Sunday, April 9, 2017

ತುಂಡು ಬ್ರೆಡ್ ನ ಪರಿಮಳ......

            ಹೆಸರೇ ಹೇಳುವಂತೆ ಇದು ವಿಚಿತ್ರ ಸಂಗತಿ. ಬ್ರೆಡ್ ನ ಪರಿಮಳ ಹಿಡಿಯುವ ಈ ಸಂಗತಿ ಬೀದಿ ಬದಿಯ ನಾಯಿಯ ಸಂಗತಿ ಎಂದರೆ ಅದು ತಪ್ಪು. ಇದೊಂದು ಸತ್ಯ ಅನುಭವ.

            ಅದು ಸುಮಾರು ಎಪ್ಪತ್ತರ ದಶಕದ ಆರಂಭದ ವರ್ಷ ಎಂದು ನನ್ನ ನೆನಪು. ನಾನು ಆವಾಗ ಐದಾರು ವರ್ಷದ ಪೋರ. ಇನ್ನಷ್ಟೇ ಶಾಲೆಯ ಮೆಟ್ಟಲು ಹತ್ತಿಳಿಯುತ್ತಿದ್ದೆವು. ನಮ್ಮ ಮನೆ ಆಗ ಈಗಿನ  ಪೈವವಳಿಕೆಯ ಕಾಯರ್ ಕಟ್ಟೆ ಹೈಸೂಲು ಬಳಿ ಇತ್ತು. ನಮ್ಮ ಅಜ್ಜನಿಗೆ ಅಲ್ಲೊಂದು ಹೋಟಲು. ಹೋಟಲ್ ಎಂದರೆ ಅಲ್ಲಿರುವುದು ಒಂದೇ ಬೆಂಚು..!!! ಶಾಲೆಗೆ ಬರುವ ಅಧ್ಯಾಪಕರೇ ಅಲ್ಲಿಯ ಪ್ರಧಾನ ಗಿರಾಕಿಗಳು ಬೆಳಿಗ್ಗೆ ಮಧ್ಯಾಹ್ನ ಒಂದೆರಡು ಇಡ್ಲಿ ಚಹ ಒಂದಷ್ಟು ಊಟ ಇವಿಷ್ಟೇ ವ್ಯಾಪಾರವಾಗುತ್ತಿದ್ದವು. ನಾಳೆಯ ಊಟಕ್ಕೆ ಅಧ್ಯಾಪಕರು ಗಿರಾಗಿಗಳು ಇಂದೇ ಆರ್ಡರ್ ಕೊಡುತ್ತಿದ್ದುದು ಈಗ ನೆನಪಿಸುವಾಗ ಸೋಜಿಗ ಅನ್ನಿಸುತ್ತದೆ.   ಅಗಾಗ ಚಹದ ಕಿಟ್ಲಿ  ಹಿಡಿದು ಬರುತ್ತಿದ್ದ ಪ್ಯೂನ್ ಸೋಂಪಣ್ಣ ಇನ್ನೂ ನೆನಪಿರುವ ವ್ಯಕ್ತಿತ್ವ. ತಲೆಗೊಂದು ಟೋಪ್ಪಿ, ಹೆಗಲಲ್ಲಿ ಒಂದು ಶಾಲು,  ಅಂಗಿಯ ಭುಜಕ್ಕೆ ನೇತು ಹಾಕಿದ ದೊಡ್ಡ ಅಜ್ಜನ ಕೊಡೆ. (ಮರದ ಕಾಲಿನ ಉದ್ದದ ಅಜ್ಜನ ಕೋಲನ್ನು ಸಿಕ್ಕಿಸಿದಂತಹ ಕೊಡೆ)   ತೀಕ್ಷ್ಣ ಕಣ್ಣುಗಳು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿತ್ವ ನಮಗೆ ಮಕ್ಕಳಿಗೆ ಒಂದು ರೀತಿಯ ಭಯ ಹುಟ್ಟಿಸುತ್ತಿದ್ದವು. ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಮಾತ್ರವೇ ಓಡಾಡುವ ಬಸ್ಸುಗಳಲ್ಲಿ ಪ್ರಯಾಣಿಸುವ ಒಂದೆರಡು ಆಳುಗಳು ಬಿಟ್ಟರೆ ಹೋಟೇಲು ಮನೆಯಂತೆ ಇರುತ್ತಿತ್ತು.  ಹಾಗಾಗಿ ಬಡತನ ಹಸಿವು ಎಂಬುದರ ಅನುಭವ ಆಗೀಗ ನಮಗೂ ಆಗುತ್ತಿತ್ತು.

            ನಮ್ಮ ಬೆಳಗ್ಗಿನ  ಉಪಹಾರ ಎಂದರೆ ಅದು ಒಂದು ಸ್ವಲ್ಪ ಗಂಜಿ. ಅಪರೂಪಕ್ಕೆ ಕೆಲವೊಮ್ಮೆ  ಒಂದು ಇಡ್ಡಲಿ ಒಂದಿ ಷ್ಟು ಅರ್ಧ ಲೋಟ ಹಾಲು ಹಾಕದ ಚಹ. ’ಹಾಲು’ ಅದು ಗಿರಾಕಿಗಳಿಗೆ ಕೊಡುವುದಕ್ಕೇ ಇರುತ್ತಿರಲಿಲ್ಲ.

            ಹೋಟೆಲ್ ಗೆ ನಿತ್ಯವೂ ನಿಯಮಿತವಾಗಿ ಬೇಟಿ ಕೊಡುವ ವ್ಯಕ್ತಿಗಳಿದ್ದರು.  ಹಾಲು ತರುವ ಶೆಟ್ಟರು,  ಪಕ್ಕದ ಅಂಗಡಿಯ ಟೈಲರ್, ಸೇಲೂನಿನವರು,  ಹೀಗೆ ಮಾಮೂಲು ವ್ಯಕ್ತಿಗಳು. ಇವುಗಳ ನಡುವೆ ನಮಗೆ ಅತ್ಯಂತ ಇಷ್ಟವಾದ ಒಬ್ಬರು ಬರುತ್ತಿದ್ದರು. ಅದುವೇ ದೂರದ ಉಪ್ಪಳದಿಂದ ಬ್ರೆಡ್ ತರುತ್ತಿದ್ದ ಬಾಬಣ್ಣ. (ಹೆಸರು ಮರೆತು ಹೋಗಿದೆ) ಇನ್ನು ವಾರದಲ್ಲಿ ಯಾವಾಗಲೊಮ್ಮೆ ಬರುತ್ತಿದ್ದ ಐಸ್ ಕ್ಯಾಂಡಿ ವ್ಯಾಪಾರಿ.  ಶಾಲೆಯ ಬಳಿ ಐಸ್ ಕ್ಯಾಂಡಿ ಮಾರುವುದಕ್ಕೆ ಬರುತ್ತಿದ್ದರು. ಬೆಳಗ್ಗೆ ಸಾಯಿಬರ ಬಸ್ಸಿನಲ್ಲಿ ಬರುತ್ತಿದ್ದ ಐಸ್ ಕಾಂಡಿ ಡಬ್ಬ ಆಗಿನ ಕಾಲದಲ್ಲಿ ಬಹಳ ಆಕರ್ಷಣೀಯವಾಗಿ.ಸಾಯಿಬರ ಬಸ್ಸು ದೂರದಿಂದ ಬರುವಾಗಲೇ ಈ ಐಸ್ ಕ್ಯಾಂಡಿ ಡಬ್ಬ ಕಂಡರೆ ಅದೊಂದು ಸಂಭ್ರಮ.

            ಐಸ್ ಕ್ಯಾಂಡಿ ಯಾಗಲಿ ಬ್ರೇಡ್ ಆಗಲಿ ದುಡ್ಡು ಕೊಟ್ಟು ಕೊಳ್ಳುವ ಅರ್ಹತೆ ನಮಗಿಲ್ಲ. ಅದರಲ್ಲೂ ಐಸ್ ಕ್ಯಾಂಡಿ ಸಿರಿವಂತ ಮಕ್ಕಳಿಗಷ್ಟೇ  ಮೀಸಲು. ಆದರೂ ಮಧ್ಯಾಹ್ನ ಡಬ್ಬ ಖಾಲಿಯಾದಾಗ ತಳದಲ್ಲಿ ಉಳಿದ ತುಂಡು ತುಂಡು ಐಸ್ ಕ್ಯಾಂಡಿ ಆತ ನಮಗಾಗಿ ನೀಡುತ್ತಿದ್ದ. ಒಂದು ಲೋಟದಲ್ಲಿ ಸುರುವಿ ಅದನ್ನು ನೀರಾಗಿಸಿ ಶರ್ಬತ್ತಿನಂತೆ ಕುಡಿಯುವಾಗ ಸ್ವರ್ಗಕ್ಕೇ ಮೂರೇ ಗೇಣು.

            ಇನೂಬ್ಬ ಬ್ರೇಡ್ ತರುತ್ತಿದ್ದ ಲೈನ್ ಮ್ಯಾನ್ ನಮಗೆಲ್ಲ ಅತ್ಯಂತ ಪ್ರಿಯವಾದವನು. ಒಂದು ಸೈಕಲ್ ಗೆ ಸೈಕಲೇ ಮುಚ್ಚಿಹೋಗುವಂತೆ ದೊಡ್ಡ ಗಾತ್ರದ ಬುಟ್ಟಿಯನ್ನು ಹಿಂದಕ್ಕೆ ಕಟ್ಟಿ ಅದರ ಬಾಯಿಯನ್ನು ಗೋಣಿ ಚೀಲದಲ್ಲಿ ಮುಚ್ಚಿ ಖಾಲಿ ಸೈಕಲ್ ಟ್ಯೂಬ್ ನಿಂದ ಸುತ್ತಿ ದೂರದ ಉಪ್ಪಳದಿಂದ ತಳ್ಳಿಕೊಂಡು ಬರುತ್ತಿದ್ದ.  ನಮ್ಮ ಹೋಟೆಲಿನಲ್ಲಿ ತಿಂಡಿಯಂತೆ ಮಾರಾಟಕ್ಕೆ ಒಂದಷ್ಟು ಬ್ರೆಡ್ ಬನ್ನು ತೆಗೆದುಕೊಳ್ಳುತ್ತಿದ್ದರು. ನಮ್ಮಜ್ಜ ಸರಿಯಾಗಿ ಹಣ ಕೊಡುತ್ತಿದ್ದರೋ ಇಲ್ಲವೋ....ಆತ ಎಲ್ಲ ಕಡೆ ಮಾರಾಟ ಮುಗಿಸಿ ನಮ್ಮಲ್ಲಿಗೆ ಬರುತ್ತಿದ್ದದು ವಾಡಿಕೆ. ಹೋಟೇಲಿನಿಂದ ಒಂದಷ್ಟು ದೂರ ಸೈಕಲ್ ಸ್ಟಾಂಡ್ ಗೇರಿಸಿ ಬೆಲ್ ಮಾಡಿದರೆ ನಾವು ಓಡೋಡಿ ಅವನ ಬಳಿಗೆ ಹೋಗುತ್ತಿದ್ದೆವು. ಬ್ರೇಡ್ ಬನ್ನು ಅಟ್ಟಿ ಅಟ್ಟಿ ಇಟ್ಟು ಆತ ಹೋಟೇಲಿನ ಒಳಗೆ ಹೋಗುತ್ತಿರಬೇಕಾದರೆ ಆತನ ಸೈಕಲು ಬೀಳದಂತೆ ದನವೋ ನಾಯಿಯೋ ದೂಡಿ ಹಾಕದಂತೆ ಕಾವಲು ಕಾಯುತ್ತಿದ್ದೆವು. ಸೈಕಲ್ ಬೆಲ್ ಬಾರಿಸುತ್ತಾ ಅದರ ಸದ್ದು ಕೇಳುವುದೆಂದರೆ  ಎಲ್ಲಿಲ್ಲದ ಆನಂದ. ಬೆಲ್ ಬಾರಿಸುವುದಕ್ಕೇ ನಮ್ಮ ಮಕ್ಕಳ ನಡುವೆ  ನಡುವೆ ಜಗಳವಾಗುತ್ತಿತ್ತು.!!! ಕೊನೆಯಲ್ಲಿ ಇಲ್ಲಿಗೆ ಬರುವ ಕಾರಣದಿಂದ ಆತ,  ಉಳಿದ ಬ್ರೆಡ್ ಗಳನ್ನಷ್ಟೇ ಇಲ್ಲಿ ಕೊಡುತ್ತಿದ್ದ. ಆವಾಗ ಬುಟ್ಟಿಯ ತಳದಲ್ಲಿ ಉಳಿದ ತುಂಡಾದ ಬ್ರೆಡ್ ಬನ್ನು ಗಳನ್ನು ನಮಗೆ ತಿನ್ನಲು ನೀಡುತ್ತಿದ್ದ. ಸರಿಯಾಗಿ ಹೊಟ್ಟೆ ತುಂಬ ತಿನ್ನುವುದಕ್ಕೆ ಇಲ್ಲದೇ ಇರುತ್ತಿದ್ದ ಸಮಯದಲ್ಲಿ ಈ ಬಾಬಣ್ಣನ ಬ್ರೇಡ್ ಬಹಳ ರುಚಿಯನ್ನಿಸುತ್ತಿತ್ತು.  ಶುದ್ದ ಹಳ್ಳಿಯ ತಂತ್ರಜ್ಞಾನದಲ್ಲಿ ತಯಾರಿಸಿದ ಬ್ರೆಡ್ಡಿನ ಪರಿಮಳವೇ ಒಂದು ಅದ್ಭುತ ಅನುಭವ.  ಅದರ ನಂತರ ಅದೆಷ್ಟೋ ವಿಧದ ರುಚಿ ರುಚಿಯ ಬ್ರೆಡ್ ಕಂಡು ಸವಿದಿರಬಹುದು. ಬಾಲ್ಯದಲ್ಲಿ ತಿಂದ ಆ ಕಚ್ಚಾ ಬ್ರೆಡ್ಡಿನ ರುಚಿ ಮತ್ತೆಂದು ಸಿಗುವುದಕ್ಕೆ ಸಾಧ್ಯವಿಲ್ಲ. ದೊಡ್ಡ ಬುಟ್ಟಿಯನ್ನು ಸೈಕಲ್ ಗೆ ಕಟ್ಟಿ ಆತ ಬರುತ್ತಿರುವುದನ್ನೂ ನೋಡುವುದೇ ಒಂದು ಸಂಭ್ರಮ ಅನ್ನಿಸುತ್ತಿತ್ತು. 
            ಇದೀಗ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯ ಆಹಾರವಲ್ಲವೆಂದು ಐದಾರು ವರ್ಷದಿಂದ ಬ್ರೆಡ್ ತಿನ್ನುವುದು ಬಿಟ್ಟಿದ್ದೇನೆ. ಆದರೂ ಈಗ ಬ್ರೆಡ್ ಕಂಡಾಗ ಅದರ ಪರಿಮಳ ಆಘ್ರಾಣಿಸುವಾಗ  ಅಂದಿನ ಬ್ರೆಡ್ ಪರಿಮಳ ನೆನಪಾಗುತ್ತದೆ. ಅ ನೆನಪಿಗೆ ಒಂದು ತುಂಡು ಹಾಗೆ ಬಾಯಿಗೆ ಹಾಕಿ ಬಾಲ್ಯದ ಮಧುರ ನೆನಪನ್ನು ಪುನಃ ಸ್ಮೃತಿಗೆ ತರುವ ಯತ್ನ ಮಾಡುತ್ತೇನೆ. ಹಾಗಿದ್ದರೂ ಆ ಒಣಗಿದ ತುಂಡು ಬ್ರೇಡ್ ಗೆ ಯಾವುದೂ ಸಾಟಿಯಿಲ್ಲ. ಈಗಲೂ ಕಾಯರ್ ಕಟ್ಟೆಯ ಆ ಸ್ಥಳ ವನ್ನು ನೋಡುವಾಗ ತುಂಡು ಬ್ರೇಡ್ ನ ನೆನಪು ಆಗದೇ ಇರುವುದಿಲ್ಲ.
           

             

No comments:

Post a Comment