ತಮ್ಮನ ಮಗನೊಂದಿಗೆ ಹೊರಟು ಹೊಂಡಾ
ಆಕ್ಟಿವ ಸ್ಟಾರ್ಟ್ ಮಾಡಿ ಏರಿಕುಳಿತೆ. ಒಂದು
ಬಾರಿ ವಾಹನಕ್ಕೆ ಕೈಮುಟ್ಟಿ ನಮಸ್ಕರಿಸಿದೆ. ಇದು
ನಾನು ರೂಢಿಸಿಕೊಂಡ ಒಂದು ಕ್ರಮ. ನನ್ನ ಈ ಕ್ರಮ ಬಾಲಕನಿಗೆ ಕೌತುಕದ ವಿಷಯವಾಗುತ್ತದೆ. ಹಲವು ಸಲ
ಆತ ಹೇಳಿದ್ದಿದೆ. ಬೇರೆ ಯಾರು ಮಾಡದ ಕ್ರಮವನ್ನು ನಾನು ಅನುಸರಿಸುತ್ತಿದ್ದೇನೆ. ಇದು ಅವನ
ಅಭಿಪ್ರಾಯ. ಹಲವರು ಹೀಗೆ ಮಾಡುತ್ತಿದ್ದರೂ ಅದವನ ಗಮನಕ್ಕೆ ಬಾರದಿರಬಹುದು. ಇರಲಿ , ಮತ್ತೆ ನಿಧಾನವಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಹಿಂದೆ
ಕುಳಿತ ಬಾಲಕ ಪ್ರಶ್ನಿಸತೊಡಗಿದ. “ ಒಂದು ವೇಳೆ ನಮಸ್ಕರಿಸುವುದು ಮರೆತರೆ., ಮುಂದೆಹೋಗಿ ನಂತರ
ಎಲ್ಲಾದರೂ ನಮಸ್ಕರಿಸ ಬಹುದೇ?” ಏನೆಂದು
ಉತ್ತರಿಸುವುದು. ಸಣ್ಣ ಮಕ್ಕಳ ಕೌತುಕದ ವಿಚಾರಗಳಿಗೆ ಅದೇ ಮಟ್ಟದಲ್ಲಿ ಪ್ರತಿಕ್ರಿಯಿಸಬೇಕು
ಅವರಲ್ಲಿ ಒಂದಾಗಿ ಆ ಚಿಂತನೆಗೆ ಸರಿಯಾದ
ಹಾದಿಯನ್ನು ತೋರುವ ಪ್ರಯತ್ನ ನಮ್ಮದಾಗಬೇಕು. ಸಮಯಕ್ಕೆ ತಕ್ಕಂತೆ ಎನಾದರೂ ಒಂದು ಹೇಳಿ ಸಾಗ ಹಾಕಿ
ಅಥವ ಗದರಿಯೋ, ಔದಾಸಿನ್ಯದಿಂದಲೋ ವ್ಯವಹರಿಸಬಹುದು. ಆದರೆ ಅದರಲ್ಲೇನು ಸ್ವಾರಸ್ಯ ಇದೆ ಹೇಳಿ?
ನಾನೆಂದೆ “ ಜ್ವರವೋ ಹೊಟ್ಟೆನೋವೋ ಆದರೆ ಡಾಕ್ಟರ್ ಮಾತ್ರೆ
ಕೊಡುತ್ತಾರೆ... ಬೆಳಗ್ಗೆ ಎದ್ದು ತಿಂಡಿ ತಿಂದ ಮೇಲೆ ತಿನ್ನು ಅಂತ ಹೇಳುವುದಿಲ್ಲವೇ? ಬೆಳಗ್ಗೆ ತಿಂಡಿ ತಿಂದ ಮೇಲೆ ಮರೆತು ಹೋದರೆ ಏನು
ಮಾಡ್ತಿಯಾ? ಒಂದು ವೇಳೆ ತುಸು ಹೊತ್ತಾದ ಮೇಲೆ
ನೆನಾಪಾದಾಗ ಮಾತ್ರೆ ತೆಕ್ಕೊಳ್ಳುವುದಿಲ್ಲವಾ? ಹಾಗೆ...ನಮಸ್ಕಾರ ಏನು ಯಾವಾಗಲೂ ಮಾಡಬಹುದು.
ಮಾಡುವುದರಿಂದ ಒಂದು ಸಮಾಧಾನ... ಮಾಡಿಲ್ಲವಲ್ಲ ಎಂದು ಗ್ರಹಿಸುವುದಕ್ಕಿಂತ ಯಾವಾಗಲಾದರೂ
ಮಾಡುವುದು ಅಲ್ವಾ...”
ಬಾಲಕ ಸಮಾಧಾನಗೊಂಡ ಆದರೆ ಮತ್ತೊಂದು ಬಾಣಕ್ಕೆ ನಾನು
ಉತ್ತರಿಸಬೇಕಾಯಿತು...
“ದೊಡ್ಡಪ್ಪಾ... ದೇವರಿದ್ದಾನೆಯೇ?”
ಎಲಾ
ಇವನೇ? ವಯಸ್ಸಿಗೆ ಮೀರಿದ ಪ್ರಶ್ನೆ ಎಂದು ಅಂಗೀಕರಿಸಬೇಕೆ ಬೇಡವೇ? ಏನೆಂದು
ಉತ್ತರಿಸಬಹುದು? ನೀವಾದರೆ ಏನು ಮಾಡುವಿರಿ? ಪ್ರಶ್ನೆಗಿಂತ ಇಲ್ಲಿ ಉತ್ತರಿಸುವುದೇ
ಜಿಜ್ಞಾಸೆಯುಳ್ಳದ್ಧಾಗಿದೆ. ಮತ್ತು ಮುಂದರಿಸಿದ....” ಫೇಸ್ ಬುಕ್ ಫ್ರೆಂಡ್ ಕಮೆಂಟ್
ಹಾಕಿದ್ದಾನೆ...ದೇವರಿಲ್ಲ ಅದೆಲ್ಲ ಸುಳ್ಳು ಅಂತ...there is no God
“ ಈಗ ಅನಿಸತೊಡಗಿ ವಿಷಯ ಮತ್ತೂ ಗಂಭೀರವಾಗಿದೆ ಅನ್ನಿಸಿತು.
ಏನೆಂದು ಉತ್ತರಿಸ ಬಲ್ಲಿರಿ? ಆತ ನನ್ನಲ್ಲಿ ಅಂತಹ ಪ್ರಶ್ನೆ ಇಡುವ ಉದ್ದೇಶವೇ ಅದು. ಅದಕ್ಕೆ
ರೋಚಕವಾಗಿ ಉತ್ತರವನ್ನು ದೊಡ್ಡಪ್ಪ ಹೇಳುತ್ತಾರೆ. ನೋಡೋಣ ಏನೆಂದು ಉತ್ತರಿಸುವುದು? ನಾವು
ಜಿಕ್ಕವರಿರುವಾಗ ಹೀಗೆ ಕೇಳಿದರೆ,
“ ಏನೋ ಪೆದಂಬು
ಮಾತಾಡ್ತಿಯಾ?” ಇನ್ನು ತುಸು
ಸಮಾಧಾನದಲ್ಲಿ ಆದರೆ ದೇವಸ್ಥಾನದ ಗುಂಡದಲ್ಲಿ ಇರುವುದೇನು.. ಅದೇ ದೇವರು.. ಇಲ್ಲ ದೇವರ ಪೋಟೋ
ತೋರಿಸಿ ಅದೇ ದೇವರು..
ಇದೆಲ್ಲ ತಾತ್ಕಾಲಿಕ ಉತ್ತರಗಳು. ಉತ್ತರದಿಂದ ಮತ್ತೂ
ಹಲವು ಬಾಲಿಷವಾದ ಪ್ರಶ್ನೆಗಳು ಬೌದ್ದಿಕ ಪ್ರಶ್ನೆಗಳು ನಮ್ಮ ಬುದ್ದಿಗೆ ಸವಾಲಾಗಬಹುದು. ಆದರೆ
ಇಲ್ಲಿ ಬಾಲ ಬುದ್ದಿಗೆ ಮತ್ತೂ ಸಾಣೆ ಹಾಕುವ ಕೆಲಸ ಆಗಬೇಕು. ಆದೂ ಆತನ ವಯಸ್ಸಿಗನುಗುಣವಾಗಿ ಇದು
ಮುಖ್ಯ.
ನಾನು ಹೇಳಿದೆ “ ದೇವರು ಇದ್ದಾನೆಯೋ ಅಥವಾ ಇಲ್ಲವೋ
ಎನ್ನುವುದಕ್ಕಿಂತ ಹಾಗೆ ಹೇಳಿದರೆ ಏನು ಅಂತ ತಿಳಿದುಕೊಳ್ಳಬೇಕು. ಅಲ್ವ?” ಬಾಲಕ ಈ ಚುರುಕಾದ..
ಹೌದಲ್ಲ ತಾನು ಯೋಚಿಸಿರದ ವಿಷಯ ದೊಡ್ಡಪ್ಪ ಹೇಳುತ್ತಿದ್ದಾರೆ.
“ ದೇವರು ಎಂದರೆ ಅದಕ್ಕೆ ರೂಪವಿಲ್ಲ ಅಕಾರವಿಲ್ಲ .ಗುಣಮಾತ್ರ..”
“ ಅಂದರೆ..? .” ಬಾಲಕನಿಗೆ ಅರ್ಥವಾಗಲಿಲ್ಲ.
“ ಈಗ ನೋಡು ನೀರು.. ಅದಕ್ಕೆ ಆಕಾರ ಉಂಟ? ನೀನು ಲೋಟದಲ್ಲಿ ಹಾಕಿದರೆ ಲೋಟದ ಹಾಗೆ ಕಾಣುತ್ತದೆ.
ತಂಬಿಗೆಯುಲ್ಲಿ ಹಾಕಿದರೆ ತಂಬಿಗೆಯಾಗುತ್ತದೆ ಚೆಲ್ಲಿದರೆ ಇನ್ನೇನೋ ಆಗುತ್ತದೆ. ಚೆಲ್ಲಿದ್ದು
ಸ್ವಲ್ಪ ಹೊತ್ತು ಬಿಟ್ಟರೆ ಅದು ಆವಿಯಾಗಿ ಕಣ್ಣಿಗೆ ಕಾಣುವುದೇ ಇಲ್ಲ...”
ಬಾಲಕನ ತಲೆ ಚುರುಕಾಗಿ ಕೆಲಸ ಮಾಡತೊಡಗಿತು. ಜಿಜ್ಞಾಸೆಗೆ
ಉತ್ತರ ಅವನೇ ಉತ್ತರಿಸುವ ಪ್ರಯತ್ನ ನನ್ನದು. “ಹಾಗೆಂದು ನೀರೆಂದರೆ ದೇವರು ಅಂತ ಅಲ್ಲ...ಲೋಟದಂತೆ
ತಂಬಿಗೆಯಂತೆ...ಒಂದೊಂದು ಬಗೆಯಲ್ಲಿ ಯಾಕೆ ಕಾಣಬೇಕು ಹೇಳು?”
“ ದೇವರೆಂದರೆ ಅದುವೇ, ಒಬ್ಬೊಬ್ಬರಿಗೆ
ಒಂದೊಂದು ಬಗೆಯಲ್ಲಿ ಕಾಣುತ್ತದೆ.. ಕೆಲವರಿಗೆ ಕಲ್ಲಿನಲ್ಲಿ ಕಾಣುತ್ತದೆ ಅದಕ್ಕೆ ಆಕಾರ ಕೊಟ್ಟು
ದೇವಸ್ಥಾನದಲ್ಲಿಟ್ಟಿ ಪೂಜೆ ಮಾಡ್ತಾರೆ ಅಲ್ವಾ?”
“ ಹೌದು..ನಿಜವಾಗಿ ಅದು ಕಲ್ಲು ಅಲ್ವಾ ದೊಡ್ಡಪ್ಪ...ದೇವರ ಫೋಟೋ ದ ಒಳಗೂ ಅದೆ ಬರೀ ಕಾಗದ
...” ಈಗ ವಾಸ್ತವ ಏನು ಯಾಕೆ ಎಂದು ಉತ್ತರಿಸಬೇಕು.
“ ಹೌದಪ್ಪ...ದೇವರು ಎಂದರೆ ಅಷ್ಟೆ ಅದೊಂದು ಶಬ್ದ ಅಂತ ಮೊದಲು ತೆಕ್ಕೊ.. ಅಮೇಲೆ ಅದಕ್ಕೆ
ಅರ್ಥ ಹುಡುಕು.. ಎನಾದರು ತಿಂದರೆ ನಾಲಿಗೆಗೆ ರುಚಿಯಾಗುತ್ತದೆ.. ರುಚಿ ಅಂದ್ರೆ ಏನು? ತೋರಿಸು
ನೋಡುವ...”
“ ದೊಡ್ಡಪ್ಪ ಯು ಆರ್ ಗ್ರೇಟ್ ಒಳ್ಳೇ ಎಕ್ಸಾಂಪಲ್ ಕೊಡ್ತಿರ”
“ ಮೈಮೇಲೆ ಗಾಯ ಆಗ್ತದೆ ಗಾಯ ಕಾಣ್ತದೆ ರಕ್ತ ಕಾಣ್ತದೆ ಆದರೆ ನೋವು.. ಅದಕ್ಕೆ ರೂಪ ಉಂಟಾ?
ನೋವನ್ನು ತೋರಿಸು ನೋಡುವ”
“ ಹೌದು ..ಅದು ಕಾಣುದಿಲ್ಲ ಆದ್ರೆ ನೋವು ಆಗ್ತದೆ..”
“ದೇವರೆಂದರೆ..ಹಾಗೆ.. ಅದು ಒಂದು ವಸ್ತುವಲ್ಲ....ಅದಕ್ಕೆ ರೂಪ ಆಕಾರವಿಲ್ಲ.. ನೀನು ಯಾವ
ರೂಪದಲ್ಲಿ ಕಾಣ್ತಿಯೋ ಆ ರೂಪದಲ್ಲಿ ಅದು ಸಿಗ್ತದೆ. ಅಪ್ಪ ಅಮ್ಮನಿಗೆ ನಮಸ್ಕಾರ ಮಾಡುದು ಯಾಕೆ
ಹೇಳು? ಅವರು ನಿನ್ನ ಹಾಗೆ ಕೈಕಾಲು ದೇಹ ಇರುವ
ಮನುಷ್ಯರಲ್ವ?”
“ಅದು ದೇವರು ಅಂತ ಗ್ರಹಿಸಿ ನಮಸ್ಕಾರ ಮಾಡುದು..” ಈಗ ಒಂದು ಹಂತಕ್ಕೆ ಬಂತು..
“ ಹಾಗೆ ಅಪ್ಪ ಅಪ್ಪನ ರೂಪದಲ್ಲಿ ಕಾಣುವ ದೇವರು.. ದೇವಸ್ಥಾನದ ಕಲ್ಲಿನ ರೂಪದಲ್ಲಿ, ಫೋಟೋದ
ಒಳಗೆ ಕಾಣುವ ದೇವರು.. ಈಗ ಹೇಳು ದೇವರು ಅಂದರೆ...ಯಾರಿಗೆ ಹೇಗೆ ಬೇಕೋ ಹಾಗೆ ಕಾಣ್ತಾನೆ.
ವಿದ್ಯಾರ್ಥಿಗೆ ವಿದ್ಯೆಯ ರೂಪದಲ್ಲಿ ಪುಸ್ತಕದ ರೂಪದಲ್ಲಿ ಶಾಲೆಯ ರೂಪದಲ್ಲಿ ಗುರುಗಳ ರೂಪದಲ್ಲಿ
ಹೀಗೆ ಪ್ರತಿಯೊಂದರಲ್ಲೂ ದೇವರು ಕಾಣುತ್ತಾನೆ. ಕೊನೆಗೆ ಎಲ್ಲದರಲ್ಲು ನನ್ನ ಒಳಗೆ ನಿನ್ನ ಒಳಗೆ
ದೇವರಿದ್ದಾನೆ ಅಲ್ವ...”
“ ದೊಡ್ಡಪ್ಪ ದೇವರು ಎಂದರೆ ಒಂದು ಪವರ್ ಇದ್ದ ಹಾಗೆ ಅಲ್ವ?”
ಈಗ ಅರ್ಥವಾಯಿತು ಅಂತ ನಾನು ಗ್ರಹಿಸಿದೆ.
“ ದೊಡ್ದಪ್ಪ ನೀವು ಅಷ್ಟು ಚಂದ ಉಧಾಹರಣೆ ಎಲ್ಲ ಕೊಟ್ಟು ಎಲ್ಲ ಹೇಳ್ತಿರಲ್ಲ... ಪಾಠ
ಹೇಳಿಕೊಡುವಾಗಲೂ ಹಾಗೆ ಒಳ್ಳೆ ಉಧಾಹರಣೆ ಹೇಳ್ತೀರ ಇದೆಲ್ಲ ಎಲ್ಲಿ ಕಲಿತದ್ದು..?
“ ನೋಡಪ್ಪ ಇದು ಸುತ್ತ ಮುತ್ತಲು ಕಂಡಿತು.” ಮತ್ತೂ ಒಂದು ಹೇಳಿದೆ ...” ನೋಡು ನಾನು
ಯಕ್ಷಗಾನ ಎಲ್ಲ ನೋಡುದು ಕೇಳುದು ಯಾಕೆ ಹೇಳು ಅದರಲ್ಲಿ ಇಂತಹ ವಿಚಾರಗಳೇ ಇರುತ್ತದೆ. ಹಾಗೆ ಈ
ಉಧಾಹರಣೆ ಎಲ್ಲಾ ಯೋಚನೆಗೆ ಬರುತ್ತದೆ.”
“ ಹೌದಾ... ಅಯ್ಯೋ... ನಾನು ಯಕ್ಷಗಾನ ಬರೀ ಡಬ್ಬ ಅಂದ್ಕೊಂಡಿದ್ದೇ. ಎನೋ ಹಾಡ್ತಾರೆ
ನಲಿತಾರೆ ಅಂತ...”
ಆಗ ನಾನು ಹೇಳಿದೆ...ನೋಡಪ್ಪ “ ಶಾಲೆಯಲ್ಲಿ
ಗುರುಗಳು ಪಾಠ ಮಾಡ್ತಾರೆ, ಎಲ್ಲರೂ ಕೇಳ್ತಾರೆ ಹೌದಲ್ವ..ಅದ್ರೆ ಕೆಲವರಿಗೆ ಅರ್ಥ ಆಗ್ತದೆ. ಅವರು
ಪರೀಕ್ಷೆಯಲ್ಲಿ ಒಳ್ಳೆ ಉತ್ತರ ಬರೆದು ಪಾಸಾಗ್ತರೆ. ನಿನಗೆ ಅರ್ಥ ಆದ ಹಾಗೆ ಇನ್ನೊಬ್ಬರಿಗೆ
ಆಗ್ತದ? ಆಗುದಿಲ್ಲ ಆಗ ಅವರು ಫೇಲ್ ಆಗ್ತಾರೆ.ಹಾಗದ್ರೆ ಹೇಳು ಗುರುಗಳು ಮಾಡಿದ ಪಾಠ ಬರೀ ಡಬ್ಬ
ಅಂತ ಫೇಲಾದವರು ಹೇಳಬಹುದಾ? ಅವರಿಗೆ ಅರ್ಥ ಆಗಿಲ್ಲ.. ಅಥವ ಗುರುಗಳು ಏನು ಹೇಳ್ತಾರೆ ಎಂದು ಅವರು
ಕೇಳ್ಳಿಕ್ಕೆ ಹೋಗಿಲ್ಲ..ಅಲ್ವ.? ಹಾಗೆ....ಪ್ರತಿಯೋಂದು.
“ರಿಯಲೀ ದೊಡ್ದಪ್ಪ ನೀವು ಹೇಳುದು ವಿವರಿಸುವುದು ಎಕ್ಸಲೆಂಟ್...”
ಬಾಲಕ ಸಮಾಧಾನ ಗೊಂಡ ಅಂತ ನಾನು ತಿಳಿದುಕೊಂಡಿದ್ದೇನೆ.
No comments:
Post a Comment