Saturday, May 6, 2023

ಬಿಡಲಾಗದ ಬಂಧನ....

ಧ್ಯಾನವು ಅಸಹನೆಯನ್ನು ಪ್ರಚೋದಿಸುವುದೇ? ಕಾಡಿದ ಆತಂಕ. 

                ಮುಂಜಾನೆ ನಾಲ್ಕು ಗಂಟೆಗೆ ತಟ್ಟಿ ಎಬ್ಬಿಸಿದಂತೆ ಏಳುವಾಗ ಮೊದಲು ಕಣ್ಣು ಬಿಟ್ಟು ನಾರಾಯಣ ನಾರಾಯಣ ಎಂದು ಭಗವಂತನ ನಾಮ ಸ್ಮರಣೆ ಮಾಡುತ್ತೇನೆ. ಪರಮಾತ್ಮನ ನಾಮಸ್ಮರಣೆಯಲ್ಲಿ ಯಾವಾಗಲೂ  ಕಣ್ಣು ಮುಚ್ಚಿದ್ದರೆ,  ಇಲ್ಲಿ ಎಚ್ಚರವಾದಾಗ ಕಣ್ಣು ತೆರೆದು ಭಗವಂತನನ್ನು ಸ್ಮರಿಸುವಾಗ ಹೊಸ ಹುರುಪು ಇರುತ್ತದೆ. ನಿದ್ದೆಯಿಂದ ಏಳುವುದೆಂದರೆ ಅದು ಒಂದು ಸುಖದ ಮುಸುಕನ್ನು ಕೊಡವಿಕೊಳ್ಳುವುದು. ಸುಖದ ಮುಸುಕು ಸರಿದಾಗ ಅಲ್ಲಿ ಮತ್ತೊಂದು ಸುಖದ ಬಾಗಿಲು ತೆರೆದಿರಬೇಕು. ಆಗ ಹುರುಪು ಇಮ್ಮಡಿಯಾಗುತ್ತದೆ. ಎದ್ದಕೂಡಲೇ ಮಲಗಿದ ಪಲ್ಲಂಗವನ್ನು ನೋಡುತ್ತೇನೆ. ಹೊದ್ದುಕೊಂಡ ಹೊದ್ದಿಕೆ ಮುದ್ದೆಯಾಗಿ ಒಂದೆಡೆ ಬಿದ್ದಿರುತ್ತೇನೆ. ಕೂಡಲೇ ಅದನ್ನೆತ್ತಿ ಚೆನ್ನಾಗಿ ಮಡಚಿ ಇಟ್ಟು ಬಿಡುತ್ತೇನೆ. ಅದುವರೆಗೆ ನನ್ನ ಸುಖವನ್ನು ಆವರಿಸಿಕೊಂಡು ರಕ್ಷಿಸಿದ ಹೊರ ಕವಚವದು. ಅದನ್ನು ಮಡಚಿ ಒಪ್ಪ ಓರಣವಾಗಿ ಇಡುವುದೆಂದರೆ ಅದಕ್ಕೊಂದು ಕೃತಜ್ಞತೆ ಸಲ್ಲಿಸಿದಂತೆ. ಅದು ಕೂಡ ನಕ್ಕು ನನಗೆ ಶುಭ ಹಾರೈಸಿದಂತೆ ಭಾಸವಾಗುತ್ತದೆ. ಎದ್ದಕೂಡಲೇ ನನ್ನ ಮೊದಲ ಕೆಲಸ ಇದು. ತೃಪ್ತ ಶಯನದ ಸಂಕೇತವೇ ನಮ್ಮ ಹಾಸಿಗೆ ಮತ್ತದರ ದಿಂಬು ಚಾದರ. ಅದು ಅಸ್ತವ್ಯಸ್ತವಾಯಿತೆಂದರೆ ನಾವು ನಿದ್ದೆಯಿಂದ ತೃಪ್ತರಾಗಿಲ್ಲ ಎಂದೇ ಅರ್ಥ. ಹೌದು ತೃಪ್ತಿಯ ನಿದ್ದೆಗೆ ವಿದಾಯ ಹೇಳಿ ಮತ್ತದು ಪುನಹ ಬರಬೇಕಾದರೆ ದಿನದ ಮುಂದಿನ  ಚಟುವಟಿಕೆ ಹೆಚ್ಚು ಚಿತೋಹಾರಿಯಾಗಿರಬೇಕು. ಮನಸ್ಸು ಅಸಹನೆಯ ಸುಳಿಗೆ ಸಿಲುಕದಂತೆ ನಮ್ಮ ಚಟುವಟಿಕೆ ಇರಬೇಕು. ಅದಕ್ಕಾಗಿ ಕಣ್ಣು ತೆರೆದು ನಾರಾಯಣ ನಾರಾಯಣ ನಾಮ ಸ್ಮರಣೆ. ಇದು ಉತ್ಸಾಹವನ್ನು ನೂರ್ಮಡಿಸುತ್ತದೆ. ಮತ್ತೆ ಉತ್ಸಾಹದಲ್ಲಿ ಹೆಜ್ಜೆ ಇಟ್ಟು ಬಿಡುತ್ತೇನೆ. 

                ಶೌಚ ಕ್ರಿಯಾದಿಗಳು ದೇಹವನ್ನು ಶುದ್ದಿಗೊಳಿಸಿದರೆ ಧ್ಯಾನ ಎಂಬುದು ಮನಸ್ಸನ್ನು ವ್ಯಕ್ತಿತ್ವವನ್ನೂ ಶುದ್ದಗೊಳಿಸುತ್ತದೆ. ಅದೂ ಮುಂಜಾನೆಯ ದಿನದ ಆರಂಭದಲ್ಲಿ ದೇಹ ಮನಸ್ಸು ಶುದ್ದವಾದರೆ ಮತ್ತೆ ಮನಸ್ಸಿಗೆ ಅಸಹನೆ ಅಸೌಕರ್ಯ ಅತೃಪ್ತಿ ಇರುವುದಿಲ್ಲ. ಧ್ಯಾನವೂ ಹಲವು ಸಲ ಅತೃಪ್ತಿಯನ್ನು ಸೃಷ್ಟಿಸಿಬಿಡುತ್ತದೋ ಎಂಬ ಆತಂಕ ಕಾಡುವುದಕ್ಕೆ ಆರಂಭವಾಯಿತು. ದೇಹ ಎಂದರೆ ಪ್ರಕೃತಿಯ ಸಂಕೇತ. ಕೃತಿಯಲ್ಲಿ ಯಾವುದು ಕಣ್ಣಿಗೆ ಗೋಚರಿಸುತ್ತದೋ ಅದೇ ಪ್ರಕೃತಿ. ಹಾಗಾಗಿ ಪ್ರಕೃತಿ ಬದಲಾದದಂತೆ ದೇಹವೂ ಬದಲಾಗಿಬಿಡುತ್ತದೆ. ಪ್ರಕೃತಿಯೊಂದಿಗೆ ಪ್ರಚೋದನೆಗೆ ಒಳಗಾಗುತ್ತದೆ. ಅದಕ್ಕೆ ಸ್ಪಂದಿಸುತ್ತದೆ. ಪಂಚಭೂತಗಳ ಪ್ರಭಾವಕ್ಕೆ ದೇಹ ಒಳಾಗಾಗುತ್ತದೆ. ಬೆಂಕಿಯಲ್ಲಿ ಸುಟ್ಟು ನೀರಿನಲ್ಲಿ ಒದ್ದೆಯಾಗಿ ಗಾಳಿಯೊಂದಿಗೆ ಬೆರೆತುಕೊಂಡು ದೇಹ ಬಾಧೆಗೆ ಸ್ಪಂದಿಸುವಾಗ ಆರೋಗ್ಯ ಏರು ಪೇರಾಗುವುದು ಸಹಜ. ಈತ್ತೀಚೆಗೆ ವಾತಾವರಣದ ಉಷ್ಣಾಂಶ ಏರಿಕೆಯಾಯಿತೋ ಅಥವಾ ವಾತಾವರಣದ ಕಲುಷಿತದ ಪ್ರಭಾವವೋ ನನಗೆ ಅಲರ್ಜಿ ಇನ್ನಿಲ್ಲದಂತೆ ಕಾಡತೊಡಗಿತು. ನಮ್ಮ ಮನೆಯ ರಸ್ತೆಯಲ್ಲೇ ಕಟ್ಟಡದ ಕಾಮಗಾರಿ ನಡೇಯುತ್ತಿರುವುದೂ ಇದಕ್ಕೆ ಕಾರಣವಾಗಿ ಪರಿಣಮಿಸಿತು. ಸಾಮಾನ್ಯವಾಗಿ ಬೆಳಗ್ಗೆ ಬಂದು ಸಾಯಂಕಾಲ ವಾಸಿಯಾಗಿ ಬಿಡುವ ಈ ಬಾಧೆ ನಿರಂತರ ಒಂದು ತಿಂಗಳು ಇನ್ನಿಲ್ಲದಂತೆ ಕಾಡಿತು. ಇದು ಹೆಚ್ಚಾಗಿ ಕಾಡತೊಡಗಿದಾಗ ನಾನು ಮೊದಲು ಮೊರೆ ಹೋಗುವುದು ಜಲನೇತಿಗೆ. ಶ್ವಾಸ ಕ್ರಿಯೆ ಸ್ವಚ್ಛವಾದರೆ ಮತ್ತೆ ಸಮಸ್ಯೆ ಗಂಭೀರವಾಗುವುದಿಲ್ಲ. ಆದರೆ ಜಲನೇತಿಯೂ ಮಾಡದಂತೆ ಮೂಗು ಕಟ್ಟಿ ಉಸಿರಾಟ ತ್ರಾಸವಾಗಿಬಿಟ್ಟಿತು. ಹೊರಗೆ ಓಡಾಡುವುದು ದುಸ್ತರವಾಯಿತು. ರಾತ್ರಿ ಮಲಗಿದರೆ ಮುಂಜಾನೆಯವರೆಗೂ ತಡೆ ಇಲ್ಲದ ನಿದ್ದೆ ಅನುಭವಿಸುವ ನನಗೆ ನಡು ನಡುವೆ ನಿದ್ರಾಭಂಗ ಮಾತ್ರವಲ್ಲ ಎರಡು ಮೂರು ಘಂಟೇ ಎಚ್ಚರವಾದರೆ ಮತ್ತೆ ನಿದ್ದೆ ಸುಳಿಯುತ್ತಿರಲಿಲ್ಲ. ನಿದ್ರಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. 

                ಇದೆಲ್ಲ ದೈಹಿಕ ಸಮಸ್ಯೆಗಳಾದರೆ, ಮುಂಜಾನೆಯ ಧ್ಯಾನ....ಸಂಫೂರ್ಣ ಕಳೆದುಕೊಂಡು ಬಿಟ್ಟೆನೋ ಎನ್ನುವಂತಹ ಸ್ಥಿತಿಗೆ ತಲುಪಿದ್ದೆ. ಮುಂಜಾನೆ ಎದ್ದಾಗ ಮೂಗಿನ ದ್ವಾರಗಳು ಕಟ್ಟಿ ಜಲನೇತಿಗೆ ನೀರು ಸುರಿದರೆ ಅದು ಸಾಧ್ಯವಾಗುತ್ತಿರಲಿಲ್ಲ. ಬಿಸಿ ಹೆಬೆಯನ್ನು ತೆಗೆದುಕೊಂಡರೂ ಜಗ್ಗದೆ ನಿಜಕ್ಕೂ ಹೈರಾಣಾಗಿ ಹೋದೆ. ಎಲ್ಲವೂ ಸರಿ ಆದರೆ ಧ್ಯಾನ, ಸಮರ್ಪಕ ಉಸಿರಾಟವಿಲ್ಲದೆ ಅದೂ ಸಾಧ್ಯವಾಗುತ್ತಿರಲಿಲ್ಲ. ಹಾಗೋ ಹೀಗೊ ಧ್ಯಾನ ಮಾಡಿಯೇ ಬಿಡೋಣ ಎಂದು ಕೊಂಡರೆ ಹತಾಶನಾಗಿ ಬಿಡುತ್ತಿದ್ದೆ. ಧ್ಯಾನ ನಿಜಕ್ಕೂ ಅಸಹನೆಯನ್ನು ಸೃಷ್ಟಿಸಿತ್ತು. ಒಂದು ತಿಂಗಳು ಈ ಬಾಧೆ ನಿರಂತರವಾಗಿ ಕಾಡತೊಡಗಿತು. ಧ್ಯಾನದಲ್ಲಿ ಎಲ್ಲವನ್ನು ಮರೆತು ಬಿಡುತ್ತಿದ್ದ ನನಗೆ ಆ ಅವರ್ಣನೀಯ ಅನುಭವ ಮರೀಚಿಕೆಯಂತೆ ಭಾಸವಾಯಿತು. ಗಜರಾಜನ ಕಾಲನ್ನು ಹಿಡಿದ ಮಕರದಂತೆ ಅಲರ್ಜಿಯ ಕಬಂಧ ಬಾಹು ನನ್ನನ್ನು ಗಟ್ಟಿಯಾಗಿ ಆವರಿಸಿಬಿಟ್ಟಿತು. ಸಿಂಬಳ ಸುರಿಯದಿದ್ದರೂ ಮೂಗು ಕಟ್ಟಿ ಉಸಿರಾಟ ಮುಷ್ಕರ ಹೂಡಿತು. ಮನಸ್ಸಿನ ಶಾಂತಿಗೆ ಸ್ಥಿಮಿತಕ್ಕೆ ಧ್ಯಾನ ಮಾಡುವುದಕ್ಕೆ ಕುಳಿತರೆ, ನಿತ್ಯವೂ ಅದ್ಭುತ  ದಿವ್ಯ ಅನುಭವದಿಂದ ಸ್ವರ್ಗ ಸಂಚಾರಿಯಾಗುತ್ತಿದ್ದ ನನಗೆ ಅದು ಸಾಧ್ಯವಾಗದೇ ಹೋದಾಗ ಸಹನೆ ಕಳೆದುಕೊಳ್ಳುವ ಹಂತ ತಲುಪುತ್ತಿತ್ತು. ಏನೂ ಮಾಡಿದರೂ ಸಾಧ್ಯವಾಗದೇ ಹತಾಶನಾಗಿಬಿಟ್ಟೆ.  ಯೋಚಿಸತೊಡಗಿದೆ ಧ್ಯಾನ ಸಾಧ್ಯವಾಗದೇ ಅದೇ ಧ್ಯಾನ ನನ್ನಲ್ಲಿ ಅಸಹನೆಯನ್ನು ಸೃಷ್ಟಿಸುತ್ತದೆ. ದೇಹ ದಂಡನೆಗೆ ಒಳಗಾದಾಗ ಮನಸ್ಸು ಸ್ಥಿರವಾಗಿ ಎದುರಿಸಬೇಕು. ಹಾಗಾಗಿ ಮನಸ್ಸನ್ನು ಗಟ್ಟಿ ಮಾಡಿಕೊಂಡುಬಿಟ್ಟೇ. ಅಸಹನೆ ಹುಟ್ಟುವುದಕ್ಕೆ ಕಾರಣ ಧ್ಯಾನವಲ್ಲ. ಅದು ನನ್ನ ದೇಹ.  ಅದು ಪ್ರಕೃತಿಯ ಸ್ಪಂದನ. 

                ಇದೀಗ ಚೇತರಿಸಿಕೊಂಡಿದ್ದೇನೆ. ಉಸಿರಾಟ ಸರಾಗವಾಗಿದೆ. ದೇಹ ಮತ್ತಷ್ಟು ಸಶಕ್ತವಾಗಿದೆ. ಮುಂಜಾನೆ ಎದ್ದಾಗ ಧ್ಯಾನದ ಆಹ್ಲಾದ ಅನುಭವಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಇದುವರೆಗೆ ಕಾಡಿದ ಪ್ರಕೃತಿಯನ್ನು ಮರೆತು ನಾನೇ ಸ್ವತಹ  ಪ್ರಕೃತಿಯಾಗಿಬಿಡುತ್ತೇನೆ.  ಸಂಪೂರ್ಣ ಮನಸ್ಸು ದೇಹ ಎಲ್ಲವೂ ಪ್ರಕೃತಿಯಲ್ಲಿ ಬೆರೆತ ಅನುಭವವಾಗುತ್ತದೆ. ಎಲ್ಲವನ್ನು ನಮ್ಮ ನಿಯಂತ್ರಣದಲ್ಲಿ ತರಬಹುದು. ಆದರೆ ನಮ್ಮ ನಿಯಂತ್ರಣದಲ್ಲಿ ಇಲ್ಲದೇ ಇರುವುದು ಈ ಪ್ರಕೃತಿ. ಅದೊಂದು ವಿಶ್ವವಿದ್ಯಾನಿಲಯದಂತೆ. ಅದರ ಶಿಕ್ಷಣ ಬದುಕಿನುದ್ದಕ್ಕೂ ನಿರಂತರ. 


No comments:

Post a Comment