Saturday, February 7, 2015

ಅರ್ಥವಾಗುವುದಿಲ್ಲ...ಯಾಕೆ?


ಕಮಲವದು ಕೊಳದ ನೀರಮೇಲೆ ಅರಳಿ ನಗುತ್ತದೆ. ಕೊಳದ ತಳದಲ್ಲಿ ಕೆಸರು ಇರುತ್ತದೆ. ವಿಚಿತ್ರವೆಂದರೆ ಕೆಸರು ಇದ್ದಷ್ಟು ಕಮಲ ಅರಳಿರುವುದಿಲ್ಲ. ಕಮಲಕ್ಕಿಂತ ಹೆಚ್ಚು ಕೆಸರೇ ಕೊಳದಲ್ಲಿ ತುಂಬಿರುತ್ತದೆ. ಮನುಷ್ಯನ ಬದುಕಿನಲ್ಲೂ ಅದೇ ರೀತಿ ಒಳ್ಳೆಯದಕ್ಕಿಂತ ಅಧಿಕ ಕೆಟ್ಟದ್ದೇ ತುಂಬಿರುತ್ತದೆ. ಎಲ್ಲೋ ಎಂದೋ ಘಟಿಸುವ ಒಂದಿಷ್ಟು ಒಳ್ಳೆಯದಕ್ಕಾಗಿ ಆಶಾಭಾವದಿಂದ ಕಾಯುತ್ತಿರುತ್ತಾನೆ. ಹಲವು ಸಲ ರೋಗಬಾಧೆಯಿಂದ ಮರಣ ಶಯ್ಯೆಲ್ಲಿ ಮಲಗಿದ ರೋಗಿಯಲ್ಲೂ ಇದೇ ಆಶಾಭಾವ ಇರುತ್ತದೆ ! ಮುಂದಿನ ಸಮಯದಲ್ಲಿ ಒಳ್ಳೆಯ ಘಳಿಗೆಗಳು ನನ್ನದಾಗಬಹುದು ಎಂಬ ನಿರೀಕ್ಷೆ. ಕೊಳದಲ್ಲಿನ ಕಮಲ ಶಾಶ್ವತವಲ್ಲ. ಕಮಲ ಕೊಳದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಅದು ಕೊಳದ ಸ್ಥಾಯೀ ಭಾವವಲ್ಲ. ನೀರು ಬತ್ತಿಹೋಗಿ ಕಮಲ ನಾಶವಾಗಿ ಬರೀ ಕೆಸರು ಮಾತ್ರ ಕಣ್ಣಿಗೆ ರಾಚುತ್ತದೆ.
ಮನುಷ್ಯನ ಬದುಕು ಮೊದಲು ಕಾಣುವುದೇ ಢಾಂಬಿಕತನದ ಲೋಕವನ್ನು. ಯಾವುದು ಸತ್ಯವಲ್ಲವೋ ಅದನ್ನು ಸತ್ಯವೆಂದು ತಿಳಿಯುವ ಒಂದು ಭ್ರಮೆಯ ಬದುಕು. ಯಾವುದೇ ಒಂದು ಭಾವದಲ್ಲಿ ಕಾಲ ಸರಿಯುವ ಸತ್ಯದ ಅರಿವಾಗುವುದೇ ಇಲ್ಲ. ಮುಂಜಾನೆ ಸರಿದು ನಡು ಹಗಲು. ನಂತರ ಸಂಧ್ಯೆ....ಮತ್ತೆ ನಾಳಿನ ನಿರೀಕ್ಷೆಯಲ್ಲಿ ಕನಸಿನೊಂದಿಗೆ ಸರಿವ ಕತ್ತಲು. ಇಲ್ಲಿ ಮನಸ್ಸು ಪ್ರೀತಿಯನ್ನು ಕಾಣುತ್ತದೆ. ದ್ವೇಷ ವೈಷಮ್ಯವನ್ನು ಪ್ರಕಟಿಸುತ್ತದೆ. ಪ್ರತಿಯೊಂದು ಭಾವ ಪ್ರಕಟದಲ್ಲಿ ಈ ಸಮಯ ಶಾಶ್ವತವೆಂಬ ಒಂದು ಭ್ರಮಾಲೋಕದ ಒಳಗೆ ಮನಸ್ಸು ಸಂಚರಿಸುತ್ತದೆ. ಮಾನಸಿಕ ಗೊಂದಲದಲ್ಲಿ ವರ್ತಮಾನದಲ್ಲಿ ಸರಿಯುತ್ತಿರುವ ಸಮಯವನ್ನು ಹಿತವಾಗಿ ಅನುಭವಿಸುವುದನ್ನು ಮರೆಯುತ್ತೇವೆ.
ದೈವ ಭಕ್ತಿ ಅಂತೆಯೆ ಪ್ರೀತಿ ಪ್ರೇಮ ಇವುಗಳಲ್ಲಿ ಹುದುಗಿರುವ ಮಮಕಾರದ ಅಹಮಿಕೆ. ಆದರೆ ಒಂದು ಅರ್ಥವಾಗುವುದಿಲ್ಲ. ಇದೆಲ್ಲ ದೇಹದಿಂದಲೇ? ಅಥವಾ ಮನಸ್ಸಿನಿಂದಲೇ? ಭಗವಂತನ ಉಪಾಸನೆಯಲ್ಲಿ ಭಕ್ತಿ ಅದು ದೇಹದ ಭಾಷೆಯಾಗಕೂಡದು. ಅದು ಮನಸ್ಸಿನ ಭಾಷೆಯಾಗಬೇಕು. ಇದರ ಮರ್ಮವನ್ನು ತಿಳಿಯದೆ ಉತ್ಕಟ ಭಕ್ತಿ ಪ್ರಕಟಕ್ಕೆ ದೇಹ ಸಿದ್ದವಾಗುತ್ತಿದೆ. ನೂರೆಂಟು ನಮಸ್ಕಾರಗಳು, ಪ್ರದಕ್ಷಿಣೆಗಳು ದೇಹ ಶರಣಾಗುತ್ತಲೇ ಇರುತ್ತದೆ.  ಯಾವುದನ್ನು ಉನ್ನತವಾದ ದೇವ ದರ್ಶನವೆಂದು ತಿಳಿಯುವಲ್ಲಿ ಸರದಿಯಲ್ಲಿದ್ದುಕೊಂಡು ತಳ್ಳುತ್ತೇವೆ ತುಳಿಯುತ್ತೇವೆ ಸಿಟ್ಟಿನಲ್ಲಿ ಗೊಣಗುತ್ತೇವೆ. ಇಷ್ಟಾದರೂ ಇದನ್ನು ಭಕ್ತಿಯ ರೂಪ ಎಂದು ಒಪ್ಪಿಕೊಳ್ಳುತ್ತೇವೆ. ಎಲ್ಲಿರಿಗಿಂತಲೂ ಮೊದಲು ದರ್ಶನ ಭಾಗ್ಯ ನಮಗೆ ಸಿಗಲೆಂದು ಹಪ ಹಪಿಕೆಯೋ ಅಥವಾ ಒಂದು ಸಲ ದರ್ಶನದ ಕೆಲಸ ಮುಗಿಸಿಬಿಡುವ ಎಂಬ ಆತುರವೋ ಅರ್ಥವಾಗುದಿಲ್ಲ. ದರ್ಶನ ಮುಗಿಸಿ ಭೋಜನ ಶಾಲೆಯ ಸರದಿಯಲ್ಲಿ ನಿಂತು ಪುನಃ ಗೊಣಗುತ್ತೇವೆ. ಯಾಕೆ ಮನಸ್ಸು ನಿರಾಳವಾಗಿರುವುದಿಲ್ಲ? ಇದು ಅರ್ಥವಾಗುವುದೇ ಇಲ್ಲ.  ಉದ್ವೇಗ ಶಮನಕ್ಕೆ ಬಂದು ಆ ಉದ್ವೇಗ ಮತ್ತಷ್ಟು ವೃದ್ಧಿಯಾಗುತ್ತದೆ.

ಮುಂಜಾನೇ ಸೋರ್ಯೋದಯ ವೀಕ್ಷಣೆ ಮನಸ್ಸಿನ ವ್ಯಾಕುಲತೆಯನ್ನು ಹರಿಸುತ್ತದೆ. ರೋಗಬಾಧೆಯನ್ನು ಕಡಿಮೆಗೊಳಿಸುತ್ತದೆ. ರೋಗವಿಲ್ಲ ಎಂದು ಬೀಗುವ ಅಗತ್ಯವಿಲ್ಲ. ರೋಗಬಾಧೆ ಕೇವಲ ಶರೀರಕ್ಕೆ ಮಾತ್ರವಲ್ಲ.  ಅದು  ಶರೀರಕ್ಕೆ ಅಂಟಿದರೆ ನಮಗೆ ಅನುಭವಕ್ಕೆ ಬರಬಹುದು. ಆದರೆ ಮನಸ್ಸಿಗೆ? ನಮ್ಮ ಮನಸ್ಸಿನ ರೋಗ ನಮಗೇ ಅನುಭವಕ್ಕೆ ಸಿಗುವುದಿಲ್ಲ. ಹಾಗೆಂದು ನಮ್ಮ ಮನಸ್ಸು ರೋಗ ಮುಕ್ತ ಎಂದು ಹೇಳುವ ವಿಶ್ವಾಸ ನಮ್ಮಲ್ಲಿ ಇರುವುದಿಲ್ಲ. ಆದರೂ ಮನೆಯೊಳಗೇ ಮುಕುರುತ್ತೇವೆ. ಒಂದು ಮಾತ್ರ ಅರ್ಥವಾಗುವುದಿಲ್ಲ. ಎಷ್ಟು ಮಂದಿ ನೋಡಿದರು ಸೂರ್ಯೋದಯದ ಬೆಳಕು ಕಡಿಮೆಯಾಗುವುದಿಲ್ಲ. ಆದರೂ ನಾವು ನೋಡುವುದಿಲ್ಲ. ನಾವು ನೋಡದೆ ಉಳಿದರೂ ಬೆಳಕು ಹರಿಯದೆ ಇರುವುದಿಲ್ಲ.
ಪ್ರಾಯಕ್ಕೆ ಬಂದ ಮಗನ ಬೆಳೆದು ನಿಂತಿದ್ದಾನೆ. ಅಪ್ಪ ಅಮ್ಮನಿಗೆ ಆಶೆ. ಒಳ್ಳೆ ಹುಡುಗಿ ನೋಡಿ ಮದುವೆ ಮಾಡುವ ಎಂದು. ಆದರೆ ಹುಡುಗಿ ?? ಜಾತಕ ಹೊಂದಿದರೆ ರೂಪ ಹೊಂದುವುದಿಲ್ಲ. ಇವೆರಡು ಇದ್ದರೆ ಗುಣ ಎಲ್ಲವೂ ಹೊಂದಿಸಬಹುದಿತ್ತು ಆದರೆ ಸ್ವಜಾತಿಯಲ್ಲ. ಇಲ್ಲಿಯೂ ಬಯಸುತ್ತಾರೆ, ಒಂದು ಹುಡುಗಿ ಸಿಕ್ಕಿದರೆ,, ಜಾತಕ ಹೊಂದಿಕೊಳ್ಳುವ ಹುಡುಗಿ. ಅದು ಆಯಿತು..ಮತ್ತೆ ನೋಡಲು ಲಕ್ಷಣವಾದ ಹುಡುಗಿ, ನಂತರ ಸ್ವಜಾತಿಯ ಹುಡುಗಿ ಅದು ಸಿಗುವುದೇ ಇಲ್ಲ. ಕಾದು ಕಾದು ಮತ್ತೆ ಹಾಗೆ ಹೀಗೆ ಹೊಂದಾಣಿಕೆಯಲ್ಲಿ ಮದುವೆ ನಡೆದು ಬಿಟ್ಟರೆ ಪುಣ್ಯ. ಇದೊಂದು ರೀತಿ, ಎಲ್ಲಿಯೋ ಹೋಗಲು ಬಸ್ಸು ಕಾಯುತ್ತಿರುತ್ತೇವೆ, ಬಸ್ಸು ಬೇಗ ಬರಬಾರದೇ...  ಬಸ್ಸು ಬಂತು...ಹತ್ತುವುದಕ್ಕೆ ಜಾಗವಿಲ್ಲ.. ಹೇಗಾದರೂ ಒಳ ನುಗ್ಗಲು ಅವಕಾಶ ಸಿಕ್ಕಿದರೆ ಸಾಕು. ಒಳ ಹೋದಮೇಲೆ..ನಾವು ನಿಂತಲ್ಲೇ ಕುಳಿತವನು ಎದ್ದು ಸೀಟು ಖಾಲಿಯಾಗಬಾರದೇ? ಮನಸ್ಸು ಆಶಿಸುತ್ತದೆ..ಕೊನೆಗೆ ಸೀಟು ಸಿಕ್ಕಿದರೂ..ಛೇ ಕಿಟಕಿ ಪಕ್ಕ ಸಿಕ್ಕಿದರೆ..? ಈ ನಡುವೆ ಒಂದು ಮರೆತು ಹೋಗುತ್ತದೆ. ಬಸ್ಸು ನಿಂತಿರುವುದಿಲ್ಲ. ಅದು ಚಲಿಸುತ್ತಾ ಇರುತ್ತದೆ.!! ಕೆಲವೊಮ್ಮೆ ಹೀಗೂ ಇರುತ್ತದೆ. ಬಸ್ಸು ಬರುವುದಿಲ್ಲ. ಬಂದರೆ ನಿಲ್ಲುವುದಿಲ್ಲ. ಹೋದರೆ ಅರ್ಧದಲ್ಲೇ ಕೆಟ್ಟು ನಿಂತು ಬಿಡುತ್ತದೆ... ಒಟ್ಟು ಬದುಕೆಂದರೆ ಹೀಗೆ ನಮ್ಮ ಗುರಿಯ ಬಗ್ಗೆ ನಮಗೇ ಭರವಸೆ ಇರುವುದಿಲ್ಲ.

ಏನಪ್ಪಾ ಎಂದು ಅರ್ಥವಾಗಲಿಲ್ಲವೇ. ಪರವಾಗಿಲ್ಲ ನಕ್ಕುಬಿಡಿ. ಅರ್ಥವಾಯಿತೇ...ಆದರೂ ನಕ್ಕುಬಿಡಿ. ಯಾಕೆಂದರೆ ಶುಲ್ಕವಿಲ್ಲದೇ ಇರುವ ಪ್ರತಿಕ್ರಿಯೆ ಅದು. 


1 comment: