ಕೊಚ್ಚಿಕೊಂಡು ಹೋಗದೇ ಇದ್ದಲ್ಲಿ ಮಾತ್ರ ಆಕಡೆ ಈ ಕಡೆ ಸಂಪರ್ಕ ಇತ್ತು. ಇಲ್ಲದೆ ಇದ್ದರೆ ಅದೂ ಇಲ್ಲ. ದಿವಸಕ್ಕೆ ಒಮ್ಮೆ ಸುತ್ತಾಗಿ ಉಪ್ಪಳದಿಂದ ಹೋಗಿ ಬರುತ್ತಿದ್ದ ಶಂಕರ್ ವಿಟ್ಠಲ್ ಬಸ್ಸೆ ಗತಿ.
ಮೊನ್ನೆ ಊರಿಗೆ ಹೋದಾಗ ಈ ರಸ್ತೆಯಲ್ಲಿ ಒಂದು ಸಲ ಸಂಚರಿಸುವ ಕೆಲಸ ಇತ್ತು. ರಸ್ತೆ ನೋಡುವಾಗ ಬಹಳ ಸಂತೋಷವಾಯಿತು. ಚೇವಾರಿನಂತಹ ಒಂದು ಹಳ್ಳಿಯಲ್ಲಿ ಸಂಚರಿಸುವ ರಸ್ತೆ ಹೇಗಿದೆ ನೋಡಿ. ದುಃಖದ ಸಂಗತಿ ಎಂದರೆ ಊರಲ್ಲಿ ಹೀಗೆ ಬದಲಾವಣೆಯದಾಗ ನಾವು ಈ ಊರಿನವರಾಗಿ ನೆಲೆಸಿಲ್ಲ. ಈಗ ರಸ್ತೆಯಲ್ಲಿ ಘಂಟೆಗೊಂದು ಬಸ್ಸು ಸಂಚರಿಸುತ್ತದೆ. ಕೇವಲ ಕೆಲವು ನಿಮಿಷಗಳಲ್ಲಿ ಪೈವಳಿಕೆಯಿಂದ ಚೇವಾರು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿಂತ ಅಲ್ಲ ನಮ್ಮೂರಿನ ಸುತ್ತ ಮುತ್ತಲಿನ ರಸ್ತೆಗಳು ಇದೇ ರೀತಿ ಬದಲಾಗಿದೆ. ವಿಪರ್ಯಾಸವೆಂದರೆ ಇಲ್ಲಿಂದ ಕೆಲವೇ ದೂರದ ಕರ್ನಾಟಕದ ಗಡಿ ದಾಟಿದ ಕೂಡಲೇ ರಸ್ತೆ ಹೇಗಿರುತ್ತದೆ ಎಂದರೆ ನಮ್ಮ ವಾಹನದ ಗತಿಯೇ ಬದಲಾಗುತ್ತದೆ. ವಾಹನದ ಶಬ್ದ ಎಲ್ಲವೂ ಬದಲಾಗಿಬಿಡುತ್ತದೆ. ವಾಹನದೊಳಗೆ ನಿದ್ದೆ ಮಾಡಿದ್ದರೆ ಕಣ್ಣು ತೆರೆಯದೆ...ಕರ್ನಾಟಕ ಬಂತು ಅಂತ ಹೇಳುವುದಕ್ಕೆ ಸಾಧ್ಯವಾಗುತ್ತದೆ.
ಈಗ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾ ಬೇಡವಾ..ಮಲಯಾಳ ಹೇರಿಕೆ ಹೀಗೆಲ್ಲ ವರದಿಗಳು ಕೇಳಿಬರುತ್ತದೆ. ಸಮಸ್ಯೆಗಳು ಇಲ್ಲ ಎಂಬುದಲ್ಲ. ಸಮಸ್ಯೆ ಎಲ್ಲಿ ಹೋದರೂ ಇದ್ದೇ ಇರುತ್ತದೆ. ವಿಧ ಮಾತ್ರ ವೆತ್ಯಾಸ. ಯಾವುದೋ ಒಂದು ಸಮಸ್ಯೆ ಜೀವವನ್ನು ಕಾಡುವಷ್ಟು ಇರುತ್ತದೆ. ಕೆಲವೊಮ್ಮೆ ಅನಿಸುತ್ತದೆ ಯಾವ ಸಾರ್ಥಕತೆಗೆ ಕಾಸರಗೋಡು ಕರ್ನಾಟಕಕ್ಕೆ ಬರಬೇಕು. ಕಯ್ಯಾರದ ಅಜ್ಜ ಅಂತ್ಯ ಕಾಲದವರೆಗೂ ಕನಸು ಕಂಡರು ಹಾಡಿದರು, ಹೋರಾಡಿದರು ಯಾಕೋ ಆಗಲಿಲ್ಲ. ಈಗ ಅನ್ನಿಸುತ್ತದೆ ಎಲ್ಲೇ ಇರಲಿ ಭಾರತದಲ್ಲಿ ಇದೆಯಲ್ಲಾ ಅಂತ. ಕೆಲವರು ಹೇಳುವುದುಂಟು ಭಾರತದ ಒಳಗೆ ಸಂಚರಿಸುವುದಕ್ಕೆ ಇನ್ನು ಪಾಸ್ ಪೋರ್ಟ್ ಅಗತ್ಯ ಬೀಳಬಹುದು. ಹಾಗೆ ವಾತಾವರಣ ಬದಲಾಗುತ್ತದೆ ಎಂದು. ಸತ್ಯ ಹೇಳಬೇಕೆಂದರೆ ನನಗೆ ಕರ್ನಾಟಕವಾಗಲಿ ಕೇರಳವಾಗಲೀ ಎರಡೂ ನನ್ನದು ಎಂಬ ಅಭಿಮಾನವಿದೆ. ಕೇವಲ ಆಡುವ ಭಾಷೆಯ ವೆತ್ಯಾಸ. ಆದರೆ ಭಾವನೆಗಳು ವೆತ್ಯಾಸವಿಲ್ಲ. ಎರಡೂ ರಾಜ್ಯವೂ ನನಗೆ ಅನ್ನ ಕೊಟ್ಟಿದೆ . ದುಡಿಮೆ ವಿದ್ಯೆ ಜ್ಞಾನ ಕೊಟ್ಟಿದೆ. ಹಾಗಾಗಿ ಎಲ್ಲೇ ಇದ್ದರು ಭಾರತದೊಳಗೆ ಇದ್ದರೆ ಸಾಕು. ಭಗವಂತ ಕೊಟ್ಟ ಭೂಮಿ ನಾವು ಎಲ್ಲಿದ್ದೇವೆ ಎಂಬುದಕ್ಕಿಂತಲೂ ಹೇಗೆ ಇದ್ದೇವೆ ಎಂಬುದು ಮುಖ್ಯ. ಆ ಭಗವಂತ ಕೊಟ್ಟದ್ದು ಎಂದ ಮೇಲೆ ಇದೆಲ್ಲ ಅವನ ಪ್ರಸಾದ ಅಲ್ಲವೆ.
ನಿತ್ಯ ದೇವರ ಪ್ರಾರ್ಥನೆ ಮಾಡುವಾಗ ಒಂದು ಬೇಡಿಕೊಳ್ಳುತ್ತೇವೆ, "ಪೃಥ್ವಿತ್ವಯಾ ಧೃತಾ ಲೋಕಾ ದೇವಿತ್ವಂ ವಿಷ್ಣುನಾಧೃತ ತ್ವಂಚಧಾರ ಯಮಾಂ ದೇವಿ ಪವಿತ್ರಂ ಕುರುಚಾಸನಂ" ನಾವು ಈ ಭೂಮಿಯ ಮೇಲೆ ನಿಂತುಕೊಂಡು ಭೂಮಿ ನಮ್ಮನ್ನು ಹೊತ್ತುಕೊಂಡಿದೆ. ಆ ಭೂಮಿಯನ್ನು ಭಗವಂತ ಆಧರಿಸಿದ್ದಾನೆ. ನಮಗೆ ಆ ಭಗವಂತನನ್ನು ಪ್ರಾರ್ಥಿಸಲು ಒಂದುಷ್ಟು ಜಾಗ ಕರುಣಿಸು. ಎಂಬ ಪ್ರಾರ್ಥನೆ. ಎಲ್ಲಿದ್ದರೂ ಅದು ಭಗವಂತನ ಪ್ರಾರ್ಥನೆ.


No comments:
Post a Comment