ಉಪ್ಪಳ, ಅತ್ತ ನಗರವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಒಂದು ಊರು. ತನ್ನ ಮೈಮೇಲೆ ರಾಷ್ಟ್ರೀಯ ಹೆದ್ದಾರಿಯನ್ನು ಹೊದ್ದು ಮಲಗಿದ ಉಪ್ಪಳ, ಆ ಹೆದ್ದಾರಿ ಗಡಿಬಿಡಿಯನ್ನು ಆವಾಹಿಸಿಕೊಂಡು ಸದಾ ಜಾಗೃತವಾಗಿರುತ್ತದೆ. ಬಿಡುವಿಲ್ಲದೇ ಓಡುವ ವಾಹನಗಳು ಅತ್ತ ಇತ್ತ ಹರಿದಾಡುವ ವಿವಿಧ ಜನರು ಗಿಜಿಗುಟ್ಟುವ ಅಲ್ಲದಿದ್ದರೂ ನಮ್ಮ ಉಪ್ಪಳ ನಡುರಾತ್ರಿಯಲ್ಲೂ ಎಚ್ಚರವಿರುತ್ತದೆ. ನನ್ನ ಬಾಲ್ಯದಿಂದಲೂ ಸುಮಾರು ನಲ್ವತ್ತೈದೂ ವರ್ಷಗಳಿಂದಲೂ ಉಪ್ಪಳವನ್ನು ನೋಡುತ್ತೇನೆ. ಪ್ರತಿ ಹಂತದಲ್ಲೂ ಬದಲಾಗುವು ಉಪ್ಪಳ ಒಂದು ಸೋಜಿಗದ ತಾಣವಾಗಿದೆ. ಜೀವನ ಬಹು ಪಾಲು ಘಟನೆಗಳಿಗೆ ಸುಖ ದುಃಖ ಕಷ್ಟಗಳಿಗೆ ಉಪ್ಪಳ ಸಾಕ್ಷಿಯಾಗಿದೆ.
ಎಪ್ಪತ್ತರ ದಶಕದಲ್ಲಿ ಉಪ್ಪಳದಲ್ಲಿ ಬೀದಿ ದೀಪಗಳು ಇಲ್ಲವೇ ಇಲ್ಲ ಎನ್ನಬಹುದು. ಬಹು ಪಾಲು ಅಂಗಡಿಗಳು ರಾತ್ರಿಯಾಗುತ್ತಿದ್ದಂತೆ ಪೆಟ್ರೋ ಮೇಕ್ಸ್ (ಗ್ಯಾಸ್ ಲೈಟ್) ಉರಿಸುತ್ತಿದ್ದವು. ಕೆಲವು ಬೆರಳೆಣಿಕೆಯ ಅಂಗಡಿಗಳಲ್ಲಿ ಝಗಮಗಿಸುವ ಲೈಟುಗಳಿದ್ದವು. ಇವುಗಳ ಬೆಳಕೇ ಸಾಕಷ್ಟು ಉಪ್ಪಳವನ್ನು ಅಲ್ಲಿ ಇಲ್ಲಿ ಬೆಳಗಿಸುತ್ತಿದ್ದವು. ಮಿಕ್ಕ ಜಾಗದಲ್ಲಿ ಉಪ್ಪಳ ಕತ್ತಲೆ ಕತ್ತಲೆ. ಗ್ಯಾಸ್ ಲೈಟ್ ನ್ನು ಬಾಡಿಗೆಗೆ ಕೊಡುವ ಪೊಡಿಚ್ಚನ ಅಂಗಡಿ, ಅದನ್ನುರಿಪೇರಿ ಮಾಡುವ ಮೂಕುಚಟ್ಟೆ (ಕ್ಷಮಿಸಿ ಹೆಸರು ಮರೆತು ಹೋಗಿದೆ)ಯವನ ಅಂಗಡಿ ಹಳೆಯ ಉಪ್ಪಳ ಮರೆತು ಹೋಗುವುದಕ್ಕಿಲ್ಲ.
ಎಪ್ಪತ್ತರ ದಶಕದಲ್ಲಿ ಉಪ್ಪಳದ ಕೇಂದ್ರ ಭಾಗದಲ್ಲಿ ಒಂದು ಟಾಕೀಸ್ ಇತ್ತು. ನನಗೆ ಇನ್ನೂ ನೆನಪಿದೆ ಅದು ಆರಂಭವಾದ ಘಳಿಗೆ. ವಾರಕ್ಕೊಂದು ಸಿನಿಮ ಕನ್ನಡ ಹಿಂದಿ ಮಲಯಾಳಂ ತಮಿಳು ಹೆಚ್ಚೇಕೆ ತುಳು ಸಿನಿಮಾ ಕೂಡ ಅಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಉಪ್ಪಳದ ಕೇಂದ್ರಬಾಗದಲ್ಲಿ ಸ್ವಲ್ಪಒಳಗೆ ಈ ಥಿಯೇಟರ್ ಇತ್ತು. ಇದರ ಹೆಸರು ಸಫಾಯರ್ ಟಾಕೀಸ್. ಮುಂದಿನ ಸಾಲಿನಲ್ಲಿ ಮರದ ಬೆಂಚು ಸ್ವಲ್ಪ ಹಿಂದೆ ಬಂದರೆ ಕೆಲವು ಸ್ಟೀಲಿನ ಮತ್ತು ಮರದ ಕುರ್ಚಿಗಳು. ಫ್ಯಾನ್ ಗಳು ಇದ್ದ ನೆನಪಿಲ್ಲ.ಯಾಕೆಂದರೆ ಸಿನಿಮಾ ಶುರುವಾಗಬೇಕಿದ್ದರೆ ನಾವು ಬೆವರಿ ಒದ್ದೆಯಾಗುತ್ತಿದ್ದೆವು. ಕಿಕ್ಕಿರಿದು ಜನ ಸೇರಿದರೆ ಹತ್ತಿರದ ಹೋಟೇಲಿನಿಂದ ಬೆಂಚು ಕುರ್ಚಿ ತಂದು ಮಧ್ಯೆ ಇಡುತ್ತಿದ್ದರು.
ರಾಜೆಶ್ ಖನ್ನಾ ನಟಿಸಿದ ಅಪ್ನಾ ದೇಶ್ ಎಂಬ ಹಿಂದಿ ಸಿನಿಮಾ ನಾನು ಮೊದಲು ನೋಡಿದ ಸಿನಿಮಾ ಅದನ್ನು ಇಲ್ಲೇ ನೋಡಿದ್ದು. ಆನಂತರ ಬಡವರ ಬಂಧು ಗಿರಿಕನ್ಯೆ, ದಾರಿ ತಪ್ಪಿದ ಮಗ, ಅದೃಷ್ಟವೋ ಅದೃಷ್ಟ, ಮುಯ್ಯಿಗೆ ಮುಯ್ಯಿ, ಕುದುರೆ ಮುಖ, ಬೊಳ್ಳಿದೋಟ ಈ ಸಿನಿಮಾಗಳನ್ನು ನೋಡಿದ ನೆನಪು ಈಗಲೂ ಇದೆ. ಆ ಕಾಲದಲ್ಲಿ ಜನುಮದಲ್ಲಿ ಸಿನಿಮಾ ನೋಡಿರದ ಮಂದಿಗೆ ಸಿನಿಮಾ ತೋರಿಸಿದ ಹೆಗ್ಗಳಿಕೆ ಈ ಸಿನಿಮಾ ಮಂದಿರಕ್ಕೆ ಇದೆ. ಮೊದಲ ಸಿನಿಮಾ ನೋಡಿದಾಗ ಬೆರಗು ಕಣ್ಣಿಂದ ನೋಡಿದ್ದೆ. ತೆರೆಯ ಹಿಂದೇ ಯಾರಾದರೂ ಇದ್ದಾರೋ ಅಂತ ಸಿನಿಮಾ ಟಾಕಿಸಿ ಹಿಂದೆ ಹೋಗಿ ನೋಡಿದ್ದು ಈಗಲೂ ನೆನಪಿದೆ. ಮೊದಲು ಕೇವಲ ಮ್ಯಾಟನಿ ಮಾತ್ರವೇ ಈ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳುತಿತ್ತು. ಈ ಟಾಕೀಸ್ ನಲ್ಲಿ ಶೌಚಾಲಯ ಇದ್ದ ನೆನಪಿಲ್ಲ. ವಿರಾಮದಲ್ಲಿ ಪಕ್ಕದ ವಿಶಾಲವಾದ ಖಾಲಿಜಾಗವೆ ಟಾಯ್ಲಟ್ ಆಗಿ ಬಳಕೆಯಾಗುತ್ತಿತ್ತು! ಇನ್ನು ಟಾಕೀಸಿ ಒಳಗಡೆ ತಿಂಡಿ ಸಿಗುತ್ತಿರಲಿಲ್ಲ. ಪಕ್ಕದ ಅಂಗಡಿಯಲ್ಲಿ ಸಿಗುತ್ತಿದ್ದ ಪುರಿಕಡ್ಲೆಯೇ ವಿರಾಮದ ತಿಂಡಿ.
ಮಧ್ಯಾನ ಒಂದು ಘಂಟೆಯ ಸಾಯಿಬರ ಶಂಕರ್ ವಿಠಲ್ ಬಸ್ಸಿಗೆ ಹೊರಟರೆ ಅದು ಸಿನೆಮಕ್ಕೆ ಹೊರಟದ್ದು ಅಂತ ಊಹೆ. ಬಸ್ಸಿನಲ್ಲಿ ಡ್ರೈವರ್ ಆದಿಯಾಗಿ ಕೇಳುತ್ತಿದ್ದರು, "ಸಿನೇಮಕ್ಕೆ ಹೋಗುದಾ?" ಇಷ್ಟಾದರೂ ಸಿನೇಮಕ್ಕೆ ಹೋಗುವುದೆಂದರೆ ಒಂದು ರೀತಿಯ ಅಪರಾಧಿ ಭಾವನೆ ಜನರಲ್ಲಿ ಇತ್ತು. ಹಾಗಾಗಿ ಕೆಲವರು ತಲೆ ಮರೆಸಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದುದು ಸರ್ವೆ ಸಾಮಾನ್ಯ. ಸಾಹೇಬರ ಬಸ್ಸಿನಿಂದ ಇಳಿದು ಲಗುಬಗೆಯಲ್ಲಿ ಓಡಿಕೊಂಡು ಹೋಗುತ್ತಾ ಪಕ್ಕದ ಅಂಗಡಿಯಿಂದ ಹುರಿಗಡಲೆ ಕಟ್ಟಿಸಿ ತೆಗೆದುಕೊಂಡು ಹೋಗುವುದರಲ್ಲಿದ್ದ ಆ ಸಂಭ್ರಮ ಮತ್ತೆ ಬದುಕಲ್ಲಿ ಕಾಣಲಿಲ್ಲ.
ಕೆಲವು ವರ್ಷ ಮಾತ್ರ ಸಿನಿಮಾ ತೋರಿಸುತ್ತಿದ್ದ ಸಫಾಯರ್ ಚಿತ್ರ ಮಂದಿರ ಮತ್ತೆ ತನ್ನ ಪ್ರದರ್ಶನವನ್ನು ನಿಲ್ಲಿಸಿತ್ತು. ಸುರತ್ಕಲ್ ಮೇಳದ ರಾಣಿ ರತ್ನಾವಳಿ ಎಂಬ ಯಕ್ಷಗಾನ ಬಯಲಾಟವನ್ನು ಮಳೆಗಾಲದಲ್ಲಿ ಇಲ್ಲಿ ನೋಡಿದ ನೆನಪಿದೆ. ಮಳೆಗಾಲದಲ್ಲಿ ಯಕ್ಷಗಾನ ನೋಡುವುದೆಂದರೆ ಅದೊಂದು ಆಶ್ಚರ್ಯದ ಸಂಗತಿಯಾಗಿತ್ತು. ಅದರೇ ಕ್ರಮೇಣ ಟಾಕೀಸ್ ನಲ್ಲಿ ಸಿನಿಮಾ ಪ್ರದರ್ಶನ ನಿಂತಿತು. ಆದರೂ ಆ ಕಟ್ಟಡ ಬಹಳ ಸಮಯದವರೆಗೂ ಇತ್ತು ಮತ್ತು ಆ ನೆನಪನ್ನು ಕೊಡುತ್ತಿತ್ತು. ಈಗ ಅಲ್ಲಿ ಕಟ್ಟಡವೂ ಇಲ್ಲ. ಹೀಗೆ ಗತಕಾಲದ ಉಪ್ಪಳದ ಮೊದಲ ಚಿತ್ರಮಂದಿರದ ನೆನಪು ಇನ್ನೂ ಕೆಲವರಲ್ಲಿಇದ್ದರೂ ಇರಬಹುದು.
ಅದರಂತೆ ಮಂಜೇಶ್ವರದಲ್ಲಿ ಒಂದು ಟಾಕೀಸ್ ಇತ್ತು. ಎಸ್ ಎ ಟಿ ಚಿತ್ರಮಂದಿರ. ಆನಂತರ ಹೊಸಂಡಿಯಿಂದ ಸುಂಕದಕಟ್ಟೆಗೆ ಹೋಗುವ ಮಾರ್ಗದಲ್ಲಿ ಹಿಲ್ ಸೈಡ್ ಚಿತ್ರ ಮಂದಿರ ತೆರೆಯಿತು. ಇದು ಬಹಳ ಕಾಲದವರೆಗೆ ಸಿನಿಮಾ ಪ್ರದರ್ಶನ ನೀಡುತ್ತಿತ್ತು. ಮುಳಿ ಹುಲ್ಲಿನ ಛಾವಣಿಯ ಈ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮೊದಲು ಮೈಕ್ ನಲ್ಲಿ ಗಟ್ಟಿಯಾಗಿ ಹಾಡು ಹಾಕುತ್ತಿದ್ದರು. ಇಲ್ಲಿ ಸಿನಿಮಾ ಇದ್ದರೆ ಸುತ್ತಮುತ್ತಲಿನ ಬಹುದೂರದವರೆಗು ಸಿನಿಮಾ ಡೈಲಾಗ್ ಫೈಟಿಂಗ್ ಸದ್ದು ಕೇಳಿಬರುತ್ತಿತ್ತು. ಬಹುದೂರದವರೆಗೂ ಅದು ಕೇಳಿಸುತ್ತಿತ್ತು. ಮರದ ಕುರ್ಚಿಯಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದ ಸಂಭ್ರಮವೇ ಬೇರೆ. ಹೊಸಂಗಡಿಯಲ್ಲಿ ಬಸ್ ಇಳಿದು ಓಡಿಕೊಂಡು ಹೋಗುತ್ತಿದ್ದ ದೃಶ್ಯ ಈಗಲೂ ನೆನಪಿದೆ.
ಉಪ್ಪಳದ ಸುಂದರ ದೃಶ್ಯಫೋಟೋ ಕೃಪೆ : ಅಂತರ್ಜಾಲದ ಅನಾಮಿಕರು....ಅವರಿಗೂ ಧನ್ಯವಾದಗಳು |
ಹೀಗೆ ಗತಕಾಲದ ಉಪ್ಪಳದ ಗತಿಸಿ ಹೋದ ನೆನಪು ಬಹಳ ಮಧುರವಾಗಿದೆ. ಅದನ್ನು ಈಗ ಮೆಲುಕು ಹಾಕುವುದೇ ಒಂದು ಸಂತಸದ ವಿಚಾರ.
No comments:
Post a Comment