Friday, April 29, 2022

ಭಗವಂತ ಒಂದು ಅನುಭವ

 

"ಪಾಪ ಪ್ರಜ್ಞೆ ಎಂಬುದರ ಅರಿವಿದ್ದರೆ ಮಾತ್ರ ದೇವರು ಎಂದರೆ ಏನು ಎಂಬುದು ಅರ್ಥವಾಗಬಹುದು. ಇಲ್ಲವಾದರೆ ದೇವರು ಎಂಬುದು ಮೌಢ್ಯವಾಗುತ್ತದೆ. "

            ನಮ್ಮ ಮನೆಯ ಹುಡುಗ ಒಂದು ಸಲ ಕೇಳಿದ. ಕಣ್ಣಿಗೆ ಕಾಣುವಂತಹ ವಸ್ತುಗಳನ್ನು ಮಾತ್ರವೇ ನಂಬಬಹುದು. ಯಾಕೆಂದರೆ ಅದು ಕಣ್ಣಿಗೆ ಕಾಣುತ್ತದೆ. ಕಣ್ಣಿಗೆ ಕಾಣದ ಮಾತ್ರವಲ್ಲ ಎಂದೂ ಸಹ  ಕಾಣುವ ಭರವಸೆ ಇಲ್ಲದ ದೇವರನ್ನು ನಂಬುವುದು ಯಾಕೆ? ಆತನಿಗೆ ನಾನು  ಒಂದು ಸಣ್ಣ ಉತ್ತರ ಮೊದಲು ಕೊಟ್ಟೆ, ಗಾಳಿ ನಮ್ಮ ಸುತ್ತಲು ಚಲಿಸುತ್ತದೆ, ಅದರಲ್ಲೂ ಉಸಿರಾಡುವ ಗಾಳಿ ಚಲಿಸುವ ಅನುಭವವೂ ಆಗುವುದಿಲ್ಲ.  ಆದರೂ ನಾವು ಗಾಳಿ ಇದೆ ಎಂದು ನಂಬುತ್ತೇವೆ.  ಕತ್ತಲ ಕೋಣೆಯಲ್ಲೂ ನಾವು ಉಸಿರಾಡಬಲ್ಲೆವು  ಯಾಕೆ,  ಅದರ ಅನುಭವವನ್ನು ನಾವು ಗುರುತಿಸಬಲ್ಲೆವು. ದೇವರು.......  ಅದನ್ನು ಅನುಭವಿಸಿ ಅರಿಯಬೇಕು.  

                ದೇವರು ಎಂಬುದನ್ನು ನಾವು ಅರ್ಥವಿಸಿಕೊಳ್ಳುವ ರೀತಿಯಿಂದಾಗಿ ಆ ದೇವರ ಅನುಭವವೂ ಆಗುವುದಿಲ್ಲ. ಕಣ್ಣಿಗೂ ಕಾಣಿಸುವುದಿಲ್ಲ ದೇವರು ಇದನ್ನು ಅರ್ಥವಿಸುದರಲ್ಲಿ ನಾವು ಸದಾ ವಿಫಲರಾಗುತ್ತಿದ್ದೇವೆ.  ದೇವರು ಭಗವಂತ ಕೇವಲ ಅಕ್ಷರಗಳ ಪದಪುಂಜ ಮಾತ್ರ. ಈ ಪದ ಸೃಷ್ಟಿಯನ್ನೂ ನಾವೇ ಮಾಡಿರುತ್ತೇವೆ. ಯಾವುದನ್ನು ಹೀಗೆ ಕರೆಯುತ್ತೇವೆ ಎಂಬುದನ್ನು ಅರಿಯದೆ  ತಮ್ಮ ಭಾವನೆಗಳಿಗೆ ಸೀಮಿತವಾಗಿ ಅರ್ಥವನ್ನು ಕಂಡುಕೊಂಡು ಇದು ದೇವರು ಅಂತ ಭಾವಿಸುತ್ತೇವೆ. ಹಲವು ಸಲ ಇದೊಂದು ಧರ್ಮಕ್ಕೆ ಮಾತ್ರಾ ಸೀಮಿತವಾಗುವುದು ನಮ್ಮ ಸಂಕುಚಿತ ಮನಸ್ಸಿನ  ಭಾವರೂಪವೇ ಆಗುವುದು ವಿಪರ್ಯಾಸ. 

                ದೇವರು ಅದೊಂದು ಅನುಭವ. ರೂಪವಿಲ್ಲದ ಗುಣವಿಲ್ಲದ ಅವ್ಯಕ್ತವಲ್ಲದ ವ್ಯಕ್ತವಾಗುವ ಅನುಭವ. ಪ್ರಾಣವಾಯುವೇ ನಮ್ಮ ಅಸ್ತಿತ್ವಕ್ಕೆ ಮೂಲ ಸಾಕ್ಷಿಯಾಗುವಾಗ ಅದರ ಮೂಲಕವೇ ದೇವರನ್ನು ಕಾಣುವುದಕ್ಕೆ ಯತ್ನಿಸುವುದು ಸಾಮಾನ್ಯ. ದೇವರಿಗೆ ಕಾಲು ಕೈ ಕಣ್ಣು ಮುಖ ಚಿತ್ರಿಸಿ ನಮ್ಮ ಭಾವದಂತೆ ಇದು ದೇವರು ಅಂತ ನಂಬಿಕೊಂಡು ಒಂದು ರೂಪಕ್ಕೆ ಸೀಮಿತಗೊಳಿಸುವುದು ಚಿಂತನೆಯ ಮಿತಿಯನ್ನು ಮಾತ್ರವೇ  ತೋರಿಸುತ್ತದೆ. ಅದರೆ ದೇವರು ಅಷ್ಟೇ ಅಲ್ಲ ಎಂಬ ಅರಿವೂ ನಮಗಿದೆ. ಭಾವಕ್ಕೆ ರೂಪಕ್ಕೆ ಕೈಗೆ ನಿಲುಕದ ಈ ದೇವರನ್ನು ಕಾಣುವುದು ಹೇಗೆ?  ನಮಗೆ ನಾವು ಸಮಾಧಾನ ಮಾಡಿಕೊಳ್ಳುವ ಬಗೆ ಎಂದರೆ ಕಲಿಯುಗದಲ್ಲಿ ದೇವರು ಪ್ರತ್ಯಕ್ಷನಾಗಲಾರ. ವಿಚಿತ್ರವೆಂದರೆ ಒಂದು ವೇಳೆ ಪ್ರತ್ಯಕ್ಷವಾದರೂ ನಾವು ದೇವರು ಎಂದು ನಂಬುವುದಕ್ಕೂ  ಸಾಧ್ಯವಾಗುವುದಿಲ್ಲ.  ಒಂದರ್ಥದಲ್ಲಿ ದೇವರು ಕಣ್ಣಿಗೆ ಕಂಡರೆ ಅದು ದೇವರಾಗಿರುವುದಿಲ್ಲ.  ಹಾಗಾಗಿ ದೇವರು ಎಂದರೆ ಅದು ನಮ್ಮ ಕಲ್ಪನೆಗೆ ನಮ್ಮ ತಿಳುವಳಿಕೆಗೆ ಸೀಮಿತ. ಇದಕ್ಕೆ ಉತ್ತರವಾಗುವುದೇ ಧ್ಯಾನ. ಇಲ್ಲಿ ವ್ಯಕ್ತವಾಗುವ ಅವ್ಯಕ್ತ ಅನುಭವ ಬಹಳ ವಿಚಿತ್ರ.  ಈಶ್ವರನ ಭಾವ ಚಿತ್ರ ನೋಡಿದರೆ ಅಲ್ಲೂ ಸ್ವತಃ ಭಗವಂತನಾದ ಶಿವನೂ ಧ್ಯಾನ ಮುದ್ರೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಭಗವಂತನೂ ಯಾವುದರ ಬಗ್ಗೆ ಧ್ಯಾನ ಮಾಡಬಹುದು? ಅಚ್ಚರಿಯಾಗುತ್ತದೆ.  ಧ್ಯಾನ ಸ್ವರೂಪನೇ ಈಶ್ವರ. ಧ್ಯಾನ ಒಂದು ಅದ್ಭುತ ಅನುಭವ.

                ಧ್ಯಾನ ಎಂದರೆ ಏಕಾಂತವಾಸ. ಏಲ್ಲೇ ಇದ್ದರೂ ಇದನ್ನು ಮನಸ್ಸಿನಿಂದ ಸಾಧಿಸುವುದಕ್ಕೆ ಸಾಧ್ಯವಿದೆ.     ಏಕಾಂತದಲ್ಲಿ ಇರುವುದಕ್ಕು ಏಕಾಂಗಿಯಾಗುವುದಕ್ಕೂ ವೆತ್ಯಾಸವಿದೆ. ಏಕಾಂತದಲ್ಲಿ ನಮ್ಮ ಅಂತಃಕರಣ ವಿಶಾಲವಾಗಿ ಅದು ಕಣ್ಣಿಗೆ ಕಾಣುತ್ತದೆ. ಏಕಾಂಗಿತನದಲ್ಲಿ ಕಣ್ಣು ಕುರುಡಾಗಿ ಯಾವುದೂ ಸಮರ್ಪಕವಾಗಿ ಗೋಚರವಾಗುವುದಿಲ್ಲ.   ಮುಂಜಾನೆಯ ಏಕಾಂತದಲ್ಲಿ ನಾನು ಏಕಾಂಗಿಯಲ್ಲ ಎಂಬ ಭಾವನ್ನು ತೋರಿಸುವುದೇ ಭಗವಂತನ ಅನುಭವ. ಅದೊಂದು ದಿವ್ಯ ಅನುಭವ.  ಇಲ್ಲಿ ಶುದ್ಧಾಂತಃ ಕರಣವೇ ನಮ್ಮನ್ನು ಪರಿಶುದ್ದಿಯತ್ತ ಒಯ್ಯುತ್ತದೆ.  ಪರಿಶುದ್ದನಾಗುವುದು ಎಂದರೆ ದೇಹದಿಂದ ಬೇರಾಗಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದೇ ಆಗಿರುತ್ತದೆ.  ಬದುಕಿನ ದುರಿತಗಳು ಎಂದರೆ ನಮ್ಮ ಕಲ್ಮಶಗಳು. ಅದೇ ನಮ್ಮ ಪಾಪಗಳು.  ಅದನ್ನು ಕಳೆದು ಕೊಳ್ಳಬೇಕು.  ನಿತ್ಯ ಮುಂಜಾನೆ ಎದ್ದು ಸ್ನಾನವನ್ನೇನೋ ಮಾಡಿ ದೇಹ ಶುಚಿಯಾಗಿಸಬಹುದು, ಆದರೆ ಮನಸ್ಸು? ಸ್ನಾನ ಮಾಡಿ ಭಗವಂತನ ಸ್ಮರಣೆ ಮಾಡಿದಾಗಲೇ ಮನಸ್ಸು ಪರಿಶುದ್ದವಾಗುತ್ತದೆ. ಇದಕ್ಕೆ ಸಂಧ್ಯಾವಂದನೆ ಅತ್ಯಂತ ಪೂರಕ. ಇಲ್ಲಿ ಮಮೋಪಾತ್ತ ದುರಿತ ಕ್ಷಯದ್ವಾರ ಎಂಬ ಸಂಕಲ್ಪ ಮಾತ್ರವೇ ಇದ್ದು ಬೇರೆ ಯಾವ ಸ್ವಾರ್ಥವು ಇರುವುದಿಲ್ಲ. ದೇವರ ಪ್ರತಿಮೆಯೋ ರೂಪವೋ ಯಾವುದು ಇಲ್ಲ. ಮೂರ್ತಿ ಪ್ರತಿಮೆ ಯಾವುದು ಇಲ್ಲದ ಮನಸ್ಸಿನ ಭಾವನೆಗಳೇ ಇಲ್ಲಿ ಸ್ಥಾಯಿಯಾಗುತ್ತವೆ. ಹಾಗಾಗಿ ಮನಸ್ಸಿನ ಅನುಭವವೇ ಮುಖ್ಯವಾಗುತ್ತದೆ. ಹೀಗೆ  ಮನಸ್ಸೇ ಒಂದು ಭಾವನಾ ಲೋಕವನ್ನು ಸಂಕಲ್ಪಿಸುತ್ತದೆ.  ಇದೇ ಭಾವದಲ್ಲಿ ಸಂಧ್ಯಾವಂದನೆ ಎಂದರೆ ನನಗೆ ನನ್ನನ್ನೇ ನಾನು ಕಳೆದುಕೊಳ್ಳುವ ಯಜ್ಞಸ್ವರೂಪವಾಗಿ ಕಾಣುತ್ತದೆ. 

                ಸಂಧ್ಯಾವಂದನೆ ಒಂದು ಭಗವಂತನ ಸಾಕ್ಷಾತ್ಕಾರಕ್ಕಿರುವ ಒಂದು ಉತ್ತಮ ರಹದಾರಿ. ಇಲ್ಲಿ ಮಾಡುವ ಒಂದೊಂದು ಆಚಮನದ ತೊಟ್ಟು ನೀರು ನಮ್ಮಲ್ಲಿನ ಕಲ್ಮಷ ಪ್ರಜ್ಞೆಯನ್ನು ಜಾಗ್ರತ ಗೊಳಿಸಬೇಕು.  ಇಲ್ಲಿ ಮನಸ್ಸನ್ನು ಶ್ರಧ್ಧೆಯಿಂದ ತೊಡಗಿಸಿದರೆ ಕಲ್ಪನೆಯಲ್ಲಿ ಇಲ್ಲದ ದೇವರನ್ನು ಕಾಣಬಹುದು. ಮೇಲಿನ ಎಲ್ಲ ಅನುಭವಗಳನ್ನು ನಮ್ಮದಾಗಿಸಬಹುದು. ಸಂಧ್ಯಾವಂದನೆಯಲ್ಲಿ ದೇವರಿಗೆ ರೂಪವಿಲ್ಲ.  ಭಾವವಿಲ್ಲ.  ಎಲ್ಲವೂ ನಾವೇ ಆಗಿರುತ್ತೇವೆ.  ಓಂ ಕಾರಕ್ಕೂ ಒಂದು ಸ್ವರೂಪದ ಅನುಭವವಾಗುತ್ತದೆ. ನನಗೆ ಸಂಧ್ಯಾವಂದನೆ ಅಪ್ಯಾಯಮಾನವಾಗುವುದು ಅದರಲ್ಲಿರುವ ಭಾವ ಸೌಂದರ್ಯಕ್ಕೆ. ಯಾವುದೇ ಪರಿಕರವಿಲ್ಲದೇ ಕೇವಲ ಅಂಜಲಿಯಲ್ಲಿ ಹಿಡಿವ ನೀರು ಇದ್ದರೆ ಯಜ್ಞ ಯಾಗಾದಿಗಳಿಂದಲೂ ಪ್ರಾಪ್ತಿಯಾಗದ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಂಧ್ಯಾವಂದನೆಯ ಅನುಷ್ಠಾನವಿದ್ದರೆ ಯಾವ ಗ್ರಹದೋಷಕ್ಕೂ ಆತಂಕವನ್ನು ಅನುಭವಿಸಬೇಕಿಲ್ಲ. ನಿತ್ಯ ಮುಕ್ತವಾದ ಮನಸ್ಸನ್ನು ಹೊಂದಬಹುದು. ದೇಹ ಶುದ್ದಿಗೊಳಿಸಿ ಕೈ ಹಿಡಿಯ ಅರ್ಘ್ಯವನ್ನು ಸೂರ್ಯನಿಗೆ ಅರ್ಪಿಸಿ ಜಪ ಮಾಡುವುದಕ್ಕೆ  ತೊಡಗಿದರೆ, ಉಸಿರಾಟದಲ್ಲಿ ಗಮನ ಹರಿಯುತ್ತದೆ. ಉಸಿರಾಟ ಗಾಢವಾದಂತೆ ದೇಹದ ಅಸ್ತಿತ್ವ ಕ್ಷೀಣವಾದ ಅನುಭವವಾಗುತ್ತದೆ. ಪಂಚೇದ್ರಿಯಗಳು ಮೀರಿ ನಿಲ್ಲುವ ಹಂಬಲವಾಗುತ್ತದೆ. ಎಲ್ಲ ಇಂದ್ರಿಯಗಳನ್ನು ಮೀರಿ ಅಂತರಂಗಕ್ಕೆ ಇಳಿದಾಗ ಆಗುವ ಅನುಭವವೇ ಭಗವಂತನ ಸ್ವರೂಪ. ಭಗವಂತನೇ ಪ್ರತ್ಯಕ್ಷವಾದಂತೆ. ಸಾಮಾನ್ಯವಾಗಿ ಭಗವಂತ ಕಂಡರೆ ಕೇಳಿಕೊಳ್ಳುವ ಹಲವು ಬೇಡಿಕೆಗಳು ಇರುತ್ತವೆ. ಆದರೆ ಇಲ್ಲಿ ಯಾವ ಬೇಡಿಕೆಯೂ ಇಲ್ಲ. ಯಾವ ವರವೂ ಬೇಕಾಗಿಲ್ಲ. ನಮಗೇ ಎನು ಬೇಕೋ ಅದು ಸಿಕ್ಕ ಅನುಭವದಲ್ಲಿ ಯಾವ ಸ್ವಾರ್ಥವೂ ಇರುವುದಿಲ್ಲ.   ನಮ್ಮ ಮನಸ್ಸಿನ ಶ್ರಧ್ಧಾ ಭಕ್ತಿ ಎಷ್ಟಿದೆಯೋ ಅಷ್ಟಕ್ಕೇ ಸೀಮಿತವಾಗಿ ಭಗವಂತ ದರ್ಶನವಾಗುತ್ತದೆ. ನಮ್ಮ ಅಂತರಂಗದ ಕಣ್ಣು ತೆರೆಯುವ ಸಾಮಾರ್ಥ್ಯ ಎಷ್ಟಿದೆಯೋ ಅಷ್ಟು, ಯಾಕೆಂದರೆ ಭಗವಂತ ಆದಿ ಅಂತ್ಯವಿಲ್ಲದ ಒಂದು ಅನುಭವ. ಎಲ್ಲವನ್ನೂ ಕಾಣುವುದಕ್ಕೆ ಸಾಧ್ಯವಿಲ್ಲ. ನಮಗೆಷ್ಟು ಸಾಧ್ಯವೋ ಅಷ್ಟು.  ಹಾಗಾಗಿ ನಮ್ಮ ದೃಷ್ಟಿಯನ್ನು ವಿಶಾಲವಾಗಿಸಬೇಕು. ವಿಶಾಲವಾಗಿಸುವುದೆಂದರೆ ನಮ್ಮ ಅಂತಃ ಕರಣವನ್ನು ಶುದ್ದಿಯಾಗಿಸುವುದು. ಕಲಿಯುಗದಲ್ಲೂ ದೇವರ ದರ್ಶನವಾಗುವ ಬಗೆ ಇದು. 

                ಭಕ್ತಿ ಪರಮಾತ್ಮ ಒಲಿಯುವ ಏಕ ಮಾತ್ರ ಮಾರ್ಗ ಇದು. ಭಕ್ತಿ ಎಂದಾಕ್ಷಣ ದೇವರ ಎದುರು ನಿಂತುಕೊಂಡು ಭಾವುಕರಾಗಿ ಕಣ್ಣೀರು ಸುರಿಸುವುದನ್ನು ಕಾಣಬಹುದು. ಈ ಭಾವೋತ್ಕರ್ಷ ಯಾವ ರೂಪದಲ್ಲೇ ಇರಲಿ ಅದು ಪರಮಾತ್ಮನನ್ನು ಒಲಿಸುವ ಭಕ್ತಿಯಾಗುವುದಿಲ್ಲ. ಪರಿಶುದ್ದ ಭಕ್ತಿಯಲ್ಲಿ ಯಾವ ಭಾವನೆಗಳಿಗೂ ಅವಕಾಶವಿರುವುದಿಲ್ಲ. ನಾವು ಯಾವ ಭಾವನೆಗೆ ಒಳಗಾಗುತ್ತೇವೊ ಆಗ ಭಕ್ತಿ ಪ್ರಭಾವ ಕಡಿಮೆಯಾಗಿ ಆ ಭಾವನೆಯ ನಿಯಂತ್ರಣವೇ ಮನಸ್ಸಿನ ಮೇಲಾಗುತ್ತದೆ. ಭಕ್ತಿಯೂ ಹಾಗೆ ಅದರಲ್ಲಿ ಸ್ವಾರ್ಥ ಕಿಂಚಿತ್ ಆದರೂ ಇರಬಾರದು. ದೇವರ ಮುಂದೆ ನಿಂತಾಗ ನಾವು ಏನೇನೋ ಬೇಡಿಕೆಯನ್ನಿಟ್ಟು ಪ್ರಾರ್ಥನೆ ಮಾಡುತ್ತೇವೆ. ಸ್ವಾರ್ಥಮಯ ಭಕ್ತಿಯಾಗುತ್ತದೆ. ಅದು ಪರಿಪೂರ್ಣ ಎನಿಸಲ್ಪಡುವುದಿಲ್ಲ.  ಪ್ರಾಮಾಣಿಕ ಭಕ್ತಿಯಲ್ಲಿ ಯಾವುದೇ ಬೇಡಿಕೆ ಇರುವುದಿಲ್ಲ. ನಮ್ಮ ಮನಸ್ಸು ನಮ್ಮ ಚಿಂತನೆ ನಮ್ಮ ಬಯಕೆಗಳು ನಮ್ಮ ಅನಿವಾರ್ಯತೆಗಳು ಭಗವಂತನಿಗೆ ತಿಳಿದಿರುತ್ತವೆ. ಮತ್ತೆ ಅವನಲ್ಲಿ ಬೇಡಿಕೊಳ್ಳುವುದೇನಿದೆ.    ಮಗುವಿನ ಹಸಿವನ್ನು ಅರಿತು ಅಮ್ಮ ಹಾಲು ಕೊಟ್ಟಂತೆ ಭಗವಂತನೂ ಮಾಡುತ್ತಾನೆ ಎಂಬ ವಿಶ್ವಾಸ ಇರಬೇಕು.  ನಿಮಗೆ ಭಗವಂತನ ಮೇಲೆ ವಿಶ್ವಾಸ ಇಲ್ಲದೇ ಇದ್ದರೆ ಈ ಬಯಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಬೇಕು. ಅಥವಾ ನಮಗೆ ಭಗವಂತನ ಮೇಲೆ ಅವಿಶ್ವಾಸ ಇದ್ದರೆ ಮಾತ್ರ ನಮ್ಮ ಬೇಡಿಕೆ ಇರುತ್ತದೆ. 

                ಭಗವಂತ ವಿಶ್ವರೂಪ ತೋರಿಸಿದ್ದು ಅರ್ಜುನನಿಗೆ ಮಾತ್ರ. ಭಗವಂತನಿಗೆ ತಿಳಿದಿತ್ತು. ಈ ಅರ್ಜುನನಿಗೆ ಈಗ ಅದರ ಆವಶ್ಯಕತೆ ಇದೆ. ಆತನ ಮನಸ್ಸಿಗೆ ಆವರಿಸಿದ ಮೋಹ ಏನಿದೆ ಅದು ಸುಳ್ಳಿನ ಪರದೆ ಎಂದು ತೋರಿಸಬೇಕಿತ್ತು. ವಿಶ್ವರೂಪವನ್ನು  ಕಾಣುವ ಸಾಮಾರ್ಥ್ಯವನ್ನು ಆತನಿಗೆ ಭವಂತನೇ ಕರುಣಿಸಿದ. ಆದರೆ ಅರ್ಜುನ ಕಾಣುವಾಗ ಅಲ್ಲಿ ಸಂಜಯನೂ ಕಾಣುತ್ತಿದ್ದ ಎಂಬುದು ಕೌತುಕ. ಸಂಜಯನಿಗೂ ಕಾಣುವಂತಹ ದೃಷ್ಟಿ ಒದಗಿಬಂದದ್ದು ಭಗವಂತನ ಕರುಣೆ. ಇದೇ ರೀತಿ ಭಗವದನುಗ್ರಹ ನಮಗೂ ಸಿಗಬೇಕು.  ಹಸಿವನ್ನು ಕೊಡುವವನೂ ಪರಮಾತ್ಮ ಆಹಾರವನ್ನು ಕೊಡುವವನು ಪರಮಾತ್ಮ. 

            ಭಗವಂತನನ್ನು ಪ್ರಾರ್ಥಿಸುವ ಆರಾಧಿಸುವ ಹಲವು ವಿಧಾನಗಳಿರಬಹುದು. ಎಲ್ಲದರಲ್ಲೂ ಒಂದು ನಿರ್ದಿಷ್ಟ ಭಾವ ಇರುತ್ತದೆ. ಆದರೆ  ಸಂಧ್ಯಾವಂದನೆ ಎಂದರೆ ಭಗವಂತನನ್ನು ಕಾಣುವ ಅಫೂರ್ವ ಮಾಧ್ಯಮ. ನಮ್ಮ ಕಲ್ಪನೆಯ ವೈಶಾಲ್ಯತೆ ಎಷ್ಟಿದೆಯೋ ಅಷ್ಟಕ್ಕೆ ಇದು ಸಾಧ್ಯವಾಗುತ್ತದೆ.  ಸಂಧ್ಯಾವಂದನೆ ಕೇವಲ ಖಾಸಗೀತನದ ಪ್ರಾರ್ಥನೆ.  ಯಾವ ಪರಿಕರವೂ ಇಲ್ಲದ ಕೇವಲ ಪ್ರಕೃತಿಯನ್ನೇ ಜತೆಯಾಗಿಸಿಕೊಂಡ ಪ್ರಾರ್ಥನೆ. ಇಲ್ಲಿ ಸ್ವಾರ್ಥವಿಲ್ಲ. ಭಗವಂತ ಹೇಳುವಂತೆ ಕೇವಲ ಕರ್ಮಾನುಷ್ಠಾನ. ಅತ್ಯಂತ ಸರಳ ಮತ್ತು ಮಾನಸಿಕ ಅನುಸಂಧಾನ ಇದು.  ಇಲ್ಲಿ ಮಾಡುವ ಗಾಯತ್ರೀ ಮಂತ್ರ ಜಪವೂ ಹಾಗೆ. ದೇವರ ರೂಪವನ್ನಾಗಲಿ ಭಾವವನ್ನಾಗಲೀ ಏಲ್ಲೂ ಹೇಳದೇ ಕೇವಲ ನಮ್ಮ ಮನಸ್ಸಿನ ಭಾವನೆಗೆ ಒಂದು ರೂಪವನ್ನು ಒಂದು ಕಲ್ಪನೆಯನ್ನು ಗಾಯತ್ರೀ ಮಂತ್ರ ಕೊಡುತ್ತದೆ. ಜಗತ್ತಿನ ಅತ್ಯಂತ ಶ್ರೇಷ್ಠ ಮರಮ ಉತ್ಕೃಷ್ಟ ಯಾವುದೋ ಅದು ನಮ್ಮ ಕಲ್ಪನೆಗೆ ಪರೀಕ್ಷೆಯನ್ನು ಒದಗಿಸುತ್ತದೆ. ಹಾಗಾಗಿಯೇ ಸಂಧ್ಯಾವಂದನೆಯ ಸಮಾಪ್ತಿಯಲ್ಲಿ ಮನಸ್ಸು ತೃಪ್ತವಾಗುತ್ತದೆ. ಬೇಡಿಕೆ ಇರುವುದಿಲ್ಲ. ಆ ಬೇಡಿಕೆ ಈಡೇರುತ್ತದೋ ಇಲ್ಲವೋ ಎಂಬ ಆತಂಕ ಇರುವುದಿಲ್ಲ. ಕೇವಲ ಧ್ಯಾನ. ಕೊನೆಯಲ್ಲಿ ಅಲ್ಲಿಂದ ಇಹಲೋಕದ ಅರಿವಿಗೆ ಮನಸ್ಸು ಹೊಂದಿಕೊಳ್ಳಲು ಯತ್ನಿಸುತ್ತದೆ. ಈ ಭಾವದಲ್ಲೇ ಮುಂಜಾನೆ ನನಗೆ ನಿಜಕ್ಕೂ ದೇವರ ದರ್ಶನವಾಗುತ್ತದೆ. ಆ ದಿವ್ಯ ಪ್ರಭೆಯಿಂದ ಮನಸ್ಸು ಪ್ರಫುಲ್ಲವಾದ ಅನುಭವವಾಗುತ್ತದೆ. ನಿಜಕ್ಕೂ ದೇವರು ಒಂದು ಅನುಭವಮಾತ್ರ. ಈ ಹಂತದಲ್ಲಿ ಪವಿತ್ರವಾದ ಸಂಧ್ಯಾವಂದನೆಯನ್ನು ಉಪದೇಶಿಸಿದ ಗುರುವಿಗೆ ಮನಸಾರೆ ಅಭಿವಾದನವನ್ನು ಸಲ್ಲಿಸುವ  ಪ್ರೇರಣೆಯಾಗುತ್ತದೆ.  ನನಗೆ ಬ್ರಹ್ಮೋಪದೇಶ ಬೋಧಿಸಿದ ನಮ್ಮಜ್ಜನ ನೆನಪಾಗುತ್ತದೆ. ಅದೆಂತಹ ದಿವ್ಯವಾದ ಉಪದೇಶ ನನಗಾಗಿದೆ. ನಿಜಕ್ಕೂ ನಾನು ಧನ್ಯ ಎಂಬ ಭಾವದಲ್ಲಿ ಗುರುವಿನ ಪಾದಕ್ಕೆ ವಂದಿಸುತ್ತೇನೆ.  ಈ ಆಧ್ಯಾತ್ಮ ತತ್ವದ ಮೊದಲ ಮೆಟ್ಟಿಲಲ್ಲಿ ಕುಳಿತು ಬದುಕಿನತ್ತ ಅವಲೋಕನ ಎಂದರೆ ಸಾರ್ಥಕ ಭಾವ ತುಂಬಿಬಿಡುತ್ತದೆ. 

             ಕೊನೆಯಲ್ಲಿ ಒಂದು ಜಗತ್ತಿನಲ್ಲಿ ಅತ್ಯಂತ ಪರಿಶುದ್ದವಾಗಿರುವುದು ಎಂದರೆ ಅದು ಅಧ್ಯಾತ್ಮ. ಆಧ್ಯಾತ್ಮದಷ್ಟು ಪರಿಶುದ್ದ ಬೇರೆ ಯಾವುದೂ ಇಲ್ಲ. 

No comments:

Post a Comment