Saturday, October 21, 2017

ಬೆನ್ನ ಹಿಂದಿನ ಪಟಾಕಿ



              ನಮ್ಮ ಬಾಲ್ಯದ ದಿನಗಳವು. ಎಪ್ಪತ್ತು ಎಂಭತ್ತರ ದಶಕದ ಒಳಗಿನ ದಿನಗಳು.  ಪೈವಳಿಕೆಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಿನಗಳು. ಹಲವಾರು ಬಾಡಿಗೆ ಮನೆಗಳು ವಿವಿಧ ವರ್ಗದ ವಿವಿಧ ಭಾಷೆಯ ಜನಗಳು ಒಟ್ಟಾಗಿ ಬದುಕುತ್ತಿದ್ದ ಪರಿಸರವದು. ಹಿಂದು ಮುಸ್ಲಿಂ ಕ್ರಿಶ್ಚನ್ ಹೀಗೆ ಯಾವುದೇ ಜಾತಿಗೂ ಸೀಮಿತವಾಗಿ ಉಳಿಯದ ಜನಗಳು ಅಲ್ಲಿದ್ದ ಎರಡು ಮೂರು ಕಟ್ಟಡಗಳಲ್ಲಿ ಒಂದಾಗಿ ವಾಸಿಸುತ್ತಿದ್ದರು. ಅದರಲ್ಲಿ ಸರಕಾರಿ ನೌಕರಿಂದ ತೊಡಗಿ ಕೃಷಿಕಾರ್ಮಿಕರು, ದಿನಗೂಲಿಗಳು ವ್ಯಾಪಾರಿಗಳು ಹೀಗೆ ವಿವಿಧ ವೃತ್ತಿಯ ಜನಗಳ ಸಾಮರಸ್ಯದ ವಾತಾವರಣ. ಆಗ ಹಲವು ಹಬ್ಬಗಳು ಬರುತ್ತಿದ್ದರು. ಎಲ್ಲ ಹಬ್ಬಗಳು ಬಂದಾಗಲೂ ನಮಗೆ ಶಾಲೆಗೆ ರಜವಿದ್ದುದರಿಂದ ಅದೊಂದು ಬಗೆಯಲ್ಲಿ ಮಜವಾಗಿಯೇ ಕಳೆಯುತ್ತಿದ್ದವು. ಯಾಕೆಂದರೆ ಅಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಕ್ಕಳೂ ಇರುತ್ತಿದ್ದರು. ಆಟವಾಡುವಾಗ ಎಲ್ಲಿಯ ಜಾತಿ? ಎಲ್ಲಿಯ ಪಂಗಡ? ಸಾಮಾನ್ಯ ಎಲ್ಲರೂ ಬಡವರ್ಗದ ಮಕ್ಕಳೇ ಆಗಿದ್ದರು. ಅಲ್ಲಿ ನೀರಿಗಾಗಿ ಸರಕಾರಿ ಬಾವಿ, ಸ್ನಾನಕ್ಕೆ ಸಾಮೂಹಿಕ ಕೆರೆ.  ಆಟವಾಡಲೂ ಸಾಮೂಹಿಕ ಮನೆಯ ಜಗಲಿ ಮನೆಯಂಗಳ. ಎಲ್ಲವೂ ಸಾಮೂಹಿಕವಾಗಿ ಮನೆಯೊಳಗೆ ಮಾತ್ರ ಖಾಸಗೀತನವಿರುತ್ತಿತ್ತು. ಅಲ್ಲಿಯೂ ಕೆಲವೊಮ್ಮೆ ಖಾಸಗೀತನ ಕಡಿಮೆಯಾಗುತ್ತಿದ್ದುದು ಸುಳ್ಳಲ್ಲ. 
ಹಬ್ಬಗಳು ಬಂದಾಗ ಅದರಲ್ಲೂ ದೀಪಾವಳಿ ಹಬ್ಬದ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಹಿಂದುಗಳ ವಿಶೇಷ ಹಬ್ಬ. ಅದರಲ್ಲು ತುಳುವರ ಭಾಷೆಯಲ್ಲಿ ಹೇಳುವುದಾದರೆ ’ಪರ್ಬ". ಬೇರೆ ಯಾವುದೇ ಹಬ್ಬಗಳಿದ್ದರೂ ದೀಪಾವಳಿಯನ್ನು ಮಾತ್ರವೇ ಪರ್ಬ ಅಂತ ಕರೆಯುವುದು.  ಎಷ್ಟೆ ಬಡತನವಿದ್ದರೂ ಒಂದಷ್ಟು ಸಿಹಿ ಅಡುಗೆ ಹೊಟ್ಟೆ ತುಂಬ ಊಟ  ದೇವರಿಗೆ ವಿಶೇಷ ಪೂಜೆ ಯಲ್ಲದೇ ಇದ್ದರೂ ವಿಶೇಷ ಭಜನೆ ಇದೆಲ್ಲದರ ನಡುವೆ ನಮಗೆ ವಿಶೇಷವಾಗಿ ಇದ್ದದ್ದು ಸಿಡಿ ಮದ್ದು ಪಟಾಕಿ ಸಿಡಿತ. ಹಾಗೋ ಹೀಗೋ ಹೊಂದಿಸುತ್ತಿದ್ದ ಎರಡು ಮೂರು ರೂಪಾಯಿಗೆ ಸಿಗುವ ಪಟಾಕಿ ತಂದು ಅದನ್ನು ಇನ್ನೆಲ್ಲಿ ಮುಗಿದು ಹೋಗುತ್ತದೋ ಅಂತ ಒಂದೊಂದನ್ನೆ ತಡರಾತ್ರಿವರೆಗೂ ಉರಿಸಿ ಮರುದಿನಕ್ಕೂ ಒಂದಿಷ್ಟು ಉಳಿಸುತ್ತಿದ್ದೆವು. ಒಂದು ಮನೆಗೆ ಪಟಾಕಿ ತಂದರೆ ಎಲ್ಲ ಮನೆಯ ಮಕ್ಕಳೂ ಬಂದು ಸೇರುತ್ತಿದ್ದುದು ಸಾಮಾನ್ಯ. ಮಾತ್ರವಲ್ಲ ಮಧ್ಯಾಹ್ನ ಪಟಾಕಿ ತಂದರೆ ರಾತ್ರಿಯಾಗುವ ಮೊದಲೇ ಪಟಾಕಿ ಉರಿಸುವಂತೆ ಒತ್ತಾಯ ಬೇರೆ. ಹಾಗೋ ಹೀಗೋ ರಾತ್ರಿಯಾಯಿತೋ ಒಂದು ಪಟಾಕಿ ಉರಿಸಲು ಹತ್ತು ಮಕ್ಕಳು ಸೇರುತ್ತಿದ್ದೆವು. ಅದರಲ್ಲಿ ಜಾತಿ ಭೇದವಿಲ್ಲ. 
ಮನೆಯ ಸಮೀಪ ಹಲವಾರು ಅಂಗಡಿಗಳಿದ್ದುವು. ಅಲ್ಲೂ ಅಷ್ಟೇ ಹಿಂದುಗದ್ದು ಮುಸ್ಲಿಂ ಹೀಗೆ ಹಲವು ಜನಗಳ ಅಂಗಡಿಗಳು ಹೋಟೇಲುಗಳು ಗೂಡಂಗಡಿಗಳು ಇದ್ದವು. ದೀಪಾವಳಿ ಬಂದಾಗ ಅಂಗಡಿ ಪೂಜೆಯ ಗಲಾಟೆ. ಕೆಲವು ಅಂಗಡಿಗಳಲ್ಲಿ ಮಾರಾಟಕ್ಕೆ ಅಂತ ಪಟಾಕಿ ತಂದಿರಿಸುತ್ತಿದ್ದರು. ಅಂಗಡಿ ಪೂಜೆಗೂ ಅದನ್ನೇ ಉರಿಸುತ್ತಿದ್ದರು. ಅಂಗಡಿಯಾತ  ಉಳಿದ ಪಟಾಕಿ ಎಲ್ಲ ಉರಿಸುವುದು ಎಂದು ಹೇಳಿದರೂ ಹಾಗೆ ಮಾಡುತ್ತಿರಲಿಲ್ಲ. ನಾವು ಕೊನೆಯದಿನ ಉಳಿದ ಎಲ್ಲ ಪಟಾಕಿ ಹೊಡೆಯುವ ಆಶೆ ನಿರೀಕ್ಷೆಯಲ್ಲೇ ಕಳೆಯುತ್ತಿದ್ದೆವು.   ಎಷ್ಟೇ ತಡ ಅಂತ ಹೇಳಿದರು ರಾತ್ರಿ ಎಂಟು ಗಂಟೆಗೆ ಅಂಗಡಿ ಬಜಾರ್ ಎಲ್ಲ ಬಾಗಿಲು ಹಾಕುತ್ತಿದ್ದವು. ಅಂಗಡಿ ಪೂಜೆ ಇದ್ದರೂ ಅಷ್ಟೇ. 

ಪಟಾಕಿ ಉರಿಸುವುದರಲ್ಲೂ ಅಷ್ಟೇ  ಆಗ ದೀಪಾವಳಿಗಷ್ಟೇ ಪಟಾಕಿ ಹೊಡೆಯುತ್ತಿದ್ದುದು.  ಉಳಿದಂತೆ ಕ್ರಿಶ್ಚನ್ ಕುಟುಂಬಗಳು ದೂರದ ಚರ್ಚ್ ನಲ್ಲಿ ಹೊಸ ವರ್ಷಾಚರೆಣೆಗೋ ಸಾಂತ್ ಮಾರಿಗೋ ಗೊತ್ತಿಲ್ಲ ಒಂದಷ್ಟು ಪಟಾಕಿ ಹೊಡೆಯುತ್ತಿದ್ದುದನ್ನು ಹೇಳಿದ್ದು ಕೇಳಿದ್ದೆ. ದೀಪಾವಳಿಗೆ ಪಟಾಕಿ ಹಿಂದುಗಳು ಹೊಡೆಯುತ್ತಿದ್ದಾಗ ವಠಾರದಲ್ಲಿದ್ದ ಮುಸ್ಲಿಂ ಮಕ್ಕಳು ದುಂಬಾಲು ಬಿದ್ದು ಪಟಾಕಿಯನ್ನು ಕೇಳಿ ಪಡೆದು ಇಲ್ಲವೇ ಅಂಗಡಿಯಿಂದ ತಂದು ಉರಿಸಿತ್ತಿದ್ದರು. ಅಲ್ಲಿ ಹಬ್ಬದ ಆಚರಣೆಗಿಂತಲೂ ಪಟಾಕಿ ಉರಿಸಿ ಆನಂದಿಸುವುದೇ ಮುಖ್ಯವಾಗಿರುತ್ತಿತ್ತು. ಅಂಗಡಿ ಪೂಜೆಯಾದಾಗಲೂ ಅಂಗಡಿಯಾತ ಒಂದಷ್ಟು ಓಲೆ ಪಟಾಕಿ , ಬೀಡಿ ಪಟಾಕಿ ದುರುಸು ಬಾಣಗಳನ್ನು ಮಕ್ಕಳ ಕೈಗೆ ಕೊಡುತ್ತಿದ್ದ. ಇಲ್ಲು ಅಷ್ಟೆ ಎಲ್ಲಾ ಜಾತಿಯ ಮಕ್ಕಳು ಸೇರುತ್ತಿದ್ದರು. ನಮಗಾದರೋ ಮನೆಯಲ್ಲಿ ಒಂದಷ್ಟು ಪಟಾಕಿ ದೀಪಾವಳಿ ಲೆಕ್ಕದಲ್ಲಿ ಉರಿಸುತ್ತಿದ್ದುದರಿಂದ ಅಂಗಡಿಯವರ ಪಟಾಕಿಗೆ ಕೈಯೊಡ್ಡುವ ಪ್ರಶ್ನೆ ಇರುತ್ತಿರಲಿಲ್ಲ. ಅದರೆ ಎಲ್ಲಾ ಮಕ್ಕಳಿಗೆ ಹಾಗಲ್ಲವಲ್ಲ? ದೀಪಾವಳಿ ಆಚರಣೆ ಕೇವಲ ಹಿಂದುಗಳ ಆಚರಣೆಯಾದುದರಿಂದಲೋ ಏನೋ ಬೇರೆ ಮಕ್ಕಳೂ ಆಶೆ ಕಣ್ಣುಗಳಿಂದ ನೋಡುತ್ತಿದ್ದರು. ಜತೆಯಲ್ಲೇ ಸೇರುತ್ತಿದ್ದವು.   ಕೆಲವು ಮಕ್ಕಳು    ಹತ್ತು ಪಟಾಕಿ ಕೊಟ್ಟರೆ ಎರಡು ಮೂರು ಪಟಾಕಿ ಹೊಡೆದು ಮಿಕ್ಕುಳಿದುದನ್ನು ಕಿಸೆಯೊಳಗೆ ಇರಿಸುತ್ತಿದ್ದರು. ಎಲ್ಲವೂ ಮಕ್ಕಳಾಟ.  ನಂತರ ಅಂಗಡಿಯಾತ ಪೂಜೆ ಎಲ್ಲ ಮುಗಿಸಿ ಅಂಗಡಿ ಮುಂಗಟ್ಟು ಎಲ್ಲ ಮುಚ್ಚಿ ಹೊದನಂತರ ತಡರಾತ್ರಿವರೆಗೂ ಮುಚ್ಚಿಟ್ಟು  ತಂದ ಪಟಾಕಿಯನ್ನು ಟಪ್ ಟಪ್   ಉರಿಸುತ್ತಿದ್ದರು.  ಇದನ್ನು ನಾವು ಎಷ್ಟೊ ಸಲ ಮಾಡಿದ್ದಿದೆ. 
ಆನಂತರ ಕಾಲ ಬದಲಾಯಿತು. ಹಿಂದುಗಳ ಅದೂ ದೀಪಾವಳಿಗಷ್ಟೇ ಸೀಮಿತವಾಗಿದ್ದ ಪಟಾಕಿ ನಂತರ ರಂಜಾನ್ ಬಕ್ರೀದ್ ಹಬ್ಬಗಳಂದೂ ಸದ್ದು ಮಾಡತೊಡಗಿದವು. ಪಟಾಕಿ ಸದ್ದಿನೊಂದಿಗೆ ಮಕ್ಕಳ ಕೇಕೆ ಸದ್ದು ಕೇಳಿಸತೊಡಗಿದವು. ಆನಂತರ  ದೀಪಾವಳಿ ಬಿಟ್ಟು ಎಲ್ಲ ಸಂದರ್ಭದಲ್ಲೂ ಪಟಾಕಿ ಉರಿಸುವುದನ್ನು ಕಂಡಿದ್ದೇವೆ. ಕ್ರಿಸ್ ಮಸ್ ಹೊಸ ವರ್ಷಾಚರಣೆಯಲ್ಲೂ ಪಟಾಕಿ ಸದ್ದು ಮಾಡುತ್ತದೆ.  ಹೆಚ್ಚೇಕೆ ದೂರದ ಶಾರ್ಜಾದಲ್ಲೋ ಇನ್ನೆಲ್ಲೋ ಭಾರತ ಪಾಕಿಸ್ತಾನ ಕ್ರಿಕೇಟ್ ಪಂದ್ಯವಾಗುತ್ತಿದ್ದರೆ,  ಭಾರತದ ಬ್ಯಾಟ್ಸ್ ಮನ್ ಗಳು  ಔಟಾಗುತ್ತಿದ್ದರೆ ಇಲ್ಲಿ ನಮ್ಮೂರಲ್ಲಿ ಪಟಾಕಿ ಉರಿಸಿ ಸಂಭ್ರಮಿಸುವುದನ್ನು ಕಣ್ಣಾರೆ ಕಂಡಿದ್ದೇವೆ.  ವಿಚಿತ್ರವೆಂದರೆ   ಪಟಾಕಿಯಲ್ಲೂ ಹಲವು ದುರಂತಗಳು ಅವಘಡ ಗಳು ಆಗಿರುವುದನ್ನು ಕಂಡಿದ್ದೇವೆ. ಕೇಳಿದ್ದೇವೆ. ಎಲ್ಲಕ್ಕಿಂತಲೂ ದೊಡ್ಡ ದುರಂತ ಎಂದರೆ ಈಗ...ಪಟಾಕಿ ಉರಿಸುವುದನ್ನು ಕೇವಲ ಹಿಂದುಗಳಿಗೆ ಸೀಮಿತವಾಗಿರಿಸಿ ಹಿಂದುಗಳನ್ನಷ್ಟೇ ಗುರಿಯಾಗಿಸುವುದು. ಇದಕ್ಕಿಂತ ದೊಡ್ಡ ವಿಪರ್ಯಾಸದ ದುರಂತ ಬೇರೆ ಇಲ್ಲ.  ಹಿಂದುಗಳ ಹಬ್ಬದಲ್ಲಿ ಆಚರಣೆಯಾಗುತ್ತಿದ್ದ ಪಟಾಕಿ ಸಿಡಿತ ರಂಜಾನ್ ನಲ್ಲೂ ಅನುಕರಣೆಯಾಗುತ್ತಿತ್ತು. ಕ್ರಿಸ್ಮಸ್ ನಲ್ಲೂ ಅನುಕರಣೆಯಾಗುತ್ತಿತ್ತು. ಇದನ್ನು ಅನುಕರಣೆ ಎಂದು ಹೇಳುವ ಹಾಗಿಲ್ಲ. ಅದು ಕೇವಲ ಒಂದು ಸಂಭ್ರಮಾಚರಣೆ. ಇಂದು ನಿಷೇಧಿಸುವುದಾದರೆ ಅಥವಾ ವಿರೋಧಿಸುವುದಾದರೆ ಈ ಎಲ್ಲ ಸಂಭ್ರಮಾಚರಣೆಯನ್ನೂ ಅದರಲ್ಲೂ ಪಾಕಿಸ್ತಾನ ಗೆಲ್ಲುವಾಗ ಇಲ್ಲಿ ಪಟಾಕಿ ಉರಿಸುವ ಸಂಭ್ರಮಾಚರಣೆಯನ್ನೂ ವಿರೋಧಿಸಬೇಕು. 
ಇದು ಯಾವುದೇ ಜಾತಿ ಪಂಗಡವನ್ನು ಉದ್ದೇಶಿಸಿಯಲ್ಲ. ಕೇವಲ ಸಮಾಜದ ವಕ್ರತೆಯನ್ನು ತೋರಿಸುವುದಷ್ಟೇ ಉದ್ದೇಶ. ನಿಷೇಧಿಸುವುದಿದ್ದರೆ ಪಟಾಕಿ ಉರಿಸುವುದನ್ನೇ ನಿಷೇಧಿಸಬೇಕು. ಅದರಲ್ಲೂ ನಗರದಲ್ಲಿ ಅದು ದೀಪಾವಳಿಗೆ ಮಾತ್ರವಲ್ಲ ಹೆಣ ಹೊತ್ತೊಯ್ಯುವಾಗ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡುವ ಪಟಾಕಿ ಉರಿಸುವುದನ್ನೂ ನಿಷೇಧಿಸಬೇಕು. ಹೊಸ ಸಿನಿಮಾ ಬಿಡುಗಡೆಯಾದಾಗ ಸಿನಿಮಾನಟ ಬಂದಾಗ, ಶತದಿನ ಆಚರಿಸುವಾಗಲೂ ಪಟಾಕಿ ನಿಷೇಧವಾಗಬೇಕು. ಎಲ್ಲಕ್ಕಿಂತ ಮೊದಲೂ ಜನ ನಾಯಕರು ಚುನಾವಣೆಯಲ್ಲಿ ಗೆದ್ದಾಗ  ಹೊಸ ಸರಕಾರ ರಚನೆಯಾದಾಗ, ಜನರಿಗೆ ವಂಚನೆ ಮಾಡಿ ಜೈಲಿಗೆ ಹೋಗಿ ಬೇಲ್ ಮೇಲೆ ಬಿಡುಗಡೆಯಾಗುವಾಗಲೂ  ಪಟಾಕಿ ಉರಿಸುವುದನ್ನು ಮೊದಲು ನಿಷೇಧಿಸಬೇಕು. ಇದಕ್ಕೆ ಜಾತಿ ಭೇದ ಸಲ್ಲದು. ಎಲ್ಲಕ್ಕಿಂತ ಮೊದಲಾಗಿ ಪಟಾಕಿ ಎಂದೊಡನೆ ಹಿಂದುಗಳನ್ನು ಗುರಿಯಾಗಿಸುವುದು ನಿಲ್ಲಬೇಕು. ಹೀಗೆ ಬೆನ್ನಿನ ಹಿಂದೆ ಪಟಾಕಿ ಉರಿಸಿ ಅಂದ ನೋಡುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. 

No comments:

Post a Comment