ವಕ್ರತುಂಡ ಮಹಾಕಾಯ ...ಅಂತ ಹೇಳಿ ಕೋಟಿ ಸೂರ್ಯನಿಗೆ
ಸಮೀಕರಿಸಿ ಭಗವಂತನನ್ನು ಆರಾಧಿಸುತ್ತೇವೆ ಮತ್ತು ಕಾಣಲು ಬಯಸುತ್ತೇವೆ. ಕೋಟಿ ಸೂರ್ಯನನ್ನು ಕಂಡವರಾರು? ಒಬ್ಬ ಸೂರ್ಯನ ಪ್ರಭೆಯನ್ನೆ ಅರಗಿಸುವುದು ಅಸಾಧ್ಯವಾಗಿರುವಾಗ ಕೋಟಿಸೂರ್ಯನ
ಪ್ರಭೆಯ ಕಲ್ಪನೆಯಲ್ಲೇ ಭಗವಂತನ ಕಲ್ಪನೆಯನ್ನು ಮಾಡುತ್ತೇವೆ ಮಾತ್ರವಲ್ಲ, ಅದನ್ನೇ ಕಾಣಲು ಪ್ರಯತ್ನಿಸುತ್ತೇವೆ. ನಮ್ಮ ಮನಸ್ಸು ಕಲ್ಪಿಸಲಾಗದ ವಸ್ತುವೆ ದೇವರು. ಕಲ್ಪಿಸಲಾಗದೇ
ಇದ್ದುದನ್ನು ಕಲ್ಪಿಸಿ ನಮ್ಮ ಭಾವನೆಗೆ ಅನುಗುಣವಾಗಿ ಪ್ರತಿಮೆ ಅಥವಾ ಮೂರ್ತ ಸ್ವರೂಪವಾಗಿ ಮೂರ್ತಿಯನ್ನಾಗಿಸುತ್ತೇವೆ.
ನಿಜವಾಗಿ ನಾವು ಆರಾಧಿಸುವುದು ನಮ್ಮ ಭಾವನೆಯನ್ನು. ಹೊರತು ದೇವರನ್ನಲ್ಲ. ನಮ್ಮ ಭಾವನೆಗಳೇ ದೇವರಾಗಿಬಿಡುತ್ತದೆ.
ನಮ್ಮ ಭಾವನೆಗಳನ್ನಷ್ಟೇ ಗೌರವಿಸುವ ನಮ್ಮಲ್ಲಿ ಅಹಂ
ಅವ್ಯಕ್ತವಾಗಿ ರಹಸ್ಯವಾಗಿ ನಮಗರಿವಿಲ್ಲದೇ ಇರುತ್ತದೆ. ಬೇರೆ ಕಲ್ಪನೆಯನ್ನು ಬೇರೆ ಭಾವನೆಯನ್ನು ಮನಸ್ಸು
ಒಪ್ಪಿಕೊಳ್ಳುವುದೇ ಇಲ್ಲ.
ಅಘಟಿತ ಘಟನಾಪಟು ಭಗವಂತ. ನಮ್ಮ ಪ್ರತಿಯೊಂದು
ಆಗು ಹೋಗುಗಳಿಗೂ ಭಗವಂತನೇ ಮೂಲ ಕಾರಣ. ಎಲ್ಲವನ್ನು ಭಗವಂತನಿಗೆ ಅರ್ಪಿಸಿ ಹುಟ್ಟುವಾಗಲೇ ಭಗವಂತನಲ್ಲಿ
ಒಂದು ಕರಾರನ್ನು ಒಪ್ಪಿಸಿದಂತೆ ನಮ್ಮ ಭಾವನೆಗಳನ್ನೂ ದೇವರಿಗೆ ಅರ್ಪಿಸಿಬಿಡುತ್ತೇವೆ. ನಮ್ಮ ಬದುಕಿನ
ಸುಖ ದುಃಖಗಳಿಗೆ ಭಗವಂತನನ್ನೇ ಹೊಣೆಯಾಗಿಸುವಲ್ಲಿ ನಮ್ಮ ಮನಸ್ಸು ಭಗವಂತನೊಡನೆ ಒಪ್ಪಂದವನ್ನು ಮಾಡಿಕೊಂಡಂತೆ
ವರ್ತಿಸುತ್ತೇವೆ. ಯಾವುದೇ ಕಷ್ಟನಷ್ಟಗಳಿಗೆ ಲಾಭ ಪ್ರಲೋಭಗಳಿಗೆ ಆಶೆ ಹತಾಶೆಗಳಿಗೆ ಪರಮಾತ್ಮನನ್ನೆ
ಕಾರಣವನ್ನು ಕಾಣುತ್ತ ಮನಸ್ಸು ಪರಭಾರೆಯನ್ನು ಅರ್ಪಿಸಿದರೂ ನಿರಾಳವಾಗಿರುವುದಿಲ್ಲ. ಹೀಗೆ ಒಂದು ಉದ್ವೇಗ,
ಬಿಡದೇ ನಮ್ಮನ್ನು ಹಿಂಬಾಲಿಸುತ್ತದೆ. ಈ ವಸ್ತುಸ್ಥಿತಿಯನ್ನು ಅರಿಯುವಾಗ ಪಾರಮಾರ್ಥಿಕತೆ ಅರಿವಿಗೆ
ಬರುತ್ತದೆ.
ಮನುಷ್ಯ
ಮನುಷ್ಯನಾಗಿ ಹುಟ್ಟಿ ಬರುವುದೇ ಮೋಕ್ಷಕ್ಕೋಸ್ಕರ. ಎಂದು ಜ್ಞಾನಿಗಳು ಹೇಳುತ್ತಾರೆ. ಅಂದರೆ ಯಾವುದೇ ಪ್ರಾಣಿಗೆ ಮೋಕ್ಷ ಹೊಂದುವ ಅವಕಾಶ ಇರುವುದಿಲ್ಲ.
ಅದು ಮೋಕ್ಷಕ್ಕಾಗಿ ಮತ್ತೊಂದು ಜನ್ಮವನ್ನು ತಳೆಯಬೇಕಾಗುತ್ತದೆ. ಮೋಕ್ಷ ಎಂಬ ಪರಮ ಪದವೇ ಹಾಗೆ, ಎಲ್ಲವೂ ಕ್ಷಯಿಸುವಾಗ ಒದಗಿ ಬರುವ ಸ್ಥಿತಿ. ಇಲ್ಲಿ ನಮ್ಮ ಅಹಂಕಾರ ಪ್ರವೃತ್ತಿಯಿಂದ
ಕೋಟಿಸೂರ್ಯನ ಪ್ರತಿಭೆಯನ್ನು ಕಾಣುವ ವಿಶ್ವಾಸದಲ್ಲಿ ಅಥವಾ ಕಲ್ಪನೆಯಲ್ಲಿ ಇದ್ದರೂ ಸಹ ನಮ್ಮ ಸ್ಥಿತಿಯ
ಅರಿವಿರದೆ ಕ್ಷಯವಾಗದ ಪಾಪಕಾರ್ಯಗಳನ್ನು ಪ್ರತಿಕ್ಷಣವೂ ಮಾಡುತ್ತ ಇರುತ್ತೇವೆ. ಹಾಗಾದರೆ ಈ ಪಾಪಗಳಿಂದ
ಮುಕ್ತಿ ಹೇಗೆ?
ಕಲಿಯುಗದಲ್ಲಿ ಕೇವಲ ಭಗವಂತನ ನಾಮ ಸ್ಮರಣೆ ನಮ್ಮನ್ನು ಪಾಪ
ಮುಕ್ತನನ್ನಾಗಿಸುತ್ತದೆ. ಒಂದು ತೊಟ್ಟು ಆಚಮನ ಮಾಡಿಕೊಂಡು ನಾವು ದೇಹ ಶುದ್ಧಿಯ ವಿಶ್ವಾಸ ತಳೆದಂತೆ.
ಪಾಪ ಮುಕ್ತರಾಗುವ ಹಂಬಲ. ಹಾಗಿದ್ದರೂ ಸಹ ನಮ್ಮ ಅಭೀಷ್ಟಗಳನ್ನು, ಇದನ್ನು ಸ್ವಾರ್ಥದ ರೂಪಗಳು
ಎನ್ನಬಹುದು, ನಮಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆಯೋ, ಉತ್ತಮ ವರಮಾನ ಇರುವ ಉದ್ಯೋಗ ಸಿಗಲಿ ಎಂತಲೋ, ಬದುಕಲ್ಲಿ ಉತ್ತಮ
ಸಂಗಾತಿ ಹೆಂಡತಿಯೋ ಗಂಡನೋ ಸಿಗಲಿ ಎಂತಲೋ ಪರಿಮಿತಿ
ಇಲ್ಲದ ನಮ್ಮ ಅಭೀಷ್ಟಗಳನ್ನು ಪರಮಾತ್ಮನ ಮುಂದಿಟ್ಟು ಆ ಸ್ವಾರ್ಥದಲ್ಲೇ ಪರಮಾತ್ಮನ ನಾಮ ಸ್ಮರಣೆ ಮಾಡುತ್ತೇವೆ.
ವಾಸ್ತವದಲ್ಲಿ ನಾಮ ಸ್ಮರಣೆಯ ಓಂಕಾರ ಸ್ವರೂಪ ನಮ್ಮ ದೇಹವನ್ನೂ ಮನಸ್ಸನ್ನೂ ಶುದ್ದೀಕರಿಸುವುದೇ ಅಗಿರುತ್ತದೆ. ಓಂ ಶಾಂತಿ ...ಅಂತ ಶಾಂತಿ ಮಂತ್ರ ಹೇಳುವಾಗ
ನಮಗೆ ಬರಲಿರುವ ಕಷ್ಟಗಳು ಪರಿಹರಿಸಿ ಶಾಂತವಾಗಲಿ, ಅಥವಾ ಪರಮಾತ್ಮ
ನಮ್ಮಲ್ಲಿ ವ್ಯಗ್ರನಾಗಿದ್ದರೆ ಆ ದೃಷ್ಟಿ ಶಾಂತವಾಗಲಿ, ಅಥವಾ ಶಾಂತವಾಯಿತು
ಎಂಬ ಆತ್ಮ ತೃಪ್ತಿಯೇ ಆಗಿರುತ್ತದೆ. ಹೀಗೆ ಕಲ್ಪಿಸುವಲ್ಲಿ ನಮ್ಮ ಪಾಪ ಕ್ರಿಯೆಗಳನ್ನು ಮರೆಯಾಗಿಸಿ
ಒಂದು ರೀತಿಯಲ್ಲಿ ಮುಚ್ಚಿಟ್ಟು ನಾವು ಮುಕ್ತರಾಗುವ ಹಂಬಲವಿರುತ್ತದೆ. ವಾಸ್ತವದಲ್ಲಿ ಈ ಶಾಂತಿ ಮಂತ್ರವು
ನಾವು ಮಾಡಿದ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸುವುದೇ ಆಗಿರುತ್ತದೆ. ಮುಚ್ಚಿಟ್ಟುಕೊಳ್ಳುವುದು ಮತ್ತು
ಶುದ್ಧೀಕರಿಸುವುದು ಎರಡು ಮೇಲ್ನೋಟಕ್ಕೆ ಒಂದೇ ಅಂತ ಭಾವಿಸಿದರೂ ನಾವು ಶಾಂತಿ ಮಂತ್ರ ಉಚ್ಚರಿಸುವಾಗ
ಅದರ ಉದ್ದೇಶ ಸಂಕಲ್ಪ ಶುದ್ಧಿ ಅತ್ಯವಶ್ಯ. ನಾನು ಪಾಪ ಮಾಡಿದ್ದೇನೆ. ಆ ಪಾಪದಿಂದ ನಾನು ಮುಕ್ತನಾಗಬೇಕು
ಎಂಬುದೇ ಆಗಿರಬೇಕು. ಇಲ್ಲಿ ಯಾವುದೇ ಅಭೀಷ್ಟ ನೆರವೇರಿಸಲ್ಪಡುವುದಿಲ್ಲ.
ನಾವು ಪಾಪ ಮಾಡಿದ್ದೇವೆ ಮತ್ತು ಮಾಡುತ್ತಲಿದ್ದೇವೆ
ಇದು ನಮಗೆ ಅನಿವಾರ್ಯ. ಈ ಅನಿವಾರ್ಯ ಬಂಧನದಿಂದ ಮುಕ್ತವಾಗಿ ಪರಿಮಾರ್ಜನೆಯನ್ನು ಅನುಭವಿಸುವುದು ಓಂ
ಶಾಂತಿಃ ಎಂಬ ಶಾಂತಿ ಮತ್ರ ಧ್ಯಾನದಿಂದ. ಹಾಗಾಗಿ ಯಾವುದೇ ನಾಮ ಸ್ಮರಣೆಯಾಗಲಿ ಯಾವುದೇ ಮಂತ್ರವಾಗಲೀ
ನಮ್ಮ ಲೌಕಿಕ ಅಭೀಷ್ಟಗಳನ್ನು ನೆರವೇರಿಸಲಾರವು. ಲೌಕಿಕವಾದ ಆಶೆಗಳೆಲ್ಲವೂ ಫಲಿಸುವುದು ಫಲಿಸದೇ ಇರುವುದು
ಅದು ಕಾಲಕ್ಕೆ ಹೊಂದಿಕೊಂಡೇ ಇರುತ್ತದೆ. ಈ ಆತ್ಮ ತೃಪ್ತಿ
ಬಂದಾಗ ಪರಮಾತ್ಮನ ಧ್ಯಾನದಲ್ಲಿ ಅತಿಹೆಚ್ಚು ಏಕಾಗ್ರತೆಯನ್ನು ಸಾಧಿಸಿ ಮುಕ್ತವಾಗುವುದಕ್ಕೆ ಸಾಧ್ಯವಾಗುತ್ತದೆ.
ಧ್ಯಾನದಲ್ಲಿ ಪರಮಾತ್ಮನೊಡನೆ ಅನುಸಂಧಾನ ಮಾತ್ರವಿದ್ದು ಅಲ್ಲಿ ಯಾವುದೇ ಬೇಡಿಕೆ ಇರುವುದಿಲ್ಲ. ನಮ್ಮ
ಮನದ ಮೂಲೆಯಲ್ಲಿ ಕಿಂಚಿದ್ ಮಾತ್ರವೂ ಆಶೆಗಳಿದ್ದಲ್ಲಿ
ಧ್ಯಾನದ ಸಂಪೂರ್ಣ ಸ್ಥಿತಿ ಸಾಧ್ಯವಿಲ್ಲ. ಆಶೆಗಳು ಪರಮಾತ್ಮನ ಇರವನ್ನು ಗ್ರಹಿಸುವುದಕ್ಕೆ ಅಡ್ಡಿಯಾಗುತ್ತದೆ.
ಅದಕ್ಕೆ ಹಲವು ಕಾರಣಗಳಿರುತ್ತದೆ. ನಮ್ಮ ಅಭಿಲಾಷೆಗಳು ನ್ಯಾಯ ಸಮ್ಮತ ಇಲ್ಲದೇ ಇರಬಹುದು. ಅದು ನಮ್ಮ
ಸ್ವಾರ್ಥವಾಗಿರಬಹುದು ಹೀಗೆ ಆಶೆಗಳ ನಿವೇದನೆಯಲ್ಲೇ ಮನಸ್ಸು ಕೇಂದ್ರಿಕರಿಸಿ ಮನಸ್ಸಿಗೆ ದುಗುಡ ಆವರಿಸಿರುತ್ತದೆ. ಧ್ಯಾನ ....ಸಂಪೂರ್ಣ ನಿರಾಳತೆಯಲ್ಲಿ ಮಾತ್ರ ಸಾಧ್ಯವಾಗುತ್ತದೆ.
ದೇಹ ಮನಸ್ಸು ಎಲ್ಲವೂ ಮುಕ್ತವಾದಾಗ ಅದು ಚರಮಾವಸ್ಥೆಗೆ ಹೋಗುವಲ್ಲಿ ಉದ್ಯುಕ್ತವಾಗುತ್ತದೆ.
ಹಾಲು ಕುದಿದು ಉಕ್ಕಿದ
ನಂತರ ಕೆನೆ ಒಡೆದು ಕುದಿಯುವಂತೆ ನಂತರ ಅದಕ್ಕೆ ಉಕ್ಕುವ ತುಮುಲ ಇರುವುದಿಲ್ಲ. ಮತ್ತೆ ಮುಂದೆ ಒತ್ತಲಾಗದ ಮೂರ್ಧನ್ಯಾವಸ್ಥೆ , ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ
ಮಂತ್ರ ನಮ್ಮನ್ನು ಸುಪ್ತಾವಸ್ತೆಗೆ ಕೊಂಡು ಹೋಗುತ್ತದೆ.
ದೇಹ, ಭಾರವನ್ನು ಕಳೆದುಕೊಳ್ಳುತ್ತದೆ. ಕ್ಷಣ ಹೊತ್ತು
ನಮ್ಮೊಳಗಿನ ಅದ್ವೈತ ತತ್ವವನ್ನು ಸಾರುವಂತೆ ಭಾಸವಾಗುತ್ತದೆ. ಅದೇ ಪರಮಾತ್ಮ ಸಾನ್ನಿಧ್ಯ.
ನೀರವ ಮೌನದ ನಿರಾಳ ಸಂದೇಶವೇ ಓಂ ಶಾಂತಿಃ
No comments:
Post a Comment