Thursday, December 3, 2020

ಹೇ ಭಗವಂತಾ..

ಹೇ ಭಗವಂತಾ..

 ಎಂಬ ಒಂದು ಉದ್ಗಾರ ಅತೀತವಾದ ಶಕ್ತಿಗೆ ದ್ಯೋತಕವಾಗಿ ನಮ್ಮಿಂದ ಹೊರಹೊಮ್ಮುತ್ತದೆ. ಭಗಂತ, ಪರಮಾತ್ಮ ದೇವರು ಹೀಗೆ ಅರ್ಥಗರ್ಭಿತವಾದ ಹೆಸರು ಹಲವು ಇರಬಹುದು. ಮನಸ್ಸಿಗೆ ಹತ್ತಿರವಾಗದೇ ಇದ್ದಾಗ ಇವೆಲ್ಲ ಕೇವಲ ಹೆಸರುಗಳಾಗುತ್ತವೆ.  ಪರಮಾತ್ಮ ರೂಪದಿಂದ ಭಾವದಿಂದ ವಿಶ್ವಾಸದಿಂದ ಮನಸ್ಸಿನಲ್ಲಿ ಭದ್ರವಾದ ಭಾವನೆಗಳು ಹಲವಿರಬಹುದು. ಆದರೆ ಈ ಭಾವನೆಗಳು ನಮ್ಮಲ್ಲಿ ತಾದಾತ್ಮ್ಯವನ್ನು ಆತ್ಮ ಸಂಬಂಧವನ್ನು ಹುಟ್ಟಿಸುತ್ತದೆ ಎಂಬುದು ಮನಸ್ಸಿನ ಏಕಾಗ್ರತೆಯನ್ನು ಹೊಂದಿಕೊಂಡಿರುತ್ತದೆ.

 

ನಾವು ಯಾರೊಂದಿಗೋ ಮಾತನಾಡುತ್ತಿರುತ್ತೇವೆ. ಆತನಿಗೊಂದು ಕರೆ ಬರುತ್ತದೆ. ಅಥವಾ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಆತನನ್ನು ಮಾತಿಗೆಳೆಯುತ್ತಾನೆ. ಅದುವರೆಗೆ ಆತ್ಮೀಯವಾಗಿ ಗಹನವಾಗಿ ಮಾತನಾಡುತ್ತಿದ್ದ ಆತನ ಗಮನ ಒಂದಿಷ್ಟು ಆಕಡೆಗೆ ಸೆಳೆಯಲ್ಪಡುತ್ತದೆ. ನಮ್ಮ ಮಾತುಗಳನ್ನು ಕೇಳುತ್ತಿದ್ದವನು ಹಾಗೇ ಮತ್ತೊಂದು ಕಡೆಗೆ ಹೂಂ ಗುಟ್ಟುತ್ತಾ ನಮ್ಮನ್ನು ಕಾಯಿಸುತ್ತಾನೆ. ಅಥವಾ ಆತನ ಪೋನ್ ಸಂಭಾಷಣೆ ಮುಗಿಯುವುದನ್ನೇ ಕಾಯುತ್ತಿರುತ್ತೇವೆ.  ಆಗ ನಮಗೆ ಒಂದು ರೀತಿ ಅವಮಾನವಾದಂತಾಗುತ್ತದೆ. ನನ್ನ ಮಾತಿಗೆ ಈತನ ಗಮನ ಇಲ್ಲ ಎಂಬ ಅನುಮಾನ ಉಂಟಾಗುತ್ತದೆ. ಅಸಮಾಧಾನ ಉಂಟಾಗಿ ಅತೃಪ್ತಿ ಉಂಟಾಗುತ್ತದೆ.  ಈಗೀಗಲಂತೂ ಮೊಬೈಲ್ ಎಂಬ ಸಾಧನ ನಿತ್ಯ ಕೈ ಆಯುಧದಂತೆ ಕೈಯಲ್ಲಿರುವಾಗ ನಮ್ಮಲ್ಲಿ ಮಾತನಾಡುತ್ತಿದ್ದಂತೆ ಎಲ್ಲೆಂದರಲ್ಲಿ ಆತನಿಗೆ ಕರೆ ಬರುತ್ತದೆ. ನಮ್ಮ ಮಾತಿಗೆ ಸಹಜವಾಗಿ ತಡೆಯಾಗುತ್ತದೆ. ಇದೊಂದು ಅಸಮಾಧಾನವನ್ನು ಸೃಷ್ಟಿಸುತ್ತದೆ. ಇನ್ನೊಬ್ಬರೊಡನೆ ವ್ಯವಹರಿಸುವಾಗ ನಮಗೇ ಇಷ್ಟು ಕಿರಿ ಕಿರಿಯಾಗಬೇಕಾದರೆ ನಮ್ಮ ನಡವಳಿಕೆಯಲ್ಲೂ ನಾವೂ ಅಷ್ಟೆ ಪರಿಶುದ್ದಿಯಾಗಬೇಕಲ್ಲ?

ಸ್ನಾನ ಮಾಡಿ ಮಡಿ ಉಟ್ಟು ನಾಮ ಬಳಿದು ಭಕ್ತಿಯಿಂದ ( ಇದು ಕೇವಲ ಅಭಿನಯಮಾತ್ರ ಅಂತ ಸ್ವಲ ಗಂಭೀರವಾಗಿ ಯೋಚಿಸಿದರೆ ಅರಿವಾಗುತ್ತದೆ.) ಸಂಧ್ಯಾವಂದನೆ ಅಥವಾ ಪೂಜೆಗೆ ಅಣಿಯಾಗುತ್ತೇವೆ. ದೀಪ ಹಚ್ಚುವಾಗಲೇ ಮನೆ ಮಂದಿಯೊಂದಿಗೆ ಮಾತುಕತೆ ಜಗಳ ಅಥವಾ ಇನ್ನೇನೋ ಮತ್ತೊಂದು ವ್ಯವಹಾರ ಇದ್ದೇ ಇರುತ್ತದೆ. ಅಲ್ಲೇ ಇದ್ದ ಮೊಬೈಲ್ ರಿಂಗ್ ಆಗುತ್ತದೆ, ಇಲ್ಲ ಕಣ್ಣಿಗೆ ಬೀಳುತ್ತದೆ. ಮೊಬೈಲ್ ಎಂಬ ವಸ್ತು ಹೇಗೆಂದರೆ ಅದು ಕಣ್ಣಿಗೆ ಬಿದ್ದಾಗ ಎತ್ತಿಕೊಳ್ಳಬೇಕು. ಅದರ ಲಾಕ್ ತೆರೆದು ಸಹಜವಾಗಿ ವಾಟ್ಸಪ್, ಫೇಸ್ ಬುಕ್ ಮೇಸೆಜ್ ಇವಿಷ್ಟು ನೋಡಲೇ ಬೇಕು. ನಾವು ಹೊರಟ ಕೆಲಸ ಎನೋ ನಾವು ಮಾಡುತ್ತಿರುವುದೇನೋ. ದೇವರು ಅಂತ ನಾವು ಭಾವನೆ ಏನಿರುತ್ತದೆಯೋ ಅದಕ್ಕೆ ನಮ್ಮ ಆದ್ಯತೆ ಕಡಿಮೆಯಾಗಿರುತ್ತದೆ.   ಅಷ್ಟಾಗಿ ನಮ್ಮದು ನಮ್ಮ ಮಟ್ಟಿಗೆ ಭಕ್ತಿಯ ಪರಾಕಾಷ್ಠೆಯಾಗಿರುತ್ತದೆ. ನಮ್ಮ ಕ್ರಿಯೆ ಹೇಗಿರುತ್ತದೆ ಎಂದರೆ, ದೀಪ ಹಚ್ಚದೇ ಇದ್ದರೆ ಪೂಜೆ ಮಾಡದೇ ಇದ್ದರೆ ದೇವರು ಎಲ್ಲಿ ಕೋಪಿಸುತ್ತಾನೋ ಎಂಬ ಭಾವ ಇರುತ್ತದೆ. ಇದು ಭಕ್ತಿಯಲ್ಲದೆ ಕೇವಲ ಭಯ. ಭಯದಲ್ಲಿ ಭಕ್ತಿ ಇರುವುದಕ್ಕೆ ಸಾಧ್ಯವಿದೆಯೇ? ಯೋಚಿಸುವ ನಮ್ಮ ಕ್ರಿಯೆ ದೇವರನ್ನು ಅವಹೇಳನ ಮಾಡಿದಂತೆ ಅಲ್ಲವೇ. ದೇವರು ಎಂದರೆ ಕೇವಲ ನಮ್ಮ ನಂಬಿಕೆಯ ಸಂಕೇತ. ನಮ್ಮ ನಂಬಿಕೆಗೆ ನಾವು ಅವಹೇಳನ ಮಾಡುತ್ತೇವೆ ಎಂದಾದರೆ ನಮ್ಮ ವ್ಯಕ್ತಿತ್ವ ಎಂತಹುದು?  ನಾವು ನಮ್ಮ ಪರಿಸರವನ್ನು ಹೇಗೆ ಗೌರವದಿಂದ ಕಾಣಬಲ್ಲೆವು?

ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಊಟ ಮಾಡುವುದಕ್ಕೆ ಅದು ಒಪ್ಪದೆ ಹಟ ಮಾಡುತ್ತದೆ. ಆಗ ಅಮ್ಮ ಸಹಜವಾಗಿ ಹೇಳುವ ಮಾತು ಇರುತ್ತದೆ. ನೋಡು ಊಟ ಮಾಡು ಇಲ್ಲಾದರೆ ಮಾಮಿ(ದೇವರು) ಶಾಪ ಕೊಡ್ತಾನೆ....ದೇವರು ಎಂದರೆ ಭಕ್ತಿಯ ಬದಲು ಭಯವನ್ನೇ ಹುಟ್ಟಿಸುತ್ತೇವೆ. ಒಂದು ರೀತಿಯ ಭಯೋತ್ಪಾದನೆ. ದೇವರು ದೆಂದರೆ ಭಯ ಭಕ್ತಿ ಬೇಕು ಎನ್ನುವಾಗ ಭಕ್ತಿ ಬೇಕು ಆದರೆ ಭಯ ಅದು ಯಾಕೋ ನಮ್ಮ ಮತ್ತು ನಮ್ಮ ಆತ್ಮದ ಮಾನಸಿಕ ಸಂಬಂಧವನ್ನು ದೂರ ಮಾಡುತ್ತದೆ. ಹೀಗೆ ನಮ್ಮ ಮನಸ್ಸಿನೊಳಗೆ ಇಳಿಯುವುದುನ್ನು ನಾವು ಬಾಲ್ಯದಿಂದಲೇ ಕಳೆದುಕೊಳ್ಳುತ್ತೇವೆ.  ದೇವರಲ್ಲಿ ತಾದಾತ್ಮ್ಯವಾದ ಸಂಬಂಧ  ಮೂಡಬೇಕಾದರೆ ಭಯಕ್ಕಿಂತ ಭಕ್ತಿ ಅತ್ಯವಶ್ಯ. ಭಯವಿಲ್ಲದ ಭಕ್ತಿಯಾಗಬೇಕು. ಯೋಚಿಸಿ ಪ್ರೀತಿಯಿಂದ ಕಥೆ ಹೇಳಿ ನಕ್ಕು ನಗಿಸುವ ಅಜ್ಜ ಇಷ್ಟವಾಗುತ್ತಾರೆ, ಹೊರತು ಅದೇ ಅಜ್ಜ ಸಿಡಿ ಮಿಡಿಗೊಂಡು ಬೈಯುತ್ತಿದ್ದರೆ...ಆ ಅಜ್ಜ ಎಷ್ಟೇ ದೊಡ್ಡವರಾಗಲಿ ಮಕ್ಕಳಿಗೆ ಇಷ್ಟವಾಗುವುದಿಲ್ಲ.

ಯಾವುದೇ ಕಾರ್ಯ ಮಾಡುವಾಗ ನಾವು ನಮ್ಮ ಮನಸ್ಸಿಗೆ ಕೇಳಿಕೊಳ್ಳಬೇಕು. ಆ ಕಾರ್ಯವನ್ನು ನಾವೇಕೆ ಮಾಡುತ್ತೇವೆ.? ಮಗುವನ್ನು ಎತ್ತಿ ಆಡಿಸುತ್ತೇವೆ. ಯಾಕೆ ಆಡಿಸುತ್ತಿದ್ದೇವೆ? ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ಯಾಕೆ? ಹೀಗೆ ನಮ್ಮ ಪ್ರತಿಯೊಂದು ಕೆಲಸದಲ್ಲೂ ಉದಾತ್ತವಾದ ಕಾರಣಗಳಿರಬಹುದು. ಅದೇ ರೀತಿ ದೇವರ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ದೇವರಿಗೆ ಕೈ ಮುಗಿದು ಕಣ್ಣು ಮುಚ್ಚುತ್ತೇವೆ..ಮನಸ್ಸಿಗೆ ಕೇಳಿಬಿಡುವ ನಾವೇಕೆ ಕೈ ಮುಗಿದು ನಿಂತುಕೊಂಡಿದ್ದೇವೆ? ಯಾಕೆಂದರೆ ನಮ್ಮ ಮನಸ್ಸು ಬೇರೆನನ್ನೋ ಯೋಚಿಸುತ್ತಿದೆ.  ಯಾರೊಂದಿಗೋ ನಾವು ಮಾತನಾಡುತ್ತಿರಬಹುದು. ಕೈ ಮುಗಿಯುವುದು ಯಾಕೆ? ಕೈ ಮುಗಿಯುವಾಗಲೂ ಆತ್ಮವಂಚನೆ!!

ಸಂಧ್ಯಾವಂದನೆಗೆ ಕುಳಿತುಬಿಡುತ್ತೇವೆ. ಆಚಮನ ಮಾಡಿ ಸಂಕಲ್ಪ ಮಾಡಬೇಕಾದರೆ ಯಥಾ ಪ್ರಕಾರ ಮನೆಯ ಹೊರಗೆ ಯಾರೋ ಬಂದಿರುತ್ತಾರೆ, ಇಲ್ಲ ಮೊಬೈಲ್ ಫೋನ್ ಸದ್ದು ಮಾಡುತ್ತದೆ. ನಾವು ಎಲ್ಲವನ್ನು ಬಿಟ್ಟು ಹೊರಬರುತ್ತೇವೆ. ಇಲ್ಲ ಅಲ್ಲಿಂದಲೇ ಕೂಗಿ ಹೇಳುತ್ತೇವೆ. ಯಾರದು ? ನೋಡು. ಮತ್ತದೇ ದೇವರಿಗೆ ಅವಮಾನ ಮಾಡುತ್ತಿದ್ದೇವೆ.  ದಿನದ ಇಪ್ಪತ್ತನಾಲ್ಕು ಗಂಟೆಯಲ್ಲಿ ಒಂದು ಹತ್ತು ನಿಮಿಷ ನಾವು ಸಂಪೂರ್ಣವಾಗಿ ಸಮಯವನ್ನು ಪರಮಾತ್ಮನಿಗೆ ಮೀಸಲಾಗಿ ಇಡುವುದಕ್ಕೆ ಸಾಧ್ಯವಿಲ್ಲವಾದರೆ ಆ ಭಕ್ತಿಯಾಗಲೀ ಭಯವಾಗಲೀ ಕೇವಲ ಅಭಿನಯವಲ್ಲವೇ? ಯಾರಿಗೋ ತೋರಿಸುವುದಕ್ಕೆ ಅಥವಾ ಹೇಳಿಕೊಳ್ಳುವುದಕ್ಕೆ, ಇಲ್ಲಾ,  ನಮ್ಮ ಮನಸ್ಸಿನ ತೃಪ್ತಿಗೆ ನಮ್ಮ ಕ್ರಿಯೆಯಾಗಿರುತ್ತದೆ. ನಮ್ಮ ತೃಪ್ತಿ ಎಂಬುದು ಸ್ವಾರ್ಥದ ಒಂದು ಅಲ್ಲೂ ನಮ್ಮ ಸ್ವಾರ್ಥವೇ ಮುಖ್ಯ. ಸಂಧ್ಯಾವಂದನೆ ಅಥವ ನಿತ್ಯ ಪ್ರಾರ್ಥನೆ ಅದು ನಮ್ಮ ಕರ್ತವ್ಯವಾಗಿರುತ್ತದೆ. ಯಾಕೆಂದರೆ ಅಲ್ಲಿ ಯಾವುದೇ ಬೇಡಿಕೆ ಇರಬಾರದು. ಸ್ವಾರ್ಥವಿರಬಾರದು.  ಆವಾಗಲೇ ಅದು ಕರ್ತವ್ಯವಾಗುತ್ತದೆ. ಮಾಡುವ ಕೆಲಸ ಕರ್ಮ ಎಂದಾಗುತ್ತದೆ. ಅದನ್ನೆ ಕರ್ಮಣ್ಯೆ ವಾಧಿಕರಸ್ಥೆ ಅಂತ ಪರಮಾತ್ಮ ಹೇಳಿರುವುದು. ಆದರೆ ನಾವು ಮಾಡುವ ಯಾವುದೇ ಕೆಲಸವನ್ನು ಯಾಕಾಗಿ ಮಾಡುತ್ತಿದ್ದೇವೆ ಅಂತ ಕೇಳುವುದಿಲ್ಲ. ಸಹಜವಾಗಿ ಅದು ಒಂದು ಅಭಿನಯವೇ ಆಗಿರುತ್ತದೆ. ದೇವರು ಎಂಬ ಭಾವನೆಯಲ್ಲಿ ನಾವಾಡುವ ದೊಡ್ಡ ನಾಟಕ.

ಇಂದು ಮನುಷ್ಯನಿಗೆ ಆವಶ್ಯವಿರುವುದು ನಿರಾಳತೆ. ಯಾರಲ್ಲೇ ಕೇಳಿ ಎಷ್ಟು ನೆಮ್ಮದಿಯಿಂದ ಇದ್ದವರು ಸಿಗುವುದು ಕೆಲವು ಮಂದಿ. ಅಷ್ಟರಲ್ಲೂ ಅವರು ಅನುಭವಿಸುವ ನಿರಾಳತೆ ಕೇವಲ ಲೌಕಿಕ ಜೀವನಕ್ಕೆ ಹೊಂದಿಕೊಂಡು ಅದು ಸೀಮಿತವಾಗಿರುತ್ತದೆ. ನಿಜವಾದ ನಿರಾಳತೆ ಪರಿಚಯವೇ ಇರುವುದಿಲ್ಲ. ಹಾಗಾದರೆ ಅದೆಲ್ಲಿ ಸಿಗುತ್ತದೆ. ನಮ್ಮೊಳಗೇ ಇರುತ್ತದೆ.

ಬಹಳ ವರ್ಷದಿಂದ ಶೀತ ನೆಗಡಿ ಅಲರ್ಜಿಯಿಂದ ತೊಂದರೆ ಅನುಭವಿಸುತ್ತಿದ್ದ ನಾನು ಶಾಶ್ವತ ಸಮಸ್ಯೆ ಪರಿಹಾರಕ್ಕೆ  ಇತ್ತೀಚೆಗೆ ವೈದ್ಯರ ಬಳಿಗೆ ಹೋದೆ. ಅದು ಹೋಮಿಯೊ ಪತಿ ವೈದ್ಯರು. ಅದರ ಕ್ರಮದಂತೆ ನನ್ನ ಚರಿತ್ರೆಯನ್ನು, ನನ್ನ ಜೀವನ ಶೈಲಿಯನ್ನು ನನ್ನ ಮನಸ್ಥಿತಿಯನ್ನು ಎಲ್ಲಾ ತಿಳಿದುಕೊಂಡರು. ಒಂದಷ್ಟು ಔಷಧಿ ಕ್ರಮದಂತೆ ನೀಡಿದರು. ಎರಡು ವಾರ ಕಳೆದೆ ಔಷಧಿ ಪರಿಣಾಮಕಾರಿ ಅಂತ ಅನ್ನಿಸಲಿಲ್ಲ. ನನಗೆ ಅರಿವಿತ್ತು. ಅದು ಔಷಧಿಯ ಅಥವಾ ಚಿಕಿತ್ಸೆಯ ತೊಂದರೆಯಲ್ಲ. ಅದು ನನ್ನದೇ ತೊಂದರೆ. ಅದಕ್ಕೆ ಹೊಂದಿಕೊಂಡೇ ವೈದ್ಯರು ಹೇಳಿದರು.

" ನಿಮ್ಮ ಜೀವನ ಶೈಲಿಗೆ ಈ ಅಲರ್ಜಿ ಬರಬಾರದಿತ್ತು. ಅದ್ಭುತ ಜೀವನವನ್ನು ಜೀವಿಸುತ್ತಿದ್ದೀರ. ಎರಡು ಗಂಟೆ ಯೋಗ, ಧ್ಯಾನ, ನಿಯಮಿತ ಆಹಾರ ಸಹಜ ನಡವಳಿಕೆ ಹೀಗೆ ಅಧ್ಬುತ ಜೀವನ. ಆದರೂ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇದೆ. ನಾವು ಅದಷ್ಟನ್ನೇ ಚಿಕಿತ್ಸೆ ಕೊಟ್ಟು ನೋಡಬಹುದು. ಆದರೆ ನಿಮ್ಮ ಮನಸ್ಸಿನ ಯೋಚನೆಗಳನ್ನು ಚಿಂತೆಗಳನ್ನು ನೀವು ದೂರವಿಡಬೇಕು. ಅರ್ಥಾತ್ ಯೋಚಿಸುವುದನ್ನು ಬಿಡಬೇಕು. ನಿವೆಷ್ಟು ಯೋಚಿಸುವುದನ್ನು ಕಡಿಮೆ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ಅಲರ್ಜಿಯಿಂದ ಹೊರ ಬರುತ್ತೀರಿ. ನಂತರ ನಿಮಗೆ ಔಷಧಿಯ ಅವಶ್ಯಕತೆ ಇರುವುದಿಲ್ಲ."  ಎಂತಹಾ ಸಲಹೆ? ಯೋಚನೆ ಬೇಡಾ ಎನ್ನುವ ನನಗೇ ಮತ್ತಷ್ಟು ಯೋಚನೆಯಾಯಿತು. ಇದಕ್ಕೆ ಒಂದೇ ಪರಿಹಾರ ನಿರಾಳತೆ ಒದಗಿಸಿಕೊಳ್ಳಬೇಕು. ನಾನೆಷ್ಟು ಚಿಂತಿಸುವುದನ್ನು ಕಡಿಮೆ ಮಾಡುತ್ತೇನೊ ಅಷ್ಟು ನನ್ನಲ್ಲಿ ಆಮ್ಲಜನಕ ತುಂಬಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮುತ್ತಿನಂತಹ ಸಲಹೆ.  ಹಾಗಾಗಿ ಮತ್ತಷ್ಟು ಅ ಬಗ್ಗೆ ಉದ್ಯುಕ್ತನಾದೆ. ನಾನು ಯಾರಿಂದ ಸಮಸ್ಯೆ ಅನುಭವಿಸುತ್ತೇನೋ ಎಲ್ಲರಲ್ಲೂ ಸಹಜವಾಗಿ ವ್ಯವಹರಿಸುವುದಕ್ಕೆ ಅಭ್ಯಾಸ ಮಾಡತೊಡಗಿದೆ. ಈಗ ಅದೇ ಹಾದಿಯಲ್ಲಿದ್ದೇನೆ. ನಿರಾಳತೆಯನ್ನು ಅನುಭವಿಸುತ್ತಿದ್ದೇನೆ. 

ದೇವರು  ಎಂಬ ಪರಮಾತ್ಮನಿಗೆ ಹಲವು ಹೆಸರುಗಳಿರಬಹುದು. ಎಲ್ಲದಕ್ಕೂ ಗಹನವಾದ ಗಂಭೀರವಾದ ಅರ್ಥವಿರಬಹುದು. ಅದೆಲ್ಲವನ್ನು ಬದಿಗಿರಿಸಿ, ಯಾಕೆಂದರೆ ಪರಮಾತ್ಮ ಚಿಂತನೆಯೊಂದೇ  ಪರ್ಯಾಪ್ತವಾದ ನಿರಾಳತೆಯನ್ನು ಒದಗಿಸಬಲ್ಲುದು. 

ಹೀಗೆ  ನಮ್ಮ ಮನೆಯಲ್ಲಿ ಪುಟ್ಟ ಮಗುವಿರುತ್ತದೆ. ಅದಕ್ಕೆ ನಿಜವಾದ ಹೆಸರು ಒಂದಿರುತ್ತದೆ. ಅದು ಸುಂದರವಾಗಿರುತ್ತದೆ. ಆದರೂ ನಾವು ಮುದ್ದಾಗಿ ಇನ್ನೊಂದು ಹೆಸರಿನಿಂದ ಕರೆಯುತ್ತೇವೆ....ತುಕ್ಕು ಪಕ್ಕು ಹೀಗೆ. ಅದು ನಮ್ಮ ಮನಸ್ಸಿಗೆ ಹಿತವಾದ ಅನುಭವವನ್ನು ಕೊಡುವ ಹೆಸರು. ಹಲವು ಸಲ ಆ ಹೆಸರಿನಿಂದ ಕರೆದರೆ ಮಾತ್ರಾ ಮಗು ನಗುತ್ತಾ ಹತ್ತಿರ ಬರುತ್ತದೆ. ಮುದ್ದಿಸಿಕೊಳ್ಳುತ್ತದೆ.  ನಿಜವಾದ ಹೆಸರಿಗಿಂತಲೂ ಈ ಮುದ್ದಾದ ಅಡ್ಡ ಹೆಸರೇ ಭಾವನಾತ್ಮಕವಾದ ಮಾನಸಿಕ ಸಂಭಂಧವನ್ನು ಹೊಂದಿರುತ್ತದೆ. ಹಲವು ಸಲ ಮಗು ಬೆಳೆದು ದೊಡ್ಡವನಾದರೂ ಈ ಅಡ್ಡ ಹೆಸರು ಶಾಶ್ವತವಾಗಿ ಆ ಮಾನಸಿಕ ಸಂಬಂಧಕ್ಕೆ ಸಾಕ್ಷಿಯಾಗಿರುತ್ತದೆ. ವಿಚಿತ್ರವೆಂದರೆ ಆ ಹೆಸರಿಗೆ ಅರ್ಥವೇ ಇರುವುದಿಲ್ಲ!

ಹೀಗೆ ಮುಖ್ಯವಲ್ಲದ ಅರ್ಥವಿಲ್ಲದ ಹೆಸರು ಬದುಕಿಗೆ ಪ್ರಧಾನವಾಗುವುದು ಅದರ ಅರ್ಥದಿಂದ ಅಲ್ಲ. ಅದರ ಭಾವದಿಂದ. ಯೋಚಿಸೋಣ ನಾವು ದೇವರನ್ನೂ ಇದೇ ಭಾವದಿಂದ ಒಂದು ಮುದ್ದಾದ ಹೆಸರನ್ನು ಹಿಡಿದು ಕರೆಯಬಾರದೇಕೆ?  ಬಹಿರಂಗವಾಗಿ ಅಲ್ಲದೇ ಇದ್ದರೆ ಕೇವಲ ನಮ್ಮ ಮನಸ್ಸಿನ ಒಳಗಿನಿಂದ ನಮ್ಮ ಭಗವಂತನನ್ನು ಕರೆಯಬಾರದೇಕೆ. ಈಗ ಮನಸ್ಸಿನಲ್ಲೇ ಉದ್ಗರಿಸಿ ಹೇ ಭಗವಂತ.. ಇಲ್ಲಿ ಕೃಷ್ಣನೂ ಇಲ್ಲ ಈಶ್ವರನೂ ಇಲ್ಲ ಯಾರೂ ಇಲ್ಲದ ಒಂದು ಆತ್ಮ ಸಂಬಂಧ ತಾದಾತ್ಯ್ಮವಾಗಿ ಬೆಳೆಯುತ್ತದೆ. ಮಾತ್ರವಲ್ಲ ಇದು ನಿಮ್ಮ ಉಳಿದೆಲ್ಲ ಕ್ರಿಯೆಯಿಂದಲು ನಿಮ್ಮನ್ನು ದೂರವಾಗಿರಿಸುತ್ತದೆ. ಮುಖ್ಯವಾಗಿ ಅದು ಉಚ್ಚರಿಸಿದಂತೆ ನಮ್ಮ ಮನಸ್ಸಿನಲ್ಲಿ ಭಗವಂತನಿದ್ದಾನೆ ಎಂಬ ಅನುಭವ ದಟ್ಟವಾಗುತ್ತದೆ.

ಪ್ರತಿಯೊಬ್ಬರ ಮನಸ್ಸಿನಲ್ಲೂ  ದೇವರಿದ್ದಾನೆ. ಆತ್ಮ ಎಂದರೆ ಪರಮಾತ್ಮ. ದೇಹ ಮನಸ್ಸು ಆತ್ಮ ಹೀಗೆ ಯೋಚಿಸುವುದೇ ಆಧ್ಯಾತ್ಮ. ಆಧ್ಯಾತ್ಮದಲ್ಲಿ ದೇವರು ಎಂಬುದು ಹೊರಗಿಲ್ಲ. ನಮ್ಮೊಳಗೇ . ಜ್ಞಾನಿಗಳು ಹೇಳುತ್ತಾರೆ. ಆಧ್ಯಾತ್ಮ ಅಂದರೆ ಏನು? ಇದುವೇ ಅದು. ಅದುವೇ ಇದು. ಈ ದೇಹವೇ ಪರಮಾತ್ಮ. ಆ ಪರಮಾತ್ಮನೇ ಈ ದೇಹ. ಅದನ್ನೇ ಅದ್ವೈತ ಎಂದು ಕರೆದರು.  ಬಹಳ ಸರಳವಾಗಿದೆ. ಮಾತ್ರ ಅಷ್ಟೆ ಕ್ಲಿಷ್ಟವಾಗಿದೆ. ಯಾಕೆಂದರೆ ನಮ್ಮ ದೇಹ ಮತ್ತು ಆತ್ಮದ ನಡುವೆ ಈ ಪ್ರಪಂಚ ಬೆಳೆದು ಬಿಟ್ಟಿದೆ. ಅದರ ವ್ಯವಹಾರ ತುಂಬಿಕೊಂಡಿದೆ. ನಾವು ಅದರಿಂದ ಹೊರಬರಬೇಕು. 

ಮನಸ್ಸಿನಲ್ಲಿ ಪರಮಾತ್ಮ ಇದ್ದಾನೆ. ನಮ್ಮೊಳಗೇ ದೇವರಿದ್ದಾನೆ. ಹೀಗೆ ಆಧ್ಯಾತ್ಮ ದಿವ್ಯ ತತ್ವವನ್ನು ಅರಿತಿದ್ದರೂ ನಾವು ಅದನ್ನು ನಂಬಿಕೊಂಡಂತೆ ಇರುವುದಿಲ್ಲ. ಯಾಕೆ ದೇವರನ್ನು ನಮ್ಮೊಳಗೆ ಇದ್ದಾನೆ ಎಂದು ನಾವು ಭಾವಿಸುತ್ತಿಲ್ಲ? ಕಾರಣ ಸುಲಭ... ದೇವರು ನಮ್ಮೊಳಗೆ ಇರುವಾಗ ನಾವು ಪ್ರಾಮಾಣಿಕರಾಗಿರಬೇಕಾಗುತ್ತದೆ. ಸತ್ಯವಂತರಾಗಿರಬೇಕಾಗುತ್ತದೆ. ಪವಿತ್ರ ಮನಸ್ಸು ಇರಬೇಕಾಗುತ್ತದೆ. ಸನ್ಮನಸ್ಸು ಸಚ್ಚಿಂತನೆ ಸದುದ್ದೇಶ, ಸತ್ ಸಂಕಲ್ಪ ಇರಬೇಕಾಗುತ್ತದೆ. ನಮ್ಮ ಜೀವನದಲ್ಲಿ ಅದನ್ನು ಕೈ ಬಿಡುತ್ತೇವೆ. ವಂಚನೆ ಸುಳ್ಳು ಇವುಗಳನ್ನೇ ನೆಚ್ಚಿಕೊಂಡು ನಾವು ಅಪ್ರಾಮಾಣಿಕರಾಗಿ ದೇವರನ್ನು ನಮ್ಮ ಒಳಗಿನಿಂದ ಹೊರ ಹಾಕುತ್ತೇವೆ. ಅಥವಾ ನಮ್ಮೊಳಗೆ ದೇವರಿದ್ದಾನೆ ಎಂದು ನಾವು ಯೋಚಿಸುವುದಿಲ್ಲ. ಅದ್ವೈತವನ್ನು ಬೋಧಿಸುವ ಆದಿ ಶಂಕರನನ್ನು ಮಹಾ ಗುರುವಾಗಿ ಕಾಣುತ್ತೇವೆ. ಆದರೆ ಅದ್ವೈತ  ಎಂಬುದು ನಮ್ಮ ಅನುಭವದಲ್ಲಿ ಇರುವುದಿಲ್ಲ. ದೇವರನ್ನು ಒಳಗಿನಿಂದ ತೆಗೆದು ದೂರದಲ್ಲಿ ಎಲ್ಲೋ ಇರಿಸಿ ಅಧ್ದೂರಿಯಿಂದ ವಿಜ್ರಂಭಣೆಯಿಂದ ಪೂಜೆ ಮಾಡುತ್ತೇವೆ. ನಮ್ಮೊಳಗಿನ ದೇವರಿಗಿಂತಲೂ ಆ ದೇವರನ್ನೆ ಹೆಚ್ಚು ನಂಬಿಕೊಳ್ಳುತ್ತೇವೆ. ಅಥವ ನಮ್ಮ ಮನಸ್ಸಿನ ದೇವರು ಅದೇ ಎಂದು ಭ್ರಮಾಧೀನರಾಗಿಬಿಡುತ್ತೇವೆ. ಯಾಕೆಂದರೆ ದೇವರನ್ನು ನಮ್ಮೊಳಗೆ ಇರಿಸುವ ಪ್ರಾಮಾಣಿಕತೆ ನಮ್ಮಲ್ಲಿ ಇದೆ ಎಂಬ ಭರವಸೆಯೇ ನಮ್ಮಲ್ಲಿ ಇರುವುದಿಲ್ಲ.

ಎಲ್ಲ ಪೂಜೆ ಪುನಸ್ಕಾರಗಳಿಂದಲು ನಾಮ ಸ್ಮರಣೆ ಅತ್ಯಂತ ಶ್ರೇಷ್ಠ. ದಾಸ ವರೇಣ್ಯರೂ ಸ್ವತಃ ಅನುಭವಿಸಿ ಹೇಳಿದ ಮಾತು. ಹನುಮನ ಕಥೆ, ಪ್ರಹ್ಲಾದ ಮಾರ್ಕಾಂಡೇಯರ ಕಥೆ ಇದನ್ನೇ ಹೇಳುತ್ತವೆ. ಈ ಭಕ್ತ ವರೇಣ್ಯರು ಯಾವ ಪೂಜೆಯನ್ನೂ ಮಾಡಲಿಲ್ಲ. ಯಾವ ಹರಕೆಯನ್ನು ಹೊರಲಿಲ್ಲ. ಯಾವ ದೇಗುಲಕ್ಕೂ ಪ್ರದಕ್ಷಿಣೆ ಬರಲಿಲ್ಲ. ಕೇವಲ ಪರಮಾತ್ಮನ ಸ್ಮರಣೆ ಮಾತ್ರ. ದೇವಾಲಯ ಎಂಬುದು ಭಕ್ತಿ ಮಾರ್ಗಕ್ಕೆ ಒಂದು ಪರಿಕರ. ಆದರೆ ಈ ಭಕ್ತಿ ಮಾರ್ಗದಲ್ಲಿ ನಾವೆಷ್ಟು ವಿಚಲಿತರಾಗುತ್ತೇವೋ ಅಷ್ಟು ಆ ಮಾರ್ಗ ಕ್ರಮವನ್ನು ಕಠಿಣಗೊಳಿಸುತ್ತದೆ. ದೇಹದ ಮೇಲೆ ನಾವೆಷ್ಟು ಆಡಂಬರದ ಉಡುಪು ಆಭರಣವನ್ನು ತೊಡುತ್ತೇವೋ ಅಷ್ಟು ನಮ್ಮನ್ನು ನಾವು ಕಳೆದುಕೊಳ್ಳುತ್ತೇವೇ. ಹಾಗಂತ ಲೌಕಿಕ ಪ್ರಪಂಚದಲ್ಲಿ ಎಲ್ಲವನ್ನು ಕಳೆದುಕೊಳ್ಳುವುದು ಸಭ್ಯತೆಯೂ ಅಲ್ಲ. ಆದರೂ ಮನಸ್ಸಿನಿಂದ ನಾವು ಎಲ್ಲವನ್ನು ಕಳೆದುಕೊಳ್ಳಬಹುದು. ಅರ್ಥಾತ್ ನಮ್ಮ ಆರಾಧನೆ ಕ್ರಮಗಳು ಸರಳವಾಗಬೇಕು. ಆಡಂಬರದ ಭಕ್ತಿ ಪರಮಾತ್ಮನ ಇರವನ್ನು ಮರೆಮಾಚುತ್ತದೆ. ನಾವು ಯಾವುದನ್ನೋ ಭಗವಂತ ದೇವರು ಎಂದು ಯೋಚಿಸಿ ನಿಜವಾದ ಪರಮಾತ್ಮ ಅನುಗ್ರಹದಿಂದ ದೂರಾಗುತ್ತಿದ್ದೇವೆ.

 

 


No comments:

Post a Comment