ಹಿಂದಿನ ಲೇಖನವೊಂದರಲ್ಲಿ ಬೆಂಗಳೂರಿನ ಕರ್ಕಶ ಆಟೋಗಳ ಬಗ್ಗೆ ಬರೆದಿದ್ದೆ. ಇದು ಒಂದು ರೀತಿ ಆ ಬಗೆಯದ್ದೆ. ಬೆಂಗಳೂರಿನಲ್ಲಿ ಮನೆಯಿಂದ ಹೊರಬಂದು ಒಂದು ಫರ್ಲಾಂಗು ದೂರ ರಸ್ತೆಯಲ್ಲಿ ನಡೆದರು ಸಾಕು ಕನಿಷ್ಠ ಒಂದೆರಡಾದರೂ ಕಾಂಡಿಮೆಂಟ್ಸ್ ಅಂಗಡಿ ಸಿಗದೆ ಇರಲಾರದು. ಏನು ಈ ಕಾಂಡಿಮೆಂಟ್ಸು ಅಂಗಡಿಗಳ ತೊಂದರೆ ಎಂದು ತಲೆ ಕೆರೆದುಕೊಳ್ಳುವ ಅವಶ್ಯಕತೆ ಇಲ್ಲ. ತೊಂದರೆ ಖಂಡಿತ ಆ ವ್ಯವಹಾರ ಮಾಡುವ ಬಡಪಾಯಿಗಳದ್ದಲ್ಲ ಬಿಡಿ. ಇದು ಇಲ್ಲಿನ ವಿಚಿತ್ರ ಜನಜೀವನದ ರೀತಿಯ ಪರಿಣಾಮ.
ಕಾಂಡಿಮೆಂಟ್ಸು ಅಂಗಡಿಗಳೆಂದರೆ ನಮ್ಮೂರವರಿಗೆ ಹೇಳಿದರೆ ಎಂಥದ್ದೋ ಎಣ್ಣೆಯಲ್ಲಿ ಕರಿದ ತಿಂಡಿ ಮಾರುವ ಅಂಗಡಿ ಇರಬೇಕೆಂದು ಊಹಿಸಿಯಾರು. ಅದರೆ ಇಲ್ಲಿ ಕಂಡವರಿಗೆ ಗೊತ್ತು ಅದು ಕೇವಲ ತಿಂಡಿ ಮಾರುವ ಅಂಗಡಿಯಲ್ಲ. ನಮ್ಮೂರಿನ ಸೋಂಪಣ್ಣನ ಗೂಡಂಗಡಿಯಂತೆ ಸರ್ವ ವ್ಯವಹಾರವೂ ನಡೆಯಬಲ್ಲ ಸ್ಥಳವಿದು. ಗೂಡಂಗಡಿಯಲ್ಲಿದ್ದಂತೆ ಇಲ್ಲಿ ಹಲವು ತಿಂಡಿತಿನಸುಗಳ ಜೊತೆಗೆ ಚಹ ಕಾಫಿ ಮಾತ್ರವಲ್ಲ ಬೀಡಿ ಸಿಗರೇಟು ಅಲ್ಲದೆ ಗುಟ್ಕಾಗಳ ಸರಮಾಲೆ ಕೂಡ ಸಿಗುತ್ತದೆ. ಸಿಕ್ಕರೆ ಸಿಗಲಿ ಬಿಡಿ. ಅದಕ್ಕೇನು? ಬೇಕಾದ ಗಿರಾಕಿಗಳಿದ್ದರೆ ಮಾರುವವರಿಗೇನು? ಗಿರಾಕಿಗಳಿದ್ದರೆ ಸರ್ವಸ್ವವನ್ನು ಮಾರಾಟ ಮಾಡುವ ಪ್ರಪಂಚವಲ್ಲವೇ? ವ್ಯವಹಾರ ಎಂಬುದು ಗ್ರಾಹಕ ಮತ್ತು ಮಾರಾಟಗಾರನ ನಡುವೆ ಮಾತ್ರ ಅದರ ಪ್ರಭಾವ ಇದ್ದರೆ ಪರವಾಗಿಲ್ಲ. ಆದರೆ ಅದಕ್ಕೆ ಸಂಬಂಧಿಸದವನು ತೊಂದರೆ ಅನುಭವಿಸಿದರೆ? ಬಹಳ ವರ್ಷಗಳ ಮೊದಲು ನಮ್ಮ ಬಾಲ್ಯದ ಸಮಯ. ಆವಾಗ ಮಂಗಳೂರಿನಿಂದ ಬಾಯಾರಿಗೆ ನಾವೆ ಸ್ವತಂತ್ರವಾಗಿ ಬಸ್ಸಿನಲ್ಲಿ ಓಡಾಡಿಕೊಂಡಿದ್ದೆವು. ಹೌದು, ಅದೂ ನಮ್ಮ ಆರು ಏಳನೇ ವಯಸ್ಸಿನಲ್ಲಿ. ಆಗ ಮಂಗಳೂರಿನ ಹಂಪನಕಟ್ಟೆಯಿಂದ ನೇರ ಬಸ್ಸು ಉಪ್ಪಳ ಅಥವಾ ಬಾಯಾರಿಗೆ ಇದ್ದಿಲ್ಲ. ಮನೆಯಿಂದ ಹೊರಡುವಾಗಲೇ ಹಿರಿಯರು ತಾಕೀತು ಮಾಡಿ ಕಳಿಸುತ್ತಿದ್ದರು ಹಂಪನಕಟ್ಟೆಯಿಂದ ಬಸ್ ಹೊರಡುವ ಜಾಗದಿಂದ ಸಿಟಿಬಸ್ ೪೨ ಅಥವಾ ೪೩ ಹಿಡಿದು ಕೊನೆಯ ತಾಣವಾದ ತಲಪಾಡಿಯವರೆಗೆ ಹೋಗಬೇಕು. ಮಧ್ಯೆ ಎಲ್ಲಿಯೂ ಇಳಿಯಬಾರದು. ತಲಪಾಡಿ ಎಂಬ ಕರ್ನಾಟಕ ಕೇರಳದ ಗಡಿ ಭಾಗದ ಪ್ರದೇಶ ಈಗಿನಂತೆ ಗುಡ್ಡದ ತುದಿಯಲ್ಲಿ ಇರಲಿಲ್ಲ ಬದಲಾಗಿ ತಲಪಾಡಿ ಸೇತುವೆಯ ಮೊದಲೇ ಎರಡು ಭಾಗದ ಬಸ್ ಬಂದು ತಿರುಗುತ್ತಿತ್ತು. ನಮಗೂ ಹಾಗೆ ರಾಜ್ಯಗಳ ವೆತ್ಯಾಸ ಅಷ್ಟಾಗಿ ತಿಳಿಯದಿದ್ದರೂ ನಮ್ಮೂರಿಗೆ ಹೋಗುವ ಬಸ್ ಹಿಡಿದು ಹೋಗುವ ಜ್ಞಾನವಂತೂ ಇತ್ತು. ಹಾಗೆ ಮಂಗಳೂರಿನ ಬಸ್ ಇಳಿದು ಕಾಸರಗೋಡಿನತ್ತ ಹೋಗುವ ಬಸ್ ಗಳಲ್ಲಿ ಸ್ವಲ್ಪ ತಡವಾಗಿ ಹೋಗುವ ಬಸ್ಸನ್ನು ನಾವು ಹಿಡಿಯುವುದು ಸ್ವಾಭಾವಿಕ. ಏಕೆಂದರೆ ಕಿಟಿಕೀ ಪಕ್ಕದ ಸೀಟು ಸಿಗುತ್ತಿತ್ತು. ಸಣ್ಣ ಮಕ್ಕಳು ನೋಡಿ ಕಿಟಿಕಿ ಪಕ್ಕದ ಸೀಟು ದೊರಕಿಸಿಕೊಂಡರೂ ಬಸ್ ಹೊರಟು ಜನರಿಂದ ತುಂಬಿದಾಗ ಯಾರಾದರೂ ಹಿರಿಯರು ನಮ್ಮನ್ನು ತಮ್ಮ ಮಡಿಲಲ್ಲಿ ಕೂರಿಸಿ ನಮ್ಮ ಸೀಟು ಆಕ್ರಮಿಸಿಬಿಡುತ್ತಿದ್ದರು. ಇರಲಿ, ಬಸ್ ಅಲ್ಲಿ ಹೊರಡಲು ನಿಂತಿರಬೇಕಾದರೆ ಸಹಜವಾಗಿ ನಾನಾ ವಸ್ತುವನ್ನು ಮಾರಾಟಮಾಡುವವರು ಇದ್ದೇ ಇರುತ್ತಾರೆ ಬಿಡಿ. ಹಣ್ಣು ಅವುಗಳಲ್ಲೂ ಕಿತ್ತಳೆ ಹಣ್ಣು, “ಓ..ರೆಂಜ್.” ಎಂದು ಬೊಬ್ಬಿಡುತ್ತಾ ನಾವಿದ್ದಲ್ಲಿಗೆ ಬಂದಾಗ ನಮ್ಮ ಪಕ್ಕದಲ್ಲಿದ್ದವರು ಕೊಂಡುಕೊಂಡು ನಮ್ಮ ಮಡಿಲಲ್ಲಿ ಏರಿಸಿಬಿಡುತ್ತಿದ್ದರು. ಮಾರುವವ ಯಾರೋ ಗಿರಾಕಿ ಯಾರೋ ನಾವೊಂದು ಮಧ್ಯವರ್ತಿಯಾಗಿಬಿಡುತ್ತಿದ್ದೆವು.
ಓಹ್ ಮಾತು ಎಲ್ಲೇಲ್ಲಿಗೋ ಹೋಯಿತು. ವಿಷಯ ಪ್ರಸ್ತಾಪಿಸುವಾಗ ಒಂದೊಂದೇ ಜ್ಞಾಪಕಕ್ಕೆ ಬಂದು ಬಿಡುತ್ತದೆ. ಯಾವುದೇ ವಿಷಯವಾದರು ಬೆಂಗಳೂರಿಗೂ ನಮ್ಮೂರಿಗೂ ಮೊದಲು ನಾವು ಹೋಲಿಕೆ ಮಾಡಿಬಿಡುತ್ತೇವೆ. ಇಲ್ಲೂ ಅದೇ, ಇರಲಿ ಬಿಡಿ.
ಇಲ್ಲಿನ ಕಾಂಡಿಮೆಂಟ್ಸ್ ಅಂಗಡಿ ಸಾಮಾನ್ಯವಾಗಿ ಅಂಗಡಿ ಚಿಕ್ಕದಾಗಿದ್ದು ಗಿರಾಕಿಗಳೆಲ್ಲ ಪುಟ್ ಪಾತ್ ನಲ್ಲೇ ಟೀ ಕಾಫಿ ಹೀರುತ್ತಾ ಅತ್ತ ಇತ್ತ ಹೋಗುವವರಲ್ಲಿ ಯಾರು ಅಂಗಡಿ ಗಿರಾಕಿ ಯಾರು ಪಾದಾಚಾರಿ ಎಂಬುದೇ ಮೊದಲು ಅರಿವಾಗುದಿಲ್ಲ. ಆದರೇನಂತೆ ? ಇಲ್ಲೇ ಇದೆ ತೊಂದರೆ. ನಾನು ಕಂಡ ಇಲ್ಲಿನ ವಿಚಿತ್ರ ಪದ್ದತಿಯಲ್ಲಿ ಒಂದು ಇದು. ಜನ ಕಾಫಿ ಚಹದ ಜತೆ ಸಿಗರೇಟ್ ಸೇದುವುದು. ಕಾಫಿ ಟೀ ಜತೆ ಸಿಗರೇಟ್ ಹೋಗೆಯನ್ನು ನುಂಗುವ ವಿಚಿತ್ರ ಕ್ರಮ ಇಲ್ಲಿ ನಾನು ಮೊದಲು ಕಂಡದ್ದು. ನಮ್ಮೂರ ಗೂಡಂಗಡಿಯಲ್ಲಿ ಚಹದ ಜತೆ ಎನಾದರೂ ಕುರುಕಲು ತಿಂಡಿಯೊ, ಬ್ರೆಡ್ ಬನ್ನು ಮುಂತಾದುವನ್ನು ತಿಂದರೆ ಇಲ್ಲೇನು ವಿಚಿತ್ರ ಖಯಾಲಿ ಹೊಗೆಯನ್ನು ನುಂಗುವುದೇ? ಪಾನೀಯದ ಜತೆ ಹೊಗೆ ಒಳ ಹೋದರೆ “ಕಿಕ್” ಸ್ವಲ್ಪ ಸಿಗುವುದೇ ಎಂದು ಆಶ್ಚರ್ಯವಾಗುತ್ತದೆ. ವಿಚಿತ್ರ ಜೀವನ ಕ್ರಮಗಳು.!! ಕಾಪಿ ಹೀರುತ್ತಾ ಹೋಗೆ ಬಿಡುತ್ತಿದ್ದರೆ ಪಾದಾಚಾರಿಯಾಗಿ ನಡೆದಾಡುವ ಧೂಮ ವ್ಯಸನಿಯಲ್ಲದವ ಏನು ಮಾಡಬೇಕು? ಉಸಿರು ಬಿಗಿ ಹಿಡಿಯಬೇಕೆ? ಬೆಂಗಳೂರಿನಲ್ಲಿ ಅತ್ಯಧಿಕ ವಾಹನದಹೊಗೆಯ ಜತೆಗೆ ಈ ಸಿಗರೇಟು ಧೂಮಪಾನದ ಅನಿವಾರ್ಯತೆಯನ್ನು ಎಲ್ಲರಿಗೂ ತಂದಿಡುವ ಈ ಮಂದಿಯನ್ನು ಏನೆನ್ನಬೇಕು? “ಧೂಮ ಪಾನ ಆರೋಗ್ಯಕ್ಕೆ ಹಾನಿಕರ !!!!” ಇದನ್ನು ಓದುತ್ತಾ ಹೊಗೆಬಿಡುವ ಮಂದಿಗೆ ಈ ಹೊಗೆ ಯಾರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿಯದೋ ಏನೋ? ಒಂದು ಕೈಯಲ್ಲಿ ಟೀ , ಕಾಫಿ ಲೋಟ ಮತ್ತೋಂದು ಕೈಬೆರಳ ಸಂದಿ ಹೊಗೆಯುಗುಳುವ ಸಿಗರೇಟು. ಪ್ರತೀ ಗುಟುಕಿನೊಂದಿಗೆ ಬುಸು ಬುಸು ಹೊಗೆ ಅಕ್ಕ ಪಕ್ಕದಲ್ಲಿ ಸಂಚರಿಸುವವರ ಮುಖಕ್ಕೆ ಬಿಡುವ ಇವರಿಗೆ ಅಲ್ಪ ಪರಿಜ್ಞಾನವೂ ಇಲ್ಲವಲ್ಲ. ಇದೆಂತಹ ಕ್ರಮ? ಯಾರನ್ನು ಹೇಳಬಲ್ಲೆವು. ಜೀವನೋಪಾಯಕ್ಕೆ ಅಂಗಡಿ ಇಟ್ಟವನನ್ನೆ? ಅಲ್ಲ ಲೋಕವೇ ಹಾಳಾಗಲಿ ಎಂದು ಧೂಮ ಬಿಡುವ ಧೂಮಕೇತುಗಳನ್ನೆ? ಇವರ ಅನಾಗರಿಕ ಚಟಕ್ಕೆ ಮಿಕ್ಕವರನ್ನೇಕೆ ಬಲಿಪಶುವಾಗಿ ಮಾಡಬೇಕು?
ತೊಂದರೆ ಎಂಬುದು ಅತ್ತ ಇತ್ತ ಹೋಗುವವರಿಗೆ , ಸುತ್ತಲ ಪರಿಸರಕ್ಕೆ ಮಾತ್ರವಲ್ಲ , ಈ ಅಂಗಡಿ ಇರುವಲ್ಲೆ ಮೇಲೆ ವಾಸದ ಮನೆ ಇರುತ್ತದೆ ಎಂದಿಟ್ಟುಕೊಂಡರೆ..(ಸಾಮಾನ್ಯವಾಗಿ ಹೀಗೆ ಇರುತ್ತದೆ) ಮೇಲೆ ಮಹಡಿಯಲ್ಲಿ ಮನೆ ಮಾಡಿ ವಾಸಿಸುವ ಮಂದಿಗೆ ಈ ನಿತ್ಯ ಹೋಗೆಯಿಂದ ಮುಕ್ತಿ ಇದೆಯೇ? ಯಾರು ಯೋಚಿಸಬಲ್ಲ? ಸಣ್ಣ ಸಣ್ಣ ಮಗುವಿಗೂ ಹೃದಯ ಬೇನೆ ಶುರುವಾಗುವಾಗ ನಾವು ಇದರ ಬಗ್ಗೆ ಚಿಂತಿಸುವುದೇ ಇಲ್ಲ. ಅಷ್ಟೊಂದು ಅನಿವರ್ಯವೇ ಈ ಧೂಮ ಪಾನ? ತನಗೂ ಪರರಿಗೂ ಪರಿಸರಕ್ಕೂ ಮಾರಕವಾಗುವ ಈ ಚಟವನ್ನು ಅಷ್ಟೇಕೆ ಮೋಹಿಸುತ್ತಾರೆ ಎಂಬುದೇ ಆಶ್ಚರ್ಯ. ಬೆಂಗಳೂರಿನ ಯಾವುದೇ ಗಲ್ಲಿಯಲ್ಲಿ ನೋಡಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿ ಪರಿಸರಕೂಡ ಸಿಗರೇಟು ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ. ಈ ಕಾಂಡಿಮೆಂಟ್ಸ್ ಎಂಬ ಧೂಮ ಹಂಚುವ ಕೇಂದ್ರದ ಬಗ್ಗೆ ಯಾರಿಗೂ ಏನೂ ಅನ್ನಿಸುವುದಿಲ್ಲವೇಕೆ?
ಬೆಳಗ್ಗಿನ ಹವಾಸೇವನೆಗಾಗಿ ವಾಕಿಂಗ್ ಹೋರಟೆವೋ....ಇನ್ನು ವಿಚಿತ್ರ ಕೇಳಿ. ಹತ್ತಿರದ ಪಾರ್ಕ್ ಈ ವಾಕಿಗಳಿಂದ ಭರ್ತಿಯಾಗಿರುತ್ತದೆ. ಮಂಗಳೂರಿನ ಥಿಯೇಟರ್ ಎದುರು ಸಿನಿಮಾ ಬಿಟ್ಟಾಗ ಹೊರಬರುವ ಜನಸಂದಣಿಯಂತೆ ಪಾರ್ಕ್ ನೊಳಗೆ ಜನ ಸಂದಣಿಸಿ ಹೋಗಿರುತ್ತಾರೆ. ನಾನಾ ಕಸರತ್ತು ಮಾಡುತ್ತಾ ತಮ್ಮ ಆರೋಗ್ಯ ಪ್ರಜ್ಞೆ ಜಾಗೃತವಾಗಿದೆ ಎಂದು ಪ್ರದರ್ಶನ ಮಾಡುತ್ತಾರೆ. ಅದರ ಮಧ್ಯೆ ಕೆಲವರು ಸಿಗರೇಟ್ ಸೇದುವುದು ಇರುತ್ತದೆ...!!! ಎಂತಹ ಆರೋಗ್ಯ ಪ್ರಜ್ಞೆ..?!!! ಪಾರ್ಕ್ ಗೆ ಬರುವುದೇ ಅಲ್ಪ ಸ್ವಲ್ವ ಹದಗೆಡುವ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದಕ್ಕಾಗಿ. ಆದರೆ ಅಲ್ಲೂ ಈ ಧೂಮಕೇತುಗಳ ಹಾವಳಿ. ಯಾರನ್ನು ದೂರಬೇಕು?
ಸಾರ್ವಜನಿಕ ಜಾಗಗಳಲ್ಲಿ ಧೂಮ ಪಾನ ನಿಶಿದ್ದ. ಇದು ಸುಪ್ರೀಂ ಕೊರ್ಟ್ ಆದೇಶಿಸಿದ ಕಾನೂನು. ಅದನ್ನು ಊಹಿಸಿಸುವಾಗಲೇ ಎಷ್ಟೊಂದು ಹಾಸ್ಯಾಸ್ಪದವಾಗಿ ಈ ಕಾನೂನುಗಳನ್ನು ಮಾಡಿಬಿಡುತ್ತಾರೆ. ಸ್ವಯಂ ಪ್ರಜ್ಞೆ ಇಲ್ಲವಾದರೆ ಯಾವ ಕಾನೂನು ಇದ್ದು ಏನು ಪ್ರಯೋಜನ?
ಮೊನ್ನೆ ಒಂದು ಪೋಲೀಸ್ ಸ್ಟೇಶನ್ ಎದುರು ನಡೆದು ಕೊಂಡು ಹೋಗುತ್ತಾ ಇದ್ದೆ. ಸ್ಟೇಶನ್ ನಿಂದ ಅನತಿ ದೂರದಲ್ಲೇ ಇದೇ ರೀತಿ ಒಂದು ಅಂಗಡಿ.ಕಾನ್ಸ್ ಟೇಬಲ್ ಒಬ್ಬಾತ ಕೈಯಲ್ಲಿ ಟೀ ಕಪ್ ಹಿಡಿದು ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತ ಬುಸ ಬಸ ಹೊಗೆಯನ್ನು ಪಾದಾಚಾರಿಗಳಿಗೆ ನೈವೇದ್ಯ ಮಾಡುತ್ತಿದ್ದರೆ.. ಪೋಲಿಸ್ ಸ್ಟೇಶನ್ ಗೋಡಿಯಲ್ಲಿ ಬರೆದ ಬರಹ ಅಣಕಿಸುತ್ತಿತ್ತು - “ ಕಾನೂನನ್ನು ಗೌರವಿಸುವವರನ್ನು ನಾವೂ ಗೌರವಿಸುತ್ತೇವೆ ” ಉಚ್ಚ ನ್ಯಾಯಾಲಯದ ಕಾನೂನೇ ಇಲ್ಲಿ ನಗೆ ಪಾಟಲಾಗಿರುವಾಗ ಜನಸಾಮಾನ್ಯನ ಬದುಕು ಅಹವಾಲು ನೋಡುವವರು ಯಾರು?
No comments:
Post a Comment