ಪುರಾಣದಲ್ಲಿನ ಒಂದು ಕಥೆ. ಯಜ್ಞ ಸಂರಕ್ಷಣೆಗಾಗಿ ಮಹರ್ಷಿ ವಿಶ್ವಾಮಿತ್ರರು ದಶರಥ ಪುತ್ರ ಶ್ರೀರಾಮ ಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಬರುತ್ತಾರೆ . ವಿಶ್ವಾಮಿತ್ರರು ಹಮ್ಮಿಕೊಂಡಿದ್ದ ಯಜ್ಞಕ್ಕೆ ರಾಕ್ಷಸರಾದ, ತಾಟಕಿ ಹಾಗೂ ಆಕೆಯ ಮಕ್ಕಳಾದ ಮಾರೀಚ ಮತ್ತು ಸುಬಾಹು ಸದಾ ತೊಂದರೆಯನ್ನು ಕೊಡುತ್ತಿದ್ದರು. ಇವರ ವಧೆಗಾಗಿ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದು ಕೊಂಡು ಬಂದು ಅವರಿಗೆ ತಮ್ಮಲ್ಲಿ ನೆಲೆಯಾಗಿದ್ದ ಮಂತ್ರಾಸ್ತ್ರಗಳನ್ನೂ ಉಪದೇಶ ಮಾಡುತ್ತಾರೆ. ಯಾಕೆಂದರೆ ರಾಕ್ಷಸರ ಪರಾಕ್ರಮ ಶಕ್ತಿಯನ್ನು ಅವರ ಮಾಯಾವಿದ್ಯೆಯನ್ನು ಅವರು ಅರಿತವರಾಗಿದ್ದಾರೆ. ಅದರಲ್ಲೂ ಮಾರೀಚ ಮಾಯಾವಿದ್ಯೆಗೆ ಪ್ರಸಿದ್ಧ. ತಾಟಕಿ ಮತ್ತು ಸುಬಾಹುವನ್ನು ಶ್ರೀರಾಮ ಸ್ಥಳದಲ್ಲೇ ಸಂಹರಿಸುತ್ತಾನೆ. ಆದರೆ ಮಾರೀಚ ಮಹಾ ಮಾಯಾವಿ. ಆತ ಬ್ರಾಹ್ಮಣ ವೇಶಧರಿಸಿ ಯಜ್ಚಮಾಡುತ್ತಿದ್ದ ಬ್ರಾಹ್ಮಣರ ಜತೆಗೆ ಸೇರಿದ್ದ. ಶ್ರೀರಾಮ ಉಳಿದ ಇಬ್ಬರನ್ನು ಸಂಹಾರ ಮಾಡಿದ್ದರೆ ಬ್ರಾಹ್ಮಣ ರೂಪದಲ್ಲಿದ್ದ ಮಾರೀಚನನ್ನು ಸಂಹರಿಸದೆ ತನ್ನ ಬಾಣಗಳಿಂದ ಯೋಚನಾಂತರ ಹಾರಿಸುತ್ತಾನೆ. ವಾಸ್ತವದಲ್ಲಿ ಅತನನ್ನು ಸಂಹರಿಸುವುದು ಕಷ್ಟ ಸಾಧ್ಯವೇನಲ್ಲ. ಆದರೆ ಮಾರೀಚ ಜೀವ ಉಳಿಸಿಕೊಳ್ಳುವುದಕ್ಕೆ ಕಾರಣವಿದೆ. ಆತ ಬದುಕುವುದಕ್ಕೆ ಬ್ರಾಹ್ಮಣ ವೇಶದ ಮೊರೆ ಹೋಗುತ್ತಾನೆ. ಬ್ರಾಹ್ಮಣ ವೇಶಧಾರಿಯನ್ನು ಸಂಹರಿಸದೆ ಬಿಟ್ಟದ್ದಕ್ಕೆ ಹಲವು ಕಾರಣಗಳಿರಬಹುದು. ಆದರೆ ತತ್ಕಾಲದಲ್ಲಿ ಆತನಿಗೆ ಬ್ರಾಹ್ಮಣ ವೇಶಕೂಡ ರಕ್ಷಣೆಯನ್ನು ಒದಗಿಸುತ್ತದೆ. ಅದರ ಅರ್ಥ ಬ್ರಾಹ್ಮಣ್ಯ ಅದು ಎಷ್ಟು ಶ್ರೇಷ್ಠ ಎಂಬುದನ್ನು ರಾಮ ತೋರಿಸಿಕೊಡುತ್ತಾನೆ. ಮಾರೀಚ ಪ್ರಾಣ ಉಳಿಸಿಕೊಳ್ಳುತ್ತಾನೆ.
ಬ್ರಾಹ್ಮಣನಾಗಿ ಹುಟ್ಟುವುದು ಮಾತ್ರವಲ್ಲ ಬ್ರಾಹ್ಮಣನ ಯಾವುದಾದರೂ ಒಂದು ರೂಪವೂ ಗುಣವೂ ಪೂಜ್ಯನಿಯವಾಗಿದೆ. ಅದು ಶಿಕ್ಷಾರ್ಹ ಅಪರಾಧದಿಂದಲೂ ಮುಕ್ಕ್ತನನ್ನಾಗಿಸುತ್ತದೆ. ಒಂದು ಕ್ಷಣದ ಬ್ರಹ್ಮತ್ವ ಹಾದಿಯೂ ಬ್ರಹ್ಮ ರೂಪಿಯಾಗುತ್ತದೆ. ಈ ಕಥೆಯಲ್ಲಿ ಬ್ರಾಹ್ಮಣ ವರಿಷ್ಠತೆಯನ್ನು ಅರಿಯಬೇಕು.
ದೈವಾಧೀನಂ ಜಗತ್‌ಸರ್ವಂ ಮಂತ್ರಾಧೀನಂತು ದೈವತಂ ತನ್ಮಂತ್ರಾ ಬ್ರಾಹ್ಮಣಾಧೀನಂ ಬ್ರಾಹ್ಮಣೋ ಮಮದೇವತಾ, ಮಂತ್ರ ಯಾರ ಆಧೀನವಿದೆಯೋ ಆತ ಬ್ರಾಹ್ಮಣನಾಗುತ್ತಾನೆ. ದೇವರಾಗುತ್ತಾನೆ. ದೇವರು ಎಂದರೆ ಅದು ಶ್ರೇಷ್ಠತೆಯ ಸಂಕೇತ. ವರೇಣ್ಯಂ ಅಂತ ಉದ್ಗರಿಸುವುದೇ ಅದಕ್ಕಾಗಿ. ಜನ್ಮದಿಂದ ಎಲ್ಲರೂ ಮನುಷ್ಯರೆ, ಅನಂತರದ ಸಂಸ್ಕಾರವೇ ಅತನನ್ನು ಶ್ರೇಷ್ಠನನ್ನಾಗಿಸುವುದು. ಪ್ರತಿಯೊಂದು ಸಂಸ್ಕಾರದ ಉದ್ದೇಶ ಒಂದೇ ಅದು ಅಮೃತತ್ವದ ಕಡೆಗಿನ ಯಾನ. ಅದಕ್ಕೆ ನಾಂದಿ ಹಾಡುವುದೇ ಬ್ರಹ್ಮೋಪದೇಶ.
ಬಾಲ್ಯದಲ್ಲಿ ಒಂದಷ್ಟು ಸಮಯ ನಾನು ಅಜ್ಜನೊಂದಿಗೆ ಪೌರೋತ್ಯದ ಸಹಾಯಕನಾಗಿ ಹೋಗುತ್ತಿದೆ. ಕೇವಲ ಹತ್ತರ ಹರಯದ ಬಾಲಕ. ಅಜ್ಜ ಹೇಳಿಕೊಟ್ಟದ್ದು ಉರು ಹೊಡೆಯುವುದು ಅಷ್ಟೇ ಗೊತ್ತಿರುವುದು. ಆದರೆ ಅಜ್ಜನ ಜತೆಯಲ್ಲಿ ಕ್ರಿಯಾತ್ಮಕವಾಗಿ ಕಲಿತದ್ದು ಹಲವು. ಅಜ್ಜ ಅಖಂಡ ಋಗ್ವೇದಿ. ಅಷ್ಟಕವಷ್ಟೂ ನಾಲಗೆಯಲ್ಲಿ ನೆಲೆ ನಿಂತು ಸರಸ್ವತೀ ಅನುಗ್ರಹ ಸದಾ ಇರುತ್ತಿತ್ತು. ಸ್ಫಟಿಕದಂತಾ ಮಂತ್ರೋಚ್ಚಾರ. ಆ ಬೀಜ ನನ್ನಲ್ಲೂ ಬಿತ್ತಿದ್ದರು. ಆದರೆ ಅದೃಷ್ಟ ನನಗಿಲ್ಲ. ಬೀಜ ಚಿಗುರಿದ್ದು ಮಾತ್ರ ಮರವಾಗಲಿಲ್ಲ. ಯಾವುದೇ ಕ್ರಿಯಾಭಾಗವಿರಲಿ ಅಜ್ಜ ಪುಸ್ತಕ ನೋಡಿ ಮಂತ್ರ ಹೇಳಿದ್ದು ನಾನು ಕಂಡಿಲ್ಲ. ಮಂತ್ರ ಬಾಯಿಯ ತುದಿಯಲ್ಲಿರಬೇಕು. ದೃಷ್ಟಿ ಕ್ರಿಯೆಯಲ್ಲಿರಬೇಕು. ಪುಸ್ತಕ ನೋಡಿ ಮಂತ್ರ ಹೇಳಿದರೆ ಕಲಿಸಿದ ಗುರುವಿನ ಸ್ಥಾನ ಚ್ಯುತಿಯಾದಂತೆ. ಈ ತತ್ವವೆಲ್ಲ ಅಜ್ಜನಿಂದ ಕಲಿತದ್ದು. ಆಗ ಹರಯ ಸಣ್ಣದು ಇದರ ವೈಶಾಲ್ಯತೆ ಅರ್ಥವಾಗಲಿಲ್ಲ. ಈಗ ಪುಸ್ತಕವಿಲ್ಲದ ಪುರೋಹಿತರನ್ನು ಕಾಣುವುದು ಅಪರೂಪ. ಇಲ್ಲಿ ವಿಮರ್ಶೆಯಲ್ಲ ವಿಶೇಷತೆಯನ್ನಷ್ಟೇ ಉಲ್ಲೆಖಿಸುವುದು. ನಾವು ಮಂತ್ರಾಭ್ಯಾಸದಲ್ಲಿ ವರ್ಗಸಂತೆ ಹಾಕುತ್ತ ಇದ್ದರೆ ಒಂದು ಸ್ವರ ವಿಸರ್ಗವೋ, ಅಲ್ಪಪ್ರಾಣ ಮಹಾಪ್ರಾಣಗಳೋ ಒಂದಕ್ಷರದ ಉಚ್ಚಾರದಲ್ಲಿ ದೋಷ ಕೇಳಿದರೆ ಅಜ್ಜ ಎಲ್ಲೇ ಇದ್ದರೂ ಎಚ್ಚರಿಸುತ್ತಿದ್ದರು. ತಪ್ಪು ಸರಿಯಾಗದೆ ಮುಂದೆ ಹೋಗುವ ಹಾಗಿಲ್ಲ. ಇಂತಹ ಅಜ್ಜನೊಂದಿಗೆ ಪೌರೋಹಿತ್ಯ ಎಂದರೆ ಅದು ಶಾಲೆಯ ಪ್ರಯೋಗಾಲಯವನ್ನು ಹೊಕ್ಕಂತೆ. ನಮ್ಮಜ್ಜ ಪೌರೋಹಿತ್ಯದಲ್ಲಿ ದಕ್ಷಿಣೆಯ ಮುಖ ಕಂಡವರಲ್ಲ, ತೀರ ಬಡವನೋ ಶ್ರೀಮಂತನೋ ಮಾಡುವ ಕರ್ಮಕ್ಕೆ ವೆತ್ಯಾಸವಿಲ್ಲ.
ಇಂತಹ ಆದರ್ಶ ಮಯ ಅಜ್ಜ ಪೌರೋಹಿತ್ಯಕ್ಕೆ ಹೋಗಿ ಕ್ರಿಯಾಭಾಗದ ಆರಂಭದಲ್ಲೇ ಕರ್ತ್ರುವಿನಲ್ಲಿ ಕೇಳುತ್ತಾರೆ ಸಂಧ್ಯಾವಂದನೆಯಾಗಿದೆಯೋ? ಹೀಗೆ ಎಷ್ಟು ಜನ ಪುರೋಹಿತರು ವಿಚಾರಿಸುತ್ತಾರೋ ತಿಳಿಯದು. ಆದರೆ ಪುರೋಹಿತ ಧರ್ಮ ಅದು. ಹಲವು ಕಡೆ ಪುರೋಹಿತರೇ ಸ್ವತಃ ಗಡಿಬಿಡಿಗೆ ಸಂಧ್ಯಾವಂದನೆ ಮಾಡಿರುವುದಿಲ್ಲ. ಮಾಡಿದರೂ ಶಾಸ್ತ್ರಕ್ಕೆ ಎಷ್ಟು ಬೇಕೋ ಅಷ್ಟೇ. ಅದಿರಲಿ ಗುರು ಸ್ಥಾನ ಪ್ರಶ್ನಾತೀತ. ಸಂಧ್ಯಾವಂದನೆ ಮಾಡಲೇ ಬೇಕು. ಹೀಗೆ ಕೇಳುವುದು ಕೂಡ ಸರಿಯಲ್ಲ. ಆದರೆ ವಸ್ತುಸ್ಥಿತಿ ತೀರ ಭಿನ್ನವಾಗಿರುತ್ತದೆ. ಪುರೋಹಿತ ಎಂದರೆ ಪುರು ಅಂದರೆ ದೇಹ ದೇಹಕ್ಕೆ ಹಿತವನ್ನು ಬಯಸುವವನು. ಅರ್ಥಾತ್ ಬ್ರಹ್ಮತ್ವದ ಕಡೆಗೆ ಸಂಚರಿಸುವುದಕ್ಕೆ ಗುರುಸ್ಥಾನದಲ್ಲಿರುವವನು. ಅಯೋಧ್ಯೆಯಲ್ಲಿ ಸೂರ್ಯವಂಶಜರಿಗೆ ವಸಿಷ್ಠ ಮುನಿವರ್ಯ ಹೇಗೋ ಹಾಗೆ. ಶಿಷ್ಯ ತಪ್ಪಿದರೆ ಎಚ್ಚರಿಸುತ್ತಿರಬೇಕು. ಎಚ್ಚರಿಕೆ ಎಂದರೆ ಬಡಿದೆಬ್ಬಿಸುವುದು ಎಂದರ್ಥ. ಇಲ್ಲವಾದರೆ ಹೋಗುವ ಹಾದಿ ಸಮರ್ಪಕವಾಗುವುದಿಲ್ಲ. ಯಾವುದೇ ಯಜ್ಞ ಯಾಗಾದಿಗಳನ್ನು ಮಾಡುವುದರಲ್ಲಿ ಯಜಮಾನ ಕರ್ಮಭ್ರಷ್ಠನಾಗಿರಬಾರದು. ಹಾಗಿದ್ದರೆ ಆಚರಿಸುವ ಕ್ರಿಯೆ ನಿಷ್ಫಲವಾಗುತ್ತದೆ. ಅಥವ ಅದರ ಉದ್ದೇಶ ಏನೋ ಅದು ವಿಕಲ್ಪವಾಗುತ್ತದೆ. ವಿಚಿತ್ರ ಎಂದರೆ ಹಲವು ಸಲ ಮಧ್ಯಾಹ್ನದ ಪೂಜೆಗೆ ಕುಳಿತರೆ ಯಜಮಾನ ಸಂಧ್ಯಾವಂದನೆಯನ್ನೇ ಮಾಡಿರುವುದಿಲ್ಲ. ಹಾಗಾಗಿ ಪುರೋಹಿತನಾದವನು ಯಜಮಾನನಿಗೆ ಎಚ್ಚರಿಸಲೇ ಬೇಕು. ನಿತ್ಯಕರ್ಮಕ್ಕಿಂತ ಬೇರೆ ಯಜ್ಞವಿಲ್ಲ.
ಸಂಧ್ಯಾವಂದನೆ, ಸಂಕಲ್ಪವಿಲ್ಲದೇ ಮಾಡುವ ಕರ್ಮ. ಮಮೋಪಾತ್ತ ದುರಿತ ಕ್ಷಯ ದ್ವಾರ,
ಅಂತಲೇ ಆರಂಭಿಸುವಲ್ಲಿ ಸಂಧ್ಯಾವಂದನೆಯ ಮಹತ್ವ ಅರಿವಾಗುತ್ತದೆ. ಕೇವಲ ದುರಿತವನ್ನು
ಕಳೆಯುವುದಕ್ಕಾಗಿ. ಅದು ಜನ್ಮಾಂತರದ ದುರಿತವೇ ಆಗಿರಬಹುದು. ಸಂಧ್ಯಾವಂದನೆ ಸಂಧಿಕಾಲದಲ್ಲಿ ಆಚರಿಸುವ
ಕರ್ಮ. ಎಲ್ಲೂ ಹೇಗೂ ಆಚರಿಸಬಹುದು. ಇದರ ವಿಶೇಷ ಒಂದೇ ಇಲ್ಲಿ ಆವಾಹನೆ ಪ್ರತಿಷ್ಠೆ ಯಾವುದೂ ಇಲ್ಲ.
ದೇವರ ವಿಗ್ರಹವಿಲ್ಲ.ಯಾವ ದೇವರ ರೂಪವೂ ಇಲ್ಲ. ದೊಡ್ಡದಾಗಿ ಮಂತ್ರಗಳನ್ನು ಹೇಳುವ ಹಾಗೂ ಇಲ್ಲ. ಇದರಲ್ಲಿ
ಅಷ್ಟೂ ಖಾಸಗೀತನವಿದೆ. ಕೇವಲ ನಮ್ಮ ಆತ್ಮದ ಸ್ವರೂಪ
ಮಾತ್ರ. ದೊಡ್ಡದಾಗಿ ಮಂತ್ರಗಳನ್ನು ಹೇಳುವ ಹಾಗೂ ಇಲ್ಲ.
ಇದರಲ್ಲಿ ಅಷ್ಟೂ ಖಾಸಗೀತನವಿದೆ. ಹಾಗಾಗಿ ಇದು ಜನ್ಮಾಂತರದ ದುರಿತ ನಿವಾರಕ. ಅಂಗೈಯಲ್ಲಿರುವ ಜಲವೇ
ಇಲ್ಲಿ ಎಲ್ಲವೂ ಆಗಿರುತ್ತದೆ. ನಿರಾಕಾರ ನಿರ್ಗುಣ ಹೀಗೆ ಭಗವದ್ಗೀತೆಯಲ್ಲಿ ಹೇಳಿದ ಪರಮಾತ್ಮ ಸ್ವರೂಪ.
ಪರಮಾತ್ಮನಿಗೆ ನಾವೇನು ಕಲ್ಪಿಸುತ್ತೇವೋ ಅದಾವುದೂ ಇಲ್ಲ.
ಎಲ್ಲದಕ್ಕೂ ಅತೀತನು. ದೇವತೆಗಳು ಅಗ್ನಿ ಮುಖರು ಅಂತ ಹೇಳುವುದಿದೆ. ಯಾವುದೇ ದೇವರು ಏನು ಸ್ವೀಕರಿಸುವುದಿದ್ದರೂ
ಅಗ್ನಿಮುಖೇನ ಆಗಿರುತ್ತದೆ. ಅಗ್ನಿ ವಾಯು ಜಲ ಹೀಗೆ ಭೂತಗಳಿಗೆ ಯಾವುದೇ ಘನವಾದ ರೂಪವಿಲ್ಲ. ಇದೇ ಭಗವಂತನ
ತತ್ವ. ರೂಪವಿಲ್ಲ ಗುಣವಿಲ್ಲ ಭಾವವಿಲ್ಲ. ಭಗವಂತನ ಎದುರು ನಿಂತಾಗಲೂ ನಾವೂ ಅದೇ ಭಾವದಲ್ಲಿರಬೇಕು.
ದುಃಖ ನಗು ಉದ್ರೇಕ ದ್ವೇಷ ಯಾವುದೇ ಭಾವವಿಲ್ಲದೆ ಭಗವಂತನೆದುರು ನಿಂತಾಗ ಮಾತ್ರವೇ ಭಗವಂತನ ಸಾನ್ನಿಧ್ಯದ
ಅರಿವಾಗುತ್ತದೆ. ಅದೆಲ್ಲವೂ ಒದಗಿ ಬರುವುದು ಸಂಧ್ಯಾವಂದನೆಯಲ್ಲಿ. ಸಂಧ್ಯಾವಂದನೆಯ ಶ್ರೇಷ್ಠತೆ ಗರಿಷ್ಠತೆಯದು. ಎಷ್ಟು ಸೂಕ್ಷ್ಮವೋ ಅಷ್ಟೇ ಅಗಾಧವಾಗಿರುತ್ತದೆ.
ಸಂಧ್ಯಾವಂದನೆ ಎಂಬ ಕ್ರಿಯೆ ಅದು ಆಪೋಶನ ಅರ್ಘ್ಯ ಜಪ ಹೀಗೆ ವರ್ಗಿಕರಿಸುವುದಕ್ಕಿಂತ ಸಂಧ್ಯಾಕಾಲದ ಕರ್ಮ ಎಂದೇ ಕಾಣಬೇಕು ಸಂಸ್ಕಾರ ರೀತ್ಯಾ ಸಂಧ್ಯಾವಂದನೆ ಬೇರೆ ಬೇರೆಯಾಗಿರುತ್ತದೆ. ಕೆಲವರಿಗೆ ಅದು ಮನೆ ದೇವರಿಗೆ ದೀಪ ಹಚ್ಚಿ ನಮಸ್ಕರಿಸುವುದಕ್ಕೆ ಸೀಮಿತವಾಗಿರಬಹುದು. ಇನ್ನು ಕೆಲವರಿಗೆ ಕೇವಲ ನಾಮ ಸ್ಮರಣೆಗೆ ಸೀಮಿತವಾಗಿರಬಹುದು. ಬ್ರಹ್ಮೋಪದೇಶ ಸಂಸ್ಕಾರ ಪಡೆದವನು ಜಪತಪ ಅಂತ ಕರ್ಮನಿಷ್ಠನಾಗಿರುತ್ತಾನೆ. ಏನಿದ್ದರೂ ಈ ಸಂಧ್ಯಾವಂದನೆಯಿಂದ ನಂತರ ಉಳಿದೆಲ್ಲವೂ ದ್ವಿತೀಯಗಳಾಗಿಬಿಡುತ್ತವೆ. ಈ ಆಚರಣೆಯನ್ನು ಬಿಟ್ಟಲ್ಲಿ ಉಳಿದೆಲ್ಲ ಆಚರಣೆಗಳೂ ಅರ್ಥಹೀನವಾಗುತ್ತವೆ. ಆತ್ಮ ಜಾಗೃತಿ ಇಲ್ಲದವನು ಏನು ಮಾಡಿದರೂ ಸತ್ಫಲವನ್ನು ಕೊಡುವುದಿಲ್ಲ. ಒಂದು ವೇಳೆ ಸಿಕ್ಕಿದ ಫಲವೂ ಅದು ಸತ್ಫಲ ಎನಿಸುವುದಿಲ್ಲ. ಸಂಧ್ಯಾವಂದನೆ ಜನ್ಮವನ್ನು ಪರಿಶುದ್ಧಗೊಳಿಸುತ್ತದೆ. ಹಾಗಾಗಿ ಬ್ರಾಹ್ಮಣ ಎಂದರೆ ಆತ ಪರಿಶುದ್ದತೆಯ ಸಂಕೇತ. ಆತ ಎಂದಿಗೂ ಸ್ವಚ್ಛ.
ಪಾಯಸ ಎಂದರೆ ಸಿಹಿ. ಸಪ್ಪೆ ಪಾಯಸ ಎಂಬುದಿಲ್ಲ. ಅಥವಾ ಸಿಹಿ ಪಾಯಸ ಅಂತ ವಿಶೇಷಣ ಹೇಳುವುದಿಲ್ಲ. ಬ್ರಾಹ್ಮಣನಿಗೆ ಸ್ವಚ್ಛ ಎಂಬ ವಿಶೇಷಣದ ಅಗತ್ಯವಿರುವುದಿಲ್ಲ. ಆದರೂ ಇಂದು ಸ್ವಚ್ಛ ಎಂದು ಉಲ್ಲೇಖಿಸುವಂತೆ ಆಗಿರುವುದು ಸುಳ್ಳಲ್ಲಒಂದು ವಿಪರ್ಯಾಸ.
ನನ್ನ
ಸಂಬಂಧಿ ಯೊಬ್ಬರು ಶಬರಿಮಲೆ ಹೋಗುವುದಕ್ಕೆ ವೃತ ದೀಕ್ಷೆಯನ್ನು ತೊಟ್ಟಿದ್ದರು. ವೃತ ನಿಯಮದಂತೆ ಮುಂಜಾವಿನಲ್ಲಿ
ಸ್ನಾನ ಮಾಡಿ ಶರಣು ಕರೆಯುವುದು ವೃತದ ನಿಯಮದಲ್ಲಿ ಒಂದು. ಇದು ಸಂಧ್ಯಾವಂದನೆಯ ನಂತರ ಮಾಡಬೇಕೆ? ಮೊದಲು ಮಾಡಬೇಕೇ?
ಒಂದು ಚರ್ಚೆ. ಸಂಶಯ ಬೇಡ ಸಂಧ್ಯೆಯೇ ಮೊದಲು ಆಚರಿಸಲ್ಪಡಬೇಕು. ಶಬರಿಮಲೆ ಯಾತ್ರೆ
ಅದೊಂದು ವೃತ. ಅದರ ಸಂಕಲ್ಪಕ್ಕೆ ಕಾರಣಗಳಿರಬಹುದು. ವೃತಕ್ಕಿಂತ ಮೊದಲು ಕರ್ಮ ಅಂದರೆ ಕರ್ತವ್ಯ. ವೃತ
ಅನಿವಾರ್ಯವಲ್ಲ. ಆದರೆ ಕರ್ಮ ಅನಿವಾರ್ಯವಾಗುತ್ತದೆ. ಇದೇ ರೀತಿ ಉಳಿದೆಲ್ಲವೂ. ಯಜ್ಞಯಾಗಾದಿಗಳಾಗಿರಬಹುದು,
ದೇವರ ದರ್ಶನವೋ ಉತ್ಸವವೋ ಏನು ಆಗಿರಬಹುದು ಸಂಧ್ಯಾವಂದನೆ ಅನುಷ್ಠಾನ ಇಲ್ಲವಾದರೆ
ಅದೆಲ್ಲವೂ ವ್ಯರ್ಥ.
ನಮ್ಮ ಸಂಸ್ಕಾರಗಳಲ್ಲಿ ದೈನಂದಿನ ಕಾರ್ಯಗಳಿಗೆ ಹೆಚ್ಚು ಮಹತ್ವವಿದೆ. ನಾಳೆಯದು ಹೇಗೋ ವರ್ತಮಾನದಲ್ಲಿ ನಾವು ಜೀವಿಸಲ್ಪಟ್ಟಿದ್ದೇವೆ ಎಂಬುದೇ ಮುಖ್ಯ. ದಿನ ನಿತ್ಯ ಮನೆಯಲ್ಲಿ ನಾವು ಆಚರಿಸುವ ನಿತ್ಯ ಕರ್ಮಗಳೇ ಪ್ರಧಾನ. ಹಾಗಾಗಿ ನಮ್ಮಲ್ಲಿ ದೇವಸ್ಥಾನಕ್ಕೆ ಹೋಗುವುದಕ್ಕೆ ಬಲವಾದ ನಿಯಮವಿಲ್ಲ. ಆತ್ಮ ಶುದ್ದಿಯೇ ಪ್ರಧಾನ. ಅದಕ್ಕೆ ನಮಗೆ ಸಾಧನ ಈ ಸಂಧ್ಯಾವಂದನ.
ಬಹಳ ಸರಳವಾಗಿ ಸುಲಭವಾಗಿ ಆಚರಿಸಲ್ಪಡುವ ಸಂಧ್ಯಾವಂದನೆ ನಮ್ಮ ದೈನಂದಿನ ಕಾರ್ಯಗಳಿಂದ ದೂರವಾಗುತ್ತದೆ. ಯಾವೂದೋ ವಿಜ್ರಂಭಣೆಯ ಅಡಂಬರದ ಆರಾಧನೆ ಇರುತ್ತದೆ. ಹಲವು ಸಲ ಇದು ಪರ್ಮಾತ್ಮ ಅನುಗ್ರಹಕ್ಕೆ ಬದಲಾಗಿ ಯಾರನ್ನೋ ಮೆಚ್ಚಿಸುವುದಕ್ಕೆ ಮತ್ತು ಕೇವಲ ಪ್ರದರ್ಶನಕ್ಕೆ ಬಳಕೆಯಾಗುತ್ತದೆ. ಖಾಸಗಿಯಾಗಿ ಆಚರಿಸಲೇ ಬೇಕಾದ ಅನಿವಾರ್ಯ ಕಾರ್ಯ ಮಹತ್ವವನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ಬೆಳೆದು ಬಂದ ವಾತಾವಾರಣ , ಬಿಡುವಿಲ್ಲದ ಕೆಲಸ, ಜೀವನ ಕ್ರಮಗಳು ಹೀಗೆ ಹಲವಾರು ವ್ಯರ್ಥ ಕಾರಣಗಳಿರುತ್ತವೆ. ಇದೆಲ್ಲ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವ ಹುಂಬ ಕಾರಣಗಳು. ರಾಮಾಯಣದ ದುಷ್ಟ ರಾವಣನೂ ಬಿಡದೆ ಸಂಧ್ಯಾವಂದನೆ ಮಾಡುತ್ತಿದ್ದ. ಸಂಸ್ಕಾರ ಹೀನ ವಾನರ ವಾಲಿಯೂ ಸಂಧ್ಯಾವಂದನೆ ಮಾಡುತ್ತಿದ್ದ. ಪುರಾಣವನ್ನೂ ದೇವರನ್ನೂ ಅತಿಯಾಗಿ ನಂಬುವ ನಾವು ರಾವಣನಿಂದಲೂ ಕೆಟ್ಟವರಾಗಿಬಿಡುವುದು ವಿಚಿತ್ರ.
ಒಂದು ಸಲ ನಾನು ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಹಾಗೆ ಹೊತ್ತು ಕಳೆದು ಹೊರಡುವಾಗ ಸಾಯಂಕಾಲವಾಯಿತು. ಸಾಯಂಕಾಲವಾದೊಡನೆ ನನ್ನ ಮನಸ್ಸಿನ ತುಡಿ ಆರಂಭವಾಗುತ್ತದೆ. ಒಂದು ಮುಷ್ಠಿ ನೀರು ನೆನಪಾಗುತ್ತದೆ. ಸರಿ ಮಿತ್ರರ ಮನೆಯಲ್ಲೇ ಹೇಳಿದೆ ಒಂದು ಸಂಧ್ಯಾವಂದನೆ ಮಾಡಬೇಕು. ಅಷ್ಟೇ ಆ ಮನೆಯ ಹೆಂಗಸು ಸ್ನಾನಕ್ಕೆ ಬಿಸಿ ನೀರು ಕಾಯಿಸುವುದಕ್ಕೆ ಬಚ್ಚಲಿನ ಒಲೆಗೆ ಬೆಂಕಿ ಹಚ್ಚಿದಳು. (ವಾಸ್ತವದಲ್ಲಿ ನಾನು ತಣ್ಣೀರ ಸ್ನಾನ ಮಾಡುವವನು) ನಾನು ಸ್ನಾನ ಮಾಡಿ ಬರಬೇಕಾದರೆ ದೇವರ ಕೋಣೆ ಗುಡಿಸಿ ಸಾರಿಸಿ ಸ್ವಚ್ಚ ಮಾಡಿ ಎಲ್ಲೋ ಇದ್ದ ಕವಳಿಗೆ ಸೌಟು ಫಳ ಫಳ ಹೊಳೆವಂತೆ ತೊಳೆದು ಸ್ವಚ್ಛಗೊಳಿಸಿ ಸಿದ್ಧ ಮಾಡಿ ಇಟ್ಟಿದ್ದಳು. ನಮ್ಮಲ್ಲಿ ಗಣ ಹೋಮವಾದರೂ ಅಷ್ಟು ಸ್ವಚ್ಛವಾಗುತ್ತದೆ ಎಂಬ ಭರವಸೆ ಇಲ್ಲ. ಉಡುವುದಕ್ಕೆ ಮಡಿ ವಸ್ತ್ರ ಎಲ್ಲವೂ ಸಿದ್ಧ. ನಾನು ಸಂಕೋಚದಲ್ಲಿ ಹೇಳಿದೆ ಇಷ್ಟೇಲ್ಲಾ ಬೇಡಿತ್ತು. ಹೆಂಗಸು ಹೇಳಿದ ಒಂದು ಮಾತು, " ಇಲ್ಲಿ ಯಾರೂ ಜಪ ಮಾಡುವವರು ಇಲ್ಲ. ನೀವು ಒಂದು ಹೊತ್ತಾದರೂ ಮಾಡುತ್ತೀರಿ ಎಂದರೆ ಅಷ್ಟಾದರೂ ಈ ಮನೆ ಪಾವನವಾಗಲಿ. " ಒಂದು ಹೊತ್ತಿನ ಸಂಧ್ಯಾವಂದನೆಯ ಪ್ರಭಾವ ಇದು.
ಇಂದು ಬ್ರಾಹ್ಮಣ್ಯದ ಅಥವಾ ಸಂಧ್ಯಾವಂದನೆಯ ವಿಚಾರ ಹೇಳುವಾಗ ಕಾಲ ಬದಲಾಗಿದೆ ಅಂತ ಹೇಳುವುದು ಸ್ವಾಭಾವಿಕ. ಹಗಲು ರಾತ್ರಿ ಮೊದಲಿನಂತೇ ಇದೆ. ಪ್ರತಿಯೊಂದು ನಿಮಿಷವೂ ಸೇರಿ ಕಾಲವಾಗುತ್ತದೆ. ಅದು ಬದಲಾಗುವುದು ಹೊಸತೇನಲ್ಲ. ಹೊಸತಾಗಿರುವುದು ಮನುಷ್ಯನ ಜೀವನ ಶೈಲಿ. ಇದು ಅನಿವಾರ್ಯವೂ ಹೌದು. ಆದರೆ ಇವೆಲ್ಲ ಲೌಕಿಕ ಬದಲಾವಣೆಗಳು. ಇವುಗಳನ್ನು ಎಲ್ಲಾ ಅಲ್ಲದೇ ಇದ್ದರೂ ಕೆಲವನ್ನು ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅನಿವಾರ್ಯ ಎನಿಸುವಾಗ ನಾವು ನಮ್ಮಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡುತ್ತೇವೆ. ಇಲ್ಲಿ ಒಂದಷ್ಟು ಬದಲಾವಣೆಯನ್ನು ತಂದರೆ ನಾವು ಕನಸಿನಲ್ಲೂ ಊಹಿಸದೇ ಇರುವ ಪರಿವರ್ತನೆ ಸಾಧ್ಯವಿದೆ.
ಬಾಲ್ಯದಲ್ಲಿ ಎಷ್ಟು ಕಷ್ಟವಾದರೂ ಹೆತ್ತವರು ಬ್ರಹ್ಮೋಪದೇಶ ಮಾಡುತ್ತಾರೆ. ಅಮ್ಮ ಮಡಿಲಲ್ಲಿ ಕೂರಿಸಿ ಕೊನೆಯ ಬಾರಿಗೆ ತುತ್ತನ್ನವನ್ನು ತಿನ್ನಿಸುತ್ತಾಳೆ. ಅಪ್ಪ ಮಡಿಲಲ್ಲಿ ಕೂರಿಸಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾನೆ. ಎಲ್ಲ ಮಂತ್ರಗಳು ಗುರುವಿನ ಉಪದೇಶವಾದರೆ ಗಾಯತ್ರೀ ಮಂತ್ರ ಅಪ್ಪನಿಂದ ಉಪದೇಶಿಸಲ್ಪಡುತ್ತದೆ. ಗಾಯತ್ರೀ ಮಂತ್ರದ ಮಹತ್ವ ಬೇರೆ. ಗಾಯತ್ರೀ ಮಂತ್ರ ಎಂಬುದು ಬೀದಿ ಸರಕಿನಂತೆ ವಿಕ್ರಯವಾಗುತ್ತದೆ. ಆ ಮಂತ್ರದಿಂದ ಏನೋ ಒಂದು ಸಾಧನೆ ಆಗಬಹುದು ಎಂಬ ವಿಶ್ವಾಸ ಇರುತ್ತದೆ. ಆದರೆ ಅದನ್ನು ಉಚ್ಚರಿಸುವುದಕ್ಕೆ ಇರುವ ನಿಯಮಗಳ ಬಗ್ಗೆ ವಿಶ್ವಾಸವಿಲ್ಲ. ಆ ಮಂತ್ರದ ದೃಷ್ಟಾರನ ಬಗ್ಗೆ ಸ್ಮರಣೆ ಇಲ್ಲ. ಅದರ ಸ್ವರಭಾರವಾಗಲಿ ಪ್ರಸ್ತಾರವಾಗಲಿ ಯಾವುದೂ ಬೇಕೆನಿಸುವುದಿಲ್ಲ. ಕೇವಲ ಮಂತ್ರ ಉಚ್ಚರಿಸಬೇಕು. ನಮ್ಮ ಬೀದಿಯ ತುದಿಯಲ್ಲಿ ಒಂದು ಮಾಂಸದ ಅಂಗಡಿ ಇದೆ. ವಾರಾಂತ್ಯದಲ್ಲಿ ಮುಂಜಾನೆ ಐದು ಗಂಟೆಗೆ ಅದರ ಬಾಗಿಲು ತೆರೆಯುತ್ತದೆ. ಪ್ರಾಣಿಗಳ ಚೀತ್ಕಾರ ಆ ಮುಂಜಾನೆ ಕೇಳಿಸುತ್ತದೆ. ಅಷ್ಟು ಹೊತ್ತಿಗೆ ಮಾಂಸಕೊಳ್ಳುವುದಕ್ಕೆ ಜನ ಸರದಿ ನಿಂತಿರುತ್ತಾರೆ. ಒಂದು ದಿನ ಯಾರದೋ ಮೊಬೈಲ್ ನ ರಿಂಗ್ ಟೋನ್ ಕೇಳಿಸುತ್ತದೆ. ಅದೇ ಗಾಯತ್ರೀ ಮಂತ್ರ!!! ಯಾವ ಪುಣ್ಯ ಸಾಧನೆಗೆ ಇದು ಅಂತ ಖೇದವಾಗುತ್ತದೆ. ಇಲ್ಲಿ ಜನಗಣ ಮನ ಅಂತ ರಾಷ್ಟ್ರಗೀತೆ ಹೇಳುವುದಕ್ಕೆ ನಿಯಮವಿದೆ. ಇರಲೇ ಬೇಕು. ಆದರೆ ಪವಿತ್ರವಾದ ಮಂತ್ರಕ್ಕೆ ಇದಾವುದೂ ಪರಿವೆ ಇಲ್ಲ. ಎಲ್ಲೆಂದರೆಲ್ಲಿ ಅದು ಮೊಳಗುವಾಗ ಖೇದವೆನಿಸುತ್ತದೆ. ನಾವು ಊಟ ಮಾಡಿ ಹಸಿವು ನೀಗುವುದಕ್ಕೆ ಶುಭ್ರವಾದ ಜಾಗ ಹುಡುಕುತ್ತೇವೆ. ಹೋಗಲಿ ವಿಸರ್ಜನೆಗೂ ಅಷ್ಟೇ....ಗಲೀಜು ಸಾಧ್ಯವೇ ಇಲ್ಲ. ಇಂತಹ ವಿಚಾರಗಳೆಲ್ಲ ಈಗ ವಿಮರ್ಶಾತೀತ ಎನಿಸಲ್ಪಡುತ್ತದೆ. ಆ ಬಗ್ಗೆ ವಿಶ್ಲೇಷಣೆಯಲ್ಲ. ಬಾಲ್ಯದಲ್ಲಿ ಅಪ್ಪನಿಂದ ಉಪದೇಶಿಸಲ್ಪಟ್ಟ ಮಂತ್ರೋಪದೇಶದ ಅನುಷ್ಠಾನ ನಮ್ಮಲ್ಲಿ ಆಗಬೇಕು. ಉಪನಯನ ಅಂದರೆ ದ್ವಿಜನ್ಮ ಅಲ್ಲಿಂದ ಆಗಿರುತ್ತದೆ. ಜನ್ಮ ಎತ್ತಿದ ನಂತರ ಅಪ್ಪನನ್ನು ಅಪ್ಪನ ಮಾತುಗಳನ್ನು ಮರೆಯುವಾಗ ಒಂದು ಮಂತ್ರ ಮರೆಯುವುದು ಸ್ವಾಭಾವಿಕ. ಉಪನಯನ ಆದ ಒಂದೆರಡು ದಿವಸ ಇಲ್ಲ ಒಂದೆರಡು ತಿಂಗಳು ಶ್ರದ್ಧೆಯಿಂದ ಸಂಧ್ಯಾವಂದನೆ ಅನುಷ್ಠಾನವಾದರೆ ಆನಂತರ ಜೀವನ ಶೈಲಿಗೆ ಅದು ಒಪ್ಪಿಕೊಳ್ಳುವುದಿಲ್ಲ. ಹಲವಾರು ಕಾರಣಗಳು ಹುಟ್ಟಿಕೊಳ್ಳುತ್ತವೆ. ಯಾವುದೂ ಬದಲಾವಣೆಯಲ್ಲಿ ಪೂರ್ಣ ಅಪರಾಧ ಅಂತ ಅನ್ನಿಸುವುದಿಲ್ಲ. ಮೊದಲು ಹೊಟ್ಟೆಗೆ ಕೊಡು ಆಮೇಲೆ ಪರಮಾತ್ಮನ ಬಗ್ಗೆ ಹೇಳು ಈ ಕ್ರಮದಲ್ಲಿ ಹೊಟ್ಟೆ ತುಂಬಿದ ಮೇಲೆ ಪರಮಾತ್ಮ ಅನಿವಾರ್ಯವಾಗುವುದಿಲ್ಲ. ಶಾಲೆ ಟ್ಯೂಷನ್ ಓದು ಈ ಚಕ್ರ ಸುಳಿಯಲ್ಲಿ ಸಂಧ್ಯಾವಂದನೆ ಮೊದಲು ಕಾಣೆಯಾಗುತ್ತದೆ.
ಎಲ್ಲಾ ಬದಲಾವಣೆಯೂ ಒಂದು ಕಾಲಕ್ಕೆ ಸರಿ ಅಂತ ಅಪ್ಪಿಕೊಂಡರು ಮತ್ತೊಂದು ದಿನ ಅದು ಅನಿವಾರ್ಯವಾಗುತ್ತದೆ. ಅ ಸಮಯದಲ್ಲಿ ಹಲವರಿಗೆ ಅದನ್ನು ತೊಡಗಿಸಿಕೊಳ್ಳುವುದಕ್ಕೆ ಒಂದು ಹಿಂಜರಿಕೆ. ಮಧ್ಯವಯಸ್ಸು ದಾಟಿದೆ ಇನ್ನು ಸೌಟು ಕೊಳಗಿ ಹಿಡಿದು ಮರೆತೇ ಹೋಗಿರುವುದನ್ನು ಮತ್ತೆ ಸ್ಮರಣೆಗೆ ತರುವುದು ಕಷ್ಟವಾಗುತ್ತದೆ. ಮಂತ್ರದ ಪಾವಿತ್ರ್ಯತೆ ಅದು. ಅದು ನಿತ್ಯ ಪಠಣವಿದ್ದರೆ ಉಳಿಯುತ್ತದೆ. ಇಲ್ಲವಾದರೆ ಮೊದಲು ಅದೆಷ್ಟು ಸಲ ಹೇಳಿದ್ದರೂ ಅದು ನಾಮಾವಶೇಷವಾಗುತ್ತದೆ. ಸರಸ್ವತಿ ಲಕ್ಷ್ಮಿಗಿಂತ ಚಂಚಲೆ !! ಇಂತಹಾ ಸನ್ನಿವೇಶದಲ್ಲಿ ಸಂಧ್ಯಾವಂದನೆಯ ಬಗ್ಗೆ ಒಂದು ಅಭಿಯಾನವಾಗಬೇಕು. ಮನೆ ಮನೆಯಲ್ಲಿ ಅದರ ಅನುಷ್ಠಾನವಾಗಬೇಕು. ಹಲವರಿಗೆ ಅದು ಮರೆತು ಹೋಗಿರುತ್ತದೆ. ಅಥವಾ ಅದನ್ನು ಆರಂಭಿಸುವುದಕ್ಕೆ ಯಾವುದೋ ಹಿಂಜರಿಕೆ ಇರುತ್ತದೆ. ಇನ್ನು ಕೆಲವರಿಗೆ ಅದರ ಮಹತ್ವದ ಅರಿವಿರುವುದಿಲ್ಲ. ಈ ಎಲ್ಲ ಪರಿಸ್ಥಿತಿಯಲ್ಲಿ ಸಂಧ್ಯಾವಂದನೆಯಬಗ್ಗೆ ಒಂದು ಅಭಿಯಾನವಾಗಬೇಕು. ಒಂದೊಂದು ಮನೆಯಲ್ಲೂ ಇದರ ಬಳಕೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಅನಿವಾರ್ಯ ಕಾರಣಗಳಿಂದ ಇದನ್ನು ಬಿಟ್ಟವರಲ್ಲಿ ಪ್ರೇರಣೆ ಹುಟ್ಟಿಸುವಂತೆ ಈ ಅಭಿಯಾನ ಕೆಲಸ ಮಾಡಬೇಕು. ಸಂಧ್ಯಾವಂದನೆ ಪೂರ್ಣವಾಗಿಯಲ್ಲದೇ ಇದ್ದರೂ ಒಂದು ಐದು ನಿಮಿಷದ ಅವಧಿಗೆ ಸೂಕ್ಷ್ಮಗೊಳಿಸಿ, ಅಚಮನ ಅರ್ಘ್ಯ ಜಪ ಅಂತ ಮಾಡಿಕೊಂಡು ಕರ್ಮ ಭಾಜನರಾಗಬಹುದು. ಕರ್ಮಿಷ್ಠನಾದವನಿಗೆ ಈ ಭೂಮಿಯ ಪ್ರಕೃತಿಯನ್ನು ಅನುಭವಿಸುವ ಹಕ್ಕು ಇರುವುದು. ಸರಳಾತಿ ಸರಳವಾಗಿಯಾದರೂ ಈ ಅಭಿಯಾನ ತೊಡಗಬೇಕು. ಸಂಧ್ಯಾವಂದನೆಯಿಂದ ದಿನಾರಂಭವಾಗಬೇಕು. ಒಂದು ಸಲ ನಾನು ಬ್ರಾಹ್ಮಣ ಸಂಸ್ಥೆಯ ಮಹನೀಯರಲ್ಲಿ ಹೀಗೆ ಅಭಿಯಾನದ ಬಗ್ಗೆ ಹೇಳಿದೆ. ಅವರು ಆಸಕ್ತಿತೋರಲಿಲ್ಲ. ಈಗಿನ ಸಂಘ ಸಂಸ್ಥೆಗಳು ಸರಕಾರದಿಂದ ಸಿಗುವ ಸೌಲಭ್ಯದತ್ತ ನೋಡುತ್ತವೆ. ಬ್ರಾಹ್ಮಣರಿಗೂ ಮೀಸಲಾತಿ ಕೊಡುವಲ್ಲಿ ಹೋರಾಟ ಮಾಡುತ್ತವೆ. ಸಾಮಾಜಿಕವಾಗಿ ಗುರುತಿಸುಕೊಳ್ಳುವುದೇ ಅನಿವಾರ್ಯ ಎಂದು ತಿಳಿದುಕೊಂಡಂತೆ ಇದೆ. ಅದು ತಪ್ಪು ಎಂದು ಹೇಳುವುದಿಲ್ಲ. ಹಲವು ಸಲ ಎದ್ದು ನಿಲ್ಲುವುದಕ್ಕೆ ಕತ್ತೆಯ ಬಾಲವನ್ನು ಹಿಡಿಯುವ ಅನಿವಾರ್ಯತೆ ಇದೆ. ಇಲ್ಲಿ ಯಾವುದನ್ನು ಆಕ್ಷೇಪಿಸುವ ಪ್ರವೃತ್ತಿಯಲ್ಲ. ಆದರೆ ಒಬ್ಬ ಭಿಕ್ಷುಕನಾದರು ಭಿಕ್ಷೆ ಬೇಡಬೇಕಿದ್ದರೆ ಹಲವು ಸಲ ವೇಷ ಹಾಕುತ್ತಾನೆ. ಯಾಕೆಂದರೆ ಭಿಕ್ಷುಕನ ಹಾಗೆ ಕಾಣದೇ ಇದ್ದರೆ ಭಿಕ್ಷೆ ಸಿಗುವುದಿಲ್ಲ. ಹಾಗಾಗಿ ಕೊನೆ ಪಕ್ಷ ಮಾರೀಚನ ಹಾಗಾದರೂ ನಾವು ವೇಷ ತೊಡುವ ಅನಿವಾರ್ಯತೆ ಇದೆ.
No comments:
Post a Comment