Saturday, February 1, 2025

ಸಂಸ್ಕಾರ ಶುದ್ಧಿ

            ಮೊನ್ನೆ ಒಬ್ಬರು ನಿಮ್ಮ ಹಾಗೇ ನಾನೂ ಮುಂಜಾನೆ ನಾಲ್ಕರ ಹೊತ್ತಿಗೆ ನಿದ್ದೆ ಬಿಟ್ಟು ಎದ್ದು ಬಿಡುತ್ತೇನೆ ಎಂದರು. ನನ್ನ ಹಾಗೆ ಎಂದು ಹೇಳುವುದಕ್ಕೆ ಇಲ್ಲಿ ಅರ್ಥವಿಲ್ಲ. ಅಥವಾ ನನ್ನನ್ನು ನೋಡಿ ಸ್ಫೂರ್ತಿಯಾಗಿದೆ ಎಂದುಕೊಳ್ಳುವಷ್ಟು ಬೆನ್ನು ತಟ್ಟಿಕೊಳ್ಳುವ ಮನೋಭಾವ ನನಗೂ ಇರುವುದಿಲ್ಲ. ಅಥವಾ ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಬಯಕೆ ನನಗೂ ಇರುವುದಿಲ್ಲ. ಮುಂಜಾನೆ ನಾನು ಮಾತ್ರ ಎದ್ದುಬಿಡುತ್ತೇನೆ ಎಂದಿದ್ದರೆ ನನ್ನ ಹಲವು ಸಮಸ್ಯೆಗಳು ಪರಿಹಾರವಾಗಿಬಿಡುತ್ತಿತ್ತು. ನನ್ನಂತೆ ನಮ್ಮ ಮೆಯಲ್ಲಿ ಉಳಿದವರೂ ಏಳುವುದರಿಂದ ಮುಂಜಾನೆಯ ಏಕಾಂತ ಅನುಭವಕ್ಕೆ  ಹಲವುಸಲ ಭಂಗವಾಗುತ್ತದೆ. ಹಾಗಾಗಿ ಎಲ್ಲರೂ ಎದ್ದೇಳಬೇಕೆಂದು ಹೇಳುವುದರಲ್ಲಿ ನಾನು ಒಂದಷ್ಟು ಅಸೌಕರ್ಯವನ್ನು ಅನುಭವಿಸುತ್ತೇನೆ. ಯಾರೂ ಎದ್ದೇಳದೆ ಇರಲಿ ಎಂದೇ ಪ್ರತಿದಿನ ಬಯಸುತ್ತೇನೆ. ಅದಕ್ಕೆ ಹಲವು ಕಾರಣವಿದೆ. ಮುಂಜಾನೆ ಏಳುವುದು ಮುಖ್ಯವಲ್ಲ. ಎದ್ದ ನಂತರದ ಜಾಗೃತ ಸ್ಥಿತಿ ಅದು ಹೇಗಿರುತ್ತದೆ ಎಂಬುದು ಮುಖ್ಯ.

       ನಾವು ಎಚ್ಚರದಿಂದ ಇರುವಾಗ ಇನ್ನಷ್ಟು ಎಚ್ಚರಿಕೆಯನ್ನು ಪಾಲಿಸಬೇಕು. ಮುಂಜಾನೆ ಏಳುವಾಗ ಮೊದಲು ಉಳಿದವರು ನಿದ್ರಿಸುತ್ತಿದ್ದಾರೆ ಎಂಬ ಪ್ರಜ್ಞೆ ಜಾಗೃತವಾಗಿರಬೇಕು. ನಮ್ಮಿಂದ ಅವರಿಗೆ ನಿದ್ರಾಭಂಗವಾಗದಂತೆ ಆದಷ್ಟು ನಿಶಬ್ದ ಪಾಲಿಸಬೇಕು. ಈ ನಿಶಬ್ದತೆ ಮುಂಜಾನೆಯ ಶಾಂತ ಮೌನವನ್ನು ಅನುಭವಿಸುವುದಕ್ಕೆ ಪ್ರಚೋದನೆಯಾಗುತ್ತದೆ. ಈ ಮೌನಕ್ಕೆ ನಮ್ಮ ಉಸಿರಿನಿಂದಲೂ ದೇಣಿಗೆ ಸಲ್ಲಿಸಬೇಕು. ಅಂದರೆ ಉಸಿರನ್ನೂ ನಿಶ್ಯಬ್ದವಾಗಿ ಬಿಡಬೇಕು. ಪರಿಸರದಲ್ಲಿ ಸಹಜವಾಗಿ ಆಗುವ ಶಬ್ದಗಳು, ಹಕ್ಕಿ ಕೂಗುವುದಾಗಲಿ, ನಾಯಿ ಬೊಗಳುವುದಾಗಲೀ ಶಾಂತ ಪರಿಸರಕ್ಕೆ ಭಂಗವನ್ನು ತರುವುದಿಲ್ಲ. ಬದಲಿಗೆ ಮನುಷ್ಯ ನಿರ್ಮಿತ ಶಬ್ದಗಳು ನೀರವ ಮೌನವನ್ನು ಕದಡಿಬಿಡುತ್ತವೆ. ನಾವು ಹೆಜ್ಜೆ ಇಡುವಾಗ, ವಸ್ತುಗಳನ್ನು  ಎತ್ತಿಡುವಾಗ ಕದವನ್ನು ಮುಚ್ಚಿದಾಗ ಎಷ್ಟು ಸಾಧ್ಯವೋ ಅಷ್ಟು ನಿಶ್ಯಬ್ದತೆ ಪಾಲಿಸಬೇಕು. ಮುಂಜಾನೆಯ ನಮ್ಮ ವರ್ತನೆ ನಮ್ಮ ಮನಸ್ಥಿತಿಯನ್ನು ಹೇಳುತ್ತದೆ. ನಮ್ಮ ಮನಸ್ಸಿನಲ್ಲಿರುವ ಉದ್ವಿಗ್ನತೆ ಸೂಕ್ಷ್ಮವಾಗಿ ನಮ್ಮ ವರ್ತನೆಯನ್ನು ತೋರಿಸುತ್ತದೆ. ಆಗ ಸುತ್ತಲಿನ ಮೌನವನ್ನು ಅನುಭವಿಸುವ ಮನಸ್ಥಿತಿ ಇಲ್ಲವಾಗಿ ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. 

ನಿದ್ದೆಯಲ್ಲಿರುವವರನ್ನು ಧ್ಯಾನದಲ್ಲಿ ನಿರತರಾದವರನ್ನು ಎಚ್ಚರಿಸಬಾರದು, ಅಥವಾ ಅವರ ಆ ಸ್ಥಿತಿಗೆ ಭಂಗವನ್ನು ತರಬಾರದು. ಇದನ್ನು ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಚಿತ್ರವೆಂದರೆ ನಾವು ನಿದ್ರಿಸುವಾಗ ಉಳಿದವರು ಮೌನವನ್ನು ಪಾಲಿಸಬೇಕು ಎಂದು ತಿಳಿದಿರುತ್ತೇವೆ. ಪರರಿಗೆ ಹಾನಿಯನ್ನು ಎಸಗುವುದು, ದ್ರವ್ಯಾಹಾನಿಯಾಗಿರಬಹುದು, ಮಾನಸಿಕ ಕ್ಷೋಭೆಯಾಗಿರಬಹುದು ಅದು ಶುದ್ದ ಸಂಸ್ಕಾರಕ್ಕೆ ವಿರುದ್ದವಾಗಿರುತ್ತದೆ. ಪರರಿಗೆ ಹಾನಿಯಾದರೂ ಅದು ಪರೋಕ್ಷವಾಗಿ ನಮ್ಮ ಮನಸ್ಥಿತಿಗೂ ಪ್ರಭಾವ ಬೀರುತ್ತದೆ. ಸಂಸ್ಕಾರವೆಂದರೆ ಮನುಷ್ಯನ ಬದುಕಿನ ರೀತಿ. 

ವಿದ್ಯೆ ಸಂಸ್ಕಾರವನ್ನು ಕೊಡುತ್ತದೆ. ಸಂಸ್ಕಾರವನ್ನು ಕೊಡದ ವಿದ್ಯೆ,  ವಿದ್ಯೆಯೇ ಅಲ್ಲ. ಸಂಸ್ಕಾರವೆಂದರೆ ಅದರ ಮೊದಲ ಸಾಲು, ಪರಹಿತ ಅಥವಾ ಪರರಿಗೆ ತೊಂದರೆಯನ್ನು ಮಾಡದೇ ಇರುವುದು. ಪರಪೀಡೆ ಇರುವ ಯಾವುದೇ ಪ್ರವೃತ್ತಿಯಾದರೂ ಅದು ಶುದ್ದ ಸಂಸ್ಕಾರವಲ್ಲ. ಅಲ್ಲಿ ವಿದ್ಯೆಗೆ ಸ್ಥಾನವಿರುವುದಿಲ್ಲ. ವಿದ್ಯೆ ಅಂದರೆ ಅದು ಬದುಕಿಗೆ ಕೊಡುವ ಸೂಚನೆ. ಬದುಕು ಹೇಗಿರಬೇಕು ಎಂಬುದನ್ನು ವಿದ್ಯೆ ತೋರಿಸಿಕೊಡುತ್ತದೆ. ಇದಿಲ್ಲದೆ ವಿದ್ಯೆಗೆ ಸ್ಥಾನವೇ ಇರುವುದಿಲ್ಲ.  ಪರಹಿತವನ್ನು ಚಿಂತಿಸುವವನಿಗೆ ಮಾತ್ರ ಸ್ವಹಿತವನ್ನು ಚಿಂತಿಸುವ ಅವಕಾಶವಿರುತ್ತದೆ. ಸಂಸ್ಕಾರ ಶೂನ್ಯನಿಗೆ ವಿದ್ಯೆಯ ಅವಶ್ಯಕತೆ ಇರುವುದಿಲ್ಲ. ಅಥವಾ ಆತ ವಿದ್ಯಾವಂತನಾಗಿರುವುದಿಲ್ಲ. ಶುದ್ದ ಸಂಸ್ಕಾರ ಉತ್ತಮ ಮನಸ್ಥಿತಿಯನ್ನು ನಿರ್ಮಿಸುತ್ತದೆ

No comments:

Post a Comment