Saturday, September 29, 2018

ನಮ್ಮ ಬೋಳಂಗಳ


        
            ಪರಮಾತ್ಮನ ನಿಯಮಗಳಿಗೆ ಮನುಷ್ಯ ಬದ್ದನಾಗಿರುತ್ತಾನೋ ಹೇಳುವುದು ಕಷ್ಟ,   ಆದರೆ ಪರಮಾತ್ಮನನ್ನೇ ತನ್ನ ನಿಯಮಗಳಿಗೆ ಒಳಪಡುವಂತೆ ಮಾಡುವಲ್ಲಿ ಮನುಷ್ಯ ಪ್ರಯತ್ನ ನಿರಂತರವಾಗಿರುತ್ತದೆ.  ಒಂದು ಸೇರು ಅನ್ನ ಕೊಡುವಲ್ಲಿ ಒಂದು ಮುಷ್ಟಿ ಅಕ್ಕಿ ಕೊಟ್ಟು ಪರಮಾತ್ಮನನ್ನು ತೃಪ್ತಿ ಪಡಿಸಿ ತಾನು ತೃಪ್ತನಾಗುವಾಗ ಮನುಷ್ಯ ಯೋಚಿಸುವುದು ಎಲ್ಲದಕ್ಕಿಂತಲೂ ಭಕ್ತಿ ಮುಖ್ಯ. ಹಲವು ಸಲ ತನ್ನಲ್ಲಿಲ್ಲದ ವಸ್ತುವಿನ ಮೇಲೆ ಮನುಷ್ಯನಿಗೆ ಅಚಲ ವಿಶ್ವಾಸ.  ಹಾಗಾಗಿ ಭಕ್ತಿಭಾವ ಇಲ್ಲದವನೂ ಸಹ  ಭಕ್ತಿಯೇ ಮುಖ್ಯ ಎಂದುಕೊಂಡು ಒಂದು ಮುಷ್ಟಿ ಅಕ್ಕಿ ಇಟ್ಟು ಭಗವಂತ ನನ್ನಿಂದ ಇಷ್ಟೇ ಸಾಧ್ಯ ಎಂದು ಪರಮಾತ್ಮನನ್ನು ತನ್ನ ನಿಯಮಗಳಿಗೆ ಒಳಪಡಿಸುತ್ತಾನೆ. ದೇವರೇನು ಬಂದು ನಿಂತು ನ್ಯಾಯ ಕೇಳುವುದಿಲ್ಲ. ಆದರೆ ಮನುಷ್ಯ ತನ್ನ ಜೀವನಾನುಭವದಿಂದ ನ್ಯಾಯ ಅನ್ಯಾಯ  ತನ್ನ ತಿಳುವಳಿಕೆಯಲ್ಲಿ ಕಂಡುಕೊಳ್ಳುತ್ತಾನೆ.  ಭಕ್ತಿ ಎಂಬುದು ಆಳ ಅಗಲ ವಿಸ್ತಾರ ವರಿಯದ ಒಂದು ಭಾವ. ಅದರ ಪರೀಕ್ಷೆಯಿರುವು ಅಂತರಂಗದಲ್ಲಿರುವ ಪ್ರಾಮಾಣಿಕತೆಯಲ್ಲಿ
  ಬೋಳಂಗಳ ಭೂತಸ್ಥಾನ  ಚಿತ್ರ ಕೃಪೆ ಹರ್ಷರಾಜ್ 
ಮಾತ್ರ. ಹಾಗೆ ನೋಡಿದರೆ ಭಗವದ್ಗೀತೆಯಲ್ಲಿ ಪರಮಾತ್ಮ ಹೇಳುತ್ತಾನೆ. ಯಾವುದೇ ಭಾವವಿಲ್ಲದೆ ಉದ್ವೇಗ ದುಃಖ ಸಂತೋಷ ರಹಿತ ಮನಸ್ಸಿನಿಂದ ಆರಾಧಿಸಿದಲ್ಲಿ ಮಾತ್ರವೇ ಅಲ್ಲಿ ನನ್ನ ಅನುಗ್ರಹವಿರುತ್ತದೆ. ಭಕ್ತಿ ಭಾವ ಅತಿಯಾಗಿ ಉದ್ವೇಗದಿಂದ ಕಣ್ಣೀರು ಹಾಕಿ ಪರಮಾತ್ಮನಿಗೆ ನಮಸ್ಕರಿಸಿದರೂ ಅದು ಭಕ್ತಿಯೂ ಆಗುವುದಿಲ್ಲ. ನಿಜಾರ್ಥದ ಪರಮಾತ್ಮನ ಸಾಕ್ಷಾತ್ಕರವೂ ಸಾಧ್ಯವಾಗುವುದಿಲ್ಲ.

            ನಮ್ಮೂರು ಪೈವಳಿಕೆ ಗ್ರಾಮದಲ್ಲಿ ಚಿಕ್ಕ ಹಳ್ಳಿಯೊಂದಿದೆ. ಬೋಳಂಗಳ. ಹೆಸರೇ ಸೂಚಿಸುವಂತೆ ಇಲ್ಲಿ ಜನವಾಸವಿಲ್ಲ. ಬೋಳಾದ ದೊಡ್ಡ ಮೈದಾನದಂತಹ ಪ್ರದೇಶ ಅದರಂಚಿಗೆ ತಾಗಿಕೊಂಡಂತೆ ಒಂದು ಭೂತಸ್ಥಾನ. ತೀರ ನಿರ್ಜನ ಪ್ರದೇಶ. ಆಕಡೆ ಈಕಡೆ ಅಡ್ಡಾಡುವವರೂ ಸಹ ಸಿಗುವುದು ಕಡಿಮೆ. ಎಂದಾದರೊಮ್ಮೆ ಇಲ್ಲಿರುವ ಕಾಣಿಕೆ ಡಬ್ಬಿಗೆ ಹರಕೆ ಒಪ್ಪಿಸಲು ಕೆಲವರು ಬರುವುದುಂಟು.  ಅತ್ಯಂತ ಪುರಾತನ ಭೂತಸ್ಥಾನ. ಇದರ ಐತಿಹ್ಯ ಚರಿತ್ರೆಯ ಬಗ್ಗೆ ಅರಿವಿರದಿದ್ದರೂ ಬಾಲ್ಯದಿಂದಲೇ ನಮಗೆ ಭೂತ ಎಂದರೆ ಭಯ ಭಕ್ತಿಯನ್ನು ಹುಟ್ಟುಹಾಕಿಸಿದಂತಹ ಸ್ಥಳವಿದು.  ಉಪ್ಪಳ ಕನ್ಯಾನ ರಸ್ತೆಯಲ್ಲಿ ಕವಲೊಡೆಯುವ ಚಿಪ್ಪಾರು ರಸ್ತೆಯ ಒತ್ತಿನಲ್ಲೇ ಈ ಕ್ಶೇತ್ರ ಸಿಗುತ್ತದೆ.  ಬೋಳಂಗಳವಾದರೂ ಇದು ನಯನ ಮನೋಹರ ಜಾಗವೆಂಬುದರಲ್ಲಿ ಅನುಮಾನವಿಲ್ಲ. ಸಾಯಂಕಲ ಇಲ್ಲ ಮುಂಜಾನೆ ಹೊತ್ತು ಇಲ್ಲಿ ಹೋಗಿ ಪಕ್ಕದಲ್ಲೇ ಇರುವ ಗುಡ್ಡದ ತುದಿಯಲ್ಲಿ ನಿಂತು ದೂರದ ಪಡುವಣ ಕಡಲನ್ನು ಕಾಣುವಾಗ ನಿಜಕ್ಕೂ ಇಲ್ಲಿ ಪರಮಾತ್ಮನ  ಪ್ರಕೃತಿಯ ಅಸ್ತಿತ್ವ ಇದೆ ಅಂತ ಅನ್ನಿಸುತ್ತದೆ.  ಅದು ಭಾವಜೀವಿಗಳಿಗಾದರೆ ಜನ ಸಾಮಾನ್ಯರಿಗೆ ಇರುವ ವಿಶೇಷ ಒಂದಿದೆ.  ಇಲ್ಲಿ ವರ್ಷಕ್ಕೊಮ್ಮೆ ನೇಮ (ಉತ್ಸವ) ಬಿಟ್ಟರೆ ಬಹುತೇಕ ಇಲ್ಲಿ ಚಟುವಟಿಕೆಗಳೇ ಇರುವುದಿಲ್ಲ. ಆದರೂ ಈ ಕ್ಷೇತ್ರದ ಬಗ್ಗೆ ಊರ ಪರ ಊರಿನವರು ಇರಿಸಿಕೊಂಡ ವಿಶ್ವಾಸ ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಜಾತಿ ಭೇದವಿಲ್ಲದೆ  ಈ ವಿಶ್ವಾಸ ಇಂದಿಗೂ ನೆಲೆ ನಿಂತಿದೆ. ಅದಕ್ಕೊಂದು ನಿದರ್ಶನವಿದೆ.

            ಬಾಲ್ಯದಲ್ಲಿರುವಾಗ ಭೂತ ಎಂದರೇನು ಎಂಬ ಪ್ರಶ್ನೆಗೆ ನಮಗೆ ಉತ್ತರವಾದದ್ದು ಈ ಬೋಳಂಗಳದ ದೈವ.  ಇದರ ಉತ್ಸವವೂ ಬಹಳ ವಿಚಿತ್ರ. ಇದು ವರ್ಷಕ್ಕೊಮ್ಮೆ ಸಾಮಾನ್ಯವಾಗಿ ಪೆಬ್ರವರಿ ತಿಂಗಳಲ್ಲಿ ಜರಗುತ್ತದೆ. ಊರ ಉತ್ಸವವಾದರೂ ಇದರ ಸರಳತೆ ಅತ್ಯಂತ ವಿಶಿಷ್ಟ. ಎಲ್ಲ ಭೂತ ನೇಮದಂತೆ ಇದಲ್ಲ. ಸಾಯಂಕಾಲ ನಾಲ್ಕುಘಂಟೆಯ ಸುಮಾರಿಗೆ ಆರಂಭವಾಗುವ ಉತ್ಸವ ಸೂರ್ಯಾಸ್ತವಾಗುತ್ತಿದ್ದಂತೆ ಮುಗಿದು ಹೋಗುತ್ತದೆ. ಕೆಲವೇ ಘಳಿಗೆಗಳಷ್ಟು ಹೊತ್ತು ನಡೆಯುವ ಈ ಊರ ಜಾತ್ರೆ ಅತ್ಯಂತ ವಿಶಿಷ್ಟವಾಗುವುದು ಇನ್ನೊಂದು ವಿಚಾರಕ್ಕೆಕ್. ಇದು ಅತ್ಯಂತ ರೋಚಕ ವಿಷಯ. ಬಹುಶಃ ಇದುವೇ  ಬೋಳಂಗಳದ ವಿಶೇಷ ಮತ್ತು ವಿಚಿತ್ರ .
           
            ಉತ್ಸವದ ದಿನ ಮಧ್ಯಾನದ ಸುಡು ಬಿಸಿಲು ಕಡಿಮೆಯಾಗುತ್ತಿದ್ದಂತೆ ಅಕ್ಕ ಪಕ್ಕದ ಊರವರು ಬೋಳಂಗಳದತ್ತ ಆಗಮಿಸುತ್ತಾರೆ. ಸರಿ ಸುಮಾರು ಐನೂರು ಜನ ಸೇರಬಹುದೇನೋ. ಇಲ್ಲಿರುವುದು ಸಣ್ಣದಾದ ಒಂದು ಅವರಣ ಅದರೊಳಗೊಂದು ಗುಡಿ. ಗುಡಿ ಬಹಳ ಹಳೆಯದಾಗಿದೆ. ಸ್ವಲ್ಪ ಶಿಥಿಲವೂ ಆಗಿದೆ.  ಸಾಯಂಕಾಲವಾಗುತ್ತಿದ್ದಂತೆ  ಸಂತೆ ಇಡುವವರು ಜಾತ್ರೆಗೆ ಸೇರುವ ಊರವರು ಬ್ಯಾಂಡು ವಾದ್ಯದ ಗದ್ದಲ ಇಷ್ಟರಲ್ಲೇ ಭೂತದ ನೇಮ ಮುಗಿದು ಹೋದರು ಜನರ ಭಕ್ತಿ ವಿಶ್ವಾಸ ಇದಕ್ಕಿಂತಲೂ ಮಿಕ್ಕಿ ಅಗಾಧವಾದೆ. ಶುರುವಾಗಿ ಕೇವಲ ಎರಡು ಮೂರು ಘಂಟೆಯಲ್ಲಿ ಮುಗಿಯುವ ಉತ್ಸವ ಇಷ್ಟಕ್ಕೆ ಇದರ ಮಹತ್ವ ಸೀಮಿತವಾಗುವುದಿಲ್ಲ. ಇಲ್ಲಿರುವ ಮತ್ತೊಂದು ವಿಚಿತ್ರವೆಂದರೆ ಈಗಿನ ಕಾಲದಲ್ಲೂ ಇದನ್ನು ನಂಬುವುದು ಕಷ್ಟ ಆದರೂ ಇದು ಅಸ್ತಿತ್ವದಲ್ಲಿದೆ.
           
            ಕೆಲವು ಘಳಿಗೆಯ ಉತ್ಸವಕ್ಕೆ ಹೆಂಗಸರು ಅಂದರೆ ಸ್ತ್ರೀಯರು ಹೋಗುವಂತಿಲ್ಲ. ಯಾರೂ ಸಹ ಹೋಗುವುದೂ ಇಲ್ಲ. ಈ ಭೂತದ ನೇಮೋತ್ಸವವನ್ನು ಹೆಂಗಸರು ಹೆಣ್ಣು ಮಕ್ಕಳು ನೋಡುವಂತಿಲ್ಲ. ಹಾಗಾಗಿ ಇಲ್ಲಿ ಕೇವಲ ಪುರುಷರು ಮಾತ್ರವೇ ಬರುತ್ತಾರೆ. ಇದು ಕೇವಲ ಹಿಂದುಗಳ ನಂಬಿಕೆಯಲ್ಲ ಮುಸ್ಲಿಮ್  ಕ್ರಿಶ್ಚನ್ ಎಲ್ಲರೂ ಭಯ ಭಕ್ತಿಯಿಂದ  ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿಯೆ ಉತ್ಸವದ ದಿನ ಬೆಳಗ್ಗಿನಿಂದಲೆ ಇಲ್ಲೇ ಹಾದು ಹೋಗುವ ದಾರಿಯಲ್ಲೂ ಸಹ ಯಾವುದೇ ಸ್ತ್ರೀಯರು ಸಂಚರಿಸುವುದಿಲ್ಲ.  ಹೆಣ್ಣುಗಳು ಈ ಭೂತವನ್ನು ನೋಡಿದರೆ ಏನಾಗುತ್ತದೆ ಎಂದು ಪೆದಂಬು ಪ್ರಶ್ನೆಸುವವರಿಗೆ ಉತ್ತರ ಒಂದೇ ಕಲ್ಲಾಗಿ ಹೋಗುತ್ತಾರೆ. ಬಹಳ ಹಿಂದೆ ಒಬ್ಬಾಕೆ ಭೂತ ಕಟ್ಟುವವನ ಹೆಂಡತಿಯೇ ಕಲ್ಲಾಗಿ ಹೋದ ಕಥೆಯನ್ನು ಊರ ಹಿರಿಯರು ಹೇಳುತ್ತಾರೆ. ಹೆಣ್ಣುಗಳಿಂದ ದೂರವಿರುವ ಈ ದೈವ ವೆಂದರೆ ಬಾಲ್ಯದಿಂದಲೇ ನಮಗೆ ಭಯ ಭಕ್ತಿಯನ್ನು ಮೂಡಿಸಿದ್ದಂತೂ ಸತ್ಯ. ನಮಗೆಂದೇನು ಊರಲ್ಲಿ ಎಲ್ಲರಿಗೂ  ಈ ಭಯ ಭಕ್ತಿ ನಂಬಿಕೆ ಇಂದಿಗೂ ಅಚಲವಾಗಿ ಅಸ್ತಿತ್ವದಲ್ಲಿದೆ.   ಎಷ್ತೇ ಕುತೂಹಲವಿದ್ದರೂ ಇದನ್ನು ಪರೀಕ್ಷಿಸುವ ಸಾಹಸ ಯಾರೂ ಮಾಡಿಲ್ಲ.

            ಇದೀಗ ಶಬರಿಮಲೆಯ ಸ್ತ್ರೀ ಪ್ರವೇಶ ವಿಚಾರ ಬಹಳ ಚರ್ಚಿತ ವಿಷಯ. ಶಬರಿಮಲೆ ಕೇವಲ ಇಷ್ಟಕ್ಕೇ ಅಲ್ಲ ಇಂತಹ ಇನ್ನೂ ಹಲವು ವಿಚಾರಗಳಿಗು ಕಥೆಗಳಿಗೂ ಪ್ರಸಿದ್ದ. ಆದರು ನಂಬುಗೆ ವಿಶ್ವಾಸಗಳು ಅದು ಮನುಷ್ಯನ ಭಾವನೆಗೆ ಸೀಮಿತವಾಗಿರುತ್ತದೆ. ಅದಕ್ಕೆ ನಿದರ್ಶನ ಈ ಸ್ತ್ರೀ ಪ್ರವೇಶ.  ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ನಮ್ಮ ಜ್ಞಾನಕ್ಕೂ ನಂಬುಗೆಗೂ ಸೀಮಿತವಾಗಿರುತ್ತದೆ. ನ್ಯಾಯಾಲಯ ಇದೀಗ ಎಲ್ಲ ಸ್ತ್ರೀಯರೂ ಪ್ರವೇಶಿಸಬಹುದು ಎಂದು ತೀರ್ಪನ್ನು ಇತ್ತಿದೆ. ಸ್ತ್ರೀಯರಿಗೆ ಪ್ರವೇಶವಿಲ್ಲ ಎಂಬ ನಿಯಮವನ್ನಷ್ಟೇ ನ್ಯಾಯಾಲಯ ತೆಗೆದು ಹಾಕಿದೆ. ಹೊರತು ಯಾವುದೇ ಸ್ತ್ರೀಯನ್ನು ಶಬರಿಮಲೆಯ ಬಾಗಿಲಲ್ಲಿ ನಿಲ್ಲಿಸಿ ಒಳಗೆ ತಳ್ಳಲಿಲ್ಲ. ಇದು ಗಮನಾರ್ಹ. ಅಥವಾ ಸ್ತ್ರೀಗಳು ಹೋಗಲೇ ಬೇಕು ಎಂಬ ನಿಯಮವನ್ನು ಮಾಡಲಿಲ್ಲ .  ಅಥವಾ ಮಾಡುವಂತೆಯೂ ಇಲ್ಲ. ವಿಷಯ ವಿವಾದ ಉಂಟುಮಾಡಿ ರೋಚಕತೆಯನ್ನು ಸೃಷ್ಟಿಸುವಾಗ ಈ ವಿಚಾರಗಳು ಗಮನಾರ್ಹವಾಗುತ್ತದೆ.  ಶಬರಿಮಲೆಯಲ್ಲಿ ಸ್ತ್ರೀ ಯರು ಹೋಗಬಹುದು ಬಿಡಬಹುದು, ಹೋದರೆ ಏನು ಎಂದು ಪರೀಕ್ಷಿಸಲೂ ಬಹುದು. ಬ್ರಹ್ಮಚಾರಿಯಾಗಿಯೇ ಇರುತ್ತೇನೆ ಎಂದ ಅಯ್ಯಪ್ಪನಿಗೆ ಸವಾಲನ್ನೂ ಎಸೆಯಬಹುದು. ಆದರೆ ಪ್ರಕೃತಿಯೇ ವಿಧಿಸುವ ನಿಯಮಗಳನ್ನು ಮನುಷ್ಯ ಅರ್ಥವಿಸಿಕೊಳ್ಳುವುದಿಲ್ಲ. ಅರ್ಥವಿಸಿಕೊಂಡರೂ ಅದು ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾನೆ.  ಅಂತಾರಾಷ್ತ್ರೀಯವಾಗಿ ಸುದ್ದಿ ಮಾಡಿ ವಿವಾದ ಸೃಷ್ಟಿಸಿದ  ಈ ಎಲ್ಲ  ವಿಚಾರಗಳ ಮಧ್ಯೆಯೂ ನಮ್ಮ ಬೋಳಂಗಳ ನನಗೆ ವಿಚಿತ್ರವಾಗಿ ಕಾಣುತ್ತದೆ.   ಶಬರಿ ಮಲೆ ಪ್ರವೇಶಕ್ಕೆ ಹಾತೊರೆದ ಮಹಿಳಾ ಮಣಿಗಳು ನಮ್ಮ ಬೋಳಂಗಳದ ದೈವಕ್ಕೂ ಪ್ರಶ್ನೆಯಾಗುತ್ತಾರೋ ಗೊತ್ತಿಲ್ಲ. ಆದರೆ ನಮ್ಮ ನಂಬಿಕೆ ವಿಶ್ವಾಸಗಳ ಆವರಣದಲ್ಲೇ ಬದುಕುವ ಮನುಷ್ಯ ಇದರ ಬಗ್ಗೆ ಗಂಭೀವಾಗಿ  ಯೋಚಿಸುವ ಅಗತ್ಯವಿಲ್ಲ. ದೈವೇಚ್ಚೇ ಹೇಗೋ ಯಾರಿಗೆ ಗೊತ್ತು?  ಭೂತ ನೋಡಿ ದೇಹದಿಂದ ಕಲ್ಲಾಗುತ್ತಾರೋ ಗೊತ್ತಿಲ್ಲ. ಆದರೆ ಮನಸ್ಸಿನಿಂದ ಕಲ್ಲಾಗಿ ಮನಸ್ಸೇ ಕಲ್ಲಾಗಿ ಬಿಡುತ್ತಾರೆ.  ಯಾಕೆಂದರೆ ನಂಬಿಕೆಗಳು ನಂಬಿಕೆಗಳಾಗಿ ಮನುಷ್ಯನ ಜೀವನ ದಾರಿಯನ್ನು ನಿರ್ಣಯಿಸುತ್ತವೆ. ಅದನ್ನು ಬದಲಿಸುವುದೆಂದರೆ ಅದು ಕಲ್ಲು ಮನಸ್ಸಿನಿಂದ ಮಾತ್ರ ಸಾಧ್ಯ.  ಯಾಕೆಂದರೆ ಬೋಳಂಗಳದಲ್ಲಿ ಅಂಗಳ ಮಾತ್ರ ಬೋಳಾಗಿರಬಹುದು. ಭಾವನೆಗಳಲ್ಲ ಅದು ಯಥೇಚ್ಛವಾಗಿದೆ.
           

Monday, September 3, 2018

ಸ್ಮರಣೆಯ ದಿವ್ಯಾನುಭವಗಳು




ಹೀಗೆ ಹಲವು ವರ್ಷಗಳ ಹಿಂದೆ ತುಸು ಸಮೀಪದ ಅದೇ ಊರಿನ  ಮನೆಯ ಮಗುವೊಬ್ಬಳು  ನಮ್ಮ ಮನೆಗೆ ಬಂದು ತುಂಡು ಕಾಗದ ಒಂದನ್ನು ಕೊಟ್ಟು ಹೋದಳು. ಕಾಗದದಲ್ಲಿ ಭಟ್ಟರೊಬ್ಬರು  ಸಂಕ್ಷೇಪವಾಗಿ ಹೇಳಿದ್ದರು. ನನ್ನನ್ನು ಕಾಣುವುದಕ್ಕಾಗಿ ಇಬ್ಬರು ಮಹನೀಯರು ಮನೆ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಬಂದು ಕರೆದುಕೊಂಡು ಹೋಗಬಹುದು. ಆ ಮಗುವಿನ ಮನೆಯವರು ಆ ಭಟ್ಟರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಅವರ ಕೈಯಲ್ಲೇ ಕೊಟ್ಟು ಕಳುಹಿಸಿದ್ದರು. ಸರಿ ನನ್ನ ತಾಯಿ ಹೋಗಿ ಆ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದರು. ಅದು ನನ್ನ ಮತ್ತು ಆ ವ್ಯಕ್ತಿಗಳ ಪ್ರಥಮ ಭೇಟಿ. ಕೆಲವು ಘಟನೆಗಳು ಬದುಕಿನ ಕಥೆಗಳನ್ನೇ ಬರೆಯುತ್ತವೆ. ಅದು ಆದೇ ರೀತಿಯದಾಗಿತ್ತು. ಬಂದವರು ಹೆಣ್ಣು ಹೆತ್ತ ತಂದೆಯಾದರೆ ಇನ್ನೊಬ್ಬರು ಅವರ ಭಾವ.
ಯಾವುದೋ ಒಂದು ಸಣ್ಣ ಪತ್ರಿಕೆಯಲ್ಲಿ ಸಣ್ಣ ವಿವಾಹವೇದಿಕೆ ಎಂಬ ಸಣ್ಣ ಅಂಕಣವೊಂದಿತ್ತು.  ಸರಳವಾಗಿ ವರದಕ್ಷಿಣೆ ರಹಿತವಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ಆ ಅಂಕಣ ಮಾಧ್ಯಮವಾಗಿತ್ತು. ಯೌವನದ ಹುರುಪಿನಲ್ಲೋ ಹುಡುಗು ಬುದ್ದಿಯಲ್ಲೋ ಆ ಪತ್ರಿಕೆ ನಾನು ಒಂದಷ್ಟು ಗೀಚಿ ಬರೆದಿದ್ದೆ. ಅದು ಗಂಭೀರತೆಯನ್ನು ಪಡೆದು ನನ್ನನ್ನು ಬೇಟಿಯಾಗುವುದಕ್ಕೆ ಇವರಿಬ್ಬರು ಬಂದಿದ್ದರು. ಇಬ್ಬರೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಗಳು. ದೂರದ ಮಲೆನಾಡು ಪ್ರದೇಶದಿಂದ ಬಂದಿದ್ದರು ಭಾಷೆ ಸಂಸ್ಕೃತಿ ಅದಿನ ಒಂದಷ್ಟು ನಮಗೆಲ್ಲ ವಿಶೇಷವಾಗಿತ್ತು. ಕಾಣುವುದಕ್ಕೆ ಸಾಕಷ್ಟು ಅನುಕೂಲವಂತರು.  ನಮ್ಮದು ಹುಲ್ಲು ಹಾಸಿನ ಗುಡಿಸಲು ಮನೆ. ಜತೆಯಲ್ಲೇ ಮನೆಯಲ್ಲೇ ಒಂದು ಸಣ್ಣ ವ್ಯಾಪಾರ. ಹಾಗೇ ನನ್ನ ಬಗ್ಗೆ ತಿಳಿದುಕೊಂಡರು, ಮಾತುಕತೆಯಾಡಿ  ನನ್ನನ್ನು ಅವರ ಮನೆಗೆ ಬರುವಂತೆ ಆಮಂತ್ರಿಸಿದರು. ನನಗೆ ನಿರೀಕ್ಷೆಗಳಿರಲಿಲ್ಲ. ಆದರೆ ಆಶೆಗಳಿದ್ದುವು. ಹೇಳಿದಂತೆ ಹೋದೆ. ಭೇಟಿ ಕೊಟ್ಟೆ. ಅದು ನನ್ನ ಬದುಕಿನ ಪ್ರಮುಖ ಬೇಟಿಯಾಗಿ ನಂತರ ಬದಲಾಗಿ ಹೋದದ್ದು ಬದುಕಿನ ಇತಿಹಾಸ. ಇಂದು ಅದೇ ಮನೆಯ ಹೆಣ್ಣು ನನ್ನೊಂದಿಗೆ ಬದುಕು ನಡೆಸುತ್ತಿದ್ದಾಳೆ.  ಇಂದಿಗೂ ಆ ಪ್ರಥಮ ಭೇಟಿ ಅಚ್ಚಳಿಯದೇ ಉಳಿದಿದೆ. ಅಂದು ಅದೇ ಶುಭ್ರ ಪಂಚೆ ಅಂಗಿಯಲ್ಲಿ ಬಂದ ನನ್ನ ಭಾವೀ ಮಾವ ಒಂದು ಸರಳ ಸಜ್ಜನಿಕೆಯ ವ್ಯಕ್ತಿ.
ಅರ್ಹತೆ ಮತ್ತು ಯೋಗ್ಯತೆ ಇವೆರಡೂ ವಿಭಿನ್ನ ಗುಣಗಳು. ಯೋಗ್ಯತೆ ಸ್ವಂತ ಗುಣದಿಂದ ಒದಗಿಬಂದರೆ ಅರ್ಹತೆ ಹಿರಿಯರಿಂದ ಬರುತ್ತದೆ. ಇದು ತಾತ್ವಿಕವಾದ ಸಿದ್ದಾಂತ. ಆದರೆ ಇವೆರಡೂ ಹೊಂದಿರದ ವ್ಯಕ್ತಿತ್ವ ಏನಾದರೂ ಪಡೆಯುವುದಕ್ಕೆ ಸಾಧ್ಯವೇ?   ಆದರೆ ಬದುಕಿನ ಘಟನೆಗಳು ಇವುಗಳನ್ನು ಸಾಧ್ಯವಾಗಿಸುತ್ತವೆ. ಬದುಕನ್ನು ಅವಲೋಕಿಸುವಾಗ ಈ ಸತ್ಯ ಗೋಚರವಾಗುತ್ತದೆ.
ಹೆಣ್ಣು ಹೆತ್ತ ತಂದೆ ಅಂದರೆ ಕನ್ಯಾಪಿತೃ  ತನ್ನ ಮಗಳನ್ನು ಒಬ್ಬಾತನಿಗೆ ಕೊಡುವಾಗ ಇದೇ ಪ್ರಶ್ನೆ ಎದುರಾಗುತ್ತದೆ. ಹುಡುಗನಿಗೇನಿದೆ? ಸಹಜವಾಗಿ ತನ್ನ ಮಗಳ ಬದುಕಿನ ಸಾರ್ಥಕತೆಯನ್ನು ಯಾವೊಬ್ಬ ಹೆಣ್ಣು ಹೆತ್ತ ತಂದೆ ಬಯಸದೇ ಇರುವುದಿಲ್ಲ. ತನ್ನ ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಒಂದಷ್ಟು ಸಂಪತ್ತನ್ನೂ ತನ್ನ ಬದುಕನ್ನೂ ಇದಕ್ಕೆ ವಿನಿಯೋಗಿಸುವ ಹೆಣ್ಣು ಹೆತ್ತ ಮನುಷ್ಯ,  ಹೆಣ್ಣು ಮಗುವಿನ ಬದುಕಿನ ಮೇಲೆ ಅತಿಯಾದ ಆಕಾಂಕ್ಷೆಯನ್ನು ನಿರೀಕ್ಷೆಯನ್ನೂ ಹೊತ್ತಿರುತ್ತಾನೆ. ಹಾಗಾಗಿ ಹೆಣ್ಣು ಪಡೆದ ಗಂಡಿನ ಅರ್ಹತೆ ಯೋಗ್ಯತೆ ಎರಡೂ ಪ್ರಧಾನ ಅಂಶಗಳಾಗುತ್ತವೆ.
ಬಹಳ ಹಿಂದಿನ ದಿನಗಳವು. ದೇಹದಲ್ಲಿ ತೋಳ್ಬಲ ಮನಸ್ಸಿನಲ್ಲಿ ಇಚ್ಛಾಶಕ್ತಿ ಅಲ್ಲದೇ ಬೇರೆ ಭಂಡವಾಳವೇ ಇಲ್ಲ. ಕೈ ಇಕ್ಕುವ ಅಂಗಿಯ ಜೇಬು ಮೇಲಿನಿಂದ ತೆರೆದುಕೊಂಡಂತೆ ಕೆಳಗಿನಿಂದಲೂ ತೆರೆದುಕೊಂಡಿರುತ್ತದೆ.    ಕೈ ಬೆರಳು ಜೇಬಿನಲ್ಲಿ ತಡಕಾಡಿದರೆ ಶೂನ್ಯವೇ ಅನುಭವ. ಅಂತಹ ದಿನಗಳಲ್ಲಿ ಇರುವ ವ್ಯಕ್ತಿತ್ವಕ್ಕೆ ಅರ್ಹತೆಯೂ ಇಲ್ಲ ಯೋಗ್ಯತೆಯೂ ಇಲ್ಲ. ಅಂತಹಾ ದಿನಗಳಲ್ಲಿ ನನ್ನ ಮಡದಿ ನನ್ನ ಕೈ ಹಿಡಿದು ಬದುಕಿನ ಹೆಜ್ಜೆಗೆ ಜತೆಯಾದವಳು. ನನ್ನ ಹೆಜ್ಜೆ ಗುರುತು ಬಿದ್ದೆಡೆಯಲ್ಲಿ ತನ್ನ ಪಾದವನ್ನು ಒತ್ತುವಾಗ ಆಕೆಯಲ್ಲಿದ್ದ ಆತ್ಮವಿಶ್ವಾಸ ಗಂಡನಾದ ನನಗೆ ಅತೀವ ಆತ್ಮ ಸ್ಥೈರ್ಯವನ್ನು ಒದಗಿಸಿತ್ತು. ಆಕೆಯಲ್ಲಿದ್ದ ಆತ್ಮ ವಿಶ್ವಾಸ ಹುಟ್ಟಿಕೊಂಡದ್ದೇ ಹಾಗೆ. ಅದು ಹೆತ್ತ ತಂದೆಯ ಮೇಲಿನ ವಿಶ್ವಾಸ. ಇವೆರಡೂ ಸೇರಿದಾಗ ಗಂಡನಾದವನ ಜವಾಬ್ದಾರಿ ಬಹಳಷ್ಟು ಗುರುತರವಾಗುತ್ತದೆ. ಈ ಅರಿವು ಸದಾ ನನ್ನನ್ನು ಜಾಗ್ರತನನ್ನಾಗಿಸಿತ್ತು.
ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನನಗೆ ಎಲ್ಲವೂ ನಿನ್ನಲ್ಲಿದೆ ಎಂದು ಅಳಿಯದೇವರಂತೆ ನೋಡಿ,  ದೈವತ್ವವನ್ನು ನನ್ನಲ್ಲಿ ಕಂಡುಕೊಂಡ ನನ್ನ ಮಾವನ ವ್ಯಕ್ತಿತ್ವ ನಿಜಕ್ಕೂ ದೈವೀ ಸಂಭೂತ. ಏನೂ ಇಲ್ಲದ ನನ್ನ ಶೂನ್ಯ ಕೈಗಳಲ್ಲಿ ಹೆಣ್ಣಿನ ಕೈ ಇಟ್ಟು ಮಗಳನ್ನು ಧಾರಾದತ್ತವಾಗಿ ನೀಡಿದಾಗ ಜವಾಬ್ದಾರಿಯ ಭಾರಕ್ಕೆ ಕೈ ಕಂಪಿಸಿದರೂ ಮಾವನ ಆತ್ಮ ವಿಶ್ವಾಸದ ಆಶೀರ್ವಾದ ಮುಂದಿನ ಬದುಕಿನಲ್ಲಿ ಭದ್ರವಾದ ಹೆಜ್ಜೆಯನ್ನು ಊರುವುದಕ್ಕೆ ಸಹಕರಿಸಿತು. ಬಾಸಿಂಗ ಕಟ್ಟಿ ಹೆಣ್ಣಿನ ಹಾರಕ್ಕೆ ಕೊರಳೊಡ್ಡಿದಾಗ ಹಾರದ ಭಾರಕ್ಕೆ ತಲೆ ಬಾಗಲಿಲ್ಲ. ಬದಲಿಗೆ  ಮಾವನ ಹೃದಯವಂತಿಕೆಗೆ  ಶಿರ ಬಾಗಿತ್ತು. ತೋಳು ವಿಶಾಲವಾಗಿ ಹೆಣ್ಣನ್ನು ಬರಸೆಳೆದಿತ್ತು.  ಅಂದಿನಿಂದ ಇಂದಿನವರೆಗೂ ಆ ಪ್ರೀತಿ ಆ ವಿಶ್ವಾಸ ಅ ಮಧುರ ಅನುಭವವನ್ನು ಎಲ್ಲವನ್ನೂ ಉಂಡು ಗ್ರಹಸ್ಥನಾಗಿ ತುಂಬು ಸಂಸಾರಿಯಾಗಿ ಬಾಳುವೆ ನಡೆಸಿದ್ದೇನೆ. ಇದು ಆತ್ಮ ವಿಶ್ವಾಸದ ಹೆಗ್ಗಳಿಕೆಯ ಮಾತು.
ಹೆಣ್ಣು ಮಗಳೆಂದರೆ ಆಕೆ ತಾಯಿಗಿಂತಲೂ ತಂದೆಗೆ ಹೆಚ್ಚು ಹತ್ತಿರವಾಗುತ್ತಾಳೆ.  ಅದು  ಏಕ ಮಾತ್ರ ಹೆಣ್ಣು ಮಗಳೆಂದರೆ ಆ ಬಂಧನ ಇನ್ನೂ ಪಕ್ವವಾಗಿರುತ್ತದೆ. ಇದು ಅತಿಶಯವಲ್ಲ.   ಹೆಣ್ಣುಮಗಳ ಮತ್ತು ಹೆತ್ತ ತಂದೆಯ ಅನುಬಂಧ ಹೆಣ್ಣಿಗೂ ಹೆತ್ತ ತಂದೆಗೆ ಮಾತ್ರ ಅದರ ಆಳದ ಅರಿವಿರುತ್ತದೆ. ಇದೆಲ್ಲವನ್ನೂ  ಮೀರಿಸಿ ಹೆಣ್ಣು ಗಂಡಿನ ಜತೆಯಾಗುತ್ತಾಳೆ ಎಂದಾದರೆ ತಂದೆಯ ಅದೇ ಸುರಕ್ಷೆಯನ್ನು ಪ್ರೀತಿಯನ್ನೂ ಹೆಣ್ಣು ಬಯಸುತ್ತಾಳೆ.   ತಂದೆ ಈ ವಿಶ್ವಾಸವನ್ನು ಮಗಳಲ್ಲಿ ಮೂಡಿಸಿ ನೋಡು ಇದು ನನ್ನ ಅಳಿಯ, ನಿನ್ನ ಬದುಕಿನ್ನು ಅಲ್ಲಿದೆ,   ಎಂದು ತೊರಿಸಿಕೊಡುತ್ತಾನೆ. ಈ ಎರಡು ಕರ್ತವ್ಯವನ್ನು ಅತ್ಯಂತ ಜತನದಿಂದ ನನ್ನ ಮಾವ ಮಾಡಿ ಕೃತಾರ್ಥತೆಯನ್ನೂ ಉದಾರತೆಯನ್ನೂ ತೋರಿದವರು.
ನಾವು ತೋಳ್ಬಲದಿಂದ ಬುದ್ದಿ ಮತ್ತೆಯಿಂದ ಅದೆಷ್ಟನ್ನೋ ಆರ್ಜಿಸಿ ಶ್ರೀಮಂತರಾಗಬಹುದು. ಆದರೆ ಒಳ್ಳೆಯ ವ್ಯಕ್ತಿ ಸಂಬಂಧ ಪಡೆಯುವುದಕ್ಕೆ ಅದೃಷ್ಟವಿರಬೇಕು. ಆ ಅದೃಷ್ಟ ನನ್ನ ಜತೆಗಿತ್ತು. ಸುಮಾರು ಇಪ್ಪತ್ತೆಂಟು ವರ್ಷದ ಸುದೀರ್ಘ ಒಡೆನಾಟದಲ್ಲಿ  ಅ ಮನೆಯ ಅಂಗವಾಗಿ ಬೆಳೆದೆ.  ನನ್ನ ಮಾವನ ಮನೆಗೆ ನಾನೊಬ್ಬನೇ ಒಬ್ಬ ಅಳಿಯ.  ಆ ಸಂಬಂಧ ಮಾಧುರ್ಯ ಅಳಿಯದಂತೆ ಮಾಸದಂತೆ ಉಳಿದುಕೊಂಡಿದೆ ಎಂದರೆ ಇದರಲ್ಲಿ ಮಾವನ ಮನೆಯವರ ಹೃದಯವಂತಿಕೆ ಅತಿ ಹೆಚ್ಚು.
ಅದೆಷ್ಟೋ  ಹೆಣ್ಣು ಹೆತ್ತ ಮನೆಯವರನ್ನು ಕಂಡಿದ್ದೇನೆ. ಹಲವು ಕಡೆ ವ್ಯಾವಹಾರಿಕ ಪ್ರಪಂಚದ ಕಟು ಸತ್ಯದಂತೆ ಸಂಬಂಧಗಳು ಕೇವಲ ಸಂಬಂಧವಾಗಿ ವಿಡಂಬನೆಯ ದ್ವೇಷದ ಅಸೂಯೆಯ ಕಥೆಗಳನ್ನು ಕಂಡಿದ್ದೇನೆ. ಆದರೆ ಇದಾವುದರ ಕಿಂಚಿತ್ ಅನುಭವವೂ ಸೋಕದಂತೆ ಮನೆಯಲ್ಲಿ ನಾನು ಒಬ್ಬನಾಗಿ ಅದೇ ಪ್ರೀತಿ ವಿಶ್ವಾಸ ಉಳಿಸಿಕೊಂಡು ಮನೆಯ ಅಂಗವಾಗಿ ಬದುಕಿರುವುದರಲ್ಲಿ ನನ್ನ ಮಾವನ ವ್ಯಕ್ತಿತ್ವ ಗಾಢವಾದ ಪರಿಣಾಮವನ್ನು ಬೀರಿದೆ.  ನೆನಸಿಕೊಂಡರೆ ಬಿಚ್ಚಿಕೊಳ್ಳುವ ಹಲವು ಘಟನೆಗಳು ಹೃದಯವನ್ನು ಭಾರವಾಗಿಸಿ ಕಣ್ಣನ್ನು ತೇವವಾಗಿಸುತ್ತದೆ. ನಾನೇನು ಮಾಡಿದರೂ ಇದು ನನ್ನ ಮಗಳ ಗಂಡ ಎಂದು ಎದೆಗವಚಿಕೊಳ್ಳುವ  ನಿಸ್ವಾರ್ಥ ಮನಸ್ಸು. ಈ  ಸ್ವಾರ್ಥವಿಲ್ಲದ ಪ್ರೀತಿ ವಿಶ್ವಾಸ ತೋಳ್ಪಲದಿಂದ ಗಳಿಸಲಾಗದೇ ಇದ್ದುದನ್ನು ತೋರಿಸಿಕೊಟ್ಟಿದೆ.  ಒಳ್ಳೆಯ ಗಂಡನ ಮನೆ ತಮ್ಮ ಮನೆಯ ಹೆಣ್ಣು ಮಗಳಿಗೆ ಸಿಗಬೇಕು. ಇದು ಎಲ್ಲ ಹೆಣ್ಣು ಹೆತ್ತವರ ಸಹಜ ಆಶಯ. ಅದು ಒದಗಿ ಬರುವುದು ಅದೃಷ್ಟದಿಂದ. ಅಂತೆಯೇ ಒಳ್ಳೆಯ ಮಾವನ ಮನೆ ಎಂಬುದು ಗಂಡಿನ ಅತ್ಯಂತ ದೊಡ್ಡ ಭಾಗ್ಯ. ಅದನ್ನು ಪಡೆದ ಮಹಾ ಅದೃಷ್ಟ ನನ್ನ ಜತೆಗಿದೆ.
ಏನೂ ಇಲ್ಲದ ನನ್ನಲ್ಲಿ ಎಲ್ಲವನ್ನೂ ಕಂಡು ಎಲ್ಲವನ್ನೂ ತುಂಬಿಕೊಂಡು ಆಶೀರ್ವದಿಸಿದ ಮಾವ ಇನ್ನು ಕೇವಲ ನೆನಪಾಗಿ ಹೋಗಿದ್ದಾರೆ. ನೆನಪಿನ ಪುಟಗಳನ್ನು ಬರೆಯುವುದಕ್ಕೆ ಕೈಗಳು ಓಡುತ್ತಿಲ್ಲ. ಮನಸ್ಸಿನ ಕಲ್ಪನೆಗಳು ನಾಗಾಲೋಟದಿಂದ ಘಟನೆಗಳನ್ನು ಸ್ಮರಿಸುತ್ತವೆ. ಮೊನ್ನೆ ಅಂದರೆ ದಿನಾಂಕ ೨೬.೦೮.೨೦೧೮ ರಂದು ತನ್ನ ಕೊನೆಯ ಉಸಿರನ್ನು ಚೆಲ್ಲಿ ನಮ್ಮನ್ನೆಲ್ಲ ಅಗಲಿದ್ದ ಸತ್ಯವನ್ನು ಮನಸ್ಸು ನಂಬುತ್ತಿಲ್ಲ. ಅಂತಹ ಮಧುರ ನೆನಪುಗಳು ಮಾವ ಉಳಿಸಿ ಹೋಗಿದ್ದಾರೆ. ಜೀವನ ಪರ್ಯಂತ ಯಾರನ್ನೂ ದ್ವೇಷಿಸದ ಎಲ್ಲರಲ್ಲೂ ಒಂದಾಗಿ ಬೆರೆಯುವ ಚಟುವಟಿಕೆಯ ಉತ್ಸಾಹಿ ಮಾವ ಇನ್ನಿಲ್ಲವೆಂದರೆ ನಂಬುವುದಾದರೂ ಹೇಗೆ.?
ಹುಟ್ಟು ಹಲವು ಪ್ರಶ್ನೆಗಳನ್ನು ಹುಟ್ಟಿಸಿದರೆ ಸಾವು ಎಲ್ಲ ಪ್ರಶ್ನೆಗಳಿಗೂ ಉತ್ತರವಂತೆ. ವೇದಾಂತಿಗಳ ಮಾತು. ಉತ್ತರವಿಲ್ಲದ ಪ್ರಶ್ನೆಗಳು ಮಾವನಲ್ಲಿ ಇರಲಿಲ್ಲ.  ಮಾವನ ಪ್ರೀತಿ ಪ್ರಶ್ನೆಗಳಿಲ್ಲದ ಉತ್ತರಗಳಾಗಿದ್ದವು.  ಅದರ ಮಾರ್ದವತೆ ಇನ್ನು ನೆನಪು ಮಾತ್ರ. ಮನೆಯ ಮೂಲೆ ಮೂಲೆಯಲ್ಲೂ ತಡಕಾಡಿದಷ್ಟೂ ನೆನಪುಗಳನ್ನು ಮಾವ ತುಂಬಿಸಿಬಿಟ್ಟಿದ್ದಾರೆ. ಇನ್ನು ಮೂಲೆ ಮೂಲೆ ತಡಕಾಡಿ ಒಂದೊಂದನ್ನೇ  ತೆಗೆದು ಸ್ಮರಿಸಿಕೊಳ್ಳುವುದಷ್ಟೇ ಉಳಿದು ಹೋಗಿದೆ.
ಸುರಿಯುವ  ಒಂದು ತೊಟ್ಟು ಕಂಬನಿ ಸಾವಿರದ ಕಥೆಯನ್ನು ಹೇಳಿದರೆ ಮಾವನ ಬದು ಸಾವಿರದ ನೆನಪನ್ನು ಸಾರುತ್ತದೆ.  ಮಾವನ ಆತ್ಮಕ್ಕೆ ಶಾಂತಿಯನ್ನು ಕೋರುವುದರಲ್ಲಿ ಒಂದು ಕೃತಾರ್ಥತೆ. ಒಂದು ಬದ್ದತೆ ಇದೆ. ಅದೇ ಹಸಿರು . ಅದೇ ಉಸಿರು.