"ಕೊಡುವವನು ಭೇಡುವುದಿಲ್ಲ ಬೇಡುವವನು ಕೊಡುವುದಿಲ್ಲ." ಯಾರೋ ಒಬ್ಬ ಹೇಳಿದ ಮಾತು. ಲೋಕವನ್ನು ಬೆಳಗುವ ಸೂರ್ಯ ಎಂದೂ ಬೆಳಕನ್ನು ಭೇಡುವುದಿಲ್ಲ. ಉರಿಸುವ ದೀಪ ಒಂದು ಕಿಡಿ ಜ್ವಾಲೆಯನ್ನು ಪಡೆದರೆ ಅದಕ್ಕಿಂತ ಹತ್ತಾರು ಪಟ್ಟು ಬೆಳಕನ್ನು ನೀಡುತ್ತದೆ. ಜೀವನದ ಸತ್ಯಗಳು ಹೀಗೆ. ವಿದ್ಯಾಭ್ಯಾಸ ಶಿಕ್ಷಣ ಇಲ್ಲದ ಪಾಠ ಶಾಲೆ ಎಂಬುದಿದ್ದರೆ ಅದು ಪ್ರಕೃತಿ. ಪಾಠ ಕಣ್ಣಿನ ಎದುರೇ ಕಂಡರೂ ಮನುಷ್ಯ ಪಾಠ ಕಲಿಯುವುದಿಲ್ಲ. ಆದರೂ ಪ್ರಕೃತಿ ಛಲದಿಂದ ಮತ್ತೂ ಮತ್ತೂ ಪಾಠವನ್ನು ಕಲಿಸುತ್ತದೆ. ಮನುಷ್ಯ ಅಲಕ್ಷಿಸುತ್ತಾನೆ.
ನಾವು ಮೊದಲು ಹಳ್ಳಿಯಲ್ಲಿರುವಾಗ ಕೆಲವೊಂದು ಘಟನೆಗಳು ಸಂಭವಿಸುತ್ತಿತ್ತು. ಮನೆಯಲ್ಲಿ ಕುಳಿತು ಟಿವಿಯಲ್ಲಿ ಒಳ್ಳೆ ಸಿನಿಮಾ ನೋಡಬೇಕು ಯಕ್ಷಗಾನವೊ ಸಂಗೀತವೋ ಕೇಳಬೇಕು ಅಂತ ಕ್ಯಾಸೆಟ್ ತರುತ್ತಿದ್ದೆ. ಹೀಗೆ ಮಹದಾಶೆ ಇರಿಸಿ ತಂದ ಮರುಕ್ಷಣ ಮನೆಯಲ್ಲಿನ ಕರೆಂಟು ಹೋಗುತ್ತದೆ ಮಾತ್ರವಲ್ಲ ಎರಡು ಮೂರು ದಿನ ಕರೆಂಟೇ ಇರುವುದಿಲ್ಲ. ಜೋರು ಮಳೆಗಾಲ ಶುರುವಾಯಿತು. ಒಂದು ದಿನ ಮಳೆಗೆ ನೆನೆದು ತೊಪ್ಪೆಯಾಗಿ ಬರುತ್ತೇವೆ. ಛೇ ಹೊಸ ಕೊಡೆ ಕೊಳ್ಳಬೇಕು ಅಂತ ಯೋಚಿಸಿ ಹೊಸ ಕೊಡೆ ಕೊಂಡುಕೊಂಡು ಕಂಕುಳಲ್ಲಿ ಇಟ್ಟರೆ ಒಂದು ಹನಿ ಮಳೆಯೂ ಬೀಳದೆ ಕೊಡೆ ನಮ್ಮನ್ನು ಅಣಕಿಸುತ್ತಿರುತ್ತದೆ.
ಹಳ್ಳಿಯ ಜೀವನ. ಹೆಚ್ಚಾಗಿ ಮನೆಯಲ್ಲೇ ಕಾಲ ಕಳೆಯುವುದು. ಹೊಸ ಬಟ್ಟೆ ಖರೀದಿಸಿ ತಂದು ಇಟ್ಟು ಯಾವುದಾದರೂ ಸಮಾರಂಭಕ್ಕೆ ತೊಡುವ ಕನಸು ಕಾಣುತ್ತೇವೆ. ಬಟ್ಟೆ ತಂದಿಡುವುದಷ್ಟೇ ಒಂದು ಸಮಾರಂಭಕ್ಕೆ ಹೋಗುವ ಅವಕಾಶ ಬಿಡಿ ಮನೆ ಬಿಟ್ಟು ಸುಮ್ಮನೇ ಅಂಗಡಿಯ ಬಳಿಗೆ ಹೋಗುವ ಅವಕಾಶವೂ ಬರುವುದಿಲ್ಲ. ಶಾಲೆಗೆ ಹೋದಾಗ ಹೊಸ ಪುಸ್ತಕ ಹೊಸ ಬಟ್ಟೆ ಇದರ ಸಂಭ್ರಮವೇ ಬೇರೆ. ಹೊಸ ಪುಸ್ತಕ ಕೊಂಡುಕೊಂಡರೆ ಮಾಷ್ಟ್ರು ಒಂದಕ್ಷರವೂ ಬರೆಸುವುದಿಲ್ಲ. ಬರೆಯುವ ಕೆಲಸವೂ ಕೊಡುವುದಿಲ್ಲ . ಮನೆಗೆಲಸವೂ ಇಲ್ಲ. ಕೊನೆಗೆ ಬರೆಯುವುದಕ್ಕೆ ಇಲ್ಲದೆ ಇದ್ದರೂ ಸಂಭ್ರಮದಿಂದ ಪುಸ್ತಕ ಸುಮ್ಮನೇ ತೆರೆದು ಅದರ ಗಂಧವನ್ನು ಒಮ್ಮೆ ಆಸ್ವಾದಿಸುತ್ತೇವೆ.
ಮದುವೆಯಾಗಿ ಹೊಸ ಜೀವನ ಆರಂಭಿಸಿಯಾಗಿರುತ್ತದೆ. ಒಂದು ವಾರವೂ ಆಗಲಿಲ್ಲ. ಹೆಂಡತಿಯ ಅಪ್ಪ ಮಗಳನ್ನು ತಾಯಿಮನೆಗೆ ಕರೆದುಕೊಂಡು ಹೋದರೆ ಹೇಗಾಗಬೇಡ?
ಹೀಗೆ ಹಲವು ಬಯಸಿದರೂ ಸಿಗದೇ ಇರುವ ಸಂಭವಗಳು ನೆನಪಿಗೆ ಬಂತು. ಕಾರಣ ಇಷ್ಟೇ........ಜ್ವರ ಅಳೆಯುವುದಕ್ಕೆ ಹೊಸ ಥರ್ಮಾ ಮೀಟರ್ ಕೊಂಡು ತಂದೆವು. ಹಾಗಂತ ಅದನ್ನು ಉಪಯೋಗಿಸಲೇ ಬೇಕು ಎಂದು ಜ್ವರ ಬಂದರೆ ಅಂತ ಬಯಸಿದರೆ ಆದೀತೆ. ಅದೂ ಈ ಕೊರೋನಾ ಕಾಲದಲ್ಲಿ. ಒಂದು ಜ್ವರದ ಮಾತ್ರೆ ಕೊಡುವುದಕ್ಕೂ ಮೆಡಿಕಲ್ ನವರು ಸಂಪೂರ್ಣ ಜಾತಕ ಕೇಳುತ್ತಾರೆ.
ಈಗ ಹೆಚ್ಚಿನವರಿಗೆ ಪ್ರೆಜ್ಞೆ ಬಂದಿದೆ. ರೋಗನಿರೋಧಕ ಶಕ್ತಿಯ ಬಗ್ಗೆ ಯೋಚಿಸುತ್ತಾರೆ. ಇದುವರೆಗೆ ರೋಗ ನಿರೋಧಕ ಎಂಬುದರ ಬಗ್ಗೆ ತಲೆಕೆಡಿಸದೇ ಇರುವವರು ಈಗ ಮನೆಯಲ್ಲೇ ಸುಲಭದಲ್ಲೇ ಆಗುವ ಕಷಾಯದತ್ತ ಒಲವು ತೋರಿಸಿದ್ದಾರೆ. ಹಣ್ಣು ಹಂಪಲು ಅಂತ ದುಡ್ಡಿದ್ದಷ್ಟು ಕೊಳ್ಳುವುದಕ್ಕೆ ಯೋಚಿಸುತ್ತಿದ್ದಾರೆ. ದೇವರಿಗಷ್ಟೇ ತುಲಸೀ ಅಂತ ಭಕ್ತಿ ತೋರುತ್ತಿದ್ದವರು ಈಗ ತುಲಸಿ ರಸ ಹಿಂಡುವುದಕ್ಕೆ ಆರಂಭಿಸುತ್ತಾರೆ. ಇದನ್ನೆಲ್ಲ ಕಾಣುವಾಗ ಕೋರೋನಕ್ಕೆ ಮದ್ದಿಲ್ಲ ಎಮ್ಬುದು ಸತ್ಯ. ಒಂದು ವೇಳೆ ಮದ್ದು ಲಸಿಕೆ ಇರುತ್ತಿದ್ದರೆ? ಔಷಧಿ ಸಿಗದೇ ಹೋಗಲಿ ಅಂತ ಯೋಗ ಗುರುಗಳು ಬಯಸಿದರೂ ಅಚ್ಚರಿಯಾಗದು. ಯೋಗದ ಬಗ್ಗೆ ಅದು ಅರೆಬೆರೆ ಜ್ಞಾನವಾದೀತು. ಕೇವಲ ಈ ಕೋರೋನ ಕಾಲಕ್ಕೆ ಮಾತ್ರ ರೋಗ ಮುಕ್ತರಾದರೆ ಸಾಕೇ? ಕೊರೋನ ಕಾಲ ಕಳೆದರೂ ಈ ಹವ್ಯಾಸ ಮುಂದುವರೆಯಬಹುದು. ಇದರ ರುಚಿ ಹತ್ತಿದ ಮನುಷ್ಯ ಇದಕ್ಕೆ ಮನ ಮಾಡದೇ ಇರಲಾರ. ಇದು ಆಶಾಭಾವ.
No comments:
Post a Comment