Thursday, April 13, 2017

ಕಾಲ ಬದಲಾಗಿದೆ......


ಅದಾಗಲೇ ವಸಂತ ಋತುವಿನ ಆಗಮನದೊಂದಿಗೆ ಮಕ್ಕಳಿಗೆ ಬೇಸಿಗೆ ರಜವೂ ಬಂದು ಬಿಟ್ಟಿತು. ಇನ್ನು ವರ್ಷ ಪೂರ್ತಿ ಮಕ್ಕಳ ಕಾರಣ ಹೇಳಿ ಹೋಗದೇ ಕುಳಿತ ಸ್ಥಳಗಳಿಗೆಲ್ಲ ಹೋಗಲೇಬೇಕು. ಹೀಗೆ ಯೋಜನೆ ಸಿದ್ದವಾಗಬೇಕಾದರೆ ಒಂದು ರಾತ್ರಿ ಒಂಭತ್ತು ಗಂಟೆಗೆ  ಆಕೆಯ ತವರು ಮನೆಯಿಂದ ತಂದೆಯ ಕರೆಯೊಂದು ಬರುತ್ತದೆ.  ಸ್ಥಿರ ದೂರವಾಣಿ ರಾತ್ರಿಯ ವೇಳೆ ಉಚಿತವಾದಾಗ ದಿನವೂ ತವರಿನ ಕರೆಯೊಂದಕ್ಕೆ ದೂರವಾಣಿ ಕಾದಿರುತ್ತದೆ.

ಸಾಮಾನ್ಯವಾಗಿ ಅಮ್ಮ ಅದು ಇದು ಮಾತನಾಡಿ ಪಕ್ಕದಲ್ಲಿದ್ದವರಿಗೂ ಕೊಟ್ಟು ಅವರೂ ಸಹ ಒಂದಷ್ಟು ದೂರವಾಣಿಯ  ಕಿವಿ ಕೊರೆದ ಮೇಲೆ ಒಂದು ಘಂಟೆಗೂ ಮಿಕ್ಕಿದ ಅವಧಿ ಕಳೆದಿರುತ್ತದೆ. ಮೊದಲು ಫೋನ್ ಕರೆ ಬಂದಾಗ ನಿಂತೇ ಮಾತನಾಡುತ್ತಿದ್ದದು ಈಗ ಅಲ್ಲೊಂದು ಕುರ್ಚಿಯನ್ನು ಅದಕ್ಕಾಗೇ ಮೀಸಲಾಗಿರಿಸಿದ್ದೇವೆ.  ಮಾತು ಕತೆಯ ಸಂಗತಿ ಕೆಲವೊಮ್ಮೆ ವಿಚಿತ್ರವಾಗಿರುತ್ತದೆ. ಮಾತನಾಡುವುದಕ್ಕೆ ವಿಚಾರಗಳು ಏನೂ ತೋಚದಾಗ  “ಮತ್ತೆ  ಬೇರೆ ಸಂಗತಿ..?.” ಇದನ್ನು ಈಕೆಯೂ ಐದಾರು ಬಾರಿ ಪದೇ ಪದೇ ಹೇಳಿದರೆ ಅತ್ತ ಕಡೆಯಿಂದ ಅಮ್ಮನೂ  ಹೇಳುತ್ತಾರೆ. “ ಮತ್ತೇನೂ ಇಲ್ಲ ಕಣೆ” ಅಂತ ನಾಲ್ಕೈದು ಸಲವಾದರೂ ಹೇಳಿದ ನಂತರವೇ ಫೋನ್ ಸ್ವಸ್ಥಾನದಲ್ಲಿ ಸೇರುತ್ತದೆ.  ಮತ್ತೇನೂ ಇಲ್ಲ ಎಂದು ಹೇಳುವುದೇ ಪ್ರಧಾನ ವಿಷಯವಾಗಿರುತ್ತದೆ.!! ಆದರೆ ಅಷ್ಟರಲ್ಲಿ ಫೋನ್ ವಯರು ನಾಲ್ಕೈದು ಸುರುಳಿ ಸುತ್ತಿಯಾಗಿರುತ್ತದೆ.  ಮಾತನಾಡುತ್ತಿರಬೇಕಾದರೆ ಬೇರೆನು ಕೆಲಸ ವಿರುತ್ತದೆ ?  ಒಂದು ಕೈಯಲ್ಲಿ ಫೋನ್ ವಯರು ಸುಮ್ಮನೇ ತಿರುವುತ್ತಾ ಇರುವುದು.

ಯಥಾ ಪ್ರಕಾರ ಫೋನ್ ಬಂತು. ಈ ಬಾರಿ ಆಕೆಯ ಅಪ್ಪನ ಕರೆ. ಅದೂ ಆಕೆಯ ಮೊಬೈಲ್ ಗೆ. ಮಾತುಕತೆಯಾಡುತ್ತಲೇ ಅವರು ಮೊಮ್ಮಗ ಮದನುವನ್ನು ಕರೆವಂತೆ ಹೇಳಿದರು.  ಅವನಾಗಲೇ ಕೋಣೆಯೋಳಗೆ ಕಂಪ್ಯೂಟರ್ ಮುಂದೆ ಕುಳಿತು ಅದಾವೂದೋ ಕಳ್ಳರ ಸಂಹಾರದಲ್ಲಿ ತೊಡಗಿದ್ದ. ಗಡಿಯುದ್ದದ ಸದ್ದಿನಂತೆ ಗುಂಡು ಬಾಂಬು ಇನ್ನೇನೋ ವಿಚಿತ್ರ ಸದ್ದುಗಳು ಕೋಣೆಯಿಂದ ಹೊರಹೊಮ್ಮಿ ಮನೆ ಇಡೀ ವ್ಯಾಪಿಸಿತ್ತು. ಕಂಪ್ಯೂಟರ್ ಗೇಮ್ ನ ಉತ್ಕಟಾವಸ್ಥೆ ಕೆಲವುಸಲ ಅದೆಷ್ಟು ಇರುತ್ತದೆ ಎಂದರೆ ಕುಳಿತ ಕುರ್ಚಿ ಎದುರಿನ ಕೀ ಬೋರ್ಡ್ ಯಾವುದೂ ಲೆಕ್ಕಕ್ಕಿರುವುದಿಲ್ಲ. ಮೊದಲೆಲ್ಲ ಇನ್ನು  ಏನೋ ಕೆಲಸಕ್ಕೆ ಹೊರಡಬೇಕು ಎನ್ನುವಾಗ “ ಅಪ್ಪಾ ನಾ ಬತ್ತೆ...” ಅಂತ ರಾಗ ಎಳೀತಿದ್ದವನಿಗೆ ಈಗ ಇಲ್ಲಿನ ಕಂಪ್ಯೂಟ ರ್ ಗೇಮ್ ನ ಕಳ್ಳರು ರಕ್ಕಸರು ಬಿಡುವುದಿಲ್ಲ. ಅವರನ್ನು ಮಟ್ಟಹಾಕದೇ ಇದ್ದರೆ ಮನಸ್ಸಿಗೆ ನೆಮ್ಮದಿ ಇರದು.

ಅಪ್ಪನ ಕರೆಯಲ್ಲವೇ ಮಗಳು  “ಮದನೂ..... ಇಕ ಅಜ್ಜ.” ಎನ್ನುತ್ತಾ ಕೊಡುತ್ತಾಳೆ. ಆತ ಒಂದೇ ಕೈಯಲ್ಲಿ ಡ್ರೈವ್  ಮಾಡುವ ಭಂಗಿಯೊಂದಿಗೆ ಇನ್ನೊಂದು ಕೈಯಲ್ಲಿ ಮೊಬೈಲ್ ತೆಗೆದುಕೊಳ್ಳುತ್ತಾನೆ. ಮೊಬೈಲ್ ಉಪಯೋಗಿಸಬಾರದು  ನಿಯಮವಿರುವುದು  ವಾಹನ ಚಲಾಯಿಸುವಾಗ ಮಾತ್ರ.  ಅಜ್ಜ ಯುಥಾ ಪ್ರಕಾರ ಕಿಚಾಯಿಸುತ್ತಾರೆ. ಮತ್ತೆ ಕೇಳುತ್ತಾರೆ, “ ಇಲ್ಲಿಗೆ ಯಾವಾಗ ಬರ್ತಿಯಾ?”
“ ಅಜ್ಜಾ...ಅಲ್ಲಿ ಬೋರು.....ಊಊ” ಅಂತ ರಾಗ ಎಳೆಯುತ್ತಾನೆ. ಅಜ್ಜ ಈತನ ನಾಡಿ ಮಿಡಿತ ತಿಳಿದವರಂತೆ, ತಾನೂ ಅಲ್ಪ ಸ್ವಲ್ಪ ಪರಿಷ್ಕಾರಿಯಾದಂತೆ ಹೇಳುತ್ತಾರೆ.
 “ ಇಲ್ಲಿ ಹೊಸಾದು ಕಂಪ್ಯೂಟರ್ ತಂದಿದೆ.”
 ಛೇ... ನಮಗೂ ತಿಳಿಯದ ರಹಸ್ಯ ಮೊಮ್ಮಗನೆದುರು ಬಹಿರಂಗಗೊಳ್ಳುತ್ತದೆ.  
“ಕಂಪ್ಯೂಟರಾ.....? ಯಾವುದು ಪ್ರೊಸೆಸರ್....??  ಏನು ಕಾನ್ಫಿಗರೇಷನ್???”

ಇದು ಎಂತದಪ್ಪ? ಅಪ್ಪನಾದವನಿಗೇ ಗೊತ್ತಿಲ್ಲ. ಈ ಬೆಂಕಿಕಡ್ಡಿ ಅಜ್ಜನ ತಲೆ ತಿನ್ನುತ್ತದೆ ಅಲ್ಲವಾ?  ಅಂತ ಆಶ್ಚರ್ಯವಾಗುತ್ತದೆ.  ಇದಕ್ಕೆ ಉತ್ತರ ಹೇಳುವುದಕ್ಕೆ ಅಜ್ಜನಿಗೂ ಗೊತ್ತಿಲ್ಲ.  ಹೋಗಲಿ, ಅಜ್ಜ ತಾನೆಲ್ಲ ತಿಳಿದವರಂತೆ, ಇಂಟರ್ ನೆಟ್ ಉಂಟು, ಸೌಂಡು ಬಾಕ್ಸ್ ಉಂಟು...ಅಂತ ತುಪ್ಪ ಸವರುತ್ತಾರೆ. ಆದರೂ ಮೊಮ್ಮಗನಿಗೆ ಅತೃಪ್ತಿ. ಅಲ್ಲಿಯದು ಏನೂ ಲೆಕ್ಕಕ್ಕಿಲ್ಲ ಎಂಬ ಅಹಂಭಾವ.
“ಇಂಟರ್ ನೆಟ್ ಉಂಟಾ...? ವೈ ಫೈ ಉಂಟಾ? “ ಅಂತ ಕೇಳಿ ಬಿಡುತ್ತಾನೆ. ಅಜ್ಜ ಹೂಂ ಇದೆ ಅಂತ ಜಂಭ ಕೊಚ್ಚಿಕೊಳ್ಳುತ್ತಾರೆ.
ಮೊಮ್ಮಗ ಆದ್ರೂ ಬಿಡಬೇಕಲ್ಲ. “ ವೈ ಫೈ ಉಂಟಾ..... ಕಂಪ್ಯೂಟರ್ ರಾಮ್ ಎಷ್ಟು ಜೀ ಬಿ ಉಂಟು?”
ಕಂಫೂಟರ್ ಮಾತ್ರವಲ್ಲ ಸೌಂಡು ಬಾಕ್ಸು,ಇಂಟರ್ ನೆಟ್ , ವೈಫ್ ಇದೀಗ ರಾಮ್.....  ಅಜ್ಜ ’ರಾಮ .....ರಾಮ....!!! ಅನ್ನುತ್ತಿರಬಹುದು.
ಮೊದಲೆಲ್ಲ ನಮ್ಮನ್ನು ಅಜ್ಜ ಅಜ್ಜಿ ಕರೆದಾಗ ಅಜ್ಜನ ಮನೆಯ ಪರಿಸರ ಎಲ್ಲ ಲೆಕ್ಕ ಹಾಕುತ್ತಿದ್ದೆವು. ಮೊದಲು ಅಜ್ಜನ ಮನೆಯಲ್ಲಿ ಎಷ್ಟು ಮಾವಿನ ಮರ ಉಂಟು? ಎಷ್ಟು ಮಾವಿನ ಮರದಲ್ಲಿ ಕಾಯಿ,  ಹಣ್ಣು ? ಮತ್ತೆ ಯಾವ ಮರದಲ್ಲಿ ಮಕ್ಕಳು ಹತ್ತುವ ಹಾಗೆ ಇರುತ್ತದೆ.? ಕೆಲವು ಮಾವಿನ ಮರಗಳು ರುಚಿಯಾದ ಹಣ್ಣು ಕೊಟ್ಟರೂ ಮಕ್ಕಳಿಗೆ ಹತ್ತುವುದಕ್ಕೆ ಆಗುವುದಿಲ್ಲ.  ಪುಣರ್ಪುಳಿ ಗಿಡಇದ್ದದ್ದು ಮರವಾಗಿ ಹಣ್ಣು ಬಿಡುತ್ತದಾ?  ಗೇರು ಮರಕ್ಕೆ ಕಲ್ಲು ಬೀಸಾಡಿದರೆ ಅಜ್ಜ ಬೈ ಬಹುದಾ? ( ಕಲ್ಲು ಬಿಸಾಡಿದರೆ ಹೂವುಗಳು ಉದುರಿ ಆಗುವ ಹಣ್ಣು ಕಡಿಮೆಯಾಗುತ್ತದೆ.)  ತೋಟದ ಸುರಂಗದಲ್ಲಿ ನೀರು ಬರುತ್ತಿರಬಹುದಾ? ಹೀಗೆ ಅಲ್ಲದೆ?   ಐಸ್ ಕ್ಯಾಂಡಿಯವ ಗಂಟೆ ಬಾರಿಸಿಕೊಂಡು ಅಲ್ಲಿಯೂ ಬರುತ್ತಾನ?  ನಮ್ಮ ಬಯಕೆಗಳು ಪ್ರಕೃತಿಯ ಜತೆಯಲ್ಲೇ ಇರುತ್ತಿತ್ತು. ಇಂದು ಕಾಲ ಬದಲಾಗಿದೆ ಎಂದು ಕಾಲವನ್ನು ಹೇಳಬಹುದು. ಆದರೆ ಮನುಷ್ಯ ಅಮೂಲಾಗ್ರವಾಗಿ ಬಾಲ್ಯದಿಂದಲೇ ಬದಲಾಗಿ ಹೋಗಿದ್ದಾನೆ. ಮಕ್ಕಳ ಬಯಕೆಗಳು ಬದಲಾಗಿವೆ. ಜೀವನ ಶೈಲಿ ಬದಲಾಗಿವೆ. ರಜ ಕಳೆದರೂ ಅಜ್ಜನ ಮನೆಯಿಂದ ಬರಲೊಪ್ಪದ ಮಕ್ಕಳು ಈಗ ಅಜ್ಜನ ಮನೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿವೆ. ಸಮ್ಮರ್ ಕ್ಯಾಂಪ್ ಎಂಬ ಭೂತ ಒಂದೆಡೆಯಾದರೆ ತೇರ್ಗಡೆಯಾದ ಮುಂದಿನ ಕ್ಲಾಸ್ ಗೆ ಮುಂಚಿತವಾದ ತರಬೇತಿ ಇನ್ನೊಂದೆಡೆ. ಶಿಕ್ಷಣ ತರಬೇತಿ ಇವುಗಳ ನಡುವೆ ಬೆಳೆದರೂ ಮನುಷ್ಯ   ನೈತಿಕವಾಗಿ ಕುಸಿಯುತ್ತಿದ್ದಾನೆ.

ನಾವು ಮಕ್ಕಳು ಬುದ್ದಿವಂತರಾಗಿದ್ದಾವೆ   ಎಂದು  ಭಾವಿಸುತ್ತಾ ನಮ್ಮ ಜೀವನದ ಕಡೆಗೆ ಗಮನ ಕೊಡುವುದಿಲ್ಲ. ನಮ್ಮ ಸಂಸ್ಕಾರಗಳೂ ಬದಲಾಗಿವೆ.

 ಒಂದು ಮನೆಗೆ ಅಥವಾ ಕಾರ್ಯಕ್ರಮಕ್ಕೆ ಹೋದಾಗ  ಒಂದು ತಂಬಿಗೆ ನೀರು ಜತೆಗೆ ತಟ್ಟೆಯಲ್ಲಿ ಒಂದಷ್ಟು ಉಪ್ಪಿನಕಾಯಿ ಅಥವಾ ಬೆಲ್ಲ ತಂದಿಟ್ಟು ಬಾಯಾರಿಕೆ ಕೇಳುವ ಹಿರಿಯರು ಎಷ್ಟಿದ್ದಾರೆ? ಒಂದು ಕಾಲದಲ್ಲಿ ಕಾರ್ಯಕ್ರಮವಿದ್ದರೆ ತಂಬಿಗೆ ನೀರಿನ ಜತೆ ಬಟ್ಟಲು ತುಂಬ ಬೆಲ್ಲ ಚಿಕ್ಕದಾಗಿ ಹೋಳು ಮಾಡಿ ಇಟ್ಟಿರುತ್ತಿದ್ದರು. ಇಂದು ಬಣ್ಣ ಬಣ್ಣದ ಶರಬತ್ತು. ಬಾಯಾರಿಕೆಯ ಪ್ರಥಮ ಉಪಚಾರವಾದ  ನೀರೂ ಅಪರೂಪವಾಗಿದೆ. ಹೋಗಲಿ ಮನೆಗೆ ಹೋದರೆ ಚಹ ಕಾಫಿ ಒತ್ತಾಯ ಮಾಡಿ ತಂದಿರಿಸುತ್ತಾರೆ. ದಾಕ್ಷಿಣ್ಯಕ್ಕಾದರೂ ಹೀರಿ ಆರೋಗ್ಯ ಕೆಡಿಸುವ ಅನಿವಾರ್ಯತೆ ಎದುರಾಗುತ್ತದೆ.  ಇನ್ನು ಸ್ವಲ್ಪ ಆತ್ಮೀಯರಾದರೆ ಗಂಡಸು ಕಣ್ಸನ್ನೆಯಲ್ಲೇ ವಿಚಾರಿಸುತ್ತಾನೆ “ಪ್ರೀಜರ್ ನಲ್ಲಿ ತಂದಿಟ್ಟದ್ದು ಉಳಿದಿದೆ ಊಟದ ಮೊದಲು ಸ್ವಲ್ಪ ತೆಗೆದುಕೊಳ್ಳುವನಾ? “  ಇಂತಹ ಆತಿಥ್ಯ ಸ್ವೀಕರಿಸುವುದಕ್ಕೆ ವಿಶೇಷವಾದ ಸಿದ್ದತೆಯನ್ನು ಅದಕ್ಕೆ ಪೂರ್ವ ನಿಗದಿಯ ಸಮಯವನ್ನು ಅತಿಥಿಯಾದವನು ಮೊದಲೇ ಮಾಡಿಕೊಂಡಿರುತ್ತಾನೆ.

ಕಾಲ ಬದಲಾಗಿದೆ ಎಂದು ಕಾಲವನ್ನು ಹೇಳಿ ಸುಮ್ಮನಾಗುವಾಗ,  ನೈತಿಕವಾಗಿ ತಾನು ಬದಲಾದದ್ದನ್ನು ಮನುಷ್ಯ ಒಪ್ಪಿಕೊಳ್ಳುವಲ್ಲಿಯೂ ಆತ್ಮವಂಚನೆ ಮಾಡುತ್ತಾನೆ.


1 comment:

  1. ಲೇಖನ ಚನ್ನಾಗಿದೆ. ಆದರೂ ನಾವು ಹಿರಿಯರು ನಮ್ಮ ನೇರಕ್ಕೇ ಏಕೆ ಯೋಚಿಸಬೇಕು? ಸುಖ, ಆನಂದ, ಮೌಲ್ಯಗಳು ನಾವು ಎಣಿಸಿದಂತೆಯೇ ಆಗಬೇಕೆಂಬ ಹಠವೇಕೆ? ನನ್ನ ಮೊಮ್ಮಕ್ಕಳಿಗೆ ( 7 ಹಾಗೂ 3 ವರ್ಷ ) ನಮ್ಮ ಸೋ ಕಾಲ್ಡ್ ನಿಸರ್ಗ ಮರಗಳು ಅಥವಾ ಪುನರ್ಪುಳಿಗಳ ಸವಿಯ ಅಗತ್ಯವೇ ಇಲ್ಲ. ಅವರು ಆ ಸುಖದಿಂದ ವಂಚಿತರಾದರಲ್ಲಾ ಎಂದು ವ್ಯಥೆ ಪಡುವುದರಲ್ಲಿ ಅರ್ಥವಿದೆಯೇ? 3 ವರ್ಷದ ಮಗು ಯೂ ಟ್ಯೂಬ್ ನ ವಿಡಿಯೋಗಳಲ್ಲಿ ತನ್ನ ಆನಂದವನ್ನು ಇಂದು ಕಂಡುಕೊಳ್ಳುತ್ತದೆ. ಸರಿಯಾದ ವಿಡಿಯೋಗಳನ್ನೇ ತೋರಿಸುವ ಬಾಧ್ಯತೆ ನಾವು ಹಿರಿಯರ ಮೇಲಿದೆ.

    ReplyDelete