ಬಸ್ಸು ಇನ್ನೇನು ಕೊನೆಯ ನಿಲ್ದಾಣವನ್ನು ತಲುಪುತ್ತಿದ್ದಂತೆ ಪ್ರಯಾಣಿಕರೆಲ್ಲರೂ ಇಳಿಯಲು ಉದ್ಯುಕ್ತರಾದರು. ಅದುವರೆಗೂ ಯಾವುದೋ ಯೋಚನಾಲಹರಿಯಲ್ಲಿ ವಿಹರಿಸುತ್ತಿದ್ದ ನಾನು ದಿಗ್ಗನೆ ಎದ್ದು ನಿಂತೆ. ಅದಾಗಲೇ
ಬಸ್ಸು ನಿಂತು ಒಬ್ಬೊಬ್ಬರಾಗಿ ಇಳಿದು ಹೋಗುತ್ತಿದ್ದರು. ನಾನು ಮುಂದಡಿಯಿಡುತ್ತಿದ್ದಂತೆ ನನ್ನ ಹೆಗಲು ಒತ್ತಿದ ಅನುಭವಾಯಿತು. ಅರೇ..ಬಸ್
ಗಳಲ್ಲಿ ಜೇಬು ಕಳ್ಳರ ಕರಾಮತ್ತಿನ ಕಥೆಯನ್ನು ಕೇಳಿ ತಿಳಿದ ನಾನು ನನ್ನ ಜೇಬನ್ನು ಕೈಯಲ್ಲಿ ಭದ್ರವಾಗಿ ಹಿಡಿದು ಬಸ್ ಬಾಗಿಲ ಬಳಿಗೆ ಬಂದೆ. ಆಗಲೂ
ಕೈಯೊಂದು ಹೆಗಲ ಮೇಲೆ ಮೃದುವಾಗಿ ಒತ್ತಿದ ಅನುಭವ. ಯಾರು
ಎಂದು ನೋಡುವಷ್ಟು ವೇಳೆಯಿಲ್ಲ. ಬಸ್
ಇಳಿದು ಹಿಂದೆ ತಿರುಗಿ ನೋಡಿದರೆ ಮಧ್ಯವಯಸ್ಕ ವ್ಯಕ್ತಿ ದೈನ್ಯದಿಂದ ನೋಡಿ ಸ್ವಲ್ಪ ಇರಿ ಸರ್ ಅಂದ.
ಮಧ್ಯ ವಯಸ್ಕ ವ್ಯಕ್ತಿ. ಸಂಭಾವಿತನಂತೆ
ಕಾಣುತ್ತಿದ್ದ. ಲಕ್ಷಣವಾಗಿದ್ದ. ಆತ ಮುಂದುವರೆಸಿ ಹೇಳಿದ” …ಸರ್
ತಲೆಗೆ ಚಕ್ಕರ್ ಬಂತು” . ಎನ್ನುತ್ತಾ
ಮತ್ತು ಹೆಗಲ ಮೇಲೆ ಇನ್ನೂಭಾರವಾಗಿ ಕೈಯೂರಿದ. ನಾನು ನಿಧಾನವಾಗಿ ಕೈ ಹೆಗಲಿಂದ ತೆಗೆದು ಆತನ ತೋಳು ಆಧರಿಸಿ ಅಲ್ಲೇ ದೂರದಲ್ಲಿದ್ದ ಕಟ್ಟೆಯೊಂದರಲ್ಲಿ ಕೂರಿಸಿದೆ. ಆತ
ಹೇಳಿದ್ದಿಷ್ಟು.
ಇಂದು ಬೆಳಗ್ಗೆ ಬೇಗನೆ ಮನೆ ಬಿಟ್ಟಿದ್ದ. ಗಡಿಬಿಡಿಯಲ್ಲಿ
ರಕ್ತದ ಒತ್ತಡದ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟು ಬಿಟ್ಟಿದ. ಇದೀಗ
ರಕ್ತದ ಒತ್ತಡ ಅಧಿಕವಾಗಿ ತಲೆ ತಿರುಗಿ ತಡಬಡಿಸುತ್ತಿದ್ದಾನೆ. ನನ್ನ ಬ್ಯಾಗ್ ನಲ್ಲಿಂದ ನೀರು ತೆಗೆದುಕೊಟ್ಟೆ ಒಂದಷ್ಟು ಗುಟುಕು ಕುಡಿದ.
“ಆತ ಹೇಳಿದ “ ಸರ್
ಬಿ ಪಿ ಮಾತ್ರೆ ತಂದುಕೊಡ್ತೀರಾ? ಒಂದು ಸಹಾಯ ಮಾಡಿ.ಮತ್ರೆಯ
ಹೆಸರು ಹೇಳಿದ. ಅಲ್ಲೆ
ದೂರದಲ್ಲಿದ್ದ ಔಷಧಿ ಅಂಗಡಿಯಿಂದ ಮಾತ್ರೆ ತಂದುಕೊಟ್ಟು ತೆಗೆದುಕೊಳ್ಳುವಂತೆ ಹೇಳಿದೆ. ಸ್ವಲ್ಪ
ಹೊತ್ತು ಅಲ್ಲೆ ಇದ್ದು ಅತನಿಗೆ ಭ್ರಾಮರೀ ಪ್ರಾಣಾಯಮ ಒಂದೆರಡು ಸಲ ಮಾಡಿಸಿದೆ. ಆತ
ತುಸು ಹಗುರವಾದಂತೆ ಕಂಡ.
ತುಸು ಆರಾಮದಂತೆ ಕಂಡನಂತರ “ಮನೆಗೆ
ಕರೆ ಮಾಡಿ ಹೇಳಬೇಕೆ ?”
ಎಂದು ಕೇಳಿದೆ.
“. ಅದೇನು ಬೇಡ. ಮನೆಯಲ್ಲಿ
ಪತ್ನಿಯೊಬ್ಬಳೇ ಆಕೆ ಗಾಬರಿಯಾಗಬಹುದು. ಇದೀಗ ಸರಿಯಾಗ್ತದೆ. ನೀವು ನಿಮ್ಮ ಕೆಲಸಕ್ಕೆ ಹೋಗಬಹುದು. ತುಂಬಾ
ಥಾಂಕ್ಸ್ ಅಂತ ಹೇಳಿದ”
ಮನುಷ್ಯನ ಆರೋಗ್ಯದ ಬಗ್ಗೆ ಒಂದಷ್ಟು ಯೋಚನೆಗಳು ಬಂದುವು. ಯಮರಾಜ
ಬಿಟ್ಟು ಹೋದ ವ್ಯಕ್ತಿಯನ್ನು ಕಂಡ ಅನುಭವವಾಯಿತು. ರಕ್ತದೊತ್ತಡ….ಇದು ಕಾಯಿಲೇಯೆ ಅಲ್ಲದ ಒಂದು ಕಾಯಿಲೆ. ನಿರ್ಲಕ್ಷ
ಮಾಡಿದರೆ ಇದಕ್ಕಿಂತ ಅಪಾಯಕಾರಿ ಬೇರೆ ಇಲ್ಲ. ಸಾಮಾನ್ಯವಾಗಿ
ಬೇಗನೇ ಸಿಟ್ಟಾಗುವವರಿಗೆ “ಅವನಿಗೆ ಬಿ. ಪಿ
ಉಂಟು ಮಾರಾಯ್ರೆ. ಲಾಗ
ಹಾಕ್ತಾನೆ.” ಅಂತ
ಹೇಳುತ್ತೇವೆ. ರಕ್ತದೊತ್ತಡ. ನಿವಾರಿಸಿಕೊಳ್ಳುವ ಸಮಸ್ಯೆಯಲ್ಲ. ಯಾವುದೇ ಔಷಧಿಯಾದರೂ
ಕೇವಲ ನಿಯಂತ್ರಣವೇ ಹೊರತು ನಿವಾರಣೆಯಲ್ಲ. ರಕ್ತದೊತ್ತಡ ಅಥವಾ ಯಾವುದೇ ಬಗೆಯ ಮಾನಸಿಕ ಒತ್ತಡವನ್ನು
ನಿಯಂತ್ರಿಸಲು ಸಾಧ್ಯವಿದ್ದರೆ ಅದು ನಮ್ಮ ಜೀವನ ಶೈಲಿಯಿಂದ ಮಾತ್ರ. ಆ ಜೀವನ ಶೈಲಿ ರೂಢಿಯಾಗುವುದಿದ್ದರೆ ಅದು ನಿರಂತರ ಯೋಗಾಭ್ಯಾಸದಿಂದ
ಮಾತ್ರ ಸಾಧ್ಯ.
ಭ್ರಾಮರೀ ಪ್ರಾಣಾಯಾಮ. ಇದು ಭ್ರಮರದಂತೆ ಸದ್ದು ಮಾಡುತ್ತಾ ದೇಹದಲ್ಲಿ ಕಂಪನವನ್ನು ಸೃಷ್ಟಿಸುವ ಒಂದು ಬಗೆಯ ಪ್ರಾಣಾಯಾಮ.ನೇರವಾಗಿ ಕುಳಿತು ಮೂರು ನಾಲ್ಕು ಸಲ ದೀರ್ಘವಾದ
ಉಸಿರನ್ನು ಎಳೆದು ಮನಸ್ಸನ್ನು ದೇಹವನ್ನು ಸಮತೋಲನಕ್ಕೆ ತಂದು ಕೊಳ್ಳಬೇಕು. ದೀರ್ಘ ಶ್ವಾಸದಿಂದ ಹೃದಯದ ಬಡಿತವೂ ಸ್ಥಿಮಿತಗೊಳ್ಳುತ್ತದೆ. ನಂತರ
ಎರಡು ಕೈಯ ಹೆಬ್ಬೆರಳಿನಿಂದ ಕಿವಿಯನ್ನು ಬಿಗಿಯಾಗಿ ಮುಚ್ಚಿ ಮಧ್ಯದ ಬೆರಳಿನಿಂದ ಕಣ್ಣುಗಳನ್ನು ಮುಚ್ಚಬೇಕು
ತೋರು ಬೆರಳು ಹುಬ್ಬುಗಳ ಬಳಿಯಿದ್ದರೆ ಉಳಿದ ಬೆರಳು ಮೂಗಿನ ಅಕ್ಕ ಪಕ್ಕ ಮೃದುವಾಗಿ ಒತ್ತುತ್ತಿರಬೇಕು.
ಮುಚ್ಚಿದ ಕಣ್ಣಿನ ದೃಷ್ಟಿಯನ್ನು ಹುಬ್ಬುಗಳೆರಡರ ನಡುವೆ ಕೇಂದ್ರಿಕರಿಸಬೇಕು.
ಈಗ ದೀರ್ಘ ಶ್ವಾಸ ಎಳೆದು ಉಸಿರನ್ನು ಬಿಡುವಾಗ ಬಹಳ ಮೃದುವಾಗಿ ಓಂ ಕಾರದ ಸದ್ದನ್ನು ನಾಸಿಕದಲ್ಲಿ ಮಾಡುತ್ತಿರಬೇಕು. ಕಪಾಲದಲ್ಲಿ ಒತ್ತಡದಿಂದ
ಹೆಚ್ಚಾದ ರಕ್ತ ಚಲನೆಯು ಸಮತೋಲನಕ್ಕೆ ಬರುತ್ತದೆ. ಒತ್ತಡವನ್ನು ನಿಯಂತ್ರಿಸುವುದಕ್ಕೆ
ಸರಳವಾದ ಮತ್ತು ಅಷ್ಟೇ ಪರಿಣಾಮಕಾರಿ ಪ್ರಾಣಾಯಾಮವಿದು. ಇದನ್ನು ಎಲ್ಲಿ ಬೇಕಾದರೂ
ಮಾಡಬಹುದು. ಕಛೇರಿಯಲ್ಲಿ ಕುಳಿತಿರುವಾಗ , ಪ್ರಯಾಣಿಸುವಾಗ
ಹೇಗೆ ಬೇಕಾದಲ್ಲಿ ಮಾಡಿಕೊಳ್ಳಬೇಕು . ಭ್ರಮರದಂತೆ ಸದ್ದು ಮಾಡಿ ಕಂಪನದೊಂದಿಗೆ
ಮಾಡುವುದರಿಂದಲೇ ಇದನ್ನು ಭ್ರಾಮರೀ ಪ್ರಾಣಾಯಾಮ ಎನ್ನುತ್ತಾರೆ.
ತೀವ್ರವಾದ ಶರೀರದ ಚಟುವಟಿಕೆ ಇದ್ದಾಗ, ವ್ಯಾಯಾಮ ಮಾಡಿ ಕೊನೆಯಲ್ಲಿ ಈ ಪ್ರಾಣಾಯಾಮ ಆಚರಿಸಿದರೆ
ರಕ್ತದ ಪರಿಚಲನೆ ಸ್ಥಿರವಾಗುತ್ತದೆ. ಮನಸ್ಸು ಅರಳುತ್ತದೆ. ದೇಹದಲ್ಲಿ ಹೊಸ ಹುರುಪು ಚಿಗುರುತ್ತದೆ. ದೇಹಾದ್ಯಂತ ಹೊಸ ಚೈತನ್ಯ
ಸ್ಪುರಿಸುತ್ತದೆ. ಮನಸ್ಸು ಎಷ್ಟೇ ಒತ್ತಡದಲ್ಲಿರಲ್ಲಿ ಕ್ಷಣ ಮಾತ್ರದಲ್ಲಿ
ಶಾಂತವಾಗುತ್ತದೆ. ನಮ್ಮ ಯೋಚನೆಗಳ ಜಿಗುಟುತನ ಕಡಿಮೆಯಾಗುತ್ತದೆ.
ಮಾನಸಿಕ ಒತ್ತಡ ಅತಿಯಾದಾಗ ಇದನ್ನು ಮಾಡುವುದರಿಂದ ಎಲ್ಲಾ ಒತ್ತಡವನ್ನು
ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿ ನಿತ್ಯ ಯೋಗಾಭ್ಯಾಸದಲ್ಲಿ ಇದನ್ನು ಈ
ಭ್ರಾಮರೀ ಪ್ರಾಣಾಯಾಮ ಮಾಡುವುದರಿಂದ ರಕ್ತ ಪರಿಚಲನೆಯಲ್ಲಾಗುವ ಏರು ಪೇರನ್ನು ಸುಸ್ಥಿಗೆ ತರುವುದು
ಸಾಧ್ಯವಾಗುತ್ತದೆ. ಮನಸ್ಸುಜಡತ್ವದಿಂದ ಹೊರಬಂದು ಹೊಸ ಉತ್ಸಾಹದಲ್ಲಿ ಪುಟಿದೇಳುತ್ತದೆ.
ಇಂದು ಖಾಯಿಲೆ ವ್ಯಾಧಿ ತಿಳಿಯುವ ಮೊದಲೇ ಔಷಧಿ ಸೇವಿಸುವ ಚಟ. ಶೇಕಡ
ತೊಂಬತ್ತೈದು ಮಂದಿಯೂ ಔಷಧವಿಲ್ಲದೇ ದಿನ ಕಳೆಯಲಾರರು. ಬರುವ ರೋಗವನ್ನು ತಡೆದು ಇರುವ ರೋಗವನ್ನು
ಇನ್ನಿಲ್ಲದಂತೆ ದೂರಮಾಡುವ ಯೋಗಾಭ್ಯಾಸ ಬಹಳ ಸರಳವಾದ ವಿಧಾನಗಳಿಂದ ಕೂಡಿದೆ. ಅದರಲ್ಲಿ ಒಂದು ಈ
ಭ್ರಾಮರೀ ಪ್ರಾಣಾಯಾಮ.ಕೆಲವು ಘಳಿಗೆಗಳಲ್ಲಿ ನಮ್ಮ ದೇಹದಲ್ಲಿ ಆಗುವ ಪರಿಣಾಮಕ್ಕೆ ನಾವೇ
ಸಾಕ್ಷಿಯಾಗುವುದು ಅದ್ಭುತ ಅನುಭವವನ್ನು ಕೊಡುತ್ತದೆ. ಯೋಗಾಭ್ಯಾಸವೆಂದು ಕಠಿಣವಲ್ಲ. ಅದು ಸರಳ
ಜೀವನ ವಿಧಾನ. ಹಲವರು ಸಮಯವಿಲ್ಲ ಎಂದಷ್ಟೇ ಕಾರಣವಿಟ್ಟು ಯೋಗಾಭ್ಯಾಸದಿಂದ ದೂರವಿರುತ್ತಾರೆ. ಆದರೆ
ಯೋಗಾಭ್ಯಾಸಕ್ಕೆ ತೊಡಗುವಲ್ಲಿ ಸಮಯಕ್ಕಿಂತಲೂ ಬೇಕಾಗಿರುವುದು ಶ್ರದ್ಧೆ ಸಮರ್ಪಣಾ ಭಾವ.
ಶ್ರದ್ಧೆಯೊಂದಿದ್ದರೆ ಎಂತಹಾ ಎಡೆಬಿಡದ ಕೆಲಸಗಳ ನಡುವೆಯೂ ಯೋಗಾಭ್ಯಾಸಕ್ಕೆ ಸಮಯ ಹೊಂದಿಸುವಂತೆ
ಮನಸ್ಸು ಪ್ರೇರೇಪಣೆಯನ್ನು ಕೊಡುತ್ತದೆ.ಮನಸ್ಸಿನಲ್ಲಿ ಯೋಗ ಜೀವನದ ಬಗೆಗಿನ ತುಡಿತವನ್ನು ಸದಾ
ಜಾಗೃತವಾಗಿಸುತ್ತದೆ.