Thursday, December 25, 2014

ಮನುಷ್ಯತ್ವದಿಂದ ದೈವತ್ವದೆಡೆಗೆ.....!!!


ಬದುಕಿನಲ್ಲಿ ಹಲವುಸಲ ಈ ಅನಿಸಿಕೆಗಳು ಅನುಭವಗಳು ನಿಮ್ಮದಾಗಬಹುದು ಒಂದು ಸಲ ಓದಿನೋಡಿ.

ಮನೆಯಲ್ಲಿ ಹೆಂಡತಿ ಕೋಪಗೊಂಡಾಗ,ಅಥವಾ ಅಸೌಖ್ಯದಿಂದ ಚಾಪೆ ಹಿಡಿದಾಗ ಹೆಂಡತಿಯ ಇರವಿನ ಬಗ್ಗೆ ಅರಿವಾಗುತ್ತದೆ. ಆ ವರೆಗೆ ಹೆಂಡತಿಯ ಬಗ್ಗೆ ಗಮನ ಹೋಗದಿದ್ದರೂ ಆಗ ಗಮನ ಹರಿಸುವ ಅನಿವಾರ್ಯತೆ ಮನಸ್ಸಿಗೆ ಉಂಟಾಗುತ್ತದೆ. ದೇಹದ ಯಾವುದೋ ಒಂದು ಅಂಗ ಅದು ಕೈ ಕಾಲು ಅಥವಾ ಕಾಲಿನ ಬರಳ ತುದಿಯಾದರೂ ಆಗಿರಬಹುದು ಅದರ ಇರವಿನ ಬಗ್ಗೆ ನಮಗೆ ಅರಿವಾಗುವುದು ಅದಕ್ಕೆ ಗಾಯವಾಗಿ ನೋವಾದಾಗಲೇ? ಹಲ್ಲು ಕುಳಿ ಬಿದ್ದು ನೋವು ಅತಿಯಾದಾಗ ನಾಲಗೆ ಅಗಿಂದಾಗ ಅದನ್ನು ನೇವರಿಸುತ್ತಿರುತ್ತದೆ. ಇಲ್ಲವಾದರೆ ಹಲ್ಲು ಅದರ ಪಾಡಿಗೆ ಜಗಿಯುತ್ತಿರುತ್ತದೆ. ಉಸಿರು,,  ಯಾವುದೇ ಜೀವಿಯ ಅಸ್ತಿತ್ವದ ಅಥವಾ ಜೀವಿಸಿರುವ ಸಂಕೇತವೇ ಉಸಿರಾಟ. ನಮ್ಮ ಉಸಿರಾಟ ಅಂತೆಯೇ ನಮ್ಮ ಗಮನಕ್ಕೆ ಬರುತ್ತದೆಯೇ? ಇಲ್ಲ, ವಿಚಿತ್ರವೆಂದರೆ ಅದು ಕ್ರಿಯಾತ್ಮಕವಾಗಿರುವವರೆಗೆ ಅದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಯಾವುದರ ಬಗ್ಗೆ ನಾವು ತೀವ್ರವಾಗಿ ಯೋಚಿಸಬೇಕೋ ಅದು ನಿರ್ಲಕ್ಷಿಸಲ್ಪಡುತ್ತದೆ!!!
ಪ್ರಾಣಾಯಾಮ….!!!” ಇದರ ವ್ಯಾಖ್ಯಾನ ಏನೇ ಇರಲಿ, ಇದನ್ನು ಕ್ರೀಯಾತ್ಮಕವಾಗಿ ಮಾಡಿದಾಗ ಉಸಿರಿನ ಅಪ್ಯಾಯಮಾನವಾದ ಅನುಭವವನ್ನು ನೀಡುತ್ತದೆ. ಉಸಿರು ನಾಮ ಪದ ಕ್ರಿಯಾಪದವಾಗಿ ಅನುಭವಿಸುತ್ತೇವೆ. ಜೀವನದ ಪ್ರತಿಕ್ಷಣವೂ  ಉಸಿರು ನಮ್ಮ ಗಮನ ಸೆಳೆಯುತ್ತಿರುತ್ತದೆ. ಅಥವಾ ನಮ್ಮ ಗಮನ ಸದಾ ನಮ್ಮ ಉಸಿರಿನತ್ತವೇ ಇರುತ್ತದೆ.  ಯಾವುದನ್ನೇ ಆಗಲಿ ಸೇವಿದಷ್ಟೂ ಪಚನವಾಗಿ ವಮನ ಅಥವಾ ವಿಸರ್ಜನೆಯಾಗಬೇಕು. ತಿಂದ ಅಹಾರವು ಪೂರ್ಣವಾಗಿ ಜೀರ್ಣವಾಗಿ ದೇಹದಲ್ಲಿ ಶೇಷವಿಲ್ಲದೇ ವಿಸರ್ಜಿಸಲ್ಪಡಬೇಕು. ಅದರಂತೇ ಉಸಿರಾಟ ಪ್ರಾಣ ವಾಯುವನ್ನು ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಹೀರಿಕೊಂಡು ಮತ್ತೆ ಅಷ್ಟನ್ನೇ ನಿಧಾನವಾಗಿ ಹೊರ ಹಾಕುವ ಪ್ರಕ್ರಿಯೆ  ಪ್ರಾಣಾಯಾಮ ಎನಿಸಲ್ಪಡುತ್ತದೆ. ಪ್ರಾಣಾಯಾಮದ ಮುಖ್ಯ ನಿಯಮವೇ ಅದು. ಅದರಲ್ಲಿ ಕೆಲವು ನಿಯಮವನ್ನು ಅಳವಡಿಸಿಕೊಂಡಲ್ಲಿ ಉಸಿರು ಆರೋಗ್ಯವಂತವಾಗಿ ನಮ್ಮ ಗಮನದಲ್ಲೇ ಇರುತ್ತದೆ ! ದೀರ್ಘಶ್ವಾಸದಲ್ಲಿ ಎಷ್ಟು ಆಮ್ಲಜನಕವನ್ನು ಒಳಕ್ಕೆಳೆದೆವೋ ಆಷ್ಟೂ ಕೂಡ ಅಂಗಾರಾಮ್ಲವಾಗಿ ನಿಧಾನವಾಗಿ ಹೊರಹಾಕಲ್ಪಡಬೇಕು. ಅವಸರವಸರದ ಆಹಾರ ಸೇವನೆ ಹೇಗೆ ದೇಹದ ಆರೋಗ್ಯವನ್ನು ಕೆಡಿಸುತ್ತದೆಯೋ ಅಂತೇ ಅವಸರದ ವಾಯುಸೇವನೆಯೂ ಅರೋಗ್ಯವನ್ನು ಅಸ್ಥಿರಗೊಳಿಸುತ್ತದೆ.
ನಮ್ಮ ಗಮನ ಉಸಿರಾಟದಲ್ಲಿ ಸ್ಥಿರವಾಗಿದೆ ಎಂದಾಗ, ಮನಸ್ಸು ಉದ್ರೇಕಗೊಳ್ಳುವುದಿಲ್ಲ, ಮನಸ್ಸು ಚಂಚಲವಾಗುವುದಿಲ್ಲ. ಸ್ಥಿತಪ್ರಜ್ಞತೆ ತನ್ನಿಂತಾನಾಗಿ ಅಳವಡಿಕೆಯಾಗುತ್ತದೆ. ಈ ಸ್ಥಿತಿಯ ಆಳಕ್ಕೆ ಇಳಿಯುವುದೇ ಧ್ಯಾನವಾಗುತ್ತದೆ. ಇದರ ಉತ್ತುಂಗ ಸ್ಥಿತಿಗೆ ತಲುಪುವ ಪ್ರಯತ್ನದಲ್ಲಿ ನಾವು ನಮ್ಮನ್ನು ಅರಿಯುತ್ತೇವೆ. ಬಹಳಷ್ಟು ಸಲ ಯೋಚಿಸುತ್ತೇವೆ ನಮ್ಮನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ನಮ್ಮನ್ನು ಗೌರವಿಸುವುದಿಲ್ಲ. ಹೀಗೆ ತಿಳಿದುಕೊಳ್ಳುವುದೇ ಮೂರ್ಖತನವಾಗುತ್ತದೆ. ನಮ್ಮ ಉಸಿರೇ ನಮಗೆ ತಿಳಿಯದೆ ನಮ್ಮನ್ನು ನಾವು ಅರಿಯದಾಗುತ್ತೇವೆ. ವಿಚಿತ್ರ ನಮ್ಮನ್ನು ನಾವು ತಿಳಿಯದಿದ್ದರೆ ಪರರು ನಮ್ಮನ್ನು ತಿಳಿಯಬೇಕೆನ್ನುವ ಹಂಬಲ ನಮ್ಮದು !!

ಮನಸ್ಸಿಗ್ಗೆ ಅತ್ಯಂತ ಹತ್ತಿರದ ಸಖ ಅಥವಾ ಸ್ನೇಹಿತ ಎಂದರೆ ಅದು ದೇಹ. ಹೀಗೆ ಚಿಂತಿಸುವಾಗ ಆಶ್ಚರ್ಯವಾಗುತ್ತದೆ. ಇದೆರಡಕ್ಕೂ ಇರುವ ಅವಿನಾಭವ,  ಒಂದರೊಳಗೆ ಇನ್ನೊಂದು ಎಂಬಂತಿರುವ ಸಂಬಂಧ ಅರ್ಥವಿಸುವನಿಗೆ ಬದುಕು ಪ್ರತಿಕ್ಷಣವೂ ಹೊಸ ಅನುಭವವನ್ನು ನೀಡಬಹುದು. ಮನುಷ್ಯ ಸ್ಥಿತ ಪ್ರಜ್ಞನಾದಷ್ಟೂ ಬದುಕನ್ನು ಸಾರ್ಥಕವಾಗಿ ಅನುಭವಿಸುತ್ತಾನೆ.
          ದೇವರು ಪರಮಾತ್ಮ ಎಂದಕೂಡಲೇ  ನನಪಿಗೆ ಬರುವುದು ಭಗವಂತನ ಹಲವು ನಾಮಗಳು,  ಅರ್ಚನೆ ಪೂಜೆ ಹವನಗಳು. ಏನೇನೋ ವೃತ ಭಜನೆಗಳು.ಎಲ್ಲವನ್ನು ಉದ್ವಿಗ್ನತೆಯಲ್ಲಿ ಅನುಭವಿಸುತ್ತದೆ ಮನಸ್ಸು. ಪೂಜೆಯೋ ಪುನಸ್ಕಾರವೋ ಮಾಡುತ್ತಿರಬೇಕಾದರೆ ಎಲ್ಲಿ ಪ್ರಮಾದವಾಗುತ್ತದೋ, ಪ್ರಮಾದದಿಂದ ಅನುಗ್ರಹಕ್ಕೆ ಬದಲಾಗಿ ಆಗ್ರಹಕ್ಕೆ ತುತ್ತಾಗಿಬಿಡುತ್ತೇವೋ ಎಂಬ ಉದ್ವೇಗ. ಬಿಡುವಿಲ್ಲದೇ ಸಮಯಕ್ಕೆ ಮುಗಿಸುವ ಆತುರದಲ್ಲಿ ಹಲವು ಸಲ ಮಾಡಿಯೇ ಮುಗಿಸಿಬಿಡುವ ಆತುರತೆ. ದೇವರಲ್ಲಿ ಭಕ್ತಿಭಾವ ವ್ಯಕ್ತಪಡಿಸುವುದಕ್ಕೆ ದೈಹಿಕವಾಗಿಯೂ ಮಾನಸಿಕವಾಗಿಯೂ ಏನೇನೋ ವರ್ತನೆಗಳು. ದೇವ ಪೂಜೆ ಪುನಸ್ಕಾರ ಮಾಡುತ್ತಿರಬೇಕಾದರೆ ಆನಂತರದ ಕೆಲಸವನ್ನೋ ಇನ್ನೇನನ್ನೋ ಯೋಚಿಸುತ್ತ ಮನಸ್ಸು ಜಗದಗಲ ಸುತ್ತುತ್ತಿರುತ್ತದೆ. ದೇಹ ಆತ್ಮ ಮನಸ್ಸು ಎಲ್ಲವೂ ಚದುರಿದ ಚಿತ್ರಗಳಂತೆ ವಿಕಾರತೆಯನ್ನು ಅನುಭವಿಸುವುದು ನಮ್ಮ ಅರಿವಿಗೇ ಬರುವುದಿಲ್ಲ. ಇದರಲ್ಲಿ ನಾವು ಪರಿಪೂರ್ಣತೆಯನ್ನು ಅನುಭವಿಸುವುದೇ ಇಲ್ಲ ! ಆದರೂ ಶಿಕ್ಷೆಗೆ ಒಳಗಾದವರಂತೆ ವರ್ತಿಸುತ್ತೇವೆ !!!  ಯಾವ ಭಾವವು ಉದ್ವಿಗ್ನತೆಗೆ ಅಸಮಾಧಾನ ಅತೃಪ್ತಿಗೆ ಕಾರಣವಾಗುತ್ತದೋ ಅಲ್ಲಿ ಶಾಂತಿ ಸಿಗುವುದು ಸಾಧ್ಯವೇ ಇಲ್ಲ. “ದೈವ ಭಕ್ತಿ”  ಭಯದಿಂದ ಹುಟ್ಟಿದರೆ ಭಯ ದೂರವಾದಾಗ ಭಕ್ತಿಯೂ ದೂರವಾಗಿಬಿಡುತ್ತದೆ.  ಪೂಜಿಸದೇ ಇದ್ದಲ್ಲಿ ದೇವರು ಏನು ಮಾಡಿಯಾನೋ, ಶಾಪವಿತ್ತರೆ? ಹೀಗೆ ಒಂದು ರೀತಿಯ ಭಯದಲ್ಲೇ ದೈವ ಉಪಾಸನೆ ಪೂಜೆಯನ್ನು ಆಚರಿಸುತ್ತೇವೆ. ಇಲ್ಲಿ ಅರಿಯದೆಯೋ ಅರಿತೋ ಭಯ ನಮ್ಮನ್ನಾವರಿಸಿ ಭಕ್ತಿಯ ಪರಮ ಗುರಿಯನ್ನು ತಲುಪುವಲ್ಲಿ ನಾವು ವಿಫಲರಾಗಿಬಿಡುತ್ತೇವೆ.
          ಮನೆಯ ಬಾಗಿಲಿಗೆ ಭಿಕ್ಷುಕನೊಬ್ಬ ಬರುತ್ತಾನೆ, ಏನೇನೋ ಗೋಗರೆದು ಬೇಡುತ್ತಾನೆ. ಏನು ಇಲ್ಲ ಎಂದರೂ ಮತ್ತೂ ಗೋಗರೆಯುತ್ತಾನೆ. ನಮ್ಮಲ್ಲಿ ಕರುಣೆ ಹುಟ್ಟಿಸುವ ಪ್ರಯತ್ನ ಮಾಡುತ್ತಾನೆ. ನಾವು ಗೊಣಗುತ್ತೇವೆ. “ಕೈಕಾಲು ಸರಿ ಇದ್ದರೂ ಇವುಗಳು ದುಡಿದು ತಿನ್ನುವುದಿಲ್ಲ.”  ನಮ್ಮ ಗೊಣಗಾಟದ ನಡುವೆಯೂ ಆತ ರೋಧಿಸುತ್ತಾನೆ. ಕೊನೆಗೆ ಆತನ ಕಿರಿ ಕಿರಿಯನ್ನು ತಡೆಯಲಾಗದೆ ಚಿಲ್ಲರೆ ದುಡ್ಡನ್ನು ಕೈಗೆ ಎಸೆದು ಬಿಡುತ್ತೇವೆ.  ಇಲ್ಲಿ ನಮ್ಮ ದಾನ ಬುದ್ದಿ ಪ್ರಕಟವಾಯಿತೇ? ಆರ್ತರನ್ನು ಕಂಡು ಮನ ಕರಗಿತೇ? ಖಂಡಿತಾ ಇಲ್ಲ. ಭಿಕ್ಷುಕನ ಉಪದ್ರ ಸಹಿಸಲಾಗದೆ ಒಮ್ಮೆ ಹೋಗಲಿ  ಪೀಡೆ ಎಂದು ಯೋಚಿಸುತ್ತೇವೆ. ಇಲ್ಲಿ ನಮ್ಮ ಸತ್ಕಾರ್ಯದಿಂದ ನಾವೇ ತೃಪ್ತರಾಗಿರುವುದಿಲ್ಲ !!!  ಯೋಚಿಸುವ ನಾವು ದೇವರನ್ನು ಪೂಜಿಸುವಲ್ಲಿ ಎಲ್ಲೋ ನಮಗರಿಯದೇ ಇದೇ ಭಾವ ಮೂಡಿಬಿಡುವುದಿಲ್ಲವೇ? ಇಲ್ಲ ಎಂದು ಹೇಳಿಬಿಡುವ ಹಾಗಿಲ್ಲ. ನಾವು ಮೊದಲು ನಮಗಾದರೂ  ಪ್ರಾಮಾಣಿಕವಾಗಿ ಯೋಚಿಸುವಂತಾಗಬೇಕು.

          ನನ್ನ ಮಿತ್ರನೊಬ್ಬ ಇದ್ದಾನೆ. ಈ ಬಗೆಯ ವ್ಯಕ್ತಿತ್ವ ಎಲ್ಲಿಯೂ ಸಿಗದೇ ಇರುವಂಥದ್ದಲ್ಲ. ಪ್ರತಿ ತಿಂಗಳು ಒಂದಲ್ಲ ಒಂದು ದೇವಸ್ಥಾನಕ್ಕೆ,ತೀರ್ಥಕ್ಷೇತ್ರಕ್ಕೆ ಹೋಗುತ್ತಿರುತ್ತಾನೆ. ಮಂತ್ರಾಲಯ ತಿರುಪತಿ ಧರ್ಮಸ್ಥಳವೆಂದು ನಿಯಮಿತವಾಗಿ ಪ್ರವಾಸ ಹೋಗುತ್ತಿರುವವನು.  ಮನೆಯಲ್ಲಿದ್ದರೂ ಅಷ್ಟೆ, ಒಂದು ರೀತಿಯ ದೈವ ಭಯದ ವ್ಯಕ್ತಿತ್ವ. ದೇವರಿಗೆ ಕೈ ಮುಗಿಯುವಲ್ಲಿ ಕಾರಣವನ್ನು ಅರಸಿ ಹೋಗುವುವನು, ಪ್ರತಿಯೊಂದು ಹಂತದಲ್ಲೂ ದೇವರಿಗೆ ಹರಕೆ ಹೊರುತ್ತಾ ಅದರಲ್ಲಿ ಪರಿಹಾರ ಸಿಕ್ಕಿಬಿಡುವ ನಿರೀಕ್ಷೆಯಲ್ಲೇ ದಿನಗಳನ್ನು ಕಳೆಯುತ್ತಿರುತ್ತಾನೆ. ವರ್ಷದಲ್ಲಿ ಎರಡು ಬಾರಿ ದೂರದ ಶಬರಿಮಲೆ ಯಾತ್ರೆಯನ್ನೂ ಮಾಡಿ ಬಿಡುತ್ತಾನೆ.  ನಾನು ಸಿಕ್ಕಿದಾಗ ಹೇಳುವುದುಂಟು...ನನಗೆ ಯೋಗ ಹೇಗೆ ಅಂತ ಕಲಿಸಿಕೊಡಿ. ಪ್ರಾಣಾಯಾಮದ ಅರೋಗ್ಯವಿಧಾನಗಳ ಆಸಕ್ತಿಯಿಂದ ಕೇಳುತ್ತಾನೆ. ಆದರೆ ಆಚರಣೆಯಲ್ಲಿ ಮಾತ್ರ ಬಹಳ ಶೂನ್ಯ. 

                    ಒಂದು ಸಲ ಈ ಮಿತ್ರನಿಗೆ ನಾನೆಂದೆ,” ನೀವು ತಿರುಪತಿ ಮಂತ್ರಾಲಯಕ್ಕೆ ತೋರಿಸುವ ಶ್ರದ್ಧೆ ಈ ಯೋಗಾಭ್ಯಾಸದಲ್ಲಿ ತೋರಿಸಿರುತ್ತಿದ್ದರೆ ಎಂದೋ ಉದ್ಧಾರವಾಗಬಹುದು. “ ಆಶ್ಚರ್ಯದಿಂದ ನೋಡುತ್ತಾನೆ. ತಿರುಪತಿ ಮಂತ್ರಾಲಯದ ಶ್ರಧ್ಧೆಯ ಬಗ್ಗೆ ಆಕ್ಷೇಪ ಹೇಳುತ್ತಿದ್ದೇನಲ್ಲ?   ಶ್ರದ್ದೆ ತಪ್ಪಲ್ಲ. ಆದರೆ ಅದರ ಆಚರಣೆ ತಪ್ಪು.  ನಾವು ತುಳಿದು ಹಿಂಬಾಲಿಸುವ ಹಾದಿಯನ್ನು ಗಮನಿಸಬೇಕು. ಗಮ್ಯ ಅರಿಯದ ಹಾದಿ ನಮ್ಮದಾಗಿರುತ್ತದೆ. ಗುರಿ ಉಂಟು ಅಂತ ಯೋಚಿಸುತ್ತೇವೆ, ಆದರೆ,   ಅದರ ಬಗ್ಗೆ ಅರಿವಿರುವುದಿಲ್ಲ. ಮುಂದಿನವನು  ನಡೆದಿದ್ದಾನೆ ಎಂದು ನಾವು ಹಿಂಬಾಲಿಸುತ್ತೇವೆ.

ಹಲವು ಸಲ ಶಬರಿಮಲೆಗೆ ಹೊರಟು ವೃತಧಾರಿಯಾದ ಅತನಲ್ಲಿ ಒಂದು ಬಾರಿ ಕೇಳಿದೆ, ಶಬರಿಮಲೆಯಲ್ಲಿ ದೇವಾಲಯದ ತುದಿಗೆ “ತತ್ವ ಮಸಿ”  ಎಂಬ ಪಲಕ ಹಾಕಿರುತ್ತಾರೆ. ತತ್ವ ಮಸಿ ಎಂದರೆ ಏನು?  ಭಗವದ್ಗೀತೆಯಲ್ಲಿ ಹೇಳಿರುವ ಈ ಪದದ ಅರ್ಥವೇ ತಿಳಿಯದು ಆತನಿಗೆ. ತತ್ವ ಮಸಿ ಎಂದರೆ ಏನು ಎಂದು ಅರಿಯದೇ ಬಹಳಷ್ಟು ಮಂದಿ ಮಲೆ ಏರುತ್ತಾರೆ. ವೃತ ನಿಷ್ಠೆಯ ಮೂಲ ಆಶಯವನ್ನೇ ತಿಳಿಯದೇ ಕಣ್ಣಿದ್ದೂ ಕುರುಡರಂತೆ ಹಿಂಬಾಲಿಸುವ ಪರಿ ವಿಚಿತ್ರವೆನಿಸುತ್ತದೆ. ವಾಸ್ತವದಲ್ಲಿ ಜೀವನದ ಗುರಿಯನ್ನೇ ನಾವು ಅರಿಯದೆ ಅಂಧರಂತೆ ಹಿಂಬಾಲಿಸುತ್ತೇವೆ. ನಮ್ಮೊಳಗಿನ ಆತ್ಮ ಚೇತನವನ್ನು ಕಾಣುವ ಹಂಬಲವೇ ಇಲ್ಲದೇ ಬದುಕನ್ನು ಗೊಂದಲದಲ್ಲೇ ಕಳೆಯುತ್ತೇವೆ.  ಯೋಗಾಭ್ಯಾಸ ಮಂಜು ಮುಸುಕಿದ ನಮ್ಮ ಹಾದಿಯನ್ನು ಸ್ಪಷ್ಟಗೊಳಿಸುತ್ತದೆ. ಸೂರ್ಯನ ಬಿಸಿಲಿನಿಂದಲೇ ರಸ್ತೆಯ ಮಂಜು ಕರಗಬೇಕು. ಆದರ ಬದಲಾಗಿ ನಾವು ಯಾವುದೋ ಕೃತಕ ಬೆಳಕನ್ನು ಹಾಯಿಸಿ ಮಾರ್ಗವನ್ನು ಕ್ರಮಿಸುತ್ತೇವೆ.
.         ಆಚರಣೆಗಳು ನಂಬಿಕೆಗಳು ತಪ್ಪಲ್ಲ. ಆದರೆ ನಾವು ನಮ್ಮ ಆದ್ಯತೆಯ ಪಟ್ಟಿಯನ್ನು ತಿರುಗಿಸಬೇಕು. ಯೋಗನಿರತನಾದಾಗ ಸಿದ್ದಿಸುವ ಏಕಾಗ್ರತೆ ಚಂಚಲತೆ ನಾಶವಾಗಿ ಬದುಕಿನ ಗುರಿಯ ನಿಖರತೆಯನ್ನು ತೋರಿಸುತ್ತದೆ. ನಿತ್ಯ ಕರ್ಮಗಳ ಅನುಷ್ಠಾನ ಇಲ್ಲದೇ ಇವುಗಳನ್ನು ಹಿಂಬಾಲಿಸಿದಾಗ ನಮ್ಮ ಗುರಿಯೂ ನಮಗೆ ಸಿದ್ಧಿಸುವುದಿಲ್ಲ. ಯಾವುದೋ ಒಂದು ದೊಡ್ಡ ರಸ್ತೆಯನ್ನು ತುಳಿಯಬೇಕಾದರೆ ಮೊದಲು ನಾವು ನಿತ್ಯ ತುಳಿಯುವ ನಮ್ಮ ಮನೆಯ ಮೆಟ್ಟಿಲನ್ನು ಇಳಿಯುವುದನ್ನು ಕಲಿಯಬೇಕು. ಆ ಮೆಟ್ಟಲನ್ನು ಇಳಿದೇ ಮುಂದಿನ ಹೆದ್ದಾರಿಯನ್ನು ನಾವು ತುಳಿಯಬೇಕು. ಮನೆಯ ಮೆಟ್ಟಲು ಇಳಿಯುವುದರಲ್ಲೇ ನಾವು ಎಡವಿದಲ್ಲಿ ಮುಂದಿನ ಹೆದ್ದಾರಿ ಕಣ್ಣಿಲ್ಲದೇ ನಡೆಯುವ ಕುರುಡನ ಪಯಣದಂತೆ ಗುರಿಕಾಣದ ಪಯಣವಾಗಿರುತ್ತದೆ. ನಿಜವಾಗಿ ನಮ್ಮ ಮನೆಯಲ್ಲೇ ಎಕಾಂತದಲ್ಲಿ ನಾವು ಮಾಡುವ ದೇವರ ಉಪಾಸನೆಯಾಗಲಿ ಧ್ಯಾನ ಕರ್ಮಗಳಾಗಲೀ ಯಾವುದೇ ಕ್ಷೇತ್ರ ದರ್ಶನಕ್ಕಿಂತಲೂ ಶ್ರೇಷ್ಠವಾಗಿರುತ್ತದೆ. ಇಲ್ಲಿ ನಮ್ಮ ಮಾನಸಿಕ ತೊಂದರೆಗಳು ಬೇಗನೆ ಗಮನಕ್ಕೆ ಬರುತ್ತದೆ. ನಮ್ಮ ಕರ್ಮದಲ್ಲಿ ನಾವು ಹೆಚ್ಚು ಪ್ರಾಮಾಣಿಕರಾಗಿರುವಂತೆ ಮಾಡುತ್ತದೆ. ನಮ್ಮ ಮನೆಯ ಮೂಲಾಧಾರಕ್ಕೆ ಇಲ್ಲಿ ನಾವೊಬ್ಬರೇ ಹಕ್ಕುದಾರರಾಗಿರುತ್ತೇವೆ. ಮನೆಯಿಂದ ಹೊರಬಂದು ಇದನ್ನು ಅರಸುತ್ತಾ ಬೇರೆಲ್ಲೋ ಹೋದರೆ ಆಲ್ಲಿ ಇದೇ ಮೂಲಾಧಾರವನ್ನು ಅವಲಂಬಿಸಿ ನೇತಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಅಲ್ಲಿ ನಮ್ಮ ಪ್ರಾಪ್ತಿ ಎನಿದೆಯೋ ಅದಕ್ಕೆ ಹಲವು ದಾವೇದಾರಿಗಳು ಬಂದು ಪ್ರಾಪ್ತಿ ಕ್ಷೀಣಿಸುತ್ತಾ ನಮ್ಮ ಅದೃಷ್ಟದ ಬಲವನ್ನೇ ಅದು ಹೊಂದಿಕೊಂಡಿರುತ್ತದೆ. ಯಾವುದೋ ಕ್ಷೇತ್ರದ ಜನಜಂಗುಳಿಯಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ಸಿಗುವ ದರ್ಶನಕ್ಕೆ ನಿಂತು ಅದು ಸಿಗದೇ ನಿರಾಶರಾಗುತ್ತೇವೆ. ನಮ್ಮ ಮನೆಯಲ್ಲಿ ನಮ್ಮ ಮನದಲ್ಲಿ ಸುಲಭದಲ್ಲೇ ಸಿಗುವ ವಸ್ತು ಅಲ್ಲೂ ಸಿಗದೇ ಇಲ್ಲೂ ಸಿಗದೆ ಅಕ್ಷರಶಃ ನಾವು ಕುರುಡರೇ ಆಗಿಬಿಡುತ್ತೇವೆ.

          ಜೀವನದಲ್ಲಿ ನಾವು ಹಲವು ಕನಸನ್ನು ಕಾಣುತ್ತೇವೆ. ದೊಡ್ದದಾದ ಸ್ವಂತ ಮನೆ, ಅಲ್ಲಿ ವಿಶಾಲವಾದ ಸುಸಜ್ಜಿತವಾದ ಪಲ್ಲಂಗದಲ್ಲಿ ಮಲಗುವ ಕನಸು ನಮ್ಮದಾಗಿರುತ್ತದೆ. ದೊಡ್ಡ ಮನೆಯನ್ನು ಕಟ್ಟಿ ಅಲ್ಲಿ ಸುಖದ ಸುಪ್ಪತ್ತಿಗೆಯ ಮಂಚದಲ್ಲಿ ಮಲಗುತ್ತೇವೆ. ಬದುಕೇ ಹಾಗೆ, ಆಸ್ಪತ್ರೆಯ ಮಂಚದಲ್ಲಿ ಮಲಗಿ ಬಂದಿಯಾಗಿರುವಾಗ ಹೊರಜಗತ್ತನ್ನು ಕಾಣುವ ಬಯಕೆ. ಅಮ್ಮನ ಮಡಿಲಿನಿಂದ ಜಾರುವ ಹಂಬಲ. ಜೀವನಾಂತ್ಯದಲ್ಲಿ ಕೊನೆಗೆ ನಾವು ಎಲ್ಲಿ ಮಲಗಿರುತ್ತೇವೆ ಎಂಜ ಜ್ಞಾನವೇ ನಮಗಿರುವುದಿಲ್ಲ. ನಮ್ಮ ಹಾಸಿಗೆಯನ್ನು ಯಾರೋ ಸಿದ್ಧ ಮಾಡಿಕೊಟ್ಟರೆ ಇದೆ ಇಲ್ಲವಾದರೆ ಅದನ್ನು ಸರಿಮಾಡುವ ಚೈತನ್ಯವೇ ನಮ್ಮಲ್ಲಿ ಇಲ್ಲದೇ ಅದರಲ್ಲೇ ಮಲಗಿ ಕೊನೆಗೊಮ್ಮೆ ಅದೇ ಸ್ಥಾಯೀ ಭಾವವಾಗಿಬಿಡುತ್ತದೆ. ಆದರೂ ಜೀವನದಲ್ಲಿ ಇದನ್ನೆಲ್ಲ ಪಡಿಯುವಲ್ಲಿನ ನಮ್ಮ ಹೋರಾಟ ವಿಚಿತ್ರವೆನಿಸುವುದಿಲ್ಲವೆ?
          ಬಂದಿಯಾಗಿರುವಾಗ ಸ್ವತಂತ್ರವಾಗುವ ಬಯಕೆ. ಸ್ವತಂತ್ರವಾದಮೇಲೆ ಪುನಃ ಬಂದಿಯಾಗುವೆನೆಂಬ ಭಯ ಆತಂಕ. ಆದರೆ ಈ ಬಂದಿಯಾಗುವ ಭಯ ಆತಂಕ ಇಲ್ಲದ ಒಂದು ಜೀವನ ಶೈಲಿಯಿದೆ ಅದರ ಬಗ್ಗೆ ನಾವು ಯೋಚಿಸುವುದಿಲ್ಲ.
          ನಾವು ಹುಟ್ಟಿದಕೂಡಲೇ ಉಣ್ಣುವುದಕ್ಕಾಗಿ ಹಂಬಲಿಸುತ್ತೇವೇ. ತಿಂದು ಉಂಡ ನಂತರ ಮತ್ತೆ ಪುನಃ ಉಣ್ಣುವುದಕ್ಕಾಗಿ ನಮ್ಮ ದುಡಿಮೆಯನ್ನು ಸಾಗಿಸುತ್ತೇವೆ. ಅಥವಾ ಪುನಃ ಉಣ್ಣುವುದಕ್ಕಾಗಿ ದುಡಿಯುತ್ತೇವೆ. ಯಃಕಶ್ಚಿತ್ ಒಂದು ಪ್ರಾಣಿಯ ಬದುಕಿನಂತೆ ನಮ್ಮ ಬದುಕು. ಉಣ್ಣುವುದು ದುಡಿಯುವುದು ಈ ಎರಡರ ನಡುವೇ ನಮ್ಮ ಬುದುಕು ಗುರಿಯಿಲ್ಲದೇ ಸಂಚರಿಸುತ್ತದೆ. ಮನುಷ್ಯ ಜೀವನದ ಪರಮಾರ್ಥವೇ ನಮಗೆ ತಿಳಿಯುವುದಿಲ್ಲ.  ಯೋಗಾಭ್ಯಾಸ ಎಂಬುದು ನಮ್ಮನ್ನು ಮನುಷ್ಯತ್ವದ ಕಡೆಗೆ ಚಲಿಸುವಂತೆ ಮಾಡುವುದು ಮಾತ್ರವಲ್ಲ ಕೇವಲ ಈ ಮನುಷ್ಯತ್ವದಿಂದ ದೈವತ್ವದ ಕಡೆಗೆ ಒಯ್ಯುತ್ತದೆ.


No comments:

Post a Comment