ಯಾವುದೇ ಒಂದು ವಿಚಾರ ಹೇಳುವಾಗ ಒಂದು ಘಟನೆಯಿಂದ ತೊಡಗಿಸುವುದು ಅತ್ಯಂತ ಸೂಕ್ತ ಎನಿಸುತ್ತದೆ. ಹಾಗೆ ಇದೂ ಒಂದು ಘಟನೆಯಿಂದ ತೊಡಗಿಸುವ. ಬಹಳ ಹಿಂದೆ ಬಾಲ್ಯದ ಒಂದು ಘಟನೆ, ಒಂದು ದಿನ ನಮ್ಮ ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲಿನ ಮೈದಾನದಲ್ಲಿ ಒಂದು ಹೆಲಿಕಾಪ್ಟರ್ ಬಂದಿಳಿಯಿತು. ಅದರ ರೆಕ್ಕೆಯ ಗಾಳಿಗೆ ಶಾಲೆಯ ಒಂದಷ್ಟು ಹಂಚುಗಳು ಹಾರಿ ಹೋದವು. ಕಾಯರ್ ಕಟ್ಟೆ ಶಾಲೆ ಎಂದರೆ ಗುಡ್ಡದ ಮೇಲಿರುವ ಶಾಲೆ. ಬಹಳ ಪ್ರಶಾಂತವಾದ ಪ್ರದೇಶ. ಒಂದು ಶಾಲೆಗೆ ಮಾದರಿ ಎನ್ನುವ ಪರಿಸರ ಇದ್ದರೆ ಅದು ನಮ್ಮ ಕಾಯರ್ ಕಟ್ಟೆ ಹೈಸ್ಕೂಲಿನ ಪರಿಸರ. ರಸ್ತೆಯಿಂದ ತುಸು ದೂರ ವಿಶಾಲವಾದ ಮೈದಾನು ಅತ್ಯಂತ ಪ್ರಶಾಂತವಾದ ಪರಿಸರದಲ್ಲಿ ಹೀಗೆ ಒಂದು ದಿನ ಹೆಲಿಕಾಪ್ಟರ್ ಇಳಿದು ಕಲರವ ಸೃಷ್ಟಿಯಾದರೆ ಕೇಳಬೇಕೆ. ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿತು.ಒಂದು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಳಿದರೆ, ಮತ್ತೆ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಇಳಿಯಿತು. ಯಾವುದೋ ಕೆಲವು ಜನ ಅಪರಿಚಿತರು, ಅವರೇನು ಮಾತನಾಡುತ್ತಾರೆ ಅಲ್ಲಿದ್ದವರಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ಹಾಗೆ ಇಳಿದು ಬಂದ ಹೆಲಿಕಾಪ್ಟರ್ ಎರಡು ದಿನ ಮೈದಾನದಲ್ಲೇ ಹಗಲು ರಾತ್ರಿ ಕಳೆಯಿತು. ಊರೆಲ್ಲ ಅನಿರೀಕ್ಷಿತ ಸಡಗರ. ಆಕಾಶದಲ್ಲಿ ಸದ್ದು ಮಾಡುತ್ತಿದ್ದ ವಿಮಾನವನ್ನು ಅಷ್ಟೇ ಕಂಡ ಊರವರಿಗೆ ಹೆಲಿ ಕಾಪ್ಟರ್ ನೋಡುವ ಅವಕಾಶ. ಕೇವಲ ಹಳ್ಳಿ ಜನಗಳು. ತಮ್ಮ ಮನೆ ಮಂದಿಯನ್ನು ಕರೆತಂದು ಹೆಲಿಕಾಪ್ಟರ್ ತೋರಿಸುವ ತವಕ ಹಲವರಿಗೆ
.
ಸರಿ ಜನರ ಪ್ರವಾಹ ನಮ್ಮ ಕಾಯರ್ ಕಟ್ಟೆ ಮೈದಾನಕ್ಕೆ ಲಗ್ಗೆ ಇಟ್ಟಿತು. ಗಂಟೆಗೊಂದರಂತೆ ಓಡುತ್ತಿದ್ದ ಬಸ್ಸುಗಳು ಸ್ಪೆಷಲ್ ಟ್ರಿಪ್ ಹಾಕತೊಡಗಿದವು. ಕೆಲವು ಬಾಡಿಗೆ ಕಾರು ಜೀಪುಗಳು ಜನ ಹೊತ್ತುಕೊಂಡು ಬಂದು ಹೋಗುತ್ತಿದ್ದವು. ಅಂತೂ ಎರಡು ದಿನ ಜನ ಜಾತ್ರೆ. ಎಲ್ಲರೂ ಹೆಲಿಕಾಪ್ಟರ್ ನೋಡುವುದಕ್ಕೆ ಬರುವವರು. ಜನ ಹೀಗೆ ಬರುತ್ತಿದ್ದರೆ ಕೆಲವರು ತಾತ್ಕಾಲಿಕ ಅಂಗಡಿ ಹೋಟೇಲ್ ಗಳನ್ನು ತೆರೆದರು. ಈ ನಡುವ ಅವರದ್ದೂ ಒಂದು ವ್ಯಾಪಾರ. ನಮ್ಮ ರೀತಿಗಳೇ ಹೀಗೆ. ಜಗದ ನಿಯಮ. ಎಲ್ಲಿ ಗ್ರಾಹಕರು ಇರುತ್ತಾರೋ ಅಲ್ಲಿ ವ್ಯಾಪಾರಿಗಳು ಸಿಗುತ್ತಾರೆ. ಇನ್ನು ವ್ಯಾಪಾರಿಗಳು ಗ್ರಾಹಕರ ಸೃಷ್ಟಿ ಮಾಡಿಬಿಡುತ್ತಾರೆ. ಗ್ರಾಹಕರನ್ನು ಸೃಷ್ಟಿ ಮಾಡುವವನೇ ಯಶಸ್ವೀ ವ್ಯಾಪಾರಿ.
ನಮ್ಮ ವಾರ್ತಾ ಮಾಧ್ಯಮಗಳನ್ನು ಅದರಲ್ಲೂ ನ್ಯೂಸ್ ಗಳನ್ನು ಸೃಷ್ಟಿಸಿ ಇಲ್ಲ ಕೆದಕಿ ವಾರ್ತೆಯನ್ನು ಒದಗಿಸುವುದು ಕೂಡ ಒಂದು ವ್ಯಾಪಾರವಾಗಿ ಭಾಸವಾಗುತ್ತದೆ. ಕೆಲವು ವಾರ್ತೆಗಳನ್ನು, ಅದಕ್ಕೆ ಸಂಭಂಧಿಸಿದ ಕಾರ್ಯಕ್ರಮಗಳನ್ನು ನೋಡಿದಾಗ ಮೇಲೆ ಹೇಳಿದ ಹೆಲಿಕಾಪ್ಟರ್ ಆ ಸಂತೆ ಸ್ಪೆಷಲ್ ಬಸ್ಸುಗಳು ನೆನಪಾಗುತ್ತವೆ. ಪ್ರತೀ ವ್ಯಾಪಾರದ ಹಿಂದೆ ಒಂದು ಹೊಟ್ಟೆಪಾಡಿನ ಕಥೆ ಇರುವುದರಿಂದ ಅದನ್ನು ಪೂರ್ಣವಾಗಿ ಅಪರಾಧವಾಗಿ ಪರಿಗಣಿಸುವ ಹಾಗಿಲ್ಲ. ಮುಖವನ್ನು ತೋರಿಸದ ಕೇವಲ ವಾರ್ತೆಯಷ್ಟನ್ನೇ ತಿಳಿಸುವ ನಿಸ್ವಾರ್ಥ ಸೇವೆಯ ನಮ್ಮ ಬಾಲ್ಯದ ರೇಡಿಯೋಗಳು, ಆ ವಾರ್ತೆಗಳು ಈಗ ತುಕ್ಕು ಹಿಡಿದಿವೆ. ಕಾಲ ಎಂದರೆ ಪರಿವರ್ತನೆಯ ಸಂಕೇತ. ವಾರ್ತೆಗಳು ಮನುಷ್ಯನ ವಿಚಾರಗಳೂ ವ್ಯಾಪಾರದ ಸರಕಾಗುವುದು ಜಗತ್ತು ವ್ಯಾಪಾರದ ಹಿಂದೆ ಇದೆ ಎಂದನ್ನು ತೋರಿಸುತ್ತದೆ. ಏನೂ ತಿಳಿಯದಿದ್ದ ಬೇಸಾಯಗಾರ ಕೂಡ ಬದುಕಬೇಕಿದ್ದರೆ ವ್ಯಾಪಾರವನ್ನು ತಿಳಿಯಬೇಕಾಗುತ್ತದೆ. ತಪ್ಪಲ್ಲ. ಆದರೆ ನಾವು ಮಾಡುವ ವೃತ್ತಿಯಲ್ಲಿ ವೃತ್ತಿ ಧರ್ಮ ಎಂಬುದನ್ನು ಸೇರಿಸುವಾಗ ವಿಶ್ಲೇಷಣೆ ಆರಂಭವಾಗುತ್ತದೆ. ಹೀಗೂ ಹೌದೆ? ಹಾಗೂ ಹೌದೇ? ಎಂಬ ಚಿಂತನೆಗಳು. ವಿಮರ್ಷೆಗಳು. ನಿಜಕ್ಕಾದರೆ ವಿಮರ್ಶೆಯ ಮೇಲೆ ವಿಶ್ವಾಸ ಇಲ್ಲ. ಯಾಕೆಂದರೆ ಇಲ್ಲಿ ಸೃಷ್ಟಿಯಾಗುವ ವಾರ್ತೆಗಳು ವಿಮರ್ಶೆಗೆ ಒಳಗಾಗುವುದಕ್ಕಿಂತಲೂ ವಿಶ್ಲೇಷಣೆಗೆ ಒಳಗಾಗಬೇಕು. ವಿಮರ್ಶೆ ವಿಶ್ಲೇಷಣೆ ಬೇರೆ ಬೇರೆ ಅಂತ ನನ್ನ ಅನಿಸಿಕೆ. ವಿಮರ್ಶೆಗಳು ಸತ್ಯವನ್ನು ಹುಡುಕುವುದಿಲ್ಲ. ವಿಶ್ಲೇಷಣೆಯಲ್ಲಿ ಸತ್ಯ ಹೊರಬರುತ್ತದೆ. ವಿಶ್ಲೇಷಣೆ ಸೂಕ್ತ ಅನ್ನಿಸುವುದು ಯಾಕೆಂದರೆ ಹೊಟ್ಟೆ ಪಾಡು ಎಂಬುದರಿಂದ. ಇಲ್ಲಿ ಯಾವುದೂ ಅಪರಾಧವಲ್ಲ. ಸರಿಯೋ ತಪ್ಪೋ ನೀವು ವಿಶ್ಲೇಷಿಸಿ ನಿಮಗೆ ಬೇಕಾದ ನಿಲುವನ್ನು ತೆಗೆದುಕೊಳ್ಳಬಹುದು. ಈ ನ್ಯೂಸ್ ಚಾನಲ್ ನೋಡುವಾಗ ಈ ರೀತಿಯ ಯೋಚನೆಗಳು ಬರುವುದಿಲ್ಲವೇ?
ನ್ಯೂಸ್ ಚಾನಲ್ ಗಳು ಮನರಂಜನಾ ಚಾನಲ್ ಗಳಾಗಿ ಬದಲಾಗುತ್ತವೆ. ಹಾಗಾಗಿ ಸುಮ್ಮನೆ ಆದರೂ ನ್ಯೂಸ್ ಚಾನಲ್ ಹಾಕಿ ಅಗತ್ಯ ಇಲ್ಲದೇ ಇದ್ದರೂ ಬ್ರೇಕಿಂಗ್ ನ್ಯೂಸ್ ನ ಬ್ರೇಕ್ ಗೆ ನಾವು ಬ್ರೇಕ್ ಪೈಲ್ ಆಗುವುದುಂಟು. ಸೀರಿಯಲ್ ಅಥವಾ ಇನ್ನಿತರ ಮನರಂಜನಾ ಸಂಕಲೆಯಿಂದ ಹಾಗೆ ಬಂದು ಹೀಗೆ ಹೋಗುವ ನ್ಯೂಸ್ ಚಾನಲ್ ಗಳೇ ಆಪ್ಯಾಯಮಾನವಾಗುತ್ತದೆ. ಹಿಡಿಶಾಪ ಹಾಕಿದರೂ ರಿಮೋಟ್ ಅದುಮುವುದು ನ್ಯೂಸ್ ಚಾನಲ್ ನೋಡುವುದಕ್ಕಾಗಿ. ಯಾವಾಗ ಬೇಕು ಆವಾಗ ನೋಡಿ ಬೇಡದೇ ಇದ್ದರೆ ಆಫ್ ಮಾಡಿ ಸುಮ್ಮನಿದ್ದರಾಯಿತು. ಪ್ರತೀ ನ್ಯೂಸ್ ಚಾನಲ್ ಗಳನ್ನು ಗಮನಿಸಿ, ಬ್ರೇಕಿಂಗ್ ನ್ಯೂಸ್ ಇಲ್ಲದ ಚಾನಲ್ ಇಲ್ಲವೇ ಇಲ್ಲ. ಕುಂಬಳ ಗಾತ್ರದ ಅಕ್ಷರದಲ್ಲಿ ಕಣ್ಣಿಗೆ ರಾಚುವಂತೆ ಬ್ರೇಕ್ ಒತ್ತಿಬಿಡುತ್ತಾರೆ. ನರ್ಸರಿ ಶಾಲೆಯ ಟೀಚರಂತೆ ಹೇಳಿದ್ದನ್ನೇ ಪದೆ ಪದೇ ಹೇಳಿ ನಾವೆಷ್ಟು ತಟಸ್ಥರಾಗಿದ್ದೇವೆ ಎಂಬುದನ್ನು ಪರೀಕ್ಷೆಗೆ ಇಟ್ಟುಬಿಡುತ್ತಾರೆ. ಇಲ್ಲದಿದ್ದರೆ ಅದು ಬ್ರೇಕಿಂಗ್ ನ್ಯೂಸ್ ಆಗುವುದು ಹೇಗೆ? " ಇಂದು ಹೊಸದಾಗಿ ಸಾವಿರ ಜನರಿಗೆ ಕೊರೋನ ಸೋಂಕು ಕಂಡಿದೆ" ಅಂತ ಒಂದು ಸಲ ಹೇಳಿದರೆ " ಇಂದು ಕೊರೋನ ಹೊಸದಾಗಿ ಸಾವಿರ ಜನರಲ್ಲಿ ಕಂಡಿದೆ" ಹೀಗೆ ಶಬ್ದಗಳನ್ನು ತಿರುವುಮರುವಾಗಿ ಹೇಳಿ ವ್ಯಾಕರಣ ಪಾಠ ಮಾಡಿಬಿಡುತ್ತಾರೆ. ರೈಲಿನಲ್ಲಿ ಕೀರಲಾಗಿ ಕೇಳುವ ಭಿಕ್ಷುಕನ ಹಾಡಿನಂತೆ ನಾವು ಸುಮ್ಮನೇ ಇದ್ದುಬಿಡುತ್ತೇವೆ. ಯಾಕೆಂದರೆ ಇದೊಂದು ವ್ಯಾಪಾರ. ಸಂತೆಯಲ್ಲಿನ ಗದ್ದಲದಂತೆ ಅದೂ ಇದು ಎಲ್ಲವೂ ಹೊಟ್ಟೆಪಾಡು. ಟೀವಿಯಲ್ಲಿನ ಸಾಬೂನಿನ ಜಾಹಿರಾತನ್ನು ನಂಬದೇ ಇರುವಂತೆ ಇದಕ್ಕೂ ಅದೇ ಪ್ರತಿಕ್ರಿಯೆ. ನ್ಯೂಸ್ ಬೇಕೋ ಬೇಡವೋ ಎಲ್ಲವೂ ಈಗ ಅನಿವಾರ್ಯ ಅಂಗಗಳಾಗಿವೆ.
ಆದರೂ ನ್ಯೂಸ್ ಚಾನಲ್ ಗಳಿಗೆ ಕರ್ತವ್ಯವಿದೆ. ಇದು ಸಮಾಜದ ಒಂದು ಬಗೆಯ ಕನ್ನಡಿ. ಅದನ್ನು ಮುಖದ ಯಾವ ಭಾಗ ಕಾಣಬೇಕೋ ಅಲ್ಲಿಗೆ ಹಿಡಿಯಬೇಕು. ಮೊನ್ನೆ ಮೊನ್ನೆ ಒಂದು ತಿಂಗಳ ಮೊದಲು ನ್ಯೂಸ್ ಚಾನಲ್ ನೋಡಿದರೆ ಕೋರೋನ ಸ್ಕೋರು ಏನಿದೆಯೋ ಅದನ್ನು ತೋರಿಸುತ್ತಲೇ ಇರಲಿಲ್ಲ. ನೆನಪಾಗುವಾಗ ಒಂದು ಸಲ ತೋರಿಸಿಬಿಡುತ್ತಿದ್ದರು. ಯಾಕೆಂದರೆ ಇನ್ನೂರು ಮೂನ್ನೂರರ ಆಸುಪಾಸಿನಲ್ಲಿದ್ದರೆ ಯಾರಿಗೂ ಆ ಬ್ರೇಕಿಂಗ್ ಬೇಕಾಗಲಿಲ್ಲ. ದಿವ್ಯ ನಿರ್ಲಕ್ಷ್ಯ. ಆಗಲೂ ವಾಸ್ತವದಲ್ಲಿ ಕೊರೋನ ಮುಕ್ತ ಅಂತ ಆಗಲೇ ಇಲ್ಲ. ಆದರೂ ಕೊರೋನ ಸುದ್ದಿಗೆ ಮಹತ್ವವೇ ಇಲ್ಲದಂತೆ ಆಗಿತ್ತು. ಬಹುಶಃ ಈಗ ಬಗೆ ಬಗೆಯಲ್ಲಿ ಕೊರೋನ ಕಥೆಯನ್ನು ತೋರಿಸುವಂತೆ ಆಗಲೂ ತೋರಿಸುತ್ತಿದ್ದರೆ, ಎರಡನೆ ಅಲೆಯ ಆಘಾತ ಇಷ್ಟು ರಭಸವನ್ನು ತಾಳುತ್ತಿರಲಿಲ್ಲ. ಜನ ಕೊರೋನವನ್ನು ಮರೆತವರಂತೆ ಇದ್ದುಬಿಟ್ಟರು. ಇದೇ ಅವಧಿಯಲ್ಲಿ ಮಂಗಳೂರಿಗೆ ಹೋಗಿದ್ದೆ. ನಾನು ಮಾಸ್ಕ್ ಧರಿಸಿ ಸುತ್ತಾಡಿದರೆ , ಅಲ್ಲಿನವರು ಕೇಳುತ್ತಿದ್ದರು " ಬೆಂಗಳೂರಿನಿಂದ ಯಾವಾಗ ಬಂದದ್ದು ಮಾರಾಯರೆ? " ಯಾಕೆಂದರೆ ಅಲ್ಲಿನವರ ಮಾಸ್ಕ್ ಎಲ್ಲೋ ಹಾರಿ ಹೋಗಿತ್ತು. ಸಾಮಾಜಿಕ ಅಂತರದ ಕಥೆ ಹೇಳುವುದೇ ಬೇಡ, ಸಿಟಿ ಬಸ್ ಗಳಲ್ಲಿ ಒಳ್ಳೆ ಸಾಮಾಜಿಕ ಅಂತರ, ಕಂಡಕ್ಟರ್ ಗೆ ಮಾತ್ರ ಬಸ್ ಒಳಗೆ ಹೋಗುವುದಕ್ಕೆ ಜಾಗವೇ ಇಲ್ಲ. ಇಂತಹ ಸಮಯದಲ್ಲಿ ಚಾನಲ್ ಗಳು ತಮ್ಮ ಕರ್ತವ್ಯವನ್ನು ಮರೆತಿದ್ದರು. ಈಗ ಬೊಬ್ಬಿರಿವ ಹತ್ತನೆಯ ಒಂದು ಪಾಲು ಆಗ ಬೊಬ್ಬೆ ಹೊಡೆಯಬೇಕಿತ್ತು ಅಂತ ಅನ್ನಿಸುವುದಿಲ್ಲವೇ? ಎಲ್ಲಾ ಚಾನಲ್ ಗಳು ಈಗ ಜನರಿಗೆ ಕರ್ತವ್ಯವನ್ನು ಬೋಧಿಸುತ್ತವೆ. ಮಾಸ್ಕ್ ಇಲ್ಲದೇ ಓಡಾಡುವವರ ಜನ್ಮ ಜಾಲಾಡುತ್ತವೆ. ಯಾಕೆಂದರೆ ಹೊಟ್ಟೆಪಾಡು ಎಂದು ನಾವು ಸುಮ್ಮನಾಗಬೇಕು. ಜನ ಹೊಟ್ಟೆಪಾಡಿಗಾಗಿ ಹಪ ಹಪಿಸುವಾಗ ಇವರಿಗೆ ಭರ್ಜರಿ ವ್ಯಾಪಾರ. ಗಿರಾಕಿಗಳು ಎಲ್ಲಿರುತ್ತಾರೋ ಅಲ್ಲೆ ವ್ಯಾಪಾರದವರೂ ಇರುತ್ತಾರೆ. ನಾವೆಲ್ಲ ಸಮಾಚಾರದ ಗಿರಾಕಿಗಳು.
No comments:
Post a Comment