ಆಟೋಗಳು ಬಣ್ಣ ಬದಲಿಸಿ ಹೊಸ ರೂಪದಲ್ಲಿ ಬಂದಾಗ ಹೊಸ ಬದಲಾವಣೆ ಬಂತೆ? ಎಲ್ಲೆಲ್ಲಿ ಬದಲಾವಣೆಯಾಯಿತೋ ಅದರೆ ಬೆಂಗಳೂರಿನಲ್ಲಿ ಬದಲಾವಣೆಗೆ ಯಾವ ಮಹತ್ವವೂ ಇಲ್ಲದಾಗಿ ಹೋಯಿತು. ಕೇವಲ ಆಟೋ ಮಾಲಿಕರ ಜೇಬಿಗೆ ಕತ್ತರಿಯಾಯಿತು ಪರ್ಯಾಯವಾಗಿ ಕೆಲವು ದಿಶೆಯಲ್ಲಿ ಪ್ರಯಾಣಿಕರ ಜೇಬು ಕತ್ತರಿ ಪ್ರಯೋಗಕ್ಕೆ ಒಳಗಾಯಿತು.
ಊರಿನಿಂದ ಮುಂಜಾನೆ ಬಂದು ನವರಂಗ್ ನಲ್ಲಿ ಬಸ್ಸು ಇಳಿವಾಗ ಆಟೋದವರು ಸ್ವಾಗತಿಸುವ ಪರಿ ಕಂಡಾಗ ಮೊದಲು ನನಗೆ ಅಬ್ಬ ಏನು ಕಾಳಜಿ ಇವರಿಗೆ ಎಂದು ಅನ್ನಿಸಿಬಿಡುತ್ತಿತ್ತು. ನಮ್ಮ ಲಗ್ಗೇಜು ಯಾವ ಆಟೋದಲ್ಲಿ ಇದೆಯಪ್ಪಾ ಅಂತಾ ಗಾಬರಿಯಾಗುತ್ತಿತ್ತು. ಮೊದಲೇ ಊರಲ್ಲಿ ಹೆದರಿಸಿ ಬೆಂಗಳೂರಿನ ಬಸ್ಸು ಹತ್ತಿಸಿ ಬಿಡುವ ಸಂಬಂಧಿಕರು ಏನೇ ಆದರೂ ಬ್ಯಾಗ್ ಕೈ ಬಿಡಬೇಡ ಜಾಗ್ರತೆ.. ಹೆಂಡತಿ ಕೈ ಬಿಟ್ಟರೂ ಪರವಾಗಿಲ್ಲ. ಬ್ಯಾಗ್ ಕೈ ಮಾತ್ರ ಭದ್ರ....ಕೊನೆಗೆ ಅದೂ ಕಷ್ಟ ಕೇವಲ ಕೈ ಮಾತ್ರ ನಮ್ಮ ಕೈಗೆ ನೇತಾಡಿಕೊಂಡು ಇರುತ್ತದೆ ಬ್ಯಾಗ್ ಕಳ್ಳರ ಪಾಲಾಗಿರುತ್ತದೆ. ಹೀಗೆ ಹೆದರಿ ಹೆದರಿ ಬ್ಯಾಗ್ ಭದ್ರವಾಗಿ ಹಿಡಿದು ಬಸ್ ಕ್ಲೀನರ್ ನಿಂದ ತಳ್ಳಿಸಿಕೊಂಡು ನವರಂಗ ಸಿಗ್ನಲ್ ಬಳಿ ಇಳಿದೆವೋ.. ಗಾಬರಿಯ ಮೇಲೆ ಗಾಬರಿ. ಆಟೋ ಡ್ರೈವರ್ ಗಳು ಮುಗಿಬಿದ್ದು ನಮ್ಮ ಬ್ಯಾಗ್ ಎತ್ತಿ ಆಟೋದಲ್ಲಿ ಇಟ್ಟು ಬಿಡುತ್ತಾರೆ. ಅತ್ತ ಇತ್ತ ಎತ್ತಲೂ ಆಟೋಗಳು ಮುತ್ತಿಕೊಂಡು ತಬ್ಬಿಬ್ಬಾಗುವ ಸ್ಥಿತಿ. ಬಸ್ಸಿನಲ್ಲಿ ಅರ್ಧ ನಿದ್ದೆಯಾಗಿ ಎದ್ದು ಇಲ್ಲಿ ಇಳೀವಾಗ ಹೊಸಬರಾದರೆ ಗಾಬರಿ ಇನ್ನು ಹೆಚ್ಚು. ಬಸ್ ನಿಂದ ಇಳಿವಲ್ಲಿಗೆ ಬರುತ್ತೇನೆ ಅಂದ ಪರಿಚಿತರನ್ನು ಹುಡುಕುವ ತವಕ.. ಮಧ್ಯೆ ಈ ಆಟೋದವರ ಶೀಘ್ರ ಉಪಚಾರ.. ಒಂದು ಸಲ ವೃದ್ಧರೋರ್ವರು ಬಸ್ ಇಳಿದ ಕೂಡಲೆ ಎರಗಿದ ಆಟೋದವನಿಗೆ ಹೇಳಿದರು “ ತಡೀರಿ ಸ್ವಾಮಿ ನಾನು ಯಾವ ದಿಕ್ಕಿನಲ್ಲಿ ಇದ್ದೇನೆ ಅಂತ ಗೊತ್ತಾಗ್ಲಿ .. ಅ ಮೇಲೆ ನೋಡುವ”. ಬೆಂಗಳೂರಲ್ಲಿ ತಿಳಿಯದ ದಿಕ್ಕಿನ ಜಾಡು ಹಿಡಿವ ಯತ್ನ ಅವರದ್ದು.
ಇದೆಲ್ಲ ಮಾಮೂಲಾದರೂ ಒಂದು ವಿಚಿತ್ರ...ಟೆರೆ .ಟೆರೆ..ಟ್ರ್...ಎಂದು ಗಂಟಲು ಬಿರಿವ ಸದ್ದು ಮಾಡಿಕೊಂಡು ಶರವೇಗದಲ್ಲಿ ಸಾಗುವುದನ್ನು ಕಂಡಾಗ ಅದರಲ್ಲೂ ನಮ್ಮೂರಿನವರು ಗಾಬರಿಯಾಗುವುದು ಸಹಜ. ಬೆಂಗಳೂರಿಗೆ ಬಂದ ಆರಂಭದಲ್ಲಿ ಈ ಕರ್ಕಶ ಸದ್ದು ಕೇಳಿದಾಗ, ಈ ವಾಹನದ ಸೈಲೆನ್ಸರ್ ಕೆಟ್ಟಿರಬೇಕು ಎಂದು. ಕ್ರಮೇಣ ತಿಳಿದದ್ದು ಇದು ಉದ್ದೇಶಪೂರ್ವಕವಾಗಿ ಪಿಕಪ್ ಮತ್ತು ವೇಗಕ್ಕಾಗಿ ಬದಲಾಯಿಸುತ್ತಾರೆ ಎಂದು. ಊರಲ್ಲಿ ಸಾಕುನಾಯಿಗಳ ಬಾಲ ಕತ್ತರಿಸಿದಂತೆ..
ಊರಲ್ಲಿ ಹತ್ತಿರ ಸದ್ದು ಮಾಡದೆ ಬಂದು ನಿಲ್ಲುವ ರಿಕ್ಷಾಗಳು ಹಾರನ್ ಮಾಡಿದಾಗಲೇ ಅರಿವಾಗುವುದು. ರಿಕ್ಷ ಬಳಿಯಲ್ಲೇ ಇದೆ ಎಂದು. ಒಂದು ಬಾರಿ ಇಲ್ಲಿನ ಒಬ್ಬ ಆಟೋ ಚಾಲಕನಲ್ಲಿ ಕೇಳಿದೆ “ ಆಟೋ ಹೀಗೆ ಸವುಂಡು ಮಾಡ್ತಾ ಪಾಸ್ಟಾಗಿ ಹೋದ್ರೆ ಡಿಸ್ಟರ್ಬ್ ಆಗಲ್ವೆ.?” ಮುಕ್ಕಾಲುವಾಸಿ ಇಂಗ್ಲೀಷು ಇದ್ದ ಕನ್ನಡವೇ ಇವರಿಗೆ ಸರಿಯಾಗಿ ಅರ್ಥವಾಗುವ ಭಾಷೆ.
“ಇಲ್ಲಾ ಸಾ..ಇದು ನನ್ ಕಿವಿಗೆ ಕೇಳ್ಸಲ್ಲ. ಹಿಂದೆ ಬರೋರಿಗೆ ತಾನೆ?” ಎಂತಹ ಉತ್ತರ...!!
ಈಗ ಬಣ್ಣದೊಂದಿಗೆ ಆಟೋದರವೂ ಬದಲಾಗಿದೆ. ಆದರೆ ಸವುಂಡು ಮಾತ್ರ ಅದೇ ಕರ್ಕಶ. ಜತೆಗೆ ಎಫ್. ಎಂ. ನ ಕರ್ಕಶವೂ ಸೇರಿಕೊಂಡಿತೊ ಪ್ರಯಾಣಿಕರಿಗೆ ಇನ್ನೇನು ಬೇಕು. ಸೀಟು ಹರಿದಿರಲಿ, ಮಳೆ ಬಂದರೆ ರಸ್ತೆಯಲ್ಲಿ ನಡೆದು ಹೋದಷ್ಟೇ ನೆನೆದು ತೊಪ್ಪೆ ಯಾದರೂ , ಮೀಟರ್ ನಲ್ಲಿ ಬರೋ ಸಂಖ್ಯೆ ಓದಲು ಅವನೇ ಸಹಾಯ ಮಾಡಬೇಕಾಗಿ ಬಂದರು .. ಈ ಟೆರೆ ಟೆರೆ ಶಬ್ಡ ಅದರ ಜತೆಗೆ ಹಿಂಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೇವಲ ದ್ವಿಚಕ್ರ ವಾಹನದ ಹೋಗೆ ತಪಾಸಣೇ ದಾಖಲೆಗೆ ಕಣ್ಣು ಹಾಕುವ ಪೋಲೀಸರಿಗೆ ಇದನ್ನು ನಿಯಂತ್ರಿಸುವ ಬುದ್ದಿಯಾಕೆ ಬರುವುದಿಲ್ಲವೋ ದೇವರೇಬಲ್ಲ. ಯಾವುದೇ ಸಾರಿಗೆ ಅಧಿಕಾರಿಯಾಗಲಿ ಮಂತ್ರಿಯಾಗಲಿ ಗಮನಕ್ಕೇ ಬರದ ಈ ಧ್ವನಿಯಿಂದ ಬೆಂಗಳೂರು ಮುಕ್ತವಾಗಬಲ್ಲುದೆ? ಹೀಗೆ ಬೆಂಗಳೂರಿನ ಜನಸಾಮಾನ್ಯ ಗಮನಿಸದೇ ತಾಳಿಕೊಳ್ಳುವ ಹಲವು ಭೂತಗಳಿವೆ. ಮುಂದೊಂದು ದಿನ ಅದರ ಬಗ್ಗೆ ಹೇಳುವ.
bangalore has around 35000 unauthoriused autos.. we dont know how many license less drivers r there.. during last fare hike, unions promised they wont ask for a hike unless gas price cross rs 45/kg.but they have hiked it again now while gas costs rs 35 or so. bangalore auto fares r highest in the country..
ReplyDeletenice one.
ReplyDeleteTruth unfolded...I hope this article will help in getting some change...
ReplyDelete