ಕುಡಿಯುವ ನೀರಿನ ಪಾತ್ರೆ ದಿನಾ ನೀರು ತುಂಬುವಾಗ ಇದ್ದ ನೀರನ್ನು ಚೆಲ್ಲಿ ಪುನಹ ನೀರಲ್ಲಿ ತೊಳೆದು, ಪುನಹ ಅದೇ ನೀರನ್ನು ತುಂಬಿಸಿಬಿಡುತ್ತಾರೆ. ಸ್ವಚ್ಛತೆ....ನೀರು ತುಂಬಿದ ಪಾತ್ರೆಯಲ್ಲಿ ಕೇವಲ ನೀರಾದರೂ ಅದನ್ನು ಖಾಲಿ ಮಾಡಿ ಪುನಃ ಅದೇ ನೀರನ್ನು ತುಂಬಿಡುವಾಗ ಆಗುವ ಸ್ವಚ್ಛತೆಯಾದರೂ ಯಾವಬಗೆ? ಅದೇ ಪ್ರಕೃತಿಯ ಆವರ್ತನ ಅಥವಾ ಚಕ್ರ ಅಥವಾ ವರ್ತುಲ. ಮಣ್ಣಲ್ಲೇ ಹುಟ್ಟಿ ಮಣ್ಣಲ್ಲೇ ಬೆಳೆದು ಪುನಃ ಮಣ್ಣಾಗುವಂತೆ, ಸಾಗರದ ನೀರು ಆವಿಯಾಗಿ ಪುನಃ ಮಳೆಯಾಗಿ ನದಿಯಾಗಿ ಪುನಃ ಕಡಲು ಸೇರಿ ಪ್ರಕೃತಿಯೇ ಸ್ವಚ್ಛವಾದಂತೆ. ನೀರಿನ ಪಾತ್ರೆಯಂತೆ ನಮ್ಮ ದೇಹ. ದೇಹದ ಪ್ರತಿ ಕ್ರಿಯೆಗಳಲ್ಲಿ ಒಂದು ವರ್ತುಲವಿದೆ. ಅದರಂತೆ ಪ್ರಧಾನವಾಗುವುದು ಉಸಿರಾಟ. ನಮ್ಮ ಜೀವಂತಿಕೆಯ ಲಕ್ಷಣವೆಂದರೆ ಅದು ಉಸಿರಾಟ. ಆದಿಯಿಂದ ಆಂತ್ಯದ ವರೆಗೂ ನಿಲ್ಲದ ನಿರಂತರ ಕ್ರಿಯೆ. ನಮ್ಮ ಹೃದಯವೂ ನೀರಿನ ಪಾತ್ರೆಯಂತೆ. ಒಂದು ಬಾರಿಯಾದರೂ ಅದು ಸ್ವಚ್ಛವಾಗಬೇಕು. ಇಲ್ಲವಾದರೆ ಅದೂ ಕಲ್ಮಷದಿಂದ ರೋಗ ಬಾಧೆಗೆ ಒಳಗಾಗುತ್ತದೆ. ಶ್ವಾಸ ಉಚ್ಛ್ವಾಸ ನಿರಂತರ ನಡೆದರೂ ಹೃದಯ ಸ್ವಚ್ಛವಾಗುವುದಿಲ್ಲ. ಯಾಕೆಂದರೆ ದಿನವಿಡೀ ಹಲವು ಕಾರಣಗಳಿಂದ ನಮ್ಮ ಉಸಿರು ಅಸಹಜವಾಗಿ ಏರು ಪೇರು ಉಂಟಾಗುತ್ತದೆ. ಇದು ಹೃದಯ ಸ್ವಚ್ಛತೆಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಒಂದು ಬಾರಿ ಒಳತೆಗೆದ ಶ್ವಾಸ ಪೂರ್ಣವಾಗಿ ನಾವು ಸಹಜ ಉಸಿರಾಟದಲ್ಲಿ ಹೊರ ಹಾಕುವುದಿಲ್ಲ. ಅಲ್ಪ ಸ್ವಲ್ಪ ಸೇವಿಸಿದ ಗಾಳಿ ಉಳಿದೇ ಉಳಿಯುತ್ತದೆ. ನೀರಿನ ಪಾತ್ರೆಯಲ್ಲಿ ಇದು ಶ್ವಾಸ ಕೋಶದಲ್ಲಿ ಕಲ್ಮಷವಾಗಿ ಕಫ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ ದೇಹಕ್ಕೆ ಒದಗಬೇಕಾದ ಆಮ್ಲಜನಕದ ಕೊರತೆಯೂ ಉಂಟಾಗುತ್ತದೆ.
ಹೃದಯವನ್ನೂ ದೇಹವನ್ನೂ ಸ್ವಚ್ಛಗೋಳಿಸುವ ಸುಲಭದ ಕ್ರಿಯೆಯೇ ಪ್ರಾಣಾಯಾಮ. ಒಳ ಸೇವಿಸಿದ ಉಸಿರಾಟವನ್ನು ಸಂಪೂರ್ಣವಾಗಿ ಹೊರಚೆಲ್ಲಿ ಪುನಃ ಹೊಸ ಗಾಳಿಯನ್ನು ಸೇವಿಸಿದಾಗ ಹೃದಯ ಸ್ವಚ್ಛವಾಗುತ್ತದೆ. ನರನಾಡಿಗಳು ಸ್ವಚ್ಛವಾಗುತ್ತದೆ. ಹುಟ್ಟಿನಿಂದ ತೊಡಗಿ ಮರಣದಲ್ಲಿ ಆಧ್ಯಾತ್ಮಿಕವಾಗಿ ಸ್ವಚ್ಛವಾಗುವ ನಮ್ಮ ಜನ್ಮದಂತೆ ಸ್ವಚ್ಛತೆ ಜೀವ ಜನ್ಮದ ಸಂಕೇತ. ದಿನದಲ್ಲಿ ಒಂದು ಬಾರಿಯಾದರೂ ಹೃದಯ ಸ್ವಚ್ಛವಾಗಬೇಕು. ಸಮರ್ಪಕ ಉಸಿರಾಟದಿಂದ ಹೃದಯ ದೇಹ ಸ್ವಚ್ಛವಾಗುವುದು ಮಾತ್ರವಲ್ಲ ನಮ್ಮ ಮನಸ್ಸು ಸ್ವಚ್ಛವಾಗುತ್ತದೆ. ನಮ ಮನಸ್ಸು ಯೋಚಿಸುವ ಯೋಚನೆಗಳು, ಮನಸ್ಸಿನ ಭಾವನೆಗಳಿಗೆ ಹೊಂದಿಕೊಂಡು ಉಸಿರಾಟವೂ ಅದಕ್ಕೆ ಹೊಂದಿಕೊಂಡು ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಇದಕ್ಕೆ ಹೊಂದಿಕೊಂಡು ನಮ್ಮ ಉಸಿರಾಟವೂ ಏರು ಪೇರಾಗುತ್ತದೆ. ಪ್ರಾಣಾಯಾಮದಲ್ಲಿರುವಾಗ ನಮ್ಮ ಮನಸ್ಸೂ ಯೋಚನೆಗಳಿಂದ ಮುಕ್ತವಾಗಿ ಸ್ವಚ್ಛವಾಗುತ್ತದೆ. ಮನಸ್ಸಿನಲ್ಲಿ ಸಣ್ಣ ಯೋಚನೆ ಇದ್ದರೂ ಪ್ರಾಣಾಯಾಮದ ಚರಮ ಸುಖ ಸಾಧ್ಯವಾಗುವುದಿಲ್ಲ. ಪೂರ್ಣ ಅನುಭವ ಸಾಧ್ಯವಾಗುವುದಿಲ್ಲ. ಶುಷ್ಕ ಮನಸ್ಸಿನ ಪರಿಣಾಮ ಮನಸ್ಸೂ ಸ್ವಚ್ಛವಾಗಿ ನಮ್ಮ ಮನಸ್ಸಿನ ಹೊಸ ಯೋಚನೆಗಳು ಹೆಚ್ಚು ಪ್ರಖರವಾಗುತ್ತದೆ. ಪ್ರಾಣಾಯಾಮ ಸ್ವಚ್ಛ ದೇಹದ ಸ್ವಚ್ಛಮನಸ್ಸಿನ ಪ್ರತೀಕ.
No comments:
Post a Comment