ಪಡುವಣ ಬೆಟ್ಟದ ಬುಡದಲಿ ಹುಟ್ಟಿ,
ಕುದುರೆಮುಖದ ಬಂಡೆಯ ತಲೆ ಮೆಟ್ಟಿ,
ಹಾರುತ, ಬೀಳುತ, ಕುಣಿಯುತ, ಮಣಿಯುತ
ಹರಿವಳು ನದಿ ನೇತ್ರಾವತಿಯು;
ಸಮುದ್ರರಾಜನ ಪ್ರಿಯಸತಿಯು
ಇದು ಬಾಲ್ಯದಲ್ಲಿ ಉರು ಹೊಡೆದು ಬಾಯಿಪಾಠ ಒಪ್ಪಿಸಿದ ಕವನ. ಇದು ಸರಿಯಾಗಿ ನೆನಪಿಲ್ಲ. ಇದರ ಕವಿ ಮಹಾಶಯರು ಯಾರು ಅಂತ ಗೊತ್ತಿಲ್ಲ. ಆದರೆ ನಿನ್ನೆ ಈ ಹಾಡು ಪದೇ ಪದೇ ಗುನು ಗುನಿಸುವಂತೆ ನೇತ್ರಾವತಿಯ ತಟದಲ್ಲಿ ಕಳೆದ ಘಳಿಗೆ ಮಾಡಿತು.
ನನ್ನ ಬಾಲ್ಯದಲ್ಲಿ ಅಂದರೆ ಸುಮಾರು ಎಪ್ಪತ್ತರ ದಶಕದಲ್ಲಿ, ನನ್ನ ಐದರ ವಯಸ್ಸಿನಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಅಂದರೆ ಪೈವಳಿಕೆಗೆ ಆಗಾಗ ಪ್ರಯಾಣಿಸುತ್ತಿದ್ದ ನೆನಪು ಈಗಲೂ ಇದೆ. ಕೆಲವು ಸಲ ಮಬ್ಬು ಕೆಂಪಾದ ಉಗಿ ಬಂಡಿಯಲ್ಲಿ ಇನ್ನು ಕೆಲವೊಮ್ಮೆ ಬಸ್ಸಿನಲ್ಲಿ ಪಯಣಿಸುತ್ತಿದ್ದ ದಿನಗಳು., ಮಂಗಳೂರು ನಗರ ದಾಟುತ್ತಿದ್ದಂತೆ ಆಗ ಸಿಗುತ್ತಿದ್ದುದ್ದು ನೇತ್ರಾವತಿ ಸೇತುವೆ. ನಾವೆಲ್ಲ ಉಳ್ಳಾಲ ಸಂಕ ಅಂತ ಕರೆಯುತ್ತಿದ್ದೆವು. ಈ ಸೇತುವೆ ಮೇಲೆ ಹೋಗುವಾಗ ಕಾಣುವ ವಿಹಂಗಮ ದೃಶ್ಯ , ಆ ಜಲರಾಶಿ ಕಂಡು ಬೆರಗಾಗುತ್ತಿದ್ದೆನು. ಈಗಲೂ ಆ ನದಿ ತುಂಬಿ ತುಂಬಿ ಹರಿಯುತ್ತದೆ. ತುಂಬಿ ಹರಿದ ನೇತ್ರಾವತಿ ಅರಬ್ಬಿ ಸಮುದ್ರಕ್ಕೆ ಸೇರುವ ಅಳಿವೆ ಬಾಗಿಲಲ್ಲಿ, ಅಲ್ಲಿ ತನಕ ಕಡಲಿನ ಕರೆಗೆ ಅತುರ ಆತುರವಾಗಿ ಹರಿದು ಬಂದ ನೇತ್ರಾವತಿ, ಕಡಲು ಎದುರಾಗುತ್ತಿದ್ದಂತೆ ನಿಧಾನವಾಗಿ ಮಂದಗಮನೆಯಂತೆ ಸಂಚರಿಸುತ್ತಾ , ಅದು ವರೆಗೆ ಓಡೋಡಿ ಬಂದ ದಣಿವನ್ನು ಪರಿಹರಿಸುತ್ತಿದ್ದಾಳೋ ಎಂಬ ಭಾವನೆಯಲ್ಲಿ ನಿಧಾನವಾಗಿ ವಿರಮಿಸುತ್ತಾ ಸಂಚರಿಸಿ ಕಡಲ ತಡಿಯಲ್ಲಿ ನಾಚಿ ಲಜ್ಜೆಯಿಂದ ನಿಂತಂತೆ, ಗಂಭೀರವಾದ ಕಡಲು ತನ್ನ ಕಬಂಧ ಬಾಹುಗಳಂತಿದ್ದ ಅಲೆಯಿಂದ ಕರೆದು ಬಾಚಿ ತಬ್ಬಿಕೊಳ್ಳುವಂತೆ ಕಾಣುತ್ತಿದೆ.
ಬಾಲ್ಯದಲ್ಲಿ ಸೇತುವೆ ಮೇಲೆ ಎತ್ತರದಲ್ಲಿ ಸಂಚರಿಸುತ್ತಾ, ಬಸ್ಸಿನ ಕಿಟಿಕಿ ಬಳಿಯಲ್ಲಿ ಕುಳಿತು ಆಳದಲ್ಲಿ ತುಂಬಿ ಹರಿಯುತ್ತಿದ್ದ ನೇತ್ರಾವತಿಯನ್ನು ಕಂಡು ಒಂದು ಸಲ ಅಲ್ಲಿಗೆ ಇಳಿದು ಬಿಡಬೇಕು ಎಂದು ಬಯಸಿದ ದಿನಗಳೆಷ್ಟೋ? ನೇತ್ರಾವತಿ ಬಾಲ್ಯದ ಕಣ್ಣಿಗೆ ಅದ್ಭುತ ರಮ್ಯವಾಗಿ ಕಂಡರೆ ಅದು ಅತಿಶಯವಲ್ಲ. ಮೇಲಾಗಿ ಅದು ರಮಣೀಯ ತಾಣ. ಎಡಕ್ಕೆ ಪೂರ್ವವಾದರೆ ಬಲಕ್ಕೆ ಪಡುಗಡಲು. ನಡುವೆ ತೆರೆದು ನಿಂತ ಜಲರಾಶಿ. ನೇತ್ರಾವತಿ. ಪಂಜೆ ಕಯ್ಯಾರರರಿಗೆ ಸ್ಪೂರ್ತಿಯಾದ ನೇತ್ರಾವತಿ. ಮಂಗಳೂರಿನಿಂದ ಕಾಸರಗೋಡಿಗೆ ಪಯಣಿಸುವಾಗ ಹಲವು ನದಿಗಳು ಸಿಗುತ್ತವೆ. ಆ ನದಿಗಳ ಸೇತುವೆ ಮೇಲೆ ಹಚ್ಚ ಹಸಿರಿನ ನಡುವೆ ಪಯಣಿಸುವುದೆಂದರೆ ಅದೊಂದು ಸುಂದರ ಅನುಭವ. ಆಗ ಉದ್ದದ ಸಂಕ (ಸೇತುವೆ ) ಯಾವುದು ಎಂದರೆ ಅದು ಉಳ್ಳಾಲ ಸಂಕ ಎಂದು ಅಭಿಮಾನದಿಂದ ಹೇಳುತ್ತಿದ್ದ ಮುಗ್ದ ಮನಸ್ಸಿಗೆ ನೇತ್ರಾವತಿ ಒಂದು ವಿಧವಾದರೆ ಈಗಲೂ ನೇತ್ರಾವತಿ ಅದ್ಭುತ ಅಭಿಮಾನದ ಸಂಗತಿ. ಎಕ್ಕೂರು ಗುಡ್ಡದ ನಡುವಿನಿಂದ ವೇಗವಾಗಿ ಸಾಗುವ 42 43 ನಂಬರಿನ ಸಿಟಿ ಬಸ್ಸು ಎತ್ತರದಲ್ಲಿ ಹಸುರು ಗದ್ದೆಯ ಮೇಲೆ ಸಾಗಿ ಕುಪ್ಪಳಿಸಿ ಸೇತುವೆ ಮೇಲೆ ಏರಿದಾಗ ಆ ನದಿಯನ್ನು ಕಂಡು ಬೆರಾಗಾಗುತ್ತಿದ್ದೆ. ಕಡಿಮೆ ಎಂದರು ಒಂದೆರಡು ನಿಮಿಷದ ಈ ದೃಶ್ಯವನ್ನು ತಪ್ಪದೆ ಮರೆಯದೆ ನೋಡುತ್ತಿದ್ದೆ. ಮಳೆಗಾಲದಲ್ಲಿ, ಬಸ್ಸಿನ ಕಿಟಿಗೆ ಇಳಿಬಿಟ್ಟ ಒದ್ದೆ ಟರ್ಪಾಲನ್ನು ಕೈಗಳಿಂದ ತುಸು ಎತ್ತಿ ಬೀಳುತ್ತಿದ್ದ ಮಳೆ ನೀರನ್ನೂ ಲೆಕ್ಕಿಸದೇ ನೇತ್ರಾವತಿಯನ್ನು ಕಾಣುವುದು ಸೋಜಿಗದ ವಿಷಯ.
ಬಾಲ್ಯದಿಂದ ಇಂದಿನವರೆಗೂ ನೇತ್ರಾವತಿ ಎಂದರೆ ಅದು ಅದ್ಭುತ ರಮ್ಯ ತಾಣ. ಬಹಳ ಹಿಂದೆ ಕನ್ನಡ ಸಿನಿಮಾ ಹಾಡು ’ನೀರ ಬಿಟ್ಟು ನೆಲದ ಮೇಲೆ ಬಂಡಿ ಓಡದು.’ ಹಾಡು ಕೇಳುವಾಗ ಮನಸ್ಸಿನ ಕಲ್ಪನೆಯಲ್ಲಿ ಬರುತ್ತಿದ್ದದ್ದು ನೇತ್ರಾವತಿ ನದಿಯ ತಟ. ವಿಚಿತ್ರವೆಂದರೆ ಸಿನಿಮಾ ನೋಡಿದಾಗ ಅದೇ ದೃಶ್ಯ ಸಿನಿಮಾದಲ್ಲೂ ಇತ್ತು. ವಿಷ್ಣುವರ್ಧನ ಆರತಿ ಅಭಿನಯದ ನೀರಬಿಟ್ಟು ನೆಲದ ಮೇಲೆ ಬಂಡಿ ಓಡದು....ಹಾಡು ಇಲ್ಲೇ ಚಿತ್ರೀಕರಣವಾಗಿತ್ತು. ಇಷ್ಟು ವರ್ಷ...ಅದರ ಮೇಲೆ ಸಂಚರಿಸುತ್ತಿದ್ದರೂ ಒಂದು ದಿನವೂ ಅದರ ತಟಕ್ಕೆ ಇಳಿಯುವ ಅವಕಾಶ ಒದಗಿ ಬರಲಿಲ್ಲ. ಬಾಲ್ಯದ ಕನಸು ಅದೇಕೋ ಕನಸಾಗಿಯೇ ಉಳಿದಿತ್ತು. ಇತ್ತೀಚೆಗೆ ಮಿತ್ರ ಜಯಶಂಕರ ಅಲ್ಲಿಯೇ ಬಳಿಯಲ್ಲಿ ಮನೆ ಮಾಡಿದಾಗ ಬಾಲ್ಯದ ಕನಸು ಮತ್ತೊಮ್ಮೆ ಚಿಗುರಿತು. ಹಾಗೆ ನಿನ್ನೆ ಮುಂಜಾನೆ ನದಿಯ ತಟಕ್ಕೆ ನಾವೆಲ್ಲ ಹೋದೆವು. ಅದಾಗಲೇ ಸೂರ್ಯೋದಯದ ಸಮಯ. ದೂರದ ಮೂಡಣ ದಿಕ್ಕಿನಿಂದ ಕಣ್ಣಳತೆಗೆ ಕಾಣುವಂತೆ ನದಿಯ ತುದಿಯಲ್ಲಿ ಬಳ್ಳಿಯಲ್ಲಿ ಹಣ್ಣು ಹುಟ್ಟಿದಂತೆ ಕೆಂಪಾದ ಸೂರ್ಯ ನಿಧಾನವಾಗಿ ಮೇಲೇಳುತ್ತಾ ಎದುರಿಗೆ ಹೊಂಬಣ್ಣದ ವರ್ಣದ ಓಕುಳಿಯನ್ನು ಚೆಲ್ಲಿ ಮೇಲೇಳುತ್ತಿದ್ದರೆ ಮೌನವಾದ ವಾತಾವರಣದಲ್ಲಿ ಮಧುರವಾದ ಕಲರವ. ಮೊದಲದಿನ ಕದ್ದು ಮುಚ್ಚಿ ಪಡುವಣದಲ್ಲಿ ಮುಳುಗಿದ ಸೂರ್ಯ ಇದೀಗ ನಾನಿಲ್ಲಿದ್ದೇನೆ ಎನ್ನುತ್ತಾ ನೇತ್ರಾವತಿಯಲ್ಲಿ ಮಿಂದು ಏಳುತ್ತಿದ್ದ. ಇದನ್ನು ನೋಡಿ ಕೈ ಸುಮ್ಮನುಳಿಯಬಹುದೇ? ಪುಟ್ಟ ಮೊಬೈಲಿನಲ್ಲಿ ಆ ದೊಡ್ಡ ದೃಶ್ಯವನ್ನು ದೊಡ್ಡ ಹಣ್ಣನ್ನು ಗಿಣಿ ಸಿಕ್ಕಿದಷ್ಟು ಕಚ್ಚಿ ತಿನ್ನುವಂತೆ ಆ ದೃಶ್ಯವನ್ನು ಸಿಕ್ಕಿದಷ್ಟು ಸೆರೆ ಹಿಡಿಯತೊಡಗಿತು. ನಿಜಕ್ಕು ಬದುಕಿನಲ್ಲಿ ಒಂದು ಸ್ಮರಣೀಯ ಘಳಿಗೆ. ಹುಟ್ಟಿ ಅರ್ಧ ಆಯುಷ್ಯ ಸವೆದರೂ ಬಾಲ್ಯದಲ್ಲಿ ಕನಸು ಕಂಡ ನದಿಯ ತಟಕ್ಕೆ ಬಂದು ಅದರಲ್ಲೂ ಈ ಸೂರ್ಯೋದಯವನ್ನು ಸವಿಯುವುದೆಂದರೆ ಪ್ರಕೃತಿಯ ಆರಾಧನೆಯ ಅವಕಾಶಕ್ಕೆ ಧನ್ಯನಾದೆ ಎಂದಿತು ಮನಸ್ಸು.
No comments:
Post a Comment