ಬಹಳ ಅಪರೂಪದ ಸ್ನೇಹಿತ ಸಿಕ್ಕಿದ. ಮಂದಹಾಸದ ವಿನಿಮಯ.
ಬದಲಾದ ಪ್ರಕೃತಿಯ ಔಪಚಾರಿಕತೆಯ ವಿನಿಮಯ. ಭಾವ ವೆತ್ಯಾಸ ಇರಬಹುದು. ಅಂತರಂಗದ ನಿಜವಾದ ಸ್ನೇಹ
ಪರಿವರ್ತಿಸುವುದಿಲ್ಲ. ಅದೇ ಸ್ನೇಹ. ಮನಸ್ಸು ಪುಳಕಗೊಂಡ ಹಲವು ಅನುಭವಗಳು.
ಅತ್ಯಂತ
ಆಸಕ್ತಿಯಿಂದ ಮನೆಗೆ ಕರೆದ.ಆದರೆ ಅವಕಾಶ ಸಿಗಬೇಕಲ್ಲ. ಮತ್ತೆ ನನಗನಿಸಿತು ನಾನೂ ಮನೆಗೆ ಕರೆಯ
ಬೇಕಿತ್ತು, ಕರೆದಿದ್ದೆ ಆದರೆ ಆ ಕರೆಯೊಲೆಯ ಅಕ್ಷರಗಳನ್ನು ದಪ್ಪಗಾಗಿಸಲಿಲ್ಲ(BOLD)ವಲ್ಲ
ಎಂದುಕೊಂಡೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಉಪಚಾರಗಳಂತಹ ವಿಷಯದಲ್ಲಿ ನಾನು ಬಹಳ
ಹಿಂದೆ. ಇಂತಹ ಔಪಚಾರಿಕ ಸಾಂಪ್ರದಾಯದಲ್ಲೂ ತೋರಿಕೆಯ ವರ್ತನೆಯನ್ನು ಅಭಿನಯಿಸಲು ಮನಸ್ಸು
ಒಪ್ಪಿಕೊಳ್ಳುವುದಿಲ್ಲ. ಇವುಗಳನ್ನು ಅದಷ್ಟು ಮಿತವಾಗಿ ಉಪಯೋಗಿಸುವ ಸ್ವಭಾವ ನನ್ನದು. ಏನಿದ್ದರೂ ಅದು ಮನಸ್ಸಿನೊಳಗೇ ಹೃದಯ ಪ್ರಾಮಾಣಿಕವಾಗಿ
ವ್ಯವಹರಿಸುವಾಗ ಬಹಿರಂಗ ಮಾತು ದೇಹ ಅದರ ಸಂಕೇತವಾಗಿದ್ದರೆ ಸಾಲದೇ?
ಮಿತ್ರ ಆಮಂತ್ರಿಸಿಯಾಗಿದೆ. ಅದೂ ಮನೆಯಲ್ಲಿನ ಒಂದು
ಸಮಾರಂಭಕ್ಕೆ. ಪ್ರಥಮ ಭೇಟಿಯಲ್ಲಿ ಮಾತನಾಡಲಾಗದೇ ಉಳಿದ್ದು ಬಹಳಷ್ಟು ಇತ್ತು. ಅನಿರೀಕ್ಷಿತ ಭೇಟಿ
ಹಾಗಿರುವಾಗ ಜ್ಞಾಪಕಕ್ಕೆ ಸಿಲುಕದೇ ಉಳಿಯುವಂತಹ ವಿಚಾರಗಳೇ ಜಾಸ್ತಿ. ಮಿತ್ರನ ಆಮಂತ್ರಣ
ಮನ್ನಿಸುತ್ತ ಅವನ ಮನೆಗೆ ಭೇಟಿ ಇತ್ತಾಗ ಮನಸ್ಸಿನ ಲೆಕ್ಖಾಚಾರದ ಮಾತುಗಳ ಗಂಟನ್ನು ಬಿಚ್ಚುವ
ಪ್ರಮೇಯವೇ ಬರಲಿಲ್ಲ. ಬಂದ ಬಂಧು ಬಾಂಧವರು ಮಿತ್ರರು... ಒಟ್ಟಿನಲ್ಲಿ ಮಿತ್ರ ಅದರತೆಯನ್ನು ತನ್ನ
ಸ್ನೇಹದ ತಟ್ಟೆಯಿಂದ ಸ್ವಲ್ಪ ಸ್ವಲ್ಪವೇ ಹಂಚುತ್ತಾ ಬಹಳ ಗಡಿಬಿಡಿಯಲ್ಲೇ ಇದ್ದ. ಕೊನೆಯಲ್ಲಿ
ಆದಿನದ ಕಾರ್ಯಕ್ರಮ ಮುಗಿದು ಎಲ್ಲರೂ ಹೊರಟಾಗ ನಾನು ಹೊರಟು ಮಿತ್ರನಿಗೆ ವಿದಾಯ ಹೇಳುವಾಗ ಬಹಳ
ಮಂದಹಾಸದಿಂದ ಮಿತ್ರನೆಂದ
“ಇವತ್ತು ಮಾತಾಡುವುದಕ್ಕೆ ಸಾಧ್ಯವಿಲ್ಲ ಎಲ್ಲ ಗಡಿಬಿಡಿ
ಮುಗೀಲಿ ಒಂದು ದಿನ ಇಬ್ಬರೂ ಕುಳಿತುಬಿಡುವ”
ನಮ್ಮೊಳಗಿನ ಖಾಸಗೀತನ ಎಂದರೆ ಇದೇ ಅಲ್ಲವೇ? ಅಪರೂಪದ ಮಿತ್ರನಿಗೆ ಒಂದಿನಿತು ಮಾತಿಗೂ ಸಮಯ
ವಿಲ್ಲವೆಂದರೆ ಅದು ಯಾರ ತಪ್ಪು ಅಲ್ಲ ವ್ಯವಹಾರಿಕ ಜೀವನದ ಸಂದರ್ಭಗಳು ನಮಗರಿಯದೇ ನಮ್ಮನ್ನು
ನಿಯಂತ್ರಿಸಿಬಿಡುತ್ತವೆ. ಹೌದು, ಇಂದು ಈ ಜನಜಂಗುಳಿ ಸದ್ದುಗದ್ದಲದ ನಡುವೇ ನಮ್ಮದೇನನ್ನೋ
ಕಳೆದುಕೊಂಡ ಅನುಭವವಾಗುವಿದಿಲ್ಲವೇ? ಆದರೂ ಅದೇ ಅನಿವಾರ್ಯತೆ ಎಂಬಲ್ಲಿಗೆ ಮಹತ್ವವನ್ನು
ಪಡೆಯುತ್ತದೆ. ಹೀಗಾಗಿ ನಾನು ವಿಶೇಷವಿಲ್ಲದ ದಿನಗಳನ್ನೆ ಬಯಸುವಂತಾಗಿದ್ದೇನೆ. ಅವಿತುಕೊಂಡ
ಸಹಜವಾದ ಲೋಕ ತೆರೆದುಕೊಳ್ಳುವುದು ಇಲ್ಲೇ. ಸಡಗರದ ಸಂತಸದ ಕ್ಷಣಗಳಲ್ಲಿ ಆ ಸಂಭ್ರಮ ಸವಿಯಲು
ಎಲ್ಲರೂ ಇರಬೇಕೆನ್ನುವುದು ಸಹಜ. ಆದರೆ ನನಗೆ ಅಂತರಂಗದ ತನ್ನತನ ಎಲ್ಲೋ ತೆಗೆದಿಟ್ಟ
ಅನುಭವಾಗುತ್ತಿದೆ. ಇಂತಹ ವಾತಾವರಣದಲ್ಲೂ ಒಂದು ಅಸಹನೀಯತೆ ಬೇಡವೆಂದರೂ ಸುಳಿಯುತ್ತದೆ. ಎಲ್ಲವೂ
ಬಲವಂತದಿಂದ ಶಿಷ್ಟಾಚಾರದ ಸೆರಗಿನೊಳಗೆ ಅವಿತಿರಿಸಲ್ಪಡುತ್ತವೆ. ರಂಗದ ಮೇಲಿನ ವೇಷಗಳಂತೆ ಎಲ್ಲವೂ
ಅಭಿನಯದ ಕ್ಷಣಗಳಾಗುತ್ತವೆ.
ಯಾವಾಗಲೂ ಭಿನ್ನ ಮುಖದಲ್ಲಿ ಚಿಂತಿಸುವವ ವಿಶಿಷ್ಟ
ವ್ಯಕ್ತಿ ಎನಿಸಲ್ಪಡುತ್ತಾನೆ. ಇದು ನನ್ನಲ್ಲಿನ ವಿಶಿಷ್ಟತೆಯೆಂದು ಅನಿಸುವುದಿಲ್ಲ. ಹಲವರ
ಅಂತರಂಗದ ಒಳಗೆ ಇದೇ ತಳಮಳಿಸುತ್ತಿರಬಹುದು. ಇದು ಅದರ ಒಂದು ಸಣ್ಣ ರೂಪ. ಮೃಗಾಲಯದ ಕತ್ತಲೆಯ
ಕೋಣೆಯೊಳಗಿನ ವಿಚಿತ್ರ ಮೃಗ ಅವಿತುಕೊಂಡು ತನ್ನನ್ನು ಸ್ವಲ್ಪ ಮಾತ್ರವೇ ತೋರಿಸಿಕೊಂಡ ಹಾಗೆ.
ಕೂತೂಹಲದಿಂದ ಚಿಂತನೆಯನ್ನು ಗಮನಿಸುವ ಮನಸ್ಸಿದ್ದರೆ ಗಮನಿಸಬಹುದು.
ನಾನು ಮನಸ್ಸು ಬಯಸಿ ಹಾರ್ದಿಕವಾಗಿ ಹೋಗುವುದು ಇಂತಹ
ಸಹಜ ಲೋಕಕ್ಕೆ. ಅದು ನೆಂಟರ ಮನೆಯೇ ಆಗಲೀ...ಸ್ನೇಹಿತರ ಮನೇಯೇ ಆಗಲಿ ನಿತ್ಯದ ಬದುಕು ನಿಜವಾದ
ಜೀವನ ದರ್ಶನವನ್ನೂ ಸಜತೆಯೊಂದಿಗೆ ಮಾಡುತ್ತದೆ. ಸಹಜ ದಿನಗಳಲ್ಲಿ ಯಾರ ಮನೆಗೆ ಹೋದರೂ ಅಲ್ಲಿ
ಸಹಜತೆಯ ಅನುಭವವಾಗುತ್ತದೆ. ಅತ್ಮೀಯರಾದರೆ ಸ್ನೇಹದ ಸಿಂಚನ ಅತಿಯಾಗಿ ಅನುಭವಕ್ಕೆ ಬರುತ್ತದೆ.ಆದರ
ಉಪಚಾರ ಮಾತುಕತೆಗೆ ಇಲ್ಲಿ ಪಾಲುದಾರಿಕೆ ಇರುವುದಿಲ್ಲ. ಅತ್ಮೀಯರು ಮತ್ತಷ್ಟೂ ಹತ್ತಿರವಾಗುತ್ತಾರೆ
ಮತ್ತು ಖಾಸಗಿಯಾಗಿ ತೆರೆದುಕೊಳ್ಳುತ್ತಾರೆ ಎಂದು ನನ್ನ ಅನಿಸಿಕೆ. ಬಂಧುಗಳಾಗಲೀ ಮಿತ್ರರಾಗಲಿ
ನಮ್ಮ ಬೇಟಿಯನ್ನು ಬಹಳಷ್ಟು ಜ್ಞಾಪಿಸುವಂತೆ ಸ್ಮರಣೀಯವಾಗಿಸುತ್ತಾರೆ. ವಿಶೇಷ ದಿನಗಳಲ್ಲಿ ಎಲ್ಲೋ
ಕಳೆದು ಹೋದದ್ದು, ಮರೆಯಾಗಿ ಉಳಿದದ್ದು ಇಲ್ಲಿ ಗೋಚರವಾಗುತ್ತವೆ.
ಪಕ್ವಾನ್ನದ ಷಡ್ರಸ ಭೋಜನಕ್ಕಿಂತ ನಿತ್ಯದ ಕುಚ್ಚಿಲಕ್ಕಿ
ತಂಬುಳಿ ಚಟ್ನಿಯ ರುಚಿ ಮರೆಯದಂತಹ ಸವಿಯ
ಲೇಪನವನ್ನು ನಾಲಗೆಯಮೇಲೆ ಪಸರಿಸಿಬಿಡುತ್ತದೆ.
ಉಣ್ಣುವುದರಲ್ಲಿ ಯಾವುದೇ ಗೊಂದಲವಿಲ್ಲದೆ ತೃಪ್ತಿಯ ಊಟ ತಿಂಡಿಯನ್ನು ಸವಿಯುತ್ತೇವೆ. ಅತಿಥಿ
ಮತ್ತು ಅತಿಥೇಯ ಸಂಕ್ಯೆಯಲ್ಲಿ ಆದಷ್ಟು ಕಡಿಮೆ ಇದ್ದಷ್ಟು ಅಲ್ಲಿ ಸ್ನೇಹ ಹೆಚ್ಚಾಗಿ
ಬಳಕೆಯಾಗುತ್ತದೆ ಎಂದು ನನ್ನ ನಂಬಿಕೆ. ಸ್ವಚ್ಚಂದ ವಿಹರಿಕೆ ಕ್ಷೇತ್ರ ಹೆಚ್ಹು ಅನುಕೂಲವಾಗಿರುತ್ತದೆ. ನಾವು ಅತಿಥಿ ಯಾ
ಅತಿಥೇಯರಾದಾಗಲೂ ಮೂರನೆಯದಾಗಿ ಒಂದು ಪಾತ್ರ ಅಲ್ಲಿದ್ದರೆ ಒಂದು ರೀತಿಯ ಅನಗತ್ಯ ಅಸಹಜ ಸನ್ನಿವೇಶ
ಒದಗಿಯೇ ಒದಗುತ್ತದೆ. ಹಾಗಾಗಿ ಎಲ್ಲವಿಧದಲ್ಲೂ ಜನಜಂಗುಳಿಯಿಂದ ದೂರ ಉಳಿದು ಖಾಸಗೀತನವನ್ನು
ಮುಕ್ತವಾಗಿ ಅನುಭವಸಲು ಉದ್ಯುಕ್ತನಾಗುತ್ತೇನೆ.
ಇದು ವ್ಯಕ್ತಿವಿಚಾರದ ಭೇಟಿಯಾಗಿ ಮಾತ್ರವಲ್ಲ ಒಂದು
ಸಾರ್ವಜನಿಕ ಪ್ರದೇಶಕ್ಕೆ ಹೋದಾಗಲೂ ಖಾಸಗೀ ವಲಯವನ್ನೇ ಆರಿಸಿಕೊಳ್ಳುವುದು ಹೆಚ್ಚು.
ದೇವಸ್ಥಾನಗಳಿಗೆ ಹೋದಾಗ ಇದು ಬಹಳ ಅರ್ಥಪೂರ್ಣವಾಗಿ ಪರಿಣಾಮ ಬೀರುತ್ತದೆ. ದೊಡ್ಡ ದೊಡ್ಡ ಕ್ಷೇತ್ರ
ದರ್ಶನಕ್ಕಿಂತ ಹಳ್ಳಿಯಲ್ಲಿರುವ ಪುಟ್ಟ ಗುಡಿ ಅಥವ ಅದಷ್ಟು ನಿಶ್ಯಬ್ದವಾಗಿರುವ ದೇವಾಲಯಗಳ ದರ್ಶನ
ಮತ್ತು ಪರಿಸರ ಅತ್ಯಂತ ಭಾವಪೂರ್ಣವಾಗಿರುತ್ತದೆ.
ಇಲ್ಲಿ ಭಗವಂತನ ಸಾಮಿಪ್ಯ ಅತ್ಯಂತ ಹತ್ತಿರವಾದ ಅನುಭವ.. ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ
ನಿಲ್ಲುವ ಜಂಝಾಟವಿಲ್ಲ. ದೇವರ ದರ್ಶನ ಮನದುಂಬಿ ಮಾಡಿ ಆ ಪ್ರಸನ್ನತೆಯನ್ನು
ಸಾಕ್ಷಾತ್ಕರಿಸಿಕೊಳ್ಳಬಹುದು. ದೇವರ ದೃಷ್ಠಿ ಏಲ್ಲರ ಮೇಲೆ ಸಮಾನವಾಗಿದ್ದರೂ, ಯಾರೂ ಇಲ್ಲದ ಶಾಂತ
ಪರಿಸರದಲ್ಲಿ ಮನಸ್ಸಿನ ಭಾವ ಭಿನ್ನವಾಗಿರುತ್ತದೆ. ನಮ್ಮ ದುಗುಡ ದುಮ್ಮಾನಗಳ ಮನವಿಗೆ ದೇವನ ಕಿವಿ
ತೆರೆದುಕೊಂಡಿರುವ ಅನುಭವಾಗುತ್ತದೆ. ನಮ್ಮದೆಲ್ಲವನ್ನು ಹೃದಯದಿಂದ ಅರ್ಪಿಸುವ ಮನೋಭಾವ ಬರುತ್ತದೆ.
ಕ್ಷೇತ್ರ ದೊಡ್ಡದಾದಂತೆ ನಮ್ಮ ದೇವರ ನಡುವಿನ ಖಾಸಗೀತನದ ಭಾವ ಕಡಿಮೆಯಾಗುತ್ತದೆ. ಇದು ಒಂದು ಭಾವ
ಆದರೂ... ಮನಸ್ಸು ಹಾತೋರೆಯುವುದು ಶಾಂತ ಪರಿಸರದ ಶಾಂತ ಮೂರ್ತಿಯ ದರ್ಶನವನ್ನು.
ನಮ್ಮೂರಿನ ದೇವಾಲಯದಲ್ಲಿ ಜನಜಂಗುಳಿಯ ಜಾತ್ರೆ
ಸೇರುವುದು ವರ್ಷದ ಒಂದೆರಡು ದಿನದ ಉತ್ಸವದಲ್ಲಿ. ಆದಿನಗಳಲ್ಲಿ ಬಾಹ್ಯ ಸಂಭ್ರಮ ಸಡಗರ ಇದ್ದರೂ
ಮನಸ್ಸು ಭಕ್ತಿಯಿಂದ ಸ್ಪಂದಿಸುವುದು ಅಲ್ಲಿಗೆ ನಿತ್ಯದ ಪೂಜಾದರ್ಶನಕ್ಕೆ ಹೋದಾಗ. ಹಾಗಾಗಿ ನಮ್ಮ
ಬಾಯಾರಿನ ಆವಳ ಮಠದ ದುರ್ಗಾ ಪರಮೇಶ್ವರಿಯ
ಸನ್ನಿಧಿಗೂ ನಾನು ಹೋಗಬಯಸುವುದು ನಿತ್ಯ ದಲ್ಲಿ. ಸರಳವಾದ ಭೋಜನ ಪ್ರಸಾದದ ಅದ್ಭುತ ಸ್ವಾದಾನುಭವದ
ಜತೆಗೆ ಯಾವುದೇ ಆಡಂಬರ ಔಪಚಾರಿಕತೆಗೆ ಅತೀತವಾಗಿರುವ ಭಕ್ತಿ ಭಾವದಲ್ಲಿ ಪ್ರತೀ ಸಲ ದೇವರ ಎದುರು ಒಂದು ಘಳಿಗೆ ನಿಂತಾಗಲೂ ಹೃದಯ ತುಂಬಿ
ಕಣ್ಣುಗಳು ಭಾರವಾಗುತ್ತವೆ. ಈ ಭಾವ ಬೇರೆಲ್ಲೂ ಬಾರದಿರುವ ಕಾರಣವಾದರೂ ಏನು ಅದೇ ಮನದೊಳಗಿನ
ಖಾಸಗೀತನ.
ಆವಳ ಮಠದ ಸುಂದರ ಪರಿಸರ |
ನಮ್ಮೂರಿನ
ದೇವಾಲಯಕ್ಕೆ ನಿತ್ಯದಲ್ಲಿ ಹೋಗುವಾಗ ಬರುವ ಭಕ್ತಿಭಾವ ಪ್ರಸಿದ್ದ ದೊಡ್ಡ ಕ್ಷೇತ್ರ ಹೋದಾಗ
ಬರುವುದೇ ಇಲ್ಲ. ಆ ಜನಜಂಗುಳಿಯಲ್ಲಿ ಸಿಕ್ಕಿ ಹಾಕಿದ ಭಕ್ತಿಭಾವ ಮನಸ್ಸಲ್ಲಿ ಮೂಡಿಸಿವುದು ಬಹಳ
ಶ್ರಮದಾಯಕ. ಊರ ಸಣ್ಣ ದೇವಾಲಯದಲ್ಲಿ ಸಿಕ್ಕಿದ ಸಂತೃಪ್ತಿ
ಎಲ್ಲೂ ಸಿಗದಿರುವ ಕಾರಣವಾದರೂ ಏನು ಅದೇ ಮನದೊಳಗಿನ ಖಾಸಗೀತನ. ಪರಿಶುದ್ದ ಪ್ರಶಾಂತ
ಪರಿಸರದಲ್ಲಿ ಕೇವಲ ನಾವುಗಳೇ ಇದ್ದಾಗ ಭಗವಂತನಲ್ಲಿ ನಡೆಸುವ ಮೌನದ ಸಂಭಾಷಣೆ ಹೊರಜಗತ್ತಿಗೆ
ಕೇಳಿಸದೇ ಇದ್ದರೂ ಅದು ಮನದಾಳಕ್ಕೆ ಇಳಿದುಬಿಡುತ್ತದೆ.
ನೀವು ಹೇಳಿರುವ ವಿಚಾರಗಳಂತೆ ನನಗೂ ಅನುಭವವಾಗಿದೆ.
ReplyDelete