ಮುಂಜಾನೆಯ ಸೂರ್ಯ ಇನ್ನೂ ಉದಿಸಬೇಕಷ್ಟೆ. ಸುತ್ತಲು ನಿಶಭ್ದ ನಸುಕಿನ ವಾತಾವರಣ. ತಣ್ಣನೆಯ ಗಾಳಿ. ಹೊಸತೊಂದು ದಿನ ತೊಡಗುವುದಕ್ಕಾಗಿ ಎದ್ದು ಕತ್ತಲಲ್ಲೆ ಕಣ್ಣು ತೆರೆದು ಮಂಜುಗಣ್ಣಿನಲ್ಲೇ ನೆಟ್ಟನೋಟದಲ್ಲೇ ಭಗವಂತನ ಸ್ಮರಣೆ ಮಾಡಿ ಕೈಗೆಟುಕಿದ ನೀರನ್ನು ಗಟಗಟನೆ ಕುಡಿಯಲಾರಂಬಿಸುತ್ತೇನೆ. ತಣ್ಣನೆಯ ದಹಿಸುತ್ತಿರುವ ಹೊಟ್ಟೆ ಸೇರಿದಾಕ್ಷಣ ಹಾಯೆನಿಸಿ ಸ್ನಾನ ಮುಗಿಸಿ ದೇವರ ಸಾನ್ನಿಧ್ಯದಲ್ಲಿ ಸೂರ್ಯನನ್ನೇ ಧ್ಯಾನಿಸುತ್ತಾ ಪ್ರಾತಃ ಸಂಧ್ಯಾವಂದನೆ ಮುಗಿಸುತ್ತೇನೆ. ಆಗಿನ್ನು ಸೂರ್ಯ ಮೈಕೊಡವಿ ಬರಲು ಸನ್ನಾಹ ನಡೆಸುವಂತೆ ಅನ್ನಿಸಿಬಿಡುತ್ತದೆ. ಇದು ದಿನಚರಿಯ ಮೊದಲ ಘಟ್ಟ,ನಂತರವೇ ಸ್ವರ್ಗದ ಬಾಗಿಲನ್ನು ಬಡಿಯುವ ಮೈಮನಗಳ ಭಾಷೆಯ ಯೋಗಾಭ್ಯಾಸ. ಉಸಿರೆಂದರೆ ಪ್ರಾಣ . ದಿನವೂ ನಮ್ಮ ಇರವನ್ನು ತೋರಿಸುವ ಈ ಪ್ರಾಣವಾಯು ನಿಶಭ್ದವಾಗಿ ನಮಗರಿವಿಲ್ಲದೆ ಹೃದಯದ ಒಳ ಹೊಕ್ಕು ಹೊರಬಂದು ಹೋಗುವುದು ನಮ್ಮ ಅರಿವಿಗೆ ಬರಿಸುವ ಸಮಯ.
ಪದ್ಮಾಸನ ಹಾಕಿ ಕುಳಿತು ಬಿಡುತ್ತೇನೆ. ಸುತ್ತಲು ಕಣ್ಣಿಗೆ ಕಾಣುವ ಅಸ್ಪಷ್ಟ ಬಾಹ್ಯಲೋಕ. ಮನಸ್ಸನ್ನು ಸ್ಥಿರವಾಗಿಸುವ ಪ್ರಯತ್ನ. ದಿನವಿಡಿ ಭಾವನೆಗಳ ಹೊರೆಯನ್ನು ಹೊತ್ತ ಹೃದಯದಿಂದ ಭಾವನೆಗಳ ಹೊರೆಯನ್ನು ಕೆಳಗಿಳಿಸುವ ಪ್ರಯತ್ನ. ನನ್ನ ಹೃದಯವಲ್ಲವೇ.? ಮೊದಲೇ ಅತಿಭಾವುಕ ಮನುಷ್ಯನ ಹೃದಯ ನನ್ನದು. ಪ್ರತಿಘಳಿಗೆಯೂ ಭಾರವನ್ನು ಮತ್ತೂ ಮತ್ತು ಹೆಚ್ಹಿಸುಕೊಳ್ಳುವುದರಲ್ಲೇ ಮಗ್ನ. ಹೊರಗಿನ ಕತ್ತಲು ಕೇವಲ ಕಣ್ಣಿಗೆ. ಆಗ ಅದಾವುದು ನೋಡ ಬಯಸದ ಕಣ್ಣು ಮುಚ್ಹುವ ಪ್ರಯತ್ನ ಮಾಡಿದರೆ ಮನಸ್ಸು ಅಂತರ್ಮುಖಿಯಾಗುವ ಯತ್ನವನ್ನು ಮಾಡುತ್ತದೆ. ಹೊರಗುದಿಸಿದ ಸೂರ್ಯ ನೇರ ಹೃದಯಕ್ಕೆ ಬೆಳಕನ್ನು ಚೆಲ್ಲುವ ಪ್ರಯತ್ನಿಸುತ್ತಾನೆ ಅಥವಾ ಭಾವನೆ ಹೊತ್ತು ಬಸವಳಿದ ಹೃದಯ ತಂಪಾದ ಅಂತರ್ಮುಖಿ ಬೆಳಕನ್ನು ಹೀರಿ ನವ ಚೈತನ್ಯವನ್ನು ಪಡೆಯುವಲ್ಲಿ ಪ್ರಯತ್ನ ನಡೆಸುತ್ತದೆ. ನೀರವ ಮೌನದ ಹೊರಜಗತ್ತು.ಹಕ್ಕಿಗಳಿಂಚರಕ್ಕೊ , ಲೌಕಿಕ ಜಗತ್ತಿನ ಸದ್ದುಗಲಕ್ಕೋ ತೆರೆದುಕೊಳ್ಳುವ ತಕವದಲ್ಲಿದ್ದರೆ, ನಿಮಿರಿ ನಿಂತ ದೇಹದ ಎದೆಗೆ ಸವರಿ ಹೋಗುವ ತಂಗಾಳಿಯ ತಣ್ಣನೆಗೆ ಹಗುರವಾಗುವ ಹೃದಯ.ಸ್ವರ್ಗದ ಬಾಗಿಲ ಹೊಸ್ತಿಲಲ್ಲಿ ನಿಂತು ಮೃದುವಾಗಿ ಕದ ತಟ್ಟುತ್ತ ನಂತರ ಒಳ ಹೆಜ್ಜೆ ಇಡುತ್ತೇನೆ.
ದೀರ್ಘವಾದ ಉಸಿರು ಪ್ರಾಣವಾಯುವನ್ನು ಹೀರಿದಂತೆ ನಾಸಿಕದ ತುದಿಯಿಂದ ಒಳಹೊಕ್ಕು ಭ್ರೂ ಮಧ್ಯೆ ಸಂವೇದಿಸುತ್ತಾ ಮಸ್ತಿಷ್ಕದಲ್ಲಿ ಸಂಚಲನವುಂಟುಮಾಡಿ ಹೃದಯವನ್ನು ಸೇರುವಾಗ ಏಕಾಂಗಿಯಾದೆ ಎನ್ನುವ ಭಾವ. ಒಳ ಸಂವೇದನೆಯನ್ನುಂಟುಮಾಡಿದ ಪ್ರಾಣವಾಯು ಹೃದಯವನ್ನು ಹಗುರವಾಗಿಸಿದ ಅನುಭವ, ಹೌದು ನಾನು ಸ್ವರ್ಗದೊಳಗಡಿಯಿರಿಸಿದೆನಲ್ಲವೇ? ಸ್ವರ್ಗದ ವಾಯು ಶರೀರವೆಲ್ಲ ತುಂಬಿ ನಿಧಾನ ನಿಧಾನವಾಗಿ ದೀರ್ಘವಾದ ಉಸಿರು ಒಂದೇ ಹೃದಯದೊಂದಿಗೆ ಮಾತನಾಡಲಾರಂಭಿಸುತ್ತದೆ. ಅದೇ ಲಬ್ ಡಬ್ ಲಬ್ ಡಬ್......ಈ ತಾಳಕ್ಕೆ ಶೃತಿ ಸೇರಿಸಿ ನಾಭಿಯಿಂದ ಹೊರಬರುವ ಓಂ...ಓಂಕಾರದ ಧ್ವನಿ, ಹೃದಯ ಹೊತ್ತು ಕೆಳಗಿರಿಸಿದ ಹೊರೆಯನ್ನು ಮತ್ತೂ ದೂರ ಮಾಡಿ ಹೃದಯದ ಸುತ್ತ ಸ್ವಚ್ಚ ಮಾಡುವಲ್ಲಿ ನಿರತವಾಗುತ್ತದೆ. ನನ್ನ ಹೃದಯ ಹೊಸ ಅತಿಥಿ ಬಂದಂತೆ ಪುಳಕಗೊಳ್ಳುತ್ತದೆ. ಪಾಪ ! ನನ್ನ ಹೃದಯವಲ್ಲವೆ? ಗರ್ಭವನ್ನು ಬರಿದಾಗಿಸಿ ಲೌಕಿಕ ಲೋಕಕ್ಕೆ ಬಂದ ಮೊದಲು, ಬಂದ ಪ್ರಾಣ ವಾಯುವನ್ನು ಹೀರಿ ಸಂಭ್ರಮಿಸುವ ಹೃದಯ ದೇಹದೂಂದಿಗಿನ ಪಯಣವನ್ನು ಅಲ್ಲಿಂದಲೇ ಆರಂಭಿಸುತ್ತದೆ. ಅಂತಹ ಹೃದಯ ಬದುಕಿನುದ್ದಕ್ಕೂ ಮಿಡಿವ ಹೃದಯ ಮುಂಜಾವಿನ ಹಿತಾನುಭವದ ದೀಕ್ಷೆಯಲ್ಲಿ ರಾತ್ರಿಯಿಂದಲೇ ಸಜ್ಜಾಗಿರುತ್ತದೆ.ಹೊಟ್ಟೆ ಹಸಿವಿಗಾಗಿ ಮೂರು ಹೊತ್ತು ಆಹಾರ ಹೇಗೊ ಹಾಗೆ ಹೃದಯಕ್ಕೆ ಅವಶ್ಯ ಪ್ರಾಣಾಯಾಮ.ಈ ಹೃದಯದ ಹಸಿವನ್ನು ನೀಗಿಸಿದರೆ, ಉದರ ದೇಹ ಮನಸ್ಸಿನ ಅಥವಾ ಐಹಿಕ ಜಗತ್ತಿನ ಎಲ್ಲ ಹಸಿವಿನ ಮೇಲೆ ನಿಯಂತ್ರಣ ಸಾಧಿಸಬಹುದು. ವಿಪರ್ಯಾಸವೆಂದರೆ ನಮ್ಮ ಹಾದಿ ವಕ್ರವಾಗಿ ವಿರುದ್ದದಿಕ್ಕಿನಲ್ಲಿರುವುದು. ಬೇರೆಲ್ಲ ಹಸಿವನ್ನು ನೀಗಿಸುವ ಭರದಲ್ಲಿ ಈ ಹೃದಯದ ಹಸಿವನ್ನು ಲಕ್ಷಿಸುವುದೇ ಇಲ್ಲ.
ಜಗತ್ತಿನ ಚೈತನ್ಯ ರೂಪ ಉದಿಸುವ ಆ ಮಧುರ ಸಮಯ ನೀರವ ಮೌನದ ಶಾಂತ ವಾತಾವರಣ. ಹೊರಲೋಕದ ಪರಿವೆಯಾಗದಂತೆ ಗಾಢಾಂಧಕಾರದ ಗಾಢತೆಯ ಪ್ರಭಾವ ಅಳಿಯದಂತೆ ದಿವ್ಯಚೇತನ ಏಕಾಗ್ರತೆಗೆ ಗೋಚರಿಸುವಂತೆ, ನಮ್ಮ ಮನಸ್ಸೆಂಬ ಅಂತರ್ಯದ ಕನ್ನಡಿಯಲ್ಲಿ ಪ್ರತಿಫಲಿಸಬೇಕು. ಆ ಮೂಲಕ ಸೂಕ್ಷ್ಮ ಜ್ಯೋತಿಸ್ವರೂಪ ತನುವೆಲ್ಲ ವ್ಯಾಪಿಸಿದಾಗ ಐಹಿಕ ಜಗತ್ತಿನ ಎಲ್ಲ ಬಂಧನದಿಂದ ಮುಕ್ತವಾಗುವ ಅನುಭವ.ದೀರ್ಘ ಉಸಿರೊಂದಿಗೆ ಏಕಾಗ್ರವಾಗುವ ಮನಸ್ಸು ಭಗವಂತನ ಉಪಾಸನೆಗೆ ಸಿದ್ದವಾಗುತ್ತದೆ. ತನ್ನ ತನು ಮನ ಎಲ್ಲವೂ ಶೂನ್ಯದಿಂದ ಆರಂಭಿಸಿ ಶೂನ್ಯದಲ್ಲೆ ಅಂತ್ಯವಾದ ಹಾಗೆ, ಶೂನ್ಯತೆಯ ದ್ಯೋತಕದಂತೆ, ಅಂದ್ಯಂತ್ಯವಿಲ್ಲದ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ನಾನೆಂದರೇನು? ತನುವೆಂದರೇನು? ಮನಸ್ಸೆಂದರೇನು? ಆ ಮನಸ್ಸಿನ ಭಾವನೆಗಳೇನು? ಎಲ್ಲವೂ ಶಾಂತ. ವೈಶಮ್ಯವಿಲ್ಲದ,ಭಾವನೆಗಳ ತೀವ್ರತೆಯಿಲ್ಲದ ಶಾಂತ ಲೋಕ. ....ಧ್ಯಾನ ಲೋಕ. ಅನುಲೋಮ, ವಿಲೋಮ, ಉಸಿರಾಟದ ನಡುವೆ ಭ್ರೂಮಧ್ಯೆ ಅಂತರ್ ದೃಷ್ಟಿಗೆ ಗೋಚರವಾಗುವ ಭಗವಂತ ಸ್ವರೂಪರ ರಹಿತನಾಗಿ ಭವತ್ ಶಕ್ತಿಗೆ ಸಂಕೇತವನ್ನು ನೀಡುತ್ತಾನೆ.
ಹಲವು ಪ್ರಾಣಾಯಾಮದ ಮುದವಾದ ಅನುಭವ ಪಡೆದ ಮೇಲೆ ನಿರಾಳವಾದ ಜಗತ್ತಿನತ್ತ ಒಯ್ಯುವ ಶವಾಸನ. ಧ್ಯಾನದಲ್ಲಿ ಭವಂತನನ್ನು ಕಂಡರೆ ಇಲ್ಲಿ ಭಗವಂತನಲ್ಲಿ ಐಕ್ಯವಾದ ಅನುಭವ. ನಮ್ಮ ದೇಹ ಭೂಮಿ ಮೇಲೆ ಇದೆಯೇ? ಕೇವಲ ಹಗುರವಾದ ಹೃದಯದ ಬಡಿತ ಮಾತ್ರ ಕೇಳುವಾಗ ಶರೀರವೇನು ಒಳಗಿನ ಆತ್ಮವೇನು ಎಂದು ಸ್ಪಷ್ಟವಾದ ಅನುಭವ.ಎಲ್ಲವೂ ಶುಷ್ಕಅನುಭವ.
ಶವಾಸನದಿಂದ ಇಹ ಲೋಕಕ್ಕೆ ಬಂದ ಮೇಲೆ ಹೊಳಪುಗೊಂಡ ಮನಸ್ಸು ಆ ಹೊಳಪನ್ನು ಚಿಮ್ಮಿಸುವ ಮುಖ ದೇಹಕ್ಕೆ ಹೊಸತನದ ಅನುಭವ ದಿನದಂತ್ಯದವರೆಗೂ ನೀಡಿದರೆ ಎಲ್ಲವೂ ಹೊಸತು. ಎಲ್ಲವೂ ಕೋಮಲ.
ನಮ್ಮ ಹೃದಯ ಸುಖವಾಗಲಿ ದುಃಖವಾಗಲಿ ಎದೆ ಮೇಲೆ ಕೈ ಇಟ್ಟಾಕ್ಷಣ ತನ್ನಿರವ ಹೇಳುವ ಇದನ್ನು ನಾವೆಷ್ಟು ಜೋಪಾನ ಮಾಡುತ್ತೇವೆ? ಮನಸ್ಸು- ಹೃದಯ, ಒಂದು ಎಂದೂ ಕಣ್ಣಿಗೆ ಕಾಣದ ಭಾವನೆಯ ಅನುಭವವಾದರೆ ಇನ್ನೋಂದು ಸದಾ ಇರವನ್ನು ಪ್ರತಿನಿಧಿಸುವ ಚೇತನ. ಮನಸ್ಸು ಕಲುಷಿತಗೊಂಡಷ್ಟು ಹೃದಯ ಶ್ರಮಪಡುತ್ತದೆ. ದ್ವೇಷ ಅಸೂಯೆ ಕ್ರೋಧದಿಂದ ಮನಸ್ಸು ಕಲುಷಿತಗೊಂಡರೆ ಪಾಪ ತಮ್ಮ ಹೃದಯದಬಗ್ಗೆ ಒಂದು ಸಲ ಯೋಚಿಸುವ, ನಾವೇನನ್ನು ನಮ್ಮ ಹೃದಯಕ್ಕೆ ನೀಡುತ್ತಿದ್ದೇವೆ? ಹಗಲು ದಣಿದ ದೇಹ ಇರುಳು ವಿಶ್ರಾಂತಿ ಬಯಸಿ ನಿದ್ರೆಗೆ ಜಾರುವ ಸಮಯ, ಒಂದು ಬಾರಿ ಯೋಚಿಸೋಣ, ನನಗೆ ಯಾರಲ್ಲೂ ವೈಷಮ್ಯವಿಲ್ಲ. ದ್ವೇಷ ಅಸೂಯೆಗಳಿಲ್ಲ. ವಂಚನೆಯ ಭಾವದಲ್ಲಿ ಗೆಲುವಿನ ಸಂಭ್ರಮ ಬೇಡ. ಪರರ ಏಳಿಗೆಯಲ್ಲಿ ಈರ್ಷ್ಯೆ ಲವಲೇಷವೂ ಇಲ್ಲ. ತಾನು ಯಾರನ್ನೂ ಹಿಂದಿಕ್ಕುವ ಸ್ಪರ್ಧೆ ಇಲ್ಲ. ಎಲ್ಲವು ಮತ್ತು ಎಲ್ಲರೂ ಜಗತ್ತಿನ ಅನಿವಾರ್ಯ ಅಂಗ. ಸಧ್ಬಾವನೆಯನ್ನು ಹೃದಯಕ್ಕೆ ನೀಡಿ ನಿದ್ರಿಸ ತೊಡಗಿ,ಆಮೇಲಿನ ಅನುಭವವೇ ಬೇರೆ. ಯಾರಲ್ಲೋ ಜಗಳವಾಡಿಯೋ ಬೈದಾಡಿ ಮನಸ್ತಾಪಗೈದು ನಿದ್ರಿಸ ಹೋದರೆ ಆ ರೌದ್ರ ಭಾವವೇ ತುಂಬಿ ಸಧ್ಬಾವನೆ ನಾಶವಾಗುತ್ತದೆ. ಜಗಳವಾಡಿದಾತನ ಜೊತೆ ಸ್ಪರ್ಧಿಸುವ ಭಾವ ಮನಸ್ಸಲ್ಲಿ ಪ್ರಚೋದಿಸಲ್ಪಟ್ಟರೆ, ವಿಶ್ರಾಂತಿ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಸಿಗದು. ನಿದ್ದೆ ಮಾಡಿದರೆ ದೇಹಕ್ಕೆ ವಿಶ್ರಾಂತಿ ಸಿಕ್ಕಂತೆ ಭಾಸವಾದರೂ ಮನಸ್ಸು ಜಾಗ್ರತವಾಗಿ ದುಸ್ವಪ್ನವನ್ನೇ ಕಂಡರೆ ನಿದ್ರೆಯಲ್ಲೂ ವಿಶ್ರಾಂತಿ ಸಿಗಬಹುದೇ? ಹೊಗಳಿಕೆಯ, ಮನ್ನಣೆಯ ಮತ್ತು ಗೆಲುವಿನ ಅತಿಯಾದ ನಿರೀಕ್ಷೆ ಸೋತಾಗ ಹತಾಶವಾಗಿ ಸಧ್ಬಾವನೆ ನಾಶವಾಗುತ್ತದೆ. ಸದ್ಭಾವನೆ ತುಂಬಿದ ಮನಸ್ಸು ಶಾಂತಿಗೆ ಅಲೆಯುವ ಅಗತ್ಯವಿಲ್ಲ. ಎಲ್ಲಿದ್ದರೂ ಶಾಂತವಾಗಿರುವುದು.
ಹೃದಯವನ್ನು ಜೋಪಾನ ಮಾಡುವುದು ಹೃದಯ ವೈದ್ಯನಲ್ಲಿ ಹೋಗಿಅಲ್ಲ. ಅತ ಕೇವಲ ಔಷಧಿಯನ್ನಷ್ಟೇ ತುಂಬಬಲ್ಲ. ಮಾತ್ರವಲ್ಲ ಹೃದಯದಲ್ಲಿ ತೊಂದರೆಯಾದರೆ ಮಾತ್ರವಲ್ಲವೇ ಆತನಲ್ಲಿ ಹೋಗುವುದು. ಕೆಲವೆಲ್ಲ ಸರಳ ಸತ್ಯಗಳು ಅರಿವಾಗುವುದೇ ಇಲ್ಲ.ಎಲ್ಲ ಐಹಿಕ ಹಸಿವನ್ನು ನೀಗಿಸುವಂತೆ ಪ್ರೇರೆಪಿಸುವ ಮನಸ್ಸಿನ ದಿಶೆಯನ್ನು ಬದಲಿಸಬೇಕು. ಆಗ ಹೃದಯನೆಂಬ ಸಹಚರ ನೆಮ್ಮದಿಯಾಗಿ ನಮ್ಮ ಜತೆ ಮಿಡಿಯುತ್ತ ಇರಬಲ್ಲ.
ದ್ವೇಷ ಅಸೂಯೆ ಇಂತಹ ಷಡ್ವೈರಿಯನ್ನು ನಿಯಂತ್ರಿಸಿದವ ತನ್ನ ಹೃದಯವನ್ನು ಪ್ರೇಮಿಸುತ್ತಾನೆ. ತನ್ನ ಹೃದಯವನ್ನು ಪ್ರೇಮಿಸಿದವ ಪರರ ಹೃದಯವನ್ನು ಪ್ರೇಮಿಸುತ್ತಾನೆ. ಅರ್ಥಾತ್ ದ್ವೇಷ ಅಸೂಯೆಯಿಂದ ದೂರವಾಗುತ್ತಾನೆ.ಪ್ರೇಮ ಸ್ನೇಹ ಭಾವ ನೆಲೆನಿಂತಾಗ ಪ್ರಕೃತಿಯಲ್ಲೂ ಅದೆ ಪ್ರತಿಫಲನವಾಗುತ್ತದೆ. ಸಹನಾವವತು...ಸಹನೌಭುನಕ್ತು ಎಂಬ ದಿವ್ಯ ಮಂತ್ರ ಆಗ ಅರ್ಥಪೂರ್ಣವಾಗುತ್ತದೆ.
Nice narration of inner expeience... Hope this article will inspire some to start yoga..
ReplyDelete