Wednesday, December 16, 2020

ಬಾವನ ಮಗಳು ಭಾವನ....

 

            ಒಂದು ವರ್ಷದ ನಂತರ ಮಲೆನಾಡಿಗೆ  ಹೆಜ್ಜೆ ಇರಿಸಿದೆ.  ಕೊರೋನ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂಬ ಭಾವನೆಯ ನಡುವೆ ಈ ಮಲೆನಾಡ ಕೊಪ್ಪಕ್ಕೆ ಬಂದರೆಕಳೆದು ಹೊದವುಗಳನ್ನು ಕೈಸೆರೆ ಮಾಡಿಕೊಂಡ ಅನುಭವ. ಈ ಬಾರಿ ಅದೇಒಂದು ಮಲೆನಾಡ ಮದುವೆ.‌ ಆ ಚಿತೋಹಾರಿ‌ ಅನುಭವಗಳಿಗೆ ಸಹಜವಾಗಿ ಮನಸ್ಸು ತೆರೆದಿತ್ತು. ಆದರೆ ಕಾಲ ಎಂಬುದು ಒಂದಿದೆ   ಎಂಬುದನ್ನು ಮನಸ್ಸು ಮರೆತಿತ್ತು. 

 

            ನಮ್ಮ ತಲಮಕ್ಕಿ‌ ಮನೆ ಕೊಪ್ಪದಿಂದ ಗಾವುದ ದೂರದ ಪುಟ್ಟ ಹಳ್ಳಿ. ಹೇಳಿ ಕೇಳಿ‌ ಮಲೆನಾಡ ಟಿಪಿಕಲ್ ಉಪ್ಪರಿಗೆ ಮನೆ.‌ ಯಾವುದೇ ಅತಿಥಿ ಬಂದರೂ ಅತಿಥೇಯರಾಗಿ ಸಂಭ್ರಮಿಸುವ ಮಂದಿಯರ ಮದುವೆ ಎಂದರೆ ಕೇಳಬೇಕೆ? ಇದನ್ನು ಕಂಡಾಗ,  ಜಗತ್ತಿನಲ್ಲಿ ನಿಯಂತ್ರಣಕ್ಕೆ ಸಿಗದ ವಸ್ತುವೆಂದರೆ ಅದು ಭಾವನೆ...ಅದಿಲ್ಲಿ ನಿಯಂತ್ರಣವಿಲ್ಲದ ಹುಚ್ಚುಗುದುರೆಯಾಗುತ್ತದೆ.  ದೀರ್ಘವಾದ ನನ್ನ  ಜೀವನದಲ್ಲಿ ಕೂಡಾ ಇಲ್ಲಿ ಹಲವಾರು ವಿವಾಹಗಳನ್ನು ಕಂಡಿದ್ದೇನೆ. ಹಲವಲ್ಲಿ ಸಂಭ್ರಮಿಸಿದ್ದೇನೆ. ಇವಿಷ್ಟೇ ಆದರೆ ಈ ಅನುಭವ ಕಥನದಲ್ಲೇನಿದೆ? 

 

            ಇಂದಿನ ಕೌಟುಂಬಿಕ ಸ್ಥಿತಿಯಲ್ಲಿ ಮನೆ ಚಿಕ್ಕದಾಗುತ್ತದೆ, ಸಂಸಾರ ಮಾತ್ರ ಬೆಳೆದು ದೊಡ್ಡ ಆಗುತ್ತಿದೆ. ಮನೆ ಅಂತ ಹೇಳಿದ್ದು..‌ ಮನೆಯಲ್ಲಿ ಉಳಿವ ಮನೆ ಮಂದಿಯ ಸಂಖ್ಯೆಯನ್ನು.ದೊಡ್ಡದಾದ ಮನೆಯಲ್ಲಿ ಚಿಕ್ಕದಾಗಿರುವ ಈ ಮನೆ ಮಂದಿಗೆ ಮದುವೆಯಂತಹ ಸಂದರ್ಭವೂ ಅತಿ ಸಂಭ್ರಮ.

 

            ಮೂವತ್ತು ವರ್ಷಗಳ ಕೆಳಗೆ ಈ ಸಂಭ್ರಮದ ಪರಿಚಯವಾಯಿತು. ಆಗ ಸ್ವತಃ ವಿವಾಹವಾಗಿ ಹೊಸ ಸಂಭಂಧ ಬೆಸೆಯುವ ನನಗೆ ಎಲ್ಲವೂ ಸಂಭ್ರಮವಾಗಿ ಕಾಣುವುದು ಸಹಜ. ಆದರೆ ಪ್ರತೀ ಸನ್ನಿವೇಶದಲ್ಲೂ ಇದನ್ನು ಕಾಣುವಾಗ ಇದರೊಳಗಿರುವ ಸನ್ಮನಸ್ಸು ಸದ್ಭಾವನೆ ಎಲ್ಲವೂ ತನ್ನದೇ ಎಂಬಂತೆ ಕಾಣುವ ತುಡಿತದಲ್ಲಿ  ಎಲ್ಲವೂ ತನ್ನದೆಂಬ ಸ್ವಾರ್ಥವೂ ನಿಸ್ವಾರ್ಥವಾಗುತ್ತದೆ. ಯಾಕೋ ಎಲ್ಲ ದುಗುಡಗಳನ್ನು ಕಟ್ಟಿ ತಂದು ಇಲ್ಲಿ ಚೆಲ್ಲಿ ಬಿಡಬೇಕು ಎಂದನಿಸುತ್ತದೆ.  ಹೇಗಿದ್ದರೂ ಎಲ್ಲೋ ಹುಟ್ಟಿ ಬೆಳೆದ ನಾನೂ ಇಲ್ಲಿನ ವೃಕ್ಷಕ್ಕೆ ಕಸಿ ಕಟ್ಟಿದ ಬಿಳಲು.

 

            ಇದೀಗ ಮಗಳು ಭಾವನ ಕಣ್ಣೆದುರೆ ಶಿಶುವಾಗಿ  ಮಡಿಲಲ್ಲಿ ನಲಿದಾಡಿ ಎದೆ ಮಟ್ಟಕ್ಕೆ ಬೆಳೆದು ನಿಂತ ಸುಂದರಿ. ಈ ದಿನಗಳೇ ಹೀಗೆ,  ಸರಿದು ಹೋದ ಮೇಲೆ ನೆನಪುಗಳನ್ನು ಕಟ್ಟಿ ಕೊಡುತ್ತವೆ.  ಪುಟ್ಟ ಮಗುವಾಗಿ ಓಡಾಡುತ್ತಿದ್ದ ಬೆಳೆದು ಬೊಗಸೆ ಕಂಗಳ ಚೆಲುವೆಯಾಗಿ ಭುಜದಿಂದ ಎತ್ತರ ಬೆಳೆದು ಬಿಟ್ಟಿದ್ದಳು. ಈಗ  ಭಾವನ ಸರ್ವಾಲಂಕಾರೆಯಾಗಿ ರಂಗಿನ ಚಪ್ಪರದಲ್ಲಿ ರಂಗು ರಂಗಿನ ಕನಸುಗಳೊಂದಿಗೆ ಹಸೆಮಣೆ ತುಳಿದು ಪುಷ್ಪಾಹಾರಕ್ಜೆ ತಲೆ ಬಗ್ಗಿಸಿದಾಗ ನನ್ನ ನೆನಪು ಹಿಂದಕ್ಕೆ ಓಡುತ್ತದೆ.  ಈ ಹಿಂದೆ ಮೂವತ್ತು ವರ್ಷಗಳ ಕೆಳಗೆ ಹೀಗೆ ಕಂಪಿಸಿದ ಕೈ ನನ್ನ ಕೊರಳ ಬಳಿಗೂ ಬಂದಿತ್ತು. ಅದೇ ಜಾಗ ಅದೇ ರೀತಿ. ಇದೇ ಮನೆಯಲ್ಲಿ ನಾನೂ ಗೃಹಸ್ಥನಾಗಿ ಹೆಜ್ಜೆ ಇಟ್ಟದ್ದು ಇನ್ನೂ ಹಚ್ಚ ಹಸಿರಾಗಿದೆ. ಹಾಗಾಗಿ ಇಲ್ಲಿನ ಮದುವೆ ಎಂದರೆ ನನ್ನ ಕನಸಿನ ಮೆಲುಕು ಹಾಕುವಿಕೆಯೇ ಆಗಿರುತ್ತದೆ.  ವಿಶಾಲವಾದ ಮನೆ ಅಲ್ಲಿ ಮದುವೆ ಎಂದರೆ ಕೈಯಲ್ಲಿ ಹೂ ಎತ್ತಿಕೊಂಡಂತೆ ನಡೆದು ಬಿಡುತ್ತದೆ. ಅದು ನಮಗೆ ಕಾಣುವವರಿಗೆ ಮಾತ್ರ. ಆದರ ಹಿಂದೆ ಮನೆ ಮಂದಿಗಳ  ಪರಿಶ್ರಮ ಅಪಾರ. ಆ ಪರಿಶ್ರಮದ ಸವಾಲನ್ನೂ  ನಗುತ್ತಾ ಸ್ವೀಕರಿಸುವ ಇವರೆಲ್ಲರ  ಮನೋಭಾವ ಹಾಗಾಗಿಯೇ ಇಲ್ಲಿ ಮದುವೆ ಎಂದರೆ ಅದು ಕೇವಲ ಮದುವೆಯಾಗುವುದಿಲ್ಲ. ಹುಳಿ ಖಾರ  ಸಿಹಿ ಎಲ್ಲವೂ ಹಿತವಾಗಿ ಸೇರಿದ ರಸಪಾಕವೇ ಆಗಿಬಿಡುತ್ತದೆ.  ಕುಟುಂಬವರ್ಗದವರಿಗೆಲ್ಲ ತಲಮಕ್ಕಿ ಎಂಬುದು ತಮ್ಮ ಸಮಸ್ಯೆಗಳಿಗೆ ಕೊನೆಯ ಪರಿಹಾರ ಹಾದಿಯಾಗಿದೆ. ಹಾಗಾಗಿ ಇಲ್ಲಿ ಇಂತಹ ಕಾರ್ಯಗಳಲ್ಲಿ ಇಲ್ಲಿನ ದಾತೃತ್ವ ಗುಣವನ್ನು ಕಾಣಬಹುದು.

             

            ಹೆಣ್ಣೆಂದರೆ  ಅಂಗಳದ ವೃಂದೆಯಂತೆ. ವೃಂದಾ ಎಂದರೆ ತುಳಸಿ.  ಆಕೆ ಇರುವಲ್ಲೆಲ್ಲಾ ವೃಂದಾವನದ ಹಚ್ಚ ಹಸಿರು.   ಪುಟ್ಟ ತುಳಸೀ ಗಿಡವನ್ನು ಕಿತ್ತು ಸಂಬಂಧಗಳ ನೆನಪುಗಳ ಹಿಡಿ ಮಣ್ಣನ್ನು ಜತೆಯಾಗಿಸಿ ಮತ್ತೊಂದು ಮನೆಯಂಗಳಕ್ಕೆ ಬಂದಾಗ ಹೆಣ್ಣಿಗೆ ಕನಸಿರುತ್ತದೆ. ಜವಾಬ್ದಾರಿಯೂ ಹೆಗಲಿಗೇರಿರುತ್ತದೆ. ಮತ್ತೊಂದು ಅಂಗಳದಲ್ಲಿ ಗಿಡವಾಗಿ ಬೆಳೆಯಬೇಕಾದವಳು ಹೆಣ್ಣು. ತುಳಸಿಯಂತೆ ಪೂಜನೀಯಳು.  ಭಾವನ ಹೆಣ್ಣಾದಳು ತುಳಸಿಯಾದಳು. ಮತ್ತೊಂದು ಅಂಗಳದ ಗಿಡವಾದಳು. ಸುಂದರವಾದ ಕಟ್ಟೆಯನು ಕಟ್ಟಿ ತಂಬಿಗೆ ನೀರನ್ನು ಎರೆದು ಬೆಳೆಸುವ ಕೈಗಳಿಗೆ ನಡೆದು  ಹೋದಳು ಭಾವನ.

 

            ಮದುವೆ ಮನೆಯ ವಾಲಗದ ಗದ್ದಲ ಪುರೋಹಿತರ ಮಂತ್ರ ಘೋಷದ ನಡುವೆ ಕೈ ಹಿಡಿದ ಸಹಚರ,   ಎಲ್ಲಾ ಸಂಭ್ರಮ ಬದಿಗಿರಿಸಿ ಪುಟ್ಟ ಕಂದನ ಬಳಿಗೆ ಬಂದು ಆಕೆ ಲಲ್ಲೆಗರೆದಾಗ ಈ ಹೆಣ್ಣ ಕಣ್ಣಹಿಂದಿರುವ ಕನಸದೇನಾಗಿರಬಹುದು? ಭರವಸೆ ಏನಿರಬಹುದು? ಹೆಣ್ಣು ಕೇವಲ ಹೆಣ್ಣಲ್ಲ ಆಕೆ ಪ್ರಕೃತಿಯಲ್ಲವೇ ಅಂತ ತೋರಿತು. ಪುಟ್ಟ ಭಾವನ ಮೈಕೈ ತುಂಬಿಕೊಂಡು ಬಂಗಾರದ ಸೀರೆಯುಟ್ಟು  ಸರ್ವಾಲಂಕಾರೆಯಾಗಿದ್ದರೂ  ತನ್ನದೆಲ್ಲವನ್ನು ಮರೆತು ಪುಟ್ಟ ಮಗುವನ್ನು ಮುದ್ದಿಸುವಾಗ ಹೆಗಲ ಮೇಲೆ ಹೊತ್ತಿರುವ ಜವಾಬ್ದಾರಿಯ  ಭರವಸೆ ಆ ಕಣ್ಣಲ್ಲಿ ತುಂಬಿತ್ತು. ಕೊಪ್ಪದ ಮನೆಯಲ್ಲಿ ಸದಾ ಮರೆಯಲ್ಲೇ ಕಳೆಯುತ್ತಿದ್ದ ಚೆಲುವೆ  ಭಲೇ ಗಟ್ಟಿಗಿತ್ತಿ ಅಂದುಕೊಂಡೆ.

 

            ತಲಮಕ್ಕಿಯಲ್ಲಿ ಮದುವೆ ಎಂದರೆ ಸಿನಿಮಾದ ಚಿತ್ರಕಥೆಯಂತೆ. ಅದು ಹೀಗೆ ಹೀಗೆ ಅಂತ ಮೊದಲೇ ಬರೆದಿಟ್ಟ  ಸ್ಕೃಪ್ಟಿನಂತೆ  (Script) ನಂತೆ  ಶಿಸ್ತು ಬದ್ಧ.ಕೆಲವು ಪಾತ್ರಗಳು ಹೀಗೆ ಇರುತ್ತವೆ ಅಂತ ಮೊದಲೇ ಊಹಿಸಬಹುದು. ಇಲ್ಲಿ ಇಂದೂ ಹಾಗೆ,  ಏನೆಲ್ಲ ಆಗಬೇಕೊ ಅದೆಲ್ಲ ಸಹಜವಾಗಿ ನಡೆಯಿತು. ಊಟ ಉಪಹಾರ ತಿನ್ನುವ ಮೊದಲೇ ಸ್ವಾದ ರುಚಿಯಾದ ಅನುಭವ. ಆ ಉಪಚಾರ ಸತ್ಕಾರಕ್ಕೆ ನಮ್ಮೊಳಗಿನ ಅತಿಥಿ ಜಾಗೃತನಾಗಿಬಿಡುತ್ತಾನೆ.  ಸತ್ಕಾರ ಸತ್ಕಾರ್ಯವಾಗುವುದು ಮನಸ್ಸಿನಲ್ಲಿ ಸತ್ ಅಂದರೆ ಸತ್ಯ ಇದ್ದಾಗ ಮಾತ್ರ. ಮನಸ್ಸಿನಲ್ಲಿ ಕೈ ಹಿಸುಕುವ ಅಸಹನೆ ಇದ್ದರೆ ಸತ್ಕಾರ ಸತ್ಕಾರ್ಯವಾಗುವುದಿಲ್ಲ.  ಇವರಲ್ಲಿ ವಿದುರನ ಕುಡುತೆ ಹಾಲಿನ ಪ್ರಜ್ಞೆ ಸದಾ ಎಚ್ಚರವಾಗಿರುವುದೇ ಒಂದು ವಿಚಿತ್ರ.

 

            ಈ ಬಾರಿಯ ಮದಯವೆಯೂ ಬಿಟ್ಟ ಸಿನಿಮಾ ರೀಲಿನಂತೆ ಮಧ್ಯಾಹ್ನದ ಪ್ರದರ್ಶನದಂತೆ ರಾತ್ರಿಯ ದೇಖಾವೆ ಕೂಡ ಇತ್ತು. ವೆತ್ಯಾಸವೇ ಇಲ್ಲ. ಅದೇ ಸಂಭ್ರಮ ಅದೇ ಸತ್ಕಾರ. ಕೃಷ್ಣನೆದುರು ನಿಂತ ವಿದುರನಂತೆ. ಆದರೆ ಈ ಬಾರಿ ಒಂದು, ಮೂವತ್ತು ವರ್ಷಗಳ ಹಿಂದಿನ ಅದೇ ಮುಖಗಳು ಚಪ್ಪರ ತುಂಬಾ ಕಂಡವು. ಯುವಕರ ಸಂಖ್ಯೆ ತೀರಾ ಚಿಕ್ಕದು. ಮದುವೆಗೆ ಬಂದವರಲ್ಲಿ ಯಾರೆಲ್ಲ  ನವತರುಣರು  ಅಂತ ಕೇಳಿದರೆ ಮದುಮಗ ಮದುಮಗಳು ಎಂದು ಹೇಳುವ ಸ್ಥಿತಿ. ಕಾಲ ಬದಲಾಗಿದೆ. ಈ ಬಾರಿ ಯುವ ಜನರ ಕೊರತೆ ಎದ್ದು ಕಾಣುತ್ತಿತ್ತು.ಈಗೀಗ ಇಂತಹ ಕಾರ್ಯಕ್ರಮಗಳಲ್ಲಿ ಹೊಸ ತಲೆಮಾರಿಗೆ ಆಸಕ್ತಿ ಬಹಳ ಕಡಿಮೆಯಾಗಿದೆ.   ಬದಲಾದ ಕೆಲಸದ ಸಮಯ, ಅದರ ಒತ್ತಡ ಒಂದೆಡೆಯಾದರೆ, ಮದುವೆ ಎಂದರೆ ಬೋರು ಎಂಬ ಮನೋಭಾವವೂ ಕೇಳಿಬರುತ್ತದೆ.

 

            ಹೌದು, ನಮ್ಮ ಮದುವೆ ಕಾರ್ಯಕ್ರಮಗಳು ಬೋರು ಹೊಡೆಸುತ್ತವೆ. ಯಾಕೆಂದರೆ ಸದಾ ಚಟುವಟಿಕೆಯಲ್ಲಿರಬೇಕಾದ ಕೈಗಳು ನಿಸ್ತೇಜವಾದಂತೆ, ಯುವಕರು ಯುವತಿಯರು ಮಾಡಬೇಕಾದ ಕೆಲಸಗಳು ಗಣನೀಯವಾಗಿ ಕಡಿಮೆಯಾಗಿದೆ. ಈಗ ಕ್ಯಾಟರಿಂಗ್ ನಿಂದ ತೊಡಗಿ ಚಪ್ಪರ ಅಲಂಕಾರ ಮದುವೆ ಪರಿಕರಗಳೆಲ್ಲವನ್ನೂ ಒದಗಿಸುವ ಕಾಂಟ್ರಾಕ್ಟರು ಇದ್ದಾರೆ. ಮೊದಲು ಮದುವೆ ಮನೆಯಲ್ಲೇ ಎಲ್ಲರೂ ಸೇರಿ ಮಾಡುತ್ತಿದ್ದ ಅಡುಗೆಯನ್ನು ಕಂಡವನು ನಾನು.  ಈಗ ಮಧ್ಯಾಹ್ನ ಅಥವಾ ಹೊತ್ತಿಗೆ ಸರಿಯಾಗಿ ಆಹಾರ ಎಲ್ಲೋ ಸಿಧ್ದವಾಗಿ ಕೈಸೇರತ್ತದೆ. ತರಕಾರಿ ಹೆಚ್ಚುವ ಅಥವಾ ಇತರ ಚಟುವಟಿಕೆಗಳು ಶೂನ್ಯವಾಗಿವೆ. ಮದುವೆ ಕಾರ್ಯಕ್ರಮ ನಿರ್ವಹಿಸುವ ಮನೆಯವರಿಗೂ ಈಗಿನ ಈ ಹೊಸ ವ್ಯವಸ್ಥೆಗಳು ಅನುಕೂಲಕಾರವಾಗಿಯೇ ಇರುವಾಗ ಅದಕ್ಕೆ ಮೊರೆ ಹೋಗುವುದು ಸಹಜ. ಪರಿಣಾಮ ಎಲ್ಲರೂ ಸೇರಿ ತರಕಾರಿ ಹೆಚ್ಚುವ ಕೆಲಸವಾಗಲೀ ಇತರ ಕೆಲಸಗಳಾಗಲೀ ಇಲ್ಲದೆ ಬಂದ ಆಪ್ತರು ಸುಮ್ಮನೇ ಇರುವ ಪರಿಸ್ಥಿತಿ ಬಂದಿದೆ‌. ಪರಿಣಾಮದಲ್ಲಿ ಮದುವೆ ಎಂಬುದು ಬೋರು ಎಂಬಂತಾಗಿದೆ. ಚಪ್ಪರ ಅಲಂಕಾರ, ಆಸನ ಇನ್ನಿತರ ವ್ಯವಸ್ಥೆ ಊಟದ ಉಪಚಾರ ಎಲ್ಲವೂ ಕಾಂಟ್ರಾಕ್ಟ್ ರೂಪದಲ್ಲಿ ಒದಗಿ ಬರುತ್ತದೆ. ಹಲವು ಕಡೆಗಳಲ್ಲಿ ಅರ್ಚಕರೂ ಅಗ್ನಿಕುಂಡ ದರ್ಭೆ ಪಾತ್ರೆ ಪಗಡಿ ಹೀಗೆ ಏನೆಲ್ಲ ಬೇಕೋ ಅದೆಲ್ಲವನ್ನು ಪಟ್ಟಿಮಾಡಿಕೊಂಡು ತರುತ್ತಾರೆ. ಒಪ್ಪಂದದಂತೆ ಒಂದಷ್ಟು ದುಡ್ಡು ಕೊಟ್ಟರಾಯಿತು. ವಿಡಂಬನೆ ಎಂದರೆ ತನ್ನ ಪಾಲಿನ ದಾನವನ್ನೂ ತಾನೇ ಆಯ್ಕೆ ಮಾಡಿ ದುಡ್ಡುಕೊಟ್ಟು ತರುವುದು.  ಇದೆಲ್ಲ ಮದುವೆಯಂತಹ ಭಾವನಾತ್ಮಕ ಕಾರ್ಯಕ್ರಮವನ್ನು ಯಾಂತ್ರೀಕೃತಗೊಳಿಸಿವೆ. ಎಲ್ಲವನ್ನೂ ಕಾಂಟ್ರಾಕ್ಟ್ ಕೊಡುವಾಗ ಮದುವೆಯಾಗುವ  ಗಂಡು ಹೆಣ್ಣು ಮದುವೆ ಎಂಬುದನ್ನುಕಾಂಟ್ರಾಕ್ಟ್ ಅಂತ ತಿಳಿಯುವುದರಲ್ಲಿ ತಪ್ಪೇನಿದೆ? ಅವಿಷ್ಕಾರ ಎಂಬ ಮದ್ಯ ಬಹಳಬೇಗ ತನ್ನ ನಶೆಯನ್ನು  ತೋರಿಸುತ್ತದೆ.

 


            ತಕ್ಕಮಟ್ಟಿಗೆ ಆವಿಷ್ಕಾರ ಗಳು ಕಾಲಗತಿಗೆ ಅನಿವಾರ್ಯ ವಾಗಿ ಇದ್ದರೂ ತಲಮಕ್ಕಿ ಮದುವೆ ಬಹಳ ಸಾಂಪ್ರದಾಯಿಕವಾಗಿತ್ತು.ಮನೆಯಲ್ಲಿ ಆದುದರಿಂದ ಅದರ ಸಂಭ್ರಮ  ಉಲ್ಲಸಿತವಾಗಿತ್ತು. ಮನೆ ಮಂದಿಯ ಉಪಚಾರ ಕಾಳಜಿ ಹೃದ್ಯವಾಗಿ ಮದುವೆಯನ್ನು ಸಂಭ್ರಮಿಸುವಂತೆ ಮಾಡಿತ್ತು.  ಹಿಂದಿನಂತೆ ಇಂದೂ ಪುರೋಹಿತರು ಬರಿಗೈಯಲ್ಲಿ ಬರುತ್ತಾರೆ!!

 

             ಸಾಮಾನ್ಯವಾಗಿ ಮದುವೆ ಮುಗಿದು ಹೆಣ್ಣು ಗಂಡಿನೊಡನೆ ಹಜ್ಜೆ ಇಡುವಾಗ ತನ್ನ ಹೆತ್ತವರನ್ನೂ ಒಡಹುಟ್ಟಿದವರನ್ನೂ ಒಡನಾಡಿಗಳನ್ನೂ  ನೆನೆದು ಕಣ್ಣೀರು ಹಾಕುವುದು ಸಾಮಾನ್ಯ. ಹೆಣ್ಣು ಮಗಳ ಬೀಳ್ಕೊಡುಗೆ ಎಂಬುದು ಸಂಭ್ರಮದ ಮದುವೆಯಲ್ಲಿ ಕರುಳ ಹಿಂಡುವ ಸಂದರ್ಭ. ಆದರೆ ಬಾವನ ಮಗಳು ಭಾವನ ಎಲ್ಲ ದುಗುಡವನ್ನೂ ನುಂಗಿ ಗಟ್ಟಿಗಿತ್ತಿಯಾಗಿ ನಗುತ್ತಾ ಗಂಡನೊಡನೆ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟದ್ದು ಅತಿ ವಿಶೇಷ ವಾಗಿತ್ತು. ಆಕೆಯ ಅಪ್ಪ ನನ್ನ ಬಾವನೂ ಯೋಜನಾಬದ್ಧವಾಗಿ ಮಗಳ ಮದುವೆ ಮುಗಿಸಿದ ನಿರಾಳತೆಯಲ್ಲಿದ್ದರು ಮದುವೆ ಇವಿಷ್ಟು ವೈಶಿಷ್ಟ್ಯ ವನ್ನು ತುಂಬಿ ಯಶಸ್ವಿಯಾಗಿ ಮಂಗಳವಾಯಿತು. ಅವಿಷ್ಕಾರಗಳ ನಡುವೆಯೂ ತಲಮಕ್ಕಿ ಮದುವೆ ಇನ್ನೂ ಅದೇ ಸೊಗಡನ್ನು ಒಂದಷ್ಟು ಉಳಿಸಿಕೊಂಡಿದೆ. ಇದು ಉಳಿಯಬೇಕು ಎಂಬ ಆಶಯ ಎಲ್ಲರಲ್ಲೂ ಇದೆ. ಎಲ್ಲವನ್ನು ಸುಲಲಿತವಾಗಿ ನಿರ್ವಹಿಸಿ ತಮ್ಮ ಜೀವನದ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದ ಬಾವ ದಂಪತಿಯರು ದಣಿವಿನಲ್ಲೂ ಸುಖವನ್ನು ಕಂಡರು.

 


 

ಕೊನೆಯಲ್ಲಿ ವಿದಾಯ ಹೇಳುವಾಗ ಬಾವನ ಮಗಳು‌ ಭಾವನ ಕಾಲಿಗರಗಿದಾಗ ಭಾವನಾತ್ಮಕವಾಗಿಯೇ ಎದೆಗೊತ್ತಿ ನಮ್ಮ ಮನೆ ಹೆಣ್ಣು ಮಗಳನ್ನು ಹರಸಿದೆ. ಸಹಚರನೊಂದಿಗಿನ ಹೊಸ ಬದುಕಿನಲ್ಲಿ ಸ್ನೇಹ ಸೌಹಾರ್ದ ಸಮೃದ್ಧಿಯಾಗಲಿ.ಬಾವನ ಮಗಳು ಭಾವನ ಸುಖಿಯಾಗಿರಲಿ.  

6 comments:

  1. ಬರಹ ತುಂಬಾ ಸೊಗಸಾಗಿ ಮೂಡಿಬಂದಿದೆ. ಯಾಂತ್ರಿಕ ಮದುವೆ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರ ಕೊಟ್ಟಿರುವಾಗ, ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮದುವೆ ನೆರವೇರಿಸಿದ ಬಗ್ಗೆ ಕೆಲ ವಿವರಗಳನ್ನು ಸೇರಿಸಬಹುದಾಗಿತ್ತು ಎಂದೆನಿಸುತ್ತದೆ.

    ReplyDelete
  2. ಲೇಖನ ತುಂಬ ಚೆನ್ನಾಗಿದೆ. ಮದುವೆಯ ಸಂಭ್ರಮದ ಕ್ಷಣಗಳು ಮನಸಿಗೆ ಮರುಕಳಿಸಿದವು

    ReplyDelete
  3. ಉತ್ತಮವಾದ ಬರಹ. ಮದುವೆಯ ಸುಮಧುರ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಪ್ರತ್ಯಕ್ಷವಾದ ಅನುಭವ

    ReplyDelete
  4. This comment has been removed by the author.

    ReplyDelete