Tuesday, October 17, 2017

ಹೊಟ್ಟೆ ಬಟ್ಟೆಯ ನಡುವೆ

ಮಂಗಳೂರು ಎಕ್ಸ್ ಪ್ರೆಸ್ ಹಾಗೋ ಹೀಗೋ ಕ್ರಾಸಿಂಗ್ ಎಂಬ ಬಾಧೆಗಳನ್ನು ಕಳೆದು ಬೆಂಗಳೂರಿನ  ಸಿಟೀ ರೈಲ್ವೇ ಸ್ಟೇಷನ್ ನ ಐದನೇ ಪ್ಲಾಟ್ ಫಾರಂಗೆ ಬಂದು ನಿಂತಿತು. ಕೊಂಕಣ ಸುತ್ತಿ ಮೈಲಾರಕ್ಕೆ ಎಂಬ ಹಾಗೆ,  ಕೊಂಕಣದಿಂದ ಘಟ್ಟ ಹತ್ತುವುದಾದರೂ ಸುತ್ತು ಹೊಡೆದು ಬರುವಲ್ಲಿ ರೈಲು ಬಹಳ ತಡವಾಗಿತ್ತು. ಭಟ್ಟರು ಬಸ್ ನಲ್ಲಿ ಬರುವವರಿದ್ದರೂ ಮಗಳು ರೈಲಿನಲ್ಲಿ ಒತ್ತಾಯದಿಂದ ಬರುವಂತೆ ಹೇಳಿದ್ದಳು. ವಯಸ್ಸಾಗಿದ್ದುದರಿಂದಲೂ ರೈಲು ಪ್ರಯಾಣವೇ ಸೂಕ್ತ ಎಂದುಕೊಂಡು ರೈಲು ಹತ್ತಿದ್ದರು. ಆದರೆ ತಡವಾಗಿ ಹೋದಾಗ ಸ್ವಲ್ಪ ಆತಂಕವಾಗಿದ್ದರೂ ಅದುವರೆಗಿನ್ ಸುಖವಾದ ಪ್ರಯಾಣ ನೆನಸಿ ಮನಸ್ಸು ಹಗುರಾಯಿತು. ರೈಲು ಪ್ಲಾಟ್ ಫಾರಂ ತುದಿಯಲ್ಲಿ ಹೊಕ್ಕುವ ಮೊದಲೇ  ಇಳಿಯುವವರು ಬ್ಯಾಗ್ ಮಕ್ಕಳೊಂದಿಗೆ ಬಾಗಿಲ ಬಳಿ ಗುಂಪುಗೂಡಿದ್ದರು. ರೈಲು ಹತ್ತಿದ ಒಡನೆ ತಮ್ಮ ಸೀಟನ್ನು ಹಿಡಿಯುವ ತವಕ. ಸೀಟು ಸಿಕ್ಕ ಒಡನೇ ಅದು ತಮ್ಮ ವಂಶಪರಂಪರೆಯ ಸೊತ್ತೋ ಎನ್ನುವ ಮೋಹ. ಇದೀಗ ಇಳಿದು ಹೋಗುವಾಗ ಕುಳಿತ ಆಸನ ತಿರುಗಿ ನೋಡದಷ್ಟು ನಿರ್ಲಿಪ್ತತೆ.
ಎಲ್ಲರೂ ಇಳಿದ ನಂತರ ಭಟ್ಟರು ತಾಳ್ಮೆಯಿಂದ ರೈಲು ಇಳಿದರು. ಕೈಯಲ್ಲಿ ಒಂದು ಕೈಚೀಲ ಹೆಗಲಲ್ಲಿ ಒಂದು ಬ್ಯಾಗ್. ಮಗಳ ಮನೆಗೆ ಹೋಗುವುದರಿಂದ ಹೆಚ್ಚೇನು ಬಟ್ಟೆಗಳ ಅವಶ್ಯವಿಲ್ಲದೇ ಬ್ಯಾಗ್  ಚಿಕ್ಕದೇ ಹಿಡಿದಿದ್ದರು. ಆದರೆ ಹೆಂಡತಿ ಕಟ್ಟಿಕೊಟ್ಟ ಪುಡಿ, ಮಿಡಿ ಉಪ್ಪಿನಕಾಯಿಗಳಿಂದ ಕೈಚೀಲ ತುಂಬಿ ಹೋಗಿತ್ತು. ಹಲಸಿನ ಹಣ್ಣಿನ ಸೊಳೆಯೂ ಇದೆ ಎಂದು ರಾತ್ರಿ ಘಮ್ಮೆನಿಸುವಾಗಲೇ ಅರಿವಾದದ್ದು ಹಾಗೆ ಹೀಗೆ ಎಂದರೂ ತುಸು ಭಾರ ಹೆಚ್ಚಿದಂತೆ ಅನಿಸಿತು..   ಆದರೂ ನಿಧಾನವಾಗಿ ಹಿಡಿದು ಹೊರಗೆ ಹೆಜ್ಜೆ ಹಾಕಿದಾಗ ಭೋಗಿಯಲ್ಲಿ ಜತೆಗೇ ಇದ್ದ ಯುವಕನೊಬ್ಬ ತನ್ನ ಕೈಚೀಲ ಹಿಡಿದುಕೊಂಡು ಸಹಾಯ ಹಸ್ತ ನೀಡಿದ. ಸಂತೋಷದಿಂದ ಆತನ ಹಿಂದೆ ಹೆಜ್ಜೆ ಹಾಕಿ ಹೊರ ಬಂದರು. ಮೊದಲು ಆತ ಕೂಲಿಯವನೋ ಎಂದು ಗಾಬರಿಯಾಯಿತು. ನಂತರ ಭೋಗಿಯಲ್ಲಿ ಪಕ್ಕದ ಸೀಟಲ್ಲಿ ಕಂಡ ಮುಖ. ಬೆಂಗಳೂರಿಗೆ ಹಲವು ಸಲ ಬಂದಿದ್ದರೂ ಈ ರೀತಿ ಅನುಭವ ಆಗಿರಲಿಲ್ಲ. ಎನೇ ಆದರೂ ಊರಿನ ಜನ ಊರಿನ ಜನವೇ ಎಂದುಕೊಂಡರು.
ಎಲ್ಲಿ ನಿಮ್ಮ ಊರು? ಅಂತ ಕೇಳಿದರು....” ಬಟ್ರೆ ಎನ್ನ ಪುತ್ತೂರು...” ಅಂತ ಸಾಕ್ಷಿ ಒದಗಿಸುವುದಕ್ಕೆ ಮತ್ತು ನಿಮ್ಮವನು ಎನ್ನುವುದಕ್ಕೆ ತುಳುವಿನಲ್ಲೇ  ರಾಗ ಎಳೆದ ಯುವಕ. ಮುಖನೋಡಿ ಬಟ್ರೆ ಅಂತ ಹೇಳಿದಾಗ ಮಂದ ಹಾಸ ಮೂಡಿತು. ಹಾಗೇ ಅದು ಇದು ಮಾತನಾಡುತ್ತಾ ನಿಲ್ದಾಣ ಪ್ರವೇಶ ದ್ವಾರಕ್ಕೆ ಬಂದು ನಿಂತರು. ಆತ ಬ್ಯಾಗ್ ಅಲ್ಲಿ ಇಟ್ಟು “ ಒಂತೆ ಅರ್ಜಂಟ್ ಉಂಡು ತೂಕ ...”  ಅಂತ ಹೇಳಿ ಹೋದ. ಭಟ್ಟರು ಒಂದು ಸಲ ಸುತ್ತಲೂ ನೋಡಿದರು. ಅಟೋ ಡ್ರೈವರ್ ಒಬ್ಬ ಹತ್ತಿರ ಬಂದು ಎಲ್ಲಿಗೆ ಸಾರ್? ಆಟೋಬೇಕಾ ?” ಅಂತ ದುಂಬಾಲು ಬಿದ್ದ. ಚಾಮರಾಜ ಪೇಟೆಆಶ್ರಮಅಂತ ಹೇಳಿದಾಗ ಬನ್ನಿ ಬನ್ನಿ ಅಂತ ಕರೆದು ಕೊಂಡು ಹೋಗಿ ದೂರದಲ್ಲಿ ಗುಂಪಿನಲ್ಲಿ ಇದ್ದ ಯಾವುದೋ ಆಟೋದಲ್ಲಿ ಕೂರಿಸಿದ. ಮಗಳು ಬರುತ್ತಿದ್ದಳೋ ಏನೋ? ಅಂದುಕೊಂಡರು ಬೆಳಗಿನ ಹೊತ್ತಿನ ಆಕೆಯ ಗಡಿಬಿಡಿ ನೆನಸಿ ನಾನೇ ಬರುತ್ತೇನೆ ಎಂದಿದ್ದರು.
ಆಟೋ ಸ್ಟಾರ್ಟ್ ಮಾಡಬೇಕಾದರೆ ಏಷ್ಟಾಗ್ತದೆ? ಅಂತ ಖಾತರಿ ಪಡಿಸುವುದಕ್ಕೆ ಕೇಳಿದರು. “ ನೂರೈವತ್ಟು ಕೋಡಿ ಸಾರ್ಭಟ್ಟರು ಚೌಕಾಶಿಗೆ ಇಳಿಯಲಿಲ್ಲ. ಆಟೋ ಸ್ಟಾರ್ಟ್ ಆದಕೂಡಲೇ ಬಾಹುಕನ ರಥದಂತೆ ಹಾರತೊಡಗಿತು. ಹೋಗುತ್ತಲೇ ಕೇಳಿದಯಾವೂರು ಸಾರ್ ತಮ್ಮದು. ಮಂಗಳೂರಾಅಂದ. ಭಟ್ಟರು ಹೂಂ ಗುಟ್ಟಿದರು.ಹತ್ತು ನಿಮಿಷದಲ್ಲಿ ಬುಲ್ ಟೆಂಪಲ್ ರಸ್ತೆಗೆ ಬಂದು ಮುಟ್ಟಿತು. ಆಶ್ರಮ ಮುಟ್ಟುತ್ತಿದ್ದಂತೆ ದಾರಿ ಹೇಳುತ್ತಾ ಹೋದರು. ಮುಂದೆ ಹೋಗಿ ಬಲಕ್ಕೆ ತಿರುಗಿ ಎಡಕ್ಕೆ ಹೀಗೆ ಹೇಳುತ್ತಾ ಮಗಳ ಮನೆಯ ಬಳಿಗೆ ಬಂದಾಯಿತು. ಬ್ಯಾಗ್ ಚೀಲ ತೆಗೆದು ಕೆಳಗಿರಿಸಿ ಕಿಸೆಯಿಂದ ನೂರೈವತ್ತು ತೆಗೆದು ಕೈಗೆ ಇರಿಸಿದಾಗ ಆತ ರಾಗ ಎಳೆದ….” ಸಾರ್ ನೂರೈವತ್ತು ಸಾಲಲ್ಲ. ಇನ್ನೊಂದು ಇಪ್ಪತ್ತು ಕೊಡಿ.”ಇಷ್ಟು ದೂರ ಬಂದೆ.” ಅಂತ ಗೊಣಗುವುದಕ್ಕೆ ಶುರು ಹಚ್ಚಿದ. ಬೆಳಗ್ಗೆ ಬೆಳಗ್ಗೆ ಚರ್ಚೆ ಯಾಗೆ ಅಂತ ಇಪ್ಪತ್ತು ಸೇರಿಸಿ ಕೊಟ್ಟು ಆಟೋದಿಂದ ಕೆಳಗಿಳಿದರು.
ಕೈ ಚೀಲ ಭಾರವಾಗಿತ್ತು. ಆಟೊ ಡ್ರೈವರ್ ಗೆ ಅದೇನೂ ಕಂಡಿತೋ, “ಎಲ್ಲಿ ಸಾರ್ ಮನೆ ಅಂತ ಕೇಳಿದ.” ಹತ್ತಿಪ್ಪತ್ತು ಹೆಜ್ಜೆ ದೂರ ಇದ್ದ ಮನೆ ತೋರಿಸಿದರು. “ಇಲ್ಲಿಕೊಡಿ ಸಾರ್”  ಅಂತ ಕೈ ಚೀಲ ಹೊತ್ತುಕೊಂಡು ಮನೆಯವರೆಗೂ ಹಿಂಬಾಲಿಸಿದ.  ಬಹುಶಃ ಕೇಳಿದ ದುಡ್ಡು ಕೊಟ್ಟಿದ್ದಕ್ಕೋ ಏನೋ?
ಮನೆ ಒಳಗೆ ಹೋದವರೆ ಬಟ್ಟರು ಚಾಲಕನನ್ನು ಒಳಗೆ ಕರೆದರು “ ಬಾರಪ್ಪ ...ಇಲ್ಲಿ ಇಡು “ ಆತ ಇನ್ನೇನು ಹೊರಡುವುದರಲ್ಲಿದ್ದಾಗ “ ಇರಪ್ಪ ಮೊದಲು ಮನೆಗೆ ಬಂದಿದ್ದಿಯಾ ಇರು.. ಎಂದು ಅಲ್ಲೇ ಇದ್ದ ಚೆಯರ್ ತಳ್ಳಿ ಕೂರಿಸಿದರು. ಚಾಲಕ ತಬ್ಬಿಬ್ಬಾದ. ಆದರೂ ಅದೇನೋ ಸುತ್ತ ಮುತ್ತ ನೋಡಿ ಕುಳಿತಾಗ ಭಟ್ಟರು ಒಳಗೆ ಹೋಗಿ ಅದೇನೋ ಹೇಳಿದರೋ ಮಗಳು ತಟ್ಟೆಯಲ್ಲಿ ಬಿಸಿ ದೋಸೆ..ಚಟ್ನಿ ಒಂದು ಲೋಟ ನೀರು ತಂದಿರಿಸಿದಳು. ಚಾಲಕ ಮತ್ತೂ ಅಚ್ಚರಿಯಿಂದ ನೋಡಿದ. ಭಟ್ಟರೆಂದರು “..ತಗೊಳ್ಳಪ್ಪಾ. ಮೊದಲ ಸಲ ಮನೆಗೆ ಬಂದಿದ್ದಿಯಾ ಹಾಗೇ ಹೋಗಬರಾದು. ತಗೋ” ಚಾಲಕನಿಗೆ ನಂಬಲಾಗಲಿಲ್ಲ. ಸಂಕೋಚದಿಂದಲೇ ಮೊದಲು ನೀರು ಖಾಲಿ ಮಾಡಿಬಿಟ್ಟ. ದೋಸೆ ತುಂಡು ಬಾಯಿಗಿಡುತ್ತಲೇ ಲೋಟತುಂಬ ಕಾಪಿಯೂ ಬಂತು. ನಿಜಕ್ಕು ತಲೆ ತಿರುಗುವ ಪರಿಸ್ಥಿತಿ ಆಟೋ ಚಾಲಕನದ್ದು. ಇದುವರೆಗೆ ಆತನ ಬಾಡಿಗೆ ಕೇಳಿ ಮೂರ್ಛೆ ಹೋದವರಿದ್ದರೋ ಏನೋ ಇದೀಗ ಆತನ ಸರದಿ. ಆತ ತಿನ್ನುತ್ತಿದ್ದಂತೆ ಭಟ್ಟರು ಹೇಳಿದರು ನಮ್ಮಲ್ಲಿ ಮನೆಗೆ ಬಂದವರನ್ನು ಹಾಗೆ ಖಾಲಿ ಹೊಟ್ಟೆಯಲ್ಲಿ ಕಳಿಸುದಿಲ್ಲ.  ಅಟೋ ಚಾಲಕ ಹಾಂ ಹೂಂ ಇಷ್ಟನ್ನೇ ಹೇಳಿ. ಗಬ ಗಬ ತಿಂದ. ಬೆಳಗಿನಿಂದಲೂ ಎನೂ ತಿನ್ನದವರಂತೆ ತಿಂದು ಕಾಪಿ ಕುಡಿದ. ತಟ್ಟೆ ಲೋಟ ಎತ್ತಿ ತೋರಿಸಿದ. ಭಟ್ಟರು ಅಲ್ಲಿರಲಿ. ಕೈ ತೊಳೆಯುವ ಜಾಗ ತೋರಿದರು. ಕೈತೊಳೆದು ಮುಖ ಬಾಯಿ ಉಜ್ಜಿಕೊಳ್ಳುತ್ತಾ   " ಬರ್ಲಾ ಸಾರ್ " ಅಂತ ಹೋರಗೆ ನಡೇದು ರಸ್ತೆಗೆ ಕಾಲಿಟ್ಟು ಏನೋ ಯೋಚಿಸಿದ. ಹಾಗೆ ನಿಧಾನವಾಗಿ ಬಂದು ಭಟ್ಟರ ಕೈಗೆ ನೂರು ರೂಪಾಯಿ ಕೊಡುತ್ತಾ ಹೇಳಿದ.

" ಸರ್ , ಆಟೋ ಚಾರ್ಚ್ ಅಲ್ಲಿಂದ ಇಲ್ಲಿವರೆಗೆ ನ್ಯಾಯವಾಗಿ  ಎಪ್ಪತ್ತೇ ರೂಪಾಯಿ ಸಾರ್.  ಏನೋ ತಪ್ಪು ಮಾಡಿಬಿಟ್ಟೆ ಹೆಚ್ಚು ತಗೊಂಡೆ. ಅದು ಬೇಡ ಸರ್ ಅದೂ ನಿಮ್ಮಂಥವರಿಂದ ತೆಗೊಂಡ್ರೆ ದೇವರು ಮೆಚ್ಚಲ್ಲ. ಈ ದುಡ್ಡು ಮನೆಗೆ ತಗೊಂಡು ಹೋಗಿ ನನ್ನ ಮಕ್ಕಳು ತಿಂದರೂ ಉದ್ದಾರ ಆಗಲ್ಲ ಸರ್ ತಗೋಳಿ  ಏನೋ ಸರ್ ಹೊಟ್ಟೆಗೆ ತುತ್ತು ನಿಮ್ಮ ಕೈಯಿಂದ ತಿಂದರೆ ಅದೇ ಹೊಟ್ಟೆ ಪಾಡಿನ ದುಡಿಮೆ ನಮ್ಮದು ನಿಮ್ಮಂಥೋರು ಇನ್ನೂ ಹುಟ್ಟಿ ಬರಬೇಕು ಸಾರ್"

ಅಂತ ಭಟ್ಟರ ಕೈಯಲ್ಲಿರಿಸಿದ.       

ನಂತರ ಕಾಲು ಮುಟ್ಟಿ ನಮಸ್ಕರಿಸಿ

" ಸರ್ ಆಶಿರ್ವಾದ ಮಾಡಿ ಸರ್.  ನೀವು ತಂದೆ ಸಮ"
ಕಾಲು ಮುಟ್ಟಿದವನೇ ಹಾಗೆ ಎದ್ದು ನಿಧಾನವಾಗಿ ಅಟೋದೆಡೆಗೆ ನಡೆದು ಹೋದ.

ಇದನ್ನು ಕಥೆಯಾಗಿ ಸ್ವೀಕರಿಸುವುದೋ   ಘಟನೆಯಾಗಿ ಸ್ವೀಕರಿಸುವುದೋ ಓದುಗನ ತೀರ್ಮಾನ.  ಇದು ಹೊಟ್ಟೆ ಬಟ್ಟೆಯ ನಡುವಿನ ಜೀವನ




No comments:

Post a Comment