Wednesday, July 1, 2015

ತೆಂಗಿನ ಚಿಪ್ಪಿನೊಳಗಿನ ಮಧುರ ರಹಸ್ಯ


ಮಧುಮೇಹಕ್ಕೊಂದು ಮಧುರ ಮಾಹಿತಿ ಈ ಲೇಖನ.

ಮೊನ್ನೆ ಮಧೂರು ದೇವಸ್ಥಾನಕ್ಕೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ದಾರಿಯಲ್ಲಿ ಕಾಸರಗೋಡಿನಿಂದ ಸ್ವಲ್ಪ ಮೊದಲು ಚೌಕಿ ಎಂಬ ನಿಲ್ದಾಣದ ಮೊದಲು  ಸಿ.ಪಿ.ಸಿ.ಆರ್. ಐ .ತೋಟವನ್ನು ಕಂಡು,   ಚಿಕ್ಕವನಿರುವಾಗ ತೆಂಗಿನಮರದ ಬಗ್ಗೆ ಒಂದು ಪ್ರಬಂಧ ಬರೆದ ನೆನಪಾಯಿತು. ತೆಂಗಿನಮರದ ಉಪಯುಕ್ತತೆಯ ಬಗ್ಗೆ ಮತ್ತು ಅದರ ಕೃಷಿಯ ಬಗ್ಗೆ ಪ್ರಬಂಧ ಬರೆಯಬೇಕಿತ್ತು. ಮೊದಲಿನಿಂದ ಲೇಖನ ಬರೆಯುವಾಗ ಒಂದು ಹೊಸ ರೀತಿಯನ್ನು ತೋರಿಸುವ ತುಡಿತವಿತ್ತು. ಆಗಿನ ಬಾಲಿಷ ಬುದ್ದಿಯ ಪ್ರೇರಣೆಯೋ , ಕಥೆ ಕಾದಂಬರಿ ಎಂದು ಪುಸ್ತಕದ ಹುಳುವಾದ ಪರಿಣಾಮವೋ ಇರಬೇಕು. ಇತ್ತೀಚೆಗೆ ತಮ್ಮನ ಮಗಳು ಪ್ರಭಂಧ ಬರೆಯುವುದಕ್ಕೆ ನನ್ನ ಬಳಿ ಗೋಗರೆದಾಗಲೂ ಇದೇ ರೀತಿಯಲ್ಲಿ ಬರೆಸಿದ್ದೆ.


ಆಗ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಓದಿ ಹಿಂಬಾಲಿಸುವ ಹುಚ್ಚು. ಹಾಗಾಗಿ ಲೇಖನ ವಿಶಿಷ್ಟ ಆರಂಭದಿಂದ ತೊಡಬಬೇಕೆಂದು ತೆಂಗಿನ ಮರದ ಬಗ್ಗೆ ಬರೆಯುವಾಗ ಆರಂಭ ಅದೇ ರೀತಿಯಾಗಿತ್ತು. "ಒಂದು ಮುಂಜಾನೆ ಗದ್ದೆಯ ಬದಿಯಲ್ಲಿ ನಡೆದು ಹೋಗುತ್ತಿದ್ದೆ. ಬೆಳಗ್ಗೆದ್ದು ದೂರದ ಸುಬ್ಬಾ ಭಟ್ಟರ ಮನೆಯಿಂದ ಹಾಲು ತರುವ ಕೆಲಸ.  ತಣ್ಣನೆಯ ಗಾಳಿ ಒಂದೆಡೆಯಾದರೆ ನಿರಾಳ ಮೌನ. ಗದ್ದೆಯಲ್ಲಿ ಟರಗುಟ್ಟುವ ಕಪ್ಪೆಯ ಸದ್ದು ಮತ್ತು ಹಕ್ಕಿಯ ಚಿಲಿಪಿಲಿ ಬಿಟ್ಟರೆ ಯಾವ ಶಬ್ದವೂ ಇರಲಿಲ್ಲ. ಗದ್ದೆಯ ಬದುವಿನಲ್ಲೆ ತುಸು ಮುಂದೆ ಹೋದಾಗ ಹಿಂದೆ ಭೀಕರವಾದ ಸದ್ದು ಕೇಳಿ ಹೌ ಹಾರಿ ಗದ್ದೆಗೆ ಬಿದ್ದು ಬಿಟ್ಟೆ. ಹಿಂದೆ ತಿರುಗಿ ನೋಡಿದರೆ ಗದ್ದೆಯ ಬದಿಯ ತೆಂಗಿನ ಮರದಿಂದ ತೆಂಗಿನ ಗರಿ (ಮಡಲು)  ಬಿದ್ದ ಸದ್ದು ಅದು. ಆವರಿಸಿದ ಭಯದ ಕಂಪನ ಒಂದು ಕ್ಷಣ ನಿಂತು ಬಿಡುವಂತೆ ಮಾಡಿತ್ತು. ಮತ್ತೆ ಎದ್ದು ಮೈಗಾದ ಕೆಸರು ತೊಳಯಲೆಂದು ಅಲ್ಲೆ ಮರದ ಬಳಿಯಿದ್ದ ತೋಡಿಗೆ ಇಳಿದರೆ ಅಲ್ಲಿ ರಾತ್ರಿ ಬಿದ್ದ ತೆಂಗಿನ ಕಾಯಿ ಕಂಡಿತು. …"  .ಹೀಗೆ ಪ್ರಂಬಂಧ ಆರಂಭವಾಗಿ ತೆಂಗಿನಮರದ ಸುತ್ತ ಸುತ್ತಿಕೊಳ್ಳುತ್ತದೆ. ಈಗ ಬಾಲ ಬುದ್ಧಿಯನ್ನು ನೆನಸಿಕೊಂಡು ಕಿರುನಗುವೊಂದು ಮೂಡುತ್ತದೆ. ಮೊನ್ನೆಯೂ ಅದೇ ನೆನಪಿನ ಸುಳಿ ಬಿಚ್ಚತೊಡಗಿತು. ತೆಂಗಿನಕಾಯಿಯನ್ನು ಕಲ್ಪವೃಕ್ಷ ಅಂತ ಹಿರಿಯರು ಬಾರಿಬಾರಿಗೆ ಹೇಳುತ್ತಿದ್ದ ನೆನಪಾಯಿತು. ಒಂದೇ ಎರಡೆ….ನಮ್ಮಜ್ಜಿ   ತಾಂಬೂಲ ಮೆಲ್ಲುವಲ್ಲಿ ಎಲೆ ಅಡಕೆ ಹಾಕುವಾಗ ಅಡಕೆ ಹೋಳು ಇಲ್ಲದೇ ಇದ್ದಲಿ ತೆಂಗಿನ ಬೇರು ತುಂಡು ಮಾಡಿ ಜಗಿಯುತ್ತಿದ್ದ ನೆನಪಾಯಿತು. ಈಗ ಇದೂ ಸಹ  ತೆಂಗಿನ ಅತ್ಯಮೂಲ್ಯ ಉಪಯೋಗವೊಂದರ ಮಾಹಿತಿಯ ವಿನಿಮಯ. ಇದರ ಅರಿವು ಯಾರಿಗೆಲ್ಲ ಇದೆಯೋ ತಿಳಿಯದು. ಆದರೆ ನನಗಂತೂ ಬಹಳ ಹೊಸತು ಮತ್ತು ಅತೀ ಅಮೂಲ್ಯ ಎಂದನಿಸಿ ಹೀಗೆ ಹಂಚಿಕೊಂಡರೆ ಬಹಳಷ್ಟು ಮಂದಿಗೆ ಉಪಯೋಗವಾದರೂ ಆಗಬಹುದು ಎಂಬ ಯೋಚನೆ. 

ಮೊದಲು ಮನುಷ್ಶ ಅದೆಷ್ಟು ಪ್ರಕೃತಿಯ ಭಾಗವಾಗಿ ಪ್ರಕೃತಿಯೇ ಆಗಿಬಿಡುತ್ತಿದ್ದ. ಆದರೆ ಕ್ರಮೇಣ ತಾನು ಬೇರೆಯಾಗಿಯೇ ಪ್ರಕೃತಿಯನ್ನು ಗಮನಿಸುತ್ತಾನೆ. ತಾನು ಪ್ರಕೃತಿಯಿಂದ ಬೇರೆಯೇ ಎಂದು ಪ್ರಕೃತಿಯ ಮೇಲೆ ಆಕ್ರಮಣಕ್ಕೆ ತೊಡಗುತ್ತಾನೆ. ಪ್ರಕೃತಿ ಮಾತ್ರ ಮನುಷ್ಯನ ವಿಕೃತಿಗಳಿಗೆ ಸಾಕ್ಷಿಯಾಗುತ್ತಾ ಅವನನ್ನು ಪೋಷಿಸುತ್ತಾ ಬಂದಿದೆ. ಮನುಷ್ಯ ಜೀವನಕ್ಕೆ ಪ್ರಕೃತಿ ಹಲವು ವಿಧದಲ್ಲಿ ಸಹಕಾರಿಯಾಗಿದ್ದರೂ ಮನುಷ್ಯ ಅದನ್ನು ಗಮನಿಸುವುದಿಲ್ಲ. ಪ್ರಕೃತಿಯ ವಿರುದ್ದವಾಗಿರುರುವುದೇ ತನ್ನ ಪ್ರವೃತ್ತಿ, ಅದುವೇ ಸಹಜ ಜೀವನ ಎಂಬ ಭ್ರಮೆಯಲ್ಲೇ ಜೀವಿಸುತ್ತಾನೆ. ಈ  ಪ್ರಕೃತಿಗೆ ತನ್ನ ಸರ್ವಾಂಗವನ್ನೂ ಉಪಕೃತವಾಗುವಂತೆ ತೆರೆದಿಟ್ಟ ವೃಕ್ಷ , ಇಂದು ತೆಂಗಿನಮರ ಕಲ್ಪವೃಕ್ಷವಾಗಿ ಮನುಷ್ಯನ ಬದುಕಿನಲ್ಲಿ ತನ್ನ ಅವಿನಾಭಾವ ಸಂಭಂಧವನ್ನು ಶ್ರುತ ಪಡಿಸುತ್ತಾ ಬೆಳೆಯುತ್ತದೆ.

ಆ ದಿನ ಸನ್ಮಿತ್ರರಾದ ಮಳಿವಿನ ಜಯಣ್ಣ(ಜಯಶಂಕರ್)ನ ಮನೆಯಿಂದ ಹೊರಡುವಾಗ ಜಯಣ್ಣ ತೆಂಗಿನ ಬಹು ಅಮೂಲ್ಯವಾದ ಉಪಯೋಗ ಒಂದನ್ನು ತಿಳಿಸಿಬಿಟ್ಟರು. ಅದೇ ತಲೆಯಲ್ಲಿ ಸುಳಿ ಸುಳಿಯಾಗಿ ನೆಲೆಯಾಗಿತ್ತು. ಬಹಳ ಅಪರೂಪವಾದ ಬಹುಶಃ ತೀರ ಅರಿವೇ ಇಲ್ಲದ ಒಂದು ಅಮೃತ ಸದೃಶವಾದ ಮಾಹಿತಿ ಎನ್ನಬಹುದೆನೋ.

ಮೊದಲೆಲ್ಲ ವಯಸ್ಸು ಮಾಗಿ ವಯೋವೃದ್ಧರಾಗುವಾಗ ದೀರ್ಘ ಕಾಲ ಕಾಡುವ ಬದುಕಿನೊಂದಿಗೆ ಇರುವ ಕಾಯಿಲೆ ಕಾಡುತ್ತಿತ್ತು. ಅದರಲ್ಲಿ ಒಂದು ಮಧುಮೇಹ. ಸಕ್ಕರೆ ಖಾಯಿಲೆ.. (ಡಯಾಬಿಟೀಸ್). ಈಗೀಗೆ ಇಪ್ಪತ್ತೈದನೇ ವಯಸ್ಸಿಗೆ ಹಲವರಿಗೆ ಅಮರಿಕೊಳ್ಳುವ ಈ ಖಾಯಿಲೆ ಮನುಷ್ಯನಿಗೆ ತನ್ನ ಜೀವನವನ್ನು ಪರಿಪೂರ್ಣವಾಗಿ ಅನುಭವಿಸುವುದಕ್ಕೇ ಬಿಡುವುದೇ ಇಲ್ಲ.     ಸಕ್ಕರೆ ಕಾಯಿಯಿಲೆಯವನ ಹೃದಯ ಸಿಹಿಯಾಗಿದ್ದರೂ ಬದುಕು ಮಾತ್ರ ಕಹಿಯಾಗಿಯೇ ಇರುತ್ತದೆ.  ವಾಸ್ತವದಲ್ಲಿ ಇದು ಸಾರ್ವತ್ರಿಕವಲ್ಲ,  ಆದರೂ ಸಾಮಾನ್ಯ ಮನುಷ್ಯ ತನ್ನ ಜೀವನ ಪ್ರವೃತ್ತಿಯಲ್ಲಿ ಎರಡು ಮುಖ್ಯ ಬಯಕೆಗಳು ಅಗತ್ಯವಿಲ್ಲದೇ ಇದ್ದರೂ ಅದನ್ನೇ ಪ್ರಾಮುಖ್ಯ ಎಂದು ತಿಳಿದು, ಅದಕ್ಕಾಗಿಯೆ ಬದುಕುತ್ತಾನೆ.  ಅದುವೇ ಜೀವನ, ಜೀವನದ ಸರ್ವಸ್ವ ಎಂದು ತಿಳಿದು ಬದುಕುತ್ತಾನೆ. ಒಂದು ತಿನ್ನುವ ಆಹಾರ ಇನ್ನೊಂದು ದೈಹಿಕ ಕಾಮನೆಯ ಆಸಕ್ತಿ.  ಆದರೆ ಮಧುಮೇಹ ಇವೆರಡರಿಂದಲೂ ಮನುಷ್ಯನನ್ನು ದೂರಕ್ಕೆ ಒಯ್ದು ಬಯಸದೇ ಇದ್ದರೂ  ನಿಜವಾದ ಆಧ್ಯಾತ್ಮವನ್ನು ಅರಿವಿಲ್ಲದೇ ಆತನಿಗೆ ಪರಿಚಯಿಸಿಬಿಡುತ್ತದೆ. ಜೀವನ ಮೌಲ್ಯದ ಜಾಗೃತಿಯನ್ನು ಉಂಟುಮಾಡುತ್ತದೆ.  ಸಕ್ಕರೆ ಕಾಯಿಲೆ ಇದ್ದರೆ ಇವೆರಡರಲ್ಲೂ ಆಸಕ್ತಿಯನ್ನು ಬೇಗನೇ ಕಳೆದುಕೊಳ್ಳುತ್ತಾರೆ. ಒಂದು ವೇಳೆ ಆಸಕ್ತಿ ತಳೆದರೂ ಪೂರ್ಣಾನುಭವಕ್ಕೆ ಈ ರೋಗ ಬಿಡುವುದೇ ಇಲ್ಲ.

ಮೊದಲೆಲ್ಲ ಇಂತಹ ಖಾಯಿಲೆಗಳು ಬಹಳ ವಿರಳವಾಗಿದ್ದವು. ಈಗ ಯಾಕೆ ಹೇರಳವಾಗಿ ಬಹಳ ಸರಳವೆಂಬಂತೆ ಕಾಣಿಸುತ್ತದೆ? ಕಾರಣವೂ ಸರಳ. ಮನುಷ್ಯ ಪ್ರಕೃತಿಯಿಂದ ಬೇರೆಯಾಗಿ ನಿಂತು ಪ್ರಕೃತಿಯನ್ನು ಕಾಣುತ್ತಾನೆ.  ಅದರೆ ತಾನು ಪ್ರಕೃತಿಯ ಅಂಗವಾದಾಗ ಪ್ರಕೃತಿ ಧರ್ಮಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತಾನೆ. ಈ ಯೋಚನೆಗಳು ಪ್ರಚೋದಿಸಲ್ಪಟ್ಟದ್ದು ಮಿತ್ರ ಜಯಣ್ಣ ಸಕ್ಕರೆ ಖಾಯಿಲೆಯ ತೆಂಗಿನ ಚಿಪ್ಪಿನ ಔಷಧಿಯೊಂದನ್ನು ಹೇಳುವಾಗ. ಈ ಔಷಧಿಯ ಮಾಹಿತಿ ಅವರಿಗೆ ದೊರೆತದ್ದು ಅವರ ಎರುಂಬು ಮಾವನಿಂದ.

ತೆಂಗಿನ ಚಿಪ್ಪು (ಕರಟ, ಗೆರಟೆ)ಯನ್ನು ಮೊದಲ ದಿನ ನೀರಲ್ಲಿ ಮುಳುಗುವಂತೆ ಇಡಬೇಕು. ಮರುದಿನ ಬೆಳಗ್ಗೆ ಕರಟವನ್ನು ಬಿಸುಟು ಆ ನೀರನ್ನು ತುಸು ಬಿಸಿ ಬಿಡಿ, ಆದಷ್ಟು ಕಡಿಮೆಯೇ ಬಿಸಿ ಮಾಡಬೇಕು. ಆ ನೀರನ್ನು ಕುಡಿಯಬೇಕು. ದಿನಾ ಹೀಗೆ ಸೇವಿಸಿದಿರೆಂದಾದರೆ ಯಾವ ಔಷಧಿಯಿಂದಲೂ ಪಡೆಯಲಾಗದ ಪರಿಣಾಮವನ್ನು ಪಡೆಯಬಹುದು. ಸಕ್ಕರೆಯ ಅಂಶ ಗಣನೀಯವಾಗಿ ಕಡಿಮೆಯಾಗುತ್ತಾ ಸಕ್ಕರೆಯ ಮಟ್ಟ ಸಮತೋಲನಕ್ಕೆ ಇಳಿದುಬಿಡುತ್ತದೆ. ಕೊಲೆಸ್ಟೊರಾಲ್ ಕೂಡ ಸಮಸ್ಥಿತಿಗೆ ಬರುತ್ತದೆ. ಮೊದಲೆಲ್ಲ ತೆಂಗಿನ ಕರಟದ ಸೌಟನ್ನೇ ಅಡಿಗೆ ಮಾಡುವಾಗ ಉಪಯೋಗಿಸುತ್ತಿದ್ದರು. ಈ ಕಾರಣದಿಂದಾಗಿ ನಮ್ಮ ಹಿರಿಯರಿಗೆ ಸಕ್ಕರೆಖಾಯಿಲೆ ಮುಂತಾದ ಸಮಸ್ಯೆಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತಿದ್ದವು. ಇಲ್ಲಿ ಒಂದು ಸಲ ಉಪಯೋಗಿಸಿದ ಚಿಪ್ಪನ್ನು ಮತ್ತೆ ಉಪಯೋಗಿಸಬಾರದು. ಪ್ರತಿದಿನವೂ ಬೇರೆಯೆ ಚಿಪ್ಪನ್ನು ಉಪಯೋಗಿಸಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಅನ್ವೇಷಣೆಗಳು ಪ್ರಯೋಗಗಳು ನಡೆದರೆ ಜನಜೀವನಕ್ಕೆ ಉಪಯೋಗವಾಗುವುದರಲ್ಲಿ ಸಂಶಯವಿಲ್ಲ. ಮಾಹೀತಿಯನ್ನೊದಗಿಸಿದ ಜಯಣ್ಣ ಮತ್ತವರ ಸಹವರ್ತಿಗಳಿಗೆ ಕೃತಜ್ಞತೆಯನ್ನು ಈ ಮೂಲಕ ಸಲ್ಲಿಸುತ್ತೇನೆ. 



No comments:

Post a Comment