ವ್ಯಕ್ತಿತ್ವ ವಿಕಸನಕ್ಕೆ ಅಥವಾ ಅದು ರೂಪುಗೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಯಾವುದಾದರು ವ್ಯಕ್ತಿ ಕಾರಣಿಭೂತರಾಗಿ, ಅಥವಾ ಪ್ರೇರಕ ಶಕ್ತಿಯಾಗಿ ಶಿಲ್ಪಿಯಂತೆ ಶಕ್ತಿರೂಪವಾಗಿರುತ್ತಾರೆ. ಅದು ಯಾವ ರೂಪದಲ್ಲೊ ಭಾವದಲ್ಲೊ ನಿರ್ವಚನ ಅಸಾಧ್ಯ. ಹೇಳಲಸಾಧ್ಯವಾದ ಭಾವನಾರೂಪಿಗಳು ಹಲವರ ಬದುಕಿನಲ್ಲಿ ನಿರೂಪಿಗಳಾಗಿಬಿಡುತ್ತಾರೆ. ಅದರಂತೆ ನನ್ನದಾದ ವ್ಯಕ್ತಿತ್ವ ಏನಿದೆಯೋ ಅದನ್ನು ನಾನು ರೂಢಿಸಿಕೊಂಡ ಬಗೆ ಏನಿದೆಯೋ ಅದಕ್ಕೆ ಪ್ರೇರಕರಾಗಿ ರೂಪಕರಾಗಿದ್ದದ್ದು ನನ್ನ ಸೋದರ ಮಾವ, ನನ್ನ ಅಮ್ಮನ ಒಡ ಹುಟ್ಟಿದ ತಮ್ಮನಾದ ಪೂಜ್ಯರಾದ ಶ್ರೀ ರಾಮ ಚಂದ್ರ ಭಟ್ ಆವಳ ಮಠ. ನಮ್ಮ ಮನೆತನಗಳಲ್ಲಿ ಪ್ರಸಿದ್ದವಾದ ಮಠದ ಕುಟುಂಬದವರಾದ ಹಾಗು ನನ್ನ ಅಜ್ಜ ಪರಮಪೂಜ್ಯ ಶ್ರೀ ಅಚ್ಚುತ ಭಟ್ (ಅಚ್ಚಣ್ಣ ಭಟ್ಟ) ಆವಳ ಮಠ ಇವರ ಮಗನಾದ ಇವರು ನನ್ನ ತಾಯಿಯವರ ಸಹೋದರ.
ಮೊನ್ನೆಯ ಸೋಮವಾರದ ದಿನಾಂಕ 21.02.2011 ರ ರಾತ್ರಿ ಬಂದ ಕರೆ ನನಗೆ ತೀವ್ರ ಅಘಾತವನ್ನು ಕೊಟ್ಟುಬಿಟ್ಟಿತು. ಮಾವ ಬ್ರೈನ್ ಹೇಮರೇಜ್ ಆಗಿ ಇನ್ನು ಅಸಾಧ್ಯ ಅಂತ ವೈದ್ಯರಿಂದ ತಿರಸ್ಕರಿಸಲ್ಪಟ್ಟು ಮನೆಗೆ ಬಂದ ವಾರ್ತೆ ನನ್ನ ಮನಸ್ಸಲ್ಲಿ ತಲ್ಲಣವನ್ನುಂಟು ಮಾಡಿತು. ಕಳೆದ ದಿನಗಳ ನೆನಪಿನ ಅಲೆಗಳ ಭೋರ್ಗರೆತಕ್ಕೆ ಸಂಪೂರ್ಣ ಶರಣಾದೆ, ಹೃದಯ ಬಡಿತ ನನ್ನ ನಿಯಂತ್ರಣ ವಿಲ್ಲದಂತೆ ವರ್ತಿಸಿತು. ನನ್ನ ಮನಸ್ಸಿನ ಪ್ರತಿ ಮಿಡಿತಗಳಿಗೆ ಹೃದಯದ ಬಡಿತಗಳಿಗೆ ಜನನಿಯಂತೆ ನಿಮಿತ್ತವಾದ ಮಾವ ರುಗ್ಣ ಶಯ್ಯೆಯಲ್ಲಿ . ಮನಸ್ಸು ತಾಳಿಕೊಳ್ಳುವ ಶಕ್ತಿಯನ್ನು ಅರಸುವ ಯತ್ನ ಮಾಡಿತು.
ಮಂಚದಲ್ಲಿ ಎದ್ದು ಕುಳಿತು ಭಗವಂತನನ್ನು ಸ್ಮರಿಸಿದೆ. ಬೇಡುವುದಕ್ಕೇನು ತೋಚಲಿಲ್ಲ. ವೇಗವಾಗಿ ಬಡಿಯುತ್ತಿದ್ದ ಫ್ಯಾನ್ ಗಾಳಿ ಇದ್ದರೂ ವಾತಾವರಣ ಸ್ಥಬ್ಧವಾದಂತೆ ಭಾಸವಾಯಿತು. ದೋ ಎಂಬ ಅಕಾಲಿಕ ಮಳೆ ಬೇರೆ. ಅಸಹಜ ವಾತಾವರಣ. ಮಲಗಿದ್ದ ಅಮ್ಮನನ್ನು ಎಬ್ಭಿಸುವ ಯೋಚನೆ ಬಂದರೂ ಎಬ್ಭಿಸುವ ಬಗ್ಗೆ ಯೋಚಿಸ ಹತ್ತಿತ್ತು. ಏನೂ ಮಾಡಲು ತೋಚದ ಸನ್ನಿವೇಶ. ಯಾವುದನ್ನೂ ಯೋಚಿಸದ ಮನ ನಗಾರಿಯಂತೆ ಬಡಿದುಕೊಳ್ಳುತ್ತಿದ್ದ ಎದೆಯನ್ನು ನಿಯಂತ್ರಿಸುವಂತೆ ಪ್ರೇರೇಪಿಸಿ ಹಾಗೆ ಸ್ವಲ್ಪ ಅಂಗಾತನೆ ಮಲಗಿದೆ. ಮನಸ್ಸನ್ನು ಶಾಂತವಾಗಿಸುವ ಯತ್ನ. ನಾನು ನಾನಲ್ಲ ಎಂಬ ದಿವ್ಯತೆಯ ಅನುಭವವನ್ನು ಹೊಂದುವ ಯತ್ನ. ಹಾಗೆ ನಿಶ್ಚಲ ನಾಗಿ ಸ್ವಲ್ಪ ಹೊತ್ತು ಅದೇ ಸ್ಥಿತಿಯಲ್ಲಿ ಕಳೆದೆ. ಯಾವ ಕ್ಷಣದಲ್ಲೂ ಮೊಬೈಲ್ ರಿಂಗಾಗಬಹುದು. ಇದನ್ನೇ ನಿರೀಕ್ಷಿಸುತ್ತಾ ಭಹುಶಃ ಅಲ್ಲಿಗೆ ಸಣ್ಣ ಜೊಂಪು ಬಡಿಯಿತೋ ಏನೋ ?
ಸ್ಪುರದ್ರೂಪಿ ಮಾಮ |
ಪಕ್ಕನೆ ಜೊಂಪು ಬಿಟ್ಟೆದ್ದೆ.. ಹೊರಗೆ ಮಳೆ ನಿಂತು ಶುಭ್ರ ಆಕಾಶ, ಬೆಳದಿಂಗಳ ನೀರವ ಮೌನದಲ್ಲೂ ವಿಚಿತ್ರವಾಗಿ ಕಾಗೆಗಳು ಕಿರುಚುವ ಸದ್ದು. ಒಂದೇ ಸವನೆ ಕಾ.. ಕಾ.. ಗುಟ್ಟುವಿಕೆಗೆ ಮನಸ್ಸು ನಾರಯಣ ಧ್ಯಾನವನ್ನು ಮಾಡಿತು. ಮೈ ಪೂರ ಬೆವರಿದ ಅನುಭವ. ಮೈ ಮನ ಕಟ್ಟಿ ಹಾಕಿದ ಬಂಧನದ ಹಾಗೆ ಭಾಸವಾಯಿತು. ಗಂಟೆ ಸರಿ ಸುಮಾರು ಒಂದಾಗಿರಬಹುದು.ಕಾಗೆಗಳು ಯಾಕೆ ಕಿರುಚಿತ್ತಿವೆ? ಮನಸ್ಸು ಮತ್ತಷ್ಟು ಕ್ಷೋಭೆಗೆ ಒಳಗಾಯಿತು. ಸ್ವಲ್ಪ ಹೊತ್ತಿಗೆ ಎಲ್ಲವೂ ಶಾಂತವಾಯಿತೋ ಎನ್ನುವಾಗ ಮೊಬೈಲ್ ರಿಂಗಾಯಿತು. ಧಿಗ್ಗನೆ ಎದ್ದೆ...ಬಾವನ ಹೆಸರು ಮೂಡಿತ್ತು. “ ಹಲೋ...” ಎಂದೆ ನನ್ನ ಧ್ವನಿ ನನಗೆ ಕೇಳಿಸಿಲ್ಲ ... “ ಬಾವ .. ಎಲ್ಲ ಮುಗೀತು .. ಈಗ ಐದು ನಿಮಿಷ ಆಯಿತಷ್ಟೇ....” ಮತ್ತೆ ಮಾತಿಲ್ಲ.
ಒಂದೆ ಬಾರಿಗೆ ಬಂಧಮುಕ್ತ ವಾತಾವಾರಣ ..ಎಲ್ಲಿತ್ತೋ ತಂಗಾಳಿ ಬೀಸತೊಡಗಿತು. ಮೈಯಲ್ಲಿ ಒಂದು ಬಗೆ ಚಲನೆಯ ಚುರುಕುತನ ಹೊಮ್ಮಿತು. ಎದ್ದೆ. ಹೊರಬಂದೆ ದೇವರಿ ನಮಸ್ಕರಿಸಿದೆ. ಮನಸ್ಸೆಂದಿತು“ ಭಗವಂತ ದಿವ್ಯಾ ಅತ್ಮಕ್ಕೆ ಸದ್ಗತಿಯನ್ನು ನೀಡು”
ಮತ್ತೂ ಒಂದು ಪ್ರಶ್ನೆ ಕಾಗೆ ಹಾಗೆ ಅರಚಿತ್ತೇ. ...? ಹೌದು ನಿಜ .
ಅಮ್ಮನನ್ನು ಎಬ್ಬಿಸಿದೆ ಅದಾಗಲೇ ಸತಿ ಎದ್ದು ಅಗಿತ್ತು. ಅಮ್ಮನಿಗೆ ನಿದ್ದೆಯೇ ಬಂದಿರಲಿಲ್ಲ. ರಾತ್ರಿ ಮಲಗಿದ್ದಾಗ ಹಿರಿಯ ಮಾವನ ನೆನಪೌ ಅದ್ಯಾಕೋ ಕಾಡಿತ್ತು. ಅದರೆ ಕಾಗೆಯ ಅರಚಾಟ ಅವರಿಗೂ ಕೇಳಿಸಿತ್ತು. ಮೆತ್ತೆಗೆ ಹೇಳಿದೆ. “ ಬಾವ ಫೋನ್ ಮಾಡಿದ್ದ.. ಚಂದಮಾಮ ತೀರಿ ಹೋದರು...” ನನ್ನ ಅಳುವನ್ನು ಕಷ್ಟಪಟ್ಟು ತಡೆ ಹಿಡಿದೆ ಹಿರಿಯ ಜೀವ ಉದ್ವಿಗ್ನವಾಗಬಾರದಲ್ಲ?
ಮತ್ತೆ ಎಲ್ಲ ಕ್ಷಣದಲ್ಲಿ ಚುರುಕಾದೆವು. ತಮ್ಮ ಕಾರ್ ಸ್ಟಾರ್ಟ್ ಮಾಡಿದ. ಇದ್ದುದನ್ನು ಕೈಯಲ್ಲಿ ಹಿಡಿದು ಆ ರಾತ್ರಿಯೇ ಮಂಗಳೂರಿನತ್ತ ಹೊರಟೆವು.
ದಾರಿಯುದ್ದಕ್ಕೂ ಮಾವನ ನೆನಪುಗಳು ಮಾತಿನ ಮುಖದಲ್ಲಿ ಹರಿದಾಡಿತು. ನನ್ನ ಮಾವ ನನ್ನ ವ್ಯಕ್ತಿತ್ವದ ಸರ್ವ ರೂಪಕ್ಕೂ ಕಾರಣರಾದ ಮಾವ ಎಷ್ಟೊಂದು ಘಟನೆಗಳು. ಸಂದ ದಿನಗಳು. ಒಮ್ಮೆಲೆ ಮಾತು ನಿಲ್ಲಿಸಿ ಅಳುತ್ತಾ ಕಣ್ಣೀರು ಹಾಕಿದೆ. ಮಾವ .....ನನ್ನ ಮಾವ ಎಂತಹ ಅದ್ಭುತ ವ್ಯಕ್ತಿ...!!!
ಅಷ್ಟೇನೂ ವಿದ್ಯಾವಂತರಲ್ಲದ ಮಾವ ಮಹಾಜ್ಞಾನಿಯಂತೆ ಮಾತನಾಡ ಬಲ್ಲರು. ತತ್ವಾದರ್ಶವನ್ನು ತಾವು ಕಂಡ ಬಗೆಯಲ್ಲಿ ಹೇಳಬಲ್ಲರು. ನನ್ನಲ್ಲಿ ನಿಸ್ವಾರ್ಥತೆಯ ಭಾವವನ್ನು ಬೆಳೆಸಿದ ಪರಮ ಗುರುವಾಗಬಲ್ಲರು. ಚಂದಮಾಮ ಎಂದಿಗೂ ಚಂದಮಾಮನೇ ನಿಸ್ವಾರ್ಥಿ. ಪವಿತ್ರ ಚಂದ್ರನ ಬೆಳಗಿನ ಶುಭ್ರಮನಸ್ಸಿನವ್ಯಕ್ತಿ.
ನನ್ನ ಬಾಲ್ಯ ... ತುಂಬ ಸಣ್ಣ ಮಗುವಾಗಿರುವಾಗಲೇ ಅಕ್ಕನ ಮಕ್ಕಳೆಂದರೆ ಅಕ್ಕರೆ. ಅದೆಂತಹ ಅಕ್ಕರೆ. ಇಂದೂ ಮಾವನ ಮಕ್ಕಳಲ್ಲಿ ನಾನು ಹೇಳುವುದಿದೆ. “ನಿಮಗೆ ಗೊತ್ತಿಲ್ಲದ ನಿಮ್ಮ ಅಪ್ಪನನ್ನು ನಾನು ಕಂಡಿದ್ದೇನೆ ಅವರಲ್ಲಿ. ನಿಮಗೆ ಕೊಡದಂತಹ ಪ್ರೀತಿ ಮಮತೆಯನ್ನು ನಾನು ಉಂಡಿದ್ದೇನೆ. ನಿಮ್ಮನ್ನು ಎತ್ತಿ ತಿರುಗಾಡಿದ್ದು ನಿಮಗೆ ನೆನಪಿಲ್ಲದಷ್ಟು ಕಡಿಮೆ ... ಅದರೆ ನನ್ನನ್ನು ಎತ್ತಿ ತಿರುಗಾಡಿದ್ದು ನನಗಿನ್ನೂ ನೆನಪಿದೆ.”
ಪ್ರತೀ ಯೊಬ್ಬರಲ್ಲೂ ಅಗಾಗ ಹೇಳುವ ಮಾತಿದೆ ಆ ಅಕ್ಕನ ಮಕ್ಕಳು ಈ ತೋಳಿಂದ ಎತ್ತಿ ಬೆಳೆದವುಗಳು. ನನ್ನ ಮಡಿಲಲ್ಲಿ ಉಚ್ಚೆ ಹೊಯಿದು ಒದ್ದೆ ಮಾಡುವ ಮೊದಲೇ ನನ್ನ ಪ್ರೀತಿಯ ಕಣ್ಣೀರಧಾರೆ ಅವರನ್ನು ತೋಯಿಸಿ ಆಗಿದೆ. ಹೌದು ಅಲ್ಲಿಗೆ ನಾವು ಪವಿತ್ರಪಾಣಿಗಳಾಗಿದ್ದೆವು.
ಬಸವಳಿದ ದೇಹ.. |
ಹಲವು ಸಲ ನಾನು ಹೇಳಿದ್ದಿದೆ, ನನ್ನ ಬಾಲ್ಯದ ಸಂಗತಿಗಳು. ಅದೆಲ್ಲದಕ್ಕೂ ಅಧಿಕ ನಂಟು ಇರುವುದು ನನ್ನ ಚಂದಮಾಮನಿಗೆ. ಕಣ್ಣಿಗೆ ಅಗಸದಲ್ಲಿ ಕಾಣುವ ಚಂದ ಮಾಮ ಈ ರೂಪದಲ್ಲಿ ಅನ್ವರ್ಥವಾಗಿದ್ದ. ಬಾಲ್ಯದಿಂದಲೆ...!!
ನನಗೆ ರಾಜ್ ಕುಮಾರ್ ಎಂದು ನಾಮಕರಣ ಮಾಡಿದವರೇ ನನ್ನ ಮಾವ. ಹಲವು ವಿಧದಲ್ಲಿ ಚಿತ್ರ ನಟ ರಾಜ್ ಕುಮಾರ್ ಗೆ ಹೋಲುವಂತಿದ್ದ ಸ್ಪುರದ್ರೂಪಿ ಮಾವ ನನಗೇ ಪ್ರೀತಿಯಿಂದ ಆ ಹೆಸರಿಟ್ಟಿದ್ದರು. ಮಾತ್ರವಲ್ಲ ಆವಾಗ ಕಾರ್ ಸ್ಟ್ರೀಟ್ ನಲ್ಲಿ ತಾನು ನಡೆಸುತ್ತಿದ್ದ ಹೋಟೇಲ್ ಗೆ ರಾಜಾಮಹಲ್ ಎಂದು ನನ್ನದೆ ಹೆಸರು ಇಟ್ಟಿದ್ದರು. ಒಂದು ಸಲ ಅವರು ಚಲನಚಿತ್ರಕ್ಕೂ ಆಯ್ಕೆಯಾಗಿದ್ದರು ಎಂದು ಹಲವರು ನಮ್ಮಲ್ಲಿ ಹೇಳುತ್ತಿದ್ದರು. ನಮ್ಮ ಅಜ್ಜ ಯಾವುದಕ್ಕೂ ಅವರನ್ನು ಬಿಟ್ಟಿರಲಿಲ್ಲ. ಬ್ರಾಹ್ಮಣರಿಗೆ ಸಲ್ಲುವದ್ದು ಅಲ್ಲ ಎಂದೆ ಬೈದು ತಡೆದರು. ಹಾಗೆ ನೋಡಿದರೆ ಮಾವ ಸ್ವತಃ ಉತ್ತಮ ಕಲಾವಿದ, ಗಾಯಕ, ಆದರೆ ದುರ್ದೈವ ಯಾವುದೂ ಬಹಿರಂಗವಾಗಲೇ ಇಲ್ಲ. “ಗುಮ್ಮನ ಕರೆಯದಿರೆ ಅಮ್ಮಾ ನೀನು ” ಎಂಬ ಪುರಂದರ ದಾಸರ ಭಜನೆ ಈಗಲೂ ನನ್ನ ಕಿವಿಯಲಿ ಗುಂಯ್ ಗುಡುತ್ತಿದೆ.ಯಕ್ಷಗಾನದ ಅಭಿರುಚಿಯನ್ನು ನನ್ನಲ್ಲಿ ಬೆಳೆಸಿದ ಮೂಲ ಇರುವುದು ಮಾವನಲ್ಲೇ. ಎಷ್ಟೊಂದು ಯಕ್ಷಗಾನ ಬಯಲಾಟ ತಾಳಮದ್ದಲೆಗಳಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಬಲಿಪ ನಾರಾಯಣ ಬಾಗವತರು ಆಗಾಗ ಮನೆಗೆ ಬೇಟಿ ಕೊಟ್ಟಾಗಲು ಅಪಾರ ಕಾಳಜಿಯಿಂದ ಅವರ ಅತಿಥ್ಯವಹಿಸುತ್ತಿದ್ದರು. ಕಳೆದ ವರ್ಷ ನನ್ನ ಭಾವನ ಮದುವೆ ಸಂದರ್ಭದಲ್ಲಿ ನನ್ನ ಮೊಬೈಲ್ ನಲ್ಲಿದ್ದ ಬಲಿಪ್ಪಜ್ಜನ ಭೀಷ್ಮಪರ್ವ ಯಕ್ಷಗಾನವನ್ನು ಮಾವ ಆಸಕ್ತಿಯಿಂದ ಆಲಿಸಿದಾಗ ನನಗೆ ಗತಕಾಲದ ಮಾವನ ನೆನಪಾಗಿತ್ತು. ಅವರ ಬಾಲ್ಯದಲ್ಲಿ ಒಂದು ಸಲ ಯಕ್ಷಗಾನದಲ್ಲಿ ಸ್ತ್ರೀ ವೇಶ ಮಾಡಿದ್ದನ್ನೂ ಹಲವುಸಲ ನೆನಪಿಸುತ್ತಿದ್ದರು. ಮಹಾವಿಷ್ಣುವಿನ ಜತೆ ಲಕ್ಷ್ಮಿಯ ಪಾತ್ರ. ವಿಷಯ ತಿಳಿದ ಅವರ ಅಪ್ಪ ನನ್ನಜ್ಜ ಅವರನ್ನು ವೇದಿಕೆಯಿಂದಲೇ ಎಳೆದುಕೊಂಡು ಬಂದಿದ್ದರಂತೆ. ಇದನ್ನು ಯಾವ ಭಾವನೆಯಲ್ಲಿ ಹೇಳುತ್ತಿದ್ದರೋ ಆ ಭಾವನೆಯ ಅರ್ಥ ಈಗಲೂ ನನಗೆ ಆಗಲೆ ಇಲ್ಲ. ಅಳಕೆ ರಾಮ ರೈ ಯ ಪಾತ್ರ ಮತ್ತು ನಟನೆಯನ್ನು ಎಷ್ಟುಸಲ ವಿವರಿಸುತ್ತಿದ್ದರೋ ಲೆಕ್ಕವಿಲ್ಲ. ಶೇಣಿ ಸಾಮಗ ಪೆರ್ಲರ ಹಲವು ಸಂವಾದವನ್ನು ಎಳೆ ಎಳೆಯಾಗಿ ನನಗೆ ವಿವರಿಸುತ್ತಿದ್ದರು. ಪೆರ್ಲರ ಅರ್ಥಗಾರಿಕೆಯ ಸೊಗಸನ್ನು ಅಪಾರವಾಗಿ ಅಭಿಮಾನಿಸುತ್ತಿದ್ದ ಅವರು ಅದರ ತತ್ವ ಸಿದ್ದಾಂತಗಳ ಆಳವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದರು.
ಹಲವು ದಶಕದ ಹಿಂದಿನ ಮಂಗಳೂರು ನಗರ. ಹಳೆಯ ನೀಲಿ ಕಪ್ಪು ಗೆರೆಯ ಸಿ.ಪಿ.ಸಿ. ಬಸ್ ನಲ್ಲಿ ಅಥವಾ ಶಂಕರ್ ವಿಟ್ಟಲ್ ಬಸ್ ನಲ್ಲಿ ಮಾವನ ಜತೆ ನಗರದಲ್ಲಿ ಓಡಾಡಿದ್ದು , ಮಾತ್ರವಲ್ಲ ಅವರ ಹಳೆಯ ಬಿ.ಎಸ್. ಎ. ಸೈಕಲ್ ನಲ್ಲಿ ಹಂಪನ್ ಕಟ್ಟೇ ಕಾರ್ ಸ್ಟ್ರೀಟು ಟೆಂಪಲ್ ಸ್ಕ್ವೇರ್ ಎಂದೆಲ್ಲ ಓಡಾದ್ದು ಇನ್ನೂ ನನಗೆ ಅಚ್ಚಳಿಯದೆ ಉಳಿದಿದೆ. ವಿಶ್ವಭವನದಲ್ಲಿ ನಾನು ಅವರು ಜತೆಯಾಗಿ ತಿನ್ನುತ್ತಿದ್ದ ಇಡ್ಲೀ ಸಾಂಬಾರ್ ರವಾದೋಸೆಯ ನೆನಪು ಮಾವ ಎಂದೋಡನೆ ನೆನಪಿಗೆ ಬರುತ್ತದೆ. ಹಳೆಯ ಉಡುಪಿ ಕೃಷ್ಣ ಭವನ...(ಈಗಿನ ದೊಡ್ಡ ಐಡಿಯಲ್ ಐಸ್ಕ್ರೀಮ್ ಪಕ್ಕದ ಕಟ್ಟಡದಲ್ಲಿ)ದಲ್ಲಿನ ಉದ್ದಿನ ಬಿಸ್ಕಿಟ್ ಅಂಬಡೆ ಸಾಂಬಾರ್ ಮಾವನ ಪ್ರಿಯವಾದ ತಿಂಡಿ.
ಹತ್ತು ಹಲವು ತಿಂಡಿಗಳನ್ನು ಮಾಡಲು ಬಲ್ಲ ಮಾವ ಚಕ್ಕುಲಿ ಎಳ್ಳುಂಡೆಯ ತಯಾರಿಯಲ್ಲಿ ತನ್ನದೇ ತಂತ್ರಜ್ಞಾನವನ್ನು ತುಂಬುತ್ತಿದ್ದರು. ವ್ಯಾಪಾರಿ ಉದ್ದೇಶಕ್ಕೆ ಇವರ ಅದ್ಭುತ ಟಿಪ್ಸ್ ಗಳು ಮತ್ತು ಇವುಗಳ ತಯಾರಿಯನ್ನು ಅವರಿಂದಲೇ ನಾನು ಕಲಿತದ್ದು ಮಾತ್ರವಲ್ಲ ಪ್ರಥಮದಲ್ಲಿ ಅದೇ ನನ್ನ ಜೀವನ ರೂಪೀಕರಣಕ್ಕೂ ಹಾದಿಯಾಗಿತ್ತು. ಕೆಲಸದಲ್ಲೂ ಹಾಗೆ ಅತ್ಯಂತ ವೇಗವಾದ ಕೆಲಸ ಮಾವನ ಶೈಲಿ. ಯಾವುದೇ ಕೆಲಸವನ್ನಾದರೂ ಬೇಗನೆ ಮುಗಿಸಿ ಮತ್ತೆ ಸುಮ್ಮನೆ ಮಲಗುವುದು ಮಾವನ ಪ್ರಿಯವಾದ ಶೈಲಿ. ಎರಡು ಮೂರು ಜನರ ಕೆಲಸವನ್ನು ಒಬ್ಬರೇ ಮಾಡುವ ಜಾಣತನ ಮಾವನಲ್ಲಿ ಅಪಾರ. ಇತ್ತಿಚೆಗೆ ಹಲವು ತಿಂಡಿ ವ್ಯಾಪಾರಿಗಳು ಇದರ ಲಾಭ ಪಡೆದದ್ದಿದೆ.
ನಾನು ಮರೆಯದ ಹಲವು ಹವ್ಯಾಸಗಳು ಒಂದು ತರಕಾರಿ ಬೆಳೆಯುವುದು ಮತ್ತು ಅಡುಗೆಕೆಲಸ. ಮಂಗಳೂರಿನ ಸ್ಥಳದಲ್ಲಿ ಊರಿನ ಉತ್ತಮ ಬೆಂಡೇಕಾಯಿ ಸ್ವಂತ ಕೃಷಿ ಮಾಡುತ್ತಿದ್ದರು. ಅದು ಉದ್ದ ತಳವಾರಿನ ಹಾಗೆ ಅಗುತ್ತಿತ್ತು. ಹೀರೆಕಾಯಿ .. ಕೆಸುವು ಮತ್ತು ಹಾಗಲ ಕಾಯಿ ಮಾವನ ಪ್ರಿಯ ತರಕಾರಿಗಳು. ಇವುಗಳ ರುಚಿ ಅಸ್ವಾದನೆಯನ್ನು ನನಗೆ ಕಲಿಸಿದ್ದೇ ಮಾವ. ಇಂದಿಗೂ ನನ್ನ ಅತಿಪ್ರಿಯ ತರಕಾರಿ ಹಾಗಲ. ಹತ್ತು ಹಲವು ರೀತಿಯ ಹಾಗಲಕಾಯಿ ವಿಭವಗಳ ತಯಾರಿಯಲ್ಲಿ ಮಾವ ಸಿದ್ದಹಸ್ತರು.
ಚಂದಮಾವ ಎಂದೊಡನೆ ಅವರೊಂದಿಗೆ ಕಳೆದ ಹಲವು ರಸಘಳಿಗೆಗಳಲ್ಲಿ ಒಂದು.. ನಾವೆಲ್ಲ ಮಕ್ಕಳು ರಾತ್ರಿ ಬೇಗನೇ ಊಟ ಮಾಡಿ ಮಲಗುತ್ತಿದ್ದೆವು. ತಡ ರಾತ್ರಿಯಲ್ಲಿ ಮನೆಗೆ ಬಂದ ಇವರು ಅತ್ತೆಯಲ್ಲಿ ಊಟಕ್ಕೆ ಏನೇ? ಎಂದು ವಿಚಾರಿಸಿ ಮಾಡಿದ ಅಡುಗೆ ಇಷ್ಟವಿಲ್ಲದೆ ... ಅಂಗಳ ದ ಮೂಲೆಗೆ ಸ್ವತಹ ಬೆಳೆಸಿದ ಬೆಂಡೇಕಾಯಿ ಅಥವಾ ಪಡುವಲ ಕಾಯಿಯನ್ನು ಅದೂ ಅತ್ಯಂತ ತುಂಬಾ ಎಳೆಯದಾಗಿ ಇರುವದ್ದನ್ನು ಹಸಿ ಹಸಿಯಾಗಿ ಒಂದೆರಡನ್ನು ಕೊಯಿದು ತರುತ್ತಿದ್ದರು. ಆರಾತ್ರಿ ಅವರ ಆಡುಗೆ ಶುರು. ತಂದು ಬೇಗನೆ ಬೇಗನೆ ಹೆಚ್ಚಿ..ಪಲ್ಯತಯಾರಿ. ಅದರ ಪರಿಮಳಕ್ಕೆ ನಮಗೆ ಎಚ್ಚರವಾಗುತ್ತಿತ್ತು. ಆದರು ದೊಡ್ಡಮ್ಮನ ಭಯದಿಂದ ಹಾಗೆ ಮಲಗಿದ್ದರೆ ಊಟ ಮಾಡುತ್ತಿದ್ದ ;ಇವರು...” ರಾಜ ಮಲಗಿದಿಯಾ..? ನಿದ್ದೆ ಬಂತ.. ? “ ಅಂತ ಕರೆದಾರು ನಾನು ದಿಗ್ಗನೆ ಎದ್ದು ಪುನಃ ಪಲ್ಯ ಅನ್ನ ಊಟ ಮಾಡಿ ಮಲಗುತ್ತಿದ್ದೆ. ಯಾವುದು ಮರೆತರು ಇದನ್ನು ಮರೆಯಲಾರೆ. ಅದ್ಭುತ ರುಚಿಯ ಇಂತ ಹಲವು ಅಡುಗೆ ಮಾವನ ವಿಶೇಷತೆ. ಊಟದಲ್ಲೂ ಅಷ್ಟೇ ಎಲ್ಲರೂ ಪಲ್ಯದ ಹೋಳು ತೆಗೆದುಕೊಳ್ಳುತ್ತಿದ್ದರೆ ಇವರು ಪಲ್ಯದ ಜತೆಗೆ ಇರುತ್ತಿದ್ದ ಬರೀ ರಸ.. ಅದು ಒಗ್ಗರಣೆ ಮಿಶ್ರಿತವಾಗಿ ಇದ್ದದ್ದನ್ನು ಸಾರಿನಂತೆ ಹಾಕಿ ಊಟ ಮಾಡುತ್ತಿದ್ದರು. ಮತ್ತು ಈ ರುಚಿಯನ್ನು ನನಗೂ ಹಿಡಿಸಿದ್ದರು. ನಮ್ಮಲ್ಲಿ ಸಾಮಾನ್ಯವಾಗಿ ರುಚಿಯಾಗಿ ಅಡುಗೆ ಮಾಡುವುದರಲ್ಲಿ ಹೆಂಗಸರಿಗಿಂತ ಗಂಡಸರೇ ಮುಂದು. ಅದರೆ ಮಾವ ಇದರಲ್ಲೂ ಎತ್ತಿದ ಕೈ. ಅದರಲ್ಲೂ ತನಗೆ ಬೇಕಾದದ್ದನ್ನು ತಾನೆ ಅಚ್ಚುಕಟ್ಟಾಗಿ ಮಾಡಿತಿನ್ನುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಆಡುಗೆ ಮಾಡಲು ಹೋಗುವ ಇವರು ಒಂದೂವರೆಗೆ ಎಲ್ಲ ಸಿದ್ದಗೊಳಿಸಿ ಊಟಕ್ಕೆ ಕೂರುತ್ತಿದ್ದರು. ಅತ್ಯಂತ ಕ್ಷಿಪ್ರ ಅಷ್ಟೇ ರುಚಿಯಾದ ಅಡುಗೆ. ಇದನ್ನು ನಾನು ಬಹಳ ಇಷ್ಟ ಪಟ್ಟು ನನ್ನಲ್ಲೂ ಅಲವಡಿಸುವ ಪ್ರಯತ್ನ ಮಾಡಿದ್ದೇನೆ. ನನಗೆ ಬೇಕು ಅನ್ನಿಸಿದ್ದು ನಾನೆ ಮಾಡಿ ತಿನ್ನುವ ಗುಣ ನಾನು ಕಲಿತಿದ್ದರೆ ಅದು ಇವರಿಂದ. ಸಾಧ್ಯವಾದಷ್ಟು ಅವರದೇ ಶೈಲಿಯನ್ನು ಅನುಕರಿಸುತ್ತಿದ್ದೇನ. ಮತ್ತು ನನ್ನ ಅತಿಪ್ರಿಯವಾದ ಹವ್ಯಾಸ ವೂ ಆಗಿದೆ. ಇದರಿಂದಾಗಿ ನನ್ನ ಅಡುಗೆ ನನ್ನ ತಮ್ಮನಿಗೆ ಅತ್ಯಂತ ಪ್ರಿಯವಾಗಿ ಪರಿಣಮಿಸಿದೆ.
ಹೀಗೆ ಒಂದೆರಡಲ್ಲ.. ಹಲವು ವೇದ ಮಂತ್ರ ಶ್ಲೋಕಗಳಿಗೆ ಮೊದಲು ನನಗೆ ಮಾವನೇ ಗುರು. ಉತ್ತಮವಾಗಿ ಭಜನೆ ಮಾಡುವ ಗುಣ ಅಲ್ಪಸ್ವಲ್ಪ ನಾನು ಕಲಿತಿದ್ದೆ. ಮಂಗಳೂರಿನ ಪರಿಸರದಲ್ಲಿ ಹಲವು ಕಡೆ ಹೋದದ್ದು ನೆನಪಿದೆ. ಹಲವು ಪ್ರತಿಭೆಗಳ ಜತೆ ಅತ್ಯಂತ ವಿಶಿಷ್ಟ ಗುಣಗಳು ಬಹುಶಃ ಮಾವನ ಮೇರುವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವುಗಳಲ್ಲಿ ಅತ್ಯಂತ ವಿಶಿಷ್ಟವಾದದ್ದು ನಿಸ್ವಾರ್ಥ ಸ್ವಭಾವ ..ತನಗಾಗಿ ಮಾವ ಎನೂ ಮಾಡಲಿಲ್ಲ. ಒಂದು ಪಂಚೆಯಾಗಲಿ ವಸ್ತುವಾಗಲಿ ಮಾವ ಬಯಸಲಿಲ್ಲ. ಅತ್ಯಂತ ತಾಳ್ಮೆಯ ಸ್ವಭಾವ. ಇವರ ನಿಸ್ವಾರ್ಥತೆ ಹಲವು ನಿದರ್ಶನಗಳು ಬದುಕಿನುದ್ದಕ್ಕೂ ಸಿಗುತ್ತದೆ.
ಮಂಗಳೂರಿನ ಮನೆಯಲ್ಲಿ ಉಳಿದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡಿದ ಹಲವು ವ್ಯಕ್ತಿಗಳಿದ್ದಾರೆ. ಉಚಿತವಾಗಿ ಊಟ ಉಂಡು ವಿದ್ಯಾಭ್ಯಾಸ ಮಾಡಿದವರು ಇಂದು ಬದುಕಿನಲ್ಲಿ ತಮ್ಮದೇ ನೆಲೆಗಳನ್ನು ಕಂಡು ಕೊಂಡು ಬ್ಯಾಂಕ್ ಮ್ಯಾನೇಜರ್ ಅಥವಾ ಇನ್ಯಾವುದೊ ಹುದ್ದೆಯಲ್ಲಿದ್ದರೆ ಮಾವ ಮಾತ್ರ ಅದೇ ತುಂಡು ಪಂಚೆ ಬೈರಾಸಿನ ಬೈರಾಗಿಯಾಗಿಯೇ ಕೊನೆವರೆಗೆ ಉಳಿದದ್ದು ಬದುಕಿನ ವಿಚಿತ್ರ. ಎಂತಹ ತ್ಯಾಗ ಮನೋಭಾವ..ಅದು ಮಾತ್ರ ಪ್ರಸಿದ್ದಿಗೆ ಬರಲೇ ಇಲ್ಲ. ಮಾವ ಪ್ರಸಿದ್ಧಿಯ ಹಿಂದೆ ಹೋಗಲೂ ಇಲ್ಲ. ಯಾವತ್ತಿಗೂ ದುಡ್ಡಿನ ಹಿಂದೆ ಹೋಗದ ನಿಸ್ವಾರ್ಥತೆ... ಕೊನೇವರೆಗೂ ಹೇಳಿದ ಮಾತು ದುಡ್ಡು, ಅದು ನಾನು ಮಾಡುತ್ತಿದ್ದರೆ ಕಟ್ಟಿ ಇಡುತ್ತಿದ್ದರೆ ಇಂದು ಈ ಮಾಮ ಬೇರೆಯೆ ಅಗುತ್ತಿದ್ದ. ಸ್ವಂತ ಮಕ್ಕಳಿಗಿಂತ ಪರರಿಗೆ ನೀಡಿದ್ದೇ ಅಧಿಕ. ನನ್ನ ಅರಿವಿನಲ್ಲೇ ಹಲವು ವ್ಯಕ್ತಿಗಳು ಬಂದು ಹೋಗುತ್ತಾರೆ.
ಮೊನ್ನೆಯ ದಿನ ನಿಸ್ತೇಜ ಶರೀರ ಕಂಪನವಿಲ್ಲದೇ ಬದುಕಿನ ಪೂರ್ಣ ವಿರಾಮ ಹಾಕಿ ಮಲಗಿತ್ತು. ನನ್ನನ್ನು ಮುದ್ದಿಸಿ ಬೆಳೆಸಿದ ತುಟಿಗೆ ಹಾಕಿದ ಗಂಗೋದಕ ತೊಟ್ಟಿಕ್ಕುತ್ತಿತ್ತು. ಭಾವನಾರಹಿತ ಮುಖ ಬಡಿತವಿಲ್ಲದ ಎದೆ... ಎಲ್ಲವೂ ನಿಶ್ಚಲ. ಸಾವು ಎಂಬುದು ಎಲ್ಲ ಸಮಸ್ಯೆಗೂ ಪರಿಹಾರವೆಂಬಂತೆ ಪಾರ್ಥಿವಶರೀರ ಸಾಕ್ಷಿಯಾಗಿ ಮಲಗಿತ್ತು. ಯಾವಾಗಲೂ ನನ್ನನ್ನು ಕಂಡಾಗ ಬಿಕ್ಕಿ ಬಿಕ್ಕಿ ಅಳುವ ಭಾವನಾಜೀವಿ , ನನ್ನ ಕೈ ಹಿಡಿದು ತನ್ನ ತೋಳನ್ನು ಮಡಿಲನ್ನು ತೋರಿಸುವ ಮಾವನ ಕೈಗಳು ಎಲ್ಲಿದೆ ಎಂದು ಅರಸಿದೆ. ಕೊನೆಗೊಂದು ಬಾರಿಯಾದರೂ ಮಮತೆಯ ಮಾಮ ಜೀವ ತಳೆದಾರೆ.? ಸೋಮವಾರ , ಸಂಕಷ್ಟಿ.. ಉತ್ತರಾಯಣ..ಕೃಷ್ಣಪಕ್ಷ ಬಂದವರಲ್ಲಿ ಯಾರೋ ಹೇಳುತ್ತಿದ್ದರು ಈ ಆತ್ಮಕ್ಕೆ ಮೋಕ್ಷ ಬರೆದಿಟ್ಟಾಗಿದೆ. ಹೌದು ಪರಮಾತ್ಮ ಈ ಆತ್ಮಕ್ಕೆ ಅಷ್ಟಾದರೂ ದಯಪಾಲಿಸಲಿ ಅಂತರಾತ್ಮ ಕಂಬನಿದುಂಬಿ ಬೇಡಿತು. ಮನಸ್ಸು ಪರಮಾತ್ಮನಲ್ಲಿ ಕೇಳಿತು .. ಹೇ ಪರಮಾತ್ಮ ನನ್ನ ಚಂದಮಾಮ ನಿನಗೂ ಇಷ್ಟು ಬೇಗ ಪ್ರಿಯವಾದರೆ? ಈ ಚಂದಮಾಮ ಎಂದಿಗೂ ನನ್ನ ಬದುಕಿನಲ್ಲಿ ಹೊಳೆಯುವ ಚಂದಮಾಮನಾಗಲಿ... ಮಾವನ ಹೇಳುತ್ತಿದ್ದ ಹಾಡು ಅಪ್ರಯತ್ನವಾಗಿ ಗುನುಗುನಿಸುತ್ತಿತ್ತು ಮನ...ಅಮರ ಮಧುರ ಪ್ರೇಮ .. ಬಾ ಬೇಗ ಚಂದಮಾಮ ಬಾ ಬೇಗ ಚಂದಮಾಮ..... ಬರಬಹುದೇ?
very touching obituary. Bhagavanta avarige chirashnathiyannu karuNisali
ReplyDelete