Friday, April 15, 2022

ವಿಶ್ವಾಸ ಧರ್ಮ

        "ಧರ್ಮದ ಚಿಂತನೆ ಎಂದಿಗೂ ಹಾನಿ ತರುವುದಿಲ್ಲ. ಅದರೆ ಧರ್ಮದ ಪ್ರವೃತ್ತಿ ಹಲವು ಸಲ ಆತಂಕವನ್ನೇ ಸೃಷ್ಟಿಸುತ್ತದೆ." ಲೋಕ ಮುಖದಲ್ಲಿ ನಾವು ಭಾರತವನ್ನು ಏನೆಲ್ಲ ಚಿತ್ರಿಸುತ್ತೇವೆ. ವಿಶ್ವ ಬಂಧುತ್ವ ಅದು ಇದೂ ......ಆದರೆ ಇಲ್ಲಿ ಧರ್ಮದ ಪ್ರವೃತ್ತಿ ಸೃಷ್ಟಿಸುವ ಆತಂಕ ಬೇರೆಲ್ಲೂ ಸೃಷ್ಟಿಯಾಗುವುದಿಲ್ಲ ಎಂದನಿಸುತ್ತದೆ. ಇದು ಹಸಿವಿನ ಚಿಂತೆಯನ್ನೂ ಮೀರಿಸಿಬಿಡುವುದು ಹಸಿವು ಎಂಬುದು ಒಂದು ಸಮಸ್ಯೆಯೇ ಅಲ್ಲ ಎಂಬ ಭಾವನೆ ತರುತ್ತದೆ. ಬಹುಶಃ ಹಸಿವಲ್ಲದೇ ಬೇರೇ ಎನೂ ಇಲ್ಲದಂತಹ ಬರೀ ಹಸಿವೆ ಸಮಸ್ಯೆಯಾಗಿರುವ ಹಿಂದುಳಿದ ರಾಷ್ಟ್ರಗಳಿವೆ, ಬಹುಶಃ ಅಲ್ಲಿ ಯಾವ ಧರ್ಮವೂ ಸಮಸ್ಯೆಯಾಗಿಲ್ಲದೇ ಇರಬಹುದು.  ಮಧ್ಯಾಹ್ನದ ಹೊತ್ತು ಅತಿಥಿಯಾಗಿ ಒಂದು ಮನೆಗೆ ಹೋದರೆ ಮೊದಲು ನಮ್ಮೊಳಗಿನ ಹಸಿವು ಮಾತ್ರವೇ ಪ್ರಧಾನವಾಗಿರುತ್ತದೆ. ಒಂದು ಬಾರಿ ಆ ಹಸಿವು ಶಮನವಾಯಿತು ಎಂದ ಮೇಲೆ....ಮನೆಯ ಗೋಡೆ  ಮಾಡು ಪಕ್ಕಾಸು ಎಲ್ಲವೂ ಕಣ್ಣಿಗೆ ಕಾಣುತ್ತವೆ. 

        ಬೆಂಗಳೂರಿನ ಯಾವುದೋ ವಾಹಿನಿಯ ಸ್ಟುಡಿಯೋದಲ್ಲಿ ಕುಳಿತು ಡಿಬೇಟ್ ನಲ್ಲಿ ಚರ್ಚಿಸುತ್ತ ಮಹನೀಯರೊಬ್ಬರು ಹೇಳುತ್ತಾರೆ , ಯಾಕೆ ಕರಾವಳಿ ಕೋಮು ಸೂಕ್ಷ್ಮವಾಗುತ್ತದೆ? ಅಷ್ಟೇ ಹೇಳಿದರೆ ಅವರ ಆತಂಕ ಸರಿ ಎಂದು ಅನ್ನಿಸಿದರೂ, ಆ ಕೋಮು ಸಮಸ್ಯೆಗೆ ಅವರ ಚಿಂತನೆ ಕೇಳುವಾಗ ಉರಿದು ಹೋಗುತ್ತದೆ. ಯಾಕೆಂದರೆ ಕರಾವಳಿ ಜನರ ಜೀವಾಳ ಏನು ಎಂದು ಇಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ವಿಧಾನ ಸೌಧದ ಪಡಸಾಲೆಯಲ್ಲಿ ಕುಳಿತು ಬಾಯಿಗೆ ತೋಚಿದಂತೆ ಹೇಳುವಂತಹುದಲ್ಲ. ಅಲ್ಲಿನ ಸಮಸ್ಯೆಯ ಮೂಲ ಅರಿಯಬೇಕಾದರೆ ಮೊದಲು, ಅಲ್ಲಿ ಜನ ಸಾಮಾನ್ಯನಂತೆ ಎರಡುವರ್ಷ ಜೀವನ ಮಾಡಬೇಕು. ಆಗಲೋ ಈಗಲೋ ಮಂಗಳೂರಿನ ದೇವಸ್ಥಾನಕ್ಕೆ ಅಥವಾ ಯಾವುದೋ ಸಭೆ ಸಮಾರಂಭಕ್ಕೆ ಹೋಗಿ ತಮಗೆ ಕಂಡಂತೆ ವಿಶ್ಲೇಷಿಸಿದರೆ ಅದರಲ್ಲಿ ಪರಿಪೂರ್ಣತೆ ಇರಲಾರದು. ಅಲ್ಲಿ ಕೂಲಿ ಕೆಲಸ ಮಾಡಿ, ಇಲ್ಲ ಸಣ್ಣ ಪುಟ್ಟ ವ್ಯಾಪಾರ ಕೃಷಿ ಮಾಡಿ ಬದುಕು ಸವೆಸಿದರೆ ಅಲ್ಲಿ ಕದಡಿದ ಕೋಮು ಸಾಮರಸ್ಯದ ಅರಿವಾದಿತು. ಯಾವುದೇ ಕಲ್ಮಶವಾಗಲೀ ಯಾವುದೇ ಬಾಧೆಯಾಗಲಿ ಮೊದಲು ಅರಿವಿಗೆ ಬರುವುದು ಪರಿಶುದ್ದ ಮನಸ್ಸಿನಿಂದ ಬದುಕುವ ಜನಸಾಮಾನ್ಯನಿಗೆ.  ಹಾಗಾಗಿ ಜನ ಸಾಮಾನ್ಯನಂತೆ ಬದುಕಬೇಕು. ಆಗ ಸಮಸ್ಯೆಯ ಮೂಲ ಅರಿವಾಗುತ್ತದೆ. ಜನ ಸಾಮಾನ್ಯನಿಗೆ ಜೀವನ ಬಿಟ್ಟು ಬೇರೆ ಏನೂ ಬೇಡ. ಹಾಗಾಗಿ ಸ್ನೇಹ ಸೌಹಾರ್ದ ಆತನಲ್ಲಿರುತ್ತದೆ. ಆದರೆ ಉತ್ತಮ ದಾರಿಯನ್ನು ತೋರಬೇಕಾದವರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡಿ ಚರ್ಚೆ ಮಾಡಿ ಈ ವಿಷ ಬೀಜವನ್ನು ಬಿತ್ತುತ್ತಾರೆ. 

            ಒಂದು ಸಲ ನಾನು ಉಪ್ಪಳದಿಂದ ನಮ್ಮೂರು ಬಾಯಾರು ಕಡೆಗೆ ಬಸ್ ಹತ್ತಿದ್ದೆ. ಬಸ್ ಉಪ್ಪಳ ಬಿಟ್ಟು ಬಾಯಾರು ರಸ್ತೆ ತಿರುಗುವಲ್ಲಿ ಈ ಬಸ್ಸಿನ ಹಿಂದೆ ಬರುವ ಬಸ್ಸಿನವ ವೇಗವಾಗಿ ಬಂದು ಈ ಬಸ್ಸು ಹೋಗದಂತೆ ತನ್ನ ಬಸ್ಸನ್ನು ಅಡ್ಡ ಇರಿಸಿದ. ವಾಸ್ತವದಲ್ಲಿ ಆ ಎರಡು ಬಸ್ಸಿನ ಮಾಲಿಕರೂ ಉಪ್ಪಳದ ಒಂದೇ ಧರ್ಮದವರು. ಚಾಲಕರು ಮಾತ್ರ ಬೇರೆ ಧರ್ಮದವರು. ಇಲ್ಲಿ ಧರ್ಮ ಮುಖ್ಯವಲ್ಲ ಎಂದು ಪ್ರತ್ಯೇಕವಾಗಿ ಉಲ್ಲೇಖಿಸುವುದಿಲ್ಲ. ಧರ್ಮ ಯಾವುದಾದರೇನು ಸಮಸ್ಯೆ ಮಾತ್ರ ಒಂದೇ. ಸರಿ ಎರಡೂ  ಬಸ್ಸಿನ ಚಾಲಕರೂ ನಿರ್ವಾಹಕರು ಜಗಳ ಆರಂಭಿಸಿದರು. ನಾವು ಹೊರಟ ಬಸ್ಸು ಕೆಲವು ನಿಮಿಷ ತಡವಾಗಿ ಹೊರಟದ್ದೇ ಜಗಳಕ್ಕೆ ಕಾರಣ. ನಮ್ಮೂರಲ್ಲಿ ಬಸ್ಸಿನವರು ನಿಮಿಷ ನಿಮಿಷವನ್ನೂ ಲೆಕ್ಖ ಹಾಕುವ ಸಮಯ ಪಾಲಕರು.  ಸರಿ ಜಗಳ ಬಹಳ ಹೊತ್ತು ಸಾಗಿತು.  ನಮ್ಮ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು ಹಲವರು ಅಪಸ್ವರ ಎತ್ತುವುದಕ್ಕೆ ಶುರು ಮಾಡಿದರು. ಕೊನೆಗೆ ಹಿಂದೆ ಕುಳಿತವನೊಬ್ಬ ನೋಡಿಯೇ ಬಿಡೋಣ ಎಂದು ಮುಂದೆ ಹೋದವನು ಹಾಗೇಯೇ ವಾಪಾಸು ಬಂದು ಹೇಳಿದ, ಬಸ್ ಅಡ್ಡ ಇಟ್ಟವನು ನಮ್ಮದೇ ಜನ ಅಂತ ಹೇಳಿ ಸುಮ್ಮನೇ ಕುಳಿತು ಬಿಟ್ಟ.  ತೊಂದರೆಯಾಗುವುದು  ನಮ್ಮದೇ ಸ್ವಧರ್ಮದವರಿಂದ ಎಂದಾದರೆ ಅವನಿಗೆ ಅಹವಾಲು ಸಮಸ್ಯೆಗಳು ಯಾವುದೂ ಇರಲಿಲ್ಲ.!  ಈ ಘಟನೆ ನಡೆದು ಸುಮಾರು ಮೂವತ್ತು ವರ್ಷದ ಮೇಲೆ ಆಗಿರಬಹುದು. ಯೋಚಿಸಿ, ಈಗ ದೊಡ್ಡದಾಗಿ ಕಾಣುವ ಬಹಿಷ್ಕಾರದಂತಹ ಸಮಸ್ಯೆಯ ಬೀಜ ಆಗಲೇ ತಿಳಿಯದಂತೆ ಮೊಳಕೆ ಒಡೆದಿತ್ತು.  

        ಅಲ್ಲಿ ಒಂದು ಬಸ್ ಹತ್ತುವುದಕ್ಕೂ,   ಬಸ್ ಮಾಲಕನ ಧರ್ಮ  ಪ್ರಧಾನವಾಗಿರುತ್ತದೆ. ಅಂಗಡಿ ಮತ್ತಿತರ ವ್ಯವಹಾರ ಮಾಡುವಾಗಲೂ ಧರ್ಮ ಗಮನಾರ್ಹವಾಗುತ್ತದೆ. ಇವುಗಳೆಲ್ಲ ಸುಮಾರು ದಶಕಗಳ ಹಿಂದಿನ ಕಥೆ.  ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲೂ ಧರ್ಮ ಕಾರಣವಾಗುವುದಿಲ್ಲ. ಕೇವಲ ನಮ್ಮ ಮನಸ್ಸೇ ಕಾರಣವಾಗುತ್ತದೆ. 

ಊರಲ್ಲಿರುವಾಗ ನಮಗೆ ತಿಂಡಿಯ ವ್ಯಾಪಾರವಿತ್ತು. ರಂಜಾನ್ ಮಾಸ ಬಂದಾಗ ವ್ಯಾಪಾರ ತೀರ ಕಡಿಮೆಯಾಗಿ ಪರಿಸ್ಥಿತಿ ಹದಗೆಟ್ಟು ಹೋಗುತ್ತಿತ್ತು. ನಮಗೆ ಆಚರಣೆ ಇಲ್ಲದೇ ಉಪವಾಸ. ಕಾರಣ ಇಷ್ಟೇ, ದುಡ್ಡು ಕೊಟ್ಟು ತೆಗೆದುಕೊಳ್ಳುವುದಕ್ಕೆ ಯಾರೂ ಇಲ್ಲ ಎಂದಾಗುವಾಗ ವ್ಯಾಪಾರ ಹೇಗಾಗುತ್ತದೆ? ಹೀಗಿದ್ದರೂ ನಮ್ಮದು ಈಗ ವಿವಾದ ಹುಟ್ಟಿದಂತೆ ಹಲಾಲ್ ಪರವಾನಿಗೆ ಏನೂ ಇರಲಿಲ್ಲ. ಹೀಗಿದ್ದರೂ ಅದು ವಾಸ್ತವದ ಸತ್ಯವಾಗಿತ್ತು. ನಮ್ಮ ವ್ಯಾಪಾರ ಸಂಬಂಧದ ನೆಲೆಯೇ ಅಲ್ಲಿತ್ತು. 

        ಒಂದು ಬಾರಿ ಊರಿಗೆ ಹೋದಾಗ ನನ್ನ ಶಾಲಾಜೀವನದ ಸಹಪಾಠಿಯೊಬ್ಬ ಸಿಕ್ಕಿದ್ದ. ಆತ ಕೇವಲ ಸಹಪಾಠಿಯಾಗಿರಲಿಲ್ಲ. ಆತ್ಮೀಯ ಮಿತ್ರನಾಗಿದ್ದ. ಆತ ಈಗ ಗಲ್ಫ್ ಉದ್ಯೋಗಿಯಾಗಿದ್ದ. ಹಾಗಾಗಿ ಅವನು ನಾನು ಭೇಟಿಯಾಗದೆ ದಶಕಗಳೇ ಕಳೆದಿದ್ದವು. ಈಗಂತೂ ಕೂದಲು ನೆರೆಗಟ್ಟಿದೆ. ಮಧ್ಯ ಹರಯ ದಾಟಿದೆ. ನಾವು ಅ ಅಂದು ಇದ್ದ ಸ್ಥಿತಿಯಲ್ಲಿ ಅವನ ಮಕ್ಕಳು ಇದ್ದಾರೆ. ಆತ ಅನ್ಯ ಧರ್ಮದವನಾದರೂ ನಮ್ಮ ನಡುವಿನ ಸ್ನೇಹಕ್ಕೆ ಅಂದು ಅದು ವಿಷಯವೇ ಅನ್ನಿಸಲಿಲ್ಲ. ಅತನಿಂದ ನಾನು ಬಹಳಷ್ಟು ಸಹಾಯವನ್ನು ಪಡೆದಿದ್ದೆ. ನನ್ನ ಬಡತನದಲ್ಲಿ ಸಾಕಷ್ಟು ಸಹಾಯ ಮಾಡಿದ್ದ. ಆತ ಕಲಿಯುವುದರಲ್ಲಿ ಬಹಳ ಹಿಂದೆ ಮಾತ್ರವಲ್ಲ ದಡ್ಡನೇ ಆಗಿದ್ದ.  ಅಂಥವನು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಬೇಕಿದ್ದರೆ ನನ್ನ ಯೋಗದಾನ ಬಹಳಷ್ಟು ಇತ್ತು. ಅದನ್ನು ಆತ ಬಹಳ ಸಲ ಹೇಳಿದ್ದ.  ಶಾಲಾ ಜೀವನ ಮುಗಿಸಿ ಆತ ಗಲ್ಫ್ ಗೆ ಹಾರಿದ್ದ. ಎಸ್ ಎಸ್ ಎಲ್ ಸಿ ಆಗಿರುವುದರಿಂದ ಅಲ್ಲಿ ಆತನಿಗೆ ಸ್ವಲ್ಪ ಒಳ್ಳೆ ಕೆಲಸ ಸಿಕ್ಕಿತ್ತು.ಗಲ್ಫ್ ನಿಂದ ಬಂದಾಗ ಒಂದು ಬಾರಿ ಸಿಕ್ಕಿದ್ದ. ಆಗ ನನ್ನ ಸಹಾಯವನ್ನು ಮನಸಾರೆ ಹೊಗಳಿದ್ದ. ಹೀಗೆ ನಾವು ಸಿಕ್ಕಿದಾಗಲೆಲ್ಲ ನಮ್ಮ  ವಿದ್ಯಾರ್ಥಿ ಜೀವನದಲ್ಲಿನ ಘಟನೆಗಳನ್ನು ಮೆಲುಕು ಹಾಕುತ್ತಿದ್ದೆವು. ಇಂತಹ ಸ್ನೇಹಿತ ಮೊನ್ನೆ ಸಿಕ್ಕಿದಾಗ ಮಾತಿಗೆ ತೊಡಗಿದೆವು. ಅದೂ ಇದು ಅಂತ ಹಲವು ವಿಚಾರ ಮಾತನಾಡಿದ್ದರೂ ಸಹ ನಮ್ಮ ನಡುವೆ ಏನೋ ಒಂದು ತೆರೆ ಎಳೆದ ಅನುಭವ ನನಗಾಗಿತ್ತು. ಯಾಕೆ ಹೀಗೆ? ಕಾರಣ ಇಷ್ಟೆ ನಮ್ಮ ಮನಸ್ಸಿನ ಮೇಲೆ ಧರ್ಮ ಸವಾರಿ ಮಾಡಿತ್ತು. ಆತನಿಗೆ ನಾನು ಬದಲಾದಂತೆ ಕಂಡರೆ ನನಗೆ ಆತ ಬದಲಾದಂತೆ ಭಾಸವಾಗಿತ್ತು.

       ಮನುಷ್ಯರು ಬದಲಾಗುವುದಲ್ಲ, ನಮ್ಮ ನಡುವಿನ ಸಂಬಂಧ ಬದಲಾಗುವುದಿಲ್ಲ. ಬದಲಾಗುವುದು ಕೇವಲ ಮನಸ್ಸು. ಈಗ ಕಂಡುಬರುವ ದಿಗ್ಬಂಧನ ಮುಂತಾದ ನಿಬಂಧನೆಗಳೆಲ್ಲವೂ ನೀರೊಳಗಿನ ಕಲ್ಮಶದಂತೆ, ಅದು ಮೇಲೆದ್ದು ಬಂದು ದಡಕ್ಕೆ ಅಪ್ಪಳಿಸುತ್ತದೆ. ನೀರೊಳಗಿದ್ದಾಗ ಅದು ಏನು ತೊಂದರೆಯಾಗದು ಎಂದು ತಿಳಿದಿದ್ದ ನಮಗೆ ಈಗ ನೀರನ್ನು ಸ್ಪರ್ಶಿಸದಂತೆ ಅದು ತಡೆಯುತ್ತದೆ. ಒಂದು ಕಾಲದಲ್ಲಿ ಹೀಗಿತ್ತಾ ಎಂಬ ಅನುಮಾನ ಈಗ ಮೂಡಿದರೆ ಅದಕ್ಕೆ ಕಾರಣ ಯಾವುದು? ಸ್ನೇಹ ಸೌಹಾರ್ದ ಅದೆಷ್ಟೋ ಕಂಡವರಿಗೆ ಈಗ ಅದು ಎಷ್ಟು ಗಾಢವಾಗಿದ್ದರೂ ಕೇವಲ ನಟನೆಯಂತೆ ಭಾಸವಾಗುತ್ತದೆ. ವಿಶ್ವಾಸವೇ ಒದಗಿಬರುವುದಿಲ್ಲ. ಏನೋ ಒಂದು ಅಪಶೃತಿ, ತಾಳ ಲಯಕ್ಕೆ ಹೊಂದಿಕೆಯಾಗದಂತೆ ತಡೆಯುತ್ತಾ ಇದೆ. 

            ನೆರೆಹೊರೆಯಲ್ಲಿ ವಿಶ್ವಾಸದ ಕೊರತೆಯಾಗುವಾಗ ನಮ್ಮ ಮನೆಯ ಬಾಗಿಲು ಭದ್ರವಾಗುತ್ತದೆ. ಸಾಲದು ಎಂಬಂತೆ ಬೀಗವೂ ಜಡಿಯುತ್ತೇವೆ. ಒಂದು ವೇಳೇ ನಮ್ಮ ನಡುವೆ ವಿಶ್ವಾಸ ಇದ್ದರೆ, ಇದರ ಆವಶ್ಯಕತೆಯೇ ಇರುವುದಿಲ್ಲ. ಅಮ್ಮ ಹಣ ಸಂಗ್ರಹಿಸಿ ಯಾವುದೋ ಅಕ್ಕಿ ಡಬ್ಬದ ಒಳಗೆ ಕಾಣದಂತೆ ಇಡುತ್ತಾಳೆ ಎಂದರೆ ಅದಕ್ಕೆ ಕಾರಣ ಯಾವುದು? ಕಡಿಮೆಯಾದ ವಿಶ್ವಾಸ. ಆ ವಿಶ್ವಾಸ ಇನ್ನು ಚಿಗುರೊಡೆಯುವುದು ಕಲ್ಪಿಸುವುದಕ್ಕೆ ಕಠಿಣವೆನಿಸುತ್ತದೆ. ವಿಶ್ವಾಸದ ತಳಿ ಎಂದೋ ನಾಶವಾಗಿದೆ. ಆದರೂ ಆಶಾಭಾವದಿಂದ ಬದುಕಬೇಕು. 






 


No comments:

Post a Comment