Monday, December 30, 2024

ಬಾಲ್ಯದ ಕಲ್ಲಂಗಡಿಹಣ್ಣು

ಹಸಿವು ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ನನ್ನ ಬಾಲ್ಯ.  ಮನೆಯಲ್ಲಿ ತಿನ್ನುವ ಮತ್ತು ಗಂಜಿ ಉಪ್ಪು ಮೆಣಸು ಬಿಟ್ಟರೆ ಬೇರೆ ಆಹಾರ ಸಿಗುವುದೇ ಅಪರೂಪ. ಯಾರದೋ ಮನೆಯ ಪೂಜೆ ಶ್ರಾದ್ಧ ಇವುಗಳಷ್ಟೆ ಕರುಳಿನ ಸಾಮಾರ್ಥ್ಯವನ್ನು ಅಳೆಯುವ ಅವಕಾಶವನ್ನು ಒದಗಿಸುತ್ತಿದ್ದವು . ಅಂತಹ ಸಮಯದಲ್ಲಿ ಅಂಗಡಿಯ ತಿಂಡಿಗಳಂತೂ ಎಂದೋ ಕನಸಿನಲ್ಲಿ ಸಿಗುವ ವಿಶೇಷವಾಗಿತ್ತು. ಅಂತಹ ಒಂದು ದಿನ. ನನಗಾಗ ಎಳೆಂಟು ವರ್ಷದ ವಯಸ್ಸಾಗಿರಬಹುದು. ಒಂದು ದಿನ ಯಾವುದೋ ಕೆಲಸಕ್ಕೆ ನನ್ನನ್ನು ಬಾಯಾರು ಪದವಿಗೆ ಅಮ್ಮ ಕಳುಹಿಸಿದ್ದರು. ಆಗ ಕಾಯರ್ ಕಟ್ಟೆಯಿಂದ ಬಾಯಾರು ಪದವಿಗೆ ಹೋಗುವ ಶಂಕರ್ ವಿಠಲ್ ನ ಕಟ್ ಸರ್ವಿಸಿಗೆ ಹೋದರೆ ಪುನಹ ಅದೇ ಬಸ್ಸಿನಲ್ಲಿ ವಾಪಾಸಾಗಬೇಕು. ಕಾಯರ್ ಕಟ್ಟೆಯಿಂದ ಪದವಿಗೆ ಹತ್ತು ಪೈಸೆಯ ಅರ್ಧ ಟಿಕೇಟ್. ಅರ್ಧ ಟಿಕೇಟ್ ಆದರೂ ಕಂಡಕ್ಟರ್ ಕೊಡುವ ಚೀಟಿ ಅರ್ಧ ತುಂಡಾಗಿರಾದೆ ಇಡೀ ಚೀಟಿಯನ್ನೇ ಕಂಡಕ್ಟರ್ ಕೈಗೆ ಇಡುವಾಗ ಇದು ಅರ್ಧ ಟಿಕೇಟ್ ಹೇಗಾಗುತ್ತದೆ ಎಂದು ಅಚ್ಚರಿಯಾಗುತ್ತಿತ್ತು. ಆನಂತರ ಅದರಲ್ಲಿ ಅರ್ಧ ಸೀಟ್ ಅಂತ ಬರೆಯುತ್ತಿದ್ದದ್ದದ್ದು ಗೊತ್ತಿರಲಿಲ್ಲ. ಆಗ ಟಿಕೇಟಿಗೆ  ಕೈಗೆ ಇಪ್ಪತ್ತು ಪೈಸೆಯನ್ನಷ್ಟೇ ಕೊಟ್ಟು ಕಳುಹಿಸುವುದು ವಾಡಿಕೆ. ಬೇರೆ ಏನು ಬೇಕಿದ್ದರೂ ಕೊಂಡುಕೊಳ್ಳುವುದಕ್ಕೆ ಅವಕಾಶವಿಲ್ಲ. 

ಆಗ ಬಾಯಾರು ಪದವಿನಲ್ಲಿ   ಗೋವಿಂದಣ್ಣ  ಶಂಕರ್ ವಿಟ್ಟಲ್ ಟಿಕೆಟ್ ಏಜಂಟ್ ಆಗಿದ್ದರು. ಒಂದು ಪುಟ್ಟ ಗೂಡಂಗಡಿ ಇಟ್ಟುಕೊಂಡು ಬಸ್ ಪ್ರಯಾಣಿಕರಿಗೆ ಟಿಕೇಟ್ ಹರಿದು ಕೊಡುತ್ತಿದ್ದರು. ಅಂದು ಬಸ್ ಬಿಡುವುದಕ್ಕೆ ಇನ್ನೂ ಸಮಯವಿತ್ತು. ಅಲ್ಲೇ ಕಾದು ಕುಳಿತಿದ್ದೆ. ಅಂಗಡಿಯಲ್ಲಿ ಆಗ ತಾನೆ ತಂದ ಕಲ್ಲಂಗಡಿ ಹಣ್ಣನ್ನು ತುಂಡುಗಳನ್ನಾಗಿ ಮಾಡಿ ಅಲ್ಲಿ ಇಡುತ್ತಿದ್ದರು. ಕಲ್ಲಂಗಡಿ ಹಣ್ಣು....ಅದುವರೆಗೆ ನಾನು ಕಂಡವನಲ್ಲ. ಒಳಗೆ ಕೆಂಪಗಿರುವ ಈ ಕುಂಬಳಕಾಯಿಯಂತಹ ಹಣ್ಣು ನಿಜಕ್ಕೂ ನನಗೆ ಆಶ್ಚರ್ಯದ ವಸ್ತುವಾಗಿತ್ತು. ಆದರೆ ಅದನ್ನು ತಿನ್ನುವ ಬಗೆ ಹೇಗೆ?  ಒಂದು ತುಂಡು ಕಲ್ಲಂಗಡಿಗೆ ಹತ್ತು ಪೈಸೆ.  ಬಸ್ ಟಿಕೇ ಟ್ ಗೆ ಕೊಟ್ಟ  ಕೈಯಲ್ಲಿರುವ ಹತ್ತು ಪೈಸೆಯನ್ನು ಕೊಟ್ಟು ಕೊಂಡುಕೊಂಡರೆ ಮತ್ತೆ ಮನೆಗೆ ನಡೆದೇ ಹೋಗಬೇಕು. 

ಅಂಗಡಿಗೆ ಬಂದವರೆಲ್ಲ ಕಲ್ಲಂಗಡಿ ಹಣ್ಣಿನ ತುಂಡು ಕೈಯಲ್ಲಿ ಹಿಡಿದು ನೀರು ಸುರಿಸಿ ತಿನ್ನುವಾಗ ನನ್ನ ಬಾಯಲ್ಲಿಯೂ ನೀರು ಸುರಿಯುವುದಕ್ಕಾರಂಭಿಸಿತು. ಆದರೆ ನೀರು ಸುರಿಸುವುದಷ್ಟೇ  ನನ್ನ ಪಾ
ಲಿಗೆ. ಹಾಗೆ ಆಶೆಯಿಂದ ಪುಟ್ಟ ಬಾಲಕ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದೆ. ಹಾಗೆ ನೋಡಬಾರದು ಎನ್ನು ಸಭ್ಯತೆ ಅರಿವಿರಲಿಲ್ಲ. ಆದರೆ ಮನಸ್ಸಿನ ಆಶೆ ಹತ್ತಿಕ್ಕುವುದಕ್ಕೆ ಸಾಧ್ಯವೆ? 

ಕೊನೆಗೊಮ್ಮೆ ಯಾರೋ ಒಬ್ಬರು ಹಣ್ಣು ಕೊಳ್ಳುವುದಕ್ಕೆ ಬಂದಾಗ ನಾನು ನಿಂತು ನೋಡುತ್ತಿರುವುದು ಗೋವಿಂದಣ್ಣನ ಗಮನಕ್ಕೆ ಬಂತು. ಕಲ್ಲಂಗಡಿಯಿಂದ ಪುಟ್ಟ ತುಂಡೊಂದನ್ನು ಮಾಡಿ ಕರೆದು ನನ್ನ ಕೈಗೆ ಇಟ್ಟರು. ಪುಟ್ಟ ಚಿಕ್ಕ ಹಣ್ಣಿನ ಚೂರಾದರೂ ನನ್ನ ಪಾಲಿಗೆ ಅದೊಂದು ನಿಧಿಯಾಗಿತ್ತು. ಕೈಯನ್ನು ಹಾಕಿಕೊಂಡ ಚಿಂದಿ ಅಂಗಿ ಚಡ್ಡಿಗೆ ಉಜ್ಜಿ ಕಲ್ಲಂಗಡಿಯನ್ನು ಕೈಯಲ್ಲಿ ಹಿಡಿದು ಬಾಯಿಗಿಟ್ಟಾಗ ಸ್ವರ್ಗವೇ ಕೈಗೆ ಸಿಕ್ಕಿದ ಅನುಭವ.  ಅಂದು ನಾನು ಮೊದಲಾಗಿ ಕಲ್ಲಂಗಡಿಯ ರುಚಿಯನ್ನು ನೋಡಿದೆ. ಆ ನಂತರ ಅದೆಷ್ಟೋ ಕಲ್ಲಂಗಡಿಯನ್ನು ತಿಂದಿರಬಹುದು. ಈಗ ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುವ ಕೆಂಪು ಕೆಂಪು  ಕಲ್ಲಂಗಡಿ ಹಣ್ಣನ್ನು ನೋಡಿರಬಹುದು. ಆದರೆ ಅಂದಿನ ಕಲ್ಲಂಗಡಿ ಹಣ್ಣಿನ ರುಚಿ ಮತ್ತೆಂದೂ ಸಿಕ್ಕಿರಲಿಲ್ಲ. ಬಾಲ್ಯದ ಆ ಕಲ್ಲಂಗಡಿ ಚೂರು ಮತ್ತೆ ಗೋವಿಂದಣ್ಣ ಎಂದು ಮರೆಯುವುದಕ್ಕಿಲ್ಲ. ಆ ರುಚಿ ಮತ್ತೆಂದೂ ಸಿಗುವುದಕ್ಕಿಲ್ಲ. ಈಗ ಪ್ರತಿ ಬಾರಿ ಕಲ್ಲಂಗಡಿ ರುಚಿ ನೋಡುವಾಗ ಬಾಲ್ಯದ ಆ ರುಚಿಯನ್ನು ಸ್ಮರಿಸಿಕೊಳ್ಳುತ್ತೇನೆ. ಆ ಹಸಿವಿನ ದಿನಗಳು ನೆನಪಾಗುತ್ತದೆ. ಅತೃಪ್ತಿಯಲ್ಲಿಯೂ ಸಿಗುವ ಸುಖ ಹಲವು ಸಲ ವಿಶಿಷ್ಟವಾಗಿರುತ್ತದೆ. ಮನುಷ್ಯನಿಗೆ ಹಸಿವಿನ ರುಚಿಯ ಅರಿವಿರಬೇಕು. ಮತ್ತು ಆ ಹಸಿವು ಇಂಗುವ ವಿಶ್ವಾಸ ಇಲ್ಲದೇ ಅದೇ ನಿರೀಕ್ಷೆಯಲ್ಲಿರಬೇಕು. ಆಗ ಸಿಗುವ ಜೀವನಾನುಭವ ಎಲ್ಲ ಪಾಠವನ್ನು ಕಲಿಸಿಬಿಡುತ್ತದೆ. ಶಾಲೆಯಲ್ಲಿ ಕಲಿತ ಉರು ಹೊಡೆದ ಪಾಠಗಳಾದರೂ ಮರೆತು ಹೋಗಿರಬಹುದು. ಆದರೆ  ಬಾಲ್ಯದ ಹಸಿವಿನಿಂದ ನಾನು ಕಲಿತ ಪಾಠಗಳು ಎಂದಿಗೂ ಮರೆಲಾರವು. 


No comments:

Post a Comment