"ಯಾರು ಜ್ಯೋತಿ..... ಜ್ಯೋತಿ....ಇಳಿಯಿರಿ ಬೇಗ ಬೇಗ." ಬಸ್ ಕಂಡಕ್ಟರ್ ಅವಸರಪಡಿಸಿ .... ಜೋರಾಗಿ ಕೂಗಿ ಕರೆದ. ಬೇಕಾದರೆ ಎಲ್ಲೇ ನೋಡಿ, ಮಂಗಳೂರಿನ ಕಂಡಕ್ಟರ್ ಗೆ ಇರುವಷ್ಟು ಅವಸರ ಗಡಿಬಿಡಿ ಸಮಯ ಪ್ರಜ್ಞೆ ಯಾರಿಗೂ ಇರಲಾರದು. ದೂರದಿಂದ ಬಂದ ಬಸ್ ಅದಷ್ಟೆ ನಗರವನ್ನು ಪ್ರವೇಶ ಮಾಡಿತ್ತು. ಜ್ಯೋತಿ ಜ್ಯೋತಿ ಕೂಗು ಕೇಳಿ ಆಕೆ ತರುಣಿ ಜ್ಯೋತಿ, ಕುಳಿತಲ್ಲಿಂದ ಗಾಬರಿಯಲ್ಲಿ ಎದ್ದು ನಿಂತಳು. ಅರೇ ಏನಾಯಿತು? ತನ್ನನ್ನೇಕೆ ಕರೆಯುತ್ತಾರೆ? ಆಕೆಗೇನು ಗೊತ್ತು? ಆಕೆ ಹೊಸ ಊರು ನಗರವನ್ನು ಬೆರಗು ಕಣ್ಣಿಂದ ನೋಡುತ್ತ ಇದ್ದರೆ ಕಂಡಕ್ಟರ್ ಧ್ವನಿ ಗಾಬರಿ ಮೂಡಿಸಿತ್ತು. ತನ್ನ ಹೆಸರು ಈತನಿಗೆ ಹೇಗೆ ಗೊತ್ತು? ಮಂಗಳೂರಿಗೆ ಮೊದಲ ಬಾರಿ ಕಾಲಿಡುವ ಆಕೆಗೆ ಸಹಜವಾಗಿ ಗಾಬರಿಯಾಗಿತ್ತು. ಬಸ್ ಸರ್ಕಲ್ ಗೆ ಸುತ್ತು ಹೊಡೆದಾಗ ತಿಳಿಯಿತು ಇದು ಸರ್ಕಲ್ ಹೆಸರು. ಅಲ್ಲೇ ಭವ್ಯವಾಗಿ ನಿಂತಿತ್ತು ಜ್ಯೋತಿ ಟಾಕೀಸ್ !!!. ಇದು ಮೂವತ್ತು ವರ್ಷಗಳ ಹಿಂದಿನ ಕಥೆ ಘಟನೆ. ಹಲವರ ಅನುಭವ ಇದೇ ರೀತಿ ಇರಬಹುದು.
ಜ್ಯೋತಿ ಸರ್ಕಲ್ ಮಂಗಳೂರು ನಗರದ ಪ್ರಧಾನ ಸ್ಥಳ. ಬಹಳ ಹಿಂದೆ ಇಲ್ಲಿ ಮಧ್ಯ ಭಾಗದಲ್ಲಿ ಸುಂದರ ಸರ್ಕಲ್ ಇತ್ತು. ಅದರಲ್ಲಿ ಬಗೆ ಬಗೆಯ ಹೂಗಿಡಗಳಿದ್ದವು. ಎಲ್ಲಕ್ಕಿಂತ ದೊಡ್ದದಾಗಿ ಇಲ್ಲಿ ಸುಂದರವಾದ ಟಾಕೀಸ್ ಇತ್ತು. ಹಾಗಾಗಿಯೇ ಈ ಪ್ರದೇಶಕ್ಕೆ ಈ ಹೆಸರು. ಹತ್ತಿರದಲ್ಲಿ ವಿಜಯ ಬ್ಯಾಂಕ್ ಕೇಂದ್ರ ಕಛೇರಿ ಇತ್ತು. ನನಗೆ ತಿಳಿದಿರುವ ಪ್ರಕಾರ ನಗರದ ಮೊದಲ ಎರಡು ಸರ್ಕಲ್ ನಲ್ಲಿ ಇದು ಒಂದು, ಇನ್ನೊಂದು ಪಾಂಡೇಶ್ವರ ಸರ್ಕಲ್. ಅದರಲ್ಲಿ ಪಾಂಡೇಶ್ವರ ಸರ್ಕಲ್ ನಲ್ಲಿ ಸುಂದರವಾದ ಕಾರಂಜಿ ಇತ್ತು. ಜ್ಯೋತಿ ಸರ್ಕಲ್ ನಿಂದ ಮೇಲಕ್ಕೆ ಮುಂದೆ ಹೋದರೆ ಬಾವಟ ಗುಡ್ಡೆ. ಮತ್ತೊಂದು ಬದಿಗೆ ಸರಿದರೆ ಬಂಟ್ಸ ಹಾಸ್ಟೆಲ್. ಹಾಗೇ ಬಲ್ಮಠ ಹಂಪನ ಕಟ್ಟೆ.
ಮಂಗಳೂರು ನಗರದ ಈ ಸುಂದರ ಜಾಗ. ಹೆಚ್ಚಿನ ಎಲ್ಲಾ ಬಸ್ಸುಗಳು ಇಲ್ಲಿಗೆ ಬರುತ್ತವೆ. ಇಲ್ಲಿ ಕೆ ಎಂ ಸಿ ಆಸ್ಪತ್ರೆ ಬೃಹದಾಕಾರವಾಗಿದೆ. ಮತ್ತೊಂದು ಪಕ್ಕದಲ್ಲಿ ಕ್ವಾಲಿಟಿಬಾರ್ ಆಂಡ್ ರೆಸ್ಟೋರೆಂಟ್ ಇತ್ತು.ಒಂದು ಕಾಲದಲ್ಲಿ ಇದು ಬಹಳ ಪ್ರಸಿದ್ಧಿ ಯನ್ನು ಪಡೆದಿತ್ತು. ಇಲ್ಲಿ ನಾವು ಸಿನಿಮಾದಲ್ಲಿ ನೋಡುತ್ತಿದ್ದ ಕ್ಯಾಬರೆ ಡಾನ್ಸ್ ಇತ್ತು. ಸಾಯಂಕಾಲ ಅಲ್ಲೇ ಬಸ್ ನಿಲ್ದಾಣ ದಲ್ಲಿದ್ದರೂ ಮೇಲಿನ ಗದ್ದಲದ ಸಂಗೀತ ಕೇಳುಸುತ್ತಿತ್ತು. ಅಗೆಲ್ಲ ಒಂದು ಬಾರಿ ಅದನ್ನು ನೋಡಬೇಕು ಎನ್ನುವ ಕುತೂಹಲ ಇತ್ತು. ಅದರೆ ಅದು ನೆರವೇರಲೇ ಇಲ್ಲ. ಅದರ ಬಗ್ಗೆ ನಿರಾಶೆ ಇಲ್ಲ. ಕೆಲವು ಕನಸು ಕನಸಾಗಿದ್ದರೆ ಚೆನ್ನ.
ಜ್ಯೋತಿ ಟಾಕೀಸ್ ಇಲ್ಲಿ ,ನೋಡಿದ ಸಿನಿಮಾಗಳಿಗೆ ಲೆಕ್ಕವಿಲ್ಲ. ಮಧ್ಯರಾತ್ರಿ ಇಲ್ಲಿ ಸಿನಿಮಾ ಬಿಟ್ಟು ಖಾಲಿ ರಸ್ತೆಯಲ್ಲಿ ಸೈಕಲ್ ತುಳಿದು ಹೋಗುತ್ತಿದ್ದ ನೆನಪು ಈಗಲೂ ಇದೆ. ಕಂಪೌಂಡ್ ಗೋಡೆ ಹಾರಿ ಟಿಕೇಟ್ ಸರದಿಗೆ ನಿಂತು ಟಿಕೇಟ್ ಗಿಟ್ಟಿಸಿಕೊಂಡದ್ದನ್ನು ಮರೆವ ಹಾಗಿಲ್ಲ.
ನಾನು ಚಿಕ್ಕವನಿರುವಾಗ ಇಲ್ಲಿ ಹಲವು ಮರಗಳು ಇದ್ದ ನೆನಪು. ಈಗ ಬರೀ ರಸ್ತೆಗಳು ಕಟ್ಟಡಗಳು. ಬಲ್ಮಠ ಅಂತ ಇದಕ್ಕೆ ಇನ್ನೊಂದು ಹೆಸರಿದ್ದರೂ ಅದು ಸ್ವಲ್ಲ ದೂರ. ಹಳೆಯ ಇಂದ್ರ ಭವನ ಅದೊಂದು ಬಗೆಯ ನೆನಪು. ಸಾಯಂಕಾಲದ ಬಿಸಿ ದೋಸೆ ಕಾಫಿ ಚಹ,... ಮಂಗಳೂರಿನಿಂದ ಊರಿಗೆ ಹೋಗಬೇಕಾದರೆ ತಲಪಾಡಿಗೆ ಹೋಗುವ ನಲ್ವತ್ತೆರಡು ನಲ್ವತ್ತಮೂರು ನಂಬರ್ ನ ಸಿಟಿ ಬಸ್ ಬರುವುದನ್ನೆ ಕೊರಳುದ್ದ ಮಾಡಿ ಕಾಯುತ್ತಿದ್ದ ದಿನದ ನೆನಪುಗಳು ಇಲ್ಲೀಗ ಕಾರಲ್ಲಿ ಸಂಚರಿಸುವಾಗ ನೆನಪಿಗೆ ಬರುತ್ತವೆ. ಒಂದು ಬಾರಿ ಎಲ್ಲಿಂದಲೋ ರಾತ್ರಿ ತಡವಾಗಿ ಬಂದಿದ್ದೆ. ಕೊನೆಯ ಕಾಸರಗೋಡು ಬಸ್ ಮುಷ್ಕರವಾಗಿ ಬರಲೇ ಇಲ್ಲ. ಬಹಳ ರಾತ್ರಿಯವರೆಗೂ ಇದೇ ಬಸ್ ತಂಗುದಾಣದಲ್ಲಿ ಕಾದು ಕುಳಿತಿದ್ದೆ. ಬಸ್ಸು ತಂಗುದಾಣದಲ್ಲಿ ಪರಿಚಿತರು ಯಾರೂ ಇರಲಿಲ್ಲ. ಅತ್ತಿತ್ತ ಹೋಗುವ ವಾಹನ ಜನಗಳು, ಬಹಳ ದೂರ ಹೋಗಬೇಕಾದ ನಾನು, ಜೇಬಲ್ಲಿ ಚಿಲ್ಲರೆ ಹಣ ಇಟ್ಟುಕೊಂಡು ಆತಂಕದಿಂದ ಇದೇ ಜ್ಯೋತಿ ಸರ್ಕಲ್ ನಲ್ಲಿ ನಿಂತಿದ್ದೆ. ಕೊನೆಗೆ ತಲಪಾಡಿಯ ಸಿಟಿ ಬಸ್ ಹತ್ತಿ, ತಲಪಾಡಿಯಿಂದ ಯಾವುದೋ ಲಾರಿ ಹಿಡಿದು ಉಪ್ಪಳದಲ್ಲಿಳಿದು ಅಲ್ಲಿಂದ ಪೈವಳಿಕೆಗೆ ಹತ್ತು ಕಿಲೋ ಮೀಟರ್ ನಡೆದು ಮನೆ ಸೇರಿದಾಗ ರಾತ್ರಿ ಒಂದು ಘಂಟೆಯಾಗಿತ್ತು. ಇಂತಹ ಅಮಾಯಕ ಕಥೆಗಳನ್ನು ಈ ಜ್ಯೋತಿ ಸರ್ಕಲ್ ಅದೆಷ್ಟು ಕಂಡಿದೆಯೋ ತಿಳಿಯದು. ಬಹಳಷ್ಟು ಜನಗಳು ಇಲ್ಲಿ ಕೊನೆಯ ಬಸ್ ಕಾದು ಕುಳಿತಿರುತ್ತಾರೆ. ಯಾಕೆಂದರೆ ಇದು ನಗರದ ಪ್ರಧಾನ ಬಸ್ಸು ನಿಲ್ದಾಣದಲ್ಲಿ ಒಂದು. ನಗರದ ಒಂದು ಮಹಾ ದ್ವಾರ ಇದು.
ಈಗ ಜ್ಯೋತಿ ಸರ್ಕಲ್ ಬಹಳ ಬದಲಾಗಿದೆ. ಏನೋ ಆ ಹೆಸರೂ ಅಲ್ಪ ಸ್ವಲ್ಪ ಉಳಿದಿದೆ. ಜ್ಯೋತಿ ಟಾಕೀಸ್ ಕೇವಲ ಕಟ್ಟಡವಾಗಿ ಸ್ಮಾರಕದಂತೆ ನಿಂತುಕೊಂಡಿದೆ. ಹೆಚ್ಚಾಗಿ ಹತ್ತಿರದ ಬಲ್ಮಠವನ್ನೇ ಹೆಸರಾಗಿಸಿ ಇಲ್ಲಿಗೆ ಬಲ್ಮಠ ಅಂತ ಹೇಳುವವರು ಇದ್ದಾರೆ. ಹೊಸರೂಪದಲ್ಲಿ ಇದನ್ನು ಹಾಗೆ ಕರೆದರೂ ಕರೆಯಬಹುದು. ಆದರೂ ಜ್ಯೋತಿ ಟಾಕೀಸ್ ನ್ನು ಸ್ಮರಣೆಯಾಗಿಸುವ ಈ ಸರ್ಕಲ್ ಯಾವಾಗಲೂ ಜ್ಯೋತಿ ಸರ್ಕಲ್ ಆಗಿ ಉಳಿಯಬೇಕು. ನಗರದ ಕೇಂದ್ರ ಭಾಗದಲ್ಲಿ ಜ್ಯೋತಿ ಉರಿಸಿಟ್ಟಂತೆ ಅದು ನಿತ್ಯ ಬೆಳಗುತ್ತಿರಬೇಕು. ಈ ಸರ್ಕಲ್ ಹೀಗೆ ಇದೇ ಹೆಸರಲ್ಲಿ ಉಳಿಯಬೇಕು. ಯಾಕೆಂದರೆ ಜ್ಯೋತಿ ಎಂದಾಗ ಎದ್ದು ನಿಂತಾಕೆ ಬೇರೆ ಯಾರೂ ಅಲ್ಲ ನನ್ನಾಕೆ ಜ್ಯೋತಿ. ಮೂವತ್ತು ವರ್ಷಗಳ ನನ್ನ ಸಹಧರ್ಮಿಣಿ. ದೂರದ ಶ್ರಿಂಗೇರಿ ಕೊಪ್ಪದಿಂದ ಮಂಗಳೂರಿಗೆ ಬರುವ ಸಮಯದಲ್ಲಿ ನಡೆದ ಘಟನೆ.
No comments:
Post a Comment