Sunday, December 15, 2024

ದೈವಾನುಗ್ರಹ


ಹಲವು ಸಲ ಇಂದಿನ ಮಕ್ಕಳು ಕೇಳುವುದುಂಟು ದೇವರು ಇದ್ದಾನೆಯೇ?  ಆಗ ನನ್ನ ಸರಳವಾದ ಉತ್ತರ, ಎಲ್ಲಿವರೆಗೆ ನಮ್ಮಲ್ಲಿ ಭಯ ಎಂಬುದು ಇರುವುದೋ ಅಲ್ಲಿ ತನಕ ದೇವರು ಇದ್ದಾನೆ. ನಿಜವಾಗಿಯೂ ಇಲ್ಲಿ  ಭಯ ಅಲ್ಲ ಭಕ್ತಿ ಎಂದಾಗಬೇಕು. ಎಲ್ಲಿ ತನಕ ಭಕ್ತಿ ಇರುವುದೋ ಅಲ್ಲಿ ತನಕ ದೇವರು ಇದ್ದಾನೆ. ವ್ಯಾವಹಾರಿಕವಾಗಿ ಎಲ್ಲಿ ಗ್ರಾಹಕರಿರುತ್ತಾರೋ ಅಲ್ಲಿ ವರ್ತಕರು ಇರುತ್ತಾರೆ.   ಆದರೆ ಈಗ ಭಕ್ತಿಯ ಬದಲು ಭಯವೇ ಹೆಚ್ಚಾಗಿದೆ. ದೇವರನ್ನು ನಂಬದೇ ಇದ್ದರೆ ದೇವರು ಏನು ಮಾಡಿಬಿಡುತ್ತಾನೋ ಎಂಬ ಆತಂಕದ ಭಯ.  ಯಾರು ಹೆಚ್ಚು ಅಪ್ರಾಮಾಣಿಕರೋ ಯಾರು ಹೆಚ್ಚು ಆತ್ಮ ವಂಚನೆ ಮಾಡಿಕೊಳ್ಳುವರೋ ಅವರಿಗೆ ಹೆಚ್ಚು ಭಯ. ಭಕ್ತ ಪ್ರಹ್ಲಾದನಂತೆ ಯಾರಲ್ಲಿ ಹೆಚ್ಚು ಭಕ್ತಿ ಇದೆಯೋ ಅವರು ತಮ್ಮ ಭಕ್ತಿಯ ಮೇಲಿನ ವಿಶ್ವಾಸದಲ್ಲಿ ನಿರಾತಂಕವಾಗಿರುತ್ತಾರೆ.  ಶ್ರೀ ಹರಿ ಉಗ್ರ ನರಸಿಂಹನಾಗಿ ಪ್ರತ್ಯಕ್ಷವಾಗಿ ಹಿರಣ್ಯ ಕಶ್ಯಪನನ್ನು ಸಂಹರಿಸಿದಾಗ ದೇವತೆಗಳೆಲ್ಲ ಆ ಉಗ್ರ ರೂಪ ಕಂಡು ಭಯ ಭೀತರಾಗಿ ನಿಂತು ಬಿಟ್ಟರಂತೆ. ಅವರಿಗೆ ನರಸಿಂಹ ಸ್ವರೂಪವನ್ನು ಕಾಣುವುದಕ್ಕೆ ಸಾಧ್ಯವಾಗಲಿಲ್ಲ.  ದೇವತೆಗಳೆಲ್ಲ ಪ್ರಹ್ಲಾದನಲ್ಲಿ ಕೇಳಿಕೊಂಡರು,    ನರಸಿಂಹ ಭಯಂಕರ ರೂಪವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಏನು ಮಾಡಲಿ?  ಆಗ ಪ್ರಹ್ಲಾದ ಹೇಳಿದನಂತೆ, ನೀವು ನರಸಿಂಹನ ಮೂರ್ತಿಯ ಮುಖವನ್ನೇಕೆ ನೋಡಬೇಕು. ಮುಖವನ್ನಲ್ಲ ನೋಡಬೇಕಾಗಿರುವುದು, ಆತನ ಪಾದಗಳನ್ನು ನೋಡಿ. ಭಯದ ಬದಲು ಭಕ್ತಿಇದ್ದಲ್ಲಿ ಮತ್ತು ಆ ಭಕ್ತಿಯ ಮೇಲೆ ವಿಶ್ವಾಸ ಇದ್ದಲ್ಲಿ ಭಯಕ್ಕೆ ಆಸ್ಪದವೇ ಇರುವುದಿಲ್ಲ. ಎಲ್ಲಿ ತನಕ ನಾವು ಸತ್ಯದ ಎದುರು ಶರಣಾಗುತ್ತೇವೋ ಅಲ್ಲಿ ತನಕ ನಾವು ಭಯ ಪಡುವ ಅಗತ್ಯವೇ ಇರುವುದಿಲ್ಲ. ಅದರೆ ನಾವು ದೇವರಲ್ಲಿ ಭಯವನ್ನು ಕಾಣುತ್ತೇವೆ. ಅದರ ಸ್ವರೂಪವೇ ಶನಿ ದೇವರು. ಬಹುಶಃ ಶನಿದೇವರನ್ನು ಭಯದಿಂದ ಕಾಣುವಷ್ಟು ಬೇರೆ ದೇವರನ್ನು ಕಾಣುವುದಿಲ್ಲ.

ನಮ್ಮೂರಲ್ಲಿ ಎಲ್ಲೂ ಇಲ್ಲದ ಶನಿದೇವಸ್ಥಾನ ಬೆಂಗಳೂರಲ್ಲಿ ಹಲವಿದೆ.  ಹತ್ತು ಹಲವು ದೇವಾಲಯ ಇದ್ದರೂ ಶನಿ ದೇವಸ್ಥಾನ ಯಾಕೆ ಇಲ್ಲ ಎಂದು ಹಲವು ಸಲ ಯೋಚನೆ ಬರುತ್ತದೆ. ಆದರೆ ಇಲ್ಲಿ ನಮ್ಮ ಮನೆಯ ಅಕ್ಕ ಪಕ್ಕದಲ್ಲೇ ಎರಡು ಮೂರು ಶನಿ ದೇವಾಲಯವಿದೆ. ಆ ರೀತಿಯಲ್ಲಾದರೂ ಮನುಷ್ಯ ಸನ್ಮಾರ್ಗದಲ್ಲಿ ನಡೆಯಲಿ ಎಂಬುದು ಉದ್ದೇಶವಾದರೂ ಹಲವು ಸಲ ಇದು ಆತ್ಮ ವಂಚನೆಗೆ ಎಡೆ ಮಾಡಿಕೊಟ್ಟಂತೆ ಭಾಸವಾಗುತ್ತದೆ.  ಒಂದು ವೇಳೆ ಶನಿದೇವ ಪೀಡೆ ಕೊಡುವುದಿಲ್ಲ ಎಂದು ಇರುತ್ತಿದ್ದರೆ ಹೀಗೆ ಭಯ ಹುಟ್ಟಿಕೊಳ್ಳುತ್ತಿತ್ತಾ ಎಂದು ಪ್ರಶ್ನೆ ಮೂಡುತ್ತದೆ. ಅಲ್ಲೆಲ್ಲಾ ಜನಸಂದಣಿಯನ್ನು ಕಾಣಬಹುದು. ಇದೊಂದು ರೀತಿಯಲ್ಲಿ ಭಯದ ಭಕ್ತಿ ಅಂತ ಅನ್ನಿಸಿಬಿಡುತ್ತದೆ. ಶನಿದೇವರನ್ನು ನಂಬದೇ ಇದ್ದರೆ, ಆತ ಏನು ಮಾಡಿಬಿಡುತ್ತಾನೋ ಎಂಬ ಭಯ. ಆಯ್ಯಾ ಶನಿದೇವ ನಮ್ಮನ್ನು ಪೀಡಿಸಬೇಡ ಎಂದು ಬೇಡಿಕೊಳ್ಳುವುದು,  ಇದೊಂದು ರೀತಿ ನಮ್ಮ ಕರ್ತವ್ಯ ಚ್ಯುತಿಗೆ ಅಭಯವನ್ನು ಅರಸಿಕೊಳ್ಳುವಂತೆ .    ಉಳಿದೆಲ್ಲ ಗ್ರಹಗಳಿಗಿಂತಲೂ ಭಯ ಭಕ್ತಿ ಶನಿದೇವರ ಮೇಲೆ ಮೂಡುತ್ತದೆ. ಆದರೆ ದೇವರ ದರ್ಶನಕ್ಕೆ ಸರದಿ ನಿಲ್ಲುವಾಗಲೇ ಜಗಳವಾಡುವಂತೆ, ನಮ್ಮ ಆತ್ಮವಂಚನೆ ಆರಂಭವಾಗುತ್ತದೆ.   

ಯಾವಾಗ ನಮ್ಮ ಕರ್ತವ್ಯವನ್ನು ನಾವು ಮರೆತು ಕರ್ಮ ಅಂದರೆ ಕರ್ತವ್ಯ ಭ್ರಷ್ಥರಾಗುತ್ತೇವೋ ಆಗ ಶನಿದೇವ ಪೀಡಿಸುವುದಕ್ಕೆ ತೊಡಗುತ್ತಾನೆ. ಶನಿದೇವ ಎಂದಿಗೂ ನನ್ನ ಪೂಜಿಸು ಅಂತ ಹೇಳುವುದಿಲ್ಲ. ಬದಲಿಗೆ ಪರಮಾತ್ಮನನ್ನು ಮರೆಯಬೇಡ ಅಂತ ಪ್ರಚೋದಿಸುತ್ತಾನೆ. ಪರಮಾತ್ಮನನ್ನು ಮರೆಯುವುದೆಂದರೆ ನಮ್ಮ ಕರ್ತವ್ಯದಿಂದ ನಾವು ವಿಮುಖರಾದಂತೆ.  ಪ್ರತಿ ಕ್ಷಣವೂ ಭಗವಂತನ ಸ್ಮರಣೆಯನ್ನು ತರಿಸುವವನೇ ಶನಿದೇವ. 

ಶನಿ ವಕ್ರಿಸಿದಾಗ ಸಹಜವಾಗಿ ನಾವು ಭಯ ಪಡುತ್ತೇವೆ. ಅದೇನೋ ಭಯ ಬಿಡದೇ ಮನಸ್ಸನ್ನು ಆವರಿಸುತ್ತದೆ. ನಮ್ಮ ಆತ್ಮಸ್ಥೈರ್ಯ ಕುಗ್ಗಿ ಹೋಗುತ್ತದೆ. ಪ್ರತಿಯೊಂದು ಅಪಜಯಕ್ಕೂ ಅದೇ ಕಾರಣವಾಗಿ ಭಾಸವಾಗುತ್ತದೆ. ಶನಿ ಎಂದರೆ ನಮ್ಮ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವ ದೈವ. ಆಗ ಮೊದಲಿಗೆ ನಮ್ಮ ಅತ್ಮ ಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ದೈವಾನುಗ್ರಹ ಒದಗಿಬರಬೇಕು. ದೈವಾನುಗ್ರಹ ಒದಗಿಬರುವುದು ನಮ್ಮ ನಿತ್ಯ ಕರ್ಮಗಳಲ್ಲಿ. ಸಂಧ್ಯಾವಂದನೆ, ಪರಮಾತ್ಮನ ನಾಮಸ್ಮರಣೆ ಇವುಗಳಿಂದ ದೈವಾನುಗ್ರಹ ಜಾಗೃತವಾಗಿರುತ್ತದೆ.  ಶನಿ ವಕ್ರಿಸಿದಾಗ ಹಲವು ಸಲ ಇದನ್ನೆಲ್ಲ ಮಾಡಬೇಕೆಂದಿದ್ದರೂ ನಮಗೆ ಅವಕಾಶ ಒದಗಿಬರುವುದಿಲ್ಲ. ಸಮಯ ಸಂದರ್ಭಗಳೆಲ್ಲ ಇದೆಕ್ಕೆ ವಿರುದ್ದವಾಗಿರುತ್ತದೆ. ಮಾಡಲೇ ಬೇಕಾದ ಕೆಲಸವನ್ನು ಮಾಡುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅ   ಆಗ ಪ್ರತಿಕೂಲ ಪರಿಸ್ಥಿತಿಯನ್ನು ಮೆಟ್ಟಿನಿಲ್ಲಬೇಕು. ಮಾಡಲೇ ಬೇಕಾದುದನ್ನು ಮಾಡಿಬಿಡಬೇಕು.  ಅದೇ ನಮ್ಮ ಬದ್ದತೆ. ಅದೇ  ಕರ್ತವ್ಯ ಪ್ರಜ್ಞೆ. 

ಸಂಧ್ಯಾವಂದನೆ ಅದು ಕೇವಲ ಒಂದು ಜಾತಿ ವರ್ಗಕ್ಕೆ ಸೀಮಿತವಲ್ಲ. ಸಂಧಿಕಾಲದಲ್ಲಿ ಮಾಡಬೇಕಾದ ಭಗವಂತನ ಸ್ಮರಣೆ. ಅದು ಅರ್ಘ್ಯ ಜಪ ಆಗಿರಬಹುದು, ಇಲ್ಲಾ ಕೇವಲ ನಾಮಸ್ಮರಣೆ ಧ್ಯಾನ ಭಜನೆಯೂ ಆಗಬಹುದು. ಪಡೆದುಕೊಂಡು ಬಂದ ಸಂಸ್ಕಾರಕ್ಕೆ ಸೀಮಿತವಾಗಿ ಆಚರಿಸುವುದೇ ಸಂಧ್ಯಾವಂದನೆಯಾಗುತ್ತದೆ. ಇದರಲ್ಲಿ ಯಾವುದು ಹೆಚ್ಚೂ ಇಲ್ಲ ಯಾವುದು ಕಡಿಮೆಯೂ ಇಲ್ಲ. ಎಲ್ಲವೂ ಭಗವಂತನಿಗೆ ಪ್ರಿಯ.    ದೇವಾಲಯ , ಯಜ್ಞ ಯಾಗ ಯಾವ ಸತ್ಕಾರ್ಯವಾದರೂ ನಿತ್ಯಕರ್ಮವನ್ನು ಹೊರತು ಪಡಿಸಿದರೆ ಅದಕ್ಕೆ ಮೌಲ್ಯವಿರುವುದಿಲ್ಲ.  ಪೂಜೆ ಪುನಸ್ಕಾರಗಳು ಅನ್ಯ ಆರಾಧನೆಗಳು ವೃತವಾಗುತ್ತದೆ.  ಸಂಧ್ಯಾ ವಂದನೆ ಅಥವಾ ನಿತ್ಯ ಪ್ರಾರ್ಥನೆ ಅದು ಮಾಡಲೇಬೇಕಾದ ಕರ್ಮ.  ವೃತ ಮತ್ತು ಕರ್ಮ ಎರಡೂ ಭಿನ್ನ. ಭಿಕ್ಷುಕನಿಗೆ ಅನ್ನ ಹಾಕಿ ದಾನ ಮಾಡುವುದು ವೃತವಾಗುತ್ತದೆ. ಅದೇ ವೃದ್ದ ತಂದೆ ತಾಯಿಗೆ ಅನ್ನ ಹಾಕುವುದು ಕರ್ತವ್ಯವಾಗಿ ಕರ್ಮವಾಗುತ್ತದೆ. ದೈವಾನುಗ್ರಹ ಸಿಗುವುದು ನಿತ್ಯ ಕರ್ಮಗಳಲ್ಲಿ. ಸಂಧ್ಯಾವಂದನೆಯಲ್ಲಿ. ಇದರಲ್ಲಿ ಪ್ರಾಪ್ತಿಯಾಗುವ ಅನುಗ್ರಹ ಬೇರೆ ಯಾವುದರಲ್ಲೂ ಪ್ರಾಪ್ತಿಯಾಗುವುದಿಲ್ಲ. 

ಸಂಧ್ಯಾವಂದನೆ ಕಣ್ಣು ಮುಚ್ಚಿ ಜಗತ್ತಿನ ಆಗು ಹೋಗುಗಳಿಂದ ದೂರವಾಗಿ  ಮಾಡುವ ಅಂತರ್ಮುಖೀ ವೃತ್ತಿ. ಇಲ್ಲಿ ದೇವರನ್ನು ಕಾಣಬಹುದು. ದೇವರನ್ನು ಕಾಣುವುದಕ್ಕೆ ಬೇರೇನೂ ಬೇಡ ದೇವರ ಹಾಗೆ ಚಿಂತಿಸಿ. ನಮ್ಮ ಚಿಂತನೆ ಅದು ದೇವರಂತೆ ಚಿಂತಿಸಬೇಕು. ನಮ್ಮ ಅಂತರಂಗದಲ್ಲೇ ಹುಡುಕಬೇಕು. ಅದೇ ಪರಮ ಪವಿತ್ರ ದೇವರು.  ನಮ್ಮ ಮಟ್ಟಿಗೆ ನಮ್ಮ ಅಂತರಂಗದಷ್ಟು ಪವಿತ್ರ ಸ್ಥಳ ಬೇರೊಂದಿಲ್ಲ.  ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯ,  ಎನ್ನ ಕಾಲೇಕಂಬ ಶಿರವೇ ಹೊನ್ನ ಕಲಶವಯ್ಯ ಅಂತ ಹೇಳಿದ ಹಾಗೆ ನಮ್ಮ ಹೃದಯ ಭಗವಂತನ ಪವಿತ್ರ ಸ್ಥಾನ. ಅಂತಹ ದೇವರಿಗೆ ಭಯ ಪಡುವುದೆಂದರೆ ನಮಗೆ ನಾವೇ ಭಯ ಪಟ್ಟಂತೆ. ದೇವರೆಂದರೆ ಏಕೆ ಭಯ ಪಡಬೇಕು? ಸಕಲ ಭಯ ನಿವಾರಕ ಅಂತ ನಾವು ಭಗವಂತನನ್ನು ಕಾಣುವಾಗ ಅದೇ ಭಗವಂತ ಭಯೋತ್ಪಾದಕ ಹೇಗಾಗುತ್ತಾನೆ?    ಭಯ ಪಡಬೇಕಾಗಿರುವುದು ನಿಯಮದಲ್ಲಿ ಇಲ್ಲದ ದುಷ್ಟ ಶಕ್ತಿಗಳಿಗೆ. ಭೂತ ಪ್ರೇತಾದಿ ದೆವ್ವಗಳಿಗೆ. ದೇವರಿಗೆ ಭಯ ಪಡುವ ಅವಶ್ಯಕತೆ ಇಲ್ಲ. ಕೇವಲ ಭಕ್ತಿ ಗೌರವ ನಿಷ್ಠೆ ಇದ್ದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. 

ಭಯದಿಂದ ಹುಟ್ಟುವ ಭಕ್ತಿ,  ಭಯ ಕರಗಿ ನಾಶವಾಗುವ ತನಕ ಇರುತ್ತದೆ. ಒಬ್ಬ ದೇವಾಲಯ ಕಟ್ಟಿದನಂತೆ. ರಾತ್ರೋ ರಾತ್ರಿ ಅದನ್ನು ಪೂರ್ಣ ಗೊಳಿಸಿ ಭಾಗಿಲು ಹಾಕಿ ಹೋದನಂತೆ. ಊರವರೆಲ್ಲ ನೋಡುತ್ತಾರೆ ದೇವಾಲಯ ಎದ್ದು ನಿಂತಿದೆ. ಎಲ್ಲರೂ ಮುಚ್ಚಿದ ಬಾಗಿಲು ತೆರೆಯದೆ ಹೊರಗಿನಿಂದಲೇ ಭಯ ಭಕ್ತಿಯಿಂದ ನಮಸ್ಕರಿಸುತ್ತಾರೆ. ಅವರಲ್ಲೊಂದು ಭಯವಿರುತ್ತದೆ. ನಮಸ್ಕರಿಸದಿದ್ದರೆ ಏನಾಗಿಬಿಡುವುದೋ ಎಂಬ ಅತಂಕವಿರುತ್ತದೆ. ಒಂದು ದಿನ ಒಬ್ಬಾತ ಅದರ ಬಾಗಿಲು ತೆಗೆದು ನೋಡಿದ. ಅಲ್ಲೇನು ಇದೆ? ದೇವರ ಮೂರ್ತಿ ಇಲ್ಲ. ಅಲ್ಲಿ ಕಟ್ಟಿದವನು ಬಿಟ್ಟು ಹೋದ  ತುಕು ಹಿಡಿದ ಹಾರೆ ಗುದ್ದಲಿ ಇರುತ್ತದೆ. ಅಷ್ಟೆ ಅದುವರೆಗೆ ಇದ್ದ ಭಯ ಹೋಯಿತು. ಭಕ್ತಿ ತಾನಾಗಿ ದೂರವಾಯಿತು.  ನಮ್ಮ ಅಮ್ಮ ಒಂದು ದಿನ ಹೇಳಿದರು ಮೊದಲೆಲ್ಲ ಹಿರಿಯರೆಂದರೆ ಎಷ್ಟು ಭಯ ಭಕ್ತಿ ಗೌರವ ಇರುತ್ತಿತ್ತು. ಈಗ ಕಾಲ ಬದಲಾಗಿದೆ. ಯಾರಿಗೂ ಭಯವೂ ಇಲ್ಲ ಭಕ್ತಿಯೂ ಇಲ್ಲ ಗೌರವ ಪ್ರೀತಿಯೂ ಇಲ್ಲ. ಅವರು ಹೇಳಿದ್ದರಲ್ಲಿ ಅರ್ಧ ಸತ್ಯಾಂಶ ಇದೆ. ನಾನು ಹೇಳಿದೆ ಭಯದಿಂದ ಹುಟ್ಟಿದ ಗೌರವ ಭಯ ನಾಶವಾಗುವ ತನಕ ಇರುತ್ತದೆ. ನಮ್ಮ ಅಪ್ಪ ಅಜ್ಜ ಹೀಗೆ ಹಿರಿಯರಾದಿಯಾಗಿ ಎಲ್ಲರೆಂದರೆ ನಮಗೆ ಭಯ. ಅವರು ಮನೆಯಲ್ಲಿದ್ದರೆ ನಾವು ಉಸಿರೆತ್ತುವ ಹಾಗಿಲ್ಲ. ಧ್ವನಿಯೆತ್ತಿ ಮಾತನಾಡುವ ಹಾಗಿಲ್ಲ. ಅದನ್ನೇ ಅವರು ಗೌರವ ಅಂತ ತಿಳಿದುಕೊಂಡಿದ್ದರು. ಆದರೆ ಆ ಭಯ ಎಲ್ಲಿಯ ತನಕ? ನಾವು ಮಕ್ಕಳಾಗಿರುವ ತನಕ... ಅದು ಕಳೆದು ದೊಡ್ಡವರಾದ ನಂತರ ನಮಗೆ ಲೋಕ ಅರಿವಾಗುತ್ತದೆ. ಸಹಜವಾಗಿ ಭಯ ದೂರವಾಗುತ್ತದೆ. ಅಪ್ಪ ಅಜ್ಜ ಎಂಬ ಭಯ ದೂರವಾಗುತ್ತದೆ. ಮತ್ತೆ ಅಲ್ಲಿ ಪ್ರೀತಿ ಎಲ್ಲಿ ಉಳಿಯುತ್ತದೆ? ಒಂದು ಸಲ ಹಿರಿಯರು ಈ ಭಯವನ್ನು ಸೃಷ್ಟಿಸುವ ಬದಲು ಸಲುಗೆ ಪ್ರೀತಿಯಿಂದ ಆತ್ಮೀಯತೆಯಿಂದ ವ್ಯವಹರಿಸಲಿ. ಆಗ ಹುಟ್ಟಿಕೊಳ್ಳುವ ಪ್ರೀತಿ ಅದು ವಯಸ್ಸು ಕಳೆದರೂ ಶಾಶ್ವತವಾಗಿರುತ್ತದೆ. ನನ್ನ ಅಪ್ಪ ನನ್ನ ಅಜ್ಜ ಎಂಬ ಪ್ರೀತಿ ಗೌರವ ಯಾರ ಅಪ್ಪಣೆಗೂ ಕಾಯದೆ ಸ್ಥಿರವಾಗಿ ಉಳಿಯುತ್ತದೆ. ಮಕ್ಕಳಲ್ಲಿ ಭಯ ಹುಟ್ಟಿಸಿ ಪಡೆದ ಪ್ರೀತಿ ಗೌರವ ಮಕ್ಕಳು ದೊಡ್ಡವರಾಗುವಾಗ ನಾಶವಾಗುತ್ತದೆ. ಯಾವಾಗ ಮನೆಯಲ್ಲಿ ಹಿರಿಯರ ಅಸ್ತಿತ್ವ ಇರುಸು ಮುರಿಸಿನಿಂದ ಬಂಧನಕ್ಕೆ ಕಾರಣವಾಗುತ್ತದೋ ಆಗ ಅಲ್ಲಿ ಗೌರವ ಪ್ರೀತಿ ಇರುವುದಕ್ಕೆ ಸಾಧ್ಯವಿರುವುದಿಲ್ಲ. ಕೇಳಿ ಪಡೆಯುವ ಪ್ರೀತಿಯಲ್ಲಿ ಕೇಳದೇ ಪಡೆಯುವ ದ್ವೇಷವೂ ಅಡಗಿರುತ್ತದೆ. 

ವರ್ಷವಿಡೀ ನೀರೆರೆಯದ  ಗಿಡಕ್ಕೆ ಒಣಗಿದಾಗ  ವರ್ಷಕ್ಕೆ ಒಂದು ಬಾರಿ ಕೊಡ ತುಂಬ ನೀರೆರದೆರೆ ಅದು ಚಿಗುರಬಹುದೇ ? ನಿತ್ಯ ಪೂಜೆ ಅಥವಾ ನಿತ್ಯ ಕರ್ಮಗಳು ನಿತ್ಯ ಗಿಡಕ್ಕೆ ನೀರು ಎರೆದಂತೆ. ವರ್ಷವಿಡೀ ನಾವು ನಿತ್ಯ ಕರ್ಮಗಳನ್ನು ಮಾಡದೆ ಯಾವಗಲೋ ಒಮ್ಮೆ ಕಾಶಿಗೆ ಹೋಗಿ ಪಾಪ ಪರಿಹಾರ ಮಾಡಿಬಿಡುತ್ತೇನೆ ಎಂದುಕೊಂಡರೆ ಸಾಧ್ಯವಾಗುವುದಿಲ್ಲ. ನಿತ್ಯ ಕರ್ಮ ಎಂಬುದು ಕರ್ತವ್ಯ, ಅದನ್ನು ಮಾಡದ ಕರ್ತವ್ಯ ಭ್ರಷ್ಟತೆ ಯಾವ ಕ್ಷೇತ್ರ ದರ್ಶನ ಮಾಡಿದರೂ ಪರಿಹಾರವಾಗುವುದಿಲ್ಲ.  ಮನೆಯಲ್ಲಿ ನಿತ್ಯ ಒಂದು ದೀಪ ಹಚ್ಚಿ ಕೈಮುಗಿದರೂ ಅದು ತೀರದ ಪಾಪವನ್ನು ಪರಿಹರಿಸಿ ಭಗವಂತನ ಸಾನ್ನಿಧ್ಯ ನಿತ್ಯ ದೊರಕುವಂತೆ ಮಾಡಿಬಿಡುತ್ತದೆ. ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುವುದು ವೃತವಾದರೆ ನಿತ್ಯ ಮನೆಯಲ್ಲಿ ಆಚರಿಸುವುದು ಕರ್ತವ್ಯವಾಗಿಬಿಡುತ್ತದೆ. ವೃತ ಹಾಗೂ ಕರ್ಮದ ನಡುವೆ ವೆತ್ಯಾಸವಿದೆ. ಮನೆ ಬಾಗಿಲಿಗೆ ಬಂದ ಭಿಕ್ಷುಕನಿಗೆ ಅನ್ನ ಕೊಡುವುದು ದಾನವಾದರೆ, ಹೆತ್ತ ಅಮ್ಮನಿಗೆ ಆಹಾರ ಕೊಡುವುದು ಕರ್ತ್ಯವ್ಯವಾಗುತ್ತದೆ. ಅದೇ ರೀತಿ ನಮ್ಮ ಕರ್ತವ್ಯ ಮೊದಲು ಪಾಲಿಸಲ್ಪಡಬೇಕು.  

ಮೊನ್ನೆ ಮೊನ್ನೆ ರಚನೆಯಾದ ರಾಷ್ಟ್ರ ಗೀತೆ ಕೇಳುವಾಗ ಗೌರವ ಶ್ರಧ್ದೆಯಿಂದ ಎದ್ದು ನಿಲ್ಲುತ್ತೇವೆ. ಆ ಪ್ರಜ್ಞೆ ನಮ್ಮ ಧಾರ್ಮಿಕ ಕಾರ್ಯಗಳಲ್ಲಿ ಇಲ್ಲ. ಆನಾದಿ ಕಾಲದಿಂದ ನಮ್ಮವರೆಗೆ ಬಂದ ವೇದ ಮಂತ್ರ ಶ್ಲೋಕಗಳನ್ನು ಜಪಿಸುವಾಗ ಒಂದಿಷ್ಟು ಶ್ರದ್ಧೆ ಬೆಳೆಸಿದರೆ ಮುಂದಿನ ಪೀಳಿಗೆಗೆ ನಾವುಕೊಡುವ ದೊಡ್ಡ ಕೊಡುಗೆಯಾಗುತ್ತದೆ. ಈ ವೇದ ಮಂತ್ರಗಳು ಯಾವಾಗ ಹುಟ್ಟಿಕೊಂಡಿತು ಅದು ನಿಖರವಾಗಿ ತಿಳಿದಿಲ್ಲ. ಆದರೂ ಅದು ನಮ್ಮ ತನಕ ಬಂದು ನಿಂತಿದೆ.  ನಮ್ಮ ಹಿರಿಯರಿಂದ ನಮ್ಮಲ್ಲಿ ತನಕ ಬಂದ ಈ  ಗಾಯತ್ರಿ ಮಂತ್ರ ಅಥವ ಯಾವುದೋ ಸ್ತುತಿಯಾಗಿರಬಹುದು ಅದು ಯಾವಾಗ ರಚಿಸಲ್ಪಟ್ಟಿತೋ ಗೊತ್ತಿಲ್ಲ. ಎಲ್ಲಿ ಬರೆದಿಡಲಾಗಿದೆ ಗೊತ್ತಿಲ್ಲ. ಆದರೂ ಅದು ನಮ್ಮಲ್ಲಿವರೆಗೆ ಉಳಿದು ಬಂದಿದೆ. ಆದರೂ ಅದರ ಬಗ್ಗೆ ನಮಗೆ ಲಕ್ಷ್ಯವಿಲ್ಲ. ಕಾಟಾಚಾರಕ್ಕೆ ಅಥವಾ ಭಯದಿಂದ ನಾವು ಇವುಗಳನ್ನು ಅನುಸರಿಸುವ ಹಾಗಿಲ್ಲ. ಒಂದು ವೇಳೆ ಭಗವಂತ ನಮ್ಮನ್ನು ಇದೇ ರೀತಿ ಕಾಟಾಚರಕ್ಕೆ ಕಂಡರೆ ಅದಕ್ಕೆ ಪರಿಹಾರ ವಿರುವುದಿಲ್ಲ. ಭಗವಂತ ಕಾಟಾಚಾರಕ್ಕೆ ನಮ್ಮನ್ನು ಕಾಣಲಾರ ಎಂಬ ವಿಶ್ವಾಸ ನಮಗೆ ಇರುವುದರಿಂದ ನಾವು ಭಗವಂತನನ್ನು ಭಯದಿಂದ ಕಾಣುತ್ತೇವೆ. 

ಭಯವಿದ್ದರೆ ನಾವು ನಮ್ಮ ಹೆತ್ತ ಅಮ್ಮನ ಬಳಿಗೆ ಹೋಗುವುದು ಹೇಗೆ ಸಾಧ್ಯವಿಲ್ಲವೋ , ಅದೇ ರೀತಿ ಭಗವಂತನನ್ನು ನಾವು ಭಯದಿಂದ ಕಂಡರೆ ಆತನ ಬಳಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಬದುಕಿನ ಪರಮ ಗುರಿಯತ್ತ ನಮಗೆ ಹೋಗುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಬೇರೆ ಯಾವ ಕಡೆಗೆ ಹೋದರೂ ಬದುಕು ಸಾರ್ಥಕವಾಗುವುದಿಲ್ಲ. ಭಗವಂತ ನಮಗೆ ಕೊಟ್ಟ ಬದುಕಿನ ಬಗ್ಗೆ ನಮಗೆ ಅಭಿಮಾನವಿರಬೇಕು. ಅದರ ಬಗ್ಗೆ ಕೃತಜ್ಞತಾ ಭಾವವಿದ್ದರೆ ಭಕ್ತಿ ಜಾಗೃತವಾಗಿರುತ್ತದೆ. ಭಕ್ತಿ ಶ್ರಧ್ದೆಯಿಂದ ಕೂಡಿರಬೇಕು. ಅದು ಯಾವುದೇ ಭ್ರಮೆಗೆ ಒಳಗಾಗಿ ಪರತಂತ್ರವಾಗಿರಬಾರದು. ದುಃಖ ಸಂತೋಷ ನಗು ಅಳು ಈ ಎಲ್ಲ ಭಾವೋದ್ರೇಕದಿಂದ ಹೊರತಾಗಿ ಭಕ್ತಿ ನಿರ್ವಿಕಲ್ಪ ಭಾವದಿಂದ ನಿಸ್ವಾರ್ಥದಿಂದ ಕೂಡಿರಬೇಕು. ಯಾವುದೇ ಭಾವದಲ್ಲಿ ಇರುವ ಭಕ್ತಿ ಪರಿಪೂರ್ಣವಾಗುವುದಿಲ್ಲ.  ಯಾವುದೇ ಸ್ವಾರ್ಥಾಪೇಕ್ಷೆಯ ಪ್ರಭಾವದಲ್ಲಿ ಇರುವ ಭಕ್ತಿ ನಿರ್ವಿಕಲ್ಪವಾಗಿರುವುದಿಲ್ಲ.  ಭಕ್ತಿ ಎಂದರೆ ಅದು ಲಕ್ಷ್ಯ. ಭಗವಂತನ ಕಡೆಗೆ  ಇರುವ ಲಕ್ಷ್ಯ.