Monday, September 3, 2018

ಸ್ಮರಣೆಯ ದಿವ್ಯಾನುಭವಗಳು




ಹೀಗೆ ಹಲವು ವರ್ಷಗಳ ಹಿಂದೆ ತುಸು ಸಮೀಪದ ಅದೇ ಊರಿನ  ಮನೆಯ ಮಗುವೊಬ್ಬಳು  ನಮ್ಮ ಮನೆಗೆ ಬಂದು ತುಂಡು ಕಾಗದ ಒಂದನ್ನು ಕೊಟ್ಟು ಹೋದಳು. ಕಾಗದದಲ್ಲಿ ಭಟ್ಟರೊಬ್ಬರು  ಸಂಕ್ಷೇಪವಾಗಿ ಹೇಳಿದ್ದರು. ನನ್ನನ್ನು ಕಾಣುವುದಕ್ಕಾಗಿ ಇಬ್ಬರು ಮಹನೀಯರು ಮನೆ ಹುಡುಕಿಕೊಂಡು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ಬಂದು ಕರೆದುಕೊಂಡು ಹೋಗಬಹುದು. ಆ ಮಗುವಿನ ಮನೆಯವರು ಆ ಭಟ್ಟರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಅವರ ಕೈಯಲ್ಲೇ ಕೊಟ್ಟು ಕಳುಹಿಸಿದ್ದರು. ಸರಿ ನನ್ನ ತಾಯಿ ಹೋಗಿ ಆ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದರು. ಅದು ನನ್ನ ಮತ್ತು ಆ ವ್ಯಕ್ತಿಗಳ ಪ್ರಥಮ ಭೇಟಿ. ಕೆಲವು ಘಟನೆಗಳು ಬದುಕಿನ ಕಥೆಗಳನ್ನೇ ಬರೆಯುತ್ತವೆ. ಅದು ಆದೇ ರೀತಿಯದಾಗಿತ್ತು. ಬಂದವರು ಹೆಣ್ಣು ಹೆತ್ತ ತಂದೆಯಾದರೆ ಇನ್ನೊಬ್ಬರು ಅವರ ಭಾವ.
ಯಾವುದೋ ಒಂದು ಸಣ್ಣ ಪತ್ರಿಕೆಯಲ್ಲಿ ಸಣ್ಣ ವಿವಾಹವೇದಿಕೆ ಎಂಬ ಸಣ್ಣ ಅಂಕಣವೊಂದಿತ್ತು.  ಸರಳವಾಗಿ ವರದಕ್ಷಿಣೆ ರಹಿತವಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ಆ ಅಂಕಣ ಮಾಧ್ಯಮವಾಗಿತ್ತು. ಯೌವನದ ಹುರುಪಿನಲ್ಲೋ ಹುಡುಗು ಬುದ್ದಿಯಲ್ಲೋ ಆ ಪತ್ರಿಕೆ ನಾನು ಒಂದಷ್ಟು ಗೀಚಿ ಬರೆದಿದ್ದೆ. ಅದು ಗಂಭೀರತೆಯನ್ನು ಪಡೆದು ನನ್ನನ್ನು ಬೇಟಿಯಾಗುವುದಕ್ಕೆ ಇವರಿಬ್ಬರು ಬಂದಿದ್ದರು. ಇಬ್ಬರೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಗಳು. ದೂರದ ಮಲೆನಾಡು ಪ್ರದೇಶದಿಂದ ಬಂದಿದ್ದರು ಭಾಷೆ ಸಂಸ್ಕೃತಿ ಅದಿನ ಒಂದಷ್ಟು ನಮಗೆಲ್ಲ ವಿಶೇಷವಾಗಿತ್ತು. ಕಾಣುವುದಕ್ಕೆ ಸಾಕಷ್ಟು ಅನುಕೂಲವಂತರು.  ನಮ್ಮದು ಹುಲ್ಲು ಹಾಸಿನ ಗುಡಿಸಲು ಮನೆ. ಜತೆಯಲ್ಲೇ ಮನೆಯಲ್ಲೇ ಒಂದು ಸಣ್ಣ ವ್ಯಾಪಾರ. ಹಾಗೇ ನನ್ನ ಬಗ್ಗೆ ತಿಳಿದುಕೊಂಡರು, ಮಾತುಕತೆಯಾಡಿ  ನನ್ನನ್ನು ಅವರ ಮನೆಗೆ ಬರುವಂತೆ ಆಮಂತ್ರಿಸಿದರು. ನನಗೆ ನಿರೀಕ್ಷೆಗಳಿರಲಿಲ್ಲ. ಆದರೆ ಆಶೆಗಳಿದ್ದುವು. ಹೇಳಿದಂತೆ ಹೋದೆ. ಭೇಟಿ ಕೊಟ್ಟೆ. ಅದು ನನ್ನ ಬದುಕಿನ ಪ್ರಮುಖ ಬೇಟಿಯಾಗಿ ನಂತರ ಬದಲಾಗಿ ಹೋದದ್ದು ಬದುಕಿನ ಇತಿಹಾಸ. ಇಂದು ಅದೇ ಮನೆಯ ಹೆಣ್ಣು ನನ್ನೊಂದಿಗೆ ಬದುಕು ನಡೆಸುತ್ತಿದ್ದಾಳೆ.  ಇಂದಿಗೂ ಆ ಪ್ರಥಮ ಭೇಟಿ ಅಚ್ಚಳಿಯದೇ ಉಳಿದಿದೆ. ಅಂದು ಅದೇ ಶುಭ್ರ ಪಂಚೆ ಅಂಗಿಯಲ್ಲಿ ಬಂದ ನನ್ನ ಭಾವೀ ಮಾವ ಒಂದು ಸರಳ ಸಜ್ಜನಿಕೆಯ ವ್ಯಕ್ತಿ.
ಅರ್ಹತೆ ಮತ್ತು ಯೋಗ್ಯತೆ ಇವೆರಡೂ ವಿಭಿನ್ನ ಗುಣಗಳು. ಯೋಗ್ಯತೆ ಸ್ವಂತ ಗುಣದಿಂದ ಒದಗಿಬಂದರೆ ಅರ್ಹತೆ ಹಿರಿಯರಿಂದ ಬರುತ್ತದೆ. ಇದು ತಾತ್ವಿಕವಾದ ಸಿದ್ದಾಂತ. ಆದರೆ ಇವೆರಡೂ ಹೊಂದಿರದ ವ್ಯಕ್ತಿತ್ವ ಏನಾದರೂ ಪಡೆಯುವುದಕ್ಕೆ ಸಾಧ್ಯವೇ?   ಆದರೆ ಬದುಕಿನ ಘಟನೆಗಳು ಇವುಗಳನ್ನು ಸಾಧ್ಯವಾಗಿಸುತ್ತವೆ. ಬದುಕನ್ನು ಅವಲೋಕಿಸುವಾಗ ಈ ಸತ್ಯ ಗೋಚರವಾಗುತ್ತದೆ.
ಹೆಣ್ಣು ಹೆತ್ತ ತಂದೆ ಅಂದರೆ ಕನ್ಯಾಪಿತೃ  ತನ್ನ ಮಗಳನ್ನು ಒಬ್ಬಾತನಿಗೆ ಕೊಡುವಾಗ ಇದೇ ಪ್ರಶ್ನೆ ಎದುರಾಗುತ್ತದೆ. ಹುಡುಗನಿಗೇನಿದೆ? ಸಹಜವಾಗಿ ತನ್ನ ಮಗಳ ಬದುಕಿನ ಸಾರ್ಥಕತೆಯನ್ನು ಯಾವೊಬ್ಬ ಹೆಣ್ಣು ಹೆತ್ತ ತಂದೆ ಬಯಸದೇ ಇರುವುದಿಲ್ಲ. ತನ್ನ ಮಗುವಿನ ಭವಿಷ್ಯಕ್ಕಾಗಿ ಕೂಡಿಟ್ಟ ಒಂದಷ್ಟು ಸಂಪತ್ತನ್ನೂ ತನ್ನ ಬದುಕನ್ನೂ ಇದಕ್ಕೆ ವಿನಿಯೋಗಿಸುವ ಹೆಣ್ಣು ಹೆತ್ತ ಮನುಷ್ಯ,  ಹೆಣ್ಣು ಮಗುವಿನ ಬದುಕಿನ ಮೇಲೆ ಅತಿಯಾದ ಆಕಾಂಕ್ಷೆಯನ್ನು ನಿರೀಕ್ಷೆಯನ್ನೂ ಹೊತ್ತಿರುತ್ತಾನೆ. ಹಾಗಾಗಿ ಹೆಣ್ಣು ಪಡೆದ ಗಂಡಿನ ಅರ್ಹತೆ ಯೋಗ್ಯತೆ ಎರಡೂ ಪ್ರಧಾನ ಅಂಶಗಳಾಗುತ್ತವೆ.
ಬಹಳ ಹಿಂದಿನ ದಿನಗಳವು. ದೇಹದಲ್ಲಿ ತೋಳ್ಬಲ ಮನಸ್ಸಿನಲ್ಲಿ ಇಚ್ಛಾಶಕ್ತಿ ಅಲ್ಲದೇ ಬೇರೆ ಭಂಡವಾಳವೇ ಇಲ್ಲ. ಕೈ ಇಕ್ಕುವ ಅಂಗಿಯ ಜೇಬು ಮೇಲಿನಿಂದ ತೆರೆದುಕೊಂಡಂತೆ ಕೆಳಗಿನಿಂದಲೂ ತೆರೆದುಕೊಂಡಿರುತ್ತದೆ.    ಕೈ ಬೆರಳು ಜೇಬಿನಲ್ಲಿ ತಡಕಾಡಿದರೆ ಶೂನ್ಯವೇ ಅನುಭವ. ಅಂತಹ ದಿನಗಳಲ್ಲಿ ಇರುವ ವ್ಯಕ್ತಿತ್ವಕ್ಕೆ ಅರ್ಹತೆಯೂ ಇಲ್ಲ ಯೋಗ್ಯತೆಯೂ ಇಲ್ಲ. ಅಂತಹಾ ದಿನಗಳಲ್ಲಿ ನನ್ನ ಮಡದಿ ನನ್ನ ಕೈ ಹಿಡಿದು ಬದುಕಿನ ಹೆಜ್ಜೆಗೆ ಜತೆಯಾದವಳು. ನನ್ನ ಹೆಜ್ಜೆ ಗುರುತು ಬಿದ್ದೆಡೆಯಲ್ಲಿ ತನ್ನ ಪಾದವನ್ನು ಒತ್ತುವಾಗ ಆಕೆಯಲ್ಲಿದ್ದ ಆತ್ಮವಿಶ್ವಾಸ ಗಂಡನಾದ ನನಗೆ ಅತೀವ ಆತ್ಮ ಸ್ಥೈರ್ಯವನ್ನು ಒದಗಿಸಿತ್ತು. ಆಕೆಯಲ್ಲಿದ್ದ ಆತ್ಮ ವಿಶ್ವಾಸ ಹುಟ್ಟಿಕೊಂಡದ್ದೇ ಹಾಗೆ. ಅದು ಹೆತ್ತ ತಂದೆಯ ಮೇಲಿನ ವಿಶ್ವಾಸ. ಇವೆರಡೂ ಸೇರಿದಾಗ ಗಂಡನಾದವನ ಜವಾಬ್ದಾರಿ ಬಹಳಷ್ಟು ಗುರುತರವಾಗುತ್ತದೆ. ಈ ಅರಿವು ಸದಾ ನನ್ನನ್ನು ಜಾಗ್ರತನನ್ನಾಗಿಸಿತ್ತು.
ಅರ್ಹತೆ ಯೋಗ್ಯತೆ ಎರಡೂ ಇಲ್ಲದ ನನಗೆ ಎಲ್ಲವೂ ನಿನ್ನಲ್ಲಿದೆ ಎಂದು ಅಳಿಯದೇವರಂತೆ ನೋಡಿ,  ದೈವತ್ವವನ್ನು ನನ್ನಲ್ಲಿ ಕಂಡುಕೊಂಡ ನನ್ನ ಮಾವನ ವ್ಯಕ್ತಿತ್ವ ನಿಜಕ್ಕೂ ದೈವೀ ಸಂಭೂತ. ಏನೂ ಇಲ್ಲದ ನನ್ನ ಶೂನ್ಯ ಕೈಗಳಲ್ಲಿ ಹೆಣ್ಣಿನ ಕೈ ಇಟ್ಟು ಮಗಳನ್ನು ಧಾರಾದತ್ತವಾಗಿ ನೀಡಿದಾಗ ಜವಾಬ್ದಾರಿಯ ಭಾರಕ್ಕೆ ಕೈ ಕಂಪಿಸಿದರೂ ಮಾವನ ಆತ್ಮ ವಿಶ್ವಾಸದ ಆಶೀರ್ವಾದ ಮುಂದಿನ ಬದುಕಿನಲ್ಲಿ ಭದ್ರವಾದ ಹೆಜ್ಜೆಯನ್ನು ಊರುವುದಕ್ಕೆ ಸಹಕರಿಸಿತು. ಬಾಸಿಂಗ ಕಟ್ಟಿ ಹೆಣ್ಣಿನ ಹಾರಕ್ಕೆ ಕೊರಳೊಡ್ಡಿದಾಗ ಹಾರದ ಭಾರಕ್ಕೆ ತಲೆ ಬಾಗಲಿಲ್ಲ. ಬದಲಿಗೆ  ಮಾವನ ಹೃದಯವಂತಿಕೆಗೆ  ಶಿರ ಬಾಗಿತ್ತು. ತೋಳು ವಿಶಾಲವಾಗಿ ಹೆಣ್ಣನ್ನು ಬರಸೆಳೆದಿತ್ತು.  ಅಂದಿನಿಂದ ಇಂದಿನವರೆಗೂ ಆ ಪ್ರೀತಿ ಆ ವಿಶ್ವಾಸ ಅ ಮಧುರ ಅನುಭವವನ್ನು ಎಲ್ಲವನ್ನೂ ಉಂಡು ಗ್ರಹಸ್ಥನಾಗಿ ತುಂಬು ಸಂಸಾರಿಯಾಗಿ ಬಾಳುವೆ ನಡೆಸಿದ್ದೇನೆ. ಇದು ಆತ್ಮ ವಿಶ್ವಾಸದ ಹೆಗ್ಗಳಿಕೆಯ ಮಾತು.
ಹೆಣ್ಣು ಮಗಳೆಂದರೆ ಆಕೆ ತಾಯಿಗಿಂತಲೂ ತಂದೆಗೆ ಹೆಚ್ಚು ಹತ್ತಿರವಾಗುತ್ತಾಳೆ.  ಅದು  ಏಕ ಮಾತ್ರ ಹೆಣ್ಣು ಮಗಳೆಂದರೆ ಆ ಬಂಧನ ಇನ್ನೂ ಪಕ್ವವಾಗಿರುತ್ತದೆ. ಇದು ಅತಿಶಯವಲ್ಲ.   ಹೆಣ್ಣುಮಗಳ ಮತ್ತು ಹೆತ್ತ ತಂದೆಯ ಅನುಬಂಧ ಹೆಣ್ಣಿಗೂ ಹೆತ್ತ ತಂದೆಗೆ ಮಾತ್ರ ಅದರ ಆಳದ ಅರಿವಿರುತ್ತದೆ. ಇದೆಲ್ಲವನ್ನೂ  ಮೀರಿಸಿ ಹೆಣ್ಣು ಗಂಡಿನ ಜತೆಯಾಗುತ್ತಾಳೆ ಎಂದಾದರೆ ತಂದೆಯ ಅದೇ ಸುರಕ್ಷೆಯನ್ನು ಪ್ರೀತಿಯನ್ನೂ ಹೆಣ್ಣು ಬಯಸುತ್ತಾಳೆ.   ತಂದೆ ಈ ವಿಶ್ವಾಸವನ್ನು ಮಗಳಲ್ಲಿ ಮೂಡಿಸಿ ನೋಡು ಇದು ನನ್ನ ಅಳಿಯ, ನಿನ್ನ ಬದುಕಿನ್ನು ಅಲ್ಲಿದೆ,   ಎಂದು ತೊರಿಸಿಕೊಡುತ್ತಾನೆ. ಈ ಎರಡು ಕರ್ತವ್ಯವನ್ನು ಅತ್ಯಂತ ಜತನದಿಂದ ನನ್ನ ಮಾವ ಮಾಡಿ ಕೃತಾರ್ಥತೆಯನ್ನೂ ಉದಾರತೆಯನ್ನೂ ತೋರಿದವರು.
ನಾವು ತೋಳ್ಬಲದಿಂದ ಬುದ್ದಿ ಮತ್ತೆಯಿಂದ ಅದೆಷ್ಟನ್ನೋ ಆರ್ಜಿಸಿ ಶ್ರೀಮಂತರಾಗಬಹುದು. ಆದರೆ ಒಳ್ಳೆಯ ವ್ಯಕ್ತಿ ಸಂಬಂಧ ಪಡೆಯುವುದಕ್ಕೆ ಅದೃಷ್ಟವಿರಬೇಕು. ಆ ಅದೃಷ್ಟ ನನ್ನ ಜತೆಗಿತ್ತು. ಸುಮಾರು ಇಪ್ಪತ್ತೆಂಟು ವರ್ಷದ ಸುದೀರ್ಘ ಒಡೆನಾಟದಲ್ಲಿ  ಅ ಮನೆಯ ಅಂಗವಾಗಿ ಬೆಳೆದೆ.  ನನ್ನ ಮಾವನ ಮನೆಗೆ ನಾನೊಬ್ಬನೇ ಒಬ್ಬ ಅಳಿಯ.  ಆ ಸಂಬಂಧ ಮಾಧುರ್ಯ ಅಳಿಯದಂತೆ ಮಾಸದಂತೆ ಉಳಿದುಕೊಂಡಿದೆ ಎಂದರೆ ಇದರಲ್ಲಿ ಮಾವನ ಮನೆಯವರ ಹೃದಯವಂತಿಕೆ ಅತಿ ಹೆಚ್ಚು.
ಅದೆಷ್ಟೋ  ಹೆಣ್ಣು ಹೆತ್ತ ಮನೆಯವರನ್ನು ಕಂಡಿದ್ದೇನೆ. ಹಲವು ಕಡೆ ವ್ಯಾವಹಾರಿಕ ಪ್ರಪಂಚದ ಕಟು ಸತ್ಯದಂತೆ ಸಂಬಂಧಗಳು ಕೇವಲ ಸಂಬಂಧವಾಗಿ ವಿಡಂಬನೆಯ ದ್ವೇಷದ ಅಸೂಯೆಯ ಕಥೆಗಳನ್ನು ಕಂಡಿದ್ದೇನೆ. ಆದರೆ ಇದಾವುದರ ಕಿಂಚಿತ್ ಅನುಭವವೂ ಸೋಕದಂತೆ ಮನೆಯಲ್ಲಿ ನಾನು ಒಬ್ಬನಾಗಿ ಅದೇ ಪ್ರೀತಿ ವಿಶ್ವಾಸ ಉಳಿಸಿಕೊಂಡು ಮನೆಯ ಅಂಗವಾಗಿ ಬದುಕಿರುವುದರಲ್ಲಿ ನನ್ನ ಮಾವನ ವ್ಯಕ್ತಿತ್ವ ಗಾಢವಾದ ಪರಿಣಾಮವನ್ನು ಬೀರಿದೆ.  ನೆನಸಿಕೊಂಡರೆ ಬಿಚ್ಚಿಕೊಳ್ಳುವ ಹಲವು ಘಟನೆಗಳು ಹೃದಯವನ್ನು ಭಾರವಾಗಿಸಿ ಕಣ್ಣನ್ನು ತೇವವಾಗಿಸುತ್ತದೆ. ನಾನೇನು ಮಾಡಿದರೂ ಇದು ನನ್ನ ಮಗಳ ಗಂಡ ಎಂದು ಎದೆಗವಚಿಕೊಳ್ಳುವ  ನಿಸ್ವಾರ್ಥ ಮನಸ್ಸು. ಈ  ಸ್ವಾರ್ಥವಿಲ್ಲದ ಪ್ರೀತಿ ವಿಶ್ವಾಸ ತೋಳ್ಪಲದಿಂದ ಗಳಿಸಲಾಗದೇ ಇದ್ದುದನ್ನು ತೋರಿಸಿಕೊಟ್ಟಿದೆ.  ಒಳ್ಳೆಯ ಗಂಡನ ಮನೆ ತಮ್ಮ ಮನೆಯ ಹೆಣ್ಣು ಮಗಳಿಗೆ ಸಿಗಬೇಕು. ಇದು ಎಲ್ಲ ಹೆಣ್ಣು ಹೆತ್ತವರ ಸಹಜ ಆಶಯ. ಅದು ಒದಗಿ ಬರುವುದು ಅದೃಷ್ಟದಿಂದ. ಅಂತೆಯೇ ಒಳ್ಳೆಯ ಮಾವನ ಮನೆ ಎಂಬುದು ಗಂಡಿನ ಅತ್ಯಂತ ದೊಡ್ಡ ಭಾಗ್ಯ. ಅದನ್ನು ಪಡೆದ ಮಹಾ ಅದೃಷ್ಟ ನನ್ನ ಜತೆಗಿದೆ.
ಏನೂ ಇಲ್ಲದ ನನ್ನಲ್ಲಿ ಎಲ್ಲವನ್ನೂ ಕಂಡು ಎಲ್ಲವನ್ನೂ ತುಂಬಿಕೊಂಡು ಆಶೀರ್ವದಿಸಿದ ಮಾವ ಇನ್ನು ಕೇವಲ ನೆನಪಾಗಿ ಹೋಗಿದ್ದಾರೆ. ನೆನಪಿನ ಪುಟಗಳನ್ನು ಬರೆಯುವುದಕ್ಕೆ ಕೈಗಳು ಓಡುತ್ತಿಲ್ಲ. ಮನಸ್ಸಿನ ಕಲ್ಪನೆಗಳು ನಾಗಾಲೋಟದಿಂದ ಘಟನೆಗಳನ್ನು ಸ್ಮರಿಸುತ್ತವೆ. ಮೊನ್ನೆ ಅಂದರೆ ದಿನಾಂಕ ೨೬.೦೮.೨೦೧೮ ರಂದು ತನ್ನ ಕೊನೆಯ ಉಸಿರನ್ನು ಚೆಲ್ಲಿ ನಮ್ಮನ್ನೆಲ್ಲ ಅಗಲಿದ್ದ ಸತ್ಯವನ್ನು ಮನಸ್ಸು ನಂಬುತ್ತಿಲ್ಲ. ಅಂತಹ ಮಧುರ ನೆನಪುಗಳು ಮಾವ ಉಳಿಸಿ ಹೋಗಿದ್ದಾರೆ. ಜೀವನ ಪರ್ಯಂತ ಯಾರನ್ನೂ ದ್ವೇಷಿಸದ ಎಲ್ಲರಲ್ಲೂ ಒಂದಾಗಿ ಬೆರೆಯುವ ಚಟುವಟಿಕೆಯ ಉತ್ಸಾಹಿ ಮಾವ ಇನ್ನಿಲ್ಲವೆಂದರೆ ನಂಬುವುದಾದರೂ ಹೇಗೆ.?
ಹುಟ್ಟು ಹಲವು ಪ್ರಶ್ನೆಗಳನ್ನು ಹುಟ್ಟಿಸಿದರೆ ಸಾವು ಎಲ್ಲ ಪ್ರಶ್ನೆಗಳಿಗೂ ಉತ್ತರವಂತೆ. ವೇದಾಂತಿಗಳ ಮಾತು. ಉತ್ತರವಿಲ್ಲದ ಪ್ರಶ್ನೆಗಳು ಮಾವನಲ್ಲಿ ಇರಲಿಲ್ಲ.  ಮಾವನ ಪ್ರೀತಿ ಪ್ರಶ್ನೆಗಳಿಲ್ಲದ ಉತ್ತರಗಳಾಗಿದ್ದವು.  ಅದರ ಮಾರ್ದವತೆ ಇನ್ನು ನೆನಪು ಮಾತ್ರ. ಮನೆಯ ಮೂಲೆ ಮೂಲೆಯಲ್ಲೂ ತಡಕಾಡಿದಷ್ಟೂ ನೆನಪುಗಳನ್ನು ಮಾವ ತುಂಬಿಸಿಬಿಟ್ಟಿದ್ದಾರೆ. ಇನ್ನು ಮೂಲೆ ಮೂಲೆ ತಡಕಾಡಿ ಒಂದೊಂದನ್ನೇ  ತೆಗೆದು ಸ್ಮರಿಸಿಕೊಳ್ಳುವುದಷ್ಟೇ ಉಳಿದು ಹೋಗಿದೆ.
ಸುರಿಯುವ  ಒಂದು ತೊಟ್ಟು ಕಂಬನಿ ಸಾವಿರದ ಕಥೆಯನ್ನು ಹೇಳಿದರೆ ಮಾವನ ಬದು ಸಾವಿರದ ನೆನಪನ್ನು ಸಾರುತ್ತದೆ.  ಮಾವನ ಆತ್ಮಕ್ಕೆ ಶಾಂತಿಯನ್ನು ಕೋರುವುದರಲ್ಲಿ ಒಂದು ಕೃತಾರ್ಥತೆ. ಒಂದು ಬದ್ದತೆ ಇದೆ. ಅದೇ ಹಸಿರು . ಅದೇ ಉಸಿರು.


1 comment:

  1. ಮಾತುಗಳೆ ಬರುತ್ತಿಲ್ಲ, ತುಂಬಾ ಚೆನ್ನಾಗಿದೆ ಬರಹ

    ReplyDelete