Friday, May 25, 2012

ಉಸಿರೇ ಉಸಿರಾಗುವಾಗ



ದರ್ಶನ ನಿದರ್ಶನವಾದ ಅನುಭವ. ಆದರೆ ನಿದರ್ಶನವಾಗಬೇಕಿದ್ದರೆ ದರ್ಶನವಾಗಬೇಕಿಲ್ಲ. ಅನುಭವವಾದರೂ ಅದು ನಿದರ್ಶನವಾಗಿಬಿಡುತ್ತದೆ. ಗಾಳಿ ಬೀಸುತ್ತದೆ. ದೇಹಕ್ಕೆ ಅದರ ಅನುಭವ. ಇಲ್ಲಿ ದರ್ಶನವಿಲ್ಲ. ಆದರೆ ಗಾಳಿ ಬೀಸುವಿಕೆಗೆ ಒಂದು ನಿದರ್ಶನವಾಗುತ್ತದೆ. ಉಸಿರು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ದೇಹಕ್ಕೆ ಅದರ ಅನುಭವ ಆಗದಿರುತ್ತದೆಯೇ? ಉಸಿರ ಅನುಭವ ದೇಹಕ್ಕೆ ಆಗಬೇಕು. ಆದರೆ ಪರರಿಗಲ್ಲ. ತನ್ನ ಉಸಿರಾಟದ ಅನುಭವ ಪರರಿಗಾದರೆ ಅದು ಒಂದೋ ಬಿಸಿ ಉಸಿರು ಅಥವಾ ಅದು ಉಸಿರೆಂದೆಣಿಸದೆ ಗೊರಕೆ ಎನಿಸಲ್ಪಡುತ್ತದೆ.
ನಮ್ಮ ಉಸಿರು ನಮಗೆ ಕೇಳಿಸದಂತಿದ್ದರೆ ಅದು ಅರೋಗ್ಯವಂತ ಉಸಿರು... ನಮ್ಮ ಉಸಿರ ಸದ್ದು ನಮಗೆ ಕೇಳಿಸಿದರೆ ಸ್ವಲ್ಪ ಸಮಸ್ಯೆ ಇದೆ ಎಂದು ಅರ್ಥ. ಅದೇ ನಮ್ಮ ಉಸಿರು ಇನ್ನೊಬ್ಬರಿಗೆ ಕೇಳುವಂತಿದ್ದರೆ ಆಗ ಚಿಕಿತ್ಸೆ ಬೇಕು ಎಂಬ ಅರ್ಥ.ನಮ್ಮ ಉಸಿರು ಪರರಿಗೆ ತೊಂದರೆಯನ್ನು ಕೊಡುತ್ತಿದ್ದರೆ ಇದು ಗೊರಕೆ ಎನಿಸಿ ಚಿಕಿತ್ಸೆ ಅನಿವಾರ್ಯವಾಗುತ್ತದೆ
ನಮ್ಮ ಸುತ್ತಲು ಗಾಳಿ ಇದೆ. ಆದರೆ ಅನುಭವದ ರೀತಿ ಹಲವಿದೆ.ಸ್ತಬ್ಧ ವಾತಾವರಣದಲ್ಲೂ  ಬಾಹ್ಯ ಶರೀರಕ್ಕೆ ಅನುಭವಾಗದೇ ಇದ್ದರು ಉಸಿರ ಚಲನೆಯ ಮೂಲಕ ದೇಹಕ್ಕೆ ಅನುಭವವಾಗುತ್ತದೆ. ಸ್ವಲ್ಪ ತಣ್ಣನೆಯ ಗಾಳಿ ದೇಹಕ್ಕೆ ಪರಿಸರಕ್ಕೆ ಹಿತವಾದ ಅನುಭವವನ್ನು ನೀಡಿದರೆ ಬಿರುಗಾಳಿ ಸುತ್ತಲ ಪರಿಸರದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತದೆ. ಅದೇ ಬಗೆಯಲ್ಲಿ ನಮ್ಮ ಉಸಿರು. ಹೃದಯಕ್ಕೆ ರಭಸವಾಗಿ ಸೇವಿಸಿದರೆ ಇದೇ ರೀತಿಯ ಅಲ್ಲೋಲ ಕಲ್ಲೋಲಕ್ಕೆ ಹೃದಯವು ಒಳಗಾಗುತ್ತದೆ. ಹೃದಯದ ಕ್ರಿಯೆಗಳ  ಮೇಲೆ ತೀವ್ರವಾದ ಒತ್ತಡ  ಹೇರಲ್ಪಡುತ್ತದೆ. ಶಭ್ದದಿಂದ ಕೂಡಿದ ಹಾಗೂ  ವೇಗದ ಉಸಿರಾಟ ಹೃದಯಕ್ಕೆ ಘಾಸಿಯನ್ನೇ ಉಂಟುಮಾಡುತ್ತದೆ.  ನಿಧಾನವಾದ ಮತ್ತು ಕ್ರಮಬದ್ದ ಉಸಿರಾಟ ನಿಶಃಬ್ದ ವಾಗಿದ್ದು ಹೃದಯವನ್ನು ಸುಸ್ಥಿತಿಯಲ್ಲಿಡುತ್ತದೆ. ತಾಳ...ಜಾಗಟೆ..ಘಂಟೆ ಇದನ್ನು ಮೆಲುವಾಗಿ ಬಾರಿಸಿದಾಗ ಹೊರಡುವ ನಿನಾದ ಗಮನಿಸಿ... ಕಂಪನದ ಅನುಭವದ ಅವಧಿ ಎಷ್ಟಿರುತ್ತದೆ. .. ಅದೇ ರೀತಿ ಅದನ್ನು ಜೋರಾಗಿ ಬಡಿದಾಗ ಅದರಿಂದ ಹೊರಡುವ ಕರ್ಕಶ ದ್ವನಿಯ ಕಂಪನದ ಅವಧಿ ಏಷ್ತಿರುತ್ತದೆ.. ... ಮೆಲುವಾದ ಸಾವಧಾನವಾದ ದೀರ್ಘ ಉಸಿರೂ ಹೃದಯಕ್ಕೆ ಬಡಿದಾಗ ಇದೇ ಅನುಭವಾಗುತ್ತದೆ. ಅದರ ಪರಿಣಾಮ ಕಂಪನ ದೇಹಾದ್ಯಂಬ ಬಹಳ ಸಮಯ ಇರುತ್ತದೆ.. ಪ್ರಾಣಾಯಾಮದ ಪರಿಣಾಮವೂ ಇದೇ ರೀತಿಯಲ್ಲಿ ಆಗುತ್ತದೆ.
ನಿದ್ರಿಸುವಾಗ ಗೊರಕೆಯಿಂದ ಕೂಡಿದ ಉಸಿರಾಟಕ್ಕೆ ಶ್ವಾಸ ನಾಳಗಳ ತಡೆಗಳೇ ಕಾರಣ. ಸ್ವಚ್ಚವಾದ ವಾಯು ಯಾವುದೇ ತಡೆಗಳಿಲ್ಲದೇ    ಶ್ವಾಸಕೋಶಕ್ಕೆ ಸೇರಬೆಕು. ಪ್ರಾಣಾಯಾಮ ಮೊತ್ತ ಮೊದಲ ಆದ್ಯತೆಯೇ ಇದು.  ನಿಧಾನವಾದ ಮತ್ತು ದೀರ್ಘವಾದ ಉಸಿರಾಟ ಹೃದಯವು ಒತ್ತಡ ರಹಿತವಾಗಿ ಕೆಲಸ ಮಾಡುವುದನ್ನು ಪ್ರೇರೆಪಿಸುತ್ತದೆ. ದೇಹ ದಣಿದಾಗ ಅಯಾಚಿತವಾಗಿ ನಿಟ್ಟುಸಿರು ಹೊರಬರುವುದು ಇದೇ ಕಾರಣದಿಂದ. ಅದಕ್ಕಾಗಿ ದಣಿದಾಗ ಐದಾರು ಬಾರಿ ದೀರ್ಘ ಉಸಿರಾಟವನ್ನು ನಡೆಸಿದರೆ ಅಮ್ಲಜನಕ ಹೃದಯಕ್ಕೆ ಸೇರಿ ದೇಹದ ರಕ್ತ ಪರಿಚಲನೆ ಚುರುಕಾಗಿ ದೇಹದಲ್ಲಿ ಹೊಸಚೈತನ್ಯ ತುಂಬಿ ಆಯಾಸ ಪರಿಹಾರವಾಗುತ್ತದೆ.
ವಾಕಿಂಗ್ ಜಾಗಿಂಗ್ ವ್ಯಾಯಾಮಗಳು ದೇಹಕ್ಕೆ ಉತ್ತಮವಾದರೂ ವೇಗವಾದ ಉಸಿರಾಟ ಉತ್ತಮವಲ್ಲ. ಪ್ರಾಣಾಯಾಮದೊಂದಿಗೆ ಇವುಗಳನ್ನು ರೂಡಿಸಿಕೊಂಡರೆ ಮೊದಲಾಗುವ ಪರಿಣಾಮದಿಂದ ಹತ್ತರಷ್ಟು ಪರಿಣಾಮವನ್ನು ಪಡೆಯಬಹುದು. ಅಂದರೆ ಪ್ರಾಣಾಯಾಮ ಮಾಡಿ  ಹತ್ತು ನಿಮಿಷ ನಡಿಗೆಯನ್ನು ಮಾಡಿದರೆ ಒಂದು ಘಂಟೆಯ ನಡಿಗೆಯ ಪರಿಣಾಮವನ್ನು ಪಡೆಯಬಹುದು. ಕ್ರಮ ಬದ್ದ ಉಸಿರಾಟವೇ ಇದಕ್ಕೆ ಕಾರಣ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ನಿಮಿಷಗಳಷ್ಟು ಸಮಯವನ್ನು ಪ್ರಾಣಾಯಮಕ್ಕೆ ಮೀಸಲಿರಿಸಿ ಅಭ್ಯಾಸವನ್ನು ಮಾಡಿದರೆ ಉಸಿರಾಟದಲ್ಲಿ ಗಮನಾರ್ಹ ಬದಲಾವಣೆಯೊಂದಿಗೆ ದೈಹಿಕ  ಮತ್ತು ಮಾನಸಿಕ ಆರೋಗ್ಯ ಸಹಜವಾಗಿ ಉತ್ತಮಗೊಳ್ಳುತ್ತದೆ.  
          ಶಬ್ದದಿಂದ ಕೂಡಿದ ಉಸಿರಾಟ ಇದೆ ಎಂದರೆ ಖಂಡಿತವಾಗಿಯೂ ಆತನ ಅರೋಗ್ಯ ಸರಿಯಾಗಿಲ್ಲ ಎಂದು ತಿಳಿಯಬಹುದು.  ಆ ವ್ಯಕ್ತಿ ಹೃದಯ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶ್ವಾಸ ಕೋಶದ ಕಾಯಿಲೆಯಿಂದ ಬಳಲುತ್ತಿದ್ದಾನೆ ಇಲ್ಲವೇ ಅದರ ಹತ್ತಿರವೇ ಇದ್ದಾನೆಂದು ತಿಳಿದುಕೊಳ್ಳಬಹುದು. ಪ್ರಾಣಾಯಾಮದಿಂದ ಇದರಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದು. ಉಬ್ಬಸ ಅಸ್ತಮದಂತಹ  ಅಲರ್ಜಿಯಂತಹ ಕಾಯಿಲೆ  ಇದಕ್ಕೆ ಉತ್ತಮ ನಿದರ್ಶನ.  ಇದು ಉಸಿರಾಟದ ಮೇಲೇಯೆ ಪರಿಣಾಮವನ್ನು ಬೀರುತ್ತದೆ ಹಾಗಾಗಿ ಜೀವನವೇ ದುಸ್ತರವೆನಿಸಿ ವ್ಯಕ್ತಿ ಖಿನ್ನತೆಯಿಂದಲೂ ಮತ್ತು ನಂತರ ಬರುವ ಇತರ ದೈಹಿಕ ಕಾರಣಗಳಿಂದ ಬಳಲಬಹುದು. ಸರಳವಾದ ಪ್ರಾಣಾಯಾಮ ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ಅನುಭವಿಸಿ ತಿಳಿಯಬಹುದಾಗಿದೆ. ಮುಖ್ಯವಾದುದನ್ನು ಉಸಿರಿಗೆ ಹೋಲಿಸುವುದುಂಟು. ಅದು ನನ್ನ ಉಸಿರು ಎಂದು. ಆದರೆ ಆ ಉಸಿರು ಪ್ರಧಾನವಾಗುವುದು ಅದರ ಬಗ್ಗೆ ಗಮನ ಹರಿಸಿದಾಗ. ಉಸಿರೇ ಉಸಿರಾಗುವುದು ಎನ್ನಬಹುದೇ?
         







No comments:

Post a Comment