Sunday, December 29, 2024

ಅನ್ನ ಬ್ರಹ್ಮ ಮುನಿದಾಗ.....

                 ತಲೆ ಬರಹ ವಿಚಿತ್ರವಾಗಿದೆ. ಆದರೆ ಮೊನ್ನೆ ಬೆಳಗ್ಗೆ ಆದ ದುರ್ಘಟನೆ ಯೋಚಿಸುವಾಗ ಹೀಗೆ ಅನಿಸುತ್ತದೆ. ನಮ್ಮ ತೀರ ಪಕ್ಕದ ಮನೆ ಅಂದರೆ ನಮ್ಮ ಮನೆಗೂ ಆ ಮನೆಗೂ ಇರುವ ಅಂತರ ಒಂದು ಗೋಡೆ ಮಾತ್ರ. ನಮ್ಮ ಮನೆಯಿಂದ ಎರಡು ಅಡಿಯ ಬಡಿಗೆ ಹಾಕಿದರೆ ಆ ಮನೆಯ ಒಳಗೆ ತೂರಿಬಿಡುತ್ತದೆ. ಬೆಂಗಳೂರಲ್ಲಿ ಇದು ವಿಶೇಷವಲ್ಲ. ಆ ಮನೆಯಲ್ಲಿ ಇದ್ದಕ್ಕಿದ್ದಂತೆ  ದೊಡ್ಡ ಸದ್ದು ಎದೆ ಬಿರಿಯುವಂತೆ ಕೇಳಿಸಿತು. ಅದೊಂದು ಸ್ಫೋಟವೋ ಏನೋ ಅಂತ ತಿಳಿಯುವುದಕ್ಕೆ ಕೆಲವು ಘಳಿಗೆಗಳೇ ಬೇಕಾಯಿತು. ಎರಡು ಬದಿಯಲ್ಲಿದ್ದ ಗಾಜಿನ ಕಿಟಿಕಿಗಳು ಸಿಡಿದು ಗಾಜುಗಳ ಚೂರುಗಳು ಛಿದ್ರ ಛಿದ್ರವಾಗಿ ರಸ್ತೆಗೆ ಪಕ್ಕದ ಮನೆಗೆ ಮಳೆಯಂತೆ ಬಿದ್ದು ಬಿಟ್ಟಿತು. ಏನಾಯಿತು ಅಂತ ಯೋಚಿಸುವ ಮೊದಲೇ ಆ ಮನೆಯಿಂದ ಹೆಣ್ಣಿನ ಆಕ್ರಂದನ ಎದೆ ಬಿರಿಯುವಂತೆ ಕೇಳಿಸಿತು. ನಮ್ಮ ಮನೆಯಲ್ಲಿ ಏನಾದರೂ ಆಯಿತಾ ಅಂತ ನಾವು ಆತಂಕಗೊಂಡೆವು. ನಮ್ಮದು ಮೂರು ಮಹಡಿಯ ಮನೆ. ಮೊದಲ ಮಹಡಿಯಲ್ಲಿ ಅಡುಗೇ ಕೋಣೆ. ನಾವೆಲ್ಲ ಎರಡನೇ ಮೂರನೆ ಮಹಡಿಯಲ್ಲಿದ್ದರೆ ಬೆಳಗ್ಗೆ ತಾಯಿ ಅಡುಗೆ ಮನೆಯಲ್ಲಿರುತ್ತಾರೆ. ತಾಯಿಗೆ ಏನಾದರೂ ಆಯಿತಾ ಅಂತ ನನಗೆ ಗಾಬರಿ. ಆದರೆ ಆಕ್ರಂದನ ಕೇಳಿಸಿದ್ದು ಪಕ್ಕದ ಮನೆಯಿಂದ ಅಂತ ಅರಿವಾಗಿ ಹೊರಗೆ ಬಂದು ಪಕ್ಕದ ಮನೆ ನೋಡಿದರೆ ದೊಡ್ಡ ಬಾಂಬ್ ವಿಸ್ಪೋಟಿಸಿದ ಹಾಗೆ ಕಿಟಿಕಿ ಬಾಗಿಲು ಹಾರಿ ಹೋಗಿತ್ತು. ಅಬ್ಬಾ ಅದೇನು ಸದ್ದು. ಇನ್ನೂ ಎರಡು ದಿನ ಕಳೆದರೂ ಆ ಸದ್ದಿನ ಧ್ವನಿ ಮಾರ್ದನಿಸುತ್ತದೆ. 




                ರಸ್ತೆಯ ಎಲ್ಲಾ ಮನೆಯವರು ಹೊರಗೆ ಬಂದು ನಮ್ಮ ಮನೆಯತ್ತ ನೋಡಿ ಏನಾಯಿತು ಅಂತ ಕೇಳಿದರೆ ಇನ್ನು ಕೆಲವರು ಮನೆಯ ಕೆಳಗೆ ಬಂದು ಮೇಲಕ್ಕೆ ನೋಡುತ್ತಾರೆ. ನಮ್ಮ ಪಕ್ಕದ ಮನೆಯೂ ಎರಡು ಮಹಡಿಯ ಮನೆ. ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿ ಆನಾಹುತ ನಡೆದು ಹೋಗಿದೆ. ನಾನು ಬಗ್ಗಿ ಆ ಮನೆಯ ಕಿಟಿಕಿ ಒಳಗೆ ನೋಡಿದೆ. ಎಲ್ಲರೂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದೆ ಅಂತ ತಿಳಿದಿದ್ದರು. ಬಗ್ಗಿ ನೋಡುವುದಕ್ಕೂ ಭಯ. ಕೆಳಗೆ ಮನೆಯ ಮೆಟ್ಟಿಲಲ್ಲೆ ಗೇಟ್ ಬಿಗ ಹಾಕಿದ ಕಾರಣ ಯಾರೂ ಮೇಲೆ ಹೋಗುವಂತಿರಲಿಲ್ಲ. ನಾನು ಬಗ್ಗಿ ನೋಡಿದಾಗ ಅಲ್ಲಿನ ಅಡುಗೆ ಕೋಣೆಯಲ್ಲಿ ಗ್ಯಾಸ್ ಸ್ಟೌ ಉರಿಯುತ್ತಾ ಇದ್ದ ಕಾರಣ ಅದು ಗ್ಯಾಸ್ ಸಿಲಿಂಡರ್ ಅಲ್ಲಾ ಅಂತ ಖಾತರಿಯಾಯಿತು. 

            ಮನೆಯೊಳಗಿನ ದೃಶ್ಯ ನೋಡಿದಾಗ  ಕುಕ್ಕರ್ ಮುನಿದರೆ ಹೇಗಿರುತ್ತದೆ ಎಂದು ಅರಿವಿಗೆ ಬಂತು. ಚೆಲ್ಲಾಪಿಲ್ಲಿಯಾಗಿ ಬಿದ್ದ ಮನೆಯ ವಸ್ತುಗಳು ಬಾಗಿಲೊಂದು ಮುರಿದು ಕಿತ್ತು ಮುರಿದು ಬಿದ್ದಿತ್ತು. ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿತ್ತು. ಗಾಜಿನ ಚೂರು ಎಲ್ಲೆಂದರಲ್ಲಿ ಬಿದ್ದಿತ್ತು. ಅಚ್ಚರಿ ಎಂದರೆ ಅಡಿಗೆ ಕೋಣೆಯಲ್ಲಿದ್ದ ಮಹಿಳೆಗೆ ಗಾಯ ವಾಗಿದ್ದು ಬಿಟ್ಟರೆ ಅಲ್ಲಿದ್ದ ಪುಟ್ಟಮಗುವಿಗೆ ಮತ್ತು ಉಳಿದವರಿಗೆ  ಯಾವ ಗಾಯವೂ ಆಗಿರಲಿಲ್ಲ. 



              
 
ಎಲ್ಲರಿಗೂ ಕುಕ್ಕರ್ ಯಾಕೆ ಸ್ಫೋಟಗೊಂಡಿತು ಎಂಬುದು ಅಚ್ಚರಿಯಾಗಿತ್ತು. ಪ್ರತಿಯೊಂದು ಮನೆಯಲ್ಲೂ ಅತ್ಯಾವಶ್ಯಕ ಸಾಧನವೆಂದರೆ ಅದು ಕುಕ್ಕರ್. ಮನೆಯಾಗಿಯ ಬಿಸಿಯುಸಿರಿನ ಸ್ಪಂದನವೆಂದರೆ ಕುಕ್ಕರ್. ಅದು ಈ ಬಗೆಯಲ್ಲಿ ಮುನಿದರೆ ಮಾಡುವುದೇನು. ನಮ್ಮ ಮನೆಯಲ್ಲಿ ಕುಕ್ಕರ್ ಅಷ್ಟೊಂದು ಬಳಸುವುದಿಲ್ಲ. ತೀರ ಅನಿವಾರ್ಯವೆಂದಾದರೆ ಕೆಲವೊಮ್ಮೆ ಕಾಳುಗಳನ್ನು ಬೇಯಿಸುವುದಕ್ಕೆ, ಕುಚ್ಚಿಲಕ್ಕಿ ಗಂಜಿ ಮಾಡುವುದಕ್ಕೆ  ಉಪಯೋಗಿಸುವುದುಂಟು. ಉಳಿದಂತೆ ಎ ಎಂ ಸಿ ಕುಕ್ ವೆರ್  ಪಾತ್ರಗಳು ಹೆಚ್ಚು ಸುರಕ್ಷಿತವಾಗಿರುವುದರಿಂದ ಅದನ್ನೇ ಹೆಚ್ಚು ಉಪಯೋಗಿಸುತ್ತೇವೆ. ಆದರೂ ಅಗೊಮ್ಮೆ ಈಗೊಮ್ಮೆ  ಕುಕ್ಕರ್ ಉಪಯೋಗಿಸುವ ನಮಗೂ ಆತಂಕವಾಗಿದ್ದು ಸುಳ್ಳಲ್ಲ. ಆದರೆ ಅಲ್ಲಿ ಕುಕ್ಕರ್ ಸಿಡಿದ ಪರಿಣಾಮ ನಮ್ಮಮ್ಮ ಇದ್ದಾ ಎರಡು ಕುಕ್ಕರ್ , ಅದೂ ಇತ್ತೀಚೆಗೆ ಕೊಂಡು ತಂದ ಕುಕ್ಕರನ್ನು ತೆಗೆದು ಮೇಲೆ ಹಾಕಿಬಿಟ್ಟರು. ಈಗ ಎಲ್ಲವನ್ನು ಕುಕ್ ವೇರ್ ನಲ್ಲಿ ಮಾಡುತ್ತಿದ್ದೇವೆ. ಕುಕ್ ವೇರ್ ನಲ್ಲಿ ಮಾಡಿದ ಅಡುಗೆ ಅದ್ಭುತ ರುಚಿಯಿಂದ ಕೂಡಿರುತ್ತವೆ. 

            ಕುಕ್ಕರ್ ಗೆ ಸೇಪ್ಟಿ ವಾಲ್ವ್ ಇದ್ದರೂ ಅದು ಹೇಗೆ ಸಿಡಿಯಿತು ಎಂದು ಅಚ್ಚರಿಯಾಗಿತ್ತು. ಹಾಗಾದರೆ ಅದರ ಅವಶ್ಯಕತೆಯಾದರೂ ಏನು? ಕುಕ್ಕರ್ ನಲ್ಲಿ ನೀರು ಕಡಿಮೆಯಾದಾಗ ಹಲವು ಸಲ ವಾಲ್ವ್ ತೆರೆದು ಅನಾಹುತ ತಪ್ಪಿದರೂ ಅದನ್ನು ಪೂರ್ಣವಾಗಿ ನಂಬುವ ಹಾಗಿಲ್ಲ. ಕುಕ್ಕರ್ ನ  ವೈಟ್ ಅಂದರೆ ಅದರ ವಿಸಿಲ್ ಅದರಲ್ಲಿಆಹಾರ ಪದಾರ್ಥದ ಜಿಡ್ದು ಹಿಡಿದು ಅದರ ಮೇಲೆ ಕೆಳಗಿನ ತಡೆಯಾದಾಗ ಕುಕ್ಕರ್ ಒಳಗೆ ಒತ್ತಡ ಹೆಚ್ಚಾಗಿ ಅದು ಸಿಡಿಯುತ್ತದೆ. ಇಲ್ಲೂಅದೇ ಆಗಿ ಹೋದ ಪ್ರಮಾದ. ಕುಕ್ಕರ್ ಉಪಯೋಗಿಸುವಾಗ ಇದರ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಕುಕ್ಕರ್ ಸ್ವಚ್ಛವಾಗಿರಿಸಬೇಕು. ಅದರ ವೈಟ್ ಒಳಗಡೆ ಜಿಡ್ಡು ಅಥವಾ ಆಹಾರ ಪದಾರ್ಥದ ತುಣುಕು ಇರದಂತೆ ನೋಡಿಕೊಳ್ಳಬೇಕು. ಅದು ಒಲೆ ಮೇಲೆ ಇರಿಸುವ ಮೊದಲು ವಿಸಿಲ್ ಚಲನೆ ಸಲೀಸಾಗಿದೆಯೇ ಎಂದು ಪರೀಕ್ಷಿಸಬೇಕು. ಇಷ್ಟೆಲ್ಲಾ ಎಚ್ಚರ ವಹಿಸಿದರೆ ತಕ್ಕ ಮಟ್ಟಿಗೆ ಕುಕ್ಕರ್ ಉಪಯೋಗ ತೊಂದರೆ ಎಲ್ಲ ಎಂದುಕೊಳ್ಳಬಹುದು. 

            ಎಷ್ಟೇ ಎಚ್ಚರ ವಹಿಸಿದರೂ ಹಲವು ಸಲ ಅಪಾಯ ತಪ್ಪಿದ್ದಲ್ಲ. ಮಾತ್ರವಲ್ಲ ಕುಕ್ಕರ್ ನಲ್ಲಿ ಬೇಯಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಕುಕ್ಕರ್ ನಲ್ಲಿ ಬೇಯಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುತ್ತದೆ. ಮಾತ್ರವಲ್ಲ ಆಹಾರ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣ ಮಲಬದ್ದತೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಕೊಲೆಸ್ಟರಾಲ್ ಸಮಸ್ಯೆ ಕುಕ್ಕರ್ ನಲ್ಲಿ ಬೇಯಿಸಿದ ಆಹಾರ ಸೇವನೆಯಿಂದ ಅಧಿಕವಾಗುತ್ತದೆ. ಹಾಗಾಗಿ ಕುಕ್ಕರ್ ನ್ನು ಆದಷ್ಟು ಉಪಯೋಗಿಸದೇ ಇರುವುದು ಉತ್ತಮ. ಕುಕ್ಕರ್ ನ ಆಹಾರ ಆರೋಗ್ಯಕ್ಕೆ ಹಾನಿಕರ. ಜತೆಯಲ್ಲಿ ಜೀವಕ್ಕೂ ಹಾನಿಕರ. 

No comments:

Post a Comment